ಏಲಕ್ಕಿ ನಗರಿ ಹಾವೇರಿ ಯಲ್ಲಿ ಜನವರಿ 6,7 ಮತ್ತು 8 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ ಮತ್ತಿತರ ಗೋಷ್ಠಿಗಳಲ್ಲಿ ಒಂದು ಕೋಮಿನ ಕವಿಗಳಿಗೆ, ಸಾಹಿತಿಗಳಿಗೆ ಅವಕಾಶ ನೀಡದೆ ಸಾಹಿತ್ಯ ಸಮ್ಮೇಳನದಲ್ಲೂ ಕೋಮುವಾದವನ್ನು ಆರಂಭಿಸಲಾಗಿದೆ ಎಂಬ ಕುರಿತು ಕೂಗು ಕೇಳಿಬಂದ ಹಿನ್ನಲೆಯಲ್ಲಿ ಜೆಎನ್‌ಯು ದೆಹಲಿ ಇದರ ನಿವೃತ್ತ ಪ್ರಾಧ್ಯಾಪಕ ಮತ್ತು ಹಿರಿಯ ಜನಪದ ವಿದ್ವಾಂಸ, ಸಮಾಜವಾದಿ ಡಾ. ಪುರೋಷತ್ತಮ ಬಿಳಿಮಲೆ ಆದಿಯಾಗಿ ಹಲವು ಬುದ್ದಿಜೀವಿಗಳು, ಪ್ರಗತಿಪರ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಆ ಹಿನ್ನಲೆಯಲ್ಲಿ ಡಾ. ಬಿಳಿಮಲೆ ಕುರಿತು ಕಸಾಪ ಅಧ್ಯಕ್ಷ ಮಹೇಶ್ ಜೋಷಿಯವರು ಪತ್ರಿಕಾಗೋಷ್ಠಿಯಲ್ಲಿ "ಅವರು ಹೇಳಿದವರಿಗೆ ಸಮ್ಮೇಳನದ ಪೆಂಡಾಲ್ ಗುತ್ತಿಗೆ ನೀಡಲಿಲ್ಲ ಎಂಬ ಕಾರಣಕ್ಕಾಗಿ ಡಾ. ಬಿಳಿಮಲೆ ತನ್ನ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ" ಎಂದು ವಿಷಯಾಂತರ ಮಾಡುವ ರೀತಿಯ ಬಾಲಿಷವಾದ ಮತ್ತು ಮಾನಹಾನಿಕಾರಕವಾದ ಆರೋಪ ಮಾಡಿದ್ದರು.
ಈ ಹಿನ್ನಲೆಯಲ್ಲಿ ಡಾ. ಬಿಳಿಮಲೆಯವರು ನೀಡಿರುವ ಪತ್ರಿಕಾ ಹೇಳಿಕೆ.
"ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹೇಶ ಜೋಷಿಯವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಗಮನಿಸಿದೆ. ಪರಿಷತ್ತಿನ ಕಾರ್ಯ ವಿಧಾನಗಳ ಬಗ್ಗೆ ನಾನು ಅಸಮಾಧಾನ ಸೂಚಿಸಿದ್ದು ನಿಜ. ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ಧನಿಗೂಡಿಸಿದ್ದೇನೆ. ಇದು ಪ್ರಜಾಪ್ರಭುತ್ವ ನನಗೆ ತಂದುಕೊಟ್ಟ ಹಕ್ಕು, ಮತ್ತು ಹೀಗೆ ಬರೆಯುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ" ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
"ಇದರ ಹೊರತಾಗಿ ನಾನು ಜೋಷಿಯವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಹಾವೇರಿ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ.
ನಾನು ಮತ್ತು ನನ್ನಂಥ ಹಲವರು ಪರಿಷತ್ತಿನ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಗೊತ್ತಿಲ್ಲದ ಜೋಷಿಯವರು ವೈಯಕ್ತಿಕವಾಗಿ ಮಾನಹಾನಿಯಾಗುವಂಥ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳ ಮೂಲಕ ಅವರು ಸಾಹಿತ್ಯ ಪರಿಷತ್ತು ಇವತ್ತು ಎಂಥವರ ಕೈಯಲ್ಲಿದೆ ಎಂಬುದನ್ನು ಮತ್ತೆ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ" ಎಂದು ಬಿಳಿಮಲೆ ಹೇಳಿದ್ದಾರೆ.
" ಮಹೇಶ್ ಜೋಷಿಯವರು ಪೆಂಡಾಲ್ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರದನ್ನು ಸಾಬೀತು ಪಡಿಸಬೇಕು, ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು ಯಾವ ನೀಚ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ್ ಜೋಷಿಯವರ ಮಾತುಗಳೇ ಸಾಕ್ಷಿ. ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ" ಎಂದವರು ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.