Advertisement

ಉ.ಪ್ರ.: ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ 'ಮೇಲಿನವರು' ರೂಪಿಸಿದ ವ್ಯವಸ್ಥಿತ ಸಂಚಾಗಿತ್ತೇ? ಯಾರವರು ಮೇಲಿನವರು?

Advertisement

ಹದಿನೈದು ದಿನಗಳ ಹಿಂದೆ ಉತ್ತರ ಪ್ರದೇಶದ ಹಾಥ್ರಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು, ಆಕೆಯ ಮೇಲೆ ಭೀಕರ ವಾಗಿ ಹಲ್ಲೆ ನಡೆಸಲಾಗಿತ್ತು, ಆಕೆಯ ನಾಲಿಗೆಯನ್ನು ಕತ್ತರಿಸಲಾಗಿತ್ತು ಹಾಗೂ ಆಕೆಯ ಕುತ್ತಿಗೆಯನ್ನು ಮುರಿಯಲಾಗಿತ್ತು. ಜೀವನ್ಮರಣದ ಸ್ಥಿತಿಯಲ್ಲಿ ಪತ್ತೆಯಾದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆ ತನ್ನ ಮೇಲೆ ನಡೆದ ಅತ್ಯಾಚಾರ ಹಾಗೂ ಹಲ್ಲೆಯ ಕುರಿತು ಮತ್ತು ತನ್ನ ಆ ಚಿಂತಾಜನಕ ಸ್ಥಿತಿಗೆ ಕಾರಣರಾದ ನಾಲ್ವರು ರಕ್ಕಸರ ಹೆಸರನ್ನು ತನಿಖಾಧಿಕಾರಿಗಳಿಗೆ ತಿಳಿಸಿದ್ದಳು. ಅಪರಾಧಿಗಳನ್ನು ಬಂದಿಸುವಂತೆ ಆಕೆಗೆ ನ್ಯಾಯ ಒದಗಿಸುವಂತೆ ಆಕೆಯ ಹೆತ್ತವರು ಮತ್ತು ಗ್ರಾಮಸ್ಥರು ಪರಿಪರಿಯಾಗಿ ವಿನಂತಿಸಿಕೊಂಡರೂ ಪೋಲಿಸರು ಆಕೆ ಹೆಸರಿಸಿದ ಯಾವುದೇ ಆರೋಪಿಗಳನ್ನು ಬಂದಿಸುವ ಮನಸ್ಸು ಯಾ ದೈರ್ಯ(?) ಮಾಡಿರಲಿಲ್ಲ. ಆರೋಗ್ಯಸ್ಥಿತಿ ಗಂಬೀರಗೊಂಡ ಕಾರಣಕ್ಕೆ ಆಕೆ ಮಂಗಳವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಳು. ನೊಂದ ಕುಟುಂಬ ಆಕೆಯ ಮೃತದೇಹವನ್ನು ಪಡೆಯಲು ಬೆಳಗ್ಗಿನಿಂದ ಆಸ್ಪತ್ರೆಯ ಹೊರಗೆ ಕಾಯುತ್ತಿತ್ತಾದರೂ ರಾತ್ರಿಯ ತನಕ ಶವವನ್ನು ಹಸ್ತಾಂತರಿಸಿರಲಿಲ್ಲ. ನಡು ರಾತ್ರಿಯ ಹೊತ್ತಿಗೆ ಈಗಿಂದೀಗಲೇ ಶವಸಂಸ್ಕಾರ ಮಾಡುವಂತೆ ಪೋಲಿಸರು ಮೃತ ಯುವತಿಯ ಕುಟುಂಬಕ್ಕೆ ಸೂಚಿಸಿದಾಗ ಆಕೆಯ ಹೆತ್ತವರು 'ನಾವು ಆಕೆಯ ದೇಹಕ್ಕೆ ಅರಸಿನ ಹಚ್ಚಿ ಸ್ನಾನ ಮಾಡಿಸಿ ಶುದ್ಧೀಕರಿಸಿ, ಹೊಸ ಸೀರೆ ಉಡಿಸಿ ಹಿಂದೂ ಸಂಪ್ರದಾಯದ ಪ್ರಕಾರವೇ ಆಕೆಯ ಶವ ಸಂಸ್ಕಾರ ಮಾಡುತ್ತೇವೆ. ನಮಗೆ ಬೆಳಗ್ಗಿನ ತನಕ ಸಮಯ ಬೇಕು' ಎಂದು ವಿನಂತಿಸಿದ್ದರು. ಆದರೆ ಆಕೆಯ ಶವವನ್ನು ಮನೆಗೆ ತಗೆದುಕೊಂಡು ಹೋಗಲು ನಿರಾಕರಿಸಿದ ಪೋಲಿಸರು ಆಕೆಯ ಮನೆಯ ಸುತ್ತ ಪೋಲಿಸ್ ಬಂದೋಬಸ್ತು ವಿಧಿಸಿ ಆಕೆಯ ಮನೆಯ ಹತ್ತಿರ ಗ್ರಾಮಸ್ಥರು ಮತ್ತಿತರರು ಬಾರದಂತೆ ಹಾಗೂ ಮನೆಯಿಂದ ಯಾರೂ ಹೊರಹೋಗದಂತೆ ತಡೆದು ರಾತ್ರಿ ಎರಡರ ಹೊತ್ತಿಗೆ ಯಕಶ್ಚಿತ್ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದ ಆಕೆಯ ಸಹೋದರ ಮತ್ತು ಹೆತ್ತವರನ್ನು ಕೂಡ ಜೊತೆಯಲ್ಲಿ ಕರೆದುಕೊಳ್ಳದೇ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಸಾಗಿಸಿ ತಾವೇ ಸುಟ್ಟು ಹಾಕಿದ್ದರು. ಈ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಮಾಧ್ಯಮದ ಮಂದಿ ಹೆತ್ತವರನ್ನು ಹೊರಗಿಟ್ಟು ಮಾಡುತ್ತಿರುವ ಈ ಗಡಿಬಿಡಿಯ ಶವಸಂಸ್ಕಾರದ ಕುರಿತು ಕೇಳಿದ ಸಾಮಾಜಿಕ ಕಳಕಳಿಯ ಪ್ರಶ್ನೆಗೆ ಸಂಪೂರ್ಣ ಬೆವರಿದಂತಿದ್ದ ಎಸಿಪಿ ಗ್ರೇಡಿನ ಅಧಿಕಾರಿ 'ನಾನೊಬ್ಬ ಚಪ್ರಾಸಿ ಅಧಿಕಾರಿ, ಕೇವಲ ನಾವು ಮೇಲಿನವರ ಆದೇಶ ಪಾಲಿಸುತ್ತಿದ್ದೇವೆ' ಎನ್ನುತ್ತಾರೆ. ಹಾಗೆಯೇ ಆ ನಂತರ ಪೋಲಿಸ್ ಇಲಾಖೆ ಹೊರಡಿಸಿದ ಹೇಳಿಕೆಯಲ್ಲಿ 'ಮರಣೋತ್ತರ ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿದವನು ಕೇವಲ ಒಬ್ಬ ಮಾತ್ರವೇ ಆಗಿರುತ್ತಾನೆ. ಅದರಿಂದಲೇ ಆಕೆ ಮೃತಪಟ್ಟಿದ್ದಾಳೆ' ಎಂದು ಉಲ್ಲೇಖಿಸಲಾಗಿರುತ್ತದೆ. ಇಲ್ಲಿ ಪ್ರಶ್ನೆ ಇರುವುದು ಮೊದಲನೆಯದಾಗಿ ಘಟನೆ ನಡೆದು 15 ದಿನಗಳು ಕಳೆದರೂ ಆಕೆಯ ಹೇಳಿಕೆಯ ಆದಾರದ ಮೇಲೆ ಅದ್ಯಾಕೆ ಪೋಲಿಸರು ಆ ನಾಲ್ವರು ಆರೋಪಗಳನ್ನು ಮೊನ್ನೆಯ ತನಕವೂ ಬಂದಿಸಿರಲಿಲ್ಲ? ಬಂದಿಸದಂತೆ ಯಾರ ಒತ್ತಡವಿತ್ತು? ಎರಡನೆಯದಾಗಿ ಆಕೆ 'ತನ್ನ ಮೇಲೆ ಅತ್ಯಾಚಾರ ನಡೆದಿದೆ' ಎಂದು ಹೇಳಿದ್ದಾಗ್ಯೂ ಅದು ಹೇಗೆ 'ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ' ಎಂದು ಮರಣೋತ್ತರ ವರದಿ ಸಿದ್ದಗೊಳಿಸಲಾಗುತ್ತೇ? ಬಂದಿಸದಂತೆ ಒತ್ತಡ ಹೇರಿದ ಕೈಗಳು ಮರಣೋತ್ತರ ವರದಿ ಸಿದ್ದಪಡಿಸುವಾಗ ಒತ್ತಡ ಹೇರಿಲ್ಲ ಎಂದು ನಂಬುವುದಾದರೂ ಹೇಗೆ? ಮೂರನೆಯದಾಗಿ ಅದು ಏಕೆ ಆಕೆಯ ಶವವನ್ನು ಹೆತ್ತವರಿಗೆ ಹಸ್ತಾಂತರಿಸಿ ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಿಲ್ಲ ಮತ್ತು ಅದೇಕೆ ನಡುರಾತ್ರಿ ಮನೆಯವರನ್ನು ಹೊರಗಿಟ್ಟು ಪೋಲಿಸರೇ ಶವಸಂಸ್ಕಾರ ನಡೆಸಿದರು? ಹಾಗೆ ಮಾಡುವುದರಿಂದ ಅದ್ಯಾವ ಸತ್ಯವನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ? ಇದರಲ್ಲಿ ಅದ್ಯಾರ ಹಿತಾಸಕ್ತಿಯನ್ನು ಕಾಪಾಡಲಾಗುತ್ತಿದೆ? ನಾಲ್ಕನೆಯದಾಗಿ ಬೆವರುಮಯವಾಗಿದ್ದ ಆ ಪೊಲೀಸ್ ಅಧಿಕಾರಿ ಮಾಧ್ಯಮದವರ ಹಿಡೆನ್ ಕ್ಯಾಮರಾ(?) ಮುಂದೆ ನನಗೇನೂ ಗೊತ್ತಿಲ್ಲ, ನಾನೊಬ್ಬ ಚಪ್ರಾಸಿ ಅಧಿಕಾರಿ, ನಾನು 'ಮೇಲಿನವರ ಆದೇಶ'ವನ್ನು ಮಾತ್ರವೇ ಪಾಲಿಸುತ್ತಿದ್ದೇನೆ ಎನ್ನಲು ಕಾರಣವೇನು? ಏನದು ಮೇಲಿನವರ ಆದೇಶ? ಹಾಗೆ ಹೆತ್ತವರಿಗೆ ಹೆಣ ಹಸ್ತಾಂತರಿಸದೆ ಇರಲು ಇರಬಹುದಾದ ರಹಸ್ಯವಾದರೂ ಏನು? ಅಧಿಕಾರಿಗಳು ಹಾಗೆ ಮಾಡಬಹುದು ಎಂದು ಸಂವಿಧಾನದ ಯಾವ ಸೆಕ್ಷನ್ ನಲ್ಲಿ ಉಲ್ಲೇಖಿಸಲಾಗಿದೆ? ಆಕೆ ಮತ್ತು ಆಕೆಯ ಮನೆಯವರು ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದಾಗ್ಯೂ ಮರಣೋತ್ತರ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎನ್ನುವುದು ಸಾಭೀತಾಗುವುದೇ ಹೌದಾದರೆ ಅದೇಕೆ ಕಾನೂನಿನ ಪ್ರಕಾರ ಮೃತದೇಹವನ್ನು ಅಗತ್ಯ ಬಿದ್ದರೆ ಎರಡನೆಯ ಪೋಸ್ಟ್ ಮಾರ್ಟಂ ಮಾಡುವ ಉದ್ದೇಶಕ್ಕಾಗಿ ಶವವನ್ನು ಹೂಳಬೇಕಿತ್ತಲ್ಲವೇ? ಕಾನೂನು ಪ್ರಕಾರ ಹಾಗೇಕೆ ಮಾಡಲಿಲ್ಲ? ಅದೇಕೆ ಶವವನ್ನು ಸುಡಲಾಯಿತು? ನಾಳೆ ಈ ಕುರಿತು ನ್ಯಾಯಾಲಯಕ್ಕೆ ಇವರೇನು ಉತ್ತರ ಕೊಟ್ಟಾರು? ಅದಲ್ಲವಾದರೆ ಅತ್ಯಾಚಾರ, ಕೊಲೆಯಂತಹ ಹೀನ ಕೃತ್ಯ ನಡೆಸಿದವರಿಗೆ ಶಿಕ್ಷೆಗೆ ಗುರಿಪಡಿಸಲು ಮೀನ ಮೇಷ ಎಣಿಸುವ, ಅವರನ್ನು ರಕ್ಷಿಸಲು ಪ್ರಯತ್ನಿಸುವ ಹಿಂದಿನ ಉದ್ದೇಶವಾದರೂ ಏನು? ಇದರ ಹಿಂದೆ ಇರುವವರಾದರೂ ಯಾರು? ಅಥವಾ ಆ ಅಮಾಯಕ ಬಾಲೆಯ ಮೇಲೆ ನಡೆದ ಈ ದುಷ್ಕೃತ್ಯ 'ವ್ಯವಸ್ಥಿತ ಸಂಚು' ಆಗಿತ್ತೇ? ಅದು ಸಂಚಾದರೆ ಅದರ ಹಿಂದಿನ ಅಸಲಿಯತ್ತೇನು? ಅದಲ್ಲವಾದರೆ ಆ ನಮ್ಮ ಸಹೋದರಿಗೆ ಅದೇಕೆ ನ್ಯಾಯ ನಿರಾಕರಿಸಲ್ಪಡುತ್ತಿದೆ? ಕೊನೆಯದಾಗಿ ಪೋಲಿಸ್ ಅಧಿಕಾರಿ ಹೇಳಿದ ಆ 'ಮೇಲಿನವರು' ಯಾರು? ಈ ಕುರಿತು ದೇಶದ ಪ್ರಜೆಗಳಿಗೆ ಸತ್ಯ ತಿಳಿಯುವುದು ಬೇಡವೇ? ನಿಮಗೆ ಈ ಮೇಲಿನ ಬರಹ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement