Advertisement

ಸಿ.ಟಿ ರವಿಯವರನ್ನು ಅವರ ಕ್ಷೇತ್ರದ ಜನ ಲೂಟಿ ರವಿ ಎಂದು ಕರೆಯುತ್ತಾರೆ: ದಿನೇಶ್ ಗುಂಡೂರಾವ್

Advertisement

ಸಿದ್ದರಾಮಯ್ಯರಿಗೆ 'ಸಿದ್ರಾಮುಲ್ಲಾ ಖಾನ್' ಎಂದು ನಾಮಕರಣ ಮಾಡಿರುವ ‌ಸಿ.ಟಿ ರವಿ, ತಮಗೆ 'ಲೂಟಿ ರವಿ' ಎಂದು ಜನ ನಾಮಕರಣ ಮಾಡಿರುವುದನ್ನು ಕ್ರೀಡಾ ಮನೋಭಾವದಿಂದ ಸ್ವಾಗತಿಸಬೇಕು. ಆದರೆ 'ಲೂಟಿ ರವಿ' ಎಂದರೆ ಸಿ.ಟಿ ರವಿಯವರು ಅದ್ಯಾಕೆ ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಾರೆ? ಒಂದು ವೇಳೇ ಸಿ.ಟಿ ರವಿ ಲೂಟಿಕೋರರಾಗಿರದಿದ್ದರೆ ಅವರಿಗೆ ಆ ಕ್ಷೇತ್ರದ ಜನ 'ಲೂಟಿ ರವಿ' ಎನ್ನಲು ಸಾಧ್ಯವೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಸಿ.ಟಿ ರವಿ ಪ್ರಕಾರ ಸಿದ್ದರಾಮಯ್ಯ 'ಸಿದ್ರಾಮುಲ್ಲಾ ಖಾನ್' ಆದರೆ, ಮುಖ್ಯಮಂತ್ರಿ ಆಗಿದ್ದ ಸಂಧರ್ಭದಲ್ಲಿ ಟಿಪ್ಪುವಿನ ಬಗ್ಗೆ 400 ಪುಟಗಳ ಪುಸ್ತಕ ಬರೆಸಿ ಮುನ್ನುಡಿ ಬರೆದಿದ್ದ ಜಗದೀಶ್ ಶೆಟ್ಟರ್ ಯಾವ 'ಖಾನ್'? ಟಿಪ್ಪು ಜಯಂತಿಯಂದು ಮುಸ್ಲಿಮರ ಟೋಪಿ ಧರಿಸಿದ್ದ ಯಡಿಯೂರಪ್ಪನವರು ಯಾವ 'ಖಾನ್'. ರಂಜಾನ್ ಹಬ್ಬದಲ್ಲಿ‌ ನಾವೆಲ್ಲರೂ ಒಂದೆ ಎಂದು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಬಿರಿಯಾನಿ ತಿಂದಿದ್ದ ಈಶ್ವರಪ್ಪ ಯಾವ 'ಖಾನ್' ಎಂದವರು ಕೆಣಕಿದ್ದಾರೆ.

ಸರ್ವಧರ್ಮವನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತ. ಜಾತ್ಯಾತೀತ ತತ್ವದ ಬಗ್ಗೆ ಸಂವಿಧಾನದಲ್ಲೇ ಉಲ್ಲೇಖವಾಗಿದೆ. ಸಿದ್ದರಾಮಯ್ಯ ತಮ್ಮ ಬದುಕಿನುದ್ದಕ್ಕೂ ಇದೇ ತತ್ವದ ಆಧಾರದಲ್ಲಿ ಬದುಕಿದ್ದಾರೆ ಹಾಗೂ ರಾಜಕಾರಣ ಮಾಡಿದ್ದಾರೆ. ಎಲ್ಲರನ್ನೂ ಪ್ರೀತಿಸುವವನೇ ನಿಜವಾದ ಹಿಂದೂ. ಅನ್ಯಧರ್ಮದವರನ್ನು ಕಡಿ- ಕೊಲ್ಲು ಎನ್ನುವ ಸಿ.ಟಿ ರವಿಯವರದ್ದು ಯಾವ ಧರ್ಮ ಎಂದು ದಿನೇಶ್ ಪ್ರಶ್ನಿಸಿದ್ದಾರೆ.

'ಶಾದಿ ಭಾಗ್ಯ' ಕೊಟ್ಟ ಮಾತ್ರಕ್ಕೆ ಸಿದ್ದರಾಮಯ್ಯ 'ಸಿದ್ರಾಮುಲ್ಲಾ ಖಾನ್' ಆಗುವುದಾದರೆ, 'ಶಾದಿ ಶುಗುನ್ ಭಾಗ್ಯ' ಕೊಟ್ಟ ಮೋದಿಯವರು 'ಮೋದಿ ಖಾನ್' ಆಗುವುದಿಲ್ಲವೆ? ಸಿ.ಟಿ ರವಿಯವರು 'ಶಾದಿ ಶುಗುನ್ ಭಾಗ್ಯ' ಕೊಟ್ಟ ಮೋದಿಯವರನ್ಯಾಕೆ 'ಮೋದಿ ಖಾನ್' ಎನ್ನುವುದಿಲ್ಲ. ಮೋದಿಯವರಿಗೆ 'ಮೋದಿ ಖಾನ್' ಎನ್ನಲು ಸಿ.ಟಿ ರವಿಯವರಿಗೆ ನರ ದೌರ್ಬಲ್ಯವೇ? ಎಂದವರು ಸವಾಲೆಸೆದಿದ್ದಾರೆ.

ಹಳ್ಳಿ ಕಡೆ ಚೆನ್ನಾಗಿರುವ ಕುಟುಂಬಗಳ ಮಧ್ಯೆ‌ ಜಗಳ ತಂದು ಕುಟುಂಬ ಒಡೆಯುವವರನ್ನು 'ತಂದಾಕುವ ಗಿರಾಕಿ' ಎನ್ನುತ್ತಾರೆ. ಸಿ.ಟಿ ರವಿ ಕೂಡ ಇದೇ ಜಾತಿಗೆ ಸೇರಿದವರು. ಕಲಹ ಪ್ರಿಯ ಸಿ.ಟಿ ರವಿಯವರು ತಂದಾಕುವ ಬುದ್ಧಿಯಿಂದ ರಾಜ್ಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಶಾಂತಿಯ ತೋಟ. ಈ ತೋಟದಲ್ಲಿ ಧರ್ಮದ ಅಫೀಮ್ ಬೆಳೆಸುವುದು ಸರಿಯೇ ಸಿ.ಟಿ ರವಿಯವರೇ? ಎಂದವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

Advertisement
Advertisement
Recent Posts
Advertisement