Advertisement

ನಮ್ಮ ಶಾಸಕರೂ, ನಾವೂ ತಿಳಿಯದ -ಮರೆತ ಸತ್ಯಗಳು!

Advertisement

ಬರಹ: ನಿಖಿಲ್ ಕೋಲ್ಪೆ ಅಂತೂ ಇಂತೂ ರಾಜ್ಯದಲ್ಲಿ ನಾವು ನೋಡನೋಡುತ್ತಿರುವಂತೆಯೇ ಎಲ್ಲಾ ರೀತಿ ಕುದುರೆ, ಕತ್ತೆ ವ್ಯಾಪಾರಗಳೂ ನಡೆದವು! ರೆಸಾರ್ಟ್‌ಗಳೆಂಬ ರೇಸು ಕುದುರೆ ಲಾಯಗಳನ್ನೂ ನೋಡಿದೆವು. ಈಗ ನೋಡಿದರೆ, ಹೊರೆ ಹೊರುವ ಹೇಸರಗತ್ತೆಗಳಾದದ್ದು ನಾವೇ! ನಾವೇ ಆರಿಸಿದ ಕತ್ತೆ ಕುದುರೆಗಳು ನಮ್ಮಿಂದಲೇ ದೋಚಿದ ಸಂಪತ್ತನ್ನು ನಮ್ಮಿಂದಲೇ ಹೊರಿಸಿಕೊಂಡು ಬೀಗುತ್ತಿದ್ದರೆ, ನಾವು ಜೀವನ ಹೊರೆಯಲು ಏಗುತ್ತಿದ್ದೇವೆ! ಜೊತೆಗೆ ಕೊರೋನಾ, ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತ ಇತ್ಯಾದಿ ಸಮಸ್ಯೆಗಳ ಜೊತೆಗೂ ಏಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರಾಗಿ ನಮ್ಮ ನಿರೀಕ್ಷೆಗಳೇನಾಗಿದ್ದವು ಎಂಬುದನ್ನು ಒಮ್ಮೆ ಮರು ಮನನ ಮಾಡಿಕೊಳ್ಳುವುದೇ ಈ ಬರಹದ ಉದ್ದೇಶವೇ ಹೊರತು ಸಮಸ್ಯೆಗಳನ್ನು ಪಟ್ಟಿಮಾಡುವುದಲ್ಲ. ಹೆಚ್ಚಿನ ಶಾಸಕರು ಅಭಿವೃದ್ಧಿ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದರೆ, ಕೆಲವರು ಧರ್ಮರಕ್ಷಣೆಯ ಮಾತು ಆಡಿದ್ದರು. ಇವರಿಬ್ಬರೂ ಹೇಳಿದ್ದು ಸುಳ್ಳೆಂದು ನಮಗೀಗ ಮನವರಿಕೆ ಆಗಿರಬೇಕಿತ್ತು. ಇವರು ಇದು ಯಾವುದನ್ನೂ ಮಾಡಿಲ್ಲ. ಕೆಲವರಂತೂ ಬೆಂಕಿ ಹಚ್ಚುವ, ಸಮಾಜ ಒಡೆಯುವ ಕೆಲಸವನ್ನೇ ಮಾಡುತ್ತಿದ್ದಾರೆ. ಕಾರಣವೆಂದರೆ, ಒಬ್ಬ ಶಾಸಕನ ಕೆಲಸವೇನೆಂದು ಬಹುತೇಕರಿಗೆ, ಅಷ್ಟೇ ಏಕೆ ಸ್ವತಃ ಶಾಸಕರಿಗೇ ಗೊತ್ತಿರುವಂತಿಲ್ಲ! ಈ ಹಿನ್ನೆಲೆಯಲ್ಲಿ ಒಮ್ಮೆ ಒಬ್ಬ ವ್ಯಕ್ತಿ ಶಾಸಕರಾಗಿ ಆಯ್ಕೆ ಆದ ಮೇಲೆ ತಾನು ಒಂದು ಪಕ್ಷದ ಅಥವಾ ಒಂದು ಧರ್ಮದ ಶಾಸಕರಲ್ಲ, ಇಡೀ ಕ್ಷೇತ್ರದ ಎಲ್ಲಾ ಜನರ ಪ್ರತಿನಿಧಿ ಎಂಬುದನ್ನು ತಿಳಿದುಕೊಳ್ಳುವುದು ಅವರ‌ ಮೊದಲ ಕರ್ತವ್ಯ ಮಾತ್ರವಲ್ಲ; ವಾಸ್ತವವಾಗಿ ಆ ರೀತಿಯಲ್ಲಿ ಕೆಲಸ ಮಾಡುವುದು ಬಹುದೊಡ್ಡ ಸವಾಲು! ನಮಗೆಲ್ಲಾ ಅಭಿವೃದ್ಧಿ ಬೇಕು! ಇಲ್ಲಿ ನಮ್ಮ ನಿರೀಕ್ಷೆಗಳನ್ನು ಮತ್ತೆ ಒರೆಗೆ ಹಚ್ಚಿ ನೋಡಬೇಕು. ಹಾಗಾದರೆ, ಅಭಿವೃದ್ಧಿ ಎಂದರೆ ಏನು? ಕೇವಲ ರಸ್ತೆ ಮತ್ತು ಹೊಸ ಕಟ್ಟಡಗಳ ನಿರ್ಮಾಣವೆ? ದೇವಾಲಯಗಳು ಮತ್ತಿತರ ಪೂಜಾಸ್ಥಾನಗಳ ಉದ್ಧಾರವೇ? ಅಥವಾ ಇನ್ನೇನಾದರೂ ಇದೆಯೆ? ಸರಳವಾಗಿ ಹೇಳುವುದಾದಲ್ಲಿ ಅವೆಲ್ಲವೂ ಬೇಕು. ಅದರೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ಇತ್ಯಾದಿಗಳ ಜೊತೆಗೆಯೇ ಜನರ ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ಗುಣಮಟ್ಟ, ಅಥವಾ ತೃಪ್ತಿಯ ಮಟ್ಟ ಹೆಚ್ಚಿಸುವುದನ್ನೇ ನಿಜವಾದ ಅಭಿವೃದ್ಧಿ ಎನ್ನಬಹುದು. ಇದರಲ್ಲಿ ಜಾತಿ, ಧರ್ಮ, ಲಿಂಗ ಮೀರಿದ ಸಾಮಾಜಿಕ ನ್ಯಾಯ, ಶಾಂತಿ, ನೆಮ್ಮದಿಯೂ ಸೇರಿದೆ. ಇದನ್ನು ಸಾಧಿಸುವುದೇ ನಮ್ಮ ಶಾಸಕರ ಕೆಲಸವಾಗಬೇಕಿತ್ತು. ಆದರೆ, ಅವರು ಅವುಗಳನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದಾರೆ. ಶಾಸಕನೊಬ್ಬನ ಮುಖ್ಯ ಕೆಲಸವೆಂದರೆ ಶಾಸನ ರೂಪಿಸುವುದು ಮತ್ತು ಜನರ ಇಚ್ಚೆಗಳಿಗೆ ಅನುಗುಣವಾಗಿ ಸರಕಾರದ ದಿಕ್ಕನ್ನು ತಿರುಗಿಸುವುದು ಮತ್ತು ಪ್ರತಿಪಕ್ಷವಾಗಿದ್ದರೆ, ಅವುಗಳ ತಪ್ಪು ಒಪ್ಪುಗಳನ್ನು ಸರಕಾರಕ್ಕೆ ಮತ್ತು ಜನರಿಗೆ ಮನವರಿಕೆ ಮಾಡಿಕೊಡುವುದು. ಆದರೆ, ನಮ್ಮಲ್ಲಿ ಆಳುವ ಪಕ್ಷದ ಶಾಸಕರು ಸರಕಾರದ ದಿಕ್ಕನ್ನು ತಿರುಗಿಸುವುದು ಬಿಡಿ, ಕೇಂದ್ರದ ಒಂದು ಆಡನ್ನು ತಲೆಬಾಗಿಸಿ ಕುರುಡಾಗಿ ಹಿಂಬಾಲಿಸುವ ಕುರಿಗಳ ಮಂದೆಯಾಗಿದ್ದಾರೆ. ಜಿಎಸ್‌ಟಿ ಪಾಲಿನಿಂದ ಹಿಡಿದು, ಬರ ಪರಿಹಾರ ನಿಧಿಯ ತನಕ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗುತ್ತಿರುವಾಗ, ಇದೀಗ ಘೋರ ಮತ್ತು ಮುಕ್ತ ಭ್ರಷ್ಟಾಚಾರವೂ ಬೆಳಕಿಗೆ ಬರುತ್ತಿರುವಾಗ, ಅಭಿವೃದ್ಧಿ ಎಂಬುದು ಹಿಮ್ಮುಖವಾಗಿ ಸಾಗುತ್ತಿರುವಾಗ, ಶಾಸಕರು ಗಳು ಧ್ವನಿ ಎತ್ತಬೇಕಿತ್ತು; ಜನರನ್ನು ಬಡಿದೆಬ್ಬಿಸಬೇಕಿತ್ತು. ಆದರೆ, ಕೆಲವರನ್ನು ಹೊರತುಪಡಿಸಿದರೆ, ಉಳಿದವರು ಯಾವುದೋ ಮೋಡಿಗೆ ಸಿಲುಕಿದವರಂತೆ, ನಿರಾಶರಾದವರಂತೆ ಸುಮ್ಮನೇ ಕುಳಿತಿದ್ದಾರೆ. ಇದಕ್ಕೆಲ್ಲಕ್ಕಿಂತ ಮಿಗಿಲಾಗಿ ಶಾಸಕರು ತಮ್ಮ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು. ಅದಕ್ಕಾಗಿ ಪ್ರತಿಯೊಂದು ಇಲಾಖೆಯ ಜೊತೆಯೂ ವ್ಯವಹರಿಸಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ಹಾಗಾಗುತ್ತದೆಯೇ? ಇಲ್ಲ! ಶಾಸಕರು ಪೊಲೀಸ್, ಕಂದಾಯ, ಅಬಕಾರಿ, ಲೋಕೋಪಯೋಗಿ, ದೊಡ್ಡ ನೀರಾವರಿ, ವಿದ್ಯುತ್, ಸಾರಿಗೆ ಮತ್ತು ಇತರ ದೊಡ್ಡ ಹಣವಿರುವ ಇಲಾಖೆಗಳ ಕುರಿತು ಗಮನಹರಿಸುವುದು ಹೆಚ್ಚು. ಹೆಚ್ಚಿನವರು ತಮ್ಮ ಬೆಂಬಲಿಗರ ಕ್ರಿಮಿನಲ್ ಸಮಸ್ಯೆಗಳಿಗಾಗಿ ಪೊಲೀಸ್ ಠಾಣೆಗಳ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಾ, ಶಿಫಾರಸು ಬೀರುತ್ತಾ ಕಾರ್ಯಕರ್ತರ ನಡುವೆ 'ದೊಡ್ಡ ಜನ' ಎನಿಸಿಕೊಳ್ಳುತ್ತಾ, ತಮಗೆ ಆಪ್ತರಾದವರಿಗೆ ಆ ಲೈಸನ್ಸ್, ಈ ಪರ್ಮಿಷನ್, ಆ ಗುತ್ತಿಗೆ ಎಂದು ಓಡಾಡುತ್ತಾ ಕಾಲ ಕಳೆಯುವುದೇ ಹೆಚ್ಚು. ಇವೆಲ್ಲಾ ಎಲ್ಲಾ ಜನರ ಮೇಲೆ, ಎಲ್ಲಾ ಕಾಲಕ್ಕೂ ನೇರ ಪ್ರಭಾವ ಬೀರುವಂತವುಗಳಲ್ಲ. ಇದನ್ನು ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮತ್ತು ಬೆಂಗಳೂರು ರಾಜಕಾರಣ ಎನ್ನಬಹುದು. ಇದಕ್ಕೆ ಹೊರತಾಗಿ, ಜನರ ಮೇಲೆ ನೇರ ಪ್ರಭಾವ ಬೀರುವ ಶಿಕ್ಷಣ, ಅರೋಗ್ಯ, ಕೃಷಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಪಂಚಾಯತಿ ರಾಜ್ ಮುಂತಾದ ಹಲವಾರು ಮಹತ್ವದ ಖಾತೆಗಳು ಪಂಚಾಯತಿ ರಾಜ್ ವ್ಯವಸ್ಥೆಗೆ ಒಳಪಟ್ಟಿವೆ. ಆದುದರಿಂದ ಶಾಸಕರು ಗ್ರಾಮ ಪಂಚಾಯತ್, ನಗರ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ರಾಜಕಾರಣಕ್ಕೆ ಹೆಚ್ಚಿನ ಒತ್ತುನೀಡಬೇಕಾಗಿದೆ ಮತ್ತು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಆದರೆ, ನಾವು ಆರಿಸಿರುವ ಶಾಸಕರು ಇದನ್ನು ಮಾಡುತ್ತಿದ್ದಾರೆಯೆ? ಇದರ ಅರ್ಥ ಸ್ಥಳೀಯಾಡಳಿತ ಸಂಸ್ಥೆಗಳ ವ್ಯವಹಾರಗಳಲ್ಲಿ ಮೂಗು ತೂರಿಸಬೇಕೆಂದಲ್ಲ. ಎಲ್ಲಾ ಹಂತದ ಸ್ಥಳೀಯಾಡಳಿತ ಸಂಸ್ಥೆಗಳ ನಡುವೆ ಸಮನ್ವಯ ಮೂಡಿಸುವುದು ಮತ್ತು ಸರಕಾರಕ್ಕೆ ಕೊಂಡಿಯಾಗುವುದು ಶಾಸಕರ ಮುಂದಿರುವ ಮಹತ್ವದ ಸವಾಲು. ಆದರೆ, ಆಗುತ್ತಿರುವುದು ಮಾತ್ರ ಮೂಗುತೂರಿಸುವ ಮತ್ತು ವಿಕೇಂದ್ರೀಕರಣದ ಆಶಯಗಳನ್ನು ತಲೆಕೆಳಗು ಮಾಡುವ ಕೆಲಸವೇ! ಇವೆಲ್ಲಕ್ಕಿಂತ ಹೆಚ್ಚಾಗಿ ಈಗಿವ ವಾಸ್ತವ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಬೇಕು. ಶಾಸಕರು ಪಕ್ಷದ ಕಾರ್ಯಸೂಚಿಯಂತೆ ಕೆಲಸಮಾಡಬೇಕಾಗುತ್ತದೆ. ಕಾರ್ಯಕರ್ತರನ್ನೂ ತೃಪ್ತಿಪಡಿಸಬೇಕಾಗುತ್ತದೆ. ಹಾಗೆಂದು ಕ್ರಿಮಿನಲ್‌ಗಳನ್ನು ಬೆಂಬಲಿಸುತ್ತಾ ಜೊತೆಸೇರಿಸಿಕೊಂಡರೆ ಜನರು ಗಮನಿಸುತ್ತಾರೆಂಬುದನ್ನೂ ಮರೆಯಬಾರದು. ಶಾಸಕರು ಕೆಐಡಿಪಿ ಸೇರಿದಂತೆ ಹಲವು ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಅದುದರಿಂದ ಅವರಿಗೆ ತಳಮಟ್ಟದ ಎಲ್ಲಾ ವಿಷಯಗಳ ಅರಿವು, ನಿಖರ ಮಾಹಿತಿ ಇರಬೇಕು. ಅದಕ್ಕಾಗಿ ಸ್ವಹಿತಾಸಕ್ತಿಗಾಗಿ ತಪ್ಪು ದಾರಿಗೆಳೆಯಬಹುದಾದವರಿಂದ ದೂರವಿದ್ದು, ಗ್ರಾಮ ಮಟ್ಟದಿಂದಲೇ ಸಮಸ್ಯೆಗಳನ್ನು, ಬೇಡಿಕೆಗಳನ್ನು ತಿಳಿದುಕೊಂಡು ಕ್ರೂಡೀಕರಿಸಿ ಕ್ರಮಕೈಗೊಳ್ಳುವುದು ಕೂಡ ದೊಡ್ಡ ಸವಾಲು. ಹೊಸ ಯೋಜನೆಗಳನ್ನು ತರುವುದು, ಉದ್ಯೋಗಗಳ ಸೃಷ್ಟಿ, ಅಪಾಯಕಾರಿ-ಜನವಿರೋಧಿ ಯೋಜನೆಗಳನ್ನು ಪ್ರತಿರೋಧಿಸುವುದು ಕೂಡ ಸವಾಲಿನ ಕೆಲಸವೇ! ಇವೆಲ್ಲವೂ ಕೇವಲ ಆದರ್ಶಗಳು ಮಾತ್ರ. ಇದನ್ನು ಯಾರಾದರೂ ಮಾಡುತ್ತಿದ್ದಾರೆಯೇ? ಇಲ್ಲವೆಂಬ ಉತ್ತರವೇ ನಮ್ಮಿಂದ ಬರಬರಬಹುದು! ಹಾಗಾದರೆ, ತಪ್ಪಾಗಿರುವುದು ಎಲ್ಲಿ? ನಾವು ಇನ್ನಾದರೂ ಯೋಚಿಸಬೇಕು! (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು)

Advertisement
Advertisement
Recent Posts
Advertisement