Advertisement

ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ಬಯಲಾಗುವ ಭಯದಿಂದ ಸದನ ಮೊಟಕುಗೊಳಿಸುವ ತಂತ್ರ: ಡಿ.ಕೆ ಶಿವಕುಮಾರ್

Advertisement

ಕೊರೊನಾ ನಿಯಂತ್ರಣದ ಹೆಸರಿನಲ್ಲಿ ರಾಜ್ಯದ ಯಡಿಯೂರಪ್ಪ ಹಾಗೂ ಕೇಂದ್ರದ ನರೇಂದ್ರ ಮೋದಿ ಸರಕಾರಗಳು ಲೂಟಿಗಿಳಿದಿವೆ. ಕೊರೊನಾ ತಪಾಸಣಾ ಸಾಮಗ್ರಿಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗಳು ನಡೆದಿವೆ. ಆ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುವ ಭಯದಿಂದ ಇದೀಗ ರಾಜ್ಯ ಸರಕಾರವು ಸದನವನ್ನು ಮೂರೇ ದಿನಗಳಿಗೆ ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದು ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡಲಾರೆವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಒಂದೆಡೆ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಅದರ ನಿಯಂತ್ರಣ ದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮತ್ತೊಂದೆಡೆ ವೈದ್ಯಕೀಯ ಸಾಮಾಗ್ರಿಗಳ ಖರೀದಿ ವ್ಯವಹಾರದಲ್ಲಿ ಸುಮಾರು ಎರಡು ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ಇನ್ನೊಂದೆಡೆ ರಾಜ್ಯದೆಲ್ಲೆಡೆ ಬರ ಹಾಗೂ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ತನಕ ಯಾವುದೇ ಸಮರ್ಪಕವಾದ ಪರಿಹಾರ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಕೇಂದ್ರದಿಂದ ಪರಿಹಾರ ತರುವಲ್ಲಿ ಮತ್ತು ನಮ್ಮ ಜಿಎಸ್‌ಟಿ ಪಾಲನ್ನು ಪಡೆದು ತರುವಲ್ಲಿಯೂ ಕೂಡ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ. ರಾಜ್ಯದೆಲ್ಲೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಎಲ್ಲಾ ವಿಚಾರಗಳ ಕುರಿತು ಸದನದಲ್ಲಿ ಚರ್ಚೆಯಾಗಬೇಕಿದೆ ಎಂದಿದ್ದಾರೆ. ಪ್ರಜ್ಞಾವಂತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಇಂತಹ ಆಡಳಿತ ವೈಫಲ್ಯಗಳನ್ನು, ಭ್ರಷ್ಟಾಚಾರಗಳನ್ನು ಕಂಡೂ ಕಾಣದಂತೆ ಕೂರಲು ಬರುವುದಿಲ್ಲ. ಬಿಜೆಪಿ ಆಡಳಿತ ಸದನವನ್ನು ಮೊಟಕುಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ನಿಯಮದ ಪ್ರಕಾರ ಸದನ ನಡೆಸುವಂತೆ ನಾವು ಒತ್ತಡ ಹೇರಲಿದ್ದೇವೆ. ಸದನ ನಡೆದರೆ ಇವರುಗಳ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಬಯಲಾಗುವ ಭಯದಿಂದ ಸದನ ನಡರಸುವುದೇ ಬೇಡ ಎಂಬ ದುರಾಲೋಚನೆ ಹೊಂದಿದ್ದಾರೆ ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದವರು ವಿವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಯಾವ ಯಾವ ವರ್ಗಕ್ಕೆ ಎಷ್ಟು ತಲುಪಿದೆ? ಪರಿಹಾರ ಪಡೆಯಲು ಏನೆಲ್ಲಾ ಷರತ್ತು ಹಾಕಿದ್ದಾರೆಂಬ ದಾಖಲೆ ಇರಬೇಕಲ್ಲವೇ? ಪಿಎಂ - ಸಿಎಂ ಕೇರ್ ನಿಧಿಗೆ ಯಾರು ಎಷ್ಟು ದೇಣಿಗೆ ನೀಡಿದರು, ಯಾರಿಗೆ ಎಷ್ಟು ಹಣ ತಲುಪಿತು ಎಂಬ ಎಲ್ಲಾ ಮಾಹಿತಿಯನ್ನೂ ಸರ್ಕಾರ ಜನರಿಗೆ ನೀಡಬೇಕಲ್ಲವೇ? ಕಳೆದ 6 ತಿಂಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ಸತ್ತು ಹೋಗಿವೆ. ಜೊತೆಗೆ ಜನರನ್ನೂ ಸಾಯಿಸಿದ್ದಾರೆ. ಅವರ ರಕ್ತ ಹಿಂಡಿದ್ದಾರೆ. ವಲಸೆ ಕಾರ್ಮಿಕರ‌ ಸಮಸ್ಯೆಗಳು‌ ರಾಜ್ಯದಲ್ಲಿವೆ. ದೊಡ್ಡ ಪ್ರಚಾರ ಗಿಟ್ಟಿಸಿದ್ದ 10,000 ಹಾಸಿಗೆಯ ಕೋವಿಡ್ ಸೆಂಟರ್ ನ ಬಾಗಿಲನ್ನು ಅದೇಕೆ ಕೇವಲ 15 ದಿನಗಳಲ್ಲೇ ಮುಚ್ಚಲಾಯಿತು ಎಂಬುವುದು ಜನರಿಗೆ ತಿಳಿಯಬೇಕಲ್ಲವೇ? ಕೋವಿಡ್ ಹಿನ್ನೆಲೆಯಲ್ಲಿ ಅಧಿವೇಶನ ಬೇಗ ‌ಮುಗಿಸುವಂತೆ ಪ್ರಧಾನಿ ಮೋದಿ ಸೂಚಿಸಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ನಾಗರೀಕರ ಜೀವ ರಕ್ಷಣೆ ಸರ್ಕಾರದ ಕರ್ತವ್ಯ. ಜನರಿಗೆ ಕೋವಿಡ್ ಸೋಂಕು ಹಂಚಿದ್ದೇ ಈ ಸರ್ಕಾರಗಳು, ಹಾಗಾಗಿ ಈ‌ಗ ಜನರನ್ನು ರಕ್ಷಿಸುವುದೂ ಸರ್ಕಾರದ್ದೇ ಹೊಣೆ ಅಲ್ಲವೇ? ಈ ಕುರಿತು ಚರ್ಚೆಯಾಗಬೇಕಲ್ಲವೇ? ಸದನ ಮೊಟಕುಗೊಳಿಸಿದರೆ ಚರ್ಚೆ ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.

Advertisement
Advertisement
Recent Posts
Advertisement