ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿಯವರು ಆದೇಶದಂತೆ ಗ್ರಾಮಪಂಚಾಯತ್ ಪಿಡಿಓ ಮುಂತಾದ ಅಧಿಕಾರಿಗಳು ರಾತ್ರೋರಾತ್ರಿ ಮಹಿಳಾ ಸ್ವಾವಲಂಬನಾ ಕೇಂದ್ರದ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಟೈಲರಿಂಗ್ ಮೆಷಿನ್, ಹೊಲಿಯಲು ತಂದಿಟ್ಟ ಹೊಸ ಬಟ್ಟೆಗಳು, ನಗದು ಮುಂತಾದುವುಗಳನ್ನು ಖಾಲಿ ಮಾಡಿಸಿ ಆ 80ಕ್ಕೂ ಹೆಚ್ಚು ಮಹಿಳೆಯರನ್ನು ಬೀದಿಪಾಲು ಮಾಡಿರುವುದನ್ನು ವಿರೋಧಿಸಿ ಶನಿವಾರ ಅಂಪಾರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ 'ಸರಣಿ ಧರಣಿ ಸತ್ಯಾಗ್ರಹ'ದಲ್ಲಿ ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿಯವರು ಬಿಜೆಪಿಯ ಹಲವಾರು ಯುವಕರು ಆ ಪಕ್ಷದ ಜನವಿರೋಧಿ ನೀತಿಯನ್ನು ವಿರೋಧಿಸಿ ಜನಪರವಾದ ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿರುವ ಕುರಿತು ಹೇಳಿಕೆ ನೀಡಿದ್ದರು ಮತ್ತು ಅದರ ಮುಂದುವರಿಕೆಯ ಭಾಗವಾಗಿ ಭಾನುವಾರ ಮಾಜಿ ಶಾಸಕರ ಕಟ್‌ಬೇಲ್ತೂರಿನ ನಿವಾಸದಲ್ಲಿ ಸುಮಾರು 52ಕ್ಕೂ ಹೆಚ್ಚು ಬಿಜೆಪಿಯ ಹೆಮ್ಮಾಡಿ ಹಾಗೂ ಕಟ್‌ಬೇಲ್ತೂರಿನ ಸುತ್ತಮುತ್ತಲಿನ ಸಕ್ರೀಯ ಯುವ ಕಾರ್ಯಕರ್ತರು ಗೋಪಾಲ ಪೂಜಾರಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಶಾಸಕ ಸುಕುಮಾರ ಶೆಟ್ಟರ ಸರ್ವಾಧಿಕಾರಿ ದೋರಣೆ ಮತ್ತು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತಕ್ಕೆ ಬೇಸತ್ತು ಇದೀಗ ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ಒಂದೊಳ್ಳೆಯ ಬೆಳವಣಿಗೆಯಾಗಿದ್ದು, ಇದು ಪ್ರಜಾಪ್ರಭುತ್ವದ ನೈಜ ಆಶಯ ಕೂಡ ಹೌದು. ಇದೀಗ ಆರಂಭಗೊಂಡಿರುವ ಈ ಸೇರ್ಪಡೆ ಪ್ರಕ್ರೀಯೆಯೂ ಮುಂದಿನ ದಿನಗಳಲ್ಲಿ ಕರಾವಳಿಯಾದ್ಯಂತ ಪಸರಿಸಿಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಆ ಮೂಲಕ ಈ ದೇಶದಲ್ಲಿ 2014ಕ್ಕೂ ಹಿಂದಿನ ಅಚ್ಚೇದಿನ ಗಳು ಮತ್ತೆ ಪ್ರತಿಷ್ಠಾಪನೆಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದ ಹೆಮ್ಮಾಡಿ ಹಾಗೂ ಕಟ್‌ಬೇಲ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು ಐವತ್ತಕ್ಕೂ ಹೆಚ್ಚಿನ ಯುವಕರ ತಂಡ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ಸಾಧನೆ, ಸರಳತನ, ಪ್ರಾಮಾಣಿಕತೆ ಮತ್ತು ಅನ್ಯಾಯಕ್ಕೊಳಗಾದ ಮಹಿಳೆಯರ ಬಗೆಗೆ ಅವರು ತಳೆದ ದಿಟ್ಟ ನಿಲುವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಂದೆರಡು ತಿಂಗಳಲ್ಲೆ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೆಮ್ಮಾಡಿ ಹಾಗೂ ಕಟ್ ಬೆಲ್ತೂರು ಗ್ರಾಮಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅವರುಗಳು ಪಣತೊಟ್ಟಿದ್ದು ಆ ಎರಡು ಪಂಚಾಯತ್ ಗಳಲ್ಲಿ ನಮ್ಮ ಪಕ್ಷದ ಗೆಲುವು ನೂರಕ್ಕೆ ನೂರು ಖಚಿತ ಎಂದರು.
***********
►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com