ಈ ಮುಖವನ್ನು ನೆನಪಿಟ್ಟುಕೊಳ್ಳಿ, ಮುಂದೊಂದು ದಿನ ಈತ ನಿಮ್ಮದೇ ರಾಜ್ಯದ ರಾಜ್ಯಪಾಲ ಆದರೂ ಆದಾನು!
ಈ ಮುಖವನ್ನು ನೆನಪಿಟ್ಟುಕೊಳ್ಳಿ, ಮುಂದೊಂದು ದಿನ ಈತ ನಿಮ್ಮದೇ ರಾಜ್ಯದ ರಾಜ್ಯಪಾಲ ಆದರೂ ಆದಾನು!
Advertisement
ಬರಹ: ದಿನೇಶ್ ಕುಮಾರ್ ಎಸ್.ಸಿ ( ಲೇಖಕರು ಸಾಮಾಜಿಕ ಚಿಂತಕರು, ಜನಪರ ಬರಹಗಾರರು)
ಈ ಮೇಲಿನ ಚಿತ್ರದಲ್ಲಿರುವ ವ್ಯಕ್ತಿಯ ಮುಖವನ್ನೊಮ್ಮೆ ಸರಿಯಾಗಿ ನೋಡಿಕೊಳ್ಳಿ. ಉತ್ತರ ಪ್ರದೇಶವೆಂಬ ರಾಜ್ಯದ ಹತ್ರಾಸ್ ಜಿಲ್ಲೆಯ ಜಿಲ್ಲಾಧಿಕಾರಿ. ಮುಂದೊಂದು ದಿನ ಇವನು ನಿವೃತ್ತಿಯಾದ ನಂತರ ಯಾವುದಾದರೊಂದು ರಾಜ್ಯಕ್ಕೆ/ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯಪಾಲನಾಗಬಹುದು. ಅಥವಾ ಅಣ್ಣಾಮಲೈ ಹಾಗೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಚುನಾವಣೆಗೂ ಸ್ಪರ್ಧಿಸಬಹುದು.
ನಾವು ಜಿಲ್ಲಾಧಿಕಾರಿಗಳನ್ನು ಸಾಮಾನ್ಯವಾಗಿ ಡಿಸಿ ಎಂದು ಕರೆಯುತ್ತೇವೆ. ಅಲ್ಲಿ ಡಿಎಂ (district magistrate) ಎಂದು ಕರೆಯಲಾಗುತ್ತದೆ. ಮನೀಷಾ ಕುಟುಂಬವನ್ನು ಭೇಟಿ ಮಾಡಲು ಅವಕಾಶ ಕೊಡದ ಪೊಲೀಸರು ಚಾನಲ್ ವರದಿಗಾರ್ತಿಯರಿಗೆ ಪದೇ ಪದೇ ಹೇಳುತ್ತಿದ್ದ ಮಾತುಗಳು ಡಿಎಂ ಸಾಹೇಬರ ಆದೇಶ, ಡಿಎಂ ಸಾಹೇಬರನ್ನು ಕೇಳಿ, ಡಿಎಂ ಸಾಹೇಬರಿಂದ ಪರ್ಮಿಷನ್ ತನ್ನಿ ಎಂಬುದೇ ಆಗಿತ್ತು. ಒಬ್ಬ ಸಿಪಾಯಿ (ಪೊಲೀಸ್) ಡಿಎಂ ಸಾಹೇಬರು ನಮ್ಮ ಜಿಲ್ಲೆಯ ಮಾಲೀಕರು, ಅವರ ಆದೇಶದಂತೆ ಎಲ್ಲ ನಡೆಯುತ್ತದೆ ಎಂದು ಹೇಳಿದ.
ಪ್ರವೀಣ್ ಕುಮಾರ್ ಮನೀಷಾ ಪ್ರಕರಣದ ಕಣ್ಣಿಗೆ ಕಾಣುವ ಖಳನಾಯಕ. ಈತನ ಬಾಸ್ ಯಾರು ಎಂದು ಬಿಡಿಸಿಹೇಳಬೇಕಾಗಿಲ್ಲ. ತನ್ನ ಬಾಸ್ ನ ಅಣತಿಯಂತೆ ಈತ ಮಾಡಬಾರದ್ದನ್ನೆಲ್ಲ ಮಾಡಿದ. ಮನೀಷಾ ಕುಟುಂಬವನ್ನು ಕಾಡಿದ, ಪೀಡಿಸಿದ.
ಮನೀಷಾಳ ಮೃತದೇಹವನ್ನು ಸುಟ್ಟುಹಾಕಿಸಿದವನು ಇವನೇ. ಅಪ್ಪ, ಅಮ್ಮ ಪರಿಪರಿಯಾಗಿ ಬೇಡಿದರು. ನಮ್ಮ ಸಂಪ್ರದಾಯದ ಪ್ರಕಾರ ರಾತ್ರಿ ಅಂತ್ಯಸಂಸ್ಕಾರ ಮಾಡುವಂತಿಲ್ಲ, ಅವಳಿಗೆ ಕೊನೆಯ ಕರ್ಮಗಳನ್ನು ಮಾಡಲು ಅವಕಾಶ ಕೊಡಿ. ಮನೆಯಲ್ಲಿ ಆಕೆಗೆ ಅರಿಶಿಣ ಹಚ್ಚಬೇಕು, ಪೂಜೆ ಸಲ್ಲಿಸಬೇಕು ಎಂದು ಕಾಲುಹಿಡಿದು ಕೇಳಿಕೊಂಡರು, ಆಂಬುಲೆನ್ಸ್ ಗೆ ಅಡ್ಡ ಮಲಗಿದರು. ಇವನ ಮನಸು ಕರಗಲಿಲ್ಲ. ಮನೆಯವರು, ಸಂಬಂಧಿಗಳನ್ನು ಕೂಡುಹಾಕಿ ಮನೀಷಾ ದೇಹವನ್ನು ಸುಟ್ಟುಹಾಕಿಸಿಬಿಟ್ಟ.
ಇದೇ ಡಿಎಂ ಕುಟುಂಬಸ್ಥರನ್ನು ಬೆದರಿಸಿದ. ಅವನ ಬೆದರಿಕೆಯ ವಿಡಿಯೋ ವೈರಲ್ ಆಯಿತು. ಆತ ಹೇಳಿದ, ಮೀಡಿಯಾ ಇವತ್ತು ಇರುತ್ತೆ, ನಾಳೆ ಹೋಗುತ್ತೆ, ನೀವು ನಮ್ಮ ಮಾತು ಕೇಳಬೇಕು, ಇಲ್ಲದಿದ್ದರೆ ನಾವು ಬದಲಾಗಬೇಕಾಗುತ್ತದೆ. ಮನೆಯಿಂದ ತಪ್ಪಿಸಿಕೊಂಡು ಬಂದ ಹುಡುಗ ಹೇಳಿದ, ಮನೀಷಾಳ ತಂದೆಯ ಎದೆಗೆ ಇವನು ಒದ್ದುಬಿಟ್ಟ. ಆತ ಮೂರ್ಛೆ ತಪ್ಪಿಹೋಗಿದ್ದ. ಅವನಿಗೆ ಈ ಅಯೋಗ್ಯ ಚಿಕಿತ್ಸೆಯನ್ನೂ ಕೊಡಿಸಲಿಲ್ಲ. ಮಗಳನ್ನು ಕಳೆದುಕೊಂಡ ಬಡಪಾಯಿ ತಂದೆಗೆ ಜಿಲ್ಲೆಯ ಮಾಲೀಕ ಕೊಟ್ಟ ಉಡುಗೊರೆ ಇದು.
ಡಿಎಂ ಮಾಡಿದ ಹೀನಾತಿಹೀನ ಕೆಲಸವೆಂದರೆ ಮನೀಷಾಳ ಸೋದರ ಸಂದೀಪನ ಮೊಬೈಲ್ ಟ್ಯಾಪ್ ಮಾಡಿಸಿದ್ದು. ಆ ಹುಡುಗ ಇಂಡಿಯ ಟುಡೆ ವರದಿಗಾರ್ತಿ ತನುಶ್ರೀ ಪಾಂಡೆ ಜತೆ ಸಂಪರ್ಕದಲ್ಲಿರುವುದು ಗೊತ್ತಾಗುತ್ತಿದ್ದಂತೆ ಮನೆಯವರ ಮೊಬೈಲ್ ಫೋನುಗಳನ್ನು ಕಿತ್ತಿಟ್ಟುಕೊಂಡ. ಮನೀಷಾ ಸಂದೀಪನಿಗೆ ಫೋನ್ ಮಾಡಿ ತಂದೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿ ಕಳಿಸುವಂತೆ ಹೇಳಿದ್ದರು. ಈ ಕಾಲ್ ರೆಕಾರ್ಡಿಂಗನ್ನು ಬಿಜೆಪಿ ಐಟಿ ಸೆಲ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಯಿತು. ಮನೀಷಾ ಕುಟುಂಬದ ಮೇಲೆ ಕೆಲವು ಚಾನಲ್ ಗಳು ಒತ್ತಡ ಹೇರುತ್ತಿವೆ ಎಂದು ಅರ್ನಾಬ್ ಗೋಸ್ವಾಮಿ ಬಾಯಿಬಡಿದುಕೊಂಡ.
ಘಟನೆ ಇಡೀ ದೇಶದ ಗಮನ ಸೆಳೆದಿದೆ, ಇಡೀ ದೇಶದ ಜನರು ಮನೀಷಾಳಿಗಾಗಿ ಮರುಗುತ್ತಿದ್ದಾರೆ ಎಂಬುದು ಗೊತ್ತಿದ್ದೂ ಈತ ಇಷ್ಟು ದುಷ್ಟತನದಿಂದ ವರ್ತಿಸಲು ಹೇಗೆ ಸಾಧ್ಯವಿತ್ತು? ಆತನಿಗೆ ಆತನ ಬಾಸ್ ಬೆಂಬಲವಿತ್ತು ಮತ್ತು ಅವನ ನಿರ್ದೇಶನಗಳನ್ನು ಪಾಲಿಸುತ್ತಿದ್ದ. ಹಾಗಿದ್ದರೆ ಇಷ್ಟೆಲ್ಲ ಮಾಡಿದ್ದು ಯಾರಿಗಾಗಿ? ನಾಲ್ಕು ಮಂದಿ ರೇಪಿಸ್ಟ್ ಗಳನ್ನು ರಕ್ಷಿಸುವ ಅಗತ್ಯವಾದರೂ ಏನಿತ್ತು? ಆ ಠಾಕೂರ್ ಹುಡುಗರು ಪ್ರವೀಣ ಕುಮಾರನ ಸಂಬಂಧಿಗಳೇ? ಅಥವಾ ಅವನ ಬಾಸ್ ಸಂಬಂಧಿಗಳೇ?
ನಿನ್ನೆ ಅಜಯ್ ಬೀಷ್ಟ್ (ಆದಿತ್ಯನಾಥ ಎಂದು ಬರೆಯಬಾರದೆಂಬುದು ಗೆಳೆಯರ ಆಗ್ರಹ) ಸರ್ಕಾರ ಎಸ್ ಪಿ ಸೇರಿದಂತೆ ಹಲವು ಪೊಲೀಸರನ್ನು ಸಸ್ಪೆಂಡ್ ಮಾಡಿದೆ. ಮೀಡಿಯಾ ಒತ್ತಡ ಹೆಚ್ಚಿರುವುದರಿಂದ ಪ್ರವೀಣ್ ಕುಮಾರ್ ಕೂಡಾ ಇಂದು ಸಂಜೆಯೊಳಗೆ ಸಸ್ಪೆಂಡಾಗಬಹುದು. ಸುಮೋಟೋ ಕೇಸು ದಾಖಲಿಸಿಕೊಂಡಿರುವ ಅಲಹಾಬಾದ್ ಕೋರ್ಟ್ ಡಿಎಂ ಮತ್ತು ಎಸ್ ಪಿ ಯನ್ನು 12 ನೇ ತಾರೀಕು ಖುದ್ದಾಗಿ ಹಾಜರಾಗುವಂತೆ ಹೇಳಿದೆ. ಇವರಿಬ್ಬರೂ ಸಸ್ಪೆಂಡಾದ ಮೇಲೆ ಹೊಸ ಡಿಸಿ, ಎಸ್ ಪಿಗಳು ಕೋರ್ಟಿಗೆ ಹಾಜರಾಗುತ್ತಾರೆ, ಪ್ರಕರಣ ನಡೆದಾಗ ಅವರು ಅಧಿಕಾರದಲ್ಲಿ ಇಲ್ಲದ ಕಾರಣ ಅವರಿಗೆ ಉತ್ತರದಾಯಿತ್ವವೂ ಇರುವುದಿಲ್ಲ. ಸಸ್ಪೆಂಡಾದವರು ಈಗ ಸುಲಭವಾಗಿ ಕೋರ್ಟ್ ಡ್ರಿಲ್ ನಿಂದಲೂ ಬಚಾವಾಗಿದ್ದಾರೆ.
ಆ ನಾಲ್ವರು ರೇಪಿಸ್ಟರು ಮಾಡಿದ್ದ ಅನಾಚಾರದಷ್ಟೇ ಅಥವಾ ಅದಕ್ಕೂ ಹೆಚ್ಚಿನದನ್ನು ಈ ಡಿಎಂ ಪ್ರವೀಣ್ ಕುಮಾರ್ ಮಾಡಿದ್ದಾನೆ. ಸತ್ತವಳನ್ನು ಮತ್ತೆ ಮತ್ತೆ ಕೊಂದ ಪಾಪಿ ಇವನು. ಶಿಕ್ಷೆ ಇವನಿಗೂ ಆಗಬೇಕಲ್ಲವೇ? ಇನ್ನು ಇವರನ್ನೆಲ್ಲ ಕುಣಿಸಿದ ಆ ಮಹಾಪಾಪಿ ಮಹಾಮೃಗಕ್ಕೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ.
⚫ ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com