ಸಿದ್ದರಾಮಯ್ಯನವರಿಗೆ ಕೊಲೆಬೆದರಿಕೆ ಒಡ್ಡಿರುವ ಸಚಿವ ಅಶ್ವಥ್ ನಾರಾಯಣ್‌ರನ್ನು ವಜಾಗೊಳಿಸಿ, ಬಂಧಿಸದಿದ್ದರೆ ಉಗ್ರಹೋರಾಟ: ಡಿ.ಕೆ ಸುರೇಶ್

"ನಮ್ಮ ನಾಯಕರಾದ ಸನ್ಮಾನ್ಯ ಸಿದ್ದರಾಮಯ್ಯನವರನ್ನು 'ಹೊಡೆದು ಹಾಕಬೇಕೆಂದು' ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ, ಅವರ ಹತ್ಯೆಗೆ ಸಂಚು ರೂಪಿಸಿದ ಸಚಿವ ಅಶ್ವಥ್ ನಾರಾಯಣನನ್ನು ಮುಖ್ಯಮಂತ್ರಿಗಳು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ, ಬಂಧಿಸುವಂತೆ ಆಗ್ರಹಿಸುತ್ತೇನೆ‌" ಎಂದು ಸಂಸದ ಡಿ.ಕೆ ಸುರೇಶ್ ಟ್ವಿಟ್ ಮೂಲಕ ಒತ್ತಾಯಿಸಿದ್ದಾರೆ.

"ಈ ಬಗ್ಗೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಅವರನ್ನು ಬಂಧಿಸಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸುತ್ತೇನೆ. ಸರ್ಕಾರದ ಕಡೆಯಿಂದ ಅಶ್ವಥ್ ನಾರಾಯಣ್ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಅವರು ಹೋದಲ್ಲೆಲ್ಲ ಘೇರಾವ್ ಹಾಕಲು ಕರೆ ಕೊಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಈ ಬಗ್ಗೆ ಜಾಗೃತರಾಗಲಿ" ಎಂದವರು ಎಚ್ಚರಿಕೆ ನೀಡಿದ್ದಾರೆ.