Advertisement

80% ಹಿಂದೂಗಳಿಗೆ 50% ಮತ್ತು 4% ಮೇಲ್ಜಾತಿಗರಿಗೆ 10% ಮೀಸಲಾತಿ ಎಷ್ಟು ಸರಿ?: ಮಟ್ಟು

Advertisement

"ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಶತಶತಮಾನಗಳಷ್ಟು ಕಾಲ ಶೋಷಣೆಗೊಳಗಾಗಿರುವ ಮತ್ತು ಸ್ವಾತಂತ್ಯಾ ನಂತರವಷ್ಟೆ ಈ ಎಲ್ಲಾ ಸವಲತ್ತುಗಳನ್ನು ಪಡೆದಿರುವ ಬರೋಬ್ಬರಿ ಶೇಕಡಾ 80ರಷ್ಟು ಹಿಂದುಳಿದ ಜಾತಿಯ ಹಿಂದುಗಳಿಗೆ ಕೇವಲ ಶೇಕಡಾ 50ರಷ್ಟು ಮೀಸಲಾತಿ ನೀಡಿ, ತಮ್ಮನ್ನು ತಾವು ಮಾತ್ರವೇ ಪರಮ ಶ್ರೇಷ್ಟರು, ಮೇಲ್ಜಾತಿಗರು ಎಂದು ಕರೆದುಕೊಳ್ಳುವ ಕೇವಲ ಶೇಕಡಾ ನಾಲ್ಕರಷ್ಟು ಹಿಂದೂಗಳಿಗೆ ಬರೋಬ್ಬರಿ ಶೇಕಡಾ ಹತ್ತರಷ್ಟು ಮೀಸಲಾತಿ ಹೇಗೆ ನೀಡಲು ಸಾಧ್ಯ ಎನ್ನುವ ವಿಷಯದ ಮೇಲಿನ ಚರ್ಚೆಯಾಗಬೇಕಿದೆ" ಎಂದು ಹಿರಿಯ ಪತ್ರಕರ್ತ, ಜನಪರ ಚಿಂತಕ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ದಿನೇಶ್ ಅಮಿನ್ ಮಟ್ಟು ಕರೆನೀಡಿದ್ದಾರೆ.

ವಿಕಿಪೀಡಿಯಾದಲ್ಲಿ ಉಲ್ಲೇಖಿಸಲ್ಪಟ್ಟಿರುವ ಹಿಂದೂ ಎಂಬ ಪದದ ಪರ್ಶಿಯನ್ ಅರ್ಥದ ಕುರಿತು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿ ಮತ್ತು ಆ ಕುರಿತು ಚರ್ಚೆಯಾಗಬೇಕು ಎಂದು ಹೇಳಿರುವ ಕುರಿತು ಅಸಹನೆಗೊಳಗಾಗಿರುವ, "ಸ್ವಯಂಘೋಷಿತ ಹಿಂದೂ ದರ್ಮೋದ್ದಾರಕ ಪಕ್ಷ" ಬಿಜೆಪಿ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲಿ ಮಟ್ಟುರವರ ಈ ಮೇಲಿನ ಹೇಳಿಕೆ ಮಹತ್ವ ಪಡೆದಿದೆ.

ಮಟ್ಟುರವರು ಹೇಳಿಕೆ ಈ ಕೆಳಗಿನಂತಿದೆ:

"ತಮ್ಮ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟು ಸವಾಲು ಹಾಕಿದ್ದಾರೆ. ಹಿಂದೂ ಧರ್ಮ ರಕ್ಷಕರೆಂದು ಎದೆ ಬಡಿದುಕೊಳ್ಳುವವರು ಈಗ ಜಾರಕಿಹೊಳಿ ಅವರ ಸವಾಲನ್ನು ಸ್ವೀಕರಿಸುವ ಎದೆಗಾರಿಕೆ ತೋರಿಸಬೇಕು" ಎಂದು  ದಿನೇಶ್ ಮಟ್ಟು ಕರೆ ನೀಡಿದ್ದಾರೆ.

"ಜಾರಕಿಹೊಳಿ ಅವರು ಹಿಂದೂ ಧರ್ಮವೇ ಅಶ್ಲೀಲ, ಇಲ್ಲವೇ ಹಿಂದೂಗಳೆಲ್ಲರೂ ಕಳ್ಳರು, ಗುಲಾಮರು ಎಂದು ಹೇಳಿಲ್ಲ. ತಾನು ಹಿಂದೂ ಅಲ್ಲ, ಹಿಂದೂ ಆಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯಲಾರೆ ಎಂದೂ ಹೇಳಿಲ್ಲ. ಜಾರಕಿಹೊಳಿ ಅವರು ಹಿಂದೂ ದೇವರು ಮತ್ತು ಧರ್ಮವನ್ನು ಪ್ರಚಾರದ ಪೋಸ್ಟರ್ ಮಾಡಿ ಚುನಾವಣೆಗಳಲ್ಲಿ ಮತವನ್ನೂ ಕೇಳಿಲ್ಲ. ಅವರು ಗೋಮಾಂಸ ರಫ್ತಿನ ಉದ್ಯಮವನ್ನೂ ನಡೆಸುತ್ತಿಲ್ಲ. ಮಂದಿರ ಕಟ್ಟುತ್ತೇವೆ ಎಂದು ಹೇಳಿ ಇಟ್ಟಿಗೆ ಮಾರಿ ಹಣ ತಿಂದೂ ಹಾಕಿಲ್ಲ. ಹಿಂದೂ ಮಹಿಳೆಯರನ್ನು ರೇಪ್ ಮಾಡಿದ ಹಿಂದೂ ಸ್ವಾಮಿಗಳನ್ನು ಸಮರ್ಥಿಸಿಕೊಂಡಿಲ್ಲ, ಅಸ್ಪರ್ಶ್ಯತೆಯನ್ನು ಆಚರಿಸಿಲ್ಲ, ಜಾತಿ ಆಧಾರದಲ್ಲಿ ತಾರತಮ್ಯವನ್ನೂ ಮಾಡಿಲ್ಲ" ಎಂದಿರುವ ಮಟ್ಟುರವರು "ಇದನ್ನೆಲ್ಲ ಅವರು ಮಾಡಿದ್ದಾರೆಂದು ಯಾರಾದರೂ ಸಾಬೀತುಪಡಿಸಿದರೆ ನಾನೂ ಬರವಣಿಗೆಯನ್ನು ನಿಲ್ಲಿಸಿಬಿಡುತ್ತೇನೆ" ಎಂದು ಸವಾಲು ಎಸೆದಿದ್ದಾರೆ.

"ಜಾರ್ಕಿಹೊಳಿಯವರು ಬಹಳ ಸರಳವಾಗಿ ಹಿಂದೂ ಎಂಬ ಶಬ್ದಕ್ಕೆ ಪರ್ಷಿಯನ್ ಭಾಷೆಯಲ್ಲಿ ಇಂತಹದ್ದೊಂದು ಅರ್ಥ ಇದೆ ಎಂದು ಹೇಳಿದ್ದಾರೆ. ಅದು ಸುಳ್ಳು ಎಂದಾದರೆ ಅದನ್ನು ಸಾಬೀತು ಪಡಿಸಿ ಜಾರಕಿಹೊಳಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಅದನ್ನು ಬಿಟ್ಟು ಕೈಕಾಲು ಬಡಿದುಕೊಂಡು ಕಿರುಚಾಡುವುದಲ್ಲ" ಎಂದವರು ಹೇಳಿದ್ದಾರೆ.

"ನಕಲಿಗಳೇ ಕೇಳಿ, ಹಿಂದೂ ಧರ್ಮ ಉಳಿದುಕೊಂಡಿದ್ದು ಆಚಾರ್ಯರು, ಸ್ವಾಮಿಗಳಿಂದಲೂ ಅಲ್ಲ. ವೇದ, ಉಪನಿಷತ್, ಪುರಾಣಗಳಿಂದಲೂ ಅಲ್ಲ. ಅದು ಉಳಿದದ್ದು ಬೆಳೆದದ್ದು ಕಾಲಕಾಲಕ್ಕೆ ಬುದ್ದ, ಬಸವ, ನಾರಾಯಣ ಗುರು, ಪುಲೆ, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಲೋಹಿಯಾರಂತಹವರು ಕೇಳಿದ ಪ್ರಶ್ನೆಗಳಿಂದ ಮತ್ತು ಹುಟ್ಟು ಹಾಕಿದ ಚರ್ಚೆಗಳಿಂದ. ಇವರಲ್ಲಿ ಕೆಲವರು ಹಿಂದೂ ಧರ್ಮವನ್ನೇ ವಿರೋಧಿಸಿದ್ದಾರೆ ನಿಜ, ಆ ವಿರೋಧದಿಂದಾಗಿ ಹಿಂದೂ ಧರ್ಮ ಅನಿವಾರ್ಯವಾಗಿ ಸುಧಾರಣೆಗೊಳಗಾಗಬೇಕಾಯಿತು. ನಾರಾಯಣ ಗುರುಗಳು ಕೇರಳದಲ್ಲಿ ಧಾರ್ಮಿಕ ಸುಧಾರಣೆಗಳಿಗೆ ಕೈಹಾಕದಿದ್ದರೆ ಅಲ್ಲಿನ ಅರ್ಧ ಜನಸಂಖ್ಯೆ ಕ್ರಿಶ್ಚಿಯನರದಾಗುತ್ತಿತ್ತು" ಎಂದು ಮಟ್ಟುರವರು ವಿಶ್ಲೇಷಿಸಿದ್ದಾರೆ.

"ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಿ ಈ ಚರ್ಚೆಯನ್ನು ಬೇಗ ಮುಗಿಸಿಬಿಡಿ. ಈ ಚರ್ಚೆಯನ್ನು ಬೇಗ ಮುಗಿಸಿದರೆ ಹಿಂದೂಗಳ ಅಳಿವು ಉಳಿವಿನ ಬಹಳ ಮಹತ್ವದ ಪ್ರಶ್ನೆ ಬಗ್ಗೆ ಚರ್ಚೆ ನಡೆಸಲು ಅನುಕೂಲವಾಗುತ್ತದೆ" ಎಂದವರು ಆಗ್ರಹಿಸಿದ್ದಾರೆ.

ತಾನು ಈ ಮೇಲೆ ಉಲ್ಲೇಖಿಸಿದ ''ಹಿಂದೂಗಳ ಅಳಿವು ಉಳಿವಿನ ಬಹಳ ಮಹತ್ವದ ಹಾಗೂ ಚರ್ಚೆಯಾಗಬೇಕಿರುವ ಪ್ರಶ್ನೆ " ಏನೆಂದರೆ "ರಾಜ್ಯದ ಶೇಕಡಾ 80ರಷ್ಟು ಹಿಂದುಳಿದ ಜಾತಿಯ ಹಿಂದುಗಳಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಿ, ಶೇಕಡಾ ನಾಲ್ಕರಷ್ಟು ಮೇಲ್ಜಾತಿ ಹಿಂದೂಗಳಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ಹೇಗೆ ನೀಡಲು ಸಾಧ್ಯ ಎನ್ನುವ ವಿಷಯದ ಮೇಲಿನ ಚರ್ಚೆಯಾಗಬೇಕಿದೆ" ಎಂದವರು ಹೇಳಿದ್ದಾರೆ.


•ದಿನೇಶ್ ಅಮಿನ್ ಮಟ್ಟು

Advertisement
Advertisement
Recent Posts
Advertisement