ಜೆಡಿಎಸ್ ಮುಖಂಡ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ.
ಜೆಡಿಎಸ್ ಮುಖಂಡ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ.
Advertisement
ಜೆಡಿಎಸ್ ರಾಷ್ಟ್ರೀಯ ವಕ್ತಾರ, ಪ್ರಧಾನ ಕಾರ್ಯದರ್ಶಿ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಶನಿವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ತನ್ನ ಹಲವಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ಜೆಡಿಎಸ್ ನಿಂದ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ರಮೇಶ್ ಬಾಬು ಪುನಃ ಪರಿಷತ್ ಸ್ಥಾನಕ್ಕೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ನಾಯಕರು ಇವರಿಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕಾಗಿ ರಮೇಶ್ ಬಾಬು ಜೆಡಿಎಸ್ ಗೆ ರಾಜೀನಾಮೆ ನೀಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ರಮೇಶ್ ಬಾಬುರವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಲ ತಿಂಗಳ ಹಿಂದೆಯೇ ರಮೇಶ್ ಬಾಬುರವರು ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಮಾತುಕತೆ ನಡೆದಿತ್ತು ಆದರೆ ಬೇರೆಬೇರೆ ಕಾರಣಗಳಿಂದ ಈ ಸಮಾರಂಭವನ್ನು ಮುಂದೂಡಲಾಗಿತ್ತು. ರಮೇಶ್ ಬಾಬುರವರು ಯಾವುದೇ ಸ್ಥಾನಮಾನದ ಬೇಡಿಕೆ ಇಟ್ಟು ಪಕ್ಷ ಸೇರಿಲ್ಲ ಅವರು ಕಾಂಗ್ರೆಸ್ ನ ತತ್ವ ಸಿದ್ದಾಂತಗಳನ್ನು ಒಪ್ಪಿ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಹೃದಯಪೂರ್ವಕ ಸ್ವಾಗತ ಕೋರುತ್ತೇನೆ ಎಂದರು.
ರಮೇಶ್ ಬಾಬು ರವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ರಾಜಕೀಯಕ್ಕಷ್ಟೇ ಸೀಮಿತವಲ್ಲ, ಇದೊಂದು ಚಳವಳಿ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಗೊಂಡ ಕಾಂಗ್ರೆಸ್ ಎಂಬ ಚಳವಳಿ ಇಂದು ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆಯ ಸ್ಥಾಪನೆಗಾಗಿ ನಿರಂತರವಾಗಿದೆ. ಈ ಸಿದ್ಧಾಂತಗಳನ್ನು ಬೆಂಬಲಿಸುವ ಎಲ್ಲಾ ಮನಸ್ಸುಗಳು ಈ ವೇಳೆ ಒಂದಾಗಬೇಕು. ದೇಶದ ಇತರ ಎಲ್ಲಾ ರಾಜಕೀಯ ಪಕ್ಷಗಳಿಗೂ ಕಾಂಗ್ರೆಸ್ ಮಾತೃಪಕ್ಷ. ಅದು ರಾಷ್ಟ್ರೀಯ ಪಕ್ಷವೇ ಆಗಿರಲಿ ಅಥವಾ ಪ್ರಾದೇಶಿಕ ಪಕ್ಷಗಳೇ ಆಗಿರಲಿ. ಅವು ಒಂದಲ್ಲಾ ಒಂದು ರೀತಿ ಕಾಂಗ್ರೆಸ್ ಪಕ್ಷದ ಮೂಲದಿಂದಲೇ ಅಸ್ತಿತ್ವಕ್ಕೆ ಬಂದಿವೆ. ಹಾಗಾಗಿಯೇ ದೇಶದ ಉದ್ದಗಲಕ್ಕೂ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷವೆಂಬ ಹೆಗ್ಗಳಿಕೆ ನಮಗಿದೆ ಎಂದರು.
ನಾವಾಗಿಯೇ ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಬೇರೆ ಪಕ್ಷಗಳಿಂದ ಕೈಹಿಡಿದು ಎಳೆದುಕೊಂಡು ಬರೋದಿಲ್ಲ. ನಮ್ಮ ಪಕ್ಷದ ಸಿದ್ಧಾಂತಗಳನ್ನು, ಪಕ್ಷದ ನಾಯಕತ್ವವನ್ನು ಒಪ್ಪಿ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಸೈದ್ಧಾಂತಿಕ ಬದ್ಧತೆಯಿಲ್ಲದ ಅಧಿಕಾರದಾಹಿಗಳ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ಅಂಥವರಿಂದ ಕಾಂಗ್ರೆಸ್ ದೂರವಿರಲಿದೆ. ಮತ ನೀಡಿ ಗೆಲ್ಲಿಸಿದ ಮತದಾರರೇ ನೊಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ ಮಾಡಿದ್ದಾರೆ ಎಂದರೆ ರಾಷ್ಟ್ರದಲ್ಲಿ ಬಿಜೆಪಿ ಆಡಳಿತದ ಕೊನೆ ದಿನಗಳು ಸಮೀಪಿಸುತ್ತಿದೆ ಎಂದೇ ಅರ್ಥ. ಇಂಥಾ ಸಂದರ್ಭದಲ್ಲಿ ಗೌರವಯುತವಾಗಿ ಅವರೇ ರಾಜೀನಾಮೆ ನೀಡುವುದು ಉತ್ತಮ ಎಂದವರು ಹೇಳಿದರು
ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ನೆರೆಪರಿಹಾರ, ಜಿಎಸ್‌ಟಿ ಪರಿಹಾರ ಸೇರಿ ಹೆಚ್ಚಿನ ಅನುದಾನ ಕೇಳಿ ತರುತ್ತಾರೆಂಬ ನಿರೀಕ್ಷೆಯಿತ್ತು, ಆದರೆ ಅನುದಾನ ನೀಡುವ ಬಗ್ಗೆ ಕೇಂದ್ರದ ಯಾವೊಬ್ಬ ಮಂತ್ರಿಯೂ ಈ ವರೆಗೆ ಮಾತನಾಡಿಲ್ಲ. ಹೀಗಾಗಿ ರಾಜ್ಯದ ಬಿಜೆಪಿ ಸರ್ಕಾರ ಸರ್ಕಾರ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡುವುದು ನಿಶ್ಚಿತ ಎಂದರು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.