ಸಮಾನತೆ, ಭ್ರಾತೃತ್ವ, ಮೈತ್ರಿ, ಸಾಮಾಜಿಕ ನ್ಯಾಯ ಇಂತಹ ಮಾನವೀಯ ಮೌಲ್ಯಗಳನ್ನು ಒಳಗೊಂಡ ಧರ್ಮದ ನೆಲೆ ನಮ್ಮ ಭಾರತ ಇತಿಹಾಸಕ್ಕಿದೆ. ಅನೇಕ ಸಂತರು, ಸಮಾಜ ಸುಧಾರಕರು, ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಮುತ್ಸದ್ಧಿಗಳು ನಮ್ಮ ನೆಲದಲ್ಲಿ ಹುಟ್ಟಿ ಬೆಳೆದು ಇಡೀ ವಿಶ್ವಕ್ಕೆ ಶಾಂತಿ ಮತ್ತು ಸಮಾನತೆಯ ಸಂದೇಶ ನೀಡಿ ದೇಶದ ಘನತೆಯನ್ನ ಹೆಚ್ಚಿಸಿದ್ದಾರೆ. ಇಂತಹ ಧಾರ್ಮಿಕ ನೆಲದಲ್ಲಿ ಪಂಥೀಯ ರಾಜಕಾರಣ, ಕೋಮುವಾದಿಗಳ ಕುಹಕಕ್ಕೆ ಇಡೀ ವಿಶ್ವ ಬೆಲೆ ತೆರಬೇಕಾದ ಪರಿಸ್ಥಿತಿ ಒದಗಿ ಬಂದಿದೆ
ಬುದ್ಧ, ಬಸವ, ಅಂಬೇಡ್ಕರ್ ರಂತಹ ಜೀವನ ಶೈಲಿ ಮತ್ತು ಅನುಸರಿಸಿದ ಮಾರ್ಗಗಳು ಇಂದು ಪ್ರಸ್ತುತವಾಗಿವೆ. ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಎಂಬ ಸುಳ್ಳಿನ ಭರವಸೆಗಳ ವೇದಿಕೆ ಇಂದಿನ ಆಡಳಿತದಲ್ಲಿ ಮಾಮೂಲಾಗಿ, ಕೆಲವು ದುರ್ಬಲ ವರ್ಗದವರನ್ನು ಗುರಿಯಾಗಿಸಿಕೊಂಡು ಸಮಾಜವನ್ನು ಅಸಹಿಷ್ಣುತೆಯ ಕೂಪಕ್ಕೆ ದೂಡುವ ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸುತ್ತಿವೆ. ಈ ನಡುವೆ ತಾತ್ಯಾತೀತತೆ ಅಥವಾ ಜಾತ್ಯಾತೀತರು ಪ್ರಭಲವಾಗಿ ತನ್ನ ಚಾಪು ಮೂಡಿಸಬೇಕಾದ ಅಗತ್ಯತೆ ಅತೀ ಜರೂರಾಗಿ ಆಗಬೇಕಿದೆ.
ಸರ್ವಜನಾಂಗದ ಶಾಂತಿಯ ತೋಟ ಎಂದು ಹೆಸರಾಗಿರುವ ನಮ್ಮ ನೆಲದಲ್ಲಿ ಕೋಮುವಾದಿಗಳು ನಮ್ಮನ್ನಾಳುವುದಿರಲಿ, ಕನಿಷ್ಟಪಕ್ಷ ಭವ್ಯ ಭಾರತದಲ್ಲಿ ಬದುಕುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಇಂತಹ ಕೋಮುವಾದೀ ಧೋರಣೆಸಹಿತ ಸಮುದಾಯಗಳ ವಿಘಟನೆ ಮತ್ತು ಹೊಣೆಗೇಡಿತನಗಳಿಂದ ಭಾರತದ ಬಹುತ್ವ, ಜಾತ್ಯಾತೀತತೆ, ಸಮನ್ವಯತೆಯಂತಹ ಮೂಲಭೂತ ಮೌಲ್ಯಗಳು ಠೇವಣಿ ಕಳೆದುಕೊಳ್ಳುವಂತಾಗಿದೆ.
ಪ್ರಾಸ್ತಾವಿಕವಾಗಿ ನೋಡುವುದಾದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು, ದುರ್ಬಲ ವರ್ಗದವರು, ಮುಖ್ಯವಾಗಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದು ಭಾರತದ ಅವನತಿಗೆ ಹಿಡಿದ ಕನ್ನಡಿ. ಇಂತಹ ಆಘಾತಗಳಿಗೆ ಕೆಲವು ಉದಾಹರಣೆ ಅಂದರೆ: ಹೈದರಾಬಾದಿನ ಪ್ರತಿಭಾವಂತ ಸಂಶೋಧಕ ರೋಹಿತ್ ಮೆಮುಲ್ಲ (ದಲಿತ) ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮುಂಬೈನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ. ಪಾಯಲ್ ತಡ್ವಿ ಹಾಗೂ ಹುಬ್ಬಳ್ಳಿಯ ಡಾ. ಓಂಕಾರ್ ವರ್ಣಬೇಧ, ಜಾತಿ ತಾರತಮ್ಯದ ಪಿಡುಗಿಗೆ ಬಲಿಯಾದದ್ದು, ಗುಂಡ್ಲುಪೇಟೆಯ ದಲಿತ ಯುವಕನೊಬ್ಬ ಶನಿದೇವರ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮನಸೋ ಇಚ್ಛೆ ಥಳಿಸಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಎನಿಸಲಿಲ್ಲ ಬದಲಾಗಿ ಕೋಮುವಾದಿಗಳ ಅಟ್ಟಹಾಸಕ್ಕೆ ಸಾಕ್ಷಿಯಾಯ್ತು.
ಇಂತಹ ಅದೆಷ್ಟೋ ಕ್ರೂರ ಘಟನೆಗಳು ನಮ್ಮಕಣ್ಣ ಮುಂದಿವೆ. ಈ ಎಲ್ಲಾ ಘಟನೆಗಳ ಹಿಂದೆ ಪ್ರಭುತ್ವದ ಮಾನಸಿಕ ಅಸ್ವಸ್ಥತೆ ಮತ್ತು ಹೊಣೆಗೇಡಿತನಗಳು ಪ್ರಮುಖ ಕಾರಣಗಳಾಗಿವೆ. ಈ ದಬ್ಬಾಳಿಕೆಗಳಿಗೆ ಪ್ರೇರಣೆ ನೀಡುತ್ತಿರುವವರು ನಮ್ಮ ನಡುವೆಯೇ ಇರುವ ಕೋಮುವಾದಿಗಳೆಂದರೆ ತಪ್ಪಾಗಲಾರದು. ಈ ಎಲ್ಲ ಬಗೆಯ ಜಾತಿ ಪ್ರೇರಿತ ಆತ್ಮಹತ್ಯೆಗಳು, ಹಲ್ಲೆಗಳು, ಸುಲಿಗೆಗಳು ಮತ್ತು ಕೊಲೆಗಳ ಹಿಂದೆ ಹಿಂದೂ ಧರ್ಮದ ಪರಮ ರಕ್ಷಕರೆಂದು ಬೊಬ್ಬೆ ಹೊಡೆಯುವ ಅಬ್ಬರದ ದೇಶಪ್ರೇಮಿಗಳಾದ ಮನುವಾದಿಗಳೇ ಇದ್ದಾರೆ.
ಮುಖ್ಯವಾಗಿ ಜಾತ್ಯಾತೀತ ನೆಲೆಗಟ್ಟಿನ ಹೋರಾಟಕ್ಕೆ ಬಲ ಸಿಗಬೇಕು. ಜಾತ್ಯಾತೀತರು ಮುಖ್ಯವಾಹಿನಿಗೆ ಬಂದು ಸಂಘಟಿತರಾಗಿ, ಎಲ್ಲ ವರ್ಗದವರನ್ನೂ ಇನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೋಮುವಾದಿಗಳನ್ನು ಬುಡಸಮೇತ ಹಡಗಿಸುವ ಕುರಿತು ಕಾರ್ಯತಂತ್ರ ರೂಪಿಸಬೇಕು. ದುರ್ಬಲ ವರ್ಗದವರ ಹಾಗೂ ಸಮುದಾಯ-ಸಮುದಾಯಗಳ ನಡುವೆ ಸಾಮರಸ್ಯ ಬೆಳೆಸುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನಸಿಕವಾಗಿ ಸ್ತೈರ್ಯ ತುಂಬಿ, ಒಗ್ಗಟ್ಟನ್ನು ಪ್ರದರ್ಶಿಸಬೇಕು. ಮೇಲ್ಜಾತಿ ಪ್ರಭುತ್ವಕ್ಕೆ ಅಂಟಿಕೊಂಡಿರುವವರ ವಿರುದ್ಧ, ನೊಂದವರ ಪರ ಹೋರಾಟಕ್ಕೆ ಸದಾ ಒಗ್ಗಟ್ಟಿನಿಂದ ಮುನ್ನುಗ್ಗುವ ಧೈರ್ಯ, ಕಾರ್ಯತಂತ್ರ ಜಾತ್ಯಾತೀತರ ಮಂತ್ರವಾಗಬೇಕು. ಇಲ್ಲವಾದಲ್ಲಿ ಇತ್ತೀಚಿಗೆ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆಹಳ್ಳಿಯಲ್ಲಿ ನಡೆದ ಅಮಾನವೀಯ ಘಟನೆಗಳಿಗೆ ಜಾತ್ಯಾತೀತರು ಮೂಕಪ್ರೇಕ್ಷಕರಾಗಬೇಕಾಗುತ್ತದೆ.
ಮೋದಿಯವರು ಮೇಲ್ಜಾತಿ ಪ್ರಭುತ್ವದ ನಾಯಕರಾಗಿಯಷ್ಟೇ ಉಳಿಯದೇ ಸಮಸ್ತ ಭಾರತೀಯರ ರಕ್ಷಕರಾಗಿ ಜವಾಬ್ದಾರಿಯುತವಾಗಿ ಪ್ರಧಾನಿ ಹುದ್ದೆಯನ್ನು ನಿರ್ವಹಿಸಬೇಕು. ಮೋದಿಯವರು ನಮ್ಮ ಹಿಂದಿದ್ದಾರೆ ಎಂಬ ಭ್ರಮೆಯಿಂದ ಕೋಮುವಾದಿಗಳು ಮತ್ತು ಜಾತಿವಾದಿಗಳು ಇಂತಹ ದಬ್ಬಾಳಿಕೆಗಳನ್ನು ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ಹೃದಯವಂತಿಕೆಗಳು ಭಾರತವನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕೆಂದರೆ ಜಾತ್ಯಾತೀರು ಆದರ್ಶದ ರೂಪುರೇಷೆಗಳೊಂದಿಗೆ ಸಮಾಜದ ಸ್ಬಾಸ್ತ್ಯ ಕಾಯುವುದಕ್ಕೆ ಪಣ ತೊಡಬೇಕು.