Advertisement

ಮೃತದೇಹವನ್ನು ಸರ್ಕಾರವೇ ಸುಟ್ಟು ಹಾಕಿರುವುದು ಕೊಲೆಗಡುಕರ ದುಷ್ಕೃತ್ಯಕ್ಕಿಂತಲೂ ಕ್ರೂರವಾದ ಕೃತ್ಯ!

Advertisement

ಉತ್ತರಪ್ರದೇಶದ ಸರ್ಕಾರ ಮೃತಯುವತಿಯ ಶವವನ್ನು ಹೆತ್ತವರಿಗೆ ಹಸ್ತಾಂತರಿಸದೆ ನಡುರಾತ್ರಿ ಸುಟ್ಟಿರುವುದು ಕೊಲೆಗಡುಕ ಅತ್ಯಾಚಾರಿಗಳ ದುಷ್ಕೃತ್ಯಕ್ಕಿಂತಲೂ ಕ್ರೂರವಾದ ಕೃತ್ಯವಾಗಿದೆ. ಇದಕ್ಕೆ ಖಂಡಿತವಾಗಿಯೂ ಕ್ಷಮೆ ಇಲ್ಲ. ಈ ಕೃತ್ಯ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಮೃತ ಯುವತಿಯ ಹೆತ್ತವರಿಗೆ ಸಾಂತ್ವನ ಹೇಳಲು ತೆರಳುತಿದ್ದ ವೇಳೆ ಅವರನ್ನು ಅಲ್ಲಿಗೆ ಹೋಗದಂತೆ ತಡೆದು ಅವರ ಮೇಲೆ ಹಲ್ಲೆ ಮಾಡಿರುವ ಘಟನೆಗಳಿಗೆ ಪ್ರಧಾನಿ ಮೋದಿಯವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ. ಅವರು ಇಂದು ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ ಮತ್ತು ಆಕೆಯ ಮೃತದೇಹವನ್ನು ಹೆತ್ತವರಿಗೆ ನೀಡದೆ ಸುಟ್ಟು ಹಾಕಿ ಸಾಕ್ಷ್ಯನಾಶ ಮಾಡಿದ ಪೋಲಿಸರ ಕ್ರಮ ಹಾಗೂ ಮೃತಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಆಕೆಯ ಹುಟ್ಟೂರಿಗೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ನಡುದಾರಿಯಲ್ಲಿ ತಡೆದು ಅವರ ಮೇಲೆ ಪೋಲಿಸರು ದೈಹಿಕ ಹಲ್ಲೆ ನಡೆಸಿದ ಪ್ರಕರಣ ಮತ್ತು ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಪ್ರತಿಭಟನೆಯ ನೇತೃತ್ವವನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕುಂದಾಪುರ ಇವರು ವಹಿಸಿದ್ದರು. ಈ ಸಂಧರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಮಾತನಾಡಿ "ಉತ್ತರಪ್ರದೇಶ ಇದೀಗ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಅತ್ಯಾಚಾರಿಗಳ, ಕೊಲೆಗಡುಗರ ರಾಜ್ಯವಾಗಿ ಪರಿವರ್ತಿತಗೊಂಡಿದೆ. ಅಲ್ಲಿನ ಆಡಳಿತ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅಲ್ಲಿ ಇದೀಗ ಗೂಂಡಾಗಳೆ ರಾಜ್ಯವಾಳುತ್ತಿದ್ದಾರೆ. ಅತ್ಯಾಚಾರಿ, ಕೊಲೆಗಡುಕರಗಳ ರಕ್ಷಣೆಗಾಗಿ ಪೋಲಿಸರೆ ಮೃತದೇಹವನ್ನು ಸುಟ್ಟು ಸಾಕ್ಷ್ಯನಾಶ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿಯವರನ್ನು ಮೃತ ಯುವತಿಯ ಪೋಷಕರಿಗೆ ಸಾಂತ್ವನ ಹೇಳಲು ಅವರ ಗ್ರಾಮಕ್ಕೆ ಹೋಗದಂತೆ ತಡೆದಿರುವುದು ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ಮೇಲೆ ಅಲ್ಲಿನ ಪೋಲಿಸರು ಹಲ್ಲೆ ನಡೆಸಿರುವುದು ಅಕ್ಷಮ್ಯ ಈ ಕುರಿತು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ" ಎಂದು ಹೇಳಿದರು. "ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ಕಾಯ್ದೆಗಳನ್ನು ತರುವ ಮೂಲಕ ಮೋದಿ ಸರ್ಕಾರ ಈ ನೆಲದ ಜನಪರ ಸಂವಿಧಾನದ ಆಶಯಗಳನ್ನು ನಾಶ ಮಾಡಲು ಹೊರಟಿದೆ. ಇದರ ಹಿಂದೆ ಮನುವಾದಿಗಳ ಗುಪ್ತಕಾರ್ಯಸೂಚಿ ಅಡಗಿರುವುದು ಸ್ಪಷ್ಟ. ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ದಲಿತ ಯುವತಿಯ ಮೃತದೇಹವನ್ನು ಆಕೆಯ ಹೆತ್ತವರ ವಿರೋಧದ ನಡುವೆಯೂ ಉತ್ತರ ಪ್ರದೇಶದ ಪೋಲಿಸರು ಸುಡುವ ಮೂಲಕ ಶಾಕ್ಷ್ಯನಾಶ ಮಾಡಿದ್ದಾರೆ. ಈ ಘಟನೆ ಉತ್ತರಪ್ರದೇಶವನ್ನು ಮನುವಾದಿ ಸಂವಿಧಾನದ ಜಾರಿಗೆ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂಬ ಸಾರ್ವತ್ರಿಕ ಅನುಮಾನವನ್ನು ನಿಜವಾಗಿಸುತ್ತಿದೆ. ಮನಮೋಹನ್ ಸಿಂಗ್ ರವರ ಆಡಳಿತದ ಅವಧಿಯಲ್ಲಿ ವಿಶ್ವದ ಮೂರನೆ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಭಾರತದ ಜಿಡಿಪಿ ಇಂದು ಮೈನಸ್ 23ಕ್ಕೆ ಕುಸಿಯಲು ಬಿಜೆಪಿಯ ದುರಾಡಳಿತವೇ ಕಾರಣವಾಗಿದೆ, ಇದು ವಿಷಾಧನೀಯ, ಇದರ ವಿರುದ್ದ ಕಾಂಗ್ರೆಸ್ ಹೋರಾಟ ನಡೆಸಲಿದೆ" ಎಂದು ಯುವ ನ್ಯಾಯವಾದಿ ಹಾಗೂ ಉಡುಪಿ ಜಿಲ್ಲಾ ರೈತಸಂಘದ ವಕ್ತಾರ ವಿಕಾಸ್ ಹೆಗ್ಡೆ ಹೇಳಿದರು. "ಕೇಂದ್ರದ ಮೋದಿ ಮತ್ತು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ರವರದ್ದು ಜನವಿರೋಧಿ ಆಡಳಿತವಾಗಿದೆ. ಇದು ಬ್ರಿಟೀಷರ ಆಡಳಿತಕ್ಕಿಂತಲೂ ಕ್ರೂರವಾದುದಾಗಿದೆ. ಉತ್ತರ ಪ್ರದೇಶದ ದಲಿತ ಮಹಿಳೆಯ ಮೇಲಿನ ಅತ್ಯಾಚಾರ, ಕೊಲೆ ಮತ್ತು ಮೃತಹೇಹ ಸುಟ್ಟು ಸಾಕ್ಷ್ಯನಾಶ ಮಾಡಿದ ಘಟನೆ ಭಾರತ ಜಗತ್ತಿನ ಮುಂದೆ ತಲೆತಗ್ಗಿಸುವಂತಾಗಿದೆ. ಈ ಘಟನೆಗಳು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಶಾಪವಾಗಲಿದೆ" ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ ಹೇಳಿದರು. "ಕಾಂಗ್ರೆಸ್ ಪಕ್ಷ ಎಂದರೆ ಅದೊಂದು ಜನಪರ ಸಿದ್ದಾಂತ. ಈ ನೆಲಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿ ಪಕ್ಷ ಕೇವಲ ಕೋಮುವಾದಕ್ಕೆ ಪ್ರಚೋದನೆ ನೀಡುವ ಮೂಲಕ ಅಧಿಕಾರಕ್ಕೆ ಬಂದ ಪಕ್ಷ. ಈ ನೆಲದ ಸೌಹಾರ್ಧತೆ ಕೆಡಿಸಿದ ಪಕ್ಷ ಬಿಜೆಪಿ. ಕಾಂಗ್ರೆಸ್ ಈ ದೇಶವನ್ನು ಸದೃಢವಾಗಿ ಕಟ್ಟಿದ್ದರೆ ಬಿಜೆಪಿ ನಾಶಗೊಳಿಸುತ್ತಿದೆ. ಉತ್ತರ ಪ್ರದೇಶದ ಅತ್ಯಾಚಾರ ಹಾಗೂ ಕೊಲೆ ಘಟನೆ ಮತ್ತು ಆ ನಂತರ ಸರಕಾರ ಸಂತೃಸ್ತ ಯುವತಿಯ ಕುಟುಂಬಕ್ಕೆ ಮಾಡಿರುವ ಘೋರ ಅನ್ಯಾಯವನ್ನು ಮನುಷ್ಯನಾದವನು ಕ್ಷಮಿಸಲಾರ. ದೇಶದಲ್ಲಿ ಇಂತಹ ಜನವಿರೋಧಿ ಆಡಳಿತ ನೀಡುವ ಮೂಲಕ ಅತಿ ಶೀಘ್ರದಲ್ಲೇ ಬಿಜೆಪಿ ಸರ್ವನಾಶವಾಗಲಿದೆ" ಎಂದು ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಾಗ್ದಾಳಿ ನಡೆಸಿದರು. ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಮಾತನಾಡಿ "ರೈತರ, ಮಹಿಳೆಯರ, ಕಾರ್ಮಿಕರ ಮೇಲೆ ಸತತವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ದೇಶದ ಯುವಕರು ಸಿಡಿದೇಳುವ ಕಾಲ ಇದೀಗ ಸನ್ನಿಹಿತವಾಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕರ ಮೇಲೆ ದೈಹಿಕ ಹಲ್ಲೆ ನಡೆಸುವ ಮೂಲಕ ಮೋದಿ ಸರ್ಕಾರ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದೆ. ದೇಶದ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ದಕ್ಕೆಯಾಗುವ ಯಾವುದೇ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ಕೈಕಟ್ಟಿ ಕುಳಿತು ಕೊಳ್ಳಲಾರದು" ಎಂದು ಹೇಳಿದರು. ಈ ಸಂಧರ್ಭದಲ್ಲಿ ಉತ್ತರಪ್ರದೇಶದ‌ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಅವರುಗಳ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್,ಯುವ ಕಾಂಗ್ರೆಸ್ ನ ಕೋಡಿ ಸುನಿಲ್ ಪೂಜಾರಿ, ರೋಷನ್‌ ಶೆಟ್ಟಿ, ಶಶಿರಾಜ್ ಪೂಜಾರಿ, ರಟ್ಟಾಡಿ ಸಂಪತ್ ಶೆಟ್ಟಿ, ಚಂದ್ರಕಾಂತ ಖಾರ್ವಿ, ದಿನೇಶ್ ಖಾರ್ವಿ, ಕುಮಾರ ಖಾರ್ವಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. •ನಿಮಗೆ ಈ ಮೇಲಿನ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. •ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. •ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement