Advertisement

ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ಅರ್ನಬ್ ಗೋಸ್ವಾಮಿಯ ವಾಟ್ಸ್ಯಾಪ್ ಚಾಟ್‌ನಿಂದ ಬಹಿರಂಗಗೊಂಡ ಸತ್ಯವೇನು?

Advertisement

ಒಂದು ವರ್ಷದ ಹಿಂದಿನ ಪುಲ್ವಾಮಾ ಮತ್ತು ಬಾಲಕೋಟ್ ದಾಳಿ ಘಟನೆಗಳ ಕುರಿತು ಇದೀಗ ಮರು ಚರ್ಚೆ ಆರಂಭಗೊಳ್ಳಲು, ಅರ್ನಾಬ್ ಗೋಸ್ವಾಮಿ ಎಂಬ ಕಟ್ಟರ್ ಬಿಜೆಪಿ ಪರ ಟಿವಿ ನಿರೂಪಕ ಮತ್ತು BARC (ಬ್ರಾಡ್ ಕಾಸ್ಟ್ ಅಡಿಯನ್ಸ್ ರಿಸರ್ಚ್ ಕೌನ್ಸಿಲ್)ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ನಡುವಿನ ಬಾಲಕೋಟ್ ದಾಳಿಯ ಮೂರು ದಿನಗಳ ಮೊದಲಿನ (ಅಂದರೆ 2019 ಫೆಬ್ರವರಿ 23ರ) 'ಬಹಿರಂಗ' ಗೊಂಡಿವೆಯೆನ್ನಲಾದ ವಾಟ್ಸ್ಯಾಪ್ ಚಾಟ್‌ನ ಮಾಹಿತಿಗಳು ಕಾರಣವಾಗಿವೆ. ಟಿಆರ್‌ಪಿ ಹಗರಣದ ತನಿಖೆಯನ್ನು ನಡೆಸುತ್ತಿರುವ ಮುಂಬೈ ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸುಮಾರು 3400ಕ್ಕೂ ಹೆಚ್ಚು ಪುಟಗಳ ಪೂರಕ ಆರೋಪಪಟ್ಟಿಯಲ್ಲಿ ಅರ್ನಬ್‌ ಹಾಗೂ ದಾಸ್ ಗುಪ್ತಾ ನಡುವಿನ ವಾಟ್ಸ್ಯಾಪ್ ಚಾಟ್‌ನ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಚಾಟ್‌ನ ನಡುವೆ '....ಮತ್ತೊಂದು ವಿಚಾರವೇನೆಂದರೆ, ಎನೋ ದೊಡ್ಡದೊಂದು ಸಂಭವಿಸಲಿದೆ' ಎಂದು ಅರ್ನಬ್ ಚಾಟ್ ಮಾಡಿದ್ದು, 'ದಾವೂದ್ ಇಬ್ರಾಹಿಮ್ ಬಂಧನವೇ?' ಎಂದು ದಾಸ್‌ಗುಪ್ತಾ ಪ್ರಶ್ನಿಸುತ್ತಾರೆ. ಅದಕ್ಕೆ ಅರ್ನಬ್ 'ಇಲ್ಲ ಸರ್, ಪಾಕಿಸ್ತಾನ... ಈ ಬಾರಿ ಎನೋ ಒಂದು ನಡೆಯಲಿದೆ, ನೋಡುತ್ತಿರಿ!' ಎನ್ನುತ್ತಾರೆ. 'ದಾಳಿಯೇ ಅಥವಾ ಅದಕ್ಕಿಂತಲೂ ದೊಡ್ಡದೇನಾದರೂ?' ಎಂಬ ದಾಸ್‌ಗುಪ್ತಾ ಪ್ರಶ್ನೆಗೆ 'ಅದು ಸಾಮಾನ್ಯವಾದ ದಾಳಿಯಾಗಿರದೆ ದೊಡ್ಡದೇ ಆಗಿರುತ್ತದೆ. ಕಾಶ್ಮೀರದ ಕುರಿತು ಯಾವುದಾದರೊಂದು ಪ್ರಮುಖ ಬೆಳವಣಿಗೆಯ ಕಾಲದಲ್ಲೇ ನಡೆಯಲಿದೆ. ದೇಶದ ಜನರ ಗಮನಸೆಳೆವ ಯಾ ಸಂಭ್ರಮಿಸುವ ರೀತಿಯಲ್ಲಿ ದಾಳಿ ನಡೆಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ತಯಾರಿ ನಡೆಸಿದೆ' ಎಂಬರ್ಥದಲ್ಲಿ ಅರ್ನಬ್ ಉತ್ತರಿಸುತ್ತಾರೆ. 'ಹೌದೇ, ಹಾಗಾದರೆ ಇದು ದೊಡ್ಡವ್ಯಕ್ತಿ (ಮೋದಿ) ಯ ಪಾಲಿಗೆ ಶುಭಸುದ್ದಿಯಾಗಲಿದೆ ಮತ್ತದು ಅವರು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ನೆರವಾಗಲಿದೆ' ಎನ್ನುತ್ತಾರೆ ಮತ್ತು ಟಿವಿಯಲ್ಲಿ ಝಾನ್ಸಿ ರಾಣಿ ಎಂದು ಕೊಂಡಾಡುವ ಅರ್ನಬ್ ಈ ಚಾಟ್‌ನಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕುರಿತು ಅಶ್ಲೀಲವಾಗಿ ವಿಶ್ಲೇಷಿಸುತ್ತಾರೆ. ಅಲ್ಲದೆ ಹಲವಾರು ಚಾಟ್‌ನಲ್ಲಿ ಅರ್ನಬ್ ಗೋಸ್ವಾಮಿ ಪ್ರಧಾನಿ ಕಚೇರಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆ ಹೊಂದಿರುವ ನಿಕಟ ಸಂಬಂಧದ ಬಗೆಗೂ ಕೂಡ ಹೇಳಿಕೊಂಡಿದ್ದಾರೆ. (ಈ ಚಾಟ್ 2019 ಪೆಬ್ರವರಿ 23 ರಂದು ನಡೆಯುತ್ತದೆ) ಹಾಗಾದರೆ, ಪುಲ್ವಾಮಾ ದಾಳಿಯ ನಂತರದ ಕೇವಲ 12ದಿನಗಳಲ್ಲಿ ನಡೆಸಲಾಗಿತ್ತು ಎನ್ನಲಾದ ಬಾಲಕೋಟ್ ದಾಳಿ ಕುರಿತಾದ ದೇಶದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗುಪ್ತ ದಾಳಿಯ ಮಾಹಿತಿ 3ದಿನಗಳ ಮೊದಲೇ ಈ ಅರ್ನಾಭ್ ಗೋಸ್ವಾಮಿ ಎಂಬ ಎಡಬಿಡಂಗಿ, ಬಾಯಿಬಡುಕ ಪತ್ರಕರ್ತನಿಗೆ ದೊರಕಿದ್ದು ಹೇಗೆ? ಅತೀ ಮಹತ್ವದ ಬಾಲಕೋಟ್ ದಾಳಿಯಂತಹ ಭಾರತೀಯ ವಾಯುಸೇನೆಯ ಈ ಅತಿಗುಪ್ತ ಕಾರ್ಯಾಚರಣೆಯ ಬಗ್ಗೆ ಈತನಿಗೆ ಮಾಹಿತಿ ಕೊಟ್ಟವರಾದರೂ ಯಾರು? ಮೋದಿಯ ಆಡಳಿತದಲ್ಲಿ ಇಂತಹ ಗುಪ್ತ ಮಾಹಿತಿಗಳು ಕೂಡಾ ಸೋರಿಕೆಯಾಗುತ್ತವೆ ಎಂದಾದರೆ ಪುಲ್ವಾಮಾ ದಾಳಿ ಹಿಂದೆಯೂ ಕೂಡ ಇದೇ ದೇಶದ್ರೋಹಿಗಳ ಕೈವಾಡ ಇದ್ದಿರಲಿಲ್ಲ ಎಂದರೆ ನಂಬಲಾದೀತೆ? ಪುಲ್ವಾಮ ದಾಳಿ ಪೂರ್ವನಿರ್ಧರಿತವಲ್ಲ ಎನ್ನಲಾದೀತೇ? ಚುನಾವಣಾ ಫಲಿತಾಂಶಕ್ಕಾಗಿ ಅಥವಾ ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಪಡೆದುಕೊಳ್ಳಲಾಗಿಲ್ಲ ಎಂದರೆ ನಂಬಲಾದೀತೆ? ಈ ಕುರಿತು ತನಿಖೆ ಬೇಡವೇ? ಅದಲ್ಲವಾದರೆ, ಜಮ್ಮು - ಶ್ರೀನಗರ ಹೆದ್ದಾರಿ ಎಂದು ಕರೆಸಿಕೊಳ್ಳುವ ಎನ್‌ಎಚ್‌-44 ದೇಶದ ಅತ್ಯಂತ ಹೆಚ್ಚಿನ ಭದ್ರತೆ ಇರುವ ಹೆದ್ದಾರಿ. ಇದರ ಇಕ್ಕೆಲಗಳಲ್ಲಿ ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ತಂಡಗಳಿರುತ್ತವೆ. ಈ ತಂಡಗಳು ವಾಹನಗಳನ್ನು ತಪಾಸಣೆ ಮಾಡಿಯೇ ಹೆದ್ದಾರಿಯೊಳಕ್ಕೆ ಚಲಿಸಲು ಅವಕಾಶ ಮಾಡಿ ಕೊಡುತ್ತವೆ. ಚೆಕ್‌ಪೋಸ್ಟ್‌, ಟೋಲ್‌ಗಳಲ್ಲಿಯೂ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಹೆದ್ದಾರಿಯುದ್ದಕ್ಕೂ ಸಿಆರ್‌ಪಿಎಫ್‌ ಸೈನಿಕರು ಪಹರೆ ಕಾಯುತ್ತಿರುತ್ತಾರೆ. ಯಾವುದೇ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಕ್ವಿಕ್‌ ರೆಸ್ಪಾನ್ಸ್‌ ತಂಡಗಳಿವೆ. ಜತೆಗೆ ನಗರ ಪ್ರದೇಶಗಳು ಬರುವಲ್ಲಿ ಸಿಸಿಟಿವಿಯ ದೊಡ್ಡ ಜಾಲವೇ ಇದೆ. ಹೀಗಿದ್ದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳನ್ನು ಹೊಂದಿದ್ದ ಕಾರು ಹೆದ್ದಾರಿಯನ್ನು ಹೇಗೆ ಪ್ರವೇಶಿಸಿತು? ದಾಳಿ ಮಾಡಿದ ರೀತಿ, ಹೊಂದಿದ್ದ ಸ್ಫೋಟಕಗಳನ್ನು ನೋಡಿದರೆ ಇದಕ್ಕೆ ತಿಂಗಳಾನುಗಟ್ಟಲೆ ಯೋಜನೆ ರೂಪಿಸಲಾಗಿದೆ ಎಂದು ಅನ್ನಿಸುತ್ತದೆ. ಹಾಗಿದ್ದರೆ ಇವೆಲ್ಲಾ ಗುಪ್ತಚರ ಇಲಾಖೆಗಳ ಕಣ್ಣಿಗೆ ಬೀಳಲೇ ಇಲ್ಲವೇ ಅಥವಾ ಎಲ್ಲರೂ ನಿರ್ಲಕ್ಷಿಸುವ ದಿನನಿತ್ಯದ ಎಚ್ಚರಿಕೆಗಳನ್ನು ನೀಡುವುದಕ್ಕೆ ಮಾತ್ರ ಗುಪ್ತಚರ ಇಲಾಖೆಗಳು ಸೀಮಿತ ಗೊಂಡವೇ? ಜನಸಾಮಾನ್ಯರ ಎಲ್ಲಾ ವಾಹನಗಳನ್ನು ಪರಿಶೀಲನೆ ನಡೆಸಬೇಕು ಎಂಬ ನಿಯಮವಿದೆ. ಹೀಗಿರುವಾಗ 22 ವರ್ಷದ ಉಗ್ರನೊಬ್ಬ ಅಷ್ಟೆಲ್ಲಾ ಸ್ಫೋಟಕಗಳನ್ನು ತುಂಬಿಕೊಂಡು 78 ವಾಹನಗಳಿದ್ದ ಸಿಆರ್‌ಪಿಎಫ್‌ ಕನ್ವಾಯ್‌ ಮಧ್ಯೆ ಬರುವಾಗ ಯಾರೂ ಪರಿಶೀಲನೆ ನಡೆಸಲೇ ಇಲ್ಲವೇ? ಭದ್ರತಾ ಸಂಸ್ಥೆಗಳಿಗೆ ಗೊತ್ತಾಗದೆ, ಇಂಥಹದ್ದೊಂದು ವಿಧ್ವಂಸಕ ಕೃತ್ಯ ನಡೆಸಲು ಸೂಕ್ತ ಸಮಯ, ಸ್ಥಳ ಯಾವುದು ಎಂಬುದು ಆ ಉಗ್ರನಿಗೆ ಹೇಗೆ ತಿಳಿಯಿತು? ಆ ಕುರಿತು ಆತನಿಗೆ ನಿಖರ ಮಾಹಿತಿ ಕೊಟ್ಟವರು ಯಾರು ಅಥವಾ ಆ ಉಗ್ರಸಂಘಟನೆಗೆ ಇಂಥಹದ್ದೊಂದು ಖಚಿತ ಮಾಹಿತಿ ಸಿಕ್ಕಿದ್ದು ಎಲ್ಲಿಂದ? ಸ್ಫೋಟದ ಸ್ಥಳದಿಂದ ಕೇವಲ 10 ಕಿಲೋಮೀಟರ್‌ ದೂರದಲ್ಲಿ ವಾಸವಾಗಿದ್ದು, ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟು ಉಗ್ರರ ಗುಂಪು ಸೇರಿದ್ದ 22ರ ಹರೆಯದ ಆದಿಲ್ಧರ್‌ ಎಂಬ ಆ ಉಗ್ರ, 350 ಕೆಜಿ ಆರ್‌ಡಿಎಕ್ಸ್‌ ಎಲ್ಲಿಂದ ಪಡೆದುಕೊಂಡ? ಅದನ್ನು ಆತನಿಗೆ ತಲುಪಿಸಿದವರು ಯಾರು? ಕಾರು ಹಾಗೂ ಆರ್‌ಡಿಎಕ್ಸ್‌ಗೆ ಹಣ ಪೂರೈಕೆ ಮಾಡಿದವರು ಯಾರು? ಕಾರಿನ ಮೂಲ ಮಾಲಕರು ಯಾರು? ಎರಡು ದಿನಗಳಿಂದ ಮುಚ್ಚಿದ್ದ ಹೆದ್ದಾರಿಯನ್ನು ಸಿಆರ್‌ಪಿಎಫ್‌ ಕಾನ್ವಾಯ್‌ ಬರುವುದಕ್ಕೂ ಕೆಲವೇ ಗಂಟೆಗಳ ಮೊದಲು ತೆರವುಗೊಳಿಸಲಾಗಿತ್ತು. ಇದೆಲ್ಲ ಹೇಗೆ ಆತನಿಗೆ ತಿಳಿಯಿತು? ಅದಲ್ಲವಾದರೆ ಆ ಉಗ್ರ ಆ ಹೆದ್ದಾರಿಯನ್ನು ಅದು ಹೇಗೆ ಪ್ರವೇಶಿಸಿದ? ವಿವಿಧ ಮೂಲಗಳ ಪ್ರಕಾರ ಪುಲ್ವಾಮಾ ದಾಳಿಗೂ ಎರಡು ದಿನ ಮೊದಲು ಜೈಷ್‌-ಎ- ಮೊಹಮ್ಮದ್‌ ಅಫ್ಘಾನಿಸ್ತಾನದಿಂದ ಕಾರ್‌ ಬಾಂಬ್‌ ದಾಳಿಯ ವಿಡಿಯೋ ಒಂದನ್ನು ಅಪ್ಲೋಡ್‌ ಮಾಡಿತ್ತು. ಮತ್ತು ಈ ವಿಡಿಯೋದಲ್ಲಿ ಇದೇ ರೀತಿಯ ದಾಳಿಯನ್ನು ಕಾಶ್ಮೀರದಲ್ಲಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಈ ವಿಡಿಯೋವನ್ನು ಹಂಚಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ 'ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ವಿಭಾಗ' ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಸಿತ್ತು. ಹೀಗಿದ್ದೂ ಮುನ್ನೆಚ್ಚರಿಕೆ ವಹಿಸಲಿಲ್ಲ ಏಕೆ? ವಹಿಸಿದ್ದರೆ ಇಂತಹ ಅನಾಹುತ ನಡೆಯುತ್ತಿತ್ತೇ? ಅಧಿಕಾರಿಯೊಬ್ಬರ ಪ್ರಕಾರ ಆ ಸಮಯದಲ್ಲಿ ಯೋಧರನ್ನು ಹೊತ್ತಿದ್ದ ಬಸ್ಸುಗಳು ಕಡಿಮೆ ಅಂತರದಲ್ಲಿ ಚಲಿಸುತ್ತಿದ್ದವು. ಇದು ‘ನಿರ್ದಿಷ್ಠ ಕಾರ್ಯಾಚರಣೆ ಪ್ರಕ್ರಿಯೆ’ಯ ಉಲ್ಲಂಘನೆ ಕೂಡ ಹೌದು. ಸಂಭಾವ್ಯ ದಾಳಿಯ ಸಂದರ್ಭದಲ್ಲಿ ಕಡಿಮೆ ಅಪಾಯವಾಗಬೇಕು ಎಂಬ ಕಾರಣಕ್ಕೆ ಕಾನ್ವಾಯ್‌ನ ಎರಡೂ ವಾಹನಗಳು ಸುರಕ್ಷಿತ ಅಂತರದಲ್ಲಿ ಚಲಿಸಬೇಕು ಎಂಬ ನಿಯಮವಿದೆ. ಇದನ್ನು ಯಾಕೆ ನಿರ್ಲಕ್ಷಿಸಲಾಯಿತು? ಕನಿಷ್ಠ ಪಕ್ಷ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಬಳಕೆಯಾದ 350ಕೆಜಿ RDX ಎಲ್ಲಿಂದ ಬಂತು? ಅದನ್ನು ಆ ಸ್ಥಳಕ್ಕೆ ತರುವಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ಈ ಕುರಿತು ತನಿಖೆಯನ್ನು ನಡೆಸಲಾಗಿದೆಯೇ? ನಡೆಸಲಾಗಿಲ್ಲವಾದರೆ ಅದೇಕೆ ನಡೆಸಿಲ್ಲ? ನಡೆಸಿದೆಯಾದರೆ ಆ ತನಿಖಾ ವರದಿ ಎಲ್ಲಿ? ಆ ವರದಿಯನ್ನು ಅದೇಕೆ ಈತನಕ ಬಿಡುಗಡೆ ಮಾಡಿಲ್ಲ ಅಥವಾ ತನಿಖೆ ನಡೆಸಿಲ್ಲವಾದರೆ ಆ ಮೂಲಕ ಯಾರ ಹಿತಾಸಕ್ತಿಯ ರಕ್ಷಣೆ ಮಾಡಲಾಗುತ್ತಿದೆ ಎಂಬ ವಿಚಾರಗಳನ್ನು ಬಹಿರಂಗ ಪಡಿಸುವ ಮೂಲಕವಾದರೂ ಕೇಂದ್ರದ ಮೋದಿ ಸರ್ಕಾರ ಆ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನ್ಯಾಯ ಒದಗಿಸಬೇಕಿತ್ತಲ್ಲವೇ? 2019, ಫೆಬ್ರವರಿ 14ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 44ಯೋದರು ಮೃತರಾದ ಸಂದರ್ಭದಲ್ಲಿ ಸೂತಕದ ಛಾಯೆಯಲ್ಲಿ ಆ ಯೋಧರ ಹೆಂಡತಿ ಮಕ್ಕಳು, ಅವರುಗಳ ವೃದ್ಧ ತಂದೆ ತಾಯಂದಿರು, ಕುಟುಂಬದವರು ಹಾಗೂ ಇಡೀ ದೇಶದ ಮಾನವತಾವಾದಿ ಮನಸ್ಸುಗಳು ಮರುಗುತ್ತಿದ್ದರೆ ಬಿಜೆಪಿಗರು ಈ ದಾಳಿಯಿಂದ ಲೋಕಸಭಾ ಚುನಾವಣೆಯಲ್ಲಿ ತಮಗೆ ಹೆಚ್ಚು ಸೀಟು ಬರುತ್ತದೆ ಎಂಬ ಸಂಭ್ರಮದಲ್ಲಿ ಇದ್ದದ್ದನ್ನು ನಾವೆಲ್ಲರೂ ಕಂಡಿದ್ದೇವೆ. ಆ ಸಮಯದಲ್ಲಿ ಮೋದಿ ಸರ್ಕಾರದ ಹಲವಾರು ನಾಯಕರುಗಳು, ಸಚಿವರುಗಳು ಈ ಘಟನೆಯಿಂದ ಬಿಜೆಪಿಗೆ ಲಾಭವಾಗಲಿದೆ ಎಂದಿದ್ದರು ಹಾಗೂ ಯಡಿಯೂರಪ್ಪನವರು ಕೂಡ 'ಬಾಲಕೋಟ್‌ ವಾಯುಸೇನೆಯ ದಾಳಿಯಿಂದ ಬಿಜೆಪಿ ಕರ್ನಾಟಕದಲ್ಲಿ 22ಸೀಟು ಗೆಲ್ಲಲಿದೆ' ಎಂಬ ಹೇಳಿಕೆ ನೀಡಿದ್ದರು. (25ಸೀಟು ಗೆದ್ದು ಅವರ ನಿರೀಕ್ಷೆ ಸುಳ್ಳಾಗಲಿಲ್ಲ, ಅದು ಬೇರೆ ಮಾತು) ಒಟ್ಟಾರೆಯಾಗಿ ಅದು ಅವರುಗಳಿಗೆ ಬಹುಹರ್ಷದ ವಿಚಾರವಾಗಿತ್ತು ಮತ್ತು ಆ ಸಂಧರ್ಭದಲ್ಲಿ ದಿಲ್ಲಿಯಿಂದ ಹಳ್ಳಿಯವರೆಗೆ ಬಿಜೆಪಿ ನಾಯಕರು ಕಾರ್ಯಕರ್ತರದ್ದು ಒಂದೇ ರೀತಿಯ ಮಾತಾಗಿತ್ತು. ಅದಕ್ಕೆ ಉದಾಹರಣೆಯಾಗಿ ಒಂದು ದಿನ ಬೆಳಿಗ್ಗೆ ಮಾರ್ಕೆಟ್‌ನಲ್ಲಿ ಸಿಕ್ಕಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೊಬ್ಬರು ಮಾತನಾಡುತ್ತಾ 'ಗಡಿಯಲ್ಲಿ ಇದೇ ರೀತಿಯ ಉದ್ವಿಗ್ನತೆ ಮುಂದುವರಿದರೆ ಖಂಡೀತವಾಗಿಯೂ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಒಂದು ವೇಳೆ ಯುದ್ದವೇ ನಡೆದು ಬಿಟ್ಟರೆ 2014ರ ಫಲಿತಾಂಶಕ್ಕಿಂತಲೂ ಹೆಚ್ಚು ಸ್ಥಾನ ಬರಲಿದೆ' ಎಂದು ಬಾರೀ ಖುಷಿಯಿಂದ ನಗುನಗುತ್ತಲೇ ಹೇಳಿದ್ದರು. ಕೇವಲ ಅಧಿಕಾರಕ್ಕಾಗಿ ಇವರು ಗಡಿಯಲ್ಲಿ ಉದ್ವಿಗ್ನತೆ ಅಥವಾ ಯುದ್ಧವನ್ನು ಬಯಸುತ್ತಿದ್ದಾರೆ ಎಂಬುವುದು ತಿಳಿದಾಗ ನಾನು ಸಿಟ್ಟಿನಿಂದ ಹೇಳಿದ್ದೆ 'ಬಹುಶಃ ನಿಮ್ಮ ಅಣ್ಣತಮ್ಮಂದಿರಲ್ಲಿ ಯಾರಾದರೂ ಸೈನ್ಯದಲ್ಲಿ ಇದ್ದಿದ್ದರೆ ನೀವು ಈ ಮಾತನ್ನು ಆಡುತ್ತಿರಲಿಲ್ಲ' ಎಂದು. ಆಗ ಅವರು ಮರುಮಾತನಾಡಿರಲಿಲ್ಲ. ಸಾಮಾನ್ಯವಾಗಿ ದೇಶಪ್ರೇಮಿಗಳ್ಯಾರೂ ಅನಿವಾರ್ಯ ಸಂಧರ್ಭದಲ್ಲಿ ಬಿಟ್ಟರೆ ಬೇರೆ ಸಂಧರ್ಭಗಳಲ್ಲಿ ಯುದ್ಧವನ್ನು ಬಯಸಲಾರರು ಏಕೆಂದರೆ 'ಎರಡು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ನಡುವೆ ಯುದ್ಧ ಅತ್ಯಂತ ಅಪಾಯಕಾರಿಯಾದುದಾಗಿದೆ'. ಸೈನ್ಯದಲ್ಲಿರುವ ನಮ್ಮೂರಿನ, ನಮ್ಮ ಹತ್ತಿರದ ಮನೆಯ ಅದರಲ್ಲೂ ನನ್ನ ಸಹಪಾಠಿ ಸೈನಿಕನೊಬ್ಬನ ವೃದ್ಧ ತಂದೆ- ತಾಯಿ, ಎಳೆ ಪ್ರಾಯದ ಹೆಂಡತಿ, ಇನ್ನೂ ಮೂರನೇ ಕ್ಲಾಸಿಗೆ ಹೋಗುವ ಹೆಣ್ಣು ಮಗು ಪುಲ್ವಾಮಾ ಘಟನೆಯ ಸಂದರ್ಭದಲ್ಲಿ ರಾತ್ರಿ ಕೂಡ ನೆಮ್ಮದಿಯಿಂದ ನಿದ್ರಿಸುತ್ತಿರಲಿಲ್ಲ. ಯಾವ ಸಮಯದಲ್ಲಿ ಯಾವ ಆಘಾತಕಾರಿ ಘಟನೆ ನಡೆಯುತ್ತದೋ ಎಂದು ಆತಂಕದಿಂದ 24ಗಂಟೆಯೂ ಟಿವಿಯ ನ್ಯೂಸ್ ಹಾಕಿಕೊಂಡು ಕುಳಿತಿರುತ್ತಿದ್ದರು. ಅಡುಗೆಯನ್ನು ಕೂಡ ಸರಿಯಾಗಿ ಮಾಡುತ್ತಿರಲಿಲ್ಲ, ಅವರನ್ನು ನೋಡುವಾಗ ಅಕ್ಕಪಕ್ಕದವರಾದ ನಮಗೆ ನಿಜಕ್ಕೂ ಕಣ್ಣಿರು ಬರುತ್ತಿತ್ತು... ಅದರೆ ಅದೇ ಸಮಯದಲ್ಲಿ ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಿ ಅಮೆರಿಕಾ, ಇಂಗ್ಲೆಂಡ್, ಲಂಡನ್ ನಲ್ಲಿ ಸುಭದ್ರವಾಗಿ ನೆಲೆಗೊಳಿಸಿರುವ ಈ ಡೋಂಗಿ ರಾಷ್ಟ್ರೀಯವಾದಿ ನಾಯಕರುಗಳು ಯುದ್ಧದ ಹಪಾಹಪಿಯಲ್ಲಿ ತೊಡಗಿದ್ದರು, ಅದರಿಂದ ತಮ್ಮ ಪಕ್ಷಕ್ಕಾಗುವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತೊಡಗಿದ್ದರು. ಕಾಂಗ್ರೆಸ್ ಪಕ್ಷದ ಆಡಳಿತಾವಧಿಯ ವೇಳೆ ಬೇರೆಬೇರೆ ವಿಧ್ವಂಸಕ ಕೃತ್ಯದಲ್ಲಿ ಪಾಲ್ಗೊಂಡು, ಬಂದಿಸಲ್ಪಟ್ಟು ಭಾರತದ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಪುಲ್ವಾಮಾ ದಾಳಿಯ ರೂವಾರಿಯೆಂದು ಕೇಂದ್ರ ಸರ್ಕಾರ ಇದೀಗ ಹೆಸರಿಸಿರುವ ಉಗ್ರ ಮಸೂದ್ ಅಝರ್‌ ನನ್ನು ಬಿಜೆಪಿಯ ನಾಯಕ ವಾಜಪೇಯಿಯವರು ಪ್ರದಾನಿಯಾಗಿದ್ದ ಕಾಲದಲ್ಲಿ ಸತಃ ಸರ್ಕಾರದ ಸಚಿವರುಗಳೇ ಕಂದಾಹಾರ್ ತನಕ ಕರೆದೊಯ್ದು ಬಿಡುಗಡೆ ಗೊಳಿಸಿ ಬಂದಂತಹ ವಿಚಾರವಂತೂ ಸಾರ್ವಕಾಲಿಕ ಸತ್ಯವೇ ಆಗಿದೆ. ಇದೆಲ್ಲದರ ನಡುವೆ ಪುಲ್ವಾಮಾ ದಾಳಿ, ಬಿಜೆಪಿ ನಾಯಕರುಗಳ ರಾಜಕೀಯ ಲಾಭದ ಕುರಿತಾದ ಹೇಳಿಕೆ. ಅದೇ ಸಮಯದಲ್ಲಿ ಪುಲ್ವಾಮಾ ಘಟನೆಯಿಂದ ಮೃತರಾದ ಯೋದರ ಸಾವನ್ನು ವ್ಯರ್ಥವಾಗಲು ಬಿಡೆವು ಎಂದು ಪ್ರದಾನಿ ಮೋದಿ ಹೇಳಿಕೆ. 'ಮೋದಿ ಮತ್ತೊಮ್ಮೆ ಪ್ರದಾನಿಯಾಗಬೇಕು' ಎಂದು ಚುನಾವಣೆಯ ಒಂದು ವರ್ಷ ಹಿಂದಿನ ಐಎಸ್‌ಐ ಹೇಳಿಕೆ. 'ಬಿಜೆಪಿ ಮತ್ತೊಮ್ಮೆ ಗೆದ್ದರೆ ಪಾಕಿಸ್ತಾನಕ್ಕೆ ಅನುಕೂಲ' ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ...! ಇದೆಲ್ಲವನ್ನೂ ಅವಲೋಕಿಸುವಾಗ ಅದೇಕೋ ಒಳಗಿಂದೊಳಗೆ- ಒಂದಕ್ಕೊಂದು ಸಂಬಂಧವಿದೆ ಎಂದು ಅನ್ನಿಸುವುದಿಲ್ಲವೇ? __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement