Advertisement

ಪ್ರಾಕೃತಿಕ ವಿಕೋಪಗಳಿಗೆ ಜಾತಿ, ಧರ್ಮಗಳು ಇಲ್ಲ ಎನ್ನುವುದಕ್ಕೆ ಕೊರಾನಾವೇ ಸಾಕ್ಷಿ : ಮುರೊಳ್ಳಿ.

Advertisement

ಪ್ರಾಕೃತಿಕ ವಿಕೋಪಗಳು ಜಾತಿ, ಧರ್ಮ ನೋಡಿ ಬರುವುದಿಲ್ಲ. ಅವುಗಳಿಗೆ ಜೀವಸಂಕುಲಗಳೆಲ್ಲ ಒಂದೇ ಆಗಿದೆ. ಅದರ ಪರಿಣಾಮವಾಗಿ ಇಂದು ಈ ವಿಶ್ವಕ್ಕೆ ಆವರಿಸಿರುವ ಕೊರೊನಾ ಮಾರಕ ರೋಗ ವಿಶ್ವದ ಎಲ್ಲಾ ಧರ್ಮ, ಜಾತಿಗಳ ಮನುಷ್ಯರನ್ನು ಬಾದಿಸಿವೆ ಮತ್ತು ಬಲಿ ಪಡೆದಿವೆ. ಜನಜೀವನವನ್ನು, ಆರ್ಥಿಕತೆಯನ್ನು ಸರ್ವನಾಶಗೊಳಿಸಿದೆ. ಇದು ಜಾತಿ ಧರ್ಮದ ಹೆಸರಲ್ಲಿ ಬಡಿದಾಡುವ ಪ್ರತಿಯೊಬ್ಬರಿಗೂ ಪಾಠವಾಗಬೇಕು, ಇನ್ನಾದರೂ ನಾವೆಲ್ಲರೂ ಒಂದು ಎಂಬ ವಿಶ್ವಮಾನವ ಪರಿಕಲ್ಪನೆ ಅಳವಡಿಸಿಕೊಂಡು ಸೌಹಾರ್ಧತೆಯಿಂದ ಬದುಕುವುದನ್ನು ಕಲಿಯಬೇಕು ಎಂದು ಖ್ಯಾತ ನ್ಯಾಯವಾದಿ, ಜನಪರ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಸುದೀರ್ ಕುಮಾರ್ ಮುರೊಳ್ಳಿ ಕರೆ ನೀಡಿದ್ದಾರೆ. ಆದಿತ್ಯವಾರ ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿಕ್ಸೂಚಿ ಬಾಷಣಕಾರರಾಗಿ ಅವರು ಮಾತನಾಡುತ್ತಿದ್ದರು. 70- 80ರ ದಶಕದಲ್ಲಿ ರಾಜ್ಯದ ಪತ್ರಿಕಾ ವಲಯದಲ್ಲಿ ತನ್ನ ಹರಿತ ಬರಹಗಳಿಂದ ಸಂಚಲನೆ ಮೂಡಿಸಿದ್ದ, ಹಿರಿಯ ಸಮಾಜಮುಖಿ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸಂಪಾದಕತ್ವದ ಮುಂಗಾರು ಪತ್ರಿಕೆ ತನ್ನ ಅತಿ ಸಣ್ಣ ಅವಧಿಯಲ್ಲಿ ಒಂದು ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸಿತ್ತು ಎಂಬುವುದಕ್ಕೆ ಆ ಪತ್ರಿಕೆ ಮೂಲಕ ರಾಜ್ಯ, ದೇಶ ಮಟ್ಟಕ್ಕೆ ಬೆಳೆದು ಹೆಸರು ಗಳಿಸಿರುವ ಪತ್ರಕರ್ತರು, ಬರಹಗಾರರು ಹಾಗೂ ವ್ಯಂಗ್ಯಚಿತ್ರಕಾರರುಗಳೇ ಸಾಕ್ಷಿಯಾಗಿದ್ದಾರೆ. ಹಾಗೆಯೇ ವಡ್ಡರ್ಸೆಯವರು ಸದಾ ಪ್ರತಿಪಾದಿಸುತ್ತಿದ್ದ ಬಹುತ್ವ ಮತ್ತು ಜಾತ್ಯಾತೀತ ಎಂಬ ಎರಡು ವಿಚಾರಗಳು ಬಹು ಅಪಾಯದಲ್ಲಿವೆ. ಆ ಶಬ್ದ ಉಚ್ಚರಿಸುವವರನ್ನು ನೇಣಿಗೇರಿಸುವ ಅಪಾಯ ಈ ದೇಶದಲ್ಲಿ ಇದೀಗ ಎದುರಾಗಿದೆ ಇದು ದೇಶದ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದವರು ಹೇಳಿದರು. ಇಂದು ಮಾಧ್ಯಮಗಳು ಸಮಾಜವನ್ನು ಕಟ್ಟುವ ಕೆಲಸ ಮಾಡದೇ ಬದಲಿಗೆ ಒಡೆಯುವ ಕೆಲಸ ಮಾಡುತ್ತಿವೆ.ಮಾಧ್ಯಮಗಳ ಕೆಲಸ ಸುದ್ದಿ ಮಾಡುವುದೇ ಹೊರತೂ ತೀರ್ಪು ನೀಡುವುದಲ್ಲ. ಸ್ವಾತಂತ್ರ್ಯಾ ನಂತರ ನಮ್ಮ ಹಿರಿಯರು ಜೈಲುಗಳನ್ನು ಕಟ್ಟಿರುವುದು ಕಠಿಣ ಶಿಕ್ಷೆಗೆ ಗುರಿಪಡಿಸಲು ಅಲ್ಲ ಬದಲಿಗೆ ಅಪರಾಧಿಗಳನ್ನು ಪರಿವರ್ತಿಸಿ ಉತ್ತಮ ಸಮಾಜವನ್ನು ನಿರ್ಮಿಸಲು ಆಗಿದೆ. ಇಂದು ಕೆಲವು ದೃಶ್ಯಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಇಂದು ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪುರಸ್ಕೃತರಾಗಿರುವ ಗಂಗಾಧರ ಹಿರೇಗುತ್ತಿ ಓರ್ವ ಬದ್ದತೆಯ ಪತ್ರಕರ್ತ ಹಾಗೂ ಅಷ್ಟೇ ಬದ್ಧತೆಯ ಉಧ್ಯಮಿಯಾಗಿದ್ದಾರೆ. ಪತ್ರಕರ್ತರ ಪಾಲಿಗೆ ಕರ್ನಾಟಕ ಪತ್ರಿಕೋಧ್ಯಮ ಪ್ರಶಸ್ತಿಗಿಂತಲೂ ಉತ್ಕೃಷ್ಟವಾಗಿದೆ ಈ ಪ್ರಶಸ್ತಿ. ಗುರು ವಡ್ಡರ್ಸೆಯವರು ಸೋತಲ್ಲೆ ಅವರ ಶಿಷ್ಯ ಹಿರೇಗುತ್ತಿ ಗೆದ್ದಿರುವುದು ಪ್ರಶಂಸನೀಯ ವಿಚಾರ ಎಂದರು. ವಡ್ಡರ್ಸೆ ರಘರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉತ್ತರ ಕನ್ನಡದ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ತಾನು ಓರ್ವ ಪತ್ರಿಕಾ ವಿತರಕನಾಗಿ ವೃತ್ತಿಜೀವನ ಆರಂಬಿಸಿ ಆ ನಂತರ ವಡ್ಡರ್ಸೆಯವರ ಗರಡಿಯಲ್ಲಿ ಬೆಳೆದು ಇಂದು ಪ್ರಶಸ್ತಿ ಪಡೆವ ಮಟ್ಟಕ್ಕೆ ಬೆಳೆಯಲು ಕಾರಣವಾದ ಹಲವಾರು ಘಟನೆಗಳು ಹಾಗೂ ಪಟ್ಟ ಕಷ್ಟಗಳ ಕುರಿತು ವಿವರಿಸಿ ಪ್ರಶಸ್ತಿಗೆ ತನ್ನನ್ನು ಆಯ್ಕೆಗೊಳಿಸಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಮತ್ತು ಬ್ರಹ್ಮಾವರ ಪತ್ರಕರ್ತರ ಸಂಘಕ್ಕೆ ಕೃತಜ್ಞತೆ ತಿಳಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಉಡುಪಿ ಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ್ ಆಚಾರ್ಯ ಅದ್ಯಕ್ಷೀಯ ಬಾಷಣ ಮಾಡಿ ಪ್ರಶಸ್ತಿ ಪುರಸ್ಕೃತ ಹಿರೇಗುತ್ತಿಯವರಿಗೆ ಅಭಿನಂದನೆ ಸಲ್ಲಿಸಿದರು. ಸತತ ಐದು ವರ್ಷಗಳಿಂದ ನಡೆಯುತ್ತಿರುವ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ತನು ಮನ ಧನದ ಸಹಾಯ ಮಾಡಿದ ಮಹನೀಯರನ್ನು ನೆನಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಬ್ರಹ್ಮಾವರ ತಾ.ಪಂ ಅಧ್ಯಕ್ಷರಾದ ಜ್ಯೋತಿ ಉದಯ ಪೂಜಾರಿ, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ, ಪತ್ರಕರ್ತ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಹಾಗೂ ಉಪನ್ಯಾಸಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಪತ್ರಕರ್ತ ಕೆ.ಜಿ ವೈದ್ಯ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅಚ್ಲಾಡಿ ರಾಜೇಶ್ ಗಾಣಿಗ, ಮೋಹನ್ ಉಡುಪ, ಬಂಡಿಮಠ ಶಿವರಾಮ ಆಚಾರ್ಯ, ಹರೀಶ್ ಕಿರಣ್ ತುಂಗ, ನಾಗರಾಜ ಅಲ್ತಾರು, ಪ್ರವೀಣ್ ಬ್ರಹ್ಮಾವರ, ಪ್ರವೀಣ್ ಮುದ್ದೂರು, ರವೀಂದ್ರ ಕೋಟ, ಅನಂತ ನಾಯಕ್ ಮುದ್ದೂರು, ಗಣೇಶ್ ಸಾಯ್ಬರಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement