Advertisement

ಎಪ್ರಿಲ್ 15: ಕುಂದಾಪುರದಲ್ಲಿ "ಶೂದ್ರಶಿವ" ನಾಟಕ!

Advertisement

ಮಂಗಳೂರಿನ ರುದ್ರ ಥೇಟರ್ ಅರ್ಪಿಸುವ “ಶೂದ್ರಶಿವ” ಕನ್ನಡ ನಾಟಕ 2023 ಎಪ್ರಿಲ್ 15 ರ ಶನಿವಾರ ರಾತ್ರಿ 8 ಕ್ಕೆ ಕುಂದಾಪುರದ ಕೋಟೇಶ್ವರ ಹಳೆಅಳಿವೆಯ ಹಾಯ್ಗುಳಿ ಬೊಬ್ಬರ್ಯ ದೇವಸ್ಥಾನದಲ್ಲಿ ಪ್ರದರ್ಶನಗೊಳ್ಳಲಿದೆ.

ಖ್ಯಾತ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಈ ನಾಟಕ ಸಿದ್ದಗೊಂಡಿದೆ. ಲೇಖಕ ಬಾಬುಶಿವ ಪೂಜಾರಿ ಅವರ ‘ಶ್ರೀ ನಾರಾಯಣ ಗುರು ವಿಜಯ ದರ್ಶನ' ಪುಸ್ತಕವನ್ನು ಪ್ರೇರಣಾ ಪಠ್ಯವಾಗಿಟ್ಟುಕೊಂಡು ಜೊತೆಗೆ ನಾರಾಯಣ ಗುರುಗಳ ಬಗ್ಗೆ ಇತರ ಲೇಖಕರ ಸಾಹಿತ್ಯ ವನ್ನು ಅಭ್ಯಸಿಸಿ ಶೂದ್ರಶಿವ ನಾಟಕವನ್ನು ಪ್ರಸ್ತುತಿ ಪಡಿಸಲಾಗಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಚಳವಳಿಯ ಐತಿಹಾಸಿಕ ಹಿನ್ನೆಲೆಯನ್ನು ರಂಗ ಪ್ರಯೋಗಕ್ಕೆ ರುದ್ರ ಥೇಟರ್ ಅಳವಡಿಸಿದ್ದು , ಮೊದಲ ಪ್ರದರ್ಶನ ಕುದ್ರೋಳಿಯಲ್ಲಿ ಅಭೂತಪೂರ್ವವಾಗಿ ಪ್ರದರ್ಶನ ಕಂಡಿತ್ತು. ರುದ್ರ ಥೇಟರ್ ರಂಗ ತಂಡವು 21 ಕಲಾವಿದರ ತಂಡವಾಗಿದ್ದು , ಈ ಕಲಾವಿದರಿಗೆ 70 ದಿನಗಳ ತರಬೇತಿ ಮೂಲಕ ಶೂದ್ರ ಶಿವ ನಾಟಕವನ್ನು ಸಿದ್ದಪಡಿಸಲಾಗಿತ್ತು ಎಂದು ತಿಳಿದುಬಂದಿದೆ.

ಶೂದ್ರಶಿವ ನಾಟಕದ ಕುರಿತು ಹಿರಿಯ ರಂಗಕರ್ಮಿ, ಸಾಮಾಜಿಕ ಚಿಂತಕರು ಹಾಗೂ ಜನಪರ ಬರಹಗಾರರಾದ ಶ್ರೀನಿವಾಸ ಕಾರ್ಕಳರವರು ಪೀಪಲ್ ಮೀಡಿಯಾ ಕ್ಕಾಗಿ ಬರೆದಿರುವ ಲೇಖನ.

ನಮ್ಮವನೇ ಆದ ಶಿವ, ನಮ್ಮೊಳಗಿನ ಶಿವ ‘ಶೂದ್ರಶಿವ’

‘ಶೂದ್ರಶಿವ’ ಎಂಬ ಹೆಸರಿನಲ್ಲೇ ಏನೋ ಒಂದು ವಿಶೇಷ ಅರ್ಥವಿದೆ, ಶಕ್ತಿಯಿದೆ, ಆಕರ್ಷಣೆಯಿದೆ. ಆತ ವೈದಿಕರ ಗಗನದ ಶಿವನಲ್ಲ, ಶೂದ್ರರ ನೆಲದ ಶಿವ. ನೀವು ಶಿವನನ್ನು ನಮ್ಮಿಂದ ದೂರ ಇಟ್ಟಾಗ ನಾವೇ ಕಂಡುಕೊಂಡ ನಮ್ಮ ಶಿವ. ನಾರಾಯಣ ಗುರುಗಳ ಮೂಲಕ ನಮಗೆ ಸಿಕ್ಕಿದ ಸ್ವಾಭಿಮಾನ, ಆತ್ಮಗೌರವದ ಶಿವ. ಮನುಜಭೇದವ ತೊರೆದು ನಮ್ಮವನೇ ಆದ ನಮ್ಮೊಳಗಿನ ಶಿವ.

ನೀವು ನಾರಾಯಣ ಗುರುಗಳ ಬಗ್ಗೆ, ಅವರ ಸಮಾಜ ಸುಧಾರಣಾ ಚಳುವಳಿಯ ಬಗ್ಗೆ ದೊಡ್ಡ ದೊಡ್ಡ ಗ್ರಂಥ ಬರೆಯಬಹುದು, ದೀರ್ಘಲೇಖನ ಬರೆಯಬಹುದು, ಗಂಟೆಗಟ್ಟಲೆ ಭಾಷಣ ಮಾಡಬಹುದು. ಇಷ್ಟಾಗಿಯೂ ಪಾಮರರಿಗೆ ಗುರುಗಳ ಕೆಲಸದ ವಿವರ ದಕ್ಕದೆ ಹೋಗಬಹುದು. ಆದರೆ ಸಿನಿಮಾ ಅಥವಾ ನಾಟಕದಂತಹ ಒಂದು ದೃಶ್ಯ ಮಾಧ್ಯಮ ಬೀರಬಹುದಾದ ಪರಿಣಾಮ ಅಸಾಧಾರಣವಾದುದು. ಇದಕ್ಕೆ ಮಂಗಳೂರಿನ ರುದ್ರ ಥೇಟರ್ ಗ್ರೂಪ್ ನ ‘ಶೂದ್ರಶಿವ’ ನಾಟಕ ಅತ್ಯುತ್ತಮ ಉದಾಹರಣೆ. ಜನಸಾಮಾನ್ಯರಿಗೆ ಅರ್ಥವಾಗದ ನಾರಾಯಣ ಗುರುಗಳನ್ನು, ಅವರ ಆಲೋಚನೆಗಳನ್ನು, ಅವರ ಸುಧಾರಣಾ ಚಳುವಳಿಯ ಇತಿಹಾಸವನ್ನು ಶೂದ್ರಶಿವ ಕೇವಲ ಎರಡು ಗಂಟೆಗಳ ನಾಟಕದಲ್ಲಿ ವೀಕ್ಷಕರಿಗೆ ಪರಿಣಾಮಕಾರಿಯಾಗಿ ದಾಟಿಸುತ್ತದೆ; ಅವರನ್ನು ಕಾಡುತ್ತದೆ; ಅವರು ಎಂದೂ ಮರೆಯದಂತೆ ಮಾಡುತ್ತದೆ.

ಮೇಲ್ನೊಟಕ್ಕೇ ತಿಳಿಯುವಂತೆ ಈ ನಾಟಕದ ಮುಖ್ಯ ಉದ್ದೇಶವೇ ಸಾಮಾನ್ಯ ಪ್ರೇಕ್ಷಕರನ್ನು ತಲಪುವುದು. ಆದ್ದರಿಂದಲೇ ಅತಿಯಾದ ಸಾಂಕೇತಿಕತೆಯ ರೂಪಕ ಭಾಷೆಯ ಬದಲು ಅದು ಸರಳವಾಗಿ ನೇರವಾಗಿ ಕತೆಯನ್ನು ಹೇಳುತ್ತಾ ಹೋಗುತ್ತದೆ. ಸ್ವಾಮಿ ವಿವೇಕಾನಂದರಿಂದಲೇ ‘ಹುಚ್ಚಾಸ್ಪತ್ರೆಯಂತೆ’ ಎಂದು ಕರೆಸಿಕೊಂಡ ಅಂದಿನ ಕೇರಳದಲ್ಲಿ ತಥಾಕಥಿತ ಕೆಳ ಜಾತಿಯವರು ಅನುಭವಿಸುತ್ತಿದ್ದ ಜಾತಿ ಶೋಷಣೆ, ಜಾತಿ ದೌರ್ಜನ್ಯ, ನಂಬೂದಿರಿಗಳು ಬರುವ ದಾರಿಯಲ್ಲಿ ಕಾಣಿಸಿಕೊಂಡರೂ ಶಿಕ್ಷೆ, ಮದುವೆಯಾದರೆ ಆ ಹೆಣ್ಣು ಮೊದಲು ನಂಬೂದಿರಿಗಳೊಂದಿಗೆ ಒಂದು ರಾತ್ರಿ ಕಳೆಯ ಬೇಕಾಗುವ ನರಕ, ಹೆಣ ತೆಗೆಯಲೂ ತೆರಿಗೆ, ಮೊಲೆಗೂ ತೆರಿಗೆ, ಬದುಕೇ ಕತ್ತಲು ಎನಿಸುವ ಇಂತಹ ಕಾಲದಲ್ಲಿ ಕಗ್ಗತ್ತಲ ಸುರಂಗದ ತುದಿಯಲ್ಲಿ ಬೆಳಕಿನ ಕಿರಣದಂತೆ, ಕಾರ್ಮೋಡದ ಬಾನಿನಲ್ಲಿ ಭರವಸೆಯ ನಕ್ಷತ್ರದಂತೆ ಕಾಣಿಸಿಕೊಳ್ಳುವ ನಾರಾಯಣ ಗುರುಗಳು, ದೇವಾಲಯಗಳಿಗೆ ಪ್ರವೇಶ ಇಲ್ಲ ಎಂದಾದಾಗ ತಮ್ಮದೇ ದೇವಾಲಯ ಕಟ್ಟಿಕೊಳ್ಳುವಂತೆ ಮಾಡುವ ಗುರುಗಳು, ‘ತಿಳಿಸಲು ಅಲ್ಲ, ತಿಳಿಯಲು’ ಎನ್ನುವ ಉದಾತ್ತ ಆಲೋಚನೆಗಳು, ಸಂಘಟನೆ ಮತ್ತು ಶಿಕ್ಷಣದ ಆದ್ಯತೆಯ ಕರೆ, ಡಾ ಪಲ್ಪು, ಕವಿ ಕುಮಾರನ್ ಆಶನ್ ಅವರ ಸಹಯೋಗ, ಮತಾಂತರ ಆಗುವ ಕುರಿತು ನಡೆಯುವ ಚರ್ಚೆಗಳು, ಗುರುಗಳ ಸಮಾಜ ಸುಧಾರಣೆಯ ಚಳುವಳಿಗೆ ಮಾರು ಹೋಗಿ ಓಡೋಡಿ ಬಂದು ಭೇಟಿಯಾಗುವ ಗಾಂಧೀಜಿ ಹೀಗೆ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಶತಮಾನವೊಂದರ ಕತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ ಶೂದ್ರ ಶಿವ.

ಶೂದ್ರ ಶಿವ ನಾಟಕದ ಪ್ರೇರಣಾ ಪಠ್ಯ ಬಾಬು ಶಿವ ಪೂಜಾರಿಯವರದು. ನಾಟಕವನ್ನು ಪ್ರತಿಭಾವಂತ ಮತ್ತು ಅನುಭವಿ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶಿಸಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ರಂಗದ ಕಲಾ ವಿನ್ಯಾಸದಲ್ಲಿ ದೊಡ್ಡ ಹೆಸರು ಮಾಡಿರುವ ಶಶಿಧರ ಅಡಪ ಅವರು ನಾಟಕದ ರಂಗ ವಿನ್ಯಾಸ ಮಾಡಿದ್ದಾರೆ. ಶರತ್ ಎಸ್ ನೀನಾಸಂ ಹಾಗೂ ಮನೋಜ್ ವಾಮಂಜೂರು ಇವರು ರಂಗ ರೂಪ ನೀಡಿದ್ದಾರೆ.

ಬೆಳಕು- ನಿತೇಶ್ ಬಂಟ್ವಾಳ, ಧ್ವನಿ- ರಾಜೇಶ್, ತಂಡ ನಿರ್ವಹಣೆ- ಯೋಗೇಶ್ ಜೆಪ್ಪು ಮತ್ತು ಲೋಕೇಶ್, ಪ್ರಸಾದನ- ಶಿವರಾಮ ಕಲ್ಮಡ್ಕ, ಮಾರ್ಗದರ್ಶನ- ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್ ಧರ್ಮರಾಜ್, ಸಂಗೀತ- ಶರತ್ ಉಚ್ಚಿಲ, ಹಾಡಿದವರು- ಮೇಘನಾ ಕುಂದಾಪುರ ಮತ್ತು ಸಂಗಡಿಗರು. ಅಶ್ವಥ್ ಕುಂದಾಪುರ, ಸುದೀಶ್ ಕಾಸರಗೋಡು, ಜಯದೀಪ್ ಮೈಸೂರು, ಪ್ರಿಯಾಂಕಾ ಶಿವಮೊಗ್ಗ, ಕಾವ್ಯ ಶಿವಮೊಗ್ಗ, ಮಂಜುನಾಥ ಹುಬ್ಬಳ್ಳಿ, ಗಣೇಶ್ ಪುತ್ತೂರು, ಪವನ್‌ ಮಿಟ್ಟ ಆಂಧ್ರಪ್ರದೇಶ್, ಸುಮನ್ ಚನ್ನರಾಯ ಪಟ್ಟಣ, ರಾಜೇಂದ್ರ ಪ್ರಸಾದ್ ಮಂಡ್ಯ, ರಾಜೇಂದ್ರ ಶ್ರೀನಿವಾಸ್ ಮಂಡ್ಯ, ಚೈತ್ರಾ ಟಿ ಪಿ ಚೆನ್ನಪಟ್ಟಣ, ಮಣಿಯನ್ ಕುಂಬ್ಳೆ, ಸದಾನಂದ ಎಸ್ ಮಂಡ್ಯ, ಸಂದೀಪ್ ಮಸ್ಕರೇನಸ್ ಮಂಗಳೂರು, ಯೋಗೀಶ್ ಉತ್ತರಕನ್ನಡ, ಅಭಿಷೇಕ್ ಮಂಡ್ಯ, ಶ್ರೀಧರ್ ಗದಗ್, ಜೀವನ್ ಸಿದ್ದಿ ಮುಂಡುಗೋಡು ಹೀಗೆ ರಾಜ್ಯದ 13 ಜಿಲ್ಲೆಗಳ 19 ಕಲಾವಿದರು ಅಭಿನಯಿಸಿದ್ದಾರೆ.

ನಾಟಕ ತಾಂತ್ರಿಕವಾಗಿ ತುಂಬಾ ಮೇಲ್ಮಟ್ಟವನ್ನು ಕಾಯ್ದುಕೊಂಡಿದೆ. ಬೆಳಕು, ಸಂಗೀತ, ರಂಗ ಸಂಯೋಜನೆ ಎಲ್ಲವೂ ಅತ್ಯುತ್ತಮವಾಗಿದೆ. ಕಲಾವಿದರ ನಟನಾ ಪ್ರತಿಭೆ ಎದ್ದು ಕಾಣಿಸುವಂತಿದೆ. ದೃಶ್ಯ ಸಂಯೋಜನೆಗಳು ನೆನಪಿನಲ್ಲಿ ಉಳಿಯುವಂತಿವೆ. ಉದಾಹರಣೆಗೆ ನಾರಾಯಣ ಗುರುಗಳನ್ನು ಭೇಟಿಯಾಗಲು ಮಹಾತ್ಮಾ ಗಾಂಧಿ ಓಡೋಡಿ ಬರುವ ದೃಶ್ಯ ತುಂಬಾ ಶಕ್ತಿಶಾಲಿಯಾಗಿ ಮೂಡಿಬಂದಿದ್ದು, ಬರೇ ಗಾಂಧಿ ಮತ್ತು ಸಂಗಡಿಗರ ಚುರುಕಿನ ನಡಿಗೆಯೇ ಅನೇಕ ಅರ್ಥಗಳನ್ನು ಹೊರಡಿಸುವಂತಿದೆ.

ವಿಸ್ತಾರವಾದ ಕ್ಯಾನ್ವಾಸ್ ಇರುವ ವಸ್ತುವನ್ನು ನಾಟಕಕ್ಕೆ ಒಗ್ಗಿಸಿಕೊಳ್ಳುವುದು ಸುಲಭವಲ್ಲ. ಪ್ರಯೋಗಗಳು ಈಗಷ್ಟೇ ಆರಂಭವಾಗಿರುವುದರಿಂದ ವೀಕ್ಷಕರ ಹಿಮ್ಮಾಹಿತಿಯೊಂದಿಗೆ ಸುಧಾರಣೆಗೆ ಅನೇಕ ಅವಕಾಶಗಳಿವೆ. ಆದರೂ ಎಲ್ಲ ಇತಿಮಿತಿಗಳ ನಡುವೆ ಒಂದು ಒಳ್ಳೆಯ ನಾಟಕವನ್ನು ರುದ್ರ ಥೇಟರ್ ಗ್ರೂಪ್ ಕೊಟ್ಟಿದೆ.

ಈ ನಾಟಕ ದೊಡ್ಡ ಪ್ರಮಾಣದಲ್ಲಿ ನಾಡಿನಲ್ಲಿ ಮಾತ್ರವಲ್ಲ ನಾಡಿನ ಹೊರಗೂ ಪ್ರದರ್ಶನ ಕಾಣಬೇಕು. ಅದಕ್ಕೆ ಬಹಳ ಮುಖ್ಯವಾದ ಕಾರಣ ಎರಡು. ಮೊದಲನೆಯದಾಗಿ, ದೇಶ ದುರಿತ ಕಾಲದ ಹೆಬ್ಬಾಗಿಲಲ್ಲಿ ಬಂದು ನಿಂತಿದೆ. ಜಾತಿ ನೆಲೆಯ ತಾರತಮ್ಯ ಮತ್ತು ದೌರ್ಜನ್ಯ ಮತ್ತೊಮ್ಮೆ ವಿಜೃಂಭಿಸುತ್ತಿದೆ. ಅವಕಾಶ ವಂಚಿತ ಸಮುದಾಯಗಳ ಅವಕಾಶಗಳನ್ನು ಕಿತ್ತುಕೊಂಡು ಮತ್ತೆ ಶತಮಾನ ಹಿಂದಿನ ಕಗ್ಗತ್ತಲ ಪರಿಸ್ಥಿತಿಗೆ ತಳ್ಳುವ ಹವಣಿಕೆ ನಡೆದಿದೆ. ಇಂತಹ ಹೊತ್ತಿನಲ್ಲಿ ಹೊಸ ತಲೆಮಾರಿಗೆ ನಾರಾಯಣ ಗುರುಗಳ ಸಮಾಜ ಸುಧಾರಣಾ ಚಳುವಳಿಯ ಇತಿಹಾಸವನ್ನು ತಿಳಿಸಿಕೊಡುತ್ತಾ ಅವರಲ್ಲಿ ಸಮಾನತೆ ಮತ್ತು ಸಹಬಾಳ್ವೆಯ ಅನಿವಾರ್ಯತೆಯ ಅರಿವು ತುರ್ತಾಗಿ ಮೂಡಿಸಬೇಕಾಗಿದೆ.

ಎರಡನೆಯದಾಗಿ ನಾರಾಯಣ ಗುರುಗಳು ಮತ್ತು ಅವರ ವಿಚಾರಧಾರೆಗಳನ್ನು ಯಾವ ಅಳುಕೂ ಇಲ್ಲದೆ ಕಡೆಗಣಿಸುವ ಮತ್ತು ಅವಮಾನಿಸುವ, ಆದರೆ ಓಟಿಗಾಗಿ ಮಾತ್ರ ಬಳಸಿಕೊಳ್ಳುವ ಚಿಲ್ಲರೆ ರಾಜಕಾರಣವೂ ಎಗ್ಗಿಲ್ಲದೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಯೂ ಶೂದ್ರಶಿವ ಅವರಿಗೆ ಒಂದು ಎಚ್ಚರಿಕೆಯ ಸಂದೇಶವಾಗಬೇಕು.

ಅಪಾರ ಶ್ರಮ ಮತ್ತು ಪ್ರತಿಭೆ ಬೇಡುವ ಶೂದ್ರಶಿವ ನಾಟಕದ ನಿರ್ಮಾಣದಲ್ಲಿ ದುಡಿದ ಪ್ರತಿಯೊಬ್ಬರೂ ಅಭಿನಂದನೆಗೆ ಅರ್ಹರು. ನಾಟಕ ನೂರಾರು ಪ್ರದರ್ಶನ ಕಾಣುವಂತಾಗಲಿ, ತನ್ನ ಉದ್ದೇಶ ಈಡೇರಿಸುವಂತಾಗಲಿ ಎಂದು  ಆಶಿಸೋಣ.

Advertisement
Advertisement
Recent Posts
Advertisement