Advertisement

ರಾಜ್ಯ ಬಿಜೆಪಿಯ ಒಳಜಗಳದ ವಿವರಗಳು!

Advertisement

ಬರಹ: ದಿನೇಶ್ ಅಮಿನ್ ಮಟ್ಟು

ಭಾರತೀಯ ಜನತಾ ಪಕ್ಷದ ದೊಡ್ಡ ಸಾಧನೆ ಎಂದರೆ ಪ್ರಚಾರದ ಸುಂಟರಗಾಳಿಯ ಮೂಲಕ ಎದುರಾಳಿಗಳನ್ನೇ ಡಿಪೆನ್ಸಿವ್ ಆಗಿ ಮಾಡುವುದು, ಅವರಲ್ಲಿಯೇ ಗಿಲ್ಟ್ ಹುಟ್ಟಿಸುವುದು, ಕೆರಳಿಸಿ ತಪ್ಪು ಮಾಡುವಂತೆ ಮಾಡುವುದು ಮತ್ತು ಮಾಡದ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡಿ ಹೌದೌದು, ತಪ್ಪಾಗಿದೆ ಸರಿಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟೀಕರಣ ಕೊಡಿಸುವುದು.

ಇದಕ್ಕೆ ಇತ್ತೀಚಿನ ಉದಾಹರಣೆ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದದ ಹಿರಿಯ ನಾಯಕರ ನಡುವೆಯೂ ಚರ್ಚೆಯಾಗುತ್ತಿರುವ ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಒಳಜಗಳದ ವಿಷಯ.
ಇತ್ತೀಚೆಗೆ ಟಿವಿ ಚರ್ಚೆಯಲ್ಲಿ ಇದೇ ವಿಷಯ ಪ್ರಸ್ತಾಪವಾದಾಗ ನಾನು ಹೇಳಿದ್ದನ್ನು ಸ್ವಲ್ಪ ವಿಸ್ತರಿಸಿ ಬರೆದಿದ್ದೇನೆ:

ಯಾವುದು ಒಳಜಗಳ? 1999-2004ರ ವರೆಗಿನ ಕಾಂಗ್ರೆಸ್ ಆಳ್ವಿಕೆಯಲ್ಲಿ ಪೂರ್ಣಾವಧಿಗೆ ಒಬ್ಬರೇ ಮುಖ್ಯಮಂತ್ರಿ, 2004ರ ವರೆಗಿನ 2013ರ ವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ಐವರು ಮುಖ್ಯಮಂತ್ರಿಗಳು. 2008ರಿಂದ 2013ರ ವರೆಗಿನ ಐದು ವರ್ಷಗಳ ಅವಧಿಯಲ್ಲಿಯೇ ಬಿಜೆಪಿಯ ಮೂವರು ಮುಖ್ಯಮಂತ್ರಿಗಳು. ಕೊನೆಗೆ ಬಿಜೆಪಿ ಮೂರು ಹೋಳುಗಳು.

2013ರಿಂದ 2018ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಒಬ್ಬರೇ ಮುಖ್ಯಮಂತ್ರಿ. ಈ ಅವಧಿಯಲ್ಲಿ ಒಳಜಗಳದಿಂದಾಗಿ ರಾಜ್ಯದ ಆಡಳಿತ ಕುಂಠಿತಗೊಂಡಿದೆ ಎಂದು ಎಲ್ಲಿಯಾದರೂ ಮಾಧ್ಯಮಗಳಲ್ಲಿ ಒಂದು ಸಣ್ಣ ವರದಿಯಾದರೂ ಪ್ರಕಟವಾಗಿದೆಯೇ?

2018ರ ನಂತರದ ಇಲ್ಲಿಯ ವರೆಗಿನ ನಾಲ್ಕು ವರೆ ವರ್ಷಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು. ಇವರಲ್ಲಿ ಇಬ್ಬರು ಬಿಜೆಪಿ ಮುಖ್ಯಮಂತ್ರಿಗಳು. ಇನ್ನುಳಿದ ಆರು ತಿಂಗಳಲ್ಲಿ ಇನ್ನೊಬ್ಬರುಮುಖ್ಯಮಂತ್ರಿಗಳಾದರೂ ಆಶ್ಚರ್ಯವಿಲ್ಲ.

ಬಿ.ಎಸ್.ಯಡಿಯೂರಪ್ಪನವರನ್ನು ಹಠಾತ್ತನೇ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದಾಗ ಸಾರ್ವಜನಿಕವಾಗಿಯೇ ಅವರು ಕಣ್ಣೀರು ಹಾಕಿದ್ದು……ಅವರ ಮಗನಿಗೆ ಸಚಿವ ಸ್ಥಾನ ಬೇಡ, ಕನಿಷ್ಠ ಶಾಸಕನನ್ನಾಗಿಯೂ ಮಾಡದೆ ಇರುವುದು…. ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ರೆಡಿ ಮಾಡಿದ್ದ ಹೈಟೆಕ್ ವಾಹನ ಮೂಲೆ ಸೇರಿದ್ದು….. ಕೊನೆಗೆ ಅವರ ವಿರುದ್ದದ ಸಿಬಿಐ ವಿಚಾರಣೆ ಆಗಾಗ ಮೇಲೆದ್ದು ಬರುವುದು…. ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ದವೇ ಯಕಶ್ಚಿತ್ ಶಾಸಕರೊಬ್ಬರು ಪ್ರತಿನಿತ್ಯ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದರೂ ಹೈಕಮಾಂಡ್ ಕ್ರಮಕೈಗೊಳ್ಳದೆ ಬೆಂಬಲಿಸುತ್ತಿರುವುದ.....ಇವೆಲ್ಲವನ್ನೂ ಯಡಿಯೂರಪ್ಪನವರು ಮತ್ತು ಅವರ ಮಕ್ಕಳು ಮರೆತು ಬಿಜೆಪಿ ನಾಯಕರನ್ನು ಹಾಡಿ ಕೊಂಡಾಡುತ್ತಿದ್ದಾರೆ ಎಂದು ಯಾರಾದರೂ ನಂಬಿದರೆ ಅವರು ಮೂರ್ಖರು.

ಇಷ್ಟು ವರ್ಷ ಚಡ್ಡಿ ಹಾಕಿಕೊಂಡು, ಲಾಠಿ ಬೀಸಿ ಕಲ್ಲು ಹೊಡೆದು ರೌಡಿ ಅನಿಸಿಕೊಂಡು ಸಂಘಟನೆ ಮಾಡುತ್ತಾ ಬಂದಿದ್ದರೂ ತಮ್ಮ್ಲಲಿದ್ದ ಸಚಿವ ಸ್ಥಾನವನ್ನೂ ಕಿತ್ತುಕೊಂಡು ಭಾಷೆ ಗೊತ್ತಿಲ್ಲದ ರಾಜ್ಯಕ್ಕೆ ಉಸ್ತುವಾರಿಯಾಗಿ ಕಳಿಸಿ ನಗೆಪಾಟಲಿಗೀಡು ಮಾಡಿದ ಹೈಕಮಾಂಡ್ , ತಮ್ಮನ್ನೇ ಚಡ್ಡಿಗಳು ಎಂದು ಜರಿಯುತ್ತಿದ್ದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದಾಗ ಸಿ.ಟಿ.ರವಿಯವರ ಎದೆಯೊಳಗೆ ಅದೆಂತಹ ಅತೃಪ್ತಿಯ ಬೆಂಕಿ ಧಗಧಗಿಸುತ್ತಿರಬಹುದು?

ಇಷ್ಟು ವರ್ಷಗಳ ಕಾಲ ಒಳ್ಳೆಯದೋ, ಕೆಟ್ಟದೊ ಎಲ್ಲವನ್ನು ಪಕ್ಷಕ್ಕಾಗಿ ಮಾಡಿ ಇನ್ನೇನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರೊಮೊಟ್ ಆಗಬೇಕೆಂದು ಅಂದುಕೊಳ್ಳುತ್ತಿರುವಾಗಲೇ ವಲಸೆ ಬಂದವರನ್ನು ಮುಖ್ಯಮಂತ್ರಿ ಮಾಡಿದ್ದನ್ನು ಅಲ್ಲಿನ ಸಂಘನಿಷ್ಠ ಹಿರಿಯ ನಾಯಕರೆಲ್ಲರೂ ಹೃತ್ಪೂರ್ವಕವಾಗಿ ಸ್ವಾಗತಿಸಿ ಆನಂದಿಸುತ್ತಿದ್ದಾರೆಯೇ?

ಆದರೆ ಇದು ಯಾವುದೂ ಬಿಜೆಪಿಯಲ್ಲಿ ಬಹಿರಂಗವಾಗಿ ಚರ್ಚೆಯಾಗುತ್ತಿಲ್ಲ, ಆ ಪಕ್ಷದ ದೆಹಲಿ ನಾಯಕರೂ ಬಂದು ಎಲ್ಲರೂ ಒಗ್ಗಟ್ಟಿನಿಂದ ಇರಿ ಎಂದು ಬಹಿರಂಗ ಭಾಷಣ ಮಾಡಿ ಎಲ್ಲರ ಕೈಗಳನ್ನು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸುವುದೂ ಇಲ್ಲ. ಖಾಸಗಿಯಾಗಿ ಬಿಜೆಪಿ ನಾಯಕರನ್ನು ಒಬ್ಬೊಬ್ಬರಾಗಿ ಕೇಳಿ ತಮ್ಮ ಅತೃಪ್ತಿಯ ನೂರು ಕತೆ ಹೇಳುತ್ತಾರೆ.

ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಒಳಜಗಳವೇ ಮುಂದಿನ ಚುನಾವಣೆಯಲ್ಲಿನ ಸೋಲು- ಗೆಲುವಿನ ನಡುವಿನ ಏಕೈಕ ತಡೆಗೋಡೆ ಎಂದು ಚರ್ಚಿಸುತ್ತಾ ಅದನ್ನು ಜೀವಂತವಾಗಿಟ್ಟಿದೆ. ಹೈಕಮಾಂಡ್ ನಾಯಕರಿಗೂ ಇದೇ ಅಭಿಪ್ರಾಯ ರವಾನೆಯಾಗಿರುವುದರಿಂದ ರಾಹುಲ್ ಗಾಂಧಿಯವರು ಕೂಡಾ ಈ ಇಬ್ಬರು ನಾಯಕರು ಜೊತೆಯಲ್ಲಿ ಸಿಕ್ಕಾಗೆಲ್ಲ ಇಬ್ಬರ ಕೈಗಳನ್ನು ಹಿಡಿದು ಮೇಲೆ ಎತ್ತುತ್ತಾ ‘ಒಳಜಗಳ ಇದೆ’ ಎಂದು ಜಗತ್ತಿಗೆ ಸಾರುತ್ತಾ ಹೇಳುತ್ತಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಪಕ್ಷದ ನಿಜವಾದ ಸಮಸ್ಯೆ ನಾಯಕರ ನಡುವಿನ ಒಳಜಗಳವೇ? ಇದೊಂದು ಬಗೆಹರಿದುಬಿಟ್ಟರೆ ಗೆಲುವು ಖಂಡಿತ ಎಂದು ಹೇಳುವವರು ಮೂರ್ಖರು. ಈ ರೀತಿ ಹೇಳುವವರು ಮೊದಲು ತಳಮಟ್ಟದಲ್ಲಿ ಪಕ್ಷದ ಸಂಘಟನೆ ಹೇಗಿದೆ ಎಂದು ತಿಳಿದುಕೊಳ್ಳಲಿ.

ಒಳ ಜಗಳ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ ಬಿಜೆಪಿಯೊಳಗೂ ಇದೆ. ಆದರೆ ಈ ಒಳಜಗಳದ ಬಗ್ಗೆ ತಲೆಕೆಡಿಸಿಕೊಳ್ಳದೆ ಆ ಪಕ್ಷದ ಹೈಕಮಾಂಡ್ ತಳಮಟ್ಟದಲ್ಲಿ ಸಂಘಟನೆಯ ಕೆಲಸವನ್ನು ಅರ್ಧ ಮಾಡಿ ಮುಗಿಸಿದೆ. ಗುಜರಾತ್ ನಲ್ಲಿ ಪ್ರತಿ ಹತ್ತುಮತದಾರರಿಗೆ ಒಬ್ಬ ಪನ್ನಾ ಪ್ರಮುಖ್ ನಿರಂತರವಾಗಿ ಕೆಲಸ ಮಾಡಿದ್ದರಂತೆ. ಕರ್ನಾಟಕದಲ್ಲಿ ಈ ಪೇಜ್ ಪ್ರಮುಖ್ ಗಳು ಗ್ರಾಮ ಮಟ್ಟದಲ್ಲಿ ಸಕ್ರಿಯರಾಗಿದ್ದಾರೆ.

ಈ ಪೇಜ್ ಪ್ರಮುಖ್ ಗಳನ್ನು ಕಾಪಿ ಮಾಡಲು ಹೋಗಿ ಶುರುಮಾಡಿದ ಮನೆಮನೆಗೆ ಕಾಂಗ್ರೆಸ್ ಅಭಿಯಾನದ ಅಂಗವಾಗಿ ಕಾಟಾಚಾರಕ್ಕೆ ಮನೆಗಳ ಗೋಡೆಗೆ ಅಂಟಿಸಿಹೋಗಿರುವ ಕಾಂಗ್ರೆಸ್ ಸ್ಟಿಕರ್ ಹರಿದುಹೋಗಿದೆ. ಹೊಸ ಸ್ಟಿಕರ್ ಗಳು ಇನ್ನೂ ಯಾರೂ ಅಂಟಿಸಿಲ್ಲ.

ಬಿಜೆಪಿಯಲ್ಲಿ ಲೀಡರ್ ಜೊತೆಗೆ ಕ್ಯಾಡರ್ ಗಳು ಇರುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಲೀಡರ್ ಗಳಿದ್ದಾರೆ, ಕ್ಯಾಡರ್ ಎಲ್ಲಿದೆ? ಸಂಘಟನೆ ಎಲ್ಲಿದೆ?

ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು (ಸಿದ್ದರಾಮಯ್ಯ ಅವಧಿ)

Advertisement
Advertisement
Recent Posts
Advertisement