Advertisement

ಧರೆಗುರುಳಿತು ಜಯ ಸಿ. ಸುವರ್ಣ ಎಂಬ ದೊಡ್ಡಮರ

Advertisement

ಇಂದು ಮುಂಜಾನೆ ಮುಂಬೈನ ನನ್ನ ಗೆಳೆಯ ಹರೀಶ್ ಹೆಜಮಾಡಿ ‘ದೊಡ್ಡಮರ ಬಿತ್ತು’ ಎಂದ. ಕಳೆದ ರಾತ್ರಿ ನಿಧನರಾದ ಜಯ ಸಿ.ಸುವರ್ಣ ಬಿಲ್ಲವ ಸಮಾಜಕ್ಕೆ ನೆರಳಾಗಿದ್ದ ದೊಡ್ಡ ಮರ ಆಗಿದ್ದರು. ‘ದೊಡ್ಡ ಮರ’ದ ಉಪಮೆಯಲ್ಲಿ ಬಿಲ್ಲವ ಸಮಾಜದ ಇತ್ತೀಚಿನ ಇತಿಹಾಸದ ವೈಭವ ಮಾತ್ರವಲ್ಲ ಭವಿಷ್ಯದ ಅಭದ್ರತೆಯೂ ನನಗೆ ಕಾಣತೊಡಗಿದೆ. ಬರಹ: ದಿನೇಶ್ ಅಮಿನ್ ಮಟ್ಟು (ಲೇಖಕರು ಹಿರಿಯ ಪತ್ರಕರ್ತರು) ಹೊಟೇಲ್ ಉದ್ಯಮಿಯಾಗಿದ್ದ ಜಯಸುವರ್ಣರು ವೃತ್ತಿಗಷ್ಟೇ ಸೀಮಿತವಾಗಿ ಉಳಿದಿದ್ದರೆ ಮುಂಬೈನ ನೂರಾರು ಹೊಟೇಲ್ ಸೇಟ್ ಗಳಲ್ಲಿ ಒಂದಾಗಿ ಹೋಗುತ್ತಿದ್ದರು. ಅವರು ದೊಡ್ಡ ಆಲದ ಮರವಾಗಿ ಬೆಳೆದು ಇಡೀ ಬಿಲ್ಲವ ಸಮಾಜಕ್ಕೆ ನೆರಳಾದವರು. ಅಸಂಘಟಿತ ಸಮಾಜವನ್ನು ಸಂಘಟಿಸಿ ಅವರನ್ನು ಸ್ವಾಭಿಮಾನಿಗಳಾಗಿ ರೂಪಿಸಲು, ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು ಪ್ರಯತ್ನ ಪಟ್ಟವರು. ಇಂದು ಮುಂಬೈನಲ್ಲಿ ತಲೆ ಎತ್ತಿ ನಿಂತಿರುವ ಬಿಲ್ಲವರ ಅಸೋಸಿಯೇಷನ್, ಭಾರತ ಕೋಪರೇಟಿವ್ ಬ್ಯಾಂಕ್, ಬಿಲ್ಲವ ಮಹಾಮಂಡಲಗಳನ್ನು ಕಟ್ಟಿ ಬೆಳೆಸಿದ್ದ ಜಯಣ್ಣ, ಕುದ್ರೋಳಿಯಲ್ಲಿನ ನವೀಕೃತ ಗೋಕರ್ಣನಾಥ ದೇವಾಲಯದ ರೂವಾರಿಯಲ್ಲೊಬ್ಬರು. ಎಲ್ಲ ಶ್ರೀಮಂತರೂ ಕೆಟ್ಟವರಲ್ಲ, ಆದರೆ ನನಗ್ಯಾಕೋ ದುಡ್ಡಿನ ಜನರೆಂದರೆ ಸ್ವಲ್ಪ ಅಪಥ್ಯ. ಅವರ ಸಹವಾಸದಲ್ಲಿ ನಾನು ಮುಜುಗರ ಅನುಭವಿಸುವವನು. ಇಂತಹ ಯಾವುದೇ ಮುಜುಗರ ಇಲ್ಲದೆ ನಾನು ಬಹಳ ಇಷ್ಟಪಟ್ಟು ಒಡನಾಡಿದ್ದ ಮೊದಲ ಶ್ರೀಮಂತ ವ್ಯಕ್ತಿ ಎಂದರೆ ಜಯ ಸಿ.ಸುವರ್ಣ. ಇದಕ್ಕೆ ಕಾರಣ ಅವರ ಶ್ರೀಮಂತಿಕೆಯಲ್ಲ, ಸರಳತೆ. ಸಾಮಾನ್ಯ ಕುಟುಂಬದಿಂದ ಬಂದ ಜಯಣ್ಣ ಬಂದ ಹಾದಿಯನ್ನು ಮರೆತವರಲ್ಲ. ಸಾಮಾನ್ಯವಾಗಿ ಮುಂಬೈ ಹೊಟೇಲ್ ಸೇಟ್ ಗಳ ಮೈಮೇಲೆ ಮಿಂಚುವ ಚಿನ್ನದ ಚೈನ್,ಬಳೆಗಳ ಷೋಕಿಯಾಗಲಿ, ದರ್ಪ-ದೌಲತ್ ಗಳ ಮಾತುಗಳಾಗಲಿ, ಶ್ರೀಮಂತಿಕೆಯ ಅಸಹ್ಯ ಪ್ರದರ್ಶನಗಳಾಗಲಿ ಯಾವುದೂ ಜಯಣ್ಣ ಅವರಲ್ಲಿ ಇರಲಿಲ್ಲ. ಸರಳವಾದ ಬದುಕು, ಸೌಜನ್ಯಯುತವಾದ ನಡವಳಿಕೆ, ಹಿರಿಯ-ಕಿರಿಯರೆನ್ನದೆ ಆದರಿಸುವ ವಿಶಾಲ ಹೃದಯ ನನ್ನಂತಹವರನ್ನು ಸೆಳೆದಿತ್ತು. ಸಾಹಿತಿಗಳು, ಚಿಂತಕರು, ಬರಹಗಾರರು, ಕಲಾವಿದರ ಬಗ್ಗೆ ಅವರಿಗಿದ್ದ ಅಭಿಮಾನ ತೋರಿಕೆಯದ್ದಾಗಿರಲಿಲ್ಲ. ಬಿಲ್ಲವರ ಇಂದಿನ ಸ್ಥಿತಿಗೆ ಆ ಸಮಾಜದಲ್ಲಿನ ಸಮರ್ಥ ನಾಯಕರ ಕೊರತೆಯೂ ಕಾರಣ ಎಂದು ನಾನು ಬಲವಾಗಿ ನಂಬಿದವನು. ಬಂಟ ಸಮಾಜಕ್ಕೆ ಒದಗಿಬಂದ ಎ.ಬಿ.ಶೆಟ್ಟಿ, ಕೆ.ಕೆ.ಶೆಟ್ಟಿ, ನಾಗಪ್ಪ ಆಳ್ವ ಮೊದಲಾದ ದೂರದೃಷ್ಟಿಯ ನಾಯಕರು ಬಿಲ್ಲವ ಸಮಾಜದಲ್ಲಿ ಬರಲೇ ಇಲ್ಲ. ಪ್ರಾರಂಭದಲ್ಲಿ ಆ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದವರು ಬಿ.ದಾಮೋದರ ಸುವರ್ಣರು. ಅವರ ನಂತರ ಜಯ ಸಿ.ಸುವರ್ಣರಲ್ಲಿ ಇಂತಹ ಒಬ್ಬ ಬಿಲ್ಲವ ನಾಯಕನನ್ನು ನಾನು ಕಂಡಿದ್ದೆ. ಜನಾರ್ಧನ ಪೂಜಾರಿಯವರ ಬೆಂಬಲದಿಂದ ಬಿಲ್ಲವ ಸಮಾಜದ ಸಂಘಟನೆಯನ್ನು ಜಯಣ್ಣ ಬಹಳ ಚೆನ್ನಾಗಿಯೇ ಪ್ರಾರಂಭಿಸಿದ್ದರು. 90 ದಶಕದಲ್ಲಿ ಜನಾರ್ಧನ ಪೂಜಾರಿಯವರು ಅತ್ಯಂತ ಪ್ರಭಾವಿ ನಾಯಕ, ಬಹಳ ಕಾಲ ಅವರು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆ ಕಾಲದ ಅಲ್ಲಿನ ಸರ್ಕಾರ ಪೂಜಾರಿ ಹಾಕುತ್ತಿದ್ದ ಗೆರೆ ದಾಟುತ್ತಿರಲಿಲ್ಲ. ಗುಣಸ್ವಭಾವದಲ್ಲಿ ಪೂಜಾರಿ ಮತ್ತು ಜಯಣ್ಣ ನಡುವೆ ಧ್ರುವಗಳ ಅಂತರ ಇತ್ತು. ಪೂಜಾರಿಯವರಲ್ಲಿ ನನ್ನಂತಹವರು ಇಷ್ಟಪಡದ ಗುಣಗಳಾದ ಅನಗತ್ಯವಾದ ಕೋಪ-ದರ್ಪ, ಮತ್ತೊಬ್ಬರನ್ನು ನೋಯಿಸುವ ಕಟುಮಾತುಗಳು ಯಾವುದೂ ಜಯಣ್ಣನವರಲ್ಲಿ ಇರಲಿಲ್ಲ. ಈ ಕಾರಣದಿಂದಲೇ ಜಯಣ್ಣ ಒಂದು ರೀತಿ ಅಜಾತಶತ್ರುವಾಗಿದ್ದರು. ಪೂಜಾರಿಯವರಿಗೆ ಮನೆಮಗನಂತಿದ್ದ ಜಯಣ್ಣ ಅವರ ಪ್ರಭಾವ ಬಳಸಿ ಮುಂಬೈನಲ್ಲಿ ಅಸೋಸಿಯೇಷನ್, ಬ್ಯಾಂಕ್ ಗಳನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲ ದಕ್ಷಿಣ ಕನ್ನಡದಲ್ಲಿಯೂ ಬಿಲ್ಲವ ಸಮಾಜವನ್ನು ಸಂಘಟಿಸಿದವರು. ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ ಪೂಜಾರಿ ಹಿಂದಿನಷ್ಟು ಪ್ರಭಾವಿಯಾಗಿ ಮತ್ತೆ ಮೇಲೆದ್ದು ಬರಲಿಲ್ಲ, ಇತ್ತೀಚಿನ ವರ್ಷಗಳಲ್ಲಿ ಅವರ ಗಮನ ಕೂಡಾ ಪೂರ್ಣವಾಗಿ ಕುದ್ರೋಳಿ ದೇವಸ್ಥಾನ ಆಕ್ರಮಿಸಿಕೊಂಡಿತ್ತು. ಈ ಕಾರಣಗಳಿಂದಾಗಿ ಕಳೆದೆರಡು ದಶಕಗಳಲ್ಲಿ ಜಯಣ್ಣನವರೂ ಹೆಚ್ಚು ಕ್ರಿಯಾಶೀಲರಾಗಿರಲಿಲ್ಲ, ಇದಕ್ಕೆ ಅವರ ಅನಾರೋಗ್ಯವೂ ಕಾರಣ. ನಾಯಕನಾಗಿ ಪ್ರಾರಂಭಿಸಿದ್ದ ಕೆಲಸವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಜಯಣ್ಣನವರಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಬಿಲ್ಲವರಿಗೆ ರಾಜಕೀಯದಲ್ಲಿ ಮಾತ್ರವಲ್ಲ ಸಮಾಜದಲ್ಲಿ ಕೂಡಾ ನಾಯಕರೇ ಇಲ್ಲದಂತಹ ಇಂದಿನ ಸ್ಥಿತಿಗೆ ಕಾರಣ ಹುಡುಕಲು ಹೊರಟರೆ ಕೊನೆಗೆ ನಾವು ಪೂಜಾರಿ ಮತ್ತು ಜಯಣ್ಣನವರಿಗೆ ಮುಖಾಮುಖಿಯಾಗಬೇಕಾಗುತ್ತದೆ. 1986-87ರಿಂದ 1992-93ರ ವರೆಗಿನ ಐದಾರು ವರ್ಷಗಳ ಅವಧಿಯಲ್ಲಿ ನನಗೆ ಜಯಣ್ಣ ಅತ್ಯಂತ ಆತ್ಮೀಯರಾಗಿದ್ದರು. ಅವರ ಸಾವಿನ ಸುದ್ದಿ ಕೇಳಿದ ನಂತರ ನನ್ನ ಮತ್ತು ಅವರ ನಡುವೆ ವಿನಿಮಯವಾದ ಕೆಲಪತ್ರಗಳನ್ನು ತೆಗೆದು ಓದುತ್ತಿದ್ದೆ. ಪರಸ್ಪರ ಚರ್ಚಿತ ವಿಷಯಗಳನ್ನು ಒಬ್ಬರು ಬದುಕಿದ್ದಾಗಲೇ ಹೇಳುವುದು ಮುಜುಗರದ ಸಂಗತಿ, ಸಾವಿನ ನಂತರ ಹೇಳುವುದು ಇನ್ನೂ ಮುಜುಗರ. ನಾನು ಪ್ರಜಾವಾಣಿಗೆ ಸಂದರ್ಶನ ನೀಡಿಬಂದ ಸುದ್ದಿಯನ್ನು ಅವರಿಗೆ ಹೇಳಿದ್ದೆ. ಜಯಣ್ಣ ಅವರಂತೆ ಆ ಕಾಲದಲ್ಲಿ ಬಹಳ ಮಂದಿ ಪ್ರಜಾವಾಣಿ ಎಂದರೆ ಬಂಗಾರಪ್ಪನವರ ಪತ್ರಿಕೆ ಎಂದು ತಿಳಿದಿದ್ದರು. ಜಯಣ್ಣ ನನಗೆ ಗೊತ್ತಿಲ್ಲದ್ದಂತೆಯೇ ಬಂಗಾರಪ್ಪನವರ ಬಳಿ ನನ್ನ ವಿಷಯ ತಿಳಿಸಿ ಪ್ರಜಾವಾಣಿಯಲ್ಲಿ ಕೆಲಸ ಕೊಡಿಸಲು ಹೇಳಿದ್ದನ್ನು ನನಗೆ ಪತ್ರ ಬರೆದು ತಿಳಿಸಿದ್ದರು. ಆಗಿನ್ನೂ ಕೆ.ಎನ್.ಹರಿಕುಮಾರ್ ಸಂಪಾದಕರು. ಈ ರೀತಿಯ ಪ್ರಭಾವ ಬೀರಲು ಯತ್ನಿಸಿದ್ದು ಗೊತ್ತಾದರೆ ಏನಾಗುತ್ತೋ ಎಂಬ ಭಯ ನನಗೆ. ಈ ಸೂಕ್ಷ್ಮಗಳೆಲ್ಲ ಜಯಣ್ಣನವರಿಗೆ ಗೊತ್ತಿರಲಿಲ್ಲ. ನನಗೆ ನೆರವಾಗಬೇಕೆಂದಷ್ಟೇ ಅವರು ಯೋಚಿಸಿದ್ದು. ಜಯಣ್ಣನವರಿಗೆ ನಾನು ರಾಜಕೀಯಕ್ಕೆ ಬರಬೇಕೆಂಬ ಆಸೆ ಇತ್ತು. ಪ್ರಜಾವಾಣಿ ಸೇರಿದಾಗ ಖುಷಿಪಟ್ಟಿದ್ದ ಅವರು ನಂತರ ‘’ನೀವು ಕೆಲಸ ಬಿಟ್ಟು ಕಾರ್ಕಳಕ್ಕೆ ಹೋಗಿ ಪತ್ರಿಕೆ ಮಾಡಿ ಅಲ್ಲಿ ಚುನಾವಣೆಗೆ ರೆಡಿ ಆಗಿ ದುಡ್ಡು ಕಾಸಿನ ಚಿಂತೆ ಬೇಡ’’ ಎಂದಾಗ ನನಗೆ ಆಘಾತವಾಗಿತ್ತು. ಅಲ್ಲಿ ಮೊಯಿಲಿಯವರಿದ್ದಾರಲ್ಲಾ ಎಂದರೆ ‘ಅದೆಲ್ಲ ಆ ಮೇಲೆ ನೋಡೋಣ' ಎಂದಿದ್ದರು. ನಾನು ‘ಟಿಕೆಟ್ ಕೊಡಿಸುವುದಾದರೆ ಮೂಲ್ಕಿ-ಮೂಡಬಿದರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೊಡಿಸಿ' ಎಂದಿದ್ದೆ. ಆಗಿನ್ನೂ ಜಯಣ್ಣನವರಿಗೆ ಆತ್ಮೀಯರಾಗಿದ್ದ ಸೋಮಪ್ಪ ಸುವರ್ಣರು ಅಲ್ಲಿ ಶಾಸಕರು. ಜಯಣ್ಣನವರ ತಲೆಯಲ್ಲಿ ಏನಿತ್ತು ಎನ್ನುವುದು ಆ ಮೇಲೆ ಗೊತ್ತಾಗಿತ್ತು. ನನಗೆ ಆಗ ಮೂವತ್ತು ವರ್ಷ. ಬಂಗಾರಪ್ಪನವರಿಗೆ ಆತ್ಮೀಯರಾಗಿದ್ದ ಜಯಣ್ಣ ಆಗಾಗ ಅವರನ್ನು ನೋಡಲು ಮುಂಬೈನಿಂದ ಬೆಂಗಳೂರಿಗೆ ಬರುವವರು. ನಾನು ಅಟೋದಲ್ಲಿ ವಿಮಾನನಿಲ್ದಾಣಕ್ಕೆ ಅವರನ್ನು ಕರ್ಕೊಂಡು ಬರಲು ಹೋಗುವವ. ಅವರು ಅಶೋಕಾದಲ್ಲಿಯೋ ಇನ್ನಾವುದೋ ದೊಡ್ಡ ಹೊಟೇಲ್ ಗಳಲ್ಲಿ ತಂಗುವವರು. ಜಯಣ್ಣ ಬಹಳ ಸರಳಜೀವಿ, ಶುದ್ಧ ಸಸ್ಯಾಹಾರಿ. ಅವರ ಜೊತೆಯಲ್ಲಿ ಬಂದವರು ತಿಂದು ಕುಡಿದು ಮಜಾ ಮಾಡಿದರೆ ಇವರು ಎರಡು ಚಪಾತಿ ಪಲ್ಯ ತಿಂದು ನಗುತ್ತಾ ಕೂರುವವರು. ಆಗಲೇ ಅವರಿಗೆ ಸ್ಲಿಪ್ ಡಿಸ್ಕ್ ಇದ್ದ ಕಾರಣ ಹಾಸಿಗೆಯಲ್ಲಿ ಮಲಗದೆ ನೆಲದಲ್ಲಿ ಕಂಬಳಿ ಹಾಸಿ ಮಲಗುವವರು. ಇಷ್ಟು ಸರಳವಾಗಿ ಇರುವುದಾದರೆ ಈ ಹೊಟೇಲ್ ಗೆ ಯಾಕೆ ಬರ್ತೀರಿ ಎಂದು ಕೇಳಿದರೆ ಸುಮ್ಮನೆ ನಗುವವರು. ಹೀಗಿದ್ದ ನಮ್ಮ ಸಂಬಂಧ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನದ ನವೀಕರಣದ ನಂತರ ಬಿಗಿಯಾಗತೊಡಗಿತು. ನವೀಕೃತ ದೇವಸ್ಥಾನವನ್ನು ಶೃಂಗೇರಿ ಸ್ವಾಮಿಗಳಿಂದ ಉದ್ಘಾಟಿಸುವುದನ್ನು ನಾನು ವಿರೋಧಿಸಿದ್ದೆ. ಅದನ್ನು ನಿಲ್ಲಿಸದಿದ್ದರೆ ಮಂಗಳೂರಿನ ಪುರಭವನದ ಎದುರು ಅಮರಣಾಂತ ಉಪವಾಸ ಮಾಡುವುದಾಗಿ ಬಿಲ್ಲವ ನಾಯಕರಿಗೆಲ್ಲ ಪತ್ರ ಬರೆದಿದ್ದೆ. ನನ್ನನ್ನು ಸಮಾಧಾನ ಮಾಡಲಿಕ್ಕೆಂದೇ ಜಯಣ್ಣ ಬೆಂಗಳೂರಿಗೆ ಬಂದಿದ್ದರು. ನಾನು ಶೃಂಗೇರಿ ಸ್ವಾಮೀಜಿಗಳ ನಂಬಿರುವ ವರ್ಣಾಶ್ರಮ ವ್ಯವಸ್ಥೆ, ಅದನ್ನು ಧಿಕ್ಕರಿಸಿದ್ದ ನಾರಾಯಣ ಗುರು ಚಿಂತನೆ ಎಲ್ಲವನ್ನೂ ಹೇಳಿದ್ದೆ. ಅವರಿಗೆ ಮನವರಿಕೆಯಾಗಿತ್ತು. ಕೊನೆಗೆ ‘’ಅದು ತೀರ್ಮಾನವಾಗಿ ಹೋಗಿರುವ ವಿಚಾರ, ಬೇರೇನು ಮಾಡಲು ಸಾಧ್ಯ?" ಎಂದು ಕೇಳಿದ್ದರು. ನಾನು ‘ಬಿಲ್ಲವ ಬಡ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥ ಬಿಲ್ಲವ ಮಹಿಳೆಯರಿಗೆ ಹಾಸ್ಟೆಲ್ಗಳ ನ್ನು ಮಾಡಿ ಎಂದಿದ್ದೆ. ‘’ಅದೇನು ದೊಡ್ಡ ಕೆಲಸ ಅಲ್ಲ ಬಿಡಿ, ಮಾಡೋಣ, ನೀವು ಈ ಉಪವಾಸ ಎಲ್ಲ ಮಾಡಲು ಹೋಗಬೇಡಿ’’ ಎಂದಿದ್ದರು. ಆಗ ಬಿಲ್ಲವ ಸಂಘದ ಕಾರ್ಯದರ್ಶಿಯಾಗಿದ್ದ ರವಿ ಅಂಚನ್ ಕೂಡಾ ಸುಮ್ಮನಿರಲು ಹೇಳಿದ್ದರು. ನಾನು ಸುಮ್ಮನಾದೆ, ಆದರೆ ಕೊನೆಗೆ ಯಾವ ಹಾಸ್ಟೆಲ್ ಕೂಡಾ ನಿರ್ಮಾಣವಾಗಲಿಲ್ಲ ಎನ್ನವುದು ಬೇರೆ ಮಾತು. ಅವರು ಮುಂಬೈನ ಬಿಲ್ಲವರ ಅಸೋಸಿಯೇಷನ್ ಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ನಾನು ಮುಂಬೈನಲ್ಲಿದ್ದೆ. ಆ ದಿನದ ಮಹಾಸಭೆಯ ಸಮಾರೋಪ ಭಾಷಣ ನನ್ನದೇ ಆಗಿತ್ತು. ರವಿ ಅಂಚನ್ ಮುಂಬೈನಲ್ಲಿದ್ದರೂ ಅವರೆಂದು ಬಿಲ್ಲವರ ಅಸೋಸಿಯೇಷನ್ ನಲ್ಲಿ ಇರಲಿಲ್ಲ.‌ "ಜಯ ಸುವರ್ಣರನ್ನು ನಾವು ಬೆಂಬಲಿಸಬೇಕು” ಎಂದು ಅವರಿಗೆ ಹೇಳಿ ಅಸೋಸಿಯೇಷನ್ ಒಳಗೆ ಕಳಿಸಿದವನೇ ನಾನು. ಆದರೆ ನಂತರದ ದಿನಗಳಲ್ಲಿ ಹಲವಾರು ಅಹಿತಕರ ಘಟನೆಗಳು ನಡೆದುಹೋದವು. ತಪ್ಪು-ಸರಿಯ ವಿಮರ್ಶೆಗೆ ಇದು ಕಾಲ ಅಲ್ಲ. ಆದರೆ ರವಿಯವರಿಂದಲೂ ಒಂದಷ್ಟು ತಪ್ಪುಗಳಾಗಿತ್ತು. ಅಕ್ಷಯ ಪತ್ರಿಕೆಯ ಸಂಪಾದಕರಾಗಿ ಇರಿ, ಬೇಕಿದ್ದರೆ ಅಸೋಸಿಯೇಷನ್ ನಲ್ಲಿಯೂ ಇರಿ, ಅದರ ಕಾರ್ಯದರ್ಶಿಯಾಗುವುದು ಬೇಡ, ಬ್ಯಾಂಕ್ ನ ನಿರ್ದೇಶಕ ಸ್ಥಾನವೂ ಬೇಡ ಎಂದು ರವಿಗೆ ಹೇಳಿದ್ದೆ. ಅವರು ಮೂರು ಹುದ್ದೆಗಳನ್ನು ವಹಿಸಿಕೊಂಡು ಆಡಳಿತ ವ್ಯವಸ್ಥೆಯ ಭಾಗವಾಗಿ ಬಿಟ್ಟರು. ನನ್ನದೇನೂ ಪಾತ್ರವಿಲ್ಲದೆ ಇದ್ದರೂ ರವಿ ಅವರ ಎಲ್ಲ ದುಸ್ಸಾಹಸಗಳ ಹಿಂದಿನ ಮೆದುಳು ನಾನೇ ಎಂದು ಜಯ ಸುವರ್ಣ ಮತ್ತಿತರರು ತಿಳಿದುಕೊಂಡರು. ಅದೇ ವೇಳೆ ಮಂಗಳೂರಿನ ದಾಮೋದರ ಸುವರ್ಣ ನನಗೆ ಹತ್ತಿರವಾಗಿದ್ದರು, ಜನಾರ್ದನ ಪೂಜಾರಿಯವರ ಜೊತೆಗೆ ನನಗೆ ಭಿನ್ನಾಭಿಪ್ರಾಯಗಳಿದ್ದವು. ಈ ಎಲ್ಲ ಕಾರಣಗಳಿಂದಾಗಿ ಇತ್ತೀಚಿನ 25 ವರ್ಷಗಳಲ್ಲಿ ನನ್ನ ಮತ್ತು ಜಯಣ್ಣನವರ ಸಂಬಂಧ ಎದುರಿಗೆ ಸಿಕ್ಕಾಗ ಮುಗುಳುನಗೆ ಮತ್ತು ಒಂದೆರಡು ಮಾತುಗಳ ವಿನಿಮಯಕ್ಕಷ್ಟೇ ಸೀಮಿತವಾಗಿತ್ತು. ಇತ್ತೀಚೆಗೆ ನಾನು ಅವರಲ್ಲಿ ಕೊನೆಯ ಬಾರಿ ಮಾತನಾಡಿದ್ದು ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ. ಬಿ.ಕೆ.ಹರಿಪ್ರಸಾದ್ ಅವರಿಗೆ ಮಂಗಳೂರು, ಉಡುಪಿ ಇಲ್ಲವೇ ಉತ್ತರ ಕನ್ನಡ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಪ್ರಯತ್ನ ನಡೆಯುತ್ತಿದ್ದಾಗ ನಾನೇ ಅವರಿಗೆ ಪೋನ್ ಮಾಡಿ ದೆಹಲಿಗೆ ಒಂದು ನಿಯೋಗ ಹೋಗಿ ಎಂದು ಹೇಳಿದ್ದೆ. ಒಮ್ಮೆ ಇಬ್ಬರೂ ಕುಳಿತು ಮಾತನಾಡಬೇಕಾಗಿತ್ತು, ತಪ್ಪು ತಿಳುವಳಿಕೆಗಳಿದ್ದರೆ ಸರಿ ಪಡಿಸಿಕೊಳ್ಳಬೇಕಿತ್ತು. ಅದಕ್ಕೆ ಅವಕಾಶ ಕೂಡಿ ಬರಲಿಲ್ಲ, ಈಗ ಅವರೇ ಇಲ್ಲ. ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement