Advertisement

ನನ್ನ ಇಷ್ಟದ ಕೃತಿ - ಶ್ರೀವೇದವ್ಯಾಸ ಲೇಖಕರು: ಅಂಬ್ರಯ್ಯ ಮಠ

Advertisement

ಮೇರುಗುರು "ಶ್ರೀ ವೇದವ್ಯಾಸ" -- ಒಂದು ಪ್ರಬುದ್ಧ ಕೃತಿ.

ಕೃತಿ ವಿಶ್ಲೇಷಣೆ: -- ರಾಮಚಂದ್ರ. ಐ. ಎಂ.
(13 ಜನವರಿ 2024.)

ಪ್ರಕಾಶನ: ರಿಯಾ ಬುಕ್ ಹೌಸ್ ಮೈಸೂರು. ಪುಟ:‌ 500. ಬೆಲೆ: ರೂ 450/-

1) ಆ ಕೃತಿಯು ಏತಕ್ಕಾಗಿ ಇಷ್ಟ :. ಸುಂದರ ಮತ್ತು ಸರಳವಾದ ಭಾಷಾ ಶೈಲಿ ಮತ್ತು ಸುಲಲಿತವಾಗಿ ಓದಿಸಿಕೊಂಡು ಹೋಗುವ ಲೇಖಕರ ಕಥನ ಕಟ್ಟುವ ರೀತಿ ಇಷ್ಟವಾಗುತ್ತದೆ. ನನ್ನ ಬಾಲ್ಯದಲ್ಲಿ ತಂದೆಯವರು ಸುಶ್ರಾವ್ಯವಾಗಿ ತುರಂಗಭಾರತದ ಪದ್ಯಗಳನ್ನು ಹಾಡುತ್ತಿದ್ದಾಗ ಆಕರ್ಷಿತನಾಗಿದ್ದೆ. ಅವರು ಪುರಾಣ ಕತೆಗಳನ್ನು ವ್ಯಾಸ- ವಾಲ್ಮೀಕಿ- ರಾಮ- ಕೃಷ್ಣರ ಪುರಾಣ ಕತೆಗಳಿಗೆ ಕಿವಿಯಾಗುತ್ತಿದ್ದ ದಿನಗಳು ಅವು. . ಬೆಳೆದಂತೆ , ಸಹಜವಾಗಿ ಪೌರಾಣಿಕ ವಸ್ತು ಆಧಾರಿತ ಕೃತಿಗಳು ಕೈಬೀಸಿ ಕರೆಯತೊಡಗಿದವು. ದೇವುಡು , ನಾರಾಯಣಾಚಾರ್ಯ ಮತ್ತು ಇನ್ನಿತರರ ಕೃತಿಗಳನ್ನು ಓದುತ್ತಿದ್ದ ನನಗೆ , ಇಂದಿನ ಲೇಖಕರ ಕೃತಿಗಳು ಮತ್ತಷ್ಟು ಗಮನ ಸೆಳೆದವು. ಅದರಲ್ಲಿ ಮೇಲಿನ ಕೃತಿ ಹೆಚ್ಚು ಆಪ್ತವೆನಿಸಿತು. ಸಾಮಾನ್ಯವಾಗಿ ಪೌರಾಣಿಕ ವಸ್ತುವನ್ನು ಆಧರಿಸಿದ ಕೃತಿಗೆ ಭೂಯಿಷ್ಠ ಶೈಲಿ , ಕ್ಲಿಷ್ಟಕರ ಪದಪುಂಜ ಮತ್ತು ಗಂಭೀರ ಭಾಷಾಶೈಲಿಯೇ ಶೋಭೆ ಎಂಬ ಮನೋಭಾವವನ್ನು ಹೊರತುಪಡಿಸಿದ ವೈಚಾರಿಕ ಕಾದಂಬರಿ ಇದು. ಇಲ್ಲಿಯ ಸೊಗಸಾದ ಕಥನ ಕಟ್ಟುವ ಸರಳ ಶೈಲಿಯ ಕಾರಣಕ್ಕೆ ಈ ಕೃತಿ ಹೆಚ್ಚು ಇಷ್ಟವಾಗುತ್ತದೆ... ಪ್ರಾಯಶಃ ಎಲ್ಲರಿಗೂ . ನಾನು ಅದೆಷ್ಟೋ ಪೌರಾಣಿಕ ಕಾದಂಬರಿಗಳನ್ನು ಓದಿದ್ದೇನೆ. ಆದರೆ ಈ ಕಾದಂಬರಿ ನನ್ನನ್ನು ಹೆಚ್ಚು ಪ್ರಭಾವಿಸಿದ ಕೃತಿ .

ಇದರ ಲೇಖಕರು ಕರ್ನಾಟಕ ಪವರ್ ಕಾರ್ಪೊರೇಷನ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರು. ಈಗ ಮಲೆನಾಡಿನ ಸೆರಗೆನಿಸಿದ ಹೊಸನಗರದ ನಿವಾಸಿ. ಐತಿಹಾಸಿಕ ಮತ್ತು ಪೌರಾಣಿಕ ವಸ್ತು ಆಧರಿಸಿ ಬರೆವ ಉತ್ತಮ ಬರಹಗಾರರು. ಎಲೆ ಮರೆಯ ಕಾಯಿಯಂತೆ ಒಂದೊಂದೇ ಉತ್ಕೃಷ್ಟ ಕೃತಿಯನ್ನು ಓದುಗ ಪ್ರಪಂಚಕ್ಕೆ ಕೊಡುವವರು. ನೂರಾರು ಕೃತಿ ಬರೆಯಬೇಕೆಂದಿಲ್ಲ ; ಮುತ್ತಂತ ಒಂದೊಂದೇ ಕೃತಿ ನೇಯ್ದರೂ ಸಾಕು ಎಂಬ ಸಾಲಿನಲ್ಲಿ ನಿಂತವರು ಲೇಖಕ ಅಂಬ್ರಯ್ಯಮಠರು.

2) ಆ ಕೃತಿಯ ಕಥೆಯು ಎಂತಹದ್ದು:. ಇದು ಪೌರಾಣಿಕ ವಸ್ತು ಆಧಾರಿತ ಕೃತಿ. ಕಥಾಹಂದರ :-. ಸಾಮಾನ್ಯ ಬೆಸ್ತೆಯಾಗಿದ್ದ ಮತ್ಸ್ಯಗಂಧಿ ಎಂಬವಳಲ್ಲಿ ಋಷಿ ಪರಾಶರರ ಸಂಸರ್ಗದಿಂದ ಹುಟ್ಟಿದವರೇ ಕೃಷ್ಣ ದ್ವೈಪಾಯನ . ಯಮುನೆಯ ದ್ವೀಪದಲ್ಲಿ ಹುಟ್ಟಿದ ಕೃಷ್ಣ (--ಕೃಷ್ಣ ಎಂದರೆ ದ್ವಾರಕೆಯ ಶ್ರೀಕೃಷ್ಣ ಅಲ್ಲ .) ಬಾದರಾಯಣನಾಗಿ , ವ್ಯಾಸನಾಗಿ , ಮಹರ್ಷಿ ವೇದವ್ಯಾಸರಾಗುವ ಕತೆಯನ್ನೊಳಗೊಂಡ ಉತ್ಕೃಷ್ಟ ಕಾದಂಬರಿ. ಮಹಾಭಾರತ ಮತ್ತು ಭಾಗವತವೆಂಬ ಮಹಾಕಾವ್ಯಗಳ ಕರ್ತೃ ವೇದವ್ಯಾಸರೇ. ವ್ಯಾಸರು ಪಂಡಿತರಿಗೂ ಪಾಮರರಿಗೂ ಪೂಜನೀಯರೆನಿಸಲು ಲೇಖಕರು ವಿಸ್ತರಿಸುವ ವಿಶ್ಲೇಷಣೆ ಬಹು ಮನೋಜ್ಞವಾಗಿ ಮೂಡಿಬಂದಿದೆ.

3) ಆ ಕಥೆಯು ನಿಮ್ಮೊಂದಿಗೆ ಯಾವ ರೀತಿಯ ಬಾಂಧವ್ಯವನ್ನು ಹೊಂದಿದೆ:
ಗುರುಗಳಲ್ಲಿ ಗುರುವಾಗಿ ಅಪ್ರತಿಮ ಗುರುಶ್ರೇಷ್ಠರೆನಿಸುವ ಋಷಿ ಪರಂಪರೆಯ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರು ವೇದವ್ಯಾಸರು. ಪಂಡಿತರಷ್ಟೇ ಅಲ್ಲದೆ ಪಾಮರರಿಂದಲೂ ಪೂಜಿಸಲ್ಪಡುವ ಮಹನೀಯ ಪುರುಷರೇ ವ್ಯಾಸರು. ಹಾಗೆ ಪೂಜನೀಯರೆನಿಸಿಕೊಳ್ಳುವಲ್ಲಿ ಕಾರಣಗಳು ಬೇಕಷ್ಟೇ ! ಅವರ ಸಾಧನೆಯ ವಿವರಗಳನ್ನು ವಿಶ್ಲೇಷಣೆಯೊಂದಿಗೆ ಓದುಗನ ಮುಂದೆ ಹರವಿಡುವ ರೀತಿ ಉತ್ತಮವಾಗಿದೆ. ವ್ಯಾಸರ ಅನುಭವ , ಅನುಭಾವವನ್ನು ಮನಮುಟ್ಟುವಂತೆ ದಾಖಲಿಸಿದ ಕೃತಿ ಇದು. ಈ ದಿಸೆಯಲ್ಲಿ ಈ ಕೃತಿ ಸಂಪೂರ್ಣ ಯಶಸ್ವಿ ಎನಿಸುತ್ತದೆ.

ವ್ಯಾಸರ ಬದುಕಿನ ಘಟ್ಟಗಳನ್ನು ಆದ್ಯಂತವಾಗಿ ತೆರೆದಿಡಲ್ಪಟ್ಟಿದೆ. ಅದರಲ್ಲಿ ಬರುವ ಪಾತ್ರಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳುವ ತೆರದಲ್ಲಿವೆ.

ಋಷಿಮುನಿಗಳ ಪರಂಪರೆಯಲ್ಲಿ ಮಾತ್ರ ಉಳಿದು ಹರಿದು ಹಂಚಿ ಹೋಗಿದ್ದ ವೇದ ಮಂತ್ರಗಳನ್ನು ತಂದೆ ಪರಾಶರರ ಅನುಜ್ಞೆಯಂತೆ ಕ್ರೋಢೀಕರಿಸಿ , ವಿಂಗಡಿಸಿ ನಾಲ್ಕು ವೇದಗಳಾಗಿ ಅಕ್ಷರ ವಿನ್ಯಾಸಗೊಳಿಸುತ್ತಾರೆ ಬಾದರಾಯಣ ಕೃಷ್ಣ. ಬ್ರಹ್ಮಸೂತ್ರವನ್ನು ಬರೆದು ಕೆಲವರ ಸೊತ್ತಾಗಬಹುದಾಗಿದ್ದ ವೇದ ವಿಂಗಡಣೆ ಮಾಡಿದ ಘನ ಕಾರ್ಯಕ್ಕಾಗಿ ವೇದವ್ಯಾಸರೆನಿಸಿದರು.

ವಿಶೇಷವೆಂದರೆ ಮಹಾಭಾರತ ಕೃತಿ ರಚನೆಯಲ್ಲೂ ಇವರೇ ಒಂದು ಪಾತ್ರವಾಗಿ ಅನುಭವಿಸಿಕೊಳ್ಳುತ್ತಾರೆ. ಆ ಕಾರಣದಿಂದ ಇವರ ಬದುಕಿನ ಮಾನವೀಯ ಅನುಭವ , ಅನುಭಾವ , ಮಾನವೀಯ ಭಾವನೆಗಳಿಗೆ ಓಗೊಡುವ ಇವರ ಅಂತರಾಳವನ್ನು ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ.

ಹಸ್ತಿನಾವತಿಯ ರಾಣಿಯರಿಬ್ಬರಿಗೆ ನಿಯೋಗದ ಮೂಲಕ ಮಕ್ಕಳನ್ನು ಹೊಂದಿಸಿದ ಮೇಲೂ ತನ್ನವನೇ ಆದ ಮತ್ತೊಬ್ಬ ಮಗ ಬೇಕು ಎಂಬ ಬಯಕೆ ಇವರನ್ನು ಕಾಡುತ್ತದೆ. ಆದರೆ ಅದು ತನ್ನುದ್ಧಾರಕ್ಕೆ ಅಲ್ಲ ; ತನ್ನಲ್ಲಿದ್ದ ಜ್ಞಾನನಿಧಿಯ ಲೋಕೋದ್ಧಾರ ಹಂಚಿಕೆಗೆ ಸಮರ್ಥ ಜ್ಞಾನಿ ಬೇಕೆನ್ನುವ ಹಪಹಪಿಕೆ ಇವರದ್ದು. ಋಷಿಪರಂಪರೆ ಮುಂದುವರಿಯಬೇಕೆಂಬುದು ಮಹದಾಸೆ. ಮಹಾದೇವನ ಆಶೀರ್ವಾದ ಪಡೆದೇ " ಶುಕ" ಎಂಬ ಮತ್ತೊಬ್ಬ ಮಗನನ್ನು ಪಡೆಯುತ್ತಾರೆ. ಅವನೂ ಮತ್ತೊಬ್ಬ ಜ್ಞಾನಿಯೇ. ಆದರೆ ಅವನು ಸಾಂಸಾರಿಕ ಬಂಧನದಲ್ಲೂ ಸಿಲುಕದೆ ತನ್ನ ಅಲ್ಪಾಯುಷ್ಯದಲ್ಲಿಯೇ ಜನ ಸಂಪ್ರೀತಗೊಳಿಸಿ ಕತ್ತಲೆಯಲ್ಲಿದ್ದ ಜನರಿಗೆ " ಬೆಳಕಾ"ಗಿ ಹೋಗಿಬಿಡುತ್ತಾನೆ. ಅಂತಹ ಸಂದರ್ಭದಲ್ಲಿ ವ್ಯಾಸರು ತಾನೊಬ್ಬ ತಂದೆಯಾಗಿ , ಋಷಿಯಾಗಿ , ಗುರುವಾಗಿ , ಜನಮಾನ್ಯರಂತೆ ಅನುಭವಿಸುವ ಸಂಕಟವನ್ನು ಸವಿಸ್ತಾರವಾಗಿ ಕೃತಿಯಲ್ಲಿ ಕಾಣಬಹುದು.

ಉನ್ನತ ವ್ಯಕ್ತಿತ್ವದ ವ್ಯಾಸರು ಬದುಕಿನಲ್ಲಿ ನಿರ್ಧಾರಿತ ಘಟ್ಟದಲ್ಲಿ ಹೆಜ್ಜೆ ಇಡುವ ಮೊದಲು ವಿವೇಚನೆಯಿಂದ ವ್ಯವಹರಿಸಿ ಎಚ್ಚರ ತಪ್ಪದ ನಡೆ ಇಡುತ್ತಾರೆ. ಹಸಿನಾವತಿಯ ರಾಣಿಯರಿಗೆ ನಿಯೋಗ ಕಲ್ಪಿಸುವ ಸಂದರ್ಭದಲ್ಲಿಯಾಗಲಿ , ವೇದಗಳನ್ನು ವಿಂಗಡಿಸುವ ಮಹತ್ಕಾರ್ಯದಲ್ಲಾಗಲಿ , ತನ್ನ ತಪಃಶಕ್ತಿಯನ್ನು ಧಾರೆ ಎರೆಯುವ ಹೊತ್ತಿನಲ್ಲಾಗಲಿ ಕಪ್ಪು ಚುಕ್ಕೆ ಇರದಂತೆ ನಡೆದುಕೊಳ್ಳುತ್ತಾರೆ. ತನ್ನ ತಪಃಶಕ್ತಿಯನ್ನು ಧಾರೆ ಎರೆಯುವ ಸಂದರ್ಭದಲ್ಲಿ ಪೈಲ , ಇನ್ನಿತರ ಮಹಿಮರನ್ನು ಬಿಟ್ಟು ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಸುಮಂತನಿಗೆ ಧಾರೆಯೆರೆಯುತ್ತಾರೆ. ಆ ಕಾರಣಕ್ಕಾಗಿಯೇ ವೇದವ್ಯಾಸರು ಮೇರು ಪುರುಷ ವ್ಯಾಸ ಎಣಿಸಿಕೊಳ್ಳುವರು.

ಮಗ ಶುಕನ ಮರಣದ ಶೋಕ ವ್ಯಾಸರನ್ನೂ ತಟ್ಟದೇ ಬಿಡುವುದಿಲ್ಲ. ಅನುಭವಿಸಿದ ಪುತ್ರಶೋಕ ಹೃದಯಸ್ಪರ್ಶಿಯಾಗಿದೆ. ಹಸ್ತಿನಾವತಿಯ ವಿಭಿನ್ನ ಸನ್ನಿವೇಶಗಳ ಚಿತ್ರಣ , ಮತ್ತು ಪಾತ್ರಗಳ ಮಧ್ಯೆ ಬರುವ ಸಂಭಾಷಣೆಯ ಚುರುಕು ಮತ್ತು ಪರಿಕಲ್ಪನೆಗಳು ಕೃತಿಯ ವೈಚಾರಿಕ ಶ್ರೇಷ್ಟತೆಗೆ ಮೆರುಗು ನೀಡುತ್ತದೆ. ಒಟ್ಟಾರೆಯಾಗಿ ವೇದವ್ಯಾಸರ ಬದುಕಿನ ಘಟ್ಟಗಳ ವಿಸ್ತೃತ ಚಿತ್ತಾಕರ್ಷಕ ಚಿತ್ರಣ ಇಲ್ಲಿದೆ.

ಈ ಕೃತಿಯಲ್ಲಿ ಮಹಾಭಾರತದಲ್ಲಿ ಬರುವ ಹಲವು ಪಾತ್ರಗಳ ಸಾಂಗತ್ಯವಿದೆ.. ; ಹಸಿನಾವತಿಗೆ ವಾರಸುದಾರನನ್ನು ಕೊಡಲು ವಿಫಲಳಾಗುವ ರಾಣಿ ಸತ್ಯವತಿಯ ಸಂಕಟದ ಸ್ಪಷ್ಟ ಚಿತ್ರಣವಿದೆ. ಸಿಂಹಾಸನದ ರಕ್ಷಣೆಯ ಭಾರ ಹೊತ್ತ ಭೀಷ್ಮರ ವ್ಯಕ್ತಿತ್ವದ ಘನತೆಯ ವಿವರ ಇದೆ ; ಭಾನುಮತಿಯ ಅಂತರಂಗದಿಂದ ಹಿಡಿದು ದಾಸಿಯೊಬ್ಬಳ ತಾಕಲಾಟದ ದನಿಗೆ ಕಿವಿಯಾಗುವ ಕತೆ ಇದೆ. ಇವೆಲ್ಲದರ ಜೊತೆಗೆ ಪಾರಮಾರ್ಥಿಕ ವೈಚಾರಿಕತೆಯನ್ನು ಸಮರ್ಥಿಸುವಲ್ಲಿ ಆಧಾರಿತ ಶ್ಲೋಕಗಳ ಪರಿಚಯವೂ ಇಲ್ಲಿದೆ. ಪೌರಾಣಿಕ ವಸ್ತುವಿರುವ ಕೃತಿಗಳಲ್ಲಿ ಸದಾ ಕಾಡುವ, ಮರೆಯಲಾಗದ ಕೃತಿ. ವ್ಯಾಸರ ಬದುಕನ್ನು ತಿಳಿದುಕೊಳ್ಳುವ ಕುತೂಹಲವನ್ನು ತಣಿಸುವ ಕೃತಿಯಿದು . ಆ ಕಾರಣಕ್ಕಾಗಿಯೇ ಇದೊಂದು "ಘಟ್ಟಿ ಕೃತಿ" ಎನಿಸಿಕೊಳ್ಳುತ್ತದೆ.

ಎಳ್ಳು-ಬೆಲ್ಲ ಮೆಲ್ಲೋಣ..ಎಲ್ಲರ ಮನವ ಗೆಲ್ಲೋಣ!

Advertisement
Advertisement
Recent Posts
Advertisement