ಬಡವರ ಮಕ್ಕಳು ಬಡವರಾಗಿಯೇ ಬದುಕಿ ಸಾಯುವುದು ಅಭಿವೃದ್ಧಿಯೇ? ಕಡಿಮೆ ಬೆಲೆಗೆ ದೊರಕುತ್ತಿದ್ದ ವಸ್ತುಗಳನ್ನು ಹೆಚ್ಚು ಬೆಲೆ ಕೊಟ್ಟು ಖರೀದಿಸುವುದರಿಂದ ಸಮಾಜದ ಉದ್ದಾರವಾಗುವುದೇ? ಹಾಗಾದರೆ ದೇಶ ಎತ್ತ ಸಾಗುತ್ತಿದೆ?
ವಾಕಿಂಗ್ ವೇಳೆ ಅಕಸ್ಮಾತ್ ಎದುರಾದ ನನ್ನ ಉದ್ಯಮಿ ಸ್ನೇಹಿತರೊಬ್ಬರು ಹೇಳಿದರು "ನೀವೇಕೆ ಸದಾ ಮೋದಿ ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ಬರೆಯುತ್ತೀರಿ? ಮೋದಿ ಸರ್ಕಾರ ಬರುವ ಮೊದಲು ನಮ್ಮ ಉದ್ಯಮಕ್ಕೆ ಕಾರ್ಮಿಕರ ಕೊರತೆ ಇತ್ತು, ಸಾಫ್ಟ್‌ವೇರ್ ಉದ್ಯೋಗಿಗಳ ಸಂಬಳದಂತೆ ಆ ಕಾರ್ಮಿಕರ ದಿನಗೂಲಿ 800-1000 ರೂಪಾಯಿಗೂ ದಾಟಿತ್ತು. ಕೇವಲ ಸಂಬಳ ಕೊಟ್ಟೆ ಸಾಕಾಗುತ್ತಿತ್ತುಮತ್ತು. ಆ ಕಾರಣಕ್ಕಾಗಿ ನೋಟು ನಿಷೇಧ ವಾಗುವ ಮೊದಲು ಸಾಮಾನ್ಯ ಜನರ ಹತ್ತಿರವೂ ಲಕ್ಷಗಟ್ಟಲೆ ಹಣವಿತ್ತು. ಅದರ ಪರಿಣಾಮವಾಗಿ ಊರಿಡಿ ನಾಯಿಕೊಡೆಗಳಂತೆ ಸಣ್ಣ ಸಣ್ಣ ಉಧ್ಯಮಗಳು ಸ್ಥಾಪನೆಗೊಂಡು ನಮಗೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದವು. ನಮ್ಮ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ಸಿಗುತ್ತಿರಲಿಲ್ಲ. ನೋಟು ನಿಷೇಧದ ನಂತರ ಅವರುಗಳ ನಿಜಬಣ್ಣ ಬೆಳಕಿಗೆ ಬಂದಿದೆ. ಆ ಕಳ್ಳ ಉಧ್ಯಮಗಳೆಲ್ಲ ಈಗೀಗ ಒಂದೊಂದಾಗಿ ಮುಚ್ಚುತ್ತಿವೆ. ಆ ಕಾರಣದಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಕೆಲಸ ಕಳೆದುಕೊಂಡಿದ್ದಾರೆ. ನಮ್ಮಂತಹ ಪ್ರಾಮಾಣಿಕ (!) ಉಧ್ಯಮಿಗಳಿಗೆ ಕಡಿಮೆ ಸಂಬಳಕ್ಕೆ ಬೇಕಾದಷ್ಟು ಕೂಲಿ ಕಾರ್ಮಿಕರು ದೊರೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಲ್ಲದೆ ನಮ್ಮ ಉತ್ಪನ್ಮಕ್ಕೂ ಹೆಚ್ಚಿನ ಬೆಲೆ ದೊರಕುತ್ತಿದೆ. ಇದೀಗ ನಮ್ಮ ಉಧ್ಯಮ ಬೆಳೆದು ನಿಂತಿದೆ. ಬ್ಯಾಂಕ್ ಲೋನ್ ಎರಡೇ ವರ್ಷಗಳಲ್ಲಿ ತೀರಿಸಿದ್ದೇವೆ. ಈಗ ಮತ್ತೊಂದು ಉಧ್ಯಮ ಆರಂಬಿಸಲು ಚಿಂತಿಸುತ್ತಿದ್ದೇವೆ. ಹಾಗಾದರೆ ನಿಮ್ಮ ಅಭಿಪ್ರಾಯದಲ್ಲಿ ಇದು ಅಭಿವೃದ್ಧಿ ಅಲ್ಲವೇ?" ಎಂದು. ಆ ಕ್ಷಣದಲ್ಲಿ ನನಗೆ ಅವರ ಮಾತು ಕೇಳಿ ನಿಜಕ್ಕೂ ಶಾಕ್ ಹೊಡೆದಂತಾಯಿತು. ಆದರೆ ಆ ಒಬ್ಬೊಬ್ಬ ಉಧ್ಯಮಿಗಳ ಸ್ಥಾನದಲ್ಲಿ ನಿಂತು ಯೋಚಿಸಿದರೆ ಅವರ ಮೋದಿ ಭಕ್ತಿಗೆ ಅರ್ಥವಿದೆ. ಅದು ಅಂಧ ಭಕ್ತಿ ಅಲ್ಲವೇ ಅಲ್ಲ. ಆತನಿಗೆ ಇದೀಗ ಕೇವಲ ಕಾರ್ಮಿಕರ ಸಂಬಳವೊಂದರಿಂದಲೇ ತಿಂಗಳಿಗೆ ಲಕ್ಷಾಂತರ ರೂ ಉಳಿಕೆಯಾಗುತ್ತಿದೆ. ಆ ಉಳಿಕೆಯ ಹಣದಿಂದಲೇ ಆತನ ಬ್ಯಾಂಕ್ ಲೋನ್ ತೀರಿದೆ. ಅದರ ಪರಿಣಾಮವಾಗಿ ಆತನ ಉಳಿತಾಯ ಜಾಸ್ತಿಯಾಗಿ ಆಸ್ತಿ- ಪಾಸ್ತಿ ವೃದ್ದಿಗೊಂಡಿದೆ. ಮನೆಗೆ ಮೂರು ಮೂರು ಕಾರುಗಳು ಬಂದಿವೆ. ಸಣ್ಣ ಮನೆ ಇದ್ದ ಜಾಗದಲ್ಲಿ ದೊಡ್ಡ ಬಂಗಲೆ ಎದ್ದು ನಿಂತಿದೆ. ವೈಭವದ ಜೀವನ ನಡೆಸುತ್ತಿದ್ದಾನೆ. ಆತನ ಮಾತಿನಲ್ಲಿ ನಿಜಕ್ಕೂ ಸತ್ಯಾಂಶವಿದೆ. ಹಾಗೆಯೇ.... ಆತನ ಕಾರ್ಖಾನೆಯ ಆ ನೂರಾರು ಸಂಖ್ಯೆಯ ಕಾರ್ಮಿಕರ ಕುರಿತು ಯೋಚಿಸಿದರೆ ಅಂದರೆ ಅವರ ಕುಟುಂಬದ ಮೂರು ಹೊತ್ತಿನ ಊಟ, ಅವರುಗಳ ಅದೇ ಆ ಮುರುಕಲು ಗುಡಿಸಲು, ಅವರುಗಳ ಮಕ್ಕಳ ವಿಧ್ಯಾಭ್ಯಾಸ, ಅವರ ಭವಿಷ್ಯ ಮುಂತಾದವುಗಳ ಕುರಿತು ಯೋಚಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ಏಕೆಂದರೆ ಸಾವಿರಾರು ಜನ ಬಡವರ ಬೆವರ ಫಲವನ್ನು ಒಬ್ಬ ಉಧ್ಯಮಿ ತನ್ನ ಐಷಾರಾಮದ ಬದುಕಿಗೆ ಉಪಯೋಗಿಸಿಕೊಳ್ಳುವುದೇ ಅಭಿವೃದ್ದಿಯೇ? ಆ ಬಡವರ ಮಕ್ಕಳು ಬಡವರಾಗಿಯೇ ಬದುಕಿ ಸಾಯುವುದು ಅಭಿವೃದ್ಧಿಯೇ? ಕಡಿಮೆ ಬೆಲೆಗೆ ದೊರಕುತ್ತಿದ್ದ ವಸ್ತುಗಳನ್ನು ಹೆಚ್ಚು ಬೆಲೆ ಕೊಟ್ಟು ಖರೀದಿಸುವುದರಿಂದ ಸಮಾಜದ ಉದ್ದಾರವಾಗುವುದೇ? ಹಾಗಾದರೆ ದೇಶ ಎತ್ತ ಸಾಗುತ್ತಿದೆ? ಆತನ ಕಾರ್ಖಾನೆಗೆ ಕಾರ್ಮಿಕರು ಕಡಿಮೆ ಸಂಬಳದಲ್ಲಿ ಜಾಸ್ತಿ ಕಾರ್ಮಿಕರು ದೊರೆಯಲು ಕಾರಣವಾದ ಸಣ್ಣ ಸಣ್ಣ ಉಧ್ಯಮಗಳು ಮುಚ್ಚುತ್ತಿರುವುದು ಶುಭಸೂಚನೆಯೇ? ಬಡವರ ಸಂಖ್ಯೆ ಜಾಸ್ತಿಯಾಗಿ, ಬೆರಳೆಣಿಕೆಯಷ್ಟು ಉಧ್ಯಮಿಗಳು ಸೃಷ್ಟಿಯಾಗುವುದು ದೇಶದ ಭವಿಷ್ಯಕ್ಕೆ ಪೂರಕವೇ? ಇವೆಲ್ಲವನ್ನು ಯಾರ ಹತ್ತಿರ ಚರ್ಚಿಸುವುದು?