Advertisement

'ಅಂಬೇಡ್ಕರ್​ ರವರು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು' ಎಂಬ ಪ್ರಶ್ನೆ ಕೇಳಿದ್ದಕ್ಕಾಗಿ ಅಮಿತಾಬ್ ವಿರುದ್ಧ ಎಫ್‌ಐಆರ್ ದಾಖಲು

Advertisement

ದೇಶ, ವಿದೇಶದಲ್ಲಿ ಬಹು ಜನಪ್ರಿಯವಾಗಿರುವ ಹಿಂದಿಯ ಟೆಲಿವಿಷನ್ ಕಾರ್ಯಕ್ರಮ ‘ಕೌನ್ ಬನೇಗ ಕರೋಡ್‌ಪತಿ’ಯಲ್ಲಿ ಕೇಳಿದ್ದ ಪ್ರಶ್ನೆಯೊಂದನ್ನು ಮತ್ತು ಅನಂತರ ನೀಡಿದ ವಿವರಣೆಯನ್ನು ಆಕ್ಷೇಪಿಸಿ ಆ ಕಾರ್ಯಕ್ರಮದ ನಿರೂಪಕರಾಗಿರುವ ಜನಪ್ರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಸೋನಿ ಟಿವಿಯ ಕಾರ್ಯಕ್ರಮಗಳ ನಿರ್ಮಾಪಕರ ವಿರುದ್ಧ ಲಕ್ನೋ ಪೊಲೀಸ್ ಠಾಣೆಯಲ್ಲಿ ಎಫ್‌ ‌ಐ ಆರ್ ದಾಖಲಾಗಿದೆ. ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಭ್‌ ರವರು ಕೇಳಿದ ಪ್ರಶ್ನೆ ಹೀಗಿತ್ತು: 1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್​ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು? ಆಯ್ಕೆಗಳು : ಎ) ವಿಷ್ಣುಪುರಾಣ. ಬಿ) ಭಗವದ್ಗೀತೆ. ಸಿ) ಋಗ್ವೇದ. ಡಿ) ಮನುಸ್ಮೃತಿ ಎಂಬುದಾಗಿತ್ತು. ಈ ಪ್ರಶ್ನೆಗೆ ಬೆಜವಾಡ ವಿಲ್ಸನ್ ಮತ್ತು ಅನೂಪ್ ಸೋನಿ 'ಡಿ)ಮನುಸ್ಮೃತಿ' ಎಂದು ಉತ್ತರ ನೀಡಿದ್ದರು. ಅಮಿತಾಬ್ ಬಚ್ಚನ್‌ರವರು ಉತ್ತರ ಸರಿ ಎಂದು ಘೋಷಿಸಿದ್ದರು ಹಾಗೂ “1927ರ ಡಿಸೆಂಬರ್ 25 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರು ಜಾತಿ ಬೇಧಭಾವ ಮತ್ತು ಅಸ್ಫೃಶ್ಯತೆಯನ್ನು ವೈಚಾರಿಕವಾಗಿ ವಿರೋಧಿಸುವ ಸಲುವಾಗಿ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದರು” ಎಂದು ವಿವರಣೆ ನೀಡಿದ್ದರು. ಈ ಕುರಿತಾಗಿ ಮಹಾರಾಷ್ಟ್ರದ ಲಾತೂರ್​ ಜಿಲ್ಲೆ ಔಸಾ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್‌ರವರ ಕಟ್ಟಾ ಅನುಯಾಯಿಯೂ ಆಗಿರುವ ಅಭಿಮನ್ಯು ಪವಾರ್​ ರವರು ಲಾತೂರ್​ ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ನಿಖಿಲ್​ ಪಿಂಗಳೆ ಅವರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೌನ್​ ಬನೇಗಾ ಕರೋಡಪತಿ(ಕೆಬಿಸಿ)ಯಲ್ಲಿ ಕೇಳಲಾಗಿರುವ ಪ್ರಶ್ನೆ ಮತ್ತು ಅನಂತರ ಅಮಿತಾಬ್ ಬಚ್ಚನ್ ನೀಡಿರುವ ವಿವರಣೆ 'ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ' ಎಂಬುದು ಅವರ ವಾದವಾಗಿದೆ. ದೂರು ನೀಡಿದ ನಂತರ ತಾವು ನೀಡಿರುವ ಎರಡು ಪುಟಗಳ ಆ ದೂರಿನ ಪ್ರತಿಯನ್ನ ಶಾಸಕ ಅಭಿಮನ್ಯು ಟ್ವೀಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕಳೆದ ಶುಕ್ರವಾರ ಪ್ರಸಾರಗೊಂಡ ಸೋನಿ ಟಿವಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ‘ಕರಮ್‌​ವೀರ್’ ಎಂಬ ವಿಶೇಷ ಸಂಚಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್‌ ಮತ್ತು ಜನಪ್ರಿಯ ನಟ ಅನುಪ್ ಸೋನಿಯವರಿಗೆ ನಿರೂಪಕ ಅಮಿತಾಭ್ ಬಚ್ಚನ್ ಪ್ರಶ್ನೆಯೊಂದನ್ನು ಕೇಳಿದ್ದರು. ಆ ಪ್ರಶ್ನೆ 6,40,000 ರೂಪಾಯಿಯ ನಗದು ಬಹುಮಾನ ಹೊಂದಿದ್ದ ಪ್ರಶ್ನೆಯಾಗಿತ್ತು. ಸ್ವಾತಂತ್ರ್ಯಾ ನಂತರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ಧಾಂತದ ಸಂವಿಧಾನವನ್ನು ರಚಿಸಿ, ಜಾರಿಗೊಳಿಸುವ ಮೂಲಕ ಈ ದೇಶದ ಶೋಷಿತ ಸಮುದಾಯಕ್ಕೆ ವಿದ್ಯೆ, ಅಧಿಕಾರ, ಆಸ್ತಿಯ ಸಮಾನ ಹಕ್ಕು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಭಾರತ ದೇಶದಲ್ಲಿ ಶತಶತಮಾನಗಳ ಕಾಲದಿಂದ ಜಾರಿಯಲ್ಲಿದ್ದ ಮೇಲು ಕೀಳೆಂಬ ತಾರತಮ್ಯ , ಅಸಮಾನತೆ, ಅಸ್ಪೃಶ್ಯತೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಮನುವಾದಿ ವೈದಿಕಶಾಹಿಗಳ ಪ್ರಾಚೀನ ಗ್ರಂಥವೆನ್ನಲಾದ 'ಮನುಸ್ಮೃತಿ'ಯನ್ನು 1927ರಲ್ಲಿ ತನ್ನ ಅನುಯಾಯಿಗಳ ಜೊತೆಗೂಡಿ ಸುಟ್ಟು ಹಾಕಿ ಪ್ರತಿಭಟಿಸಿದ್ದರು. ಮನು ಸ್ಮೃತಿ ಕುರಿತಾದ ಈ ಮೇಲಿನ ವಿಚಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಗೊಂಡಿದ್ದು 'ದೂರಿನಲ್ಲಿ ವಿವರಿಸಲಾಗಿರುವ ಪ್ರಕಾರ ಅಂಬೇಡ್ಕರ್‌ರವರು ಹಾಗೆ ಮನುಸ್ಮೃತಿಯನ್ನು ವಿರೋಧಿಸಿದ್ದುದು, ಅದನ್ನು ಸುಟ್ಟು ಹಾಕಿ ಪ್ರತಿಭಟಿಸಿರುವುದು ಅವರ ಬರಹಗಳಲ್ಲಿ ಮಾತ್ರವಲ್ಲದೇ ಭಾರತ ದೇಶದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅದನ್ನು ಯಾರು ಬೇಕಾದರೂ ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಈ ಸತ್ಯವನ್ನು ಇತಿಹಾಸದ ಪುಟಗಳಿಂದ ಯಾರಿಂದಲೂ ಅಳಿಸಲು ಅಥವಾ ಬದಲಿಸಲು ಸಾಧ್ಯವಿಲ್ಲ. ಹಾಗಿರುವಾಗ ಇದರಲ್ಲಿ ವಿವಾದ ಎಲ್ಲಿದೆ? ಎಂದು ಕೆಲವರು ಪ್ರತಿಕ್ರಿಯಿಸಿದರೆ, ಹಿಂದೂಗಳ ಭಾವನೆಗೆ ನೋವುಂಟಾಗಿದೆ ಎಂದು ವಾದಿಸುವ ದೂರುದಾರ ಬಿಜೆಪಿ ಶಾಸಕ 'ಇದು ಬಹುಸಂಖ್ಯಾತ ಹಿಂದೂಗಳಾದ ಹಿಂದುಳಿದ ವರ್ಗದ ಮತ್ತು ದಲಿತರ ಹಕ್ಕುಗಳನ್ನು ಕಸಿದುಕೊಂಡು ಶತಶತಮಾನಗಳ ಕಾಲ ಶೋಷಿಸಿದ ಸ್ವಯಂಘೋಷಿತ ಮೇಲ್ವರ್ಗ ಮನುವಾದಿಗಳ ಭಾವನೆಗಳಿಗೆ ನೋವುಂಟಾಗಿದೆ ಎಂದೇಕೆ ಹೇಳಿಲ್ಲ? ಅವರ ಪ್ರಕಾರ ಹಿಂದೂಗಳೆಂದರೆ ಯಾರು? ಹಾಗಾದರೆ ಈ ದೇಶದ ಶೋಷಿತ ಸಮುದಾಯವಾದ ಹಿಂದುಳಿದ ವರ್ಗ ಮತ್ತು ದಲಿತ ವರ್ಗ ಹಿಂದೂಗಳಲ್ಲವೇ? ಅಥವಾ ಮೇಲ್ಜಾತಿಯ ಮನುವಾದಿಗಳು ಮಾತ್ರವೇ ಹಿಂದೂಗಳೇ?' ಎಂದು ಇನ್ನು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮಾನವತೆಯ ವಿರೋಧಿಯಾಗಿರುವ ಮನುಸ್ಮೃತಿಯ ಅಪಾಯದ ಕುರಿತು ಸಾಮಾನ್ಯ ಜನರಿಗೆ ತಿಳಿಯುವಂತಾದರೆ ತಪ್ಪೇನು? ಇತಿಹಾಸದಲ್ಲಿ ಅಂತಹ ಶೋಷಣೆಯನ್ನು ಮಾಡಿದ ವರ್ಗದ ಸಂತಾನಿಗಳು ಇಂದಿಗೂ ಆ ಕುರಿತಾದ ಗುಪ್ತ ಕಾರ್ಯಸೂಚಿ ಇಟ್ಟುಕೊಂಡು ಸಂವಿಧಾನ ಬದಲಾವಣೆಯ ಕುರಿತು ಪ್ರಯತ್ನಿಸುತ್ತಿರುವುದು ಜನಸಾಮಾನ್ಯರಿಗೆ ತಿಳಿಯದಿರುವ ವಿಚಾರವೇನಲ್ಲ, ಈ ದೂರು ಕೂಡಾ ಆ ಕುರಿತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುವ ವ್ಯಕ್ತಿಗಳಲ್ಲಿ ಭಯ ಹುಟ್ಟಿಸುವುದೇ ಆಗಿದೆ' ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 'ಹಾಗಾದರೆ ದೂರುದಾರ ಶಾಸಕರು ಅಥವಾ ಅವರು ಪ್ರತಿನಿಧಿಸುವ ಪಕ್ಷ ಬಿಜೆಪಿ ಮನುಸ್ಮೃತಿ ಯನ್ನು ಬೆಂಬಲಿಸುತ್ತದೆಯೇ? ಬೆಂಬಲಿಸುತ್ತದೆಯಾದರೆ ಅವರು ಸಮಾನತೆಯನ್ನು ಒಪ್ಪಿಕೊಂಡಿಲ್ಲ ಎಂದು ಒಪ್ಪಿಕೊಂಡಂತಾಗಿಲ್ಲವೇ? ಇದು ನಿಜಕ್ಕೂ ಜನಸಾಮಾನ್ಯರು ಯೋಚಿಸಬೇಕಾದ ವಿಚಾರವಾಗಿದೆ' ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. _____________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement