Advertisement

ಮೋದಿಯವರನ್ನು ಹೊರತುಪಡಿಸಿ, ದೇಶದಲ್ಲಿರುವವರೆಲ್ಲಾ ಅರ್ಬನ್ ನಕ್ಸಲರೇ?

Advertisement

ನನ್ನ ಕಣ್ಣಮುಂದೆ
ಕಸದ ರಾಶಿ ಇದೆಯೆಂದರೆ
ನನ್ನ ಕಣ್ಣನ್ನೇ ಕೀಳಬಯಸಿದರು..

..ಇಷ್ಟೆಲ್ಲಾ ಏಕೆಂದರೆ..
ಅವರ ಹಾಡಿಗೆ ನಾನು
ಪಲ್ಲವಿಯಾಗದಿದ್ದಕೆ..
ಅವರ ಪಲ್ಲಕಿಯನು
ನಾನು ಹೊರದಿದ್ದಕೆ..

•ಚರಬಂಡರಾಜು

ಪ್ರಧಾನಿಗಳೇ, ಪೆನ್ನು ಹಿಡಿದ ನಕ್ಸಲರೆಂದರೆ, ನಿಮ್ಮ ಹಾಡಿಗೆ ಪಲ್ಲವಿಯಾಗದವರೇ?

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಮೊನ್ನೆ ಹರ್ಯಾಣದ ಸೂರಜ್ ಕುಂಡ್ ನಲ್ಲಿ ದೇಶದ ಎಲ್ಲಾ ರಾಜ್ಯಗಳ ಗೃಹಮಂತ್ರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಈ ದೇಶದ ಜನರ ಮೇಲೆ ತಾವು ನಡೆಸುತ್ತಿರುವ ಯುದ್ಧದ ಮುಂದಿನ ಮಜಲನ್ನು ಘೋಶಿಸಿದ್ದಾರೆ.

ಆ ಸಮ್ಮೇಳನಕ್ಕೆ ಮಾರ್ಗದರ್ಶನ ಮಾಡುತ್ತಾ ಮೋದಿಯವರು ಇಂದಿನ ಭಾರತಕ್ಕೆ ಗನ್ನು ಹಿಡಿದ ನಕ್ಸಲರಿಗಿಂತ ಪೆನ್ನು ಹಿಡಿದ ನಕ್ಸಲರು ಅಪಾಯಕಾರಿಯೆಂದೂ, ದೇಶದ ಯುವಜನತೆಯನ್ನು ಅವರ ದುಶ್ಪ್ರಭಾವದಿಂದ ಬಚಾವು ಮಾಡಲು ಪೆನ್ನು ಹಿಡಿದ ನಕ್ಸಲರನ್ನು ನಿಗ್ರಹಿಸುವುದು ಅತ್ಯಗತ್ಯವೆಂದೂ ಸೂಚಿಸಿದ್ದಾರೆ. ಹಾಗೂ ಅದಕ್ಕೆ ತಮ್ಮ ಸರ್ಕಾರವು ಭಯೋತ್ಪಾದಕರನ್ನು ನಿಗ್ರಹಿಸಲು ಜಾರಿಗೆ ತಂದಿರುವ UAPA ಕಾಯಿದೆ ಅತ್ಯುತ್ತಮ ಸಾಧನವೆಂದೂ ಸಲಹಿಸುತ್ತಾ ಭಾರತದ ಬೌದ್ಧಿಕ ಭಿನ್ನಮತದ ಮೇಲೆ ರಾಷ್ಟ್ರೀಯ ಯುದ್ದವನ್ನೇ ಸಾರಿದ್ದಾರೆ.

ಪ್ರಧಾನಿಗಳ ಈ ಮಾರ್ಗದರ್ಶನವನ್ನು ಚಾಚೂ ತಪ್ಪದಂತೆ ಪಾಲಿಸಿದ ಅವರ ವಿದೇಶಾಂಗ ಸಚಿವ ಜೈಶಂಕರ್ ಅವರು ಮಾರನೇ ದಿನ ವಿಶ್ವಸಂಸ್ಥೆಯ ಕೌಂಟರ್ ಟೆರರಿಸಂ ಸಮ್ಮೇಳನದಲ್ಲಿ, ಭಯೋತ್ಪಾದಕರು ತಂತ್ರಜ್ನಾನವನ್ನು ಹಾಗೂ ಪ್ರಜಾತಾಂತ್ರಿಕ ದೇಶಗಳ ಉದಾರವಾದಿ ಧೋರಣೆಗಳ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಪ್ರಭಾವವನ್ನು ಸಮಾಜದಲ್ಲಿ ವಿಸರಿಸಿಕೊಳ್ಳುವುದನ್ನು ತಡೆಗಟ್ಟಲು ವಿಶ್ವಸಂಸ್ಥೆಯ ಸದಸ್ಯ ದೇಶಗಳು ಕಠಿಣ ಧೋರಣೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈಗಾಗಲೇ ಮೋದಿ ಸರ್ಕಾರ ಭೀಮಾ ಕೊರೆಂಗಾಂವ್ ಪ್ರಕರಣದಲ್ಲಿ ಮತ್ತು ಸಿಎಎ ವಿರೋಧಿ ಹೋರಾಟಗಳಲ್ಲಿ ಪೆನ್ನಿನ ಮೂಲಕ ದಮನವನ್ನು ವಿರೋಧಿಸಿದ್ದ ಹಲವಾರು ಲೇಖಕರನ್ನು, ಕವಿಗಳನ್ನು ಸಂಚಿನ ಆರೋಪ ಹೊರಿಸಿ ವರ್ಷಾನುಗಟ್ಟಲೇ ಜೈಲಿಗೆ ತಳ್ಳಿದೆ. ಈಗ ಮೋದಿತ್ವದ ಸರ್ವಾಧಿಕಾರ, ಶೋಷಣೆ ಮತ್ತು ದಮನಗಳ ಬಗ್ಗೆ ಶೋಷಿತ ಜನರಲ್ಲಿ ಅರಿವು ಮೂಡಿಸುವ, ಬದುಕಿನ ಬವಣೆಗಳ ಹಿಂದಿನ ರಾಜಕೀಯದ ಬಗ್ಗೆ ಪ್ರಜ್ನೆ ಮೂಡಿಸುವ ಮತ್ತು ಆ ಅರಿವನ್ನು ಸಂಘಟಿತ ಹೋರಾಟವನ್ನಾಗಿ ಮಾಡಿ ಬದಲಾವಣೆ ಸಾಧ್ಯವಾಗಿಸುವ ಪ್ರಕ್ರಿಯೆಯನ್ನೇ ಅಪರಾಧೀಕರಿಸಿ ಸೆರೆಗೆ ದೂಡುವ ವ್ಯವಸ್ಥಿತ ಪ್ರಯತ್ನವನ್ನು ಮಾಡುತ್ತಿದೆ. ಮೋದಿಯವರ ಭಾಷಣ ಆ ಕರಾಳ ಸರ್ವಾಧಿಕಾರದ ಮತ್ತೊಂದು ಮಜಲಿನ ಘೋಷಣೆಯೇ ಆಗಿದೆ.

•ಭಿನ್ನ ಚಿಂತನೆಗಳನ್ನು ಬೆದರಿಸಬಹುದೇ?•

ಈವರೆಗಿನ ಭಾರತದ ನ್ಯಾಯ ಸಂಹಿತೆಯಲ್ಲಿ ಯಾವುದೇ ಅಭಿಪ್ರಾಯವನ್ನು, ಅದು ಸಂವಿಧಾನ ಬಾಹಿರವೇ ಆಗಿದ್ದರೂ, ಅವನ್ನು "ದೇಶದ್ರೋಹಿ" ಎಂದೋ "ಭಯೋತ್ಪಾದಕವೆಂದೋ" ಪರಿಗಣಿಸಿರಲಿಲ್ಲ. ಎಲ್ಲಿಯತನಕ ಒಂದು ಅಭಿಪ್ರಾಯವು ನೇರವಾದಿ ಒಂದು ನಿರ್ದಿಷ್ಟ ಭಯೋತ್ಪಾದನೆಗೆ ಪ್ರಚೋದನೆ ನೀಡಿದೆಯೆಂದು ಸಾಬೀತು ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಅಂಥ ಬರಹಗಳ ಮೇಲೆ ಹಾಗೂ ಬರಹಗಾರರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಲು ಸಾಧ್ಯವಿಲ್ಲ ಎಂಬುದನ್ನೇ ಸುಪ್ರೀಂ ಕೋರ್ಟು ತನ್ನ ಹಲವಾರು ನ್ಯಾಯಾದೇಶಗಳಲ್ಲಿ ಸ್ಪಷ್ಟಪಡಿಸುತಾ ಬಂದಿದೆ. ಏಕೆಂದರೆ ಒಂದು ಪ್ರಜಾತಂತ್ರದಲ್ಲಿ ಚಿಂತನೆಯನ್ನು ನಿಶೇಧಿಸಲು ಸಾಧ್ಯವಿಲ್ಲ.

ಹಾಗೆಯೇ ಇತ್ತೀಚೆಗೆ ಸೆಡಿಶನ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟು ಸರ್ಕಾರವನ್ನು ಟೀಕಿಸುವುದನ್ನು ದೇಶದ್ರೋಹವೆಂದು ಪರಿಗಣಿಸುವುದು ವಸಾಹತುಶಾಹಿ ಧೋರಣೆಯಾಗುತ್ತದೆಯೆಂದು ಘೋಷಿಸಿ ದೇಶದಲ್ಲೆಲ್ಲು ಸೆಡಿಶನ್ ಕಾನೂನಿನನ್ವಯ ಪ್ರಕರಣಗಳನ್ನು ದಾಖಲಿಸಬಾರದೆಂದೂ ಆದೇಶಿಸಿತ್ತು.

ಹಾಗಿದ್ದರೂ ಮೋದಿಯವರು ಪೆನ್ನು ಹಿಡಿದವರ ಮೇಲೆ ಅರ್ಥಾತ್ ತನ್ನ ಸರ್ಕಾರದರ ವಿರುದ್ಧದ ಭಿನ್ನಮತೀಯ ಚಿಂತನೆಗಳನ್ನೇ ಭಯೋತ್ಪಾದನೆ ಎಂದು ಘೋಷಿಸಿ ಯುದ್ಧ ನಡೆಸಲು ಹೊರಟಿದೆ.

ಮೋದಿಯವರು ಸೂಚಿಸುತ್ತಿರುವ ಈ ಪೆನ್ನು ಹಿಡಿದ ನಕ್ಸಲರು ಯಾರು ಮತ್ತು ಯಾವುದು ಪೆನ್ನು ಭಯೋತ್ಪಾದನೆ ಎಂಬುದನ್ನು ಅರ್ಥಮಾಡಿಕೊಂಡರೇ ಈ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ.

•ಮೋದಿಯವರನ್ನು ಬಿಟ್ಟರೆ ದೇಶದ ತುಂಬೆಲ್ಲ ಅರ್ಬನ್ ನಕ್ಸಲರೇ!•

ಮೋದಿ ಸರ್ಕಾರದ ಪ್ರಕಾರ ಪೆನ್ನು ಭಯೋತ್ಪಾದನೆಯು ಬಾಂಬು ಬಂದೂಕುಗಳ ಬಳಕೆಗೆ ಕರೆ ಕೊಡಬೇಕು ಎಂದೇನೂ ಇಲ್ಲ. ಸರ್ಕಾರದ ಹಾಗೂ ಸಂಘಪರಿವಾರದ ನೀತಿಗಳ ಟೀಕೆಯೇ ಸಾಕು. ಅದೇ ಭಯೋತ್ಪಾದನೆ. ಅದಕ್ಕೆ ಅವರು ಬಾಂಬು-ಬಂದೂಕು ಬಳಸಲು ಕರೆಕೊಟ್ಟಿರಬೇಕು ಎಂಬ ಶರತೂ ಇಲ್ಲ.

ಉದಾಹರಣೆಗೆ ಇತ್ತೀಚೆಗೆ ಮೋದಿಯವರು ಗುಜರಾತಿನಲ್ಲಿ ಭಾಷಣ ಮಾಡುತ್ತಾ ಈ ದೇಶ ಕಂಡ ಅತ್ಯಂತ ಅಹಿಂಸಾತ್ಮಕ ಆದಿವಾಸಿಗಳ ಹೋರಾಟವಾದ ನರ್ಮದಾ ಬಚಾವ್ ಅಂದೋಲನದ ಮೇಧಾ ಪಾಟ್ಕರ್ ರಂಥ ಗಾಂಧಿವಾದಿ ನಾಯಕರನ್ನು ಕೂಡ ಅರ್ಬನ್ ನಕ್ಸಲರೆಂದು ಬಣ್ಣಿಸಿದ್ದರು. ಅಷ್ಟೇಕೆ, ರಾಹುಲ್ ಗಾಂಧಿಯ ಭಾರತ ಜೋಡೊವನ್ನು ಅರ್ಬನ್ ನಕ್ಸಲರ ಯೋಜನೆಯೆಂದೂ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡಿದ್ದಲ್ಲದೆ , ಕೇಜ್ರಿವಾಲರಿಂದ ಹಿಡಿದು ಮಮತಾ ಬ್ಯಾನರ್ಜಿಯವರಿಗೆ ಎಲ್ಲ ವಿರೋಧ ಪಕ್ಷಗಳನ್ನು ಒಂದಲ್ಲ ಒಂದು ಹಂತದಲ್ಲಿ ಅರ್ಬನ್ ನಕ್ಸಲರೆಂದು ಆಪಾದಿಸಿದ್ದರು.

ಅದೇ ರೀತಿ ಚಿಂತಕ ತೇಲ್‌ತುಂಬ್ಡೆ , ಮಾನವ ಹಕ್ಕು ಹೋರಾಟಗಾರ ಗೌತಮ್ ನವಲಾಖಾ, ವಕೀಲೆ ಸುಧಾ ಭಾರದ್ವಾಜ್ ..ಇನ್ನಿತರರನ್ನು ಬಂಧಿಸುವಾಗ ಅವರು ವಿದೇಶದಲ್ಲಿ ಮೋದಿ ಹತ್ಯೆಗೆ ಬೇಕಾದ ಹಣಸಂಗ್ರಹ ಮಾಡುತ್ತಿದ್ದರೆಂಬ ಅತ್ಯಂತ ಹಾಸ್ಯಾಸ್ಪದವಾದ ಸುಳ್ಳನ್ನು ಹೇಳಿತ್ತು. ಇವೆಲ್ಲವೂ ಹಸಿಹಸಿ ಸುಳ್ಳಾಗಿರುವುದರಿಂದ ಮತ್ತು ಯಾವುದಕ್ಕೂ ಪುರಾವೆಯಿಲ್ಲದಿರುವುದರಿಂದ ಪೆಗಾಸಸ್ ತಂತ್ರಜ್ನಾನ ಬಳಸಿ ಇಲ್ಲದ ಕಾಗದ ಪತ್ರಗಳನ್ನು ಈ ಚಿಂತಕರ ಮತ್ತು ಹೋರಾಟಗಾರರ ಮೊಬೈಲ್ ಮತ್ತು ಲ್ಯಾಪ್ ಟಾಪಿನಲ್ಲಿ ಇರಿಸಲಾಯಿತೆಂಬುದು ಈಗ ಸ್ಪಷ್ಟವಾಗುತ್ತಿದೆ. ಇದೆಲ್ಲಕ್ಕೂ ಕಾರಣ ಇವರೆಲ್ಲರೂ ಮೋದಿ ಸರ್ಕಾರದ ನೀತಿಗಳ ಜನದ್ರೋಹ ಹಾಗೂ ದೇಶದ್ರೋಹಗಳನ್ನು ವಿರೋಧಿಸುತ್ತಿದ್ದದ್ದು.

ಮೋದಿ ಸರ್ಕಾರ ಜನರಲ್ಲಿ ಕೋಮುವಾದವನ್ನು ಬಡಿದೆಬ್ಬಿಸಿ ಅಂತರ್ಯುದ್ಧದ ವಾತಾವರಣ ಸೃಷ್ಟಿಸುವ ಮೂಲಕ ದೇಶದ ಸಂಪನ್ಮೋಲಗಳನ್ನು ಯಾವುದೇ ಜನವಿರೋಧ ಇಲ್ಲದಂತೆ ಕಾರ್ಪೊರೇಟ್ ಆದಾನಿ-ಅಂಬಾನಿ ಗಳಿಗೆ ಮಾರಿಕೊಳ್ಳುತ್ತಿರುವುದರ ಬಗ್ಗೆ ಅರಿವನ್ನು ಉಂಟು ಮಾಡುತ್ತಿದ್ದದ್ದು.

ಆದರೆ ಈ ಚಿಂತಕರ ಪ್ರಜಾತಂತ್ರ ಪರ-ಬಿಜೆಪಿ ಸರ್ಕಾರದ ನೀತಿಗಳ ವಿರೋಧಿ ಬರಹಗಳನ್ನೇ ಭಯೋತ್ಪಾದನೆಗೆ ಒಂದು ಪುರಾವೆಯೆಂದು ನ್ಯಾಯಾಲಯವನ್ನು ಒಪ್ಪಿಸಲು ಕೆಲವರ್ಷಗಳ ಹಿಂದಿನವರೆಗೆ ಸಾಧ್ಯವಾಗುತ್ತಿರಲಿಲ್ಲ.

ಆದರೆ ದಿನಗಳೆದಂತೆ ದೇಶವೆಂದರೆ ಮೋದಿ, ಮೋದಿಯೆಂದರೆ ದೇಶ ಎಂಬ ಭಾವನೆ ಅಲಿಖಿತ ಶಾಸನವೇ ಆಗುತ್ತಿದ್ದಂತೆ ಮೋದಿಯನ್ನು ವಿರೋಧಿಸುವುದೆಂದರೆ ದೇಶದ್ರೋಹಕ್ಕೆ ಸಮವೆಂಬ ಅಭಿಪ್ರಾಯವನ್ನು ಸಾಂವಿಧಾನಿಕ ಕೋರ್ಟುಗಳಾಗಿರುವ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳೂ ಸಹ ಮಾನ್ಯ ಮಾಡುತ್ತಿವೆ!

ಹೀಗಾಗಿ ಈಗ ಮೋದಿಯ ಪೊಲೀಸರು ತಮಗೆ ಬಗ್ಗದವರನ್ನು ಮಣಿಸಲು ಬಾಂಬ್ ಭಯೋತ್ಪಾದನೆಗಳ ಸುಳ್ಳು ಅಪರಾಧಗಳನ್ನು ಹೊರಿಸಿ ಅದಕ್ಕೆ ಸುಳ್ಳು ಪುರಾವೆಯನ್ನು ಜೋಡಿಸಲು ಹೆಣಗುವ ಅಗತ್ಯವೇ ಇಲ್ಲ.!

ಮೋದಿ ಸರ್ಕಾರದ ನೀತಿಗಳ ಟೀಕೆಯು, ಅದರ ಬಗ್ಗೆ ಪೆನ್ನು ಬಳಸಿ ಬರೆವ ವರದಿ, ಲೇಖನ ಮತ್ತು ನಾಟಕಗಳು ಕೂಡ ದೇಶದ್ರೋಹದ ಆರೋಪವನ್ನು ಸಾಬೀತುಪಡಿಸುವ ಪುರಾವೆಗಳಾಗಲಿವೆ ಎಂಬುದರ ಮುನ್ಸೋಚನೆಯನ್ನು ಕೋರ್ಟುಗಳೇ ನೀಡಿವೆ..
ಇದು ಊಹೆಯಲ್ಲ. ವಾಸ್ತವ.

•ಅಚ್ಚೇದಿನ್, ಗೋಮೂತ್ರ ಪದಬಳಕೆ- ಭಯೋತ್ಪಾದನೆಗೆ ಪುರಾವೆ!•

ತೀರಾ ಇತ್ತೀಚೆಗೆ-ಅಕ್ಟೋಬರ್ 17 ರಂದು, ಬಾಂಬೆ ಹೈಕೋರ್ಟಿನ ದ್ವಿಸದಸ್ಯ ಪೀಠ, ಭೀಮಾಕೊರೆಂಗಾಂವ್ ಪ್ರಕರಣದಲ್ಲಿ ಜೈಲಿನಲ್ಲಿರುವ ಕಬೀರ್ ಕಲಾ ಮಂಚ್‌ನ ನಟಿ/ಸದಸ್ಯೆ ಜ್ಯೋತಿ ಜಗತಪ್ ಅವರ ಜಾಮೀನು ನಿರಾಕರಿಸಿತು. ಅದಕ್ಕೆ ಅವರ ಕೊಟ್ಟ ಕಾರಣಗಳಲ್ಲಿ ಈ ಪೆನ್ನು ಹಿಡಿದ ನಕ್ಸಲೈಟರು ಯಾರಾಗಿರುತ್ತಾರೆ ಎಂಬ ವಿವರಗಳನ್ನು ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಜ್ಯೋತಿಯವರಿಗೆ ಜಮೀನು ನಿರಾಕರಿಸುತ್ತಾ ಕೋರ್ಟು ಹೀಗೆ ಅಭಿಪ್ರಾಯ ಪಟ್ಟಿದೆ:

"ಕಬೀರ್ ಕಲಾಮಂಚ್ (ಕೆ.ಕೆ.ಎಂ) ಪ್ರದರ್ಶಿಸಿದ ನಾಟಕದ ಪಠ್ಯವನ್ನು ನಾವೂ ಗಂಭೀರವಾಗಿ ಪರಿಶೀಲಿಸಿದ್ದೇವೆ..ಅದರಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವನ್ನು ವಿರೋಧಿಸುವ, ಸರ್ಕಾರವನ್ನು ಗೇಲಿ ಮಡುವ, ಅದನ್ನು ಉರುಳಿಸುವ, ಹಲವಾರು ಪದಗಳು ಮತ್ತು ಕೊಂಕುನುಡಿಗಳೂ ಇವೆ. ಇವುಗಳು ನಾಟಕದಲ್ಲಿ ಪ್ರಶ್ನೋತ್ತರ ರೂಪದಲ್ಲಿ ಇವೆ.

"ಅಂಥಾ ಪದಗಳು/ಕೊಂಕುನುಡಿಗಳು ಹೀಗಿವೆ: ಅಚ್ಚೇದಿನ್, ಗೋಮೂತ್ರ, ಶಾಖಾಹಾರ. ಪ್ರಧಾನಿಯನ್ನು ಮಗುವೆಂದು ಸಂಬೋಧಿಸಿರುವುದು, ಪ್ರಧಾನಿಗಳ ಪ್ರವಾಸಶಾಸ್ತ್ರ, ಆರೆಸ್ಸೆಸ್ಸಿನ ಸಮವಸ್ತ್ರ, ನೋಟುನಿಷೇಧ ದಂತಹ ನೀತಿಗಳು, ಸನಾತನ ಧರ್ಮ, ರಾಮ ಮಂದಿರ, ಶಿವಾಜಿ ಮಹಾರಾಜರು ಮುಸ್ಲಿಮರ ವಿರುದ್ಧವಿದ್ದರೆಂಬ, ಟಿಪ್ಪು ಸುಲ್ತಾನ್ ಹಿಂದೂಗಳ ವಿರುದ್ಧವಿದ್ದದ್ದು ಮಾತ್ರವಲ್ಲ, ಹಿಂದೂಗಳ ಕಗ್ಗೊಲೆ ಮಾಡಿದ್ದರು ಮತ್ತು ದೇವಸ್ಥಾನಗಳನ್ನು ಕೆಡವಿದ್ದರೆಂಬ ಪ್ರಚಾರದ ಬಗ್ಗೆ, ಗುರೂಜಿ ಗೋಳ್ವಾಲ್ಕರ್ ಪ್ರಕಾರ ಸಂವಿಧಾನಕ್ಕಿಂತ ಮನುಸ್ಮ್ರಿತಿಯೇ ಅತ್ಯುನ್ನತ ಗ್ರಂಥ, ದಲಿತರ ಬಗ್ಗೆ ಪೇಶ್ವೆಗಳ ಧೋರಣೆ ಮತ್ತು ನಡೆಸಿದ ಅತ್ಯಾಚಾರಗಳ ಬಗ್ಗೆ, ಇಂದಿನ ಭಾರತದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಅತ್ಯಾಚಾರ..ಇತ್ಯಾದಿಗಳು.

"ಎಲ್ಗಾರ್ ಪರಿಶತ್ತಿನ ಕಾರ್ಯಕ್ರಮದಲ್ಲಿ ಕೆ.ಕೆ.ಎಂ ಈ ಮೇಲಿನಂತೆ ನಾಟಕವಾಡುವ ಮೂಲಕ ದ್ವೇಷ ಮತ್ತು ವ್ಯತಿರೇಕ ಭಾವನೆಗಳನ್ನು ಕೆರಳಿಸಿರುವುದು ಸ್ಪಷ್ಟ. ಹೀಗಾಗಿ ಎಲ್ಗಾರ್ ಪರಿಶತ್ತಿನ ಕಾರ್ಯಕ್ರಮದಲ್ಲಿ ಕೆ.ಕೆ.ಎಂ ಮತ್ತು ಮಾವೋವಾದಿಗಳು ಬೇರೊಂದು ಸಂಚು ನಡೆಸಿರುವುದು ಖಚಿತವಾಗಿದೆ"

ಹೆಚ್ಚಿನ ವಿವರಗಳಿಗೆ ಆಸಕ್ತರು ಈ ನ್ಯಾಯದೇಶದ ಸಂಪೂರ್ಣ ವಿವರವಿರುವ ಈ ವೆಬ್ ಸೈಟನ್ನು ಸಂದರ್ಶಿಸಬಹುದು.
(https://indiankanoon.org/doc/93752869/)

ಹೀಗೆ ಕಬೀರ್ ಕಲಾ ಮಂಚ್ ಎಂಬ ಜನಪರ ಕಲಾ ಸಂಸ್ಥೆಯ ಸದಸ್ಯೆ ಜ್ಯೋತಿ ಜಗತಪ್‌ಗೆ ಜಾಮೀನು ನಿರಾಕರಿಸಲು ಹಾಗೂ ಮೇಲ್ನೋಟಕ್ಕೆ ಭಯೋತ್ಪಾದಕಿ ಎಂದು ಭಾವಿಸಲು ಭಾರತದ ಒಂದು ಸಾಂವಿಧಾನಿಕ ಕೋರ್ಟಿನ ದ್ವಿಸದಸ್ಯ ಪೀಠಕ್ಕೆ, *ಮೋದಿ ಸರ್ಕಾರದ ನೀತಿಗಳ ಮೇಲಿನ ಟೀಕೆಯಷ್ಟೆ ಸಾಕಾಗಿತ್ತು!

ಅಂದರೆ ಕೋರ್ಟು ಮಾಡಿರುವ ಉಲ್ಲೇಖಗಳನ್ನು ನೋಡಿದರೆ ಇನ್ನು ಮುಂದೆ ಈ ದೇಶದ ವರದಿಗಾರರು, ಲೇಖಕರು, ರಂಗಕರ್ಮಿಗಳು, ಕವಿಗಳು ಮೋದಿ ಸರ್ಕಾರದ ಯಾವುದೇ ನೀತಿಗಳನ್ನು, ಆರೆಸ್ಸೆಸ್ಸೇ ನೀಡಿರುವ ಹೇಳಿಗಳನ್ನು, ಇತಿಹಾಸದ ಸತ್ಯಗಳ ಮತ್ತೊಂದು ಮುಖವನ್ನು, ಕೊನೆಗೆ ಗೋಮೂತ್ರ ಹಾಗೂ ಅಚ್ಚೇದಿನ್‌ಗಳ ಬಗ್ಗೆಯೂ ಮಾತಾಡಬಾರದು, ಬರೆಯಬಾರದು, ಹಾಡಬಾರದು.
ಹಾಗೆ ಮಾಡಿದವರೆಲ್ಲರೂ ಮೋದಿ ಆಳ್ವಿಕೆಯಲ್ಲಿ ಪೆನ್ನು ಹಿಡಿದ ನಕ್ಸಲರಾಗುತ್ತೇವೆ!

ಇತ್ತೀಚಿನ ದಿನಗಳಲ್ಲಿ ಇದೊಂದು ದಿನನಿತ್ಯದ ವಿದ್ಯಮಾನವೂ ಆಗುತ್ತಿದೆ.

•ಇಂಕ್ವಿಲಾಬ್- ದೇಶದ್ರೋಹಿ, ಭಯೋತ್ಪಾದಕ, ಗೋಲಿಮಾರೋ- ದೇಶಭಕ್ತ , ಅಹಿಂಸಾತ್ಮಕ•

ಸಿಎಎ ವಿರೋಧಿ ಜನಚಳವಳಿಯಲ್ಲಿ ಭಾಗವಹಿಸಿ ಅದರ ಜನವಿರೋಧಿತನಗಳ ಬಗ್ಗೆ ಅರಿವು ಮೂಡಿಸುತ್ತಿದ್ದ ಈ ದೇಶ ಕಂಡ ಅಪರೂಪದ ಯುವ ಚಿಂತಕ-ಹೋರಾಟಗಾರ ಉಮರ ಖಲೀದರನ್ನು ಭಯೋತ್ಪಾದನಾ ಕಾಯಿದೆಯಡಿಯಲ್ಲಿ ಸೆರೆಗೆ ದೂಡಿ ಎರಡು ವರ್ಷಗಳಾಯಿತು. ಅವರ ಜಾಮೀನು ಅರ್ಜಿಯನ್ನು ಇತ್ತೀಚೆಗೆ ತಿರಸ್ಕರಿಸಿದ ಮತ್ತೊಂದು ಸಾಂವಿಧಾನಿಕ ನ್ಯಾಯಾಲಯವೇ ಆಗಿರುವ ದೆಹಲಿಯ ಹೈಕೋರ್ಟಿನ ದ್ವಿಸದಸ್ಯ ಪೀಠ ಇತರ ಎಲ್ಲಾ ಕಾರಣಗಳ ಜೊತೆಗೆ ಉಮರ್ ಖಲೀದರು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಯನ್ನು ಹಾಕಿದ್ದನ್ನು ಉಮರ್ ಅವರ ಭಯೋತ್ಪಾದನೆಗೆ ಒಂದು ಪ್ರಮುಖ ಪುರಾವೆಯಾಗಿ ಗುರುತಿಸಿದೆ.

ನ್ಯಾಯಪೀಠದ ಪ್ರಕಾರ ಉಮರ್ ಖಲೀದ್ ಇಂಕ್ವಿಲಾಬ್-ಕ್ರಾಂತಿ ಎಂದಿದ್ದು ಹಿಂಸೆಗೆ ಪ್ರಚೋದನೆಯಂತೆ! ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ನಂತರದಲ್ಲಿ ಎಷ್ಟು ಅಹಿಂಸಾತ್ಮಕ ಜನಹೋರಾಟಗಳು ಹಾಗೂ ಪಕ್ಷಗಳು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಹಾಕಿಲ್ಲ??

ಆದರೂ ಅದೇ ಘೋಷಣೆಯನ್ನು ಒಬ್ಬ ಉಮರ್ ಖಲೀದ್ ಹಾಕಿದರೆ ಅದು ಹಿಂಸೆಗೆ ಪ್ರಚೋದನೆಯಂತೆ ಕಾಣುವುದರ ಹಿಂದಿರುವುದು ನ್ಯಾಯಾಲಯಗಳ ಮೇಲಿರುವ ಮೋದಿ ಪ್ರಣೀತ ನ್ಯಾಯ ಸಂಹಿತೆಯ ಪ್ರಭಾವವಲ್ಲದೆ ಮತ್ತೇನು?

ಆದರೆ, ಇದೇ ಸಿಎಎ ಹೋರಾಟದ ಸಂದರ್ಭದಲ್ಲಿ ಇಂದು ಮೋದಿ ಸರ್ಕಾರದ ಮಂತ್ರಿಯಾಗಿರುವ ಅನುರಾಗ್ ಠಾಕುರ್ " ದೇಶ ಕೆ ಗದ್ದಾರೋನ್ಕೋ, ಗೋಲಿ ಮಾರೋ ಸಾಲೋಂಕೋ" ಎಂದು ಕರೆಕೊಟ್ಟು 53 ಜನರ ಬಲಿಗೆ ಕಾರಣವಾಗಿದ್ದರ ಮೇಲೆ ಪ್ರಕರಣ ದಾಖಲಿಸುವುದನ್ನು ಇದೇ ಕೋರ್ಟಿನ ಮತ್ತೊಂದು ಪೀಠ ಸಮ್ಮತಿಸಲಿಲ್ಲ. ಕಾರಣ ಆ ಕರೆ ನೀಡಿದಾಗ ಠಾಕೂರ್ ಮುಖದ ಮೇಲೆ ನಗೆಯಿತ್ತಂತೆ. ಹೀಗಾಗಿ ಅವರು ಕೊಟ್ಟ ಕರೆ ಗಂಭೀರವಾಗಿರಲಿಲ್ಲವಂತೆ..

ಇದು ಬಿಜೆಪಿ ನಾಯಕನೊಬ್ಬ ಟಿವಿ ಡಿಬೇಟಿನಲ್ಲಿ ಆಡಿದ ಮಾತುಗಳಲ್ಲ. ಒಂದು ಸಾಂವಿಧಾನಿಕ ಕೊರ್‍ಟು ಸಾಕ್ಷಿ-ಪುರಾವೆಗಳನ್ನು ತೂಗಿ ಆಮೇಲೆ ಕೊಟ್ಟ ನ್ಯಾಯಿಕ ನಿರ್ಧಾರ! ಅಂದರೆ ಈಗಾಗಲೇ ಮೋದಿ ಪ್ರಣೀತ ಹಿಂದೂತ್ವ ನ್ಯಾಯ ಸಂಹಿತೆ ಜಾರಿಯಲ್ಲಿದೆ ಎಂತಾಯಿತಲ್ಲವೇ?

ಹೆಚ್ಚಿನ ವಿವರಗಳಿಗೆ ಆಸಕ್ತರು ಈ ನ್ಯಾಯದೇಶದ ಸಂಪೂರ್ಣ ವಿವರವಿರುವ ಈ ವೆಬ್ ಸೈಟನ್ನು ಸಂದರ್ಶಿಸಬಹುದು.
(https://indiankanoon.org/doc/76884242/)

ಮೋದಿ ಆಳ್ವಿಕೆಯು ಆ ಅರ್ಥದಲ್ಲಿ ಬ್ರಿಟಿಷ್ ವಸಾಹತುಶಾಹಿಗಳನ್ನು, ತುರ್ತುಸ್ಥಿತಿಯ ಕಾಲವನ್ನು ಮೀರಿಸುತ್ತಿದೆ.

•ತುರ್ತುಸ್ಥಿತಿಗಿಂತ ಭೀಕರ, ಅಪಾಯಕಾರಿ•

ಬ್ರಿಟಿಶ ವಸಾಹತುಶಾಹಿಗಳು ಈ ದೇಶವನ್ನು ಆಳುತ್ತಿದ್ದಾಗ ಭಾರತದ ಜನರು ಅವರ ವಿರುದ್ಧ ಬಂಡಾಯ ಹೂಡದಂತೆ ತಡೆಗಟ್ಟಲು ಹಲವಾರು ಕರಾಳ ಕಾನೂನುಗಳನ್ನು ಜಾರಿಗೆ ತಂದಿದ್ದರು. ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳನ್ನು (ಚಂದ್ರಶೇಖರ್ ಆಝಾದ್ ತರದವರನ್ನು) ಬೀದಿಗಳಲ್ಲೇ ಗುಂಡಿಟ್ಟು ಕೊಲ್ಲುವುದು, ಅಥವಾ ವಿಚಾರಣೆಯ ನಾಟಕ ನಡೆಸಿ ಗಲ್ಲಿಗೇರಿಸುವುದು (ಭಗತ್ ಸಿಂಗ್ ಅಂತವರನು), ಬ್ರಿಟಿಷ್ ವಿರೋಧಿ ಮಂದಗಾಮಿಗಳನ್ನು ಹಲವಾರು ವರ್ಷ ಜೈಲುಗಳಲ್ಲಿ ಕೊಳೆಯುವಂತೆ ಮಾಡುವುದು (ಹಲವಾರು ಕಾಂಗ್ರೆಸ್ ನಾಯಕರು) ಆಗಿನ ವಸಾಹತುಶಾಹಿಗಳ ಕರಾಳ ಆಡಳಿತದ ಲಕ್ಷಣವಾಗಿತ್ತು. ಸಾವರ್ಕರ್ ಅಂತ ಶರಣಾಗತಿಕೋರರು ಅಥವಾ ವಾಜಪೇಯಿಯಂಥ ಜೊತೆಗಿದ್ದ ಹೋರಾಟಗಾರರನ್ನು ಹಿಡಿದುಕೊಟ್ಟವರನ್ನು ಮಾತ್ರ ಬ್ರಿಟಿಷರು ಪೋಷಿಸಿದರು.

ಅಷ್ಟು ಮಾತ್ರವಲ್ಲ. ಆಗ ಬ್ರಿಟಿಷರ ವಿರುದ್ಧ ಗನ್ನು ಹಿಡಿದು ಹೋರಾಡಿದವರು ಮಾತ್ರವಲ್ಲ, ಪೆನ್ನು ಹಿಡಿದು ಹೋರಾಡಿದವರನ್ನು ಸಹ ರೌಲೆಟ್ ಕಾಯಿದೆ ಹಾಗೂ ಇನ್ನಿತರ ಕರಾಳ ರಾಜದ್ರೋಹಿ ಕಾಯಿದೆಯಡಿ ಬಂಧಿಸಿ ಸೆರೆಮನೆಯಲ್ಲಿ ಕೊಳೆಸುತ್ತಿದ್ದರು.

ಏಕೆಂದರೆ ಆಗ ರಾಜ್ ಎಂದರೆ ಬ್ರಿಟಿಷರು. ಸರ್ಕಾರವನ್ನು ವಿರೋಧಿಸುವುದೆಂದರೆ ಬ್ರಿಟಿಷ್ ಸಾಮ್ರಾಜ್ಯವನ್ನೇ ವಿರೋಧಿಸಿದಂತೆ ಎಂಬುದು ವಸಾಹತು ಶಾಹಿಯ ಕಾನೂನಿನ ತಿರುಳಾಗಿತ್ತು. ಆದರೆ ವಸಾಹತುಶಾಹಿಗಳೂ ಸಹ ಜನಹೋರಾಟಕ್ಕೆ ಮಣಿಸು ಹಲವಾರು ಸುಧಾರಣೆಗಳನ್ನು ಜಾರಿ ಮಾಡಬೇಕಾಯಿತು. ಮತ್ತು ಅಂತಿಮವಾಗಿ ದೇಶ ಬಿಟ್ಟು ತೊಲಗಬೇಕಾಯಿತು.

ಅದೇರೀತಿ ಭಾರತವು ಸ್ವತಂತ್ರ ಪ್ರಜಾತಂತ್ರವಾದ ನಂತರವೂ ವಸಾಹತುಶಾಹಿಗಳು ಜಾರಿಗೆ ತಂದ ರಾಜದ್ರೋಹ ಕಾಯಿದೆ ಮುಂದುವರೆಯಿತು. ಸುಪ್ರಿಂ ಕೋರ್ಟು ಕೂಡ ಅದನ್ನು ಇತ್ತೀಚಿನವರೆಗೆ ಮಾನ್ಯ ಮಾಡಿತ್ತು. ಸರ್ಕಾರದ ವಿರೋಧವೆಂದರೆ ದೇಶದ ವಿರೋಧವೆಂಬಂತೆ ಸರ್ಕಾರ ನಡೆದುಕೊಳ್ಳುವುದನ್ನು ಮುಂದುವರೆಸಿತ್ತು.

ತುರ್ತುಸ್ಥಿತಿಯ ಕಾಲದಲ್ಲಿ ಅವೆಲ್ಲವೂ ಮತ್ತೊಮ್ಮೆ ಅತಿರೇಕಕ್ಕೆ ಮುಟ್ಟಿತು.
ಇಂದಿರಾ ಎಂದರೆ ಇಂಡಿಯಾ ಎಂಬಂತ ಭಟ್ಟಂಗಿಗಳೊಂದಿಗೆ ಘೋಷಿತ ಸರ್ವಾಧಿಕಾರವನ್ನು ಜಾರಿ ಮಾಡಿದ ಇಂದಿರಾಗಾಂಧಿ ಸರ್ಕಾರ, ತನ್ನ ವಿರುದ್ಧ ಹೋರಾಡಿದವರನ್ನು ನಕ್ಸಲರೆಂದು ಆರೋಪಿಸಿ ಸಾವಿರಾರು ಯುವಕರನ್ನು ಸುಳ್ಳು ಎನ್‌ಕೌಂಟರ್ ಮಾಡಿ ಕೊಂದುಹಾಕಿತು. ವಿರೋಧ ಪಕ್ಷದವರನ್ನು ಶಾಂತಿಭಂಗದ ಅಪರಾಧ ಹೊರಿಸಿ MISA ಕಾಯಿದೆಯಡಿ ವರ್ಷಗಟ್ಟಲೇ ಜೈಲಿಗೆ ತಳ್ಳಿತ್ತು. ಅಷ್ಟು ಮಾತ್ರವಲ್ಲ. ಸರ್ಕಾರದ ವಿರುದ್ಧ ವರದಿ ಮಾಡುವುದು, ಟೀಕಿಸುವುದು, ಹಾಡುವುದು, ಲೇಖನ-ಕವನಗಳನ್ನು ಬರೆಯುವುದನ್ನೂ ಕೂಡಾ ಸರ್ಕಾರದ ವಿರುದ್ಧ ರಾಜದ್ರೋಹವೆಂದು ಪರಿಗಣಿಸಿ ಜೈಲಿಗಟ್ಟಿತು.
ಆದರೆ ಇಂದಿರಾ ಸರ್ಕಾರವು ಜನವಿರೋಧಕ್ಕೆ ಮಣಿದು ತುರ್ತುಸ್ಥಿತಿಯನ್ನು ಹಿಂದಕ್ಕೆ ತೆಗೆದುಕೊಂಡು ಪ್ರಜಾತಾಂತ್ರಿಕ ಚುನಾವಣೆ ಘೋಷಿಸಿತು.

ಆದರೆ ಕಳೆದ ಎಂಟು ವರ್ಷಗಳಿಂದ ಮೋದಿ ಸರ್ಕಾರದ ಅವಧಿಯಲ್ಲಿ ವಸಾಹತುಷಾಹಿ ಹಾಗೂ ತುರ್ತುಸ್ಥಿತಿಗಳಿಗಿಂತಲೂ ಕರಾಳವಾದ ಅಘೋಷಿತ ಸರ್ವಾಧಿಕಾರಕ್ಕೆ ಭಾರತದ ಜನರು ಗುರಿಯಾಗಿದ್ದಾರೆ. ಮೋದಿಯೆಂದರೆ ಭಾರತ ಎಂದು ಮಾತ್ರವಲ್ಲ, ಮೋದಿ ಎಂದರೆ ಭಗವಂತ ಎಂಬಂತೆ ಉನ್ಮಾದ ಕೆರಳಿಸಲಾಗಿದೆ.

ಹಿಂದೂತ್ವದ ರಾಜಕಾರಣದ ಮೂಲಕ ಜನರನ್ನು ಧ್ರುವೀಕರಣಗೊಳಿಸಿ, ಹುಸಿ ಶತ್ರುಗಳನ್ನು ತೋರಿಸಿ ಜನರ ಆಕ್ರೋಶವು ಸರ್ಕಾರದ ವಿರುದ್ಧ ತಿರುಗದಂತೆ ಜನರನ್ನು ಅಂತರ್ಯುದ್ಧದಲ್ಲಿ ತೊಡಗಿಸುವ ಹುನ್ನಾರವನ್ನು ಮೋದಿ ಸರ್ಕಾರ ನಡೆಸುತ್ತಿದೆ. ಹಾಗೂ ಜನರಿಗಾಗಿ ಧ್ವನಿ ಎತ್ತುವರನ್ನು ದೇಶದ್ರೋಹಿ/ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟಿ, ಜೈಲಿಗಟ್ಟುವ, ಗುಂಪುದಾಳಿಗಳಲ್ಲಿ ಕೊಂದುಹಾಕುವ, ಶಾಸನಾತ್ಮಕ ಹಾಗೂ ಸಂವಿಧಾನ ಬಾಹಿರ ದಾಳಿಗಳನ್ನು ಹೆಚ್ಚಿಸುತ್ತಿದೆ.

ನಾಗರಿಕ ಸಮಾಜದ ಮೇಲೆ ಮೋದಿ ಸರ್ಕಾರದ ಸಮಗ್ರ ಯುದ್ಧ!

ಹೀಗಾಗಿ:-ಮೋದಿಯವರ ಪೆನ್ನು ಹಿಡಿದಿರುವ ನಕ್ಸಲರು ಗನ್ನು ಹಿಡಿದವರಿಗಿಂತ ಅಪಾಯಕಾರಿ ಎಂಬ ಮೊನ್ನೆಯ ಹೇಳಿಕೆ ನಾಗರಿಕ ಸಮಾಜದ ಮೇಲೆ ಮೋದಿ ಸರ್ಕಾರ ನಡೆಸಲಿರುವ ಸರ್ವಾಂಗೀಣ ದಾಳಿಯ ಮುನ್ಸೂಚನೆ ಆಗಿದೆ.

-ಅದರ ಭಾಗವಾಗಿಯೇ ಮೊನ್ನೆ ಗೃಹಮಂತ್ರಿ ಅಮಿತ್ ಶಾ ಕೂಡಾ ಐಪಿಸಿ, ಸಿಆರ್‌ಪಿಸಿ ಗಳಲ್ಲಿ ಕಾಲಕ್ಕೆ ತಕ್ಕ ಬದಲಾವಣೆ ಬೇಕೆಂದು ಹೇಳಿರುವುದು, ದೇಶಾದ್ಯಂತ ಒಂದೇ ಸಮವಸ್ತ್ರ ಅಪೇಕ್ಷಣೀಯ ಎಂದು ಹೇಳಿರುವುದು,

-ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸುಫ಼ರ್ದಿನಲ್ಲಿರುವ NIA ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ಮುಂದಿಟ್ಟಿರುವುದು,

-UAPA ಬೇಕಾಬಿಟ್ಟಿ ಬಳಕೆಗೆ ಅಡ್ಡಿಯಾಗುವ ಶಾಸನಾತ್ಮಕ ಅಡ್ಡಿಗಳನ ನಿವಾರಣೆಗೆ ಮುಂದಾಗುವ ಸೂಚನೆಗಳನ್ನು ನೀಡಿರುವುದು ಹಾಗೂ

-ಪ್ರಧಾನಿಯ ಭದ್ರತಾ ಸಲಹೆಗಾರ ದೋವಲ್ ಅವರು ದೇಶ ರಕ್ಷಣೆಯ ನಾಲ್ಕನೇ ರಣರಂಗ ನಾಗರಿಕ ಸಮಾಜವೇ ಆಗಿರುತ್ತದೆಂದು ಸೂಚಿಸಿರುವುದು...
.
ಬರಲಿರುವ ದಿನಗಳಲ್ಲಿ ಮೋದಿ ಸರ್ವಾಧಿಕಾರದ ಹಾಗೂ ನಾಗರಿಕ ಸಮಾಜದ ಮೇಲೆ ನಡೆಯಲಿರುವ ಭಯೋತ್ಪಾದನೆಯ ಸ್ವರೂಪಗಳ ಪರಿಚಯ ಮಾಡಿಕೊಡುತ್ತದೆ.

ಇದರಲ್ಲಿ ಬಹುಪಾಲು ಕಾನೂನುಗಳಿಗೆ ಎಲ್ಲಾ ನಾಮ್ ಕಾವಾಸ್ಥೆ ವಿರೋಧ ಪಕ್ಷಗಳು ಬೆಂಬಲಿಸಿದ್ದವು ಎಂಬುದನ್ನು ಗಮನಿಸಲೇಬೇಕು.

ಹಾಗೆಯೇ ಇತ್ತೀಚಿನ Mood Of The Nation ಸರ್ವೇ ಹಾಗೂ ಮೊನ್ನೆ ಗುಜರಾತಿನಲ್ಲಿ CSDS ನಡೆಸಿರುವ ಸರ್ವೇ ಸ್ಪಷ್ಟಪಡಿಸಿರುವಂತೆ ಜನರು ನಿರುದ್ಯೋಗ, ಹಣದುಬ್ಬರಗಳೆಂಬ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತಿದ್ದರೂ, ಅದಕ್ಕೆ ಕಾರಣವಾಗಿರುವ ಮೋದಿಯನ್ನು ಪ್ರಶ್ನಾತೀತ ನಾಯಕನನ್ನಾಗಿಯೇ ಪರಿಗಣಿಸುತ್ತಿದ್ದಾರೆ. ಜೀವನೋಪಾಯದ ಭದ್ರತೆಗಿಂತ ಹಿಂದೂತ್ವ ಅಪಾಯದಲ್ಲಿದೆ ಎಂಬ ಭ್ರಾಂತಿಯನ್ನು ಬಿತ್ತುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ.

ಮತ್ತು ಜನರ ಆರ್ಥಿಕ ಅಭದ್ರತೆಗೆ ಮೋದಿ ರಾಜಕೀಯ ಹೇಗೆ ಕಾರಣವಾಗುದೆ ಎಂದು ತಿಳಿಹೇಳುವಲ್ಲಿ ವಿರೋಧ ಪಕ್ಷ ಹಾಗೂ ಚಳವಳಿಗಳು ರಾಜಕೀಯವಾಗಿ ಸೋತಿವೆ. ಜನರು ಈಗಲೂ ಇತರ ವಿರೋಧ ಪಕ್ಷಗಳನ್ನು ಅನುಮಾನದಿಂದಲೇ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಲಿದಾನಗಳು, ಜೈಲುವಾಸಗಳಿಲ್ಲದೆ ಫ಼್ಯಾಸಿಸಂ ಸೋಲುವುದಿಲ್ಲ.

ಹೀಗಾಗಿ ಎಲ್ಲಿಯತನಕ ಜನರ ರಾಜಕೀಯ ಪ್ರಜ್ನೆ ಹೆಚ್ಚಾಗಿ ಜನಮಾನಸದಿಂದ ಮೋದಿ ತಿರಸ್ಕಾರಗೊಳ್ಳುವಂತೆ ಮಾಡುತ್ತಾ ತಳಮಟ್ಟದಲ್ಲಿ ಜನರನ್ನು ಒಳಗೊಂಡ ಪರ್ಯಾಯ ಜನಚಳವಳಿಗಳು ಸಂಘಟನಾತ್ಮಕವಾಗಿ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಮೋದಿ ಸರ್ವಾಧಿಕಾರಕ್ಕೆ ಎದುರಿರುವುದಿಲ್ಲ.

ಆದ್ದರಿಂದಲೇ ಹೇಗೋ ಬದುಕುಳಿದರೆ , ಆ ನಂತರ ಹೋರಾಡಬಹುದೆಂಬ ಆತ್ಮಘಾತುಕ ನಿಲುವಿನಲ್ಲಿ ಜನಚಳವಳಿಗಳು ಅವಕಾಶವಾದಿ ವಿರೋಧ ಪಕ್ಷಗಳ ನೆರಳಲ್ಲಿ ಉಳಿದುಕೊಳ್ಳಲು ಪ್ರಯತ್ನಿಸಿದಷ್ಟು ಜನಮಾನಸದಲ್ಲಿ ಮೋದಿ ಫ಼್ಯಾಸಿಸಂ ಗಟ್ಟಿಯಾಗುತ್ತಾ ಹೋಗುತ್ತದೆ.

ಬದಲಿರುವ ದಿನಗಳಲ್ಲಿ ಕತ್ತಲು ಮತ್ತು ದಮನ ಇನ್ನಷ್ಟು ಹೆಚ್ಚಾಗಲಿದೆ. ಮೋದಿ ಕೊಟ್ಟಿರುವ ಸೂಚನೆಗಳನ್ನು ನೋಡಿದರೆ ಜನಪರವಾಗಿರುವ, ಜನರ ಪರವಾಗಿ ಪೆನ್ನೆತ್ತುವ ಎಲ್ಲರಿಗೂ ಹಲವು ವರ್ಷಗಳ UAPA ಜೈಲುವಾಸ, ಅಥವಾ ಗುಂಪುದಾಳಿ, ಹಲ್ಲೆ, ಗೌರಿಯಂತೆ ಹತ್ಯೆ , ಹತ್ಯಾ ಪ್ರಯತ್ನಗಳು ಹೆಚ್ಚಾಗಬಹುದು.

ಪ್ರಾಯಶಃ ಈ ಬಲಿದಾನಗಳ ಬೆಳಕಿನಲ್ಲೇ ಈ ಕತ್ತಲನ್ನು ದಾಟಬೇಕಾಗಬಹುದು.
ಅದಕ್ಕೆ ಸಿದ್ದರಾಗಬೇಕು.
ಮಿಕ್ಕ ಶಾರ್ಟ್ ಕಟ್‌ಗಳು ಆತ್ಮಘಾತುಕವಾಗುವ ಸಾಧ್ಯತೆಯೇ ಹೆಚ್ಚು .

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement