Advertisement

ರಾಜ್ಯದ ಪ್ರತಿಮನೆಗೆ 200ಯುನಿಟ್ ವಿದ್ಯುತ್ ಉಚಿತ: ಕಾಂಗ್ರೆಸ್ ಘೋಷಣೆ

Advertisement

"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದರೆ ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ ತಲಾ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ. ನಾವು ನುಡಿದಂತೆ ನಡೆಯುವವರು. ಕರುನಾಡಿಗಾಗಿ ನಮ್ಮೊಂದಿಗೆ ಕೈಜೋಡಿಸಿ" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆಮ್ಮದಿ ನೀಡುವ ಯೋಜನೆಯನ್ನು ನಾವು ಘೋಷಿಸುತ್ತಿದ್ದೇವೆ. ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ 'ಗೃಹಜ್ಯೋತಿ' ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ.
ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ.. ಇದು ಕಾಂಗ್ರೆಸ್ ಗ್ಯಾರಂಟಿ" ಎಂದವರು ಘೋಷಿಸಿದ್ದಾರೆ.

ಹಾಗೆಯೇ ಬುಧವಾರ ಚಿಕ್ಕೋಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ "ಪ್ರಜಾಧ್ವನಿ" ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪ್ರತಿ ಮನೆಗೂ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲು "ಗೃಹ ಜ್ಯೋತಿ ಯೋಜನೆ" ಜಾರಿಗೊಳಿಸಲು ತೀರ್ಮಾನಿಸಿದೆ ಎಂದು ಘೋಷಿಸಿದ್ದಾರೆ.

"ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ನುಡಿದಂತೆ ನಡೆಯುತ್ತಾ ಬಂದಿರುವ ಸುಭದ್ರ ಆಡಳಿತದ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಜನ ಬಯಸಿದ್ದಾರೆ" ಎಂದವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರುಗಳು ಜನಸಾಮಾನ್ಯರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಕೊರೋನಾ ಲಾಕ್‌ಡೌನ್ ನಂತರದ ದಿನಗಳಲ್ಲಿ ಜೀವನೋಪಾಯಕ್ಕೆ ಸಾಕಷ್ಟು ಕಷ್ಟ ಪಡುತ್ತಿರುವುದು ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದಾಗಿ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಒದಗಿಸಲು ಕಷ್ಟಪಡುತ್ತಿರುವುದು ಪಕ್ಷದ ಗಮನಕ್ಕೆ ಬಂದಿದೆ. ಇದೆಲ್ಲದರ ಜೊತೆಗೆ ಬಿಜೆಪಿ ಸರಕಾರ ನಿರಂತರವಾಗಿ ವಿದ್ಯುತ್ ದರ ಏರಿಕೆ ಮಾಡುತ್ತಿರುವುದು ಹಾಗೂ ಅದರಿಂದ ತಮಗಾಗುತ್ತಿರುವ ತೊಂದರೆಗಳನ್ನು ಜನ ನಮ್ಮೊಂದಿಗೆ ಹಂಚಿಕೊಂಡಿದ್ದರು. ಜನರ ಈ ಸಂಕಷ್ಟವನ್ನು ಅರಿತು ಕಾಂಗ್ರೆಸ್ ಈ "ಗ್ರಹ ಜ್ಯೋತಿ ಯೋಜನೆ"ಯನ್ನು ಘೋಷಣೆ ಮಾಡಿದೆ ಎಂದು ಡಿಕೆಶಿ ಹೇಳಿದರು.

ಹಸಿದವನಿಗೆ ಅನ್ನ, ಖಾಯಿಲೆಪೀಡಿತರಿಗೆ ಚಿಕಿತ್ಸೆ, ಎಳೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಯುವಜನಾಂಗಕ್ಕೆ ಉದ್ಯೋಗ.. ಇದು ಭಾಗ್ಯಗಳ ಸರಮಾಲೆ ಅಲ್ಲ. ಜನರ ಅಗತ್ಯಗಳನ್ನು ಪೂರೈಕೆ ಮಾಡುವುದು ಪ್ರಜಾಪ್ರಭುತ್ವ ದೇಶವೊಂದರ ಜವಾಬ್ದಾರಿಯುತ ಸರಕಾರಗಳ ಕರ್ತವ್ಯ. ಮತ್ತು ಇದುವೇ ಕಾಂಗ್ರೆಸ್ ಪಕ್ಷದ ಸಿದ್ದಾಂತ ಕೂಡ ಆಗಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಈ ಪಕ್ಷ ಇದನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದೆ.

ಕಾಂಗ್ರೆಸ್ ಪಕ್ಷದ ಪ್ರಧಾನಿಗಳಾದ ನೆಹರೂ, ಇಂದಿರಾ, ರಾಜೀವ್, ಮನಮೋಹನ್ ಮುಂತಾದ ನಾಯಕರುಗಳು ದೂರಾಲೋಚನೆಯ ಮೂಲಕ ಜಾರಿಗೊಳಿಸಿದ ನೂರಾರು ಯೋಜನೆಗಳು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ "ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ದಾಂತದ ಸಂವಿಧಾನ"ವನ್ನು ಈ ದೇಶದ ಶೋಷಿತರಿಗೆ, ದಮನಿತರಿಗೆ ನೀಡಿದೆ. ಅದನ್ನು ಈ ದಿನದ ತನಕವೂ ರಕ್ಷಿಸಿಕೊಂಡು ಬಂದಿದೆ.

ಅದರ ಮುಂದುವರಿಗ ಭಾಗ ಎಂಬಂತೆ ಲಾಕ್‌ಡೌನ್ ಸಮಯದಲ್ಲಿ ಆರ್ಥಿಕವಾಗಿ ದುರ್ಭಲರಾಗಿರುವ ಜನಕ್ಕೆ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯ, ಕೃಷಿಭಾಗ್ಯ, ಆರೋಗ್ಯ ಭಾಗ್ಯ, ವಸತಿ ಭಾಗ್ಯ, ಸೌರಭಾಗ್ಯ, ಶಿಕ್ಷಣಭಾಗ್ಯ, ಪಶುಭಾಗ್ಯ, ಸ್ತ್ರೀ ಸಂಘಗಳಿಗೆ ಬಡ್ಡಿರಹಿತ ಸಾಲಭಾಗ್ಯ, ರೈತರ ಸಾಲಮನ್ನಾ ಮುಂತಾದ ಬಡ ಜನರ ಪರವಾದ ಕಾರ್ಯಕ್ರಮಗಳು ಜೀವನಾಡಿಗಳಾಗಿ ಪರಿಣಮಿಸಿದ್ದವು ಎನ್ನುವುದು ಮಾತ್ರ ಆಕಾಶದಲ್ಲಿ ಸೂರ್ಯ, ಚಂದ್ರರು ಇರುವಷ್ಟೇ ಸತ್ಯವಾದ ವಿಚಾರವಾಗಿದೆ.

Advertisement
Advertisement
Recent Posts
Advertisement