Advertisement

'ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ'

Advertisement

ಕೆಳಗಿನ ಪಟ್ಟಿಯನ್ನು ನೋಡಿ: ಈ ಒಂಭತ್ತು ಕೋವಿಡ್ ಉದ್ಯಮಿಗಳು ಕೋವಿಡ್ ವರ್ಷದಲ್ಲಿ ಹುಟ್ಟಿಕೊಂಡ ಜಗತ್ತಿನ ಹೊಸ ಬಿಲಿಯನೇರ್ ಗಳು(ಶತಕೋಟ್ಯಾಧಿಪತಿಗಳು) .. -Moderna ವ್ಯಾಕ್ಸಿನ್ ಉತ್ಪಾದಿಸುವ ಕಂಪನಿಯ ಮುಖ್ಯಸ್ಥ ಸ್ಟೀಫನ್ ಬಾನ್ಸೆಲ್- 2020-21 ನೇ ಸಾಲಿನ ಆದಾಯ- 4.3 ಬಿಲಿಯನ್ ಡಾಲರುಗಳು. (ಒಂದು ಬಿಲಿಯನ್=100 ಕೋಟಿ. ಡಾಲರ್‌ಗೆ ಸರಾಸರಿ 75 ರೂ. ಎಂದಿಟ್ಟುಕೊಂಡರೂ 32,250 ಕೋಟಿ ರೂಪಾಯಿಗಳು ಮಾತ್ರ! ) ಲೇಖನ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) - ಮತ್ತೊಂದು ಕೋವಿಡ್ ವ್ಯಾಕ್ಸಿನ್ Pfizer ನ ಪೇಟೆಂಟ್ ಪಡೆದಿರುವ ಜರ್ಮನಿಯ Bio N Tech ಸಹ ಸಂಸ್ಥಾಪಕ ಊಗುರ್ ಸಹೀನ್- ಹೋದವರ್ಷದ ಆದಾಯ 4 ಬಿಲಿಯನ್ ಡಾಲರುಗಳು - Moderna ಸಂಸ್ಥಾಪಕ ಹೂಡಿಕೆದಾರ ತಿಮೋತಿ ಸ್ಪ್ರಿಂಗರ್-2.2 ಬಿಲಿಯನ್ ಡಾಲರುಗಳು -Moderna ಮುಖ್ಯಸ್ಥ ನೌಬರ್ ಆಫಯಾನ್-1.9 ಬಿಲಿಯನ್ ಡಾಲರುಗಳು - Moderna ಉತ್ಪಾದನೆ ಮತ್ತು ಪ್ಯಾಕೇಜಿಂಗ್ ವ್ಯವಹಾರದ ಅಧ್ಯಕ್ಷ ಲೋಪೆಜ್ ಬೆಲ್ಮೋನ್ಟೆ- 1.8 ಬಿಲಿಯನ್ ಡಾಲರುಗಳು - Moderna ಸಹಸಂಸ್ಥಾಪಕ ರಾಬರ್ಟ್ ಲ್ಯಾಂಗರ್- 1.6 ಬಿಲಿಯನ್ ಡಾಲರುಗಳು - ಮತ್ತೊಂದು ವ್ಯಾಕ್ಸಿನ್ ಕಂಪನಿಯಾದ CanSinoBilogics ನ ಮುಖ್ಯ ವಿಜ್ನಾನಿ ಜು ತಾವೋ- 1.3 ಬಿಲಿಯನ್ ಡಾಲರುಗಳು - CanSinoBilogics ನ ಸಹಸಂಸ್ಥಾಪಕ ಕ್ಯೂ ಡಾಂಗ್ ಶು - 1.2 ಬಿಲಿಯನ್ ಡಾಲರುಗಳು - CanSinoBilogics ನ ಸಹ ಸಂಸ್ಥಾಪಕ ಮವೋ ಹುಯ್ ಹುವಾ -1 ಬಿಲಿಯನ್ ಡಾಲರುಗಳು ಈ ಒಂಭತ್ತು ಕೋಟ್ಯಾಧಿಪತಿಗಳ ಕಳೆದ ವರ್ಷದ ಒಟ್ಟು ಆದಾಯ 19.3 ಬಿಲಿಯನ್ ಡಾಲರುಗಳು. ಅಂದರೆ 1.5 ಲಕ್ಷ ಕೋಟಿ ರೂಪಾಯಿಗಳು! ಹಾಗೆಯೇ, ಈಗಾಗಲೇ ವ್ಯಾಕ್ಸಿನ್ ಹಾಗು ಔಷಧ ಉದ್ಯಮಗಳಲ್ಲಿರುವ: -Pfizer ವ್ಯಾಕ್ಸಿನ್ ಉತ್ಪಾದನೆ ಮಾಡುವ ಜರ್ಮನಿಯBioNtech -ಚೀನಾದ Zhifei Biological products ಮತ್ತು Sinopharm -ಭಾರತದ Serum Institute of India, Cadila Healthcare ... ಗಳಂಥ 8 ಔಷಧ ಕಂಪನಿಗಳು ಕಳೆದ ಒಂದು ವರ್ಷದಲ್ಲಿ ಮಾಡಿರುವ ಲಾಭ 32 ಬಿಲಿಯನ್ ಡಾಲರುಗಳು ಅಂದರೆ 2.4 ಲಕ್ಷ ಕೋಟಿ ರೂಪಾಯಿಗಳು. -ಇದರಲ್ಲಿ ಭಾರತದ Serum Institute ನ ಆಧಾರ್ ಪೂನಾವಾಲಾನ ಆದಾಯ 2020ರಲ್ಲಿ 8.2 ಬಿಲಿಯನ್ ಡಾಲರ್ ಇದ್ದದ್ದು 2021 ರಲ್ಲಿ ಕೇವಲ ಕೋವಿಡ್ ವ್ಯವಹಾರದ ಮೂಲಕ 12.7 ಬಿಲಿಯನ್ ಡಾಲರ್(1 ಲಕ್ಷ ಕೋಟಿ ರೂ.) ಗಳಿಗೇರಿತು.ಅಂದರೆ ಶೇ. 54 ರಷ್ಟು ಏರಿಕೆ! ಹಾಗೆಯೇ Cadila Healthcare ನ ಪಂಕಜ್ ಪಟೇಲನ ಆದಾಯ 2020 ರಲ್ಲಿ ಕೇವಲ 3 ಬಿಲಿಯನ್ ಡಾಲರ್ ಇದ್ದದ್ದು 2021ರಲ್ಲಿ 5 ಬಿಲಿಯನ್ ಡಾಲರ್ಗೇರಿತು.. ಕೋವಿಡ್ ಕೋಟ್ಯಾಧಿಪತಿಗಳು ಮತ್ತು ಪೇಟೆಂಟ್ ಅಕ್ಟೋಪಸ್ ಇವೆಲ್ಲವೂ ವ್ಯಾಕ್ಸಿನ್ ಕಂಡುಹಿಡಿದ ಮೇಲೆ ಲಸಿಕೆ ಮಾರುಕಟ್ಟೆ ತಂದುಕೊಡುತ್ತಿರುವ ಲಾಭ. ಏಕೆಂದರೆ ಲಸಿಕೆ ಕಂಡು ಹಿಡಿದ ಮೇಲೆ ಈ ಕಂಪನಿಗಳು WTO (ವಿಶ್ವ ವ್ಯಾಪಾರ ಸಂಸ್ಥೆ)ಯಡಿಯ ಕರಾರಾಗಿರುವ TRIPS (Trade Related Intellectual Property Rights) ನಡಿ ತಮ್ಮ ಉತ್ಪನ್ನಗಳ ವಿಶ್ವ ಏಕಸ್ವಾಮ್ಯ (ಪೇಟೆಂಟ್), ವಿಶ್ವ ಮಾರಾಟ ಹಾಗೂ ತಮಗಿಷ್ಟ ಬಂದಂತೆ ದರ ನಿಗದಿ ಮಾಡುವ ಏಕಸ್ವಾಮ್ಯವನ್ನು ಪಡೆದುಕೊಳ್ಳುತ್ತವೆ. ಇದರಿಂದಾಗಿ ಜಗತ್ತು ಎಂಥಾ ವೈದ್ಯಕೀಯ ತುರ್ತನ್ನು ಎದುರಿಸಿದರೂ ಎಂಥಾ ಜೀವನಾವಶ್ಯಕ ಔಷಧಿಗಳು ಬೇಕಾಗಿದ್ದರೂ ಈ ಔಷಧ ಬಹುರಾಷ್ಟ್ರೀಯ ಕಂಪನಿಗಳೆದುದು ಕೈಚಾಚಿ ನಿಲ್ಲಬೇಕಾಗುತ್ತದೆ. ಇಂದು ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯನ್ನೂ ಸಹ Pfizer, Moderna, Jhonson and Jhonson , Astra Zeneca, Sinopharma, Sputnik ಗಳಂಥ ಆರೇಳು ಬಹುರಾಷ್ಟ್ರೀಯ ಕಂಪನಿಗಳ ಏಕಸ್ವಾಮ್ಯದಲ್ಲಿವೆ. ಜಗತ್ತಿನಾದ್ಯಂತ ಈಗಾಗಲೇ 17 ಕೋಟಿ ಜನರಿಗೆ ಸೋಕು ತಗಲುಲಿದ್ದರೂ, 37 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದರೂ, ಈ ಕಂಪನಿಗಳು ತಮ್ಮ ಏಕಸ್ವಾಮ್ಯವನ್ನು ಸಡಿಲಿಸಲು ಮಾನವಕೋಟಿಯನ್ನು ಉಳಿಸಲೂ ಮುಂದಾಗುತ್ತಿಲ್ಲ. ಹಣ ಮತ್ತು ಜ್ನಾನ ಜನರದ್ದು- ಲಾಭ ಮಾತ್ರ ವ್ಯಾಕ್ಸಿನ್ ಕಂಪನಿಗಳದ್ದು! ಏಕೆಂದರೆ ಈ ಕಂಪನಿಗಳ ಪ್ರಕಾರ ವ್ಯಾಕ್ಸಿನ್ ಅನ್ವೇಷಣೆಗೆ ಹಾಗೂ ಉತ್ಪಾದನೆಗೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಮಾಡಿರುವುದರಿಂದ ಅದರ ಲಾಭ ಪಡೆದುಕೊಳ್ಳುವುದು ಅವರ ಹಕ್ಕು. ಹಾಗೂ ಈ ಮುಂದೆಯೂ ಹೊಸ ಹೊಸ ವ್ಯಾಕ್ಸಿನ್‌ಗಳನ್ನು ಕಂಡುಹಿಡಿಯಬೇಕೆಂದರೂ ಈ ಲಾಭದ ಉತ್ತೇಜನ ಇಲ್ಲದಿದ್ದರೆ ಹೂಡಿಕೆ ಮಾಡಲು ಯಾರೂ ಮುಂದೆ ಬರಲಾರರು ಎನ್ನುವುದು. ಆದರೆ ಇದು ನಿಜವೇ? ಈ ಕಂಪನಿಗಳು ಸ್ವಂತ ದುಡ್ಡಿನಿಂದ ವ್ಯಾಕ್ಸಿನ್ ಅನ್ವೇಷಣೆ ಹಾಗೂ ಉತ್ಪಾದನೆ ಮಾಡುತ್ತಿದ್ದಾರೆಯೇ? ಖಂಡಿತಾ ಇಲ್ಲ. ಉದಾಹರಣೆಗೆ: -ಕಳೆದ ವರ್ಷದಿಂದ ಕೇವಲ ವ್ಯಾಕ್ಸಿನ್ ವ್ಯಾಪಾರದಿಂದಲೇ ಬಿಲಿಯನೇರುಗಳಾದ Moderna ಕಂಪನಿ ವ್ಯಾಕ್ಸಿನ್ ಕಂಡುಹಿಡಿಯಲು ಅಮೆರಿಕ ಸರ್ಕಾರ 2.5 ಬಿಲಿಯನ್ ಡಾಲರ್ ಹಣವನ್ನೂ ಹೂಡಿಕೆ ಮಾಡಿತ್ತು ಮಾತ್ರವಲ್ಲದೆ ಅದರ ಶೇ. 70 ರಷ್ಟು ಉತ್ಪನ್ನಗಳೀಗೆ ಅದು ನಿಗದಿ ಪಡಿಸಿದ ಬೆಲೆಗೆ ಮುಂಗಡವಾದ ಹಾಗೂ ಖಾತರಿಯಾದ ಮಾರುಕಟ್ಟೆಯನ್ನು ಖಾತರಿ ಪಡಿಸಿತ್ತು. ಹೀಗಾಗಿ ಅಮೆರಿಕದ ಜನರ ದುಡ್ಡಿನಿಂದ ವ್ಯಾಕ್ಸಿನ್ ಕಂಡು ಹಿಡಿದ ಈ ಮಾಡರ್ನಾ ಕಂಪನಿ ಈಗ ವ್ಯಾಕ್ಸಿನ್ ತನ್ನದೇ ಆಸ್ತಿ ಎಂದು ಜಗತ್ತನ್ನು ಸುಲಿಯುತ್ತಿದೆ. - Pfizer ವ್ಯಾಕ್ಸಿನ್ ಕಂಡುಹಿಡಿಯಲು ಅಮೆರಿಕ ಸರ್ಕಾರ 450 ಮಿಲಿಯನ್ ಡಾಲರುಗಳನ್ನು ಹಾಗೂ ಮುಂಗಡ ಮಾರುಕಟ್ಟೆಯನ್ನು ನೀಡಿತ್ತು. - ಚೀನಾದ ಎಲ್ಲಾ ಕಂಪನಿಗಳ ಉತ್ಪನ್ನಗಳಿಗೂ ಚೀನಾ ಸರ್ಕಾರದ ಅರ್ಥಾತ್ ಜನರ ತೆರಿಗೆ ಹಣದ ಹೂಡಿಕೆಯಿತ್ತು. -ಭಾರತದಲ್ಲಿ ಕೊವಿಶೀಲ್ಡ್ ಲಸಿಕೆ ಉತ್ಪಾದಿಸುವ Serum Institute Of India ಇಂಗ್ಲೆಂಡಿನAstra-Zeneca ಎಂಬ ಔಷಧ ಕಂಪನಿಯ ತಂತ್ರಜ್ನಾನದ ಒಡಂಬಡಿಕೆಯೊಂದಿಗೆ ಉತ್ಪಾದಿಸುತ್ತದೆ. ಹಾಗೂ Asra-Zeneca ಕಂಪನಿ ತನ್ನ ಮೂಲವಿಜ್ನಾನ ಹಾಗೂ ತಂತ್ರಜ್ನಾನವನ್ನು Oxford ವಿಶ್ವವಿದ್ಯಾಲಯದಿಂದ ಪಡೆದುಕೊಳ್ಳುತ್ತದೆ. ಹಾಗೂ ಅದರ ಉತ್ಪಾದನೆಗೆ ಇಂಗ್ಲೆಂಡಿನ ಸರ್ಕಾರ ಅಲ್ಲಿನ ಜನರ ತೆರಿಗೆ ಹಣವನ್ನು ನೀಡಿದೆ. ಹೀಗಾಗಿ ಕೋವಿಷೀಲ್ಡ್ ವ್ಯಾಕ್ಸಿನ್ ನ ವಿಜ್ನಾನ ಹಾಗೂ ತಂತ್ರಜ್ನಾನ ಅನ್ವೇಷಣೆಗೆ Serum Institute Of India ಒಂದು ಫೈಸಾ ಖರ್ಚು ಮಾಡಿಲ್ಲ. ಅಷ್ಟು ಮಾತ್ರವಲ್ಲ, ವ್ಯಾಕ್ಸಿನ್ ಉತ್ಪಾದನೆಗೆ GAVI ಸಂಸ್ಥೆ ಕಳೆದ ವರ್ಷ ಜೂನ್ ತಿಂಗಳಲ್ಲೇ Serum Institute ಗೆ 3000 ಕೋಟಿ ರೂ ಧನಸಹಾಯ ಮಾಡಿತ್ತು. ಕಳೆದ ಮಾರ್ಚ್‌ನಲ್ಲಿ ಭಾರತ ಸರ್ಕಾರವೂ ಕೂಡ ಭಾರತದ ತೆರಿಗೆದಾರ ಹಣದಿಂದ 3500 ಕೋಟಿ ಧನ ಸಹಾಯ ಮಾಡಿತ್ತು. ಆದರೂ ಒಂದು ವ್ಯಾಕ್ಸಿನ್ ಡೋಸಿಗೆ 150 ರೂ. ದರ ನಿಗದಿ ಮಾಡಿದರೂ ತನಗೆ ಲಾಭವಿದೆ ಎಂದು ಒಪ್ಪಿಕೊಳ್ಳುವ ಈ ಸಂಸ್ಥೆಯ ಮಾಲೀಕ ಸೂಪರ್ ಫ್ರಾಫಿಟ್ ಗಾಗಿ ಒಂದು ವ್ಯಾಕ್ಸಿನ್‌ಗೆ 300-12000 ರೂ ನಿಗದಿ ಮಾಡಿದ್ದಾನೆ. -ಹಾಗೆಯೇ ಕೋವ್ಯಾಕ್ಸಿನ್ ಉತ್ಪಾದನೆ ಮಾಡುವ Bharat Biotech ಸಂಸ್ಥೆಯ ವಿಜ್ನಾನ ಹಾಗೂ ತಂತ್ರಜ್ನಾನಗಳೆಲ್ಲಾ ಭಾರತ ಸರ್ಕಾರದICMR ದು. ಹಾಗೂ ಅದರ ಉತ್ಪಾದನೆಗೆ ಭಾರತ ಸರ್ಕಾರ 1500 ಕೋಟಿ ರೂ. ತೆರಿಗೆ ದುಡ್ಡನ್ನು ನೀಡಿದೆ. ಆದರೂ ಈ ಸಂಸ್ಥೆ ವ್ಯಾಕ್ಸಿನ್ ಗೆ 600-1200 ರೂ. ಬೆಲೆ ನಿಗದಿ ಮಾಡಿ ಜನರನ್ನು ಸುಲಿಯ ಹೊರಟಿದೆ. ಹೀಗೆ ಜಗತ್ತಿನಲ್ಲಿ ಎಲ್ಲಾ ಕಡೆ ಈ ಔಷಧ ಕಂಪನಿಗಳ ಜನರ ತೆರಿಗೆ ಹಣ ಹಾಗೂ ಸಾರ್ವಜನಿಕ ಸಂಸ್ಥೆಗಳ ವಿಜ್ನಾನ-ತಂತ್ರಜ್ನಾನಗಳಿಂದ ಔಷಧ, ವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿದ್ದಾರೆಯೇ ವಿನಾ ಅವರ ಸ್ವಂತ ಹೂಡಿಕೆ ಏನಿಲ್ಲ. ಆದರೂ WTO ಯಡಿಯಲ್ಲಿ TRIPS - ಬಂಡವಾಳಶಾಹಿ ಬೌದ್ಧಿಕ ಮಾರುಕಟ್ಟೆ ನೀತಿಗಳನ್ನು ಬಳಸಿಕೊಂಡು ಈ ಕಂಪನಿಗಳು ಸಾರ್ವಜನಿಕರ ದುಡ್ಡು, ಪ್ರಾಣ ಮತ್ತು ಜ್ಞಾನಗಳ ಮೂಲಕ ಕಂಡುಹಿಡಿದ ವ್ಯಾಕ್ಸಿನ್ ಅನ್ನು ಉತ್ಪಾದನಾ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಿಕೊಂಡು ಲಾಭ ಸೂರೆ ಹೊಡೆಯುತ್ತಿದ್ದಾರೆ. ವ್ಯಾಕ್ಸಿನ್ ವರ್ಣಬೇಧ ಮತ್ತು ವರ್ಗಬೇಧ ಈ TRIPS ಅಡಿಯಲ್ಲಿ ಕಾರ್ಪೊರೇಟ್ ಕಂಪನಿಗಳು ಲಾಭಕ್ಕಾಗಿಯೇ ವ್ಯಾಕ್ಸಿನ್ ಉತ್ಪಾದಿಸುವುದರಿಂದ ಅದಕ್ಕೆ ಹೆಚ್ಚು ಎಲ್ಲಿ ಮಾರುಕಟ್ಟೆ ಇರುತ್ತದೋ ಅಲ್ಲಿಗೇ ಲಸಿಕೆ ಸರಬರಾಜಾಗುತ್ತದೆಯೇ ವಿನಾ ಎಲ್ಲಿ ಆರೋಗ್ಯ ತುರ್ತಿದೆಯೋ ಆ ಕಡೆಗಲ್ಲ. ಏಕೆಂದರೆ ಅದೇ ಬಂಡವಾಳಶಾಹಿ ಮಾರುಕಟ್ಟೆ ನಿಯಮವಾಗಿದೆ. ಹೀಗಾಗಿಯೇ ಏಪ್ರಿಲ್ ಕೊನೆಯವರೆಗೆ ಜಗತ್ತಿನಲ್ಲಿ 140 ಕೋಟಿ ಡೋಸುಗಳಷ್ಟು ಲಸಿಕೆಯನ್ನು ಈ ಕಂಪನಿಗಳು ಉತ್ಪಾದಿಸಿದ್ದರೂ ಅದರಲ್ಲಿ ಶೇ. 90 ಭಾಗವನ್ನು ಶ್ರೀಮಂತ ದೇಶಗಳಿಗೆ ಮಾರಿಕೊಂಡಿದ್ದಾರೆ. ಹೀಗಾಗಿ ಒಂದೆಡೆ ಅಮೇರಿಕ, ಕೆನಡಾ, ಐರೋಪ್ಯ ದೇಶಗಳಲ್ಲಿ ಅಲ್ಲಿನ ಜನಸಂಖ್ಯೆಗೆ ಆಗಿ ಮಿಗುವಷ್ಟು ವ್ಯಾಕ್ಸಿನ್ ದಾಸ್ತಾನು ಸಂಗ್ರಹವಾಗಿದ್ದರೆ ಮತ್ತೊಂದೆಡೆ ಇಷ್ಟು ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳಲಾಗದ, ಅಂದಾಜು 130 ಕೋಟಿ ಜನಸಂಖ್ಯೆ ಇರುವ ಇಡೀ ಆಫ್ರಿಕಾ ಖಂಡಕ್ಕೆ ಏಪ್ರಿಲ್ ವರೆಗೆ ಸರಬರಾಜಾಗಿದ್ದದ್ದು ಕೇವಲ 26 ಲಕ್ಷ ವ್ಯಾಕ್ಸಿನ್ ಗಳು ಮಾತ್ರ!. ಒಟ್ಟಾರೆ ಏಷಿಯಾ ಹಾಗು ಲ್ಯಾಟಿನ ಅಮೆರಿಕಾದ 77 ಕೋಟಿ ಜನಸಂಖ್ಯೆ ಇರುವ ನೂರಕ್ಕೂ ಹೆಚ್ಚು ಬಡದೇಶಗಳಿಗೆ ಈವರೆಗೆ ಕೇವಲ 1 ಕೋಟಿ ವ್ಯಾಕ್ಸಿನ್ ಕೂಡಾ ಸಿಕ್ಕಿಲ್ಲ. ಪರಿಣಾಮವಾಗಿ ಅಮೇರಿಕ ಹಾಗು ಐರೋಪ್ಯ ದೇಶಗಳು, ಏಷಿಯಾ ಖಂಡದ ಜಪಾನ್, ಸಿಂಗಪುರ, ಹಾಂಕಾಂಗ್ ನಂಥ ಶ್ರೀಮಂತ ದೇಶಗಳು ಮತ್ತು ಚೀನಾ 2021ರ ವೇಳೆಗೆ ತಮ್ಮ ದೇಶದ ಎಲ್ಲಾ ಜನರಿಗೂ ವ್ಯಾಕ್ಸಿನ್ ಹಾಕಿಸಿ ತಮ್ಮ ದೇಶಗಳನ್ನು ಕೋವಿಡ್ ಮುಕ್ತ ಮಾಡಿಕೊಳ್ಳಬಹುದು. ಆದರೆ ಈ ವ್ಯಾಕ್ಸಿನ್ ವಿತರಣೆಯಲ್ಲಿನ ವರ್ಗಬೇಧ ಮತ್ತು ವರ್ಣಬೇಧ ನೀತಿಗಳಿಂದಾಗಿ ಭಾರತ, ಬ್ರೆಜಿಲ್, ದ. ಆಫ್ರಿಕಾದಂಥ ದೇಶಗಳಲ್ಲಿ 2022 ರ ಅಂತ್ಯದ ವರೆಗೂ ಲಸಿಕೀಕರಣ ಮುಗಿಸಿರುವುದಿಲ್ಲ. ಇನ್ನು ಆಫ್ರಿಕಾ ದೇಶಗಳಂತೂ 2023 ರ ತನಕ ಕೋವಿಡ್ ಬಾಧೆಯಲ್ಲಿ ನರಳುವಂತಾಗುತ್ತದೆ. -ಸಾರ್ವಜನಿಕ ಆರೋಗ್ಯವನ್ನು ಮಾರುಕಟ್ಟೆ ಶಕ್ತಿಗಳಿಗೆ ಒಪ್ಪಿಸಿದಲ್ಲಿ ಆಗುವ ಅನಾಹುತವಿದು. ಸಾರ್ವಜನಿಕ ಆರೋಗ್ಯ ಅದರಲ್ಲೂ ಸಾಕ್ರಾಮಿಕದಂಥ ಖಾಯಿಲೆಗಳ ಸಂದರ್ಭದಲ್ಲಿ ವ್ಯಾಕ್ಸಿನ್ಗಗಳು ಕೇವಲ ಮಾರುಕಟ್ಟೆ ಸರಕುಗಳಲ್ಲ. ಅವು ಒಂದು Public Good..ಅಂದರೆ ಎಲ್ಲರಿಗೂ ಸಮಾನವಾಗಿ ದಕ್ಕಿದರೆ ಮಾತ್ರ ಎಲ್ಲರ ಕಲ್ಯಾಣವಾಗುತ್ತದೆ. ದುಡ್ಡಿದ್ದವರಿಗೆ ಮಾತ್ರ ಸಿಕ್ಕಿ ಉಳಿದವರಿಗೆ ಸಿಗಲಿಲ್ಲವೆಂದರೆ ಹಣವಂತರ ಆರ್ಥಿಕತೆಯ ಆರೋಗ್ಯವು ಕೂಡಾ ಬಿಗಡಾಯಿಸುತ್ತದೆ. ಏಕೆಂದರೆ ಜಾಗತಿಕ ಸಾಂಕ್ರಾಮಿಕ ಸಂದರ್ಭಗಳಲ್ಲಿ: ಎಲ್ಲರೂ ಬಚಾವಾಗದ ಹೊರತು ಯಾರೊಬ್ಬರೂ ಬಚಾವಾಗಲಾರರು ಕಂಪನಿಗಳ ಲಾಭಾಂತರ ಮತ್ತು ವೈರಸ್ಸಿನ ರೂಪಾಂತರ ಆದರೆ ಸಾಂಕ್ರಾಮಿಕದ ನಿರ್ವಹಣೆಯ ಉಸ್ತುವಾರಿಯನ್ನು ಬಂಡವಾಳಶಾಹಿ ಶಕ್ತಿಗಳಿಗೆ ಮತ್ತು ಮಾರುಕಟ್ಟೆ ನಿಯಮಗಳಿಗೆ ಒಪ್ಪಿಸಿದರೆ ತಾತ್ಕಾಲಿಕವಾಗಿ ಕೆಲವು ಕಂಪನಿಗಳು ಲಾಭ ಮಾಡಿಕೊಂಡರೂ, ಒಟ್ಟಾರೆ ಜಗತ್ತಿನ ಆರ್ಥಿಕತೆಗೆ ಆಗುವ ನಷ್ಟ ಅದಕ್ಕಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ. ಜೊತೆಗೆ ಸಾಂಕ್ರಾಮಿಕವು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಏಕೆಂದರೆ ಎಲ್ಲಿಯತನಕ ಜಗತ್ತಿನ ಎಲ್ಲರೂ ವ್ಯಾಕ್ಸಿನ್ ಪಡೆದುಕೊಂಡು ಕೋವಿಡ್ ಮುಕ್ತರಾಗುವುದಿಲ್ಲವೋ ಅಲ್ಲಿಯತನಕ ವ್ಯಾಕ್ಸಿನ್ ಪಡೆದುಕೊಂಡ ಶ್ರೀಮಂತ ದೇಶಗಳು ಸಹ ಕೋವಿಡ್ ಅಲೆಗಳಿಂದ ಸಂಪೂರ್ಣವಾಗಿ ಮುಕ್ತವಾಗಲು ಸಾಧ್ಯವಿಲ್ಲ. ಅದರಲ್ಲೂ ಜಾಗತೀಕರಣದ ಈ ಕಾಲಘಟ್ಟದಲ್ಲಿ ಅದು ಸಾಧ್ಯವೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಒಂದು ದೇಶದಲ್ಲಿ ಮಾಡುವ ಅರೆಬರೆ ವ್ಯಾಕ್ಸಿನೀಕರಣ ದಿಂದ ಇಡೀ ಜಗತ್ತೆ ವ್ಯಾಕ್ಸಿನ್ ನಿರೋಧಕ ಶಕ್ತಿ ಪಡೆದುಕೊಂಡ ಹೊಸ ವೈರಸ್ ದಾಳಿಗೆ ತುತ್ತಾಗುತ್ತದೆ. ಏಕೆಂದರೆ ಸಂಪೂರ್ಣ ವ್ಯಾಕ್ಸಿನೀಕರಣವಾಗದೆ, ಜನಸಂಖ್ಯೆಯ ಒಂದು ವರ್ಗಕ್ಕೆ ಮಾತ್ರ ವ್ಯಾಕ್ಸಿನ್ ಕೊಟ್ಟಿದ್ದರೆ , ಅಥವಾ ಒಂದೂ ವ್ಯಾಕ್ಸಿನ್ ಮಾತ್ರ ಕೊಟ್ಟಿದ್ದರೆ , ಆ ಸಮುದಾಯದಲ್ಲಿ ಕರೋನಾವನ್ನು ಸಂಪೂರ್ಣವಾಗಿ ಹೊಡೆದಟ್ಟುವ ಪ್ರತಿರೋಧ ಸೃಷ್ಟಿಯಾಗದಿರಬಹುದು. ಆಗ ಕರೋನ ವೈರಸ್ಸು ವ್ಯಾಕ್ಸಿನ್ ನಿರೋಧ ಶಕ್ತಿಯನ್ನು ಸಂಚಯಿಸಿಕೊಂಡು ಹೊಸ ವೈರಸ್ಸಾಗಿ ರೂಪಾಂತರಗೊಂಡು ಹೊಸದಾಗಿ ಹರಡಲು ಪ್ರಾರಂಭಿಸಬಹುದು. ಆ ರೀತಿ ಮ್ಯುಟೆಂಟಾದ ಹೊಸ ಕರೋನಾ ವೈರಸ್ಸನ್ನು ಈಗಾಗಲೇ ಹಾಕಿಸಿಕೊಂಡಿರುವ ವ್ಯಾಕ್ಸಿನ್ ಗಳಿಂದ ತಡೆಗಟ್ಟಲು ಆಗುವುದಿಲ್ಲ.ಆದ್ದರಿಂದ ಅದು ಈಗಾಗಲೇ ವ್ಯಾಕ್ಸಿನ್ ಪಡೆದುಕೊಂಡಿರುವ ದೇಶಗಳ ಜನರಿಗೂ ಸುಲಭವಾಗಿ ಹರಡುತ್ತದೆ. ಹೀಗಾಗಿ ಇರುವುದೊಂದೇ ದಾರಿ.... ಜಗತ್ತಿನ ಎಲ್ಲಾ ಜನರು ಒಟ್ಟಿಗೆ ಮತ್ತು ಸಾಧ್ಯವಾದಷ್ಟು ಬೇಗ ವ್ಯಾಕ್ಸಿನ್ ಪಡೆದುಕೊಂಡು ಕೋವಿಡ್ ಮುಕ್ತವಾಗಬೇಕು. ಅತ್ಯಂತ ತ್ವರಿತವಾಗಿ ಮತ್ತು ಉಚಿತವಾಗಿ ಜಗತ್ತಿನ ಎಲ್ಲ ಜನರಿಗೂ ವ್ಯಾಕ್ಸಿನ್ ದೊರೆಯಬೇಕು. ಇಲ್ಲದಿದ್ದಲ್ಲಿ ಇಡೀ ಜಗತ್ತು ಪದೇಪದೇ ಹೊಸಹೊಸ ಬಗೆಯ ಕೋವಿಡ್ ಅಲೆಗಳಿಗೆ ತುತ್ತಾಗುತ್ತಲೇ ಇರುತ್ತದೆ. -ಅದಾಗಬೇಕೆಂದರೆ, ಜಗತ್ತಿನಲ್ಲಿ ಯಾವ್ಯಾವ ದೇಶಗಳಲ್ಲಿ ಸಾಧ್ಯವಿದೆಯೋ, ಸಾಮರ್ಥ್ಯ ವಿದೆಯೋ ಅಲ್ಲೆಲ್ಲಾ ಕೋಟಿ ಕೋಟಿ ಸಂಖ್ಯೆ ಗಳಲ್ಲಿ ಲಸಿಕೆ ಉತ್ಪಾದನೆಯಾಗಬೇಕು. ಹಾಗೂ ಲಾಭದ ಆದ್ಯತೆಯ ಮೇಲಲ್ಲದೆ, ಆರೋಗ್ಯ ತುರ್ತಿನ ಆದ್ಯತೆಯ ಮೇಲೆ ಅದರ ದಕ್ಷ ಹಂಚಿಕೆಯಾಗಬೇಕು. ಅದಾಗಬೇಕೆಂದರೆ ವ್ಯಾಕ್ಸಿನ್ ಮೇಲೆ ಕಂಪನಿಗಳಿಗೆ ಕೊಡಲಾಗಿರುವ ಪೇಟೆಂಟ್ ಹಿಂಪಡೆಯಬೇಕು. ವ್ಯಾಕ್ಸಿನ್ ಕಂಡು ಹಿಡಿದ ಕಂಪನಿಗಳೂ ಜಾಗತಿಕ ತುರ್ತು ಪರಿಸ್ಥಿತಿ ಯಲ್ಲಿ ಸೂಪರ್ ಪ್ರಾಫಿಟ್ಟನ್ನು ಮರೆತು ತಮ್ಮ ತಂತ್ರಜ್ಞಾನ, ಸಂಪನ್ಮೂಲ, ಫಾರ್ಮುಲಾಗಳನ್ನು ಹಂಚಿಕೊಳ್ಳಬೇಕು.... ಆದರೆ WTO, Patent ಹಾಗು ಇನ್ನಿತರ ಕೈಗಾರಿಕಾ ರಹಸ್ಯಗಳ ಕಾನೂನುಗಳಿಂದ ಲಾಭಸಬಲರಾಗಿರುವ ಈ ವ್ಯಾಕ್ಸಿನ್ ಬಿಲಿಯನೇರ್ಗಳು ಲಸಿಕೆ ಉತ್ಪಾದನೇ ಹಾಗು ವಿತರಣೆಗಳ ಮೇಲೆ ಏಕಸ್ವಾಮ್ಯವನ್ನು ಬಿಟ್ಟು ಕೊಡಲು ಸಿದ್ದವಿಲ್ಲ.. ಈ ಶಾಸನಬದ್ದ ಲಾಭಕೋರತನದಿಂದಾಗಿಯೇ ಇಂದು ಜಗತ್ತು ಹಲವಾರು ಕೋವಿಡ್ ಅಲೆಗಳನ್ನು ಎದುರಿಸಬೇಕಾದ ಅಪಾಯಕ್ಕೆ ತುತ್ತಾಗಿದೆ. ಇಷ್ಟಾದರೂ ಮೊನ್ನೆ ಮೇ 20 ರಂದು ಸಭೆ ಸೇರಿದ್ದ ಜಗತ್ತಿನ ಶ್ರೀಮಂತ ಬಂಡವಾಳಶಾಹಿ ದೇಶಗಳ ಕೂಟವಾದ G-7, ಬಡ ದೇಶಗಳಿಗೆ ವ್ಯಾಕ್ಸಿನ್ಸ್ ಉತ್ಪಾದಿಸಲು "ಸ್ವ ಪ್ರೇರಿತ ಲೈಸೆನ್ಸ್" ಕೊಡುವ ಬಗ್ಗೆ ಚರ್ಚಿಸಿದವೇ ವಿನಾ ಎಲ್ಲಾಬಗೆಯ ವ್ಯಾಕ್ಸಿನ್ ಉತ್ಪಾದನೆಯ ಮೇಲಿನ ಹಕ್ಕು ಸ್ವಾಮ್ಯವನ್ನು ತೆಗೆದುಹಾಕುವ ಮತ್ತು ಲಸಿಕೆ ಉತ್ಪಾದನಾ ತಂತ್ರಜ್ಞಾವನ್ನು ಹಂಚಿಕೊಳ್ಳುವ ಬಗ್ಗೆ ಪ್ರಸ್ತಾಪವನ್ನು ಕೂಡ ಮಾಡಲಿಲ್ಲ. ಪೇಟೆಂಟ್ ಬಿಡಲೊಪ್ಪದ ಲಾಭಪಿಪಾಸುಗಳು ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ವ್ಯಾಕ್ಸಿನ್ ಮೇಲಿನ ಪೇಟೆಂಟ್ ಹಕ್ಕನ್ನು ತೆಗೆದುಹಾಕಬೇಕೆಂದು WTO ಮುಂದೆ ಮನವಿ ಸಲ್ಲಿಸಿವೆ. (ಆದರೆ ಔಷಧ ಕಂಪನಿಗಳು ಲಾಭದ ಲಾಲಸೆ ಬಿಟ್ಟು ಪೇಟೆಂಟ್ ಹಂಚಿಕೊಳ್ಳಬೇಕೆಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮೋದಿ ನೇತೃತ್ವದ ಭಾರತ ಸರ್ಕಾರ ಭಾರತದೊಳಗೆ ವ್ಯಾಕ್ಸಿನ್ ಕಂಪನಿಗಳು ತಮಗಿಷ್ಟ ಬಂದಂಥ ದರ ನಿಗದಿ ಮಾಡುವ ನೀತಿಯನ್ನು ಜಾರಿ ಮಾಡಿದೆ!) ಎರಡು ವಾರಗಳ ಕೆಳಗೆ ಅಮೇರಿಕಾ ಕೂಡಾ ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದೆ. (ಆದರೆ ಈವರೆಗೆ ತನ್ನ ಔಷಧ ಕಂಪನಿಗಳ ಲಾಭಾಸಕ್ತಿಗೆ ಸೋಂಕು ತಗುಲುವ ಎಲ್ಲಾ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಲೇ ಬಂದಿದೆ) ಆದರೆ ಭಾರತ-ಆಫ್ರಿಕಾ ಜಂಟಿ ಪ್ರಸ್ತಾಪಗಳಿಂದ ಪರಿಣಾಮಕಾರಿಯಾದದ್ದೇನೂ ಆಗುವುದಿಲ್ಲ. ಏಕೆಂದರೆ ಕಳೆದ ಅಕ್ಟೋಬರ್‌ನಲ್ಲಿ ಈ ಪ್ರಸ್ತಾಪ ಮುಂದಿಟ್ಟ ನಂತರ TRIPS Council ನ ಹತ್ತು ಸಭೆಗಳು ನಡೆದಿದ್ದು ಇನ್ನೂ ಪ್ರಾಥಮಿಕ ಹಂತದ ಚರ್ಚೆಗಳು ಮುಕ್ತಾಯಗೊಂದಿಲ್ಲ. ಮುಂದಿನ ಜೂನ್ ತಿಂಗಳಲ್ಲಿ ಭಾರತ ಮತ್ತು ದ. ಆಫ್ರಿಕಾ ತಮ್ಮ ಪ್ರಸ್ತಾಪದ ಪರಿಷ್ಕೃತ ಕರಡನ್ನು ಮುಂದಿಡಬೇಕಿದೆ. ಆ ನಂತರ ಕರಡಿನ ಪ್ರತಿಪದಶಃ ಚರ್ಚೆಗಳು ಪ್ರಾರಂಭವಾಗಲಿವೆ. ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದ್ದು ಮುಗಿಯಲು ಒಂದೆರಡು ವರ್ಷಗಳು ಬೇಕಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ WTO ನಲ್ಲಿ 164 ಸದಸ್ಯ ರಾಷ್ಟ್ರಗಳಿದ್ದು, ಎಲ್ಲಾ ಸದಸ್ಯ ರಾಷ್ಟ್ರಗಳೂ ಒಪ್ಪಿಕೊಳ್ಳದೆ ಪೇಟೆಂಟ್ ತಾತ್ಕಾಲಿಕ ರದ್ದು ಪ್ರಸ್ತಾಪ ಕೂಡಾ ಪಾಸಾಗುವುದಿಲ್ಲ. ಮತ್ತು ಇದಕ್ಕೆ Pfizer ವ್ಯಾಕ್ಸಿನ್ ಪೇಟೆಂಟ್ ಹೊಂದಿರುವ ಜರ್ಮನಿ, Covishield ಉತ್ಪಾದಿಸುವ ಇಂಗ್ಲೆಂಡ್, ಕೆನಡಾ ಇನ್ನಿತರ ದೇಶಗಳು ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿವೆ. ಮೇಲಾಗಿ ಇದು ಕೇವಲ ಪೇಟೆಂಟ್ ರದ್ದಾದರೆ ಉತ್ಪಾದನೆ ಮಾಡಬಹುದಾದ ವ್ಯಾಕ್ಸಿನ್ ಅಲ್ಲ. ಇದಕ್ಕೇ ಬೇಕಾದ ಜೈವಿಕ ವಸ್ತು, ಉತ್ಪಾದನಾ ತಂತ್ರ , ಮಾನವ ಸಂಪನ್ಮೂಲ ಇವೆಲ್ಲವನ್ನೂ ಕೂಡಾ ಹಂಚಿಕೊಳ್ಳುವ ವ್ಯವಸ್ಥೆಯಾಗದೆ ಕೇವಲ ಪೇಟೆಂಟ್ ರದ್ದಾದರೆ ಇತರ ದೇಶಗಳಲ್ಲಿ ವ್ಯಾಕ್ಸಿನ್ ಉತ್ಪಾದಿಸಲು ಆಗುವುದಿಲ್ಲ. ಅಂದರೆ ಈ ಉತ್ಪಾದನ ವ್ಯವಸ್ಥೆ ಲಾಭಕೋರ ಕಾರ್ಪೊರೇಟ್ ಕಂಪನಿಗಳ ಹಿಡಿತದಿಂದ ಹೊರಬರದೆ ಜಗತ್ತು ಉಳಿಯಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಹೊಸದಾಗಿ ವ್ಯಾಕ್ಸಿನ್ ಬಿಲಿಯನೇರ್ಗಳಾದ ಮೇಲಿನ ಒಂಭತ್ತು ಬಿಳಿಯನಾಧೀಶರು ಹೋದ ವರ್ಷ ಮಾತ್ರ ಮಾಡಿರುವ ಲಾಭದಲ್ಲಿ ಬಡದೇಶಗಳ ಒಟ್ಟಾರೆ 77 ಕೋಟಿ ಜನರಿಗೆ ಎರಡೆರಡು ಬಾರಿ ವ್ಯಾಕ್ಸಿನ್ ಹಾಕಬಹುದು. ಹಾಗೆಯೇ ಈಗಾಗಲೇ ಔಷಧ ಉದ್ಯಮದಲ್ಲಿರುವ ಮೇಲಿನ 8 ಕಂಪನಿಗಳು ಹೋದ ವರ್ಷ ಮಾತ್ರ ಮಾಡಿರುವ ಲಾಭದಲ್ಲಿ ಭಾರತದ ಪ್ರತಿಯೊಬ್ಬರಿಗೂ 1.6 ಬಾರಿ ವ್ಯಾಕ್ಸಿನ್ ಹಾಕಬಹುದು... ಎಲ್ಲಾ ಇದೆ...ಆದರೆ ಯಾವುದೂ ಸಿಗುವುದಿಲ್ಲ. ಕಣ್ಣಿಗೆಟಕಿದರೂ ಕೈಗೆಟುಕದಂತೆ ಬಂಡವಾಳ ಶಾಹಿ ವ್ಯವಸ್ಥೆಯ ಮಾಯಾಗನ್ನಡಿಯಿದೆ... ಲಾಭಕೋರ ಬಂಡವಾಳಶಾಹಿ ವೈರಸ್ಸಿಗೆ ಯಾವ ಲಸಿಕೆ? ಸಾರಾಂಶವಿಷ್ಟೇ: ಕೋವಿಡ್ ಸಾಂಕ್ರಾಮಿಕ ಹುಟ್ಟಲು ಕರೋನಾ ವೈರಸ್ಸು ಕಾರಣವಾಗಿದ್ದರೂ.. ಅದು ಜಗತ್ತಿನಾದ್ಯಂತ ಹರಡಲು ಹಾಗು ಲಕ್ಷಾಂತರ ಜನ ಸಾಯಲು ಕಾರಣವಾಗಿರುವುದು ಮಾತ್ರ ಈ ದೊಡ್ಡ ದೊಡ್ಡ ವ್ಯಾಕ್ಸಿನ್ ಬಂಡವಾಳಶಾಹಿಗಳು... ಮತ್ತು ಅವರ ಲಾಭಕ್ಕೆ ಪೂರಕವಾದ ಬಂಡವಾಳಶಾಹಿ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯೇ .. ಇತಿಹಾಸದಲ್ಲಿ ಇಂಥಾ ನಿರ್ಜೀವ ಕರೋನಾಗಳು ಹುಟ್ಟುಹಾಕಿದ ಸಾಂಕ್ರಾಮಿಕಗಳು ಮಾನವ ಕುಲಕ್ಕೆ ಮಾಡಿರುವ ಹಾನಿಗಿಂತ ಈ ಸಜೀವ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆ ಮಾಡಿರುವ, ಮಾಡುತ್ತಿರುವ, ಮಾಡಲಿರುವ ಹಾನಿ ಅತಿ ದೊಡ್ಡದು. ನಿರ್ಜೀವ ವೈರಸ್ಸುಗಳು ಮನುಷ್ಯರ ದೇಹವನ್ನು ಆಶ್ರಯಿಸಿ ಬೆಳೆದರೆ ...ಕಾರ್ಪೊರೇಟ್ ಬಂಡವಾಳಶಾಹಿಗಳು ವೈರಸ್ಸುಗಳನ್ನೇ ಆಶ್ರಯಿಸಿ ಬೆಳೆಯುತ್ತಾರೆ....ಜಗತ್ತನ್ನು ಬಲಿಗೊಡುತ್ತಾರೆ. ಕೋವಿಡ್ ನಿವಾರಣೆಗೆ ವ್ಯಾಕ್ಸಿನ್ ಸಾಕು... ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಬದಲು ಮಾಡಲು? ಕೃಪೆ: ವಾರ್ತಾಭಾರತಿ __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com

Advertisement
Advertisement
Recent Posts
Advertisement