Advertisement

ಕೃಷಿಯ ಕಾರ್ಪೋರೇಟರಿಕರಣ ಬೇಡ: ಕೆ.ಬಿ ಪ್ರಸನ್ನ ಕುಮಾರ್

Advertisement

ಮೋದಿ ಸರಕಾರದ ಮೂರು ಮರಣ ಶಾಸನಗಳು ಭಾರತದ ರೈತರ ಬದುಕನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತಹ ಮೂರು ರೈತ ವಿರೋಧಿ ಸುಗ್ರೀವಾಜ್ಞೆಗಳಿಗೆ ಮೋದಿ ಸರಕಾರ ಅತ್ಯಂತ ಅಪ್ರಜಾತಾಂತ್ರಿಕವಾಗಿ ಸದನದ ಎರಡೂ ಮನೆಗಳಲ್ಲಿ ‘ಅನುಮೋದನೆ’ ದಕ್ಕಿಸಿಕೊಂಡಿದೆ ಎಂದು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರು ಆದ ಕೆ.ಬಿ ಪ್ರಸನ್ನ ಕುಮಾರ್ ಇಂದು ಶಿವಮೊಗ್ಗದ ಪ್ರೆಸ್‌ ಟ್ರಸ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ವಿವರ ಇಂತಿದೆ; 1. APMCಯನ್ನು ಮೂಲೆಗುಂಪು ಮಾಡುವ ಮಸೂದೆ: ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಖಚಿತವಾದ ಆದಾಯವನ್ನು ಖಾತರಿ ಮಾಡುವ ಸಲುವಾಗಿಯೇ ರೈತರು, ಮಧ್ಯವರ್ತಿ ದಲ್ಲಾಳಿಗಳೂ ಹಾಗೂ ವ್ಯಾಪಾರಿಗಳನ್ನು ಒಳಗೊಂಡ APMC ರೂಪುಗೊಂಡವು. ಸರಕಾರವು APMC ಹಾಗೂ ಮಂಡಿಗಳ ಮೂಲಕ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP)ಯನ್ನು ಕೊಟ್ಟು ಅವರ ಸರಕುಗಳನ್ನು ಖರೀದಿಸುತ್ತಿತ್ತು. 2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯ್ದೆಯ ನಂತರ ಈ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳು ಸಿಗುತ್ತಿರುವುದಕ್ಕೆ ಈ ವ್ಯವಸ್ಥೆಯೇ ಕಾರಣ. APMC ಹಾಗೂ MSP ವ್ಯವಸ್ಥೆಯ ಕಾರಣದಿಂದಾಗಿಯೇ ಈ ದೇಶದ ಕೋಟ್ಯಂತರ ರೈತರ ಆದಾಯ ಸುನಿಶ್ಚಿತವಾಗಿತ್ತು. ಮೋದಿ ಸರಕಾರದ The Famers Produce Trade and Commerce (Promotion and Facilitation) Bill, 2020 ಎಂಬ ಈ ಕಾಯ್ದೆ APMC ಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅದನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿ ಅದರ ಜಾಗದಲ್ಲಿ ರೈತರಿಗೆ ಯಾವ ಪಾತ್ರವೂ ಇಲ್ಲದ ದೊಡ್ದದೊಡ್ಡ ಬಂಡವಾಳಶಾಹಿಗಳ ಒಡೆತನ ಮತ್ತು ನಿಯಂತ್ರಣದಲ್ಲಿರುವ ಖಾಸಗಿ ಮಂಡಿಗಳು ಮತ್ತು ಖಾಸಗಿ APMCಗಳ ಸ್ಥಾಪನಗೆ ಅವಕಾಶ ಮಾಡಿಕೊಡುತ್ತದೆ. ಖಾಸಗಿ ಮಂಡಿಗಳಿಗೆ ಉತ್ತೇಜನ ಕೊಡುತ್ತಾ ಹಾಲಿ ಇರುವ APMCಯಿಂದಲೂ ವ್ಯಾಪಾರಿಗಳು ಹಾಗೂ ಮಾರಾಟಗಾರು ಖಾಸಗಿ ಮಂಡಿಯತ್ತ ಆಕರ್ಷಿತರಾಗಿ ಹಳೆಯ APMC ನಿಧಾನವಾಗಿ ಸಾವನ್ನಪ್ಪುವಂತೆ ಮಾಡುತ್ತವೆ. ಎಲ್ಲಕಿಂತ ಮುಖ್ಯವಾದ ವಿಷಯವೇನೆಂದರೆ APMC ಇಲ್ಲವಾದರೆ ರೈತರಿಗೆ MSP ದರಗಳು ದಕ್ಕುತ್ತವೆಯೇ ಎಂಬುದು..ಪ್ರಧಾನಿ ಪದೇ ಪದೇ MSP ರದ್ದು ಮಾಡುವುದಿಲ್ಲ ಎಂದು ಹೇಳುತ್ತಿರುವುದರಲ್ಲಿ ಅರ್ಧ ಸತ್ಯ ಮಾತ್ರ ಇದೆ. ಹಾಲಿ ಅಸ್ತಿತ್ವದಲ್ಲಿರುವ APMCಗಳಲ್ಲಿ MSP ರದ್ದು ಮಾಡಲಾಗುವುದು ಎಂಬ ನಿಯಮವೇನೂ ಕಾಯ್ದೆಯಲ್ಲಿಲ್ಲ ಎಂಬುದು ನಿಜ. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಖಾಸಗಿ ಮಂಡಿಗಳಲ್ಲಿ MSPಯನ್ನು ಖಾತರಿಪಡಿಸುವ ನಿಯಮವೂ ಕಾಯ್ದೆಯಲ್ಲಿಲ್ಲ ಎಂಬುದನ್ನು ಪ್ರಧಾನಿ ರೈತರಿಂದ ಮುಚ್ಚಿಡುತ್ತಿದ್ದಾರೆ. ಹಾಗೂ ಈ ಹೊಸ ಕಾಯ್ದೆಯಿಂದಾಗಿ ಹಳೆಯ APMCಗಳು ನಿಧಾನವಾಗಿ ರದ್ದಾಗಿ ಕೆಲವು ವರ್ಷಗಳ ನಂತರ ಬಹುಪಾಲು ಖಾಸಗಿ ಮಂಡಿಗಳ ಕಾರ್ಟೆಲ್‌ಗಳೇ ಉಳಿದುಕೊಳ್ಳುವುದರಿಂದ ಸರಕಾರ ಕಾಲಕ್ರಮೇಣ MSP ಹೊಣೆಗಾರಿಕೆಯಿಂದ ಮುಕ್ತವಾಗಲಿದೆ. ದೊಡ್ಡ ಬಂಡವಾಳಿಗರು ತಮ್ಮ ನಡುವೆ ಕಾರ್ಟೆಲ್‌ಗಳನ್ನು ಮಾಡಿಕೊಂಡು ದರದ ಯಾವ ಲಾಭವೂ ರೈತರಿಗೆ ಸಿಗದಂತೆ ಮಾಡುತ್ತಾರೆ. ಆಗ ರೈತರು ಬೇರೆ ಯಾವುದೇ ಆಯ್ಕೆ ಇಲ್ಲದೆ ಇದೇ ಕಾರ್ಟೆಲ್‌ಗಳಿಗೆ ಅವರು ವಿಧಿಸುವ ಬೆಲೆಗೆ ಮಾರಿಕೊಳ್ಳಬೇಕಾಗುತ್ತದೆ. ಪ್ರಾರಂಭದಲ್ಲಿ ದೊಡ್ಡ ಕೃಷಿ ಉದ್ದಿಮೆದಾರರು ನಡೆಸುವ ಮಂಡಿಗಳಲ್ಲಿ ರೈತರಿಗೆ ಸ್ವಲ್ಪ ಹೆಚ್ಚಿನ ದರ ದೊರೆತರೂ ಎಲ್ಲ ಉದ್ದಿಮೆಗಳಲ್ಲಿ ನಡೆಯುವಂತೆ ಈ ಕ್ಷೇತ್ರದಲ್ಲೂ ಬೃಹತ್ ಕಾರ್ಪೊರೇಟ್ ಉದ್ದಿಮೆಗಳೇ ಬಹಳ ಬೇಗ ಏಕಸ್ವಾಮ್ಯ ಸಾಧಿಸುತ್ತವೆ. ಈ ವ್ಯವಹಾರಕ್ಕೆ ಈಗಾಗಲೇ ಅಂಬಾನಿ, ಅದಾನಿ ಹಾಗೂ ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳೂ ದಾಳಿ ಇಡಲು ಸಿದ್ಧವಾಗುತ್ತಿವೆ. ಇಂತಹ ದೊಡ್ಡ ಉದ್ದಿಮೆಗಳ ಮುಂದೆ ಸಣ್ಣಪುಟ್ಟವರ ಮಂಡಿಗಳು ಉಳಿಯಲು ಸಾಧ್ಯವೇ ಇಲ್ಲ. ಅಂಬಾನಿಯ ಜಿಯೋ ಮೊಬೈಲ್ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ನೆನಪಿಸಿಕೊಳ್ಳೋಣ. ಹೀಗೆ APMC ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಳಸಿಕೊಂಡು ಮೋದಿ ಸರಕಾರ ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಧಣಿಗಳಿಗೆ ವಹಿಸಿ ರೈತರನ್ನು ಅವರ ಗುಲಾಮಗಿರಿಗೆ ದೂಡಲಿದೆ. ಇಂತಹ ಕಾಯ್ದೆಯನ್ನು ಬೆಂಬಲಿಸಲು ಸಾಧ್ಯವೇ? 2.ಕಾಂಟ್ರಾಕ್ಟ್ ಫಾರ್ಮಿಂಗ್ ಮಸೂದೆ : ಮೋದಿ ಸರಕಾರ ತರುತ್ತಿರುವ ಎರಡನೇ ಮರಣ ಶಾಸನವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಶಾಸನದ ಮೂಲಕ ಸರಕಾರವು ರೈತರ ಹಿಡುವಳಿಗಳನ್ನು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆಗೆ ಕೊಡಲು ಅನುವು ಮಾಡಿಕೊಡುತ್ತದೆ. ಮಸೂದೆಯ 4 ನೇ ಸೆಕ್ಷನ್‌ನ 2ನೇ ಸಬ್ ಕ್ಲಾಸಿನ ಪ್ರಕಾರ: ರೈತಾಪಿ ಹಾಗೂ ಪ್ರಾಯೋಜಕರು ಬೆಳೆಯ ಗುಣಮಟ್ಟದ ಬಗ್ಗೆ ಮಾಡಿಕೊಳ್ಳುವ ಒಪ್ಪಂದವು ಸರಕಾರ ಅಥವಾ ಸರಕಾರದಿಂದ ಗುರುತಿಸಲ್ಪಟ್ಟ ‘ಸ್ವತಂತ್ರ’ ಏಜೆನ್ಸಿಯು ನಿಗದಿ ಮಾಡುವ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕು ಮತ್ತು ಅದಕ್ಕೆ ಬದ್ಧವಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2ರ ಪ್ರಕಾರ ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು. ಒಂದು ವೇಳೆ ಪರಿಶೀಲಿಸದೆ ಒಪ್ಪಿಕೊಂಡರೆ ಆ ನಂತರ ಸರಕನ್ನು ತಿರಸ್ಕರಿಸುವಂತಿಲ್ಲ ಎಂದರ್ಥ. ಆಗ ರೈತನಿಗೆ ಇರುವ ದಾರಿಗಳೇನು? ಮಸೂದೆಯ 13 ಮತ್ತು 14 ನೇ ಸೆಕ್ಷನ್‌ನ ಪ್ರಕಾರ ಆಗ ರೈತ ತಾನು ಒಪ್ಪಂದ ಮಾಡಿಕೊಂಡ ಪ್ರಾಯೋಜಕ ದೈತ್ಯ ಕಂಪೆನಿಯ ಬಗ್ಗೆ ಆ ಪ್ರದೇಶದ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದು. ಆಗ ತಹಶೀಲ್ದಾರ್ ಪ್ರಾಯೋಜಕ, ರೈತ ಹಾಗೂ ಮೂರನೇ ವ್ಯಕ್ತಿಗಳು ಇರುವ ಒಂದು ಸಂಧಾನ ಸಮಿತಿ ಮಾಡುತ್ತಾರೆ. ಅದು 30 ದಿನಗಳೊಳಗೆ ಸಂಧಾನ ಕ್ಕೆ ಬರಬೇಕು. ಅದು ಆಗದಿದ್ದಲ್ಲಿ ತಹಶೀಲ್ದಾರ್ ಮುಂದಿನ 30 ದಿನಗಳೊಳಗೆ ವ್ಯಾಜ್ಯ ಬಗೆಹರಿಸಬೇಕು. ಈ ತೀರ್ಮಾನವು ಸರಿ ಬರಲಿಲ್ಲವೆಂದರೆ ಡಿಸಿ ನೇತೃತ್ವದ ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಬಹುದು. ಅದು ಮುಂದಿನ 30ದಿನಗಳಲ್ಲಿ ಏನು ತೀರ್ಮಾನ ಕೊಡುತ್ತದೋ ಅದು ಅಖೈರು. ಎಲ್ಲಸರಕಾರಗಳೂ ಮತ್ತು ಪಕ್ಷಗಳು ಬಹಿರಂಗವಾಗಿ ಮತ್ತು ಸ್ಪರ್ಧಾತ್ಮಕವಾಗಿ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿಗೆ ಪರವಾದ ನೀತಿಗಳನ್ನು ಘೋಷಿಸುತ್ತಿರುವಾಗ, ಅವರಡಿ ಕೆಲಸ ಮಾಡುವ ಅಧಿಕಾರಿಗಳ ಕೋರ್ಟ್‌ಗಳು ಕಂಪೆನಿಗಳ ವಿರುದ್ಧ ಸೊಲ್ಲೆತ್ತಬಲ್ಲವೇ? ಜೊತೆಗೆ, ಈ ಇಡೀ ವ್ಯಾಜ್ಯದ ಅವಧಿಯಲ್ಲಿ ರೈತ ತನ್ನ ಸರಕನ್ನು ಬೇರೆಡೆ ಮಾರುವ ಹಾಗೂ ಇಲ್ಲ. ಸಂಗ್ರಹಿಸಿಟ್ಟುಕೊಳ್ಳಲು ಸಣ್ಣಪುಟ್ಟ ರೈತರಿಗೆ ಯಾವುದೇ ಸೌಕರ್ಯವೂ ಇರುವುದಿಲ್ಲ. ನೂರು ದಿನಗಳ ಕಾಲ ಬೆಳೆದ ಬೆಳೆಗೆ ಹಣ ದಕ್ಕಲಿಲ್ಲವೆಂದರೆ ರೈತರಿಗೆ ನೇಣು ಹಾಕಿಕೊಳ್ಳುವುದು ಬಿಟ್ಟು ಬೇರೆ ಪರ್ಯಾಯವು ಇರುವುದಿಲ್ಲ. ಮತ್ತೊಂದೆಡೆ ಲಕ್ಷ ಕೋಟಿ ರೂ. ವ್ಯವಹಾರ ನಡೆಸುವ ಕಂಪೆನಿಗಳಿಗೆ ಈ ವ್ಯಾಜ್ಯಗಳಿಂದ ಯಾವ ತೊಂದರೆಯೂ ಆಗುವುದಿಲ್ಲ. ವಾಸ್ತವದಲ್ಲಿ ಸಣ್ಣ ಹಿಡುವಳಿಗಳ ಸಮಸ್ಯೆಗೆ ಸಹಕಾರಿ ಕೃಷಿ ಅಥವಾ ಅಂಬೇಡ್ಕರ್ ಹೇಳಿದಂತೆ ಕೃಷಿಯ ರಾಷ್ಟ್ರೀಕರಣ ನಿಜವಾದ ಪರಿಹಾರ. ಕೃಷಿಯ ಕಾರ್ಪೊರೇಟೀಕರಣವಲ್ಲ. 3. ಬೃಹತ್ ಕೃಷಿ ಕಂಪೆನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯ್ದೆ ಅರ್ಥಾತ್ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ. (Essential Commodities (Amendment) Act) 1955ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಾಗ ಅದರ ಹಿಂದಿದ್ದ ಉದ್ದೇಶ ಆಹಾರ ಧಾನ್ಯಗಳು ಹಾಗೂ ದೇಶವನ್ನು ಕಟ್ಟಲು ಅತ್ಯಗತ್ಯವಾಗಿರುವ ಕಲ್ಲಿದ್ದಲು, ಕಬ್ಬಿಣ ಇನ್ನಿತ್ಯಾದಿ ಸರಕುಗಳನ್ನು ದೊಡ್ದದೊಡ್ದ ವ್ಯಾಪಾರಿಗಳು ದುರುದ್ದೇಶಪೂರ್ವಕವಾಗಿ ಸಂಗ್ರಹಿಸಿಟ್ಟುಕೊಂಡು, ಕಾಳಸಂತೆ ಹಾಗೂ ಕಳ್ಳದಂಧೆಯನ್ನು ಮಾಡುತ್ತಾ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಬಾರದೆಂಬುದಾಗಿತ್ತು. ಸರಕಾರದ ಪ್ರಕಾರ ಕೃಷಿಯ ಉತ್ಪಾದನೆ, ಮಾರಾಟ, ಸಾಗಾಟ, ಸಂಗ್ರಹ ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳಲ್ಲಿ ಸರಕಾರದ ಮಧ್ಯಪ್ರವೇಶದಿಂದಾಗಿ ಈ ಬಾಬತ್ತುಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಬರುತ್ತಿಲ್ಲ. ಆದ್ದರಿಂದ ಸರಕಾರ ಈ ತಿದ್ದುಪಡಿ ಮಸೂದೆಯ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದುಹಾಕುತ್ತದೆ ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡದೊಡ್ಡ ಅಗ್ರಿ ಬಿಝಿನೆಸ್ ಕಂಪೆನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಈ ಕಾಯ್ದೆ ಅವಕಾಶ ಕಲ್ಪಿಸಿಕೊಡುತ್ತದೆ. ಹಾಗಿದ್ದಲ್ಲಿ ದೊಡ್ಡ ದೊಡ್ಡ ಅಗ್ರಿ ಬಿಝಿನೆಸ್ ಕಂಪೆನಿಗಳು ಅಪಾರ ಆಹಾರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುವುದಿಲ್ಲವೇ? ಈ ಕಾಯ್ದೆಯ ಪ್ರಕಾರ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳ ಆದರೆ ಮಾತ್ರ ಹಾಗೂ ಯುದ್ಧ, ಬರ ಇನ್ನಿತ್ಯಾದಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರಕಾರ ಮಧ್ಯಪ್ರವೇಶ ಮಾಡುತ್ತದಂತೆ? ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ. ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ. ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಕಾರ್ಪೋರೇಟ್ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಶ್ರೀಮಂತರು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ. ಈ ಭೂ ಸುಧಾರಣಾ ತಿದ್ದುಪಡಿಯಿಂದ ಕೃಷಿಗೇನು ತೊಂದರೆಯಾಗಲಾರದು ಎಂದು ಹೇಳುತ್ತೀರಲ್ಲಾ? ಕೃಷಿಯೇತರ ಬಳಕೆಗೆ ಕೃಷಿ ಭೂಮಿಯನ್ನು ಬಳಸಿಕೊಳ್ಳಬಾರದೆಂಬ ನಿರ್ಬಂಧವೇನಾದರೂ ತಿದ್ದುಪಡಿಯಲ್ಲಿದೆಯೇ? ಯಾಕೆ ಅದನ್ನು ಸೇರಿಸಿಲ್ಲ? ಇದರ ಹಿಂದಿನ ದುರುದ್ದೇಶ ಏನು? 1. ಕೇಂದ್ರ ಹಾಗೂ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಈ ದೇಶದಲ್ಲಿನ ಕೃಷಿ ಕ್ಷೇತ್ರಗಳನ್ನೇ ನಂಬಿ ಬದುಕುತ್ತಿರುವ ರೈತಾಪಿ ವರ್ಗದ ಮೇಲೆ ಗದಾಪ್ರಹಾರ ಮಾಡಲು ಮುಂದಾಗಿದೆ. ತನ್ಮೂಲಕ ಉದ್ಯಮಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು, ರಿಯಲ್ ಎಸ್ಟೇಟ್ ವ್ಯಾಪಾರಿಗಳ ಹಿತರಕ್ಷಣೆ ಮಾಡುತ್ತಿದೆ. 2.APMC ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹೊರಗಿನ ವರ್ತಕರ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ. 3. ಆರಂಭದಲ್ಲಿ ರೈತರಿಗೆ ಒಳ್ಳೆಯ ಬೆಲೆ ನೀಡಿ ಕೃಷಿ ಉತ್ಪನ್ನ ಖರೀದಿಸುವ ಖಾಸಗಿ ಕಂಪನಿಗಳು ನಂತರದ ದಿನಗಳಲ್ಲಿ APMC ಮುಚ್ಚುವಂತೆ ಮಾಡಿ ಅನಿವಾರ್ಯವಾಗಿ ರೈತ ಕೊನೆಗೆ ಖಾಸಗಿಯವರನ್ನೇ ಅವಲಂಬಿಸಬೇಕಾಗುತ್ತದೆ. 4. APMC ಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 8000 ಕೋಟಿ ಆದಾಯವಿದೆ. ಮುಂದಿನ ದಿನಗಳಲ್ಲಿ ಇದು ಇಲ್ಲವಾಗುತ್ತದೆ. 5. 1966ರ ಮುನ್ನ ಮುಕ್ತ ಮಾರುಕಟ್ಟೆ ಇತ್ತು, ಆಗ ರೈತರಿಗೆ ನ್ಯಾಯಯುತ ಬೆಲೆ ಸಿಗದೆಂಬ ಕಾರಣಕ್ಕೆ APMC ಕಾಯ್ದೆ ಜಾರಿಗೆ ಬಂದಿತ್ತು. ಈಗ ಮತ್ತೆ ಅದೇ ಶೋಷಣೆ ವ್ಯವಸ್ಥೆಗೆ ಹೋಗುತ್ತಿದ್ದೇವೆ. 6. ಕಾಂಗ್ರೆಸ್ ಪಕ್ಷ ಈ ಮಸೂದೆಯನ್ನು ರಾಜಕೀಯಕ್ಕಾಗಿ ವಿರೋಧಿಸುತ್ತಿದೆ ಎನ್ನುವುದಾದರೇ? ಕೇಂದ್ರ ಮಂತ್ರಿ ಪದವಿ ತ್ಯಜಿಸಿದ ಶಿರೋಮಣಿ ಅಕಾಲಿದಳ ಯಾಕೆ ವಿರೋಧ ಮಾಡುತ್ತಿದೆ? 7. ದೇಶದಲ್ಲಿನ ರೈತ ಸಂಘಟನೆಗಳು ಅಷ್ಟೇ ಏಕೆ, ಬಿಜೆಪಿ ಅಂಗ ಎನಿಸಿಕೊಂಡಿರುವ ಭಾರತೀಯ ಕಿಸಾನ್ ಮಂಚ್ ಏಕೆ ಪ್ರತಿಭಟಿಸುತ್ತಿದೆ? 8. MSP ವಿಚಾರದಲ್ಲಿ ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಬಿಜೆಪಿ ಗೆ ಏಕೆ ಆಸಕ್ತಿ ಇಲ್ಲ. ಅಂದರೆ ಅಂಬಾನಿ- ಅದಾನಿಯಂತವರ ದೊಡ್ಡಕಂಪನಿಗಳು ಹಾಗೂ ವಿದೇಶಿ ಕಂಪನಿಗಳಿಗೆ ಈ ಕೃಷಿ ಕ್ಷೇತ್ರದ ಮೇಲೆ ಲಗ್ಗೆ ಇಡಲು ಅವಕಾಶ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ. 9. ಬಿಎಸ್ ಎನ್ ಎಲ್ ನ್ನು ಯಾವ ರೀತಿ ದುರ್ಬಲಗೊಳಿಸಿ ಅಂಬಾನಿಯ ಜಿಯೋ ಮೊಬೈಲ್ ಕ್ಷೇತ್ರದ ಏಕಸ್ವಾಮ್ಯಕ್ಕೆ ಅವಕಾಶ ನೀಡಿದರೋ, ಅದೇರೀತಿ ವಾರ್ಷಿಕ ರೂ. 25ಲಕ್ಷ ಕೋಟಿ ವಹಿವಾಟುವಿರುವ ಕೃಷಿ ಕ್ಷೇತ್ರವನ್ನೂ ದುರ್ಬಲಗೊಳಿಸಿ ಕಂಪನಿಯ ಕೈಗೆ ಕೊಡುವ ಹುನ್ನಾರವಾಗಿದೆ. ಪತ್ರಿಕಾ ಘೋಷ್ಠಿಯಲ್ಲಿ ಸೂಡಾ ಮಾಜಿ ಅಧ್ಯಕ್ಷರಾದ ರಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಮರಾಜ್ , ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಅನಿತಾ ಕುಮಾರಿ, ನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಯೋಗೀಶ್ , ಪಾಲಿಕೆ ಸದಸ್ಯರಾದ ಅರ ಸಿ ನಾಯಕ್, ಮತ್ತು ಮುಖಂಡರುಗಳಾದ ದೀಪಕ್ ಸಿಂಗ್, ಶ್ಯಾಮ್ ಸುಂದರ್, ರಂಗನಾಥ್ , ರಂಗೇ ಗೌಡ, ಯೋಗೀಶ್ ಗೌಡ , ಅಫ್ತಾಬ್ ಪರ್ವೀಜ್, ಚಿನ್ನಪ್ಪ, ಪ್ರಸನ್ನ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com.

Advertisement
Advertisement
Recent Posts
Advertisement