'ಮುಂದೆ ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ' ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
'ಮುಂದೆ ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ' ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
Advertisement
'ಮುಂದೆ ಕೋವಿಡ್ ಸುನಾಮಿ ಈ ದೇಶವನ್ನು ಮತ್ತೆ ಆವರಿಸಲಿದೆ, ಆದರೆ ಸರ್ಕಾರ ನಮ್ಮ ಮಾತುಗಳನ್ನು ಆಲಿಸುತ್ತಿಲ್ಲ' ಎಂದು ಕಳೆದ ವರ್ಷವೇ ಭಾರತ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು. ಆ ಕುರಿತಾದ ರಾಹುಲ್ ಗಾಂಧಿಯವರ ಹೇಳಿಕೆಯ ವೀಡಿಯೊ ಇದೀಗ ವೈರಲ್ ಆಗಿದೆ.
ದೇಶದಾದ್ಯಂತ ಕೊವಿಡ್-19 ಎರಡನೆಯ ಅಲೆಯ ಪ್ರಕರಣಗಳ ಹಠಾತ್ ಹೆಚ್ಚಳದ ಕುರಿತು ದೆಹಲಿ ಹೈಕೋರ್ಟ್ ಆತಂಕಭರಿತವಾಗಿ ʼಕೊರೊನಾ ಸುನಾಮಿʼ ಎಂದು ಉಲ್ಲೇಖಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಈ ಹಳೆಯ ವೀಡಿಯೋ ಇದೀಗ ಪ್ರಾಮುಖ್ಯತೆ ಪಡೆದಿದೆ. ʼನಾವು ಕೋವಿಡ್ ಅನ್ನು ಅಲೆಗಳಿಗೆ ಹೋಲಿಸುತ್ತಿದ್ದೇವೆ. ಆದರೆ ಅದು ಕೇವಲ ಅಲೆ ಮಾತ್ರವೇ ಅಲ್ಲ, ಅದು ಸುನಾಮಿಯಾಗಿದೆ' ಎಂದು ದಿಲ್ಲಿ ಹೈಕೋರ್ಟ್ ನಿನ್ನೆ ಹೇಳಿತ್ತು.
ಕಳೆದ ವರ್ಷ (2020) ಮಾರ್ಚ್ 17, ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, 'ನಾನು ಸರಕಾರಕ್ಕೆ ಕೋವಿಡ್ ಸುನಾಮಿ ಬರುವ ಕುರಿತು ಪದೇಪದೇ ಎಚ್ಚರಿಕೆ ನೀಡುತ್ತಲೇ ಇದ್ದೇನೆ. ಈ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ದೇಶದ ಜನರು ಅತೀದೊಡ್ಡ ಬಿಕ್ಕಟ್ಟನ್ನು ಎದುರಿಸಲಿದ್ದಾರೆ' ಎಂದು ಹೇಳಿದ್ದರು.
ವಿದೇಶಿ ಕಾಯಿಲೆ 'ಕೊರೋನಾ ಮಹಾಮಾರಿ' ಈ ದೇಶದೊಳಗೆ ಪ್ರವೇಶ ಪಡೆಯದಂತೆ 2019ರ ಜನವರಿ ವೇಳೆಗೆ ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸುವ ಮೂಲಕ ಜನರ ಜೀವವನ್ನು ಮತ್ತು ದೇಶದ ಆರ್ಥಿಕತೆಯನ್ನು ರಕ್ಷಿಸಬಹುದಾಗಿದ್ದರೂ ಆ ನಿಟ್ಟಿನಲ್ಲಿ ಕಾರ್ಯಾಚರಿಸದೇ ಲಕ್ಷಾಂತರ ಜನ ಸೇರಿದ 'ನಮಸ್ತೆ ಟ್ರಂಪ್' ಮುಂತಾದ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಮುಗಿಸಿ, ಪರಿಸ್ಥಿತಿ ಬಿಗಡಾಯಿಸಿದ ನಂತರ ಅಂದರೆ 2019 ಮಾರ್ಚ್ 24ರಂದು ರಾತ್ರಿ ಪ್ರಧಾನಿ ಮೋದಿಯವರು ಏಕಾಏಕಿ 21ದಿನಗಳ ಲಾಕ್‌ಡೌನ್ ಘೋಷಿಸಿದ್ದರು. ದೇಶದ ವಿವಿಧ ಭಾಗಗಳಿಗೆ ಉದ್ಯೋಗದ ನಿಮಿತ್ತ ತೆರಳಿದ್ದ ವಲಸೆ ಕಾರ್ಮಿಕರಿಗೆ ಮತ್ತಿತರರಿಗೆ ತಮ್ಮ ತಮ್ಮ ಗ್ರಾಮಗಳಿಗೆ ಹಿಂತಿರುಗಲು ಕೇವಲ ಎರಡು ಮೂರು ದಿನಗಳ ಸಮಯಾವಕಾಶ ಕೂಡಾ ಕೊಡದೇ ರಾತ್ರೋರಾತ್ರಿ ಲಾಕ್‌ಡೌನ್ ಘೋಷಿಸುವ ಮೂಲಕ ಸಾವಿರಾರು ಜನರು ದೇಶದ ಬೀದಿಬೀದಿಗಳಲ್ಲಿ ಅನ್ನ ನೀರಿಲ್ಲದೆ ಸಾಯಲು ಕಾರಣವಾದ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಟ್ಟೆ, ಜಾಗಟೆ ಬಾರಿಸಲು, ಮೊಂಬತ್ತಿ ಹಚ್ಚಲು ಸೂಚಿಸಿದ್ದರೇ ವಿನಃ ಆರೋಗ್ಯ ತಜ್ಞರ, ವಿಜ್ಞಾನಿಗಳ ಜೊತೆ ಚರ್ಚಿಸುವ, 'ಆರೋಗ್ಯ ತುರ್ತುಪರಿಸ್ಥಿತಿ' ಘೋಷಿಸಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತಹ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಂಡಿರಲಿಲ್ಲ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆ ಮುನ್ನೆಚ್ಚರಿಕೆಯ ಹೇಳಿಕೆಯನ್ನು ಕೂಡ ಲಘುವಾಗಿ ತಗೆದುಕೊಂಡಿದ್ದರು. ಬದಲಾಗಿ ಅವರ ಪಕ್ಷದ ಕೇಂದ್ರದ ಹಾಗೂ ವಿವಿಧ ರಾಜ್ಯಗಳ ನಾಯಕರುಗಳು ರಾಹುಲ್‌ರ ಆ ಹೇಳಿಕೆಗೆ ವಿವಿಧ ಮಾಧ್ಯಮಗಳಲ್ಲಿ ಅಪಹಾಸ್ಯ ಮಾಡಿ ನಕ್ಕಿದ್ದರು.
ಆದರಿಂದು ರಾಹುಲ್ ಗಾಂಧಿಯವರ ಮುನ್ನೆಚ್ಚರಿಕೆಯ ಮಾತು ನಿಜವಾಗುತ್ತಿದೆ. ಕೊರೊನಾ ಕುರಿತಾಗಿ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ದೇಶದ ಜನತೆ ಆಕ್ಸಿಜನ್ ಕೊರತೆಯಿಂದ, ಬೆಡ್ ಕೊರತೆಯಿಂದ, ಚಿಕಿತ್ಸೆಯ ಕೊರತೆಯಿಂದ ದೇಶದಾದ್ಯಂತ ಸಾಯುತ್ತಿದ್ದಾರೆ. ಕೊರೊನಾ ಮಹಾಮಾರಿ ಈ ದೇಶಕ್ಕೆ ವಕ್ರಿಸಿದ ಬರೋಬ್ಬರಿ ಈ ಒಂದು ವರ್ಷದಲ್ಲಿ ದೇಶದಾದ್ಯಂತ ಕೇವಲ ಹತ್ತು ಶೇಕಡಾ ಆಸುಪಾಸು ಮಾತ್ರವೇ ವ್ಯಾಕ್ಸಿನ್ ಹಂಚಲಾಗಿದೆ. ವಿಶ್ವಮಟ್ಟದಲ್ಲಿ ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅತ್ಯಂತ ಕಳಪೆ ಪ್ರದರ್ಶನವಾಗಿದೆ ಹಾಗೂ ನರೇಂದ್ರ ಮೋದಿ ಸರ್ಕಾರದ ಬೇಜವಾಬ್ದಾರಿತನದ ಆಡಳಿತದ ಅಸಲಿ ಮುಖವಾಗಿದೆ.
ಆದರೆ ಆದಿತ್ಯವಾರ (ಎಪ್ರಿಲ್ 25) ಪ್ರಧಾನಿ ಮೋದಿಯವರು ಮನ್ ಕೀ ಬಾತ್ ನಲ್ಲಿ ಪ್ರತ್ಯಕ್ಷರಾಗಿ ತಮ್ಮ ಎಂದಿನ ಶೈಲಿಯಲ್ಲಿ 'ಕೊರೊನಾ ಎರಡನೆ ಅಲೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಆದರೆ ನಾವು ಆತ್ಮವಿಶ್ವಾಸ ಕಳೆದುಕೊಳ್ಳದೆ ಕೊರೊನಾ ವಿರುದ್ದ ಹೋರಾಡೋಣ' ಎಂಬ ಬಾಲಿಷವಾದ, ದೇಶದ ಜನರಿಗೆ ಹತ್ತು ಪೈಸೆಯ ಉಪಯೋಗವಿಲ್ಲದ ಹೇಳಿಕೆಯನ್ನು ನೀಡಿದ್ದಾರೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು 'ಹೋರಾಡೋದು ಅಂದರೆ ಹೇಗೆ? ಪ್ರಧಾನಿಯವರೇ ಹೇಳಿದಂತೆ ಚಪ್ಪಾಳೆ ತಟ್ಟೋದಾ? ಮೇಣದ ಬತ್ತಿ ಹಚ್ಚೋದಾ? ಲಕ್ಷಾಂತರ ಜನ ಸೇರಿಸಿ ಚುನಾವಣಾ ರ‌್ಯಾಲಿ ಮಾಡಿ 'ಇಷ್ಟೊಂದು ಜನರನ್ನು ನಾನೆಂದೂ ಕಂಡಿಲ್ಲ' ಎಂದು ಉದ್ಘರಿಸೋದಾ? ಅಥವಾ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಕುಂಭಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟು 'ಕುಂಭಮೇಳದಲ್ಲಿ ಕೊರೊನಾ ಹಬ್ಬೊಲ್ಲ, ಗಂಗಾಮಾತೆ ರಕ್ಷಿಸುತ್ತಾಳೆ' ಎನ್ನೋದಾ? ಬಹುಶಃ 2012-13ರ ಹೊತ್ತಿಗೆ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ವಿಶ್ವದ ಮೂರನೆಯ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದ ಭಾರತ ದೇಶಕ್ಕೆ ಇಂದು ಇಂತಹ ದುಸ್ಥಿತಿ ಖಂಡಿತವಾಗಿಯೂ ಬರಬಾರದಾಗಿತ್ತು' ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಂದು ಕೊರೊನಾ ಎರಡನೇ ಅಲೆ ಯಾ ತ್ಸುನಾಮಿ ದೇಶದ ಜನರನ್ನು ಬಲಿತಗೆದುಕೊಳ್ಳಲು ಬಾಯ್ದೆರೆದು ಕೂತಿದೆ. ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ದೇಶಕ್ಕೆ ಇಂತಹ ಆಪತ್ತು ಎದುರಾಗುತ್ತಿರಲಿಲ್ಲ ಎಂಬ ಬರಹಗಳು ಹರಿದಾಡುತ್ತಿವೆ. ದೇಶದ ಜನರಿಗೆ ಸತ್ಯದ ಅರಿವಾಗತೊಡಗಿದೆ.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.