Advertisement

"ಭಾರತದ ಸಂವಿಧಾನವು ಮನುಸ್ಮೃತಿಯೇ ಹೊರತು ಅಂಬೇಡ್ಕರ್ ಬರೆದ ಸಂವಿಧಾನವಲ್ಲ" ಎಂದವರಾರು ಗೊತ್ತೇ?

Advertisement

ಬರಹ: ಶಿವಸುಂದರ್

ಕ್ರಾಂತಿಕಾರಿ ಅಂಬೇಡ್ಕರರನ್ನು ಒಳಗೊಳ್ಳದ ಸಂವಿಧಾನ ಫ್ಯಾಶಿಸಂ ಗೆ ತುತ್ತಾಗುತ್ತಿದೆಯೇ?

ಸಂವಿಧಾನ ರಚನಾ ಸಭೆಯ ಕೊನೆಯ ಸಭೆ ನಡೆದದ್ದು 1949ರ ನವಂಬರ್ 26 ರಂದು. ಅಂದು ಹಾಜರಿದ್ದ 285 ಸದಸ್ಯರು ಕರಡಿಗೆ ಸಹಿ ಹಾಕಿ ಸಂವಿಧಾನವನ್ನು ಅಖೈರುಗೊಳಿಸಿದರೆ, 284 ಸದಸ್ಯರು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದರು. ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾಗಿದ್ದ ಟಿ.ಟಿ. ಕೃಷ್ಣಮಾಚಾರಿಯವರಂತೂ ಅಂಬೇಡ್ಕರ್ ಅವರಿಲ್ಲದಿದ್ದರೆ ಸಂವಿಧಾನ ರಚನೆ ಎಷ್ಟು ಕಷ್ಟವಾಗುತ್ತಿತ್ತೆಂಬುದನ್ನು ಮನದುಂಬಿ ವಿವರಿಸಿದರು.

ಅವರ ಪ್ರಕಾರ ಕರಡು ಸಮಿತಿಯ ಸದಸ್ಯರಾಗಿದ್ದ ಏಳು ಜನ ಸದಸ್ಯರಲ್ಲಿ ಒಬ್ಬರು ಮರಣಹೊಂದಿದರು. ಇಬ್ಬರು ದೆಹಲಿಯಿಂದ ದೂರ ಉಳಿದಿದ್ದು ಯಾವ ಸಭೆಗೂ ಬರಲಿಲ್ಲ. ಒಬ್ಬರು ಅಮೆರಿಕ ಸೇರಿಕೊಂಡರು. ಮತ್ತೊಬ್ಬರಿಗೆ ಅನಾರೋಗ್ಯ. ಹಾಗೂ ತಾನು ಸಂಪೂರ್ಣವಾಗಿ ಸರ್ಕಾರದ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡದ್ದರಿಂದ ಸಂವಿಧಾನವನ್ನು ರಚಿಸುವ ಸಂಪೂರ್ಣ ಹೊಣೆ ಅಂಬೇಡ್ಕರ್ ಅವರ ಮೇಲೆ ಬಿತ್ತು. ಹಾಗೂ ಅಂಬೇಡ್ಕರ್ ಅವರ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ದಿನಕ್ಕೆ 18 ಗಂಟೆಗಳಷ್ಟು ಕೆಲಸ ಮಾಡಿ ಕರಡು ರಚನೆ ಸಾಧ್ಯಗೊಳಿಸಿದ ವಾಸ್ತವವನ್ನು ಇಡೀ ದೇಶಕ್ಕೆ ತಿಳಿಸಿಕೊಟ್ಟರು. ಈ ವಾಸ್ತವವನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್, ಪ್ರಧಾನಿ ನೆಹರೂ ಹಾಗೂ ಇನ್ನಿತರರೂ ಸಹ ಅಕ್ಷರಶಃ ಒಪ್ಪಿಕೊಂಡು ಇಡೀ ದೇಶ ಅಂಬೇಡ್ಕರ್ ಅವರಿಗೆ ಕೃತಜ್ನವಾಗಿದೆಯೆಂದು ಭಾವಪರವಶರಾಗಿ ನುಡಿದಿದ್ದರು. ಇದೆಲ್ಲವೂ ಇತಿಹಾಸದಲ್ಲಿ ದಾಖಲಾದ ಸತ್ಯ.

ಆದರೂ ಮನುವಾದಿಗಳು ಮಾತ್ರ ಮತ್ತೊಮ್ಮೆ ಅಂಬೇಡ್ಕರ್ ಅವರು ಸಂವಿಧಾನದ ಕರಡನ್ನು ಬರೆಯಲಿಲ್ಲವೆಂದೂ, ಅಥವಾ ಅಂಬೇಡ್ಕರ್ ಒಬ್ಬರೇ ಬರೆಯಲಿಲ್ಲವೆಂದು ಅರಚಾಡುತ್ತಿವೆ. ಇದೇ ಅನಾಗರಿಕ ಶಕ್ತಿಗಳೇ ಆಗಲೂ ಭಾರತ ಸಂವಿಧಾನವು "ಮನುಸ್ಮೃತಿ"ಯೇ ಹೊರತು ಅಂಬೇಡ್ಕರ್ ಬರೆದ ಸಂವಿಧಾನವಲ್ಲವೆಂದು ಹುಯಿಲೆಬ್ಬಿಸಿದ್ದವು.

ಹಾಗೆ ನೋಡಿದರೆ ಈ ಆಕ್ಷೇಪಣೆಯಲ್ಲೇ ಒಂದು ಕುತರ್ಕವಿದೆ. ಯಾವುದೇ ಪ್ರಜಾತಾಂತ್ರಿಕ ದೇಶದಲ್ಲಿ ಸಂವಿಧಾನದ ಬರಹದ ಹೊಣೆಯನ್ನು ಯಾವುದೇ ಒಬ್ಬ ವ್ಯಕ್ತಿಯ ಹೆಗಲಿಗೇರಿಸುವುದಿಲ್ಲವೆಂಬುದು ಸಾಮಾನ್ಯ ಜ್ಞಾನ. ಒಂದು ಪ್ರಜಾತಂತ್ರದಲ್ಲಿ ಆಯಾ ದೇಶದ ಎಲ್ಲಾ ಸಾಮಾಜಿಕ ಶಕ್ತಿಗಳ ಪ್ರಾತಿನಿಧಿಕ ಸಭೆಯು ಚರ್ಚಿಸಿ ತಮ್ಮ ದೇಶದ ಭವಿಷ್ಯವನ್ನು ಬರೆದುಕೊಳ್ಳುತ್ತವೆ. ಆದ್ದರಿಂದಲೇ ಯಾವ ದೇಶದಲ್ಲಿ ದಮನಿತ ಶಕ್ತಿಗಳ ರಾಜಕೀಯ ಶಕ್ತಿ ಪ್ರಬಲವಾಗಿರುತ್ತದೋ ಅಂಥಾ ದೇಶದ ಪ್ರಜಾತಂತ್ರ ಹೆಚ್ಚು ಜನಪರವಾಗಿರುತ್ತದೆ. ಯಾವ ದೇಶದಲ್ಲಿ ದಮನಿತರ ರಾಜಕೀಯ ಬಲಹೀನವಾಗಿರುತ್ತದೋ ಆ ದೇಶಗಳಲ್ಲಿ ಪ್ರಜಾತಂತ್ರವು ಹೆಸರಿಗಿದ್ದರೂ, ಸಾರದಲ್ಲಿ ಪ್ರಬಲರ ಪ್ರಜಾತಂತ್ರವಾಗಿರುತ್ತದೆ.

ಹೀಗಾಗಿ ಒಂದು ವೇಳೆ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆಯಬಹುದಾಗಿದ್ದರೆ ಸಂವಿಧಾನ ಸಭೆಯ ಅಗತ್ಯವೇ ಇರುತ್ತಿರಲಿಲ್ಲ. ಹಾಗೂ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಸಕಲ ಸ್ವಾತಂತ್ರ್ಯವೂ ಇದ್ದಿದ್ದರೆ, ಅಂಬೇಡ್ಕರ್ ಅವರ ಮೂಲ ಆಶಯಗಳಾದ ಪ್ರಭುತ್ವ ಸಮಾಜವಾದ ಮತ್ತು ಬುದ್ಧ ಭಾರತದ ಎಲ್ಲಾ ಅಂಶಗಳೂ ಮೂಲಭೂತ ಹಕ್ಕುಗಳಾಗಿ ಸಂವಿಧಾನಕ್ಕೆ ಸೇರ್ಪಡೆಯಾಗಿ ಬಿಡುತ್ತಿದ್ದವು. ಆದರೆ ಅಂಥ ಒಂದು "ಪರಿಪೂರ್ಣ ಅಂಬೇಡ್ಕರ್ ಸಂವಿಧಾನ" ಜಾರಿಯಾಗಲು ಬೇಕಾಗಿದ್ದ ಸಾಮಾಜಿಕ ಕ್ರಾಂತಿ ನಮ್ಮ ದೇಶದಲ್ಲಿ ಸಂಭವಿಸಿರಲಿಲ್ಲ.

ಹೀಗಾಗಿ ಸಂವಿಧಾನದಲ್ಲಿ ಆ ಸಂದರ್ಭ ಸಾಧ್ಯಗೊಳಿಸಿದಷ್ಟು ಅಂಬೇಡ್ಕರ್ ಮಾತ್ರ ಇದ್ದಾರೆ. ನೈಜ ಕ್ರಾಂತಿಕಾರಿ ಅಂಬೇಡ್ಕರ್ ಇನ್ನೂ ಸಂವಿಧಾನದ ಹೊರಗೇ ಉಳಿಸಲ್ಪಟ್ಟಿದ್ದಾರೆ. ಅಂಬೇಡ್ಕರ್ ಅವರ ಕ್ರಾಂತಿಕಾರಿ ಸಾಮಾಜಿಕ ಮತ್ತು ಆರ್ಥಿಕ ಕಣ್ಣೋಟಗಳನ್ನು ಒಳಗೊಳ್ಳದ ಕಾರಣಕ್ಕಾಗಿಯೇ ಇಂದು ಹಿಂದುತ್ವದ ಬ್ರಾಹ್ಮಣವಾದ ಹಾಗೂ ನರಭಕ್ಷಕ ಕಾರ್ಪೊರೇಟ್ ಬಂಡವಾಳವಾದ, ಇರುವ ಸಂವಿಧಾನವನ್ನೂ ನಾಶಗೊಳಿಸುತ್ತಿವೆ.

ಅದೇನೇ ಇರಲಿ. ಭಾರತದ ಸಂವಿಧಾನ ಭಾರತದ ನಾಗರಿಕತೆಯ ಮಹಾನಡೆಯಲ್ಲಿ ಒಂದು ದೊಡ್ಡ ದಾಪುಗಾಲು ಎಂಬುದು ನಿಸ್ಸಂಶಯ. ಏಕೆಂದರೆ ಜಾತಿ, ಲಿಂಗ ಮತ್ತು ವರ್ಗ ಶ್ರೇಣೀಕರಣವನ್ನೇ ಉಸಿರಾಡುತ್ತಿದ್ದ ಭಾರತೀಯ ಸಮಾಜ ಮೊಟ್ಟ ಮೊದಲ ಬಾರಿಗೆ ಈ ದೇಶದಲ್ಲಿ ಹುಟ್ಟಿದ ಮನುಷ್ಯರೆಲ್ಲರೂ ಸಮಾನರು ಎಂದು ಮಾತಿಗಾದರೂ ಒಪ್ಪಿಕೊಂಡಿತು. ದಮನಿತ ಜನರಿಗೆ ಕರ್ತವ್ಯವನ್ನು ಮಾತ್ರ ಬೋಧಿಸುತ್ತಿದ್ದ ಮನುಸ್ಮೃತಿಯೇ ಕಾನೂನು ಮತ್ತು ಧರ್ಮವಾಗಿದ್ದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದಮನಿತ ಜನರು ಶಾಸನಾತ್ಮಕ ಹಕ್ಕುಗಳನ್ನು ಪಡೆದರು. ಮೀಸಲಾತಿ ಹಾಗೂ ಇನ್ನಿತರ ಸಂವಿಧಾನಿಕ ಹಕ್ಕುಗಳಿಂದಾಗಿಯೇ ಎಪ್ಪತ್ತು ವರ್ಷಗಳಲ್ಲಿ ದಲಿತ- ಹಿಂದುಳಿದ ಸಮುದಾಯಗಳ ಶೇ.೧೦-೨೦ರಷ್ಟು ಜನರಾದರೂ ಇತಿಹಾಸದಲ್ಲೇ ಪ್ರಥಮವಾಗಿ ಆರ್ಥಿಕ ಮೇಲ್ಚಲನೆಯನ್ನೂ ಮತ್ತು ಆ ಮೂಲಕ ರಾಜಕೀಯ ಶಕ್ತಿಯನ್ನೂ ಪಡೆಯುವಂತಾಯಿತು. ಇವೆಲ್ಲವೂ ಸಾಧ್ಯವಾದದ್ದು ಸ್ವಾತಂತ್ರ್ಯ ಹೋರಾಟದ ಧಾರೆಯಲೇ ಇದ್ದ ದಲಿತ-ದಮನಿತ ಜನತೆಯ ಹೋರಾಟಗಳಿಂದ. ವಿಶೇಷವಾಗಿ ಅಂಬೇಡ್ಕರ್ ಮತ್ತು ಇನ್ನೂ ಕೆಲವು ದಮನಿತ ನಾಯಕರು ಗುದ್ದಾಡಿ ಒಪ್ಪಿಸಿದ ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ.
ಆದರೆ ಅವೆಲ್ಲಕ್ಕೂ ದೊಡ್ಡ ಮಿತಿಗಳಿದ್ದದ್ದು ಕಳೆದ 75 ವರ್ಷದಲ್ಲಿ ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಸಂಗತಿಯೇ ಆಗಿದೆ.

ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನಷ್ಟೇ ಘೋಷಿಸಿದ ಸಂವಿಧಾನ ಅಂಬೇಡ್ಕರ್ ಆಗ್ರಹಿಸಿದ್ದ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಖಾತರಿ ಮಾಡಲಿಲ್ಲ. ಆರ್ಥಿಕ ಸಾಮಾಜಿಕ ಸಮಾನತೆಯನ್ನು ಮೂಲಭೂತ ಹಕ್ಕನ್ನಾಗಿಸಲಿಲ್ಲ. ಅಂಬೇಡ್ಕರ್ ಜೀವನ ಪೂರ್ತಿ ಜಾತಿ ನಿರ್ಮೂಲನೆಗೆ ಹೋರಾಡಿದರೂ ಸಂವಿಧಾನ ರದ್ದು ಮಾಡಿದ್ದು ಅಸ್ಪೃಶ್ಯತೆಯನ್ನೇ ವಿನಾ ಜಾತಿ ವ್ಯವಸ್ಥೆಯನ್ನಲ್ಲ. ಧಾರ್ಮಿಕ ನಿಷ್ಫಕ್ಷಪಾತವನ್ನು ಘೋಷಿಸಿದರೂ ಭಾರತದ ಪ್ರಭುತ್ವವು ಇರುವ ಸಂವಿಧಾನದ ಮೂಲಕವಾಗಿಯೇ ಒಂದು ಅಘೋಷಿತ ಹಿಂದೂತ್ವವಾದಿ ಪ್ರಭುತ್ವವಾಗುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಲಿಂಗಾಧಾರಿತ ತಾರತಮ್ಯವನ್ನು ನಿಷೇಧಿಸಿದರೂ ಮಹಿಳೆಯ ಶ್ರಮವನ್ನು ಸಂವಿಧಾನ ಗುರುತಿಸಲೇ ಇಲ್ಲ. ಸಂವಿಧಾನ ಮಾನ್ಯೀಕರಿಸಿದ ಆರ್ಥಿಕ ವ್ಯವಸ್ಥೆ ದಮನಿತ ಸಮುದಾಯಗಳ ಒಂದು ವರ್ಗಕ್ಕೆ ಚಲನೆ ತಂದಿತಾದರೂ ಸಮುದಾಯದ ಬಹುಸಂಖ್ಯಾತರನ್ನು ಇನ್ನಷ್ಟು ನಿತ್ರಾಣಗೊಳಿಸಿತು. ಹೀಗಾಗಿ ಇಂದಿನ ವಿಕೃತಿಯ ಬೀಜಗಳು ಸಹ ಸಂವಿಧಾನ ರಚನಾ ಸಭೆಯಲ್ಲೇ ಇತ್ತು ಎಂಬುದನ್ನು ಈ ಸಂದರ್ಭದಲ್ಲಿ ಮರೆಯಲಾಗದು.

ಸಾಮಾಜಿಕ ಪ್ರಜಾತಂತ್ರಕ್ಕೆ ಸಂವಿಧಾನ ರಚನಾ ಸಭೆ ಸಿದ್ದವಿತ್ತೇ?

ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರೂ ಒಂದಾದ ಮಾತ್ರಕ್ಕೆ ಭಾರತದ ಸಮಾಜವಾಗಲೀ ಅಥವಾ ಸಂವಿಧಾನ ರಚನಾ ಸಭೆಯ ಬಹುಪಾಲು ಸದಸ್ಯರಾಗಲಿ ರಾಜಕೀಯ ಪ್ರಜಾತಂತ್ರದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರಗಳನ್ನು ಒಪ್ಪಿಕೊಳ್ಳುವಷ್ಟು ನಾಗರಿಕರೇನೂ ಆಗಿರಲಿಲ್ಲವಲ್ಲ!

ಅಂಬೇಡ್ಕರ್ ಆಶಯದ "ಬುದ್ಧ ನಾಗರಿಕತೆ" ಮತ್ತು "ಪ್ರಬುದ್ಧ ಸಮಾಜವಾದ"ಕ್ಕೆ ಭಾರತ ಈಗಲೇ ಸಿದ್ಧವಿಲ್ಲದಿರುವಾಗ ಆಗ ಎಷ್ಟು ಸಿದ್ಧವಿದ್ದೀತು?

ಹೀಗಾಗಿ ಸಂವಿಧಾನ ಬರೆದದ್ದು ಅಂಬೇಡ್ಕರ್ ಅವರೇ ಎನ್ನುವುದು ಎಷ್ಟು ಸತ್ಯವೋ ಅಂಬೇಡ್ಕರ್ ಅವರ ಎಲ್ಲಾ ಕ್ರಾಂತಿಕಾರಿ ಆಶಯಗಳು ನಮ್ಮ ಸಂವಿಧಾನದೊಳಗೆ ಬರಲು ಇತರ ರಾಜಕೀಯ- ಸಾಮಾಜಿಕ ಶಕ್ತಿಗಳು ಬಿಡಲಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಅಂಬೇಡ್ಕರ್ ಆಗಲಿ ಅಥವಾ ಸಂವಿಧಾನ ಸಭೆಯ ಇತರ ಯಾವುದೇ ಸದಸ್ಯರಾಗಲೀ ಮುಂದಿಟ್ಟ ಪ್ರಸ್ತಾಪಗಳನ್ನು ಮೊದಲು ಸಂಬಂಧಪಟ್ಟ ಉಪಸಮಿತಿಗಳು ಚರ್ಚಿಸಿ ಅಲ್ಲಿ ಅನುಮೋದನೆಗೊಂಡ ಮೇಲೆ ಒಟ್ಟಾರೆ ಸಂವಿಧಾನ ಸಭೆಯಲ್ಲಿ ಚರ್ಚೆಯಾಗುತ್ತಿತ್ತು. ಒಮ್ಮತ ಮೂಡದಿದ್ದರೆ ಬಹುಮತದ ಮೇಲೆ ಪ್ರಸ್ತಾಪಗಳು ಅಂಗೀಕಾರಗೊಳ್ಳುತ್ತಿದ್ದವು ಅಥವಾ ಬಿದ್ದುಹೋಗುತ್ತಿದ್ದವು ಅಥವಾ ತಿದ್ದುಪಡಿಯೊಂದಿಗೆ ಅನುಮೋದನೆಯಾಗುತ್ತಿದ್ದವು.

ಸಂವಿಧಾನ ರಚನಾ ಸಭೆಯ ಸದಸ್ಯರು ಅಂದಾಜು 7500 ತಿದ್ದುಪಡಿಗಳನ್ನು ಸಭೆಯ ಮುಂದಿಟ್ಟರು. ಅದರಲ್ಲಿ 2500 ತಿದ್ದುಪಡಿಗಳನ್ನು ಮಾತ್ರ ಸಂವಿಧಾನ ರಚನಾ ಸಭೆ ಅಂಗೀಕರಿಸಿ ಸಂವಿಧಾನದ ಭಾಗವಾಗಿಸಿತು.

ಈ ಪ್ರಕ್ರಿಯೆಯಲ್ಲಿ ಸಭೆಯ ಸದಸ್ಯರು ಮುಂದಿಟ್ಟ ತಿದ್ದುಪಡಿಗಳನ್ನು ಅಂಗೀಕರಿಸಿದರೆ ಅಥವಾ ತಿರಸ್ಕರಿಸಿದರೆ ದೇಶದ ಸಾಂವಿಧಾನಿಕ ಪ್ರಜಾತಂತ್ರಕ್ಕೆ ಶಾಸನಾತ್ಮಕವಾಗಿ, ರಾಜಕೀಯವಾಗಿ ಆಗುವ ತೊಂದರೆಗಳೇನೆಂಬುದನ್ನು ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅವರು ತಮ್ಮ ಅದ್ಭುತ ಪಾಂಡಿತ್ಯ, ಹಾಗೂ ಜನಪರ ಕಾಳಜಿಗಳಿಂದ ಸಾಧಾರ ಮತ್ತು ಅಧ್ಯಯನಪೂರ್ವಕವಾಗಿ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಅವರ ಈ ಪ್ರಯತ್ನದಲ್ಲಿ ಇತರ ಕೆಲವು ಜನಪರ ಶಕ್ತಿಗಳು ತಮ್ಮ ಧ್ವನಿಯನ್ನು ಕೂಡಿಸುತ್ತಿದ್ದರು. ಆದರೂ ಸಂವಿಧಾನ ಸಭೆ ಈ ದೇಶವನ್ನು ಇನ್ನಷ್ಟು ನಾಗರಿಕವಾಗಿಸುತ್ತಿದ್ದ ಹಲವು ತಿದ್ದುಪಡಿಗಳನ್ನು ತಿರಸ್ಕರಿಸಿತು. ಮತ್ತು ಈ ದೇಶದ ಇಂದಿನ ದುರ್ಗತಿಗೆ ಕಾರಣವಾದ ಬೀಜಗಳನ್ನು ಬಿತ್ತುವ ಹಲವು ತಿದ್ದುಪಡಿಗಳನ್ನು ಅಂಗೀಕರಿಸಿತು.

ಹೀಗಾಗಿ ಸಂವಿಧಾನ ರಚನಾ ಸಭೆಯ ಮತ್ತು ಅದರ ಸದಸ್ಯರ ಹಿನ್ನೆಲೆಯನ್ನು ಮತ್ತು ಬಹುಪಾಲು ಸದಸ್ಯರ ಒಲವು ನಿಲುವುಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಸಾಧ್ಯವಾದಷ್ಟೂ ದಮನಿತರ ಪರವಾಗಿಸುವಲ್ಲಿ ಅಂಬೇಡ್ಕರ್ ಪಟ್ಟ ಬೌದ್ಧಿಕ ಮತ್ತು ರಾಜಕೀಯ ಶ್ರಮಗಳು ಅರ್ಥವಾಗುವುದಿಲ್ಲ.

ಸಂವಿಧಾನ ರಚನಾ ಸಭೆ- ಎಷ್ಟು ಪ್ರಾತಿನಿಧಿಕ?

ಪೂನಾ ಒಪ್ಪಂದದ ನಂತರದಲ್ಲಿ ಮೇಲ್ಜಾತಿ ಹಿಂದೂಗಳ ಅಧಿಪತ್ಯದಲ್ಲಿ ಭಾರತವು ಸ್ವಾತಂತ್ರ್ಯ ಪಡೆದುಕೊಂಡರೆ ಅಂಥಾ ಭಾರತದಲ್ಲಿ ದಲಿತ-ದಮನಿತರ ಹಕ್ಕುಗಳನ್ನು ಪರಿರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅಂಬೇಡ್ಕರ್ ತೀರಾ ಕಳವಳವನ್ನು ಹೊಂದಿದ್ದರು. ಆದ್ದರಿಂದಲೇ ಪ್ರಾರಂಭದಲ್ಲಿ ಸವರ್ಣೀಯ ಮತ್ತು ಊಳಿಗಮಾನ್ಯ ಹಿಂದೂಗಳ ಹೆಚ್ಚಾಗಿರಬಹುದಾದ ಸಂವಿಧಾನ ರಚನಾ ಸಭೆಯೊಂದರ ಅಗತ್ಯವೇನು ಎಂಬ ಪ್ರಶ್ನೆಯೂ ಅವರನ್ನು ಕಾಡಿತ್ತು. ಹಾಗಾಗಿಯೇ ಅವರು ಸಂವಿಧಾನ ರಚನಾ ಸಭೆಯೊಂದು ಆಗುವುದಾದರೆ ಅದರಲ್ಲಿ ಎಲ್ಲಾ ಹಿಂದೂ ಬಹುಸಂಖ್ಯಾತರ ಪ್ರಮಾಣ ಶೇ.40ನ್ನು ಮೀರದಂತಿರಬೇಕೆಂದೂ ಸಲಹೆ ಮಾಡಿದ್ದರು. ಅಂಬೇಡ್ಕರ್ ಅವರು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಅನ್ನು ಉದ್ದೇಶಿಸಿ ಮಾಡಿದ “Communal Deadlock – And a Way to Solve It” ಎಂಬ ಭಾಷಣದಲ್ಲಿ ತಮ್ಮ ಕಲ್ಪನೆಯ ಸಂವಿಧಾನ ರಚನಾ ಸಭೆಯ ಸಂಯೋಜನೆಯನ್ನು ಅಂಬೇಡ್ಕರ್ ಮುಂದಿಟ್ಟಿದ್ದರು.
ಅದೇನೇ ಇರಲಿ. ಭಾರತದ ಸ್ವಾತಂತ್ರ್ಯ ಹೋರಾಟದ ಮುಖ್ಯ ಪಾತ್ರಧಾರಿ ಮತ್ತು ಪ್ರಧಾನ ಫಲಾನುಭವಿ ವರ್ಗಗಳು ಮತ್ತು ಸಮುದಾಯಗಳು ಮಾಡಿಕೊಂಡ ಒಪ್ಪಂದದಂತೆ ಹಾಗೂ ಬ್ರಿಟಿಷರ ಸಮ್ಮತಿಯೊಂದಿಗೆ 1946ರಲ್ಲಿ ಭಾರತದ ಸಂವಿಧಾನ ರಚನಾ ಸಭೆ ರೂಪುಗೊಂಡಿತು.

1935ರ ಗವರ್ನಮೆಂಟ್ ಆಫ್ ಇಂಡಿಯಾ ಆ್ಯಕ್ಟ್ ಜಾರಿಗೆ ಬಂದು 1937ರಲ್ಲಿ ನಡೆದ ಪ್ರಾಂತೀಯ ಶಾಸನ ಸಭಾ ಚುನಾವಣೆಗಳ ಕಾಲದಿಂದಲೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದವರನ್ನು ಮತ್ತು ಪದವೀಧರರನ್ನು ಮಾತ್ರ ಜವಾಬ್ದಾರಿಯುತ ಪ್ರಜೆಗಳೆಂದು ಭಾವಿಸಲಾಗುತ್ತಿತ್ತು. ಅಂದರೆ ಭಾರತದ ಶೇ.17ಕ್ಕಿಂತ ಕಡಿಮೆ ಮತದಾರರು ಮಾತ್ರ ಪ್ರಾಂತೀಯ ಸಭೆಯನ್ನು ಆಯ್ಕೆ ಮಾಡುತ್ತಿದ್ದರು. ಅವರಲ್ಲಿ ಶೇ.95 ಭಾಗ ಮೇಲ್ವರ್ಗ ಮತ್ತು ಸವರ್ಣೀಯ ಮೇಲ್ಜಾತಿಗಳೇ ಆಗಿರುತ್ತಿದ್ದರು ಎಂಬುದು ಅದರ ವರ್ಗ ಹಾಗೂ ಜಾತಿ ಆಯಾಮ.

ಅದೇ ಆಧಾರದಲ್ಲಿ 1946ರಲ್ಲಿ ಪ್ರಾಂತೀಯ ಹಾಗೂ ಕೇಂದ್ರೀಯ ಶಾಸನ ಸಭೆಗಳಿಗೆ ಚುನಾವಣೆ ನಡೆಯಿತು. ಆ ಸದಸ್ಯರೇ ಭಾವೀ ಭಾರತದ ಸಂವಿಧಾನವನ್ನು ರಚಿಸುವ 292 ಸದಸ್ಯರನ್ನು ಆಯ್ಕೆ ಮಾಡಿದರು. ಇದರ ಜೊತೆಗೆ 93 ಸದಸ್ಯರನ್ನು ರಾಜ ಸಂಸ್ಥಾನಗಳು ನೇಮಕ ಮಾಡಿದವು. ಆದರೆ ದೇಶ ವಿಭಜನೆಯಾದ ಮೇಲೆ ಮುಸ್ಲಿಂ ಲೀಗಿನ ಸದಸ್ಯರು ಇಲ್ಲವಾಗಿ 299 ಸದಸ್ಯರ ಭಾರತ ಸಂವಿಧಾನ ಸಭೆ ರೂಪುಗೊಂಡಿತು. ಅದರಲ್ಲಿ 229 ಸೀಮಿತ ಮತದಾನದ ಮೂಲಕ ಆಯ್ಕೆಯಾದ ಸದಸ್ಯರು, ಉಳಿದ 70 ಜನ ರಾಜಸಂಸ್ಥಾನಗಳು ನೇಮಕ ಮಾಡಿದ ಪ್ರತಿನಿಧಿಗಳು!

1946ರ ಪ್ರಾಂತೀಯ ಸಭೆ ಚುನಾವಣೆಗಳಲ್ಲಿ ಅಂಬೇಡ್ಕರ್ ಅವರ ಎಸ್.ಸಿ.ಎಫ಼್ ಘೋರ ಪರಾಭವವನ್ನು ಅನುಭವಿಸಿತು. ಹೀಗಾಗಿ ಮುಂಬೈ ಪ್ರಾಂತೀಯ ಸಭೆಯಿಂದ ಅಂಬೇಡ್ಕರ್ ಆಯ್ಕೆಯಾಗುವ ಸಾಧ್ಯತೆಯೇ ಇರಲಿಲ್ಲ. ಸರ್ದಾರ್ ಪಟೇಲರ ನೇರ ನಿರ್ದೇಶನದ ಮೇರೆಗೆ ಅಂಬೇಡ್ಕರ್ ಅವರನ್ನು ಸೋಲಿಸಲಾಯಿತು.

ಆ ನಂತರ ಬಂಗಾಳ ಪ್ರಾಂತ್ಯದ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಇಂದ ಅಯ್ಕೆಯಾಗಿದ್ದ ಜೋಗೇಂದ್ರನಾಥ ಮಂಡಲ್ ಅವರ ವಿಶೇಷ ಪ್ರಯತ್ನದಿಂದಾಗಿ ಆ ಭಾಗದಿಂದ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಚುನಾಯಿಸಲಾಯಿತು. ಆದರೆ ದೇಶವಿಭಜನೆಯಾದ ನಂತರ ಅಂಬೇಡ್ಕರ್ ಅವರನ್ನು ಅಯ್ಕೆ ಮಾಡಿದ್ದ ಪ್ರಾಂತ್ಯವು ಪೂರ್ವ ಪಾಕಿಸ್ತಾನವನ್ನು (ಇಂದಿನ ಬಾಂಗ್ಲಾದೇಶ) ವನ್ನು ಸೇರಿದ್ದರಿಂದ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಸದಸ್ಯತ್ವವನ್ನು ಕಳೆದುಕೊಂಡರು.

ಆದರೆ ಅಂಬೇಡ್ಕರ್ ಅವರ ವಿದ್ವತ್ತು ಅವರನ್ನು ಸಂವಿಧಾನ ಸಭೆಗೆ ಅನಿವಾರ್ಯಗೊಳಿಸಿತ್ತು. ಸ್ವಾತಂತ್ರ್ಯ ಘೋಷಣೆಯಾದ ತರುಣದಲ್ಲಿ ಎಲ್ಲಾ ಭಿನ್ನ ಧಾರೆಗಳನ್ನು ಒಟ್ಟಿಗೆ ಕರೆದೊಯ್ಯಬೇಕೆಂಬ ಸಂದರ್ಭದ ವಿವೇಕದ ಕಾರಣಕ್ಕೂ ಕಾಂಗ್ರೆಸ್ ಪಕ್ಷವೇ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಮರು ಆಯ್ಕೆ ಮಾಡಿತು. ಆ ನಂತರ ಅಂಬೇಡ್ಕರ್ ಅವರು ಸಂವಿಧಾನದ 13 ಸಮಿತಿಗಳಲ್ಲಿ ಒಂದಾದ ಕರಡು ರಚನಾ ಸಮಿತಿಯ ಅಧ್ಯಕ್ಷರೂ ಆಗಿ ಈ ದೇಶದ ಸಂವಿಧಾನ ರಚನೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದರು.

ಬಲಾಢ್ಯರ ಬಹುಮತದಲ್ಲಿ ನಲುಗಿದ ದಮನಿತರ ಪ್ರಾತಿನಿಧ್ಯ

ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸಂವಿಧಾನವು ಒಪ್ಪಿಕೊಂಡ ಪ್ರಾತಿನಿಧಿಕ ಪ್ರಜಪ್ರಭುತ್ವವು ದಲಿತ ದಮನಿತರನ್ನು ಕೇವಲ ಸಂಖ್ಯಾತ್ಮಕವಾಗಿ ಪ್ರತಿನಿಧಿಸದೆ ಅವರ ನೈಜ ಆಸಕ್ತಿಗಳನ್ನು ಪ್ರತಿನಿಧಿಸುವಂತಾಗಬೇಕೆಂಬುದು ಅಂಬೇಡ್ಕರ್ ಅವರ ನಿರಂತರ ಹೋರಾಟವಾಗಿತ್ತು.

ಸವರ್ಣೀಯರ ಹಾಗೂ ಬಲಾಡ್ಯ ಜಾತಿಗಳ ಹಂಗಿಲ್ಲದಂತೆ ಆಯ್ಕೆಯಾಗುವಂತಾದಾಗ ಮಾತ್ರ ದಲಿತ ಪ್ರತಿನಿಧಿಗಳು ನಿಜವಾಗಿ ದಲಿತರನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆಂದು ಅರ್ಥಮಾಡಿಕೊಂಡಿದ್ದ ಅಂಬೇಡ್ಕರ್ ಅವರು 1929- 32 ರ ದುಂಡು ಮೇಜಿನ ಪರಿಷತ್ತಿನಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಆಗ್ರಹಿಸಿದ್ದರು. ಬ್ರೀಟಿಷರು ಅದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದ್ದರು. ಆದರೆ ಗಾಂಧಿಯವರು ಸತ್ಯಾಗ್ರಹ ಮಾಡಿ ಹೇರಿದ ಪೂನಾ ಒಪ್ಪಂದವಾಗಿ ದಲಿತರೂ ಸಹ ಹಿಂದೂ ವಿಭಾಗದೊಳಗೆ ಮೀಸಲಾತಿ ಪಡೆಯುವಂತಾಯಿತು.

ಈ ಆಧಾರದಲ್ಲಿ 1937 ರಲ್ಲಿ ಮತ್ತು 1946 ರಲ್ಲಿ ನಡೆದ ಪ್ರಾಂತಿಯ ಮತ್ತು ಕೇಂದ್ರೀಯ ಶಾಸನಾ ಸಭಾ ಚುನಾವಣೆಗಳಲ್ಲಿ ಮೊದಲ ಸುತ್ತಿನಲ್ಲಿ ಮೀಸಲಾತಿ ಕ್ಷೇತ್ರದಲ್ಲಿ ದಲಿತ ಮತದಾರರು ಮಾತ್ರ ತಮ್ಮ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಎರಡನೇ ಸುತ್ತಿನಲ್ಲಿ ಆ ಕ್ಷೇತ್ರದ ಎಲ್ಲಾ ಮತದಾರರೂ ಒಟ್ಟು ಸೇರಿ ಆ ನಾಲ್ವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಪದ್ಧತಿ ಜಾರಿಯಾಯಿತು.

ಆದರೆ ಅದರ ಫಲಿತಾಂಶಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಪ್ರತಿ ಮೀಸಲಾತಿ ಕ್ಷೇತ್ರದಲ್ಲಿ ಹೇಗೆ ಮೊದಲ ಸುತ್ತಿನಲ್ಲಿ ದಲಿತರು ಮಾತ್ರ ಮತ ಚಲಾಯಿಸಿದಾಗ ಮೊದಲ ಸ್ಥಾನ ಪಡೆದುಕೊಂಡ ದಲಿತ ಅಭ್ಯರ್ಥಿಯು, ಎರಡನೇ ಸುತ್ತಿನಲ್ಲಿ ಇಡೀ ಕ್ಷೇತ್ರದ ದಲಿತೇತರ ಮತದಾರರೂ ಒಟ್ಟು ಸೇರಿ ಮತ ಚಲಾಯಿಸಿದಾಗ ಕೊನೆಯ ಸ್ಥಾನಕ್ಕಿಳಿದು ಸೋತಿರುವುದನ್ನು ಬಯಲಿಗೆಳೆದರು.

ಹೀಗಾಗಿ ಪ್ರಜಾ ಪ್ರತಿನಿಧಿಗಳ ಚುನಾವಣೆಯಲ್ಲಿನ ಈ ಗಂಭೀರ ಲೋಪವನ್ನು ಬಗೆಹರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಅವರು ಬಹಳವಾಗಿ ಪ್ರಯತ್ನಿಸಿದರು.

ಸಂವಿಧಾನ ರಚನಾ ಸಭೆಯಲ್ಲಿ ಏಳು ಉಪಸಮಿತಿಗಳಿದ್ದು ಅದರಲ್ಲಿ ಒಂದು ಮೈನಾರಿಟಿ ಹಕ್ಕುಗಳ ಸಮಿತಿ ಈ ವಿಷಯಕ್ಕೆ ಸಂಬಂಧಪಟ್ಟ ಸಮಿತಿಯಾಗಿತ್ತು. ಅದರಲ್ಲಿ 31 ಜನ ಸದಸ್ಯರಿದ್ದು ವಲ್ಲಭಭಾಯ್ ಪಟೇಲರು ಅದರ ಅಧಕ್ಷರಾಗಿದ್ದರು. ಈ ಸಮಿತಿಯಲ್ಲಿ ಅಂಬೇಡ್ಕರ್ ಅವರು ಒಂದು ಮೀಸಲು ಕ್ಷೇತ್ರದಲ್ಲಿ ಗೆಲ್ಲುವ ದಲಿತ ಅಭ್ಯರ್ಥಿಯು ಶೇ.50 ರಷ್ಟು ದಲಿತರ ಮತಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿರು. ಆಗ ದಲಿತ ಪ್ರತಿನಿಧಿ ಬಹುಸಂಖ್ಯಾತ ಸವರ್ಣೀಯರ ಕೈಗೊಂಬೆಯಾಗದೆ ಕಡ್ಡಾಯವಾಗಿ ದಲಿತ ಮತದಾರರನ್ನು ಸಹ ಅನುಸರಿಸಲೇ ಬೇಕಾಗುತ್ತದೆಂಬುದು ಈ ಪ್ರಸ್ತಾಪದ ಹಿಂದಿನ ಆಶಯವಾಗಿತ್ತು. ಆದರೆ ಈ ಪ್ರಸ್ತಾಪವನ್ನು 31 ಸದಸ್ಯರಲ್ಲಿ 28 ಸದಸ್ಯರು ವಿರೋಧಿಸಿದ್ದರಿಂದ ಬಿದ್ದುಹೋಯಿತು.

ಆಗ ಅದಕ್ಕೆ ಬದಲಾಗಿ ಸಾರ್ವತ್ರಿಕ ಕ್ಷೇತ್ರದಲ್ಲಿ ಗೆಲ್ಲುವ ದಲಿತೇತರ ಅಭ್ಯರ್ಥಿ ಕನಿಷ್ಟ ಪಕ್ಷ ಶೇ.35 ರಷ್ಟು ದಲಿತ ಒಟುಗಳನ್ನು ಪಡೆದುಕೊಳ್ಳುವುದು ಕಡ್ಡಾಯ ಮಾಡಬೇಕೆಂಬ ಆಂಬೇಡ್ಕರ್ ಅವರ ಪ್ರಸ್ತಾಪವನ್ನು ಅವರ ಅನುಪಸ್ಥಿತಿಯಲ್ಲಿ ನಾಗಪ್ಪ ಎಂಬ ಸದಸ್ಯರು ಮುಂದಿಟ್ಟರು.

ಆದರೆ ಈ ಪ್ರಸ್ತಾಪದಿಂದ ವಲ್ಲಭ ಭಾಯಿ ಪಟೇಲರು ಕೆಂಡಾಮಂಡಲವಾದರು. ಈ ಪ್ರಸ್ತಾಪವು ಗಾಂಧಿಯವರು ದಲಿತರಿಗೆ ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳದೆ ದಲಿತರು ಗಾಂಧಿಗೆ ಮಾಡುತ್ತಿರುವ ದ್ರೋಹವೆಂದು ಹೀಗೆಳೆದು ಪ್ರಸ್ತಾಪವನ್ನು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಸೋಲಿಸಿದರು. (ಹೆಚ್ಚಿನ ವಿವರಗಳಿಗೆ ಆಸಕ್ತರು ರಾಜಕೀಯ ಶಾಸ್ತ್ರಜ್ನರಾದ ವಿದ್ವಾಂಸ ಕ್ರಿಸ್ಟೋಫೆ ಜಾಫರ್ಲೆ ಅವರು ಬರೆದಿರುವ Conatining The Lower Castes: The Constituent Assembly and The Reservation Policy- Christophe Jaffrelot ಎಂಬ ಪ್ರಬಂಧವನ್ನು ಪರಿಶೀಲಿಸಬಹುದು)

ಇಂದು ದಲಿತ ಪ್ರಾತಿನಿಧ್ಯದ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಲೇ ಇದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರವನ್ನು ತರಲು ಕೀಲಕವಾದ ರಾಜಕೀಯ ಪ್ರಜಾತಂತ್ರವೇ ಹೀಗೆ ನಿಸ್ಸಾರ ಅಥವಾ ತಿರುಚಲ್ಪಟ್ಟ ಪ್ರಜಾತಂತ್ರವಾಗಿಬಿಟ್ಟಿರುವುದೂ ಸಹ ನಮ್ಮ ಇಂದಿನ ದುರವಸ್ಥೆಗೆ ಕಾರಣವಾಗಿದೆ.

ಸಮಾನತೆಯಿಲ್ಲದ ಸ್ವಾತಂತ್ರ್ಯದ ಸಮಸ್ಯೆ:

ಅಂಬೇಡ್ಕರ್ ಅವರು 1947 ರಲ್ಲಿ ಸಂವಿಧಾನ ರಚನೆ ಸಭೆಗೆ ಅರ್ಪಿಸಲು ಬರೆದ ಮನವಿ ಪತ್ರದ ರೂಪದ ಪರ್ಯಾಯ ಸಂವಿಧಾನವೇ ಆದ ಸ್ಟೇಟ್ ಅಂಡ್ ಮೈನಾರಿಟೀಸ್ ಎಂಬ ಪುಸ್ತಕದಲ್ಲಿ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವಗಳು ಒಂದನ್ನು ಬಿಟ್ಟು ಮತ್ತೊಂದಿರದ ತ್ರಿವಳಿಗಳಾಗಿವೆ ಎಂಬುದನ್ನು ವಿವರಿಸುತ್ತಾರೆ.

ನಮ್ಮ ಸಂವಿಧಾನವು ಸಹ ಆ ಮೂರನ್ನೂ ಏಕಕಾಲದಲ್ಲಿ ಸಾಧಿಸಬೇಕೆಂದು ಅಂಬೇಡ್ಕರ್ ಆಶಿಸಿದ್ದರು. ಸಮಾನತೆಯಿಲ್ಲದ ಸ್ವಾತಂತ್ರ್ಯ ಕೇವಲ ಉಳ್ಳವರಿಗೆ ದಕ್ಕುವ ಸ್ವಾತಂತ್ರ್ಯವಾಗಿರುತ್ತವೆ. ಮಾತ್ರವಲ್ಲ ಈವರೆಗಿನ ಎಲ್ಲಾ ಪ್ರಜಾತಂತ್ರಗಳು ಸ್ವಾತಂತ್ರ್ಯವನ್ನು ಮಾತ್ರ ನೀಡಿವೆಯೇ ಹೊರತು ಸಮಾನತೆಯನ್ನಲ್ಲ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು.

ಆದ್ದರಿಂದ ನಮ್ಮ ದೇಶದ ಸಂವಿಧಾನ ಹಾಗೆ ಮಾಡದೆ ಸಮಾನತೆಯನ್ನು ಮೂಲಭೂತ ಹಕ್ಕನಾಗಿಸಬೇಕೆಂದು ಬಯಸಿದ್ದರು. ಆ ಕಾರಣಕ್ಕೆ ದೇಶದ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕಿರುವುದು ಅಗತ್ಯ ಎಂದೂ ಪ್ರತಿಪಾದಿಸಿದ್ದರು. ಭೂಮಿಯನ್ನು ರಾಷ್ಟ್ರೀಕರಣ ಮಾಡಿ ಸಹಕಾರಿ ಕೃಷಿಯನ್ನು ಕಡ್ಡಾಯ ಮಾಡಿದರೆ ಬಡ ಜನರ ಬೆವರು ಬೆಸೆದು ಜಾತಿ ಮತ್ತು ವರ್ಗದ ಗೋಡೆಗಳು ಕುಸಿಯಬಹುದೆಂಬ ಕ್ರಾಂತಿಕಾರಿ ಕಾರ್ಯಕ್ರಮವನ್ನು ನೀಡಿದ್ದರು.. ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಬಹುಸಂಖ್ಯಾತರಿಗೆ ಶೇ. 40ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಸರ್ಕಾರದಲ್ಲಾಗಲೀ, ಶಾಸನ ಸಭೆಗಳಲ್ಲಾಗಲೀ ಇರಕೂಡದೆಂಬ ಕ್ರಾಂತಿಕಾರಿ ಪರಿಹಾರವನ್ನು ನೀಡಿದ್ದರು.

ಆದರೆ 1950 ರಲ್ಲಿ ಜಾರಿಯಾದ ಸಂವಿಧಾನದಲ್ಲಿ ಸಮಾನತೆ ಮೂಲಭೂತ ಹಕ್ಕೂ ಆಗಲಿಲ್ಲ. ಸಂಪತ್ತುಗಳ ರಾಷ್ಟ್ರೀಕರಣವೂ ಆಗಲಿಲ್ಲ. ಬದಲಿಗೆ ಭಾರತದ ಪ್ರಭುತ್ವವು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತಹ ನೀತಿಯನ್ನು ಜಾರಿಗೆ ತರಬೇಕೆಂಬ ಹಾಗೂ ಎಲ್ಲರಿಗೂ ಘನತೆಯಿಂದ ಬದುಕಲು ಬೇಕಾದಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೆಂಬ ವಿಧಿಗಳು ಪ್ರಭುತ್ವ ನಿರ್ದೇಶನಾ ತತ್ವಗಳಾಗಿ ಇಂದಿನ ಸಂವಿಧಾನದಲ್ಲಿ ಸೇರಿಕೊಂಡಿವೆ.

ಆದರೆ ಸಂವಿಧಾನದ ಆರ್ಟಿಕಲ್ 37 ಸ್ಪಷ್ಟಪಡಿಸುವಂತೆ ಪ್ರಭುತ್ವ ನಿರ್ದೇಶನಾ ತತ್ವ ಗಳು ಸಂವಿಧಾನದ ಆಶಯಗಳೇ ವಿನಾ ಮೂಲಭೂತ ಹಕ್ಕುಗಳಲ್ಲ. ಅದನ್ನು ಸರ್ಕಾರಗಳು ಜಾರಿ ಮಾಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಹೀಗಾಗಿ ಭಾರತದ ಸಂವಿಧಾನ ಸಭೆ ಅಂಬೇಡ್ಕರ್ ಅವರ ಮೂಲ ಆಶಯಕ್ಕೆ ಭಂಗ ತಂದು ಅದನ್ನು ಭಾರತದ ಸಂವಿಧಾನದಲ್ಲಿ ಕೇವಲ ಅಲಂಕಾರಿಕವಾಗಿ ಸೇರಿಸಿಕೊಂಡಿದೆ.

ಡಾ. ಅಂಬೇಡ್ಕರ್ ಅವರ ಕ್ರಾಂತಿಕಾರಿ ಸರ್ಜರಿಯಿಲ್ಲದೆ ಈ ದೇಶ ಉಳಿಯದು

ಅದೇನೇ ಇರಲಿ. 1950 ರ ಜನವರಿ 26 ರಂದು ಭಾರತವು ಒಂದು ಗಣರಾಜ್ಯವಾಗಿದೆ.
ಅಷ್ಟರಮಟ್ಟಿಗೆ ಅದು ಭಾರತದ ನಾಗರಿಕತೆಯ ಇತಿಹಾಸದಲ್ಲಿ ಒಂದು ದೊಡ್ಡ ದಾಪುಗಾಲು.

ಅಷ್ಟರ ಮಟ್ಟಿಗಾದರೂ ಸಾಧ್ಯವಾಗಿದ್ದು ಅಂಬೇಡ್ಕರ್ ಎಂಬ ಬೆಳಕಿನಿಂದ. ಹಾಗೂ ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದಮನಿತ ಜನತೆ ಹೋರಾಟಗಳಿಂದ ಪಡೆದುಕೊಂಡ ಜಾಗೃತಿಯಿಂದ.

ಇಂದು ಅದನ್ನೂ ಕೂಡ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಅದಕ್ಕೆ ಕಾರಣ ರಾಜಕೀಯವಾಗಿ ಸಮಾನತೆ ಪಡೆದಿದ್ದರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆಗಳು ಹೆಚ್ಚುತ್ತಲೇ ಇದೆ. ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುವ ಬ್ರಾಹ್ಮಣೀಯ ಜಾತಿ ವ್ಯವಸ್ಥೆ, ಆರ್ಥಿಕವಾಗಿ ಅಸಮಾನತೆಯನ್ನು ಹೆಚ್ಚಿಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಕಳೆದ 75 ವರ್ಷಗಳಲ್ಲಿ, ಅದರಲ್ಲೂ ಮೋದಿ ಸರ್ವಾಧಿಕಾರದ ಕಳೆದ ಎಂಟು ವರ್ಷಗಳಲ್ಲಿ ಇನ್ನಷ್ಟು ಬಲಗೊಂಡಿದೆ.

ಈ ರಾಜಕೀಯ ಸಮಾನತೆ ಮತ್ತು ರಾಜಕೀಯ ವ್ಯವಸ್ಥೆಯು ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವ ಅನಿವಾರ್ಯತೆಯನ್ನು ಮತ್ತು ಷರತ್ತನ್ನು ನಮ್ಮ ಸಂವಿಧಾನ ವಿದಿಸಿರಲಿಲ್ಲ. ಅಂಬೇಡ್ಕರ್ ಅವರ ಈ ಆಶಯಗಳನ್ನು ಆಗಿನ ಸಂವಿಧಾನ ಸಭೆ ಒಪ್ಪಿಕೊಳ್ಳಲಿಲ್ಲ. ಹೀಗಾಗಿಯೇ ಅದೇ ರಾಜಕೀಯ ವ್ಯವಸ್ಥೆಯನ್ನು ಬಳಸಿಕೊಂಡು ಬ್ರಾಹ್ಮಣ್ಯ ಹಾಗೂ ಬಂಡವಾಳಗಳು ಗಟ್ಟಿಗೊಂಡು ಇಂದು ಫ಼್ಯಾಸಿಸ್ಟ್ ಸ್ವರೂಪವನ್ನು ಪಡೆದುಕೊಂಡಿದೆ.

ರೂಪಕಾರ್ಥದಲ್ಲಿ ಹೇಳುವುದಾದರೆ ಇಂದು ಸಂವಿಧಾನದ ಒಳಗಿರುವ ಅಂಬೇಡ್ಕರ್ ಮೇಲೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಂಡವಾಳಶಾಹಿಗಳು ಮತ್ತು ಹಿಂದೂತ್ವವಾದಿ ಬ್ರಾಹ್ಮಣಶಾಹಿಗಳು ಮಾರಣಾಂತಿಕ ದಾಳಿ ಮಾಡುತ್ತಿದ್ದಾರೆ.

ಹೀಗಾಗಿ ಇವತ್ತಿನ ಸಂದರ್ಭದಲ್ಲಿ ಸಂವಿಧಾನವು ಹೊರಗಿಟ್ಟ ಅಂಬೇಡ್ಕರ್ ಅನ್ನು ಸಂವಿಧಾನದೊಳಗೆ ತಂದುಕೊಳ್ಳದೆ ಸಂವಿಧಾನದೊಳಗಿರುವ ಅಂಬೇಡ್ಕರ್ ಅನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದು.

(ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement