"ಶಿಸ್ತು, ಸಭ್ಯತೆ ಹಾಗೂ ವಿನಯತೆ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯ ಮೂಲ ಅಂಶವಾಗಿವೆ. ಒಗ್ಗಟ್ಟು ಹಾಗೂ ಏಕತೆ ನಮ್ಮ ಮೊದಲ ಆದ್ಯತೆ. ಪಕ್ಷದಲ್ಲಿ ಯಾರು ಎಷ್ಟೇ ದೊಡ್ಡವರಾಗಿರಲಿ ಅಥವಾ ಸಣ್ಣವರಾಗಿರಲಿ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಅಭಿಪ್ರಾಯ ಹಾಗೂ ಧ್ವನಿ ನಮಗೆ ಅಮೂಲ್ಯವಾಗಿದ್ದು, ಅವುಗಳನ್ನು ಗೌರವಿಸುತ್ತೇವೆ. ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸದಸ್ಯರಿಗೆ ಈ ಅಭಿಪ್ರಾಯ ಹಾಗೂ ಸಲಹೆಗಳು ಎಷ್ಟರ ಮಟ್ಟಿಗೆ ಅಗತ್ಯವಿದೆ, ಅವು ಯಾವ ಮಟ್ಟದಲ್ಲಿವೆ ಎಂಬುದನ್ನು ಪಕ್ಷ ಪರಿಶೀಲಿಸುತ್ತದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ಅವರ ಹೇಳಿಕೆ ನೀಡಿದ್ದಾರೆ.
"ಬಹುಮತದೊಂದಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಹೊಸ ಪ್ರಯತ್ನಕ್ಕೆ ಮುಂದಾಗಿವೆ. ಘನ ಉಚ್ಛ ನ್ಯಾಯಾಲಯದ ತೀರ್ಪಿನ ನಂತರ ಮುಂದಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅವರ ಕಾನೂನು ಸಲಹೆಗಾರರು ತೀರ್ಮಾನ ಮಾಡಲಿದ್ದು, ಇಡೀ ಪಕ್ಷ ಅವರ ಬೆನ್ನಿಗೆ ನಿಲ್ಲಲಿದೆ. ಈ ಹೋರಾಟದಲ್ಲಿ ಅವರು ದೋಷಮುಕ್ತರಾಗಿ ಹೊರಬರಲಿದ್ದಾರೆ ಎಂಬ ವಿಶ್ವಾಸ ನಮ್ಮದಾಗಿದೆ. ಇದಾಗ್ಯೂ "ಮುಖ್ಯಮಂತ್ರಿ ಹುದ್ದೆ, ಸರ್ಕಾರ ಹಾಗೂ ಪಕ್ಷದ ವಿಚಾರ"ವಾಗಿ ಹಿರಿಯ ನಾಯಕರಾದ ಕೆ.ಬಿ ಕೋಳಿವಾಡ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರಿಂದಾಗಲಿ ಅಥವಾ ಬೇರೆಯವರಿಂದಾಗಲಿ ಇಂತಹ ಹೇಳಿಕೆಗಳು ಬಂದರೆ ಅದು ಖಂಡನಾರ್ಹವಾಗಿದ್ದು, ಇಂತಹ ಹೇಳಿಕೆಗಳನ್ನು ಯಾರೂ ನೀಡಬಾರದು" ಎಂದವರು ಕರೆ ನೀಡಿದ್ದಾರೆ.
"ಕರ್ನಾಟಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಕರ್ನಾಟಕ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ಪಕ್ಷದ ಒಳಗೆ ಪಕ್ಷದ ನಿಲುವಿಗೆ ಭಿನ್ನವಾದ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ನಿಲುವನ್ನು ಪ್ರಶ್ನಿಸುವಂತಹ ಹೇಳಿಕೆಗಳು ಬರಬಾರದು. ಇಂತಹ ಹೇಳಿಕೆ ಕೊಟ್ಟರೆ ಹಿರಿತನದ ಮುಲಾಜು ನೋಡುವುದಿಲ್ಲ" ಎಂದು ಚಂದ್ರಶೇಖರ್ ಅವರು ಎಚ್ಚರಿಕೆ ನೀಡಿದ್ದಾರೆ.
"ಕಾಂಗ್ರೆಸ್ ಪಕ್ಷ ಸದಾ ಆಂತರಿಕ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಿದೆ. ಯಾರಾದರೂ ಪಕ್ಷದ ನಿಲುವಿಗೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಬೇಕಾದಲ್ಲಿ, ಅದನ್ನು ಪಕ್ಷದ ವೇದಿಕೆಯೊಳಗೆ ಮಾತ್ರ ವ್ಯಕ್ತಪಡಿಸಬೇಕು. ಯಾವುದೇ ವಿಚಾರವಾದರೂ ಇಂತಹ ಹೇಳಿಕೆಗಳನ್ನು ಸ್ವೀಕರಿಸಲು ಎಐಸಿಸಿ ಹಾಗೂ ಕೆಪಿಸಿಸಿಯು ಸೂಕ್ತ ವ್ಯವಸ್ಥೆ ಹೊಂದಿದೆ. ಈ ವ್ಯವಸ್ಥೆಯೊಳಗೆ ಮಾತ್ರ ಇಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಮಾಧ್ಯಮಗಳ ಮುಂದೆ ಪಕ್ಷದ ನಿಲುವಿಗೆ ಭಿನ್ನವಾಗಿ ಹೇಳಿಕೆ ನೀಡಿ ಪಕ್ಷದ ನಾಯಕರ ಬಗ್ಗೆ ಮಾತನಾಡಿ ಮುಜುಗರ ತರುವುದನ್ನು ಪಕ್ಷ ಸಹಿಸುವುದಿಲ್ಲ. ಪಕ್ಷದಲ್ಲಿ ಕಟ್ಟುನಿಟ್ಟಾಗಿ ಶಿಸ್ತು ಪಾಲಿಸಬೇಕು. ಇಲ್ಲಿ ಪಕ್ಷಕ್ಕಿಂತ ಯಾರೊಬ್ಬರೂ ದೊಡ್ಡವರಿಲ್ಲ" ಎಂದಿದ್ದಾರೆ.
"ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಈ ಹಿಂದೆ ಇಂತಹ ಅನೇಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಪಕ್ಷದಲ್ಲಿ ಯಾರು ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿದ್ದರೂ ಪಕ್ಷದ ಶಿಸ್ತು ಪಾಲನೆ ಕಡ್ಡಾಯವಾಗಿದೆ. ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದ್ದು ಮುಖ್ಯಮಂತ್ರಿಗಳು ಹಾಗೂ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮದು ಒಂದೇ ಧ್ವನಿಯಾಗಿದ್ದು, ನ್ಯಾಯದ ಗೆಲುವಿಗೆ ಹೋರಾಟ ಮುಂದುವರಿಸಲಾಗುವುದು" ಎಂದು ಚಂದ್ರಶೇಖರ್ ಹೇಳಿದರು.