- ಮರವಂತೆ ಜಾತ್ರೆ :
ಬಡ ಹಣ್ಣುಕಾಯಿ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ...?
- ಡಾ.ಸುಬ್ರಹ್ಮಣ್ಯ ಭಟ್, ಬೈಂದೂರು.
ದೇವಸ್ಥಾನಗಳು ಭಕ್ತರು ತಮ್ಮ ಕಷ್ಟನಷ್ಟಗಳನ್ನು ಪರಿಹಸರಿಸುವಂತೆ ಬೇಡಿಕೊಳ್ಳುವ ಹಾಗೂ ಅದಕ್ಕಾಗಿ ಹರಕೆ ಸಲ್ಲಿಸುವ ಸ್ಥಳ. ತಮ್ಮ ಹರಕೆ, ನಂಬಿಕೆಗೆ ಅನುಗುಣವಾಗಿ ಹಣ್ಣು ಕಾಯಿ ಹೂವನ್ನು ತಂದು ದೇವರಿಗೆ ಅರ್ಪಿಸುವುದು ವಾಡಿಕೆ. ತಮ್ಮ ಮನೆಯಲ್ಲಿ ಬೆಳೆದ ಹೂವು ಹಣ್ಣನ್ನು, ಕಾಯಿಯನ್ನು ಅತಿ ಶೃದ್ದೆಯಿಂದ ತಂದು ದೇವರೆದುರು ನಿವೇದಿಸಿಕೊಳ್ಳುತ್ತಾರೆ. ಹಾಗೆ ಮನೆಯಿಂದ ತರಲು ಆಗದವರು ದೇವಸ್ಥಾನದ ಹೊರಗಿರುವ ಹೂವು ಹಣ್ಣಿನಂಗಡಿಯಲ್ಲಿ ಅವನ್ನು ಖರೀದಿಸಿ ತರುತ್ತಾರೆ. ಇದರಿಂದ ಭಕ್ತರಿಗೂ ಸಮಾಧಾನ, ಹೂವು ಹಣ್ಣು ಮಾರುವವರಿಗೂ ಜೀವನ...
ಆದರೆ ಮರವಂತೆಯ ಮಹಾರಾಜಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಇದೇ ಆಗಸ್ಟ್ 4 ರಂದು ಜರಗುವ ಕರ್ಕಾಟಕ ಅಮವಾಸ್ಯೆಯ ವರ್ಷಂಪ್ರತಿ ಜಾತ್ರೆಗೆ ಮನೆಯಿಂದ ಅಥವಾ ಹೊರಗಿನಿಂದ ಹೂವು ಹಣ್ಣು ಕಾಯಿ ತರಬಾರದು, ಕೇವಲ ದೇವಸ್ಥಾನದೊಳಗೆ ಇರುವ ಹೂವು ಹಣ್ಣು ಕಾಯಿಯನ್ನೇ ಖರೀದಿಸಿ ದೇವರಿಗೆ ಅರ್ಪಿಸಬೇಕು ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದರು. ಇದಕ್ಕೆ ಮುಖ್ಯ ಕಾರಣ ಜಾತ್ರೆಯಲ್ಲಿ ಹೂವು ಹಣ್ಣು ಕಾಯಿ ಮಾರುವ ವ್ಯಾಪಾರಸ್ಥರಿಗೆ ವ್ಯಾಪಾರ ಆಗಬಾರದೆಂಬುದು. ಈ ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದು ಇವರುಗಳು ಅದೇನು ಘನಂದಾರಿ ಕಾಯಕ ಮಾಡುತ್ತಾರೋ ನಾ ಕಾಣೆ... ಈ ಕುರಿತು ಗ್ರಾಮಸ್ಥರು ನೀಡಿದ ದೂರಿಗೆ ಸ್ಪಂದಿಸಿದ ಧಾರ್ಮಿಕ ದತ್ತಿ ಇಲಾಖೆ ಭಕ್ತರು ತರುವ ಹೂವುಹಣ್ಣು ಕಾಯಿಯನ್ನು ನಿರಾಕರಿಸುವಂತಿಲ್ಲ ಎಂದು ನಿರ್ದೇಶನ ನೀಡಿ, ವ್ಯವಸ್ಥಾಪನಾ ಸಮಿತಿ ಸರ್ವಾಧಿಕಾರಿ ಧೋರಣೆಗೆ ಬ್ರೇಕ್ ಹಾಕಿದೆ...
ನೋಡಲು ಇದು ಸಣ್ಣ ಘಟನೆ ಅನ್ನಿಸಬಹುದು ಆದರೆ ಇದರ ಹಿಂದೆ ಮುಂದೆ ಯೋಚಿಸಿದರೆ ಇದು ಏಕಾಗಿ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸುಮಾರು ಎರಡು ವರ್ಷಗಳಿಂದ ಪ್ರಾರಂಭವಾದ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರದ ಮುಂದುವರೆದ ಭಾಗ ಇದು...! ಹೌದು ಈ ಆಷಾಢಭೂತಿಗಳ ರಹಸ್ಯ ಕಾರ್ಯಸೂಚಿ ಇದು. ಮೊದಲು ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಿ, ಹಿಂದುತ್ವ ಜಾಗೃತಿ ಮಾಡಿದಂತೆ ನಾಟಕ ಮಾಡುವುದು, ಅನಂತರ ಹಿಂದುಳಿದ ವರ್ಗ, ದಲಿತ ವ್ಯಾಪಾರಿಗಳನ್ನು ಅಂಗಡಿಯನ್ನೇ ಹಾಕದಂತೆ ತಡೆಯುವುದು.
ಬಹುತೇಕ ಹೂವು ಹಣ್ಣು ಕಾಯಿ ಅಂಗಡಿಗಳು ಇದೇ ವರ್ಗದವರದ್ದೇ.. ಹಾಗಾಗಿ ಹಣ್ಣು ಕಾಯಿಯನ್ನು ದೇವಸ್ಥಾನದ ಒಳಗಡೆ ಮಾತ್ರ ಇರಿಸಿದರೆ ಅವರು ಅಂಗಡಿ ಹಾಕುವುದದಾದರೂ ಹೇಗೆ...? ಪರೋಕ್ಷವಾಗಿ ಈ ಬಡವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವ ಷಡ್ಯಂತ್ರವಿದು. ಅಂದು ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿದಾಗ ಒಳಗೊಳಗೆ ಖುಷಿ ಪಟ್ಟವರು ಈಗ ಹೂವು ಹಣ್ಣು ಕಾಯಿ ವ್ಯಾಪಾರವೇ ಇಲ್ಲದಂತೆ ವ್ಯವಸ್ಥಾಪನಾ ಸಮಿತಿ ಮಾಡುವಾಗ ಏನು ಹೇಳುತ್ತಾರೆ...? ಅದಕ್ಕಾಗಿ ಈ ಪಟ್ಟಭದ್ರರ ಟಾರ್ಗೆಟ್ ಮುಸ್ಲಿಂರಲ್ಲ, ಕ್ರಿಶ್ಚಿಯನ್ನರಲ್ಲ, ಬದಲಿಗೆ ಹಿಂದುಳಿದವರು, ದಲಿತರು...!
ನಿಜ, ಈ ವರ್ಗದವರು ಉದ್ದಾರವಾದರೆ ತಮ್ಮ ಅಸ್ತಿತ್ವಕ್ಕೆ ಪೆಟ್ಟು ಬೀಳುತ್ತದೆ ಎನ್ನುವ ಭಯ ಇವರಲ್ಲಿ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ದೇವರು, ಧರ್ಮ, ಸಂಪ್ರದಾಯ, ಸಂಸ್ಕಾರ ಮೊದಲಾದ ಹೆಸರಿನಲ್ಲಿ ಅವರನ್ನು ನಿರುದ್ಯೋಗಿಗಳಾಗಿಸುವ, ಬಹಿಷ್ಕರಿಸುವ, ಮೂಲೆಗುಂಪಾಗಿಸುವ ನಿರಂತರ ಪ್ರಯತ್ನ ಸಾಗುತ್ತಲೇ ಇದೆ. ಇದಾವುದರ ಅರಿವಿಲ್ಲದ ಹಿಂದುಳಿದ, ದಲಿತ ಯುವಜನತೆ ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎಂದು ಜೈಕಾರ ಹಾಕುತ್ತಿದ್ದಾರೆ. ದೇವಸ್ಥಾನದ ಹೆಸರಲ್ಲಿ ವ್ಯವಸ್ಥಾಪನಾ ಸಮಿತಿಯ ಮೂಲಕ ನಡೆಯುವ ಈ ದೌರ್ಜನ್ಯವನ್ನು ಎಲ್ಲರೂ ಸೇರಿ ಪ್ರತಿಭಟಿಸಬೇಕು. ಬಡ ವ್ಯಾಪಾರಿಗಳಿಗೆ ನ್ಯಾಯ ಕೊಡಿಸುವ ಕಾಯಕ ಮಾಡಬೇಕಿದೆ.