ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲುವ ಭಯದಿಂದ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ನವರು ಇದೀಗ ಏಕಾಏಕಿ ಕಾಡುಗೊಲ್ಲ ಸಮುದಾಯದ ನಿಗಮ ಸ್ಥಾಪನೆಯ ಪತ್ರಕ್ಕೆ ಸಹಿ ಹಾಕುವ ಮೂಲಕ ವಂಚಿಸ ಹೊರಟಿದ್ದಾರೆ. ನಿಗಮ ಸ್ಥಾಪನೆಯಂತಹ ಯಾವುದೇ ಮಹತ್ತರವಾದ ಆದೇಶಗಳು ಕ್ರಮಬದ್ದವಾಗದೆ ಅವುಗಳು ಜಾರಿಗೊಳ್ಳುವುದಿಲ್ಲ. ಕಾಡುಗೊಲ್ಲ ಜನಾಂಗಕ್ಕೆ ಸಂಬಂಧಿಸಿ ನಿಗಮ ಸ್ಥಾಪನೆ ಕೋರಿ ನೀಡಲಾಗಿದ್ದ ಮನವಿ ಪತ್ರಕ್ಕೆ ಇದೀಗ ಏಕಾಏಕಿ ಬೆಳಿಗ್ಗಿನ ಹೊತ್ತು ಮುಖ್ಯಮಂತ್ರಿಗಳೇ ಷರಾ ಬರೆದು ಸಂಜೆಯ ವೇಳೆಗೆ ಆದೇಶ ಪತ್ರಕ್ಕೆ ಸಹಿ ಮಾಡಿರುವುದು ಹಾಸ್ಯಾಸ್ಪದ ವಿಚಾರವಾಗಿದೆ. ಯಾವುದೇ ಆದೇಶಗಳು ಕ್ರಮಬದ್ದವಾಗಿರದಿದ್ದರೆ ಅಂತಹ ಆದೇಶಗಳು ಜಾರಿಗೊಳ್ಳುವುದಿಲ್ಲ ಎಂಬುವುದು ಸಾಮಾನ್ಯ ಜನರಿಗೂ ತಿಳಿದಿರುವ ವಿಚಾರವಾಗಿದೆ. ಹಾಗೆಯೇ ಯಡಿಯೂರಪ್ಪ ಸರ್ಕಾರ ಉಪ ಚುನಾವಣೆಯ ಸೋಲಿನ ಭಯದಿಂದ ಇದೀಗ ಕಾಡುಗೊಲ್ಲ ಜನಾಂಗಕ್ಕೆ ನಿಗಮ ಸ್ಥಾಪನೆಯ ಹೆಸರಿನಲ್ಲಿ ವಂಚಿಸ ಹೊರಟಿರುವುದು ಖಂಡನೀಯ ವಿಚಾರವಾಗಿದೆ. ನಿಗಮ ಸ್ಥಾಪನೆಯ ಪ್ರಾಮಾಣಿಕ ಕಾಳಜಿ ಅವರಿಗೆ ಇದ್ದಿದ್ದರೆ ಅದೇಕೆ ಅವರು ವಿಧಾನಸಭಾ ಅಧಿವೇಶನದಲ್ಲಿ ಆ ಕುರಿತು ವಿಚಾರ ಮಂಡನೆ ಮಾಡಿಲ್ಲ? ಅದೇಕೆ ಅವರು ಆ ಕುರಿತು ಚರ್ಚೆ ನಡೆಸಿಲ್ಲ? ಅದೇಕೆ ಅವರು ನಿಯಮದ ಪ್ರಕಾರ ಸಚಿವ ಸಂಪುಟದ ಒಪ್ಪಿಗೆ ಪಡೆದಿಲ್ಲ? ಅದೇಕೆ ಬಜೆಟ್‌ನಲ್ಲಿ ಹಣ ಮೀಸಲಿರಿಸಿಲ್ಲ? ಇವ್ಯಾವುವೂ ಇಲ್ಲದ ಕಾಗದದ ಮೇಲಿನ ಆದೇಶದಿಂದ ಕಾಡುಗೊಲ್ಲ ಜನಾಂಗಕ್ಕೆ ಆಗುವ ಲಾಭವಾದರೂ ಏನು ಎಂದು ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಟಿ.ಬಿ ಜಯಚಂದ್ರ ಪ್ರಶ್ನಿಸಿದ್ದಾರೆ.
ಅವರು ನಿನ್ನೆ ಸಂಜೆ ಶಿರಾದ ನಿವಾಸದಲ್ಲಿ www.kannadamedia.com ನ ಬಾತ್ಮಿದಾರರ ಜೊತೆ ಈ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದರು.
ಈ ಹಿಂದೆ ಜಾತಿ ಪಟ್ಟಿಯಲ್ಲಿಯೇ ಇಲ್ಲದಿದ್ದ ವೈಶ್ಯ ಹಾಗೂ ಕಾಡುಗೊಲ್ಲ ಜನಾಂಗಗಳನ್ನು ಜಾತಿ ಪಟ್ಟಿಗೆ ಸೇರಿಸಲು ಕೋರಿರುವ ಆ ಸಮುದಾಯಗಳ ಮುಖಂಡರ ಮನವಿಯ ಮೇರೆಗೆ ಹಾಗೂ ಸ್ವತಃ ಅರಿವು ಹೊಂದಿರುವ ನಾನು ಹಿಂದಿನ ಸರ್ಕಾರದ ಅವಧಿಯಲ್ಲಿ ಆ ಕುರಿತು ಶತಾಯಗತಾಯ ಪ್ರಯತ್ನ ನಡೆಸಿದ್ದೆ. ಅದನ್ನು ಈಡೇರಿಸುವ ಗುರಿ ಇಟ್ಟುಕೊಂಡು ಬೆಂಗಳೂರಿನಲ್ಲಿಯೇ ನೆಲೆಸಿದ್ದು ಆ ಕುರಿತು ಅಧಿಕಾರಿಗಳ ಜೊತೆ ಹಲವು ಸಭೆಗಳನ್ನು ನಡೆಸಿದ್ದೆ. ಆ ಕುರಿತಾದ ಕಡತಗಳನ್ನು ಜೊತೆಯಲ್ಲೇ ಇಟ್ಟುಕೊಂಡು ತಿರುಗಾಟ ನಡೆಸಿ, ಜಾತಿಪಟ್ಟಿಗೆ ಸೇರಿಸಲು ಇದ್ದ ಹಲವಾರು ಮಹತ್ತರವಾದ ತೊಡಕುಗಳನ್ನು ನಿವಾರಿಸಿಕೊಂಡು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಪಾರಸು ಮಾಡಿದ್ದೆ. ಶೋಷಿತ, ದಮನಿತ ಸಮುದಾಯದ ಕುರಿತು ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಪ್ರಕಾರವಾಗಿ ಸಚಿವ ಸಂಪುಟದ ಒಪ್ಪಿಗೆ ಪಡೆದು ಕಾಡುಗೊಲ್ಲ ಜನಾಂಗವನ್ನು ಜಾತಿಪಟ್ಟಿಗೆ ಸೇರಿಸಿ ಅನುಮೋದನೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ನಿಗಮ ಸ್ಥಾಪಿಸುವ ಗುರಿಯನ್ನು ನಾನು ಹೊಂದಿದ್ದೆನಾದರೂ ಕಳೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಆ ಕೆಲಸ ಬಾಕಿಯಾಗಿ ಉಳಿದಿತ್ತು. ಆದರೆ ಇದೀಗ ಅಧಿಕಾರದಲ್ಲಿರುವ ಯಡಿಯೂರಪ್ಪ ಸರ್ಕಾರ ಕಾಡುಗೊಲ್ಲ ಜನಾಂಗದ ಓಟು ಪಡೆಯುವ ಏಕೈಕ ಉದ್ದೇಶದಿಂದ ಈ ನಿಯಮಬದ್ದವಲ್ಲದ ಆದೇಶ ಹೊರಡಿಸಿದೆ. ಇದರಿಂದ ಕಾಡುಗೊಲ್ಲ ಜನಾಂಗಕ್ಕೆ ಯಾವುದೇ ಲಾಭವಿಲ್ಲ. ಅದು ಕೇವಲ ಕಾಗದದ ಮೇಲಿನ ಆದೇಶವಾಗಿ ಉಳಿಯಲಿದೆ. ಓಟಿಗಾಗಿ ಬಿಜೆಪಿ ಪಕ್ಷ ಅದೆಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯಬಲ್ಲುದು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಮತ್ತು ಈ ಕುರಿತು ಕಾಡುಗೊಲ್ಲ ಜನಾಂಗದವರು ಸಂಪೂರ್ಣ ಅರಿವು ಹೊಂದಿದ್ದಾರೆ. ಇಂತಹ ಪೊಳ್ಳು ಆಶ್ವಾಸನೆಗಳಿಗೆ ಅವರು ಕವಡೆ ಕಾಸಿನ ಕಿಮ್ಮತ್ತು ನೀಡಲಾರರು. ಆ ಕುರಿತು ಈ ಚುನಾವಣೆಯಲ್ಲಿ ಬಿಜೆಪಿಗೆ ಖಂಡೀತವಾಗಿಯೂ ತಕ್ಕಪಾಠ ಕಲಿಸಲಿದ್ದಾರೆ. ಬಿಜೆಪಿ ಸರ್ಕಾರ ಕಾಡುಗೊಲ್ಲ ಜನಾಂಗದ ಜನರನ್ನು ಈ ರೀತಿಯಾಗಿ ವಂಚಿಸಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.
►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.
►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com