ಭೂಸುಧಾರಣಾ ಕಾಯ್ದೆ ತಿದ್ದುಪಡಿಯ ಹಿಂದೆ ಗುಲಾಮಗಿರಿ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವ ಹಿಡೆನ್ ಅಜೆಂಡಾ ಅಡಗಿದೆ; ಕುಂದಾಪುರ ಕಾಂಗ್ರೆಸ್.
ಭೂಸುಧಾರಣಾ ಕಾಯ್ದೆ ತಿದ್ದುಪಡಿಯ ಹಿಂದೆ ಗುಲಾಮಗಿರಿ ಪದ್ಧತಿಯನ್ನು ಮತ್ತೆ ಜಾರಿಗೊಳಿಸುವ ಹಿಡೆನ್ ಅಜೆಂಡಾ ಅಡಗಿದೆ; ಕುಂದಾಪುರ ಕಾಂಗ್ರೆಸ್.
Advertisement
ಕೇಂದ್ರದ ಮೋದಿ ಸರ್ಕಾರದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯ ಹಿಂದೆ ಭಂಡವಾಳಶಾಹಿಗಳ ಪರವಾದ ಹಿತಾಸಕ್ತಿ ಅಡಗಿದೆ. ಇವುಗಳು ಸ್ವಾವಲಂಬಿ ರೈತರನ್ನು ಭಂಡವಾಳಶಾಹಿಗಳ ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕರನ್ನಾಗಿಸುವ ಸ್ಪಷ್ಟ ಅಂಶಗಳನ್ನು ಹೊಂದಿವೆ. ಸರ್ಕಾರಗಳು ಬದಲಾಗುವುದು ಪ್ರಜಾಪ್ರಭುತ್ವದ ಒಂದು ಉತ್ತಮ ಲಕ್ಷಣವೇ ಆದರೂ ಸರ್ಕಾರಗಳು ಬದಲಾದಂತೆ ದೇಶದ ಜನಪರ ಕಾನೂನುಗಳು ಜನವಿರೋಧಿ ಕಾನೂನುಗಳಾಗಿ ತಿದ್ದುಪಡಿ ಆಗುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಅದು ಸರ್ವಾಧಿಕಾರದ ಲಕ್ಷಣವಾಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ವೇಳೆಗೆ ಕೃಷಿಯುತ್ಪನ್ನ ಸರಾಸರಿ ಶೇಕಡಾ 9.2 ಇದ್ದಿದ್ದರೆ 2020ಕ್ಕೆ ಅದೇ ಕೃಷಿಯುತ್ಪನ್ನ ಶೇಕಡಾ25 ಕ್ಕೆ ಏರಲು ಈ ಹಿಂದೆ ಆಳಿದ ಕಾಂಗ್ರೆಸ್ ಸರ್ಕಾರಗಳು ಹಸಿರುಕ್ರಾಂತಿಯ ಮೂಲಕ ಕೃಷಿಕರಿಗೆ ನೀಡಿದ ರೈತಪರವಾದ ಕಾಯ್ದೆಗಳೆ ಆಗಿವೆ. ಆ ಕಾರಣಕ್ಕಾಗಿ ಮೋದಿ ಸರ್ಕಾರದ ತಿದ್ದುಪಡಿ ಕಾಯ್ದೆಗಳನ್ನು ನಾವು ಪ್ರಬಲವಾಗಿ ವಿರೋದಿಸುತ್ತೇವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಅವರು ಇಂದು ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಉಡುಪಿ ಜಿಲ್ಲಾ ರೈತಸಂಘ , ಸಿಪಿಐಎಂ, ಡಿಎಸ್‌ಎಸ್, ಕರ್ನಾಟಕ ಪ್ರಾಂತ ರೈತಸಂಘ, ಸಿಐಟಿಯು,ಡಿವೈಎಫ್‌ಐ ಮುಂತಾದ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ 'ಕರ್ನಾಟಕ ಬಂದ್' ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಯಾವುದೇ ಕಾಯ್ದೆಗಳನ್ನು ತಿದ್ದುಪಡಿ ಮಾಡುವುದರ ಹಿಂದೆ ರೈತರ, ಕಾರ್ಮಿಕರ ಪರವಾದ ಸಾಮಾಜಿಕ ಕಳಕಳಿ ಇರಬೇಕೆ ಹೊರತೂ ರೈತರನ್ನು, ಕಾರ್ಮಿಕರನ್ನು ಭಂಡವಾಳಶಾಹಿಗಳ ಜೀತದಾಳಾಗಿಸುವ ಹುನ್ನಾರ ಅಡಗಿರಬಾರದು. ಆದರೆ ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರ್ಕಾರಗಳು ಇದೀಗ ಹಿಂದಿನ ಕಾಂಗ್ರೆಸ್ ಸರ್ಕಾರಗಳು ರೂಪಿಸಿದ ಜನಪರವಾದ ಕಾಯ್ದೆಗಳಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಮಸೂದೆ, ಕಾರ್ಮಿಕ ಕಾಯ್ದೆ ಮುಂತಾದವುಗಳನ್ನು ತಿದ್ದುಪಡಿ ಮಾಡುವುದರ ಮೂಲಕ ರೈತರುಗಳನ್ನು ಮತ್ತೆ ಬಂಡವಾಳಶಾಹಿಗಳ ಗುಲಾಮಗಿರಿಗೆ ತಳ್ಳುವ ಗುಪ್ತಕಾರ್ಯಸೂಚಿಯನ್ನು ಹೊಂದಿದೆ. ಈ ಸರ್ಕಾರಗಳು ಇಂತಹ ತಿದ್ದುಪಡಿ ಕಾಯ್ದೆಗಳ ಮೂಲಕ ರೈತರ, ಕಾರ್ಮಿಕರ ಮರಣ ಶಾಸನ ಬರೆಯುತ್ತಿವೆ. ಇವೆಲ್ಲವೂ ಜನಪರವಾದ ಅಂಬೇಡ್ಕರ್ ಸಂವಿಧಾನದ ಜಾಗದಲ್ಲಿ ಜನ ವಿರೋಧಿ ಸಂವಿಧಾನ ಜಾರಿಗೊಳಿಸುವ ಪೂರ್ವ ಸೂಚನೆಯಾಗಿದೆ ಎಂದು ನ್ಯಾಯವಾದಿ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಳ್ಕೆರೆ ವಿಕಾಸ್ ಹೆಗ್ಡೆ ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ ಮಾತನಾಡಿದರು. ಈ ಸಂಧರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ಕೆ.ಜಿ ನಿತ್ಯಾನಂದ, ಮುಖಂಡರಾದ ಕೃಷ್ಣದೇವ ಕಾರಂತ, ಗಣೇಶ ಶೇರೆಗಾರ, ಕೋಡಿ ಸುನಿಲ್ ಪೂಜಾರಿ, ಚಂದ್ರ ಅಮೀನ್, ಕೇಶವ ಭಟ್, ಜ್ಯೋತಿ ಡಿ. ನಾಯ್ಕ, ಆಶಾ ಕರ್ವಾಲೋ, ಹೇರಿಕುದ್ರು ಗಂಗಾಧರ ಶೆಟ್ಟಿ, ರಘುರಾಮ ನಾಯ್ಕ, ಮುನಾಫ್ ಕೋಡಿ, ಶಿವರಾಮ ಪುತ್ರನ್, ಸಂದೀಪ್ ಕೋಡಿ, ಧರ್ಮಪ್ರಕಾಶ್, ಶಿವಕುಮಾರ್, ರೋಷನ್ ಶೆಟ್ಟಿ, ಅಶೋಕ ಸುವರ್ಣ, ಅಬ್ದುಲ್ಲಾ ಕೋಡಿ, ದಿನೇಶ್ ಬೆಟ್ಟಾ, ರೋಷನ್ ಬೆರೆಟ್ಟೋ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಸ್ವಾಗತಿಸಿ ರಾಜೇಶ್ ವಡೇರಹೋಬಳಿ ವಂದಿಸಿದರು.
ನಿಮಗೆ ಈ ಬರಹ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.
ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.
ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com