Advertisement

ಉ.ಪ್ರ.; ಪೋಲಿಸರು ಮೃತದೇಹ ಸುಟ್ಟ ಪ್ರಕರಣ ಮತ್ತು ಆಜ್‌ತಕ್ ವರದಿಗಾರ್ತಿ ತನುಶ್ರೀ ಪಾಂಡೆ..!

Advertisement

ಬರಹ: ದಿನೇಶ್ ಕುಮಾರ್ ಎಸ್.ಸಿ. (ಚಿತ್ರ ಹಳೆಯದು) ಈಕೆ ತನುಶ್ರೀ ಪಾಂಡೆ. ಇಂಡಿಯಾ ಟುಡೆ (ಆಜ್ ತಕ್) ಚಾನಲ್ ವರದಿಗಾರ್ತಿ. ಹತ್ರಾಸ್ ನಲ್ಲಿ ಭೀಕರವಾಗಿ ಅತ್ಯಾಚಾರ-ಕೊಲೆಗೆ ಈಡಾದ ಮನೀಷಾ ವಾಲ್ಮೀಕಿಯ ಮೃತದೇಹವನ್ನು ಪೊಲೀಸರು ಸುಟ್ಟು ಹಾಕಿದ ಪ್ರಕರಣವನ್ನು ವರದಿ ಮಾಡಿದಾಕೆ. ಈಕೆಯ ವರದಿ ಇಡೀ ದೇಶವನ್ನು ಅಲುಗಾಡಿಸಿಬಿಟ್ಟಿತು. ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಕಲಕಿಬಿಟ್ಟಿತು. ಬಹುಶಃ ತನುಶ್ರೀ ಇದನ್ನು ವರದಿ ಮಾಡದೇ ಇದ್ದಿದ್ದರೆ, ಉತ್ತರಪ್ರದೇಶವೆಂಬ ಗೂಂಡಾರಾಜ್ಯದಲ್ಲಿ ಪ್ರತಿನಿತ್ಯ ಜರುಗುವ ಅತ್ಯಾಚಾರ ಪ್ರಕರಣಗಳ ಹಾಗೇ ಇದೂ ಕೂಡ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ತನುಶ್ರೀ ಹಾಗಾಗಲು ಬಿಡಲಿಲ್ಲ. Enough is enough ಎಂದು ಹಲ್ಲುಕಚ್ಚಿ ನಿಂತು ನಿಜವಾದ ಜರ್ನಲಿಸಂ ಏನೆಂದು ತೋರಿಸಿದರು. ಆದಿತ್ಯನಾಥನ ಸರ್ಕಾರದ ಅಸಲಿ ಮುಖವನ್ನು ಬಟಾಬಯಲು ಮಾಡಿದರು. ನಾವೆಲ್ಲ ಈ ಘಟನೆಯನ್ನು ನೋಡಿದ್ದೇ ತನುಶ್ರೀ ಕಣ್ಣುಗಳಿಂದ. ಆಕೆ ನಮ್ಮ ಕಣ್ಣು, ಕಿವಿಯಾದರು. ಇತ್ತೀಚಿಗೆ ತಾನೇ ನಾವು ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ವರದಿಗಾರ್ತಿ ನಟಿ ದೀಪಿಕಾ ಪಡುಕೋಣೆಯ ಕಾರು ಚೇಸ್ ಮಾಡುತ್ತ, ಹುಚ್ಚಿಯ ಹಾಗೆ ಕೂಗಾಡಿದ್ದ ವೈರಲ್ ವಿಡಿಯೋ ನೋಡಿದ್ದೆವಲ್ಲ, ಅದನ್ನೇ ತನಿಖಾ ಪತ್ರಿಕೋದ್ಯಮ ಎಂದು ಜನರು ಭ್ರಮಿಸುವಂತೆ ಮಾಡಲಾಗುತ್ತಿದೆ. ಆದರೆ ತನುಶ್ರೀ ನಿನ್ನೆ ಏನು ಮಾಡಿದರೋ‌ ಅದು ಟೀವಿ ಜರ್ನಲಿಸ್ಟ್ ಗಳಿಗೊಂದು ಪಾಠ, ಮಾದರಿ. ಇತರೆ ಚಾಲನ್ ಗಳು ಡ್ರಗ್ ಕೇಸಿನಲ್ಲಿ ನಾಳೆ ಯಾವ ನಟ-ನಟಿಯನ್ನು ಇರುಕಿಸುವುದು ಎಂದು ಕನಸು ಕಾಣುತ್ತ ರಾತ್ರಿ ಬೆಚ್ಚಗೆ ಮಲಗಿದ್ದಾಗ ತನುಶ್ರೀ ಎದ್ದುನಿಂತಿದ್ದರು. ಸರಿಯಾಗಿ ರಾತ್ರಿ ಹನ್ನೆರಡೂವರೆಗೆ ಮನೀಷಾ ವಾಲ್ಮೀಕಿ ಮೃತದೇಹವನ್ನು ಹತ್ರಾಸ್ ಸಮೀಪದ ಆಕೆಯ ಹುಟ್ಟೂರಿಗೆ ತರಲಾಯಿತು. ಇಲ್ಲಿ ಏನೋ ನಡೆಯಬಾರದ್ದು ನಡೆಯಲಿದೆ ಎಂದು ತನುಶ್ರೀಗೆ ಬಲವಾಗಿ ಅನಿಸಿರಬೇಕು. ಅಥವಾ ಆಕೆಯ ಮಾಹಿತಿದಾರರು (ಪೊಲೀಸ್ ಮತ್ತು ಗ್ರಾಮಸ್ಥರ ನಡುವೆ) ಕೊಟ್ಟಿರಬಹುದಾದ ಟಿಪ್ಸ್ ಆಕೆಯನ್ನು ಜಾಗೃತಿಗೊಳಿಸಿರಬೇಕು. ಪೊಲೀಸರು ಆಂಬುಲೆನ್ಸ್ ನಲ್ಲಿ ಶವವನ್ನು ತಂದಾಗ ಸಹಜವಾಗಿಯೇ ಕುಟುಂಬದವರು ಶವವನ್ನು ತಮಗೊಪ್ಪಿಸಬಹುದು ಎಂದು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಶವವನ್ನು ಒಪ್ಪಿಸುವುದಿರಲಿ, ಆಕೆಯ ಮುಖ ನೋಡಲೂ ಯಾರಿಗೂ ಅವಕಾಶ ನೀಡಲಿಲ್ಲ. ಸಂಬಂಧಿಕರು ಪ್ರತಿಭಟನೆಗೆ ಇಳಿದರು, ಆಂಬುಲೆನ್ಸ್ ಗೆ ಅಡ್ಡ ಮಲಗಿದರು. ಕೊನೆಗೆ ಬಲಪ್ರಯೋಗ ಮಾಡಿ, ಎಲ್ಲರನ್ನೂ ಅವರವರ ಮನೆಗಳಲ್ಲೇ ಕೂಡಿಹಾಕಲಾಯಿತು. ತನುಶ್ರೀ ಕ್ಯಾಮೆರಾ ಎಲ್ಲವನ್ನೂ ರೆಕಾರ್ಡ್ ಮಾಡಿತು. ಈ ಗಲಾಟೆಯ ನಡುವೆ ತನುಶ್ರೀಯವನ್ನು ಅವರ ಸಿಬ್ಬಂದಿ ರಕ್ಷಿಸುವ ದೃಶ್ಯಗಳೂ ಸೆರೆಯಾದವು. ಆಕೆ ಅಂಜಲಿಲ್ಲ, ಅಲ್ಲಿಂದ ಓಡಿಹೋಗಲಿಲ್ಲ. ಏನೇನಾಗುತ್ತೋ ಆಗಲಿ ಎಂದು ಹಲ್ಲುಕಚ್ಚಿ ನಿಂತುಬಿಟ್ಟರು. ಸ್ಥಳೀಯ ಆಡಳಿತ ಮತ್ತು ಪೊಲೀಸರು, ಆಂಬ್ಯುಲೆನ್ಸ್ ಅನಾಮತ್ತಾಗಿ ಸ್ಮಶಾನಕ್ಕೆ ಕೊಂಡೊಯ್ದರು. ಮನೀಷಾ ಕುಟುಂಬದ ಒಬ್ಬ ಸದಸ್ಯ/ಸದಸ್ಯೆಯನ್ನೂ ಜತೆಗೆ ಇಟ್ಟುಕೊಳ್ಳದೆ ಶವಕ್ಕೆ ಬೆಂಕಿ ಹಾಕಿಬಿಟ್ಟರು. ತನುಶ್ರೀ ಕ್ಯಾಮೆರಾ ರೋಲ್ ಮಾಡಲು ಹೇಳಿ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದರು. ನೀವು ಸುಡುತ್ತಿರುವುದು ಏನನ್ನು? ಅದು ಮನೀಷಾ ದೇಹವಾಗಿದ್ದರೆ, ಆಕೆಯ ಕುಟುಂಬ ಸದಸ್ಯರನ್ನು ಯಾಕೆ ಕೂಡಿಟ್ಟಿದ್ದೀರಿ? ಎಂದು ಪ್ರಶ್ನಿಸಿದರು. ಪೊಲೀಸರ ಬಳಿ ಉತ್ತರವಿರಲಿಲ್ಲ. ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬ ನಮಗೇನು ಕೇಳ್ತೀರಿ ಮೇಡಂ, ನಾನು ಇಲಾಖೆಯಲ್ಲಿ ಚಪರಾಸಿ ಕೆಲಸ ಮಾಡೋನು, ಹೋಗಿ ಡಿಎಂ (ಜಿಲ್ಲಾಧಿಕಾರಿ) ಕೇಳಿ ಎನ್ನುತ್ತಾನೆ. ತನುಶ್ರೀ ಎಲ್ಲ ರೆಕಾರ್ಡ್ ಮಾಡಿಕೊಂಡರು. ಪೊಲೀಸರ ಎದುರೇ ನಿಂತು, ಅವರ ವಾಹನಗಳ ಬಳಿಯೇ ನಿಂತು ಇಡೀ ಪ್ರಹಸನದ ಇಂಚಿಂಚು ಮಾಹಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಹೇಗೆ ಹತ್ತೊಂಭತ್ತು ವರ್ಷದ ಎಳೆಯ ವಯಸ್ಸಿನ ಹುಡುಗಿಯ ಕೊನೆಯ ವಿಧಿಗಳನ್ನು ನಿರ್ವಹಿಸುವ ಆಕೆಯ ಕುಟುಂಬದ ಹಕ್ಕನ್ನು ಕಿತ್ತುಕೊಳ್ಳಲಾಯಿತು ಎಂಬುದನ್ನು ಪೊಲೀಸರ ಮುಖಕ್ಕೆ ಹೊಡೆದಂತೆ ಅವರ ಎದುರೇ ಹೇಳುತ್ತ ರೆಕಾರ್ಡ್ ಮಾಡಿಕೊಂಡರು. ಆಕೆಯ ಹಿನ್ನೆಲೆಯಲ್ಲಿ ಧಗಧಗಿಸುವ ಚಿತೆ, ಪಕ್ಕದಲ್ಲಿ ಪೊಲೀಸರು. ಬೆಳಿಗ್ಗೆ ತನುಶ್ರೀ ವರದಿಗಳು ಪ್ರಸಾರವಾಗುತ್ತಿದ್ದಂತೆ ಇಡೀ ದೇಶದ ಪ್ರಜ್ಞಾವಂತ ಮನಸುಗಳು ಜಾಗೃತಗೊಂಡವು. ಮನೀಷಾ ಪ್ರಕರಣದಲ್ಲಿ ಪೊಲೀಸರ ದುಷ್ಟಹುನ್ನಾರಗಳು ಬಟಾಬಯಲಾಯಿತು. ನಿರೀಕ್ಷೆಯಂತೆ ಒಂದಾದಮೇಲೊಂದರಂತೆ ಸುಳ್ಳುಗಳನ್ನು ತೇಲಿಬಿಡಲಾಯಿತು. ಆಕೆಯ ಮೇಲೆ‌ ಅತ್ಯಾಚಾರವೇ ನಡೆದಿರಲಿಲ್ಲ ಎಂದರು ಪೊಲೀಸರು. ಕೊಲೆ ಮಾಡಿದವನು ಸಂದೀಪ್ ಒಬ್ಬನೇ, ಅವರ ನಡುವೆ ಹಳೇ ದ್ವೇಷವಿತ್ತು ಎಂದರು. ಆದರೆ ಮನೀಷಾ ಸಾಯುವ ಮುನ್ನ ಮ್ಯಾಜಿಸ್ಟ್ರೇಟ್ ಎದುರು ತನ್ನ ಹೇಳಿಕೆ ದಾಖಲಿಸಿದ್ದಳಲ್ಲ, ಅದನ್ನು ಹೇಗೆ ಬದಲಾಯಿಸುವುದು? ಪೊಲೀಸರು ಅನಿವಾರ್ಯವಾಗಿ ಇನ್ನೂ‌ ಮೂವರು ಆರೋಪಿಗಳನ್ನು ಬಂಧಿಸಿದರು ಇಲ್ಲ, ನಾವು ಕುಟುಂಬ ಸದಸ್ಯರ ಸಮ್ಮತಿ ಪಡೆದೇ ಅಂತಿಮಸಂಸ್ಕಾರ ನಡೆಸಿದೆವು ಎಂದು ಯುಪಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು. ತನುಶ್ರೀ, with due respect, ನೀವು ಹೇಳುತ್ತಿರುವುದೆಲ್ಲ ಸುಳ್ಳು. ಪ್ರತಿಯೊಂದಕ್ಕೂ ವಿಶುಯಲ್ ದಾಖಲೆ ಇದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅಧಿಕಾರಿ, SIT ತನಿಖೆ ಮಾಡುತ್ತದೆ, ಸ್ಥಳದಲ್ಲಿದ್ದ ಪೊಲೀಸರಿಂದ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು defence mode ಗೆ ಬದಲಾದರು. ತನುಶ್ರೀ ಹಿಂದೆ CNN IBN ನಲ್ಲಿ ಇದ್ದವರು, ಬಹುಶಃ ರಾಜ್ ದೀಪ್ ಸರ್ದೇಸಾಯಿ ಐಬಿಎನ್ ನಿಂದ ಇಂಡಿಯಾ ಟುಡೆಗೆ ಬಂದ ನಂತರ ಅವರೂ ಇಂಡಿಯಾ ಟುಡೆಗೆ ಬಂದಿದ್ದಾರೆನಿಸುತ್ತದೆ. ಆಕೆ ನಿನ್ನೆ ಮಾಡಿದ ವರದಿಗಳನ್ನು ಗಮನಿಸಿ ನೋಡಿ. ಕೂಗಾಟ, ಕಿರುಚಾಟ, ಡ್ರಾಮೇಬಾಜಿಯಿಲ್ಲ. ತಾನೂ ಒಬ್ಬ ಹೆಣ್ಣುಮಗಳಾಗಿ ಇದನ್ನೆಲ್ಲ ವರದಿ‌ ಮಾಡುವಾಗ ಎಮೋಷನಲ್ ಆಗುವುದು ಸಹಜ, ಆದರೆ ಆಕೆ ತನ್ನ ಭಾವನೆಗಳನ್ನು ಕಟ್ಟಿಟ್ಟುಕೊಂಡು, ಇಂಚಿಂಚೂ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತ ಹೋದರು. ಆಕೆ ಏನು ಮಾಡಬೇಕಿತ್ತೋ ಅದನ್ನಷ್ಟೇ ಮಾಡಿದರು. ಒಂಚೂರು ಕಡಿಮೆಯೂ ಅಲ್ಲ, ಚೂರು ಹೆಚ್ಚೂ ಅಲ್ಲ. ತನುಶ್ರೀ ನಿಜಕ್ಕೂ ಮಾಡಿರುವುದು ಸಾಹಸದ ಕೆಲಸ. ಪೊಲೀಸರು ಈಕೆಯ ಮೇಲೂ ದಾಳಿ‌ ಮಾಡುವ ಸಾಧ್ಯತೆ ಇತ್ತು, ಕ್ಯಾಮೆರಾ ಕಿತ್ತುಕೊಂಡು ಈಕೆಯನ್ನು ಕೂಡಿಹಾಕುವ ಸಾಧ್ಯತೆ ಇತ್ತು. ಆದರೆ ಈಕೆ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಲೇ ದೇಶದ ಮುಂದೆ ಆ ಮುಗ್ಧ ಹುಡುಗಿ ಮನೀಷಾಳ ಸಂಕಟಗಳನ್ನು ತೆರೆದಿಟ್ಟರು. ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣಕ್ಕಾಗಿ ಅರ್ನಾಬ್ ನೇತೃತ್ವದ ಕೂಗುಮಾರಿ ಮೀಡಿಯಾ ಎರಡು ತಿಂಗಳಿನಿಂದ ಬಾಯಿ ಬಡಿದುಕೊಳ್ಳುತ್ತಿದೆ. ಮನೀಷಾ ವಾಲ್ಮೀಕಿಯಂಥವರ ಕುರಿತು ಯಾರು ವರದಿ ಮಾಡುತ್ತಾರೆ? ಆದರೆ ತನುಶ್ರೀ ಪಾಂಡೆ ಎಂಬ ಹೆಣ್ಣುಮಗಳು ನಮ್ಮ ನಿರೀಕ್ಷೆಗಳನ್ನು ಸುಳ್ಳಾಗಿಸಿದರು. ಆಕೆಗೆ ಸಾವಿರ ವಂದನೆಗಳು ⚫ ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement