ಬರಹ: ಡಾ. ಜೆ ಎಸ್ ಪಾಟೀಲ
ಈ ದೇಶದ ಅಸ್ಪೃಶ್ಯˌ ದಲಿತ ದಮನಿತ ಸಮುದಾಯಗಳ ಸಬಲೀಕರಣದ ಮಾಡುವ ಎಲ್ಲ ಬಗೆಯ ಪ್ರಯತ್ನಗಳು ಯಶಸ್ವಿಯಾದರೆ ಈ ನೆಲದಲ್ಲಿ ಬಲವಾಗಿ ಬೇರೂರಿರುವ ಮತ್ತು ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ವಿಷಮಗೊಳಿಸಿರುವ ಸನಾತನಿ ಆರ್ಯ ಪ್ರಣೀತ ಬ್ರಾಹ್ಮಣ್ಯದ ಗೋಡೆ ಶಿಥಿಲಗೊಳ್ಳಬಲ್ಲವು. ದಲಿತ ಸಬಲೀಕರಣದೊಂದಿಗೆ ಶೂದ್ರ ಮತ್ತು ಅತಿ ಶೂದ್ರರ ಸಬಲೀಕರದ ಪ್ರಯತ್ನ ಒಟ್ಚುಗೂಡಿದರಂತೂ ಸಹಜವಾಗಿ, ಇದು ಬ್ರಾಹ್ಮಣ್ಯದ ಆರಂಭಿಕ ಅಂತ್ಯಕ್ಕೆ ಮಾರಕ ಸಂಯೋಜನೆಯಾಗಲ್ಲದು. ಅಸ್ಪೃಶ್ಯರು ಈ ದೇಶದ ಬಹುಮುಖ್ಯ ಕಾಲ್ದಳವಾಗಿˌ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಡಿಪಾಯ ಮತ್ತು ದೇಶದ ಆರ್ಥಿಕತೆಯ ಬೆನ್ನು ಮೂಳೆಯಾಗಿದ್ದರೂ ಕೂಡ ಇಂದಿನ ಅಧುನಿಕ ಕಾಲಘಟ್ಟದಲ್ಲಿ ಅವರನ್ನು ಭಾರತೀಯ ಸಮಾಜ ಅನೇಕ ವಿಧಗಳಲ್ಲಿ ಉಚಿತ ಬಂಧಿತ ಕಾರ್ಮಿಕರಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಸಂವಿಧಾನ ಜಾರಿಯಾಗಿ ಅರ್ಧ ಶತಮಾನವೇ ಕಳೆದುಹೋಗಿದ್ದರೂ ಕೂಡ ಭಾರತೀಯ ಮೇಲ್ವರ್ಗದ ಮನಸ್ಸಿನಲ್ಲಿರುವ ದಲಿತ ದ್ವೇಷಿ ಮತ್ತು ಬ್ರಾಹ್ಮಣ್ಯದ ಕೊಳಕು ಚಿಂತನೆಗಳು ಕೊಂಚವೂ ಕಡಿಮೆಯಾಗಿಲ್ಲ.
ಭಾರತದ ನಗರಗಳ ಆರೋಗ್ಯ ಮತ್ತು ಸ್ವಚ್ಛತೆಯನ್ನು ಅಸ್ಪೃಶ್ಯರ ಅಪಾರ ಶ್ರಮ ಮತ್ತು ದುಡಿಮೆ ಇಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಂತೆ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಸಣ್ಣˌ ಅತಿ ಸಣ್ಣ ಗುಡಿ ಕೈಗಾರಿಕೆಗಳುˌ ಚರ್ಮೋದ್ಯಮˌ ಮುಂತಾದ ಶ್ರಮದಾಯಕ ವ್ರತ್ತಿಗಳು ಮೇಲ್ವರ್ಗ ಪ್ರತಿನಿಧಿಸುವ ಕೌಶಲ್ಯ ಆಧಾರಿತ ಬಿಳಿ ಕಾಲರ್ ಸಾಫ್ಟವೇರ್ ದಂಧೆಗಿಂತ ದೇಶದ ರಫ್ತು ವಲಯವನ್ನು ಸಬಲಗೊಳಿಸಿವೆ. ಕ್ರಷಿ ಕ್ಷೇತ್ರದಲ್ಲೂ ಕೂಡ ದಲಿತರ ದುಡಿಮೆ ಅಪಾರವಾದದ್ದು. ಆದರೂ ಅವರ ಶ್ರಮ ಒಂದು ಬಗೆಯಲ್ಲಿ ಅತಿ ಅಗ್ಗದ ದುಡಿಮೆಯಾಗಿ ನಮ್ಮ ಸಮಾಜ ಪರಿಗಣಿಸುತ್ತಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ನೀಡುವ ಮೀಸಲಾತಿ ಪ್ರಾತಿನಿಧ್ಯಕ್ಕಾಗಿ ಹೋರಾಡುತ್ತಿದ್ದರೆ ಮೇಲ್ವರ್ಗದ ಪರಾವಲಂಬಿ ಪುರೋಹಿತಶಾಹಿಗಳು ಅದನ್ನು ವಿರೋಧಿಸಿದವು. ಆದರೆ ಪ್ರಗತಿಪರರಾಗಿದ್ದ ಬ್ರಿಟೀಷರು ದಲಿತರಿಗೆ ರಾಜಕೀಯದಲ್ಲಿ ಮೀಸಲಾತಿ ನೀಡುವಲ್ಲಿ ಯಶಸ್ವಿಯಾದರು. ಪುರೋಹಿತಶಾಹಿಗಳು ದಲಿತರ ಮೀಸಲಾತಿಯನ್ನು ಸಾಂವಿಧಾನಿಕವಾಗಿ ಸಿಗದಂತೆ ಮಾಡಲು ಇನ್ನಿಲ್ಲದಂತೆ ಪ್ರಯತ್ನಿಸಿದವು. ಆದರೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಅದನ್ನು ಶತಾಯಗತಾಯ ವಿಫಲಗೊಳಿಸಿದರು. ಈಗಲೂ ಕೂಡ ದಲಿತರಿಗೆ ನೀಡಲಾದ ಮೀಸಲಾತಿಯನ್ನು ತೆಗೆದು ಹಾಕಲು ಪುರೋಹಿತಶಾಹಿ ಪಟ್ಟಭದ್ರರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದನ್ನು ರಾಜಕೀಯವಾಗಿ ಮುಗಿಸಿ ಹಾಕುವುದು ಕಷ್ಟದಾಯಕವಾಗಿ ಪರಿಣಮಿಸಿದೆ. ಆದ್ದರಿಂದಲೇ ಈ ದುಷ್ಟಶಕ್ತಿಗಳು ಅದನ್ನು ಕಾರ್ಯಾಂಗ ಮತ್ತು ನ್ಯಾಯಾಂಗ ವಿಧಾನಗಳ ಮೂಲಕ ಮುಗಿಸಲು ಪ್ರಯತ್ನಿಸುತ್ತಿವೆ.
ಮೀಸಲಾತಿಯನ್ನು ಶಾಸನಬದ್ದವಾಗಿ ಮುಗಿಸಿ ಹಾಕಿದರೆ ಆಗಬಹುದಾದ ರಾಜಕೀಯ ದುಷ್ಪರಿಣಾಮಗಳಿಗೆ ಹೆದರಿ ಖಾಸಗೀಕರಣದ ಮೂಲಕ ಅದನ್ನು ಪರೋಕ್ಷವಾಗಿ ಮುಗಿಸಲು ಪುರೋಹಿತಶಾಹಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಪೂನಾ ಮಾತುಕತೆ ಆಧರಿತ ದ್ವಿಮತದಾನದ ಒಪ್ಪಂದದಿಂದ ಪ್ರಯೋಜನ ಪಡೆದ ನಾಯಕತ್ವದ ಧ್ವನಿಯನ್ನು ಮೌನಗೊಳಿಸುವಲ್ಲಿ ಮೇಲ್ವರ್ಗಕ್ಕೆ ಅದು ಬಹಳ ಉಪಯುಕ್ತವಾಯಿತು. ಇಲ್ಲದಿದ್ದರೆ ಅಸ್ಪೃಶ್ಯತೆಯನ್ನು ಪುನಶ್ಚೇತನಗೊಳಿಸಲು ಮತ್ತು ಮೀಸಲಾತಿ ಬೇಡಿಕೆಯನ್ನು ದುರ್ಬಲಗೊಳಿಸಲು ಅವರು ರಾಜಕೀಯ ಮೀಸಲಾತಿಯನ್ನು ತಮ್ಮ ಅನುಕೂಲಕ್ಕೆ ಒಂದು ಸಾಧನವಾಗಿ ಬಳಸುತ್ತಿದ್ದರು. ಮೀಸಲಾತಿಯ ನೈಜ ಫಲಾನುಭವಿಗಳು ತಮಗೆ ಆಗಬಹುದಾದ ಹಾನಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮೊದಲೇ, ಕೆಲವು ಸ್ಪರ್ಶ ದಲಿತರನ್ನು ಯಶಸ್ವಿಯಾಗಿ ಮೀಸಲಾತಿಯ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಲಾಯ್ತು. ಇದೊಂದು ಅತ್ಯಂತ ಪೂರ್ವನಿಯೋಜಿತ ಷಡ್ಯಂತ್ರವೆನ್ನುವುದು ನೈಜ ದಲಿತರಿಗೆ ತಿಳಿಯಲು ಬಹಳ ಸಮಯ ಹಿಡಿಯಿತು. ಈ ಷಡ್ಯಂತ್ರವು ದಲಿತ ಸಬಲೀಕರಣ ಚಳವಳಿಯನ್ನು ದಿಕ್ಕುತಪ್ಪಿಸಿ ನೈಜ ಫಲಾನುಭವಿಗಳಿಗೆ ಅನ್ಯಾಯವನ್ನೆಸಗಿತು.
ಆದರೆˌ ಪುರೋಹಿತಶಾಹಿಗಳು ತಮ್ಮ ವಿದೇಶಿ ಮೂಲದ ಹೊರತಾಗಿಯೂ ಇಂದು ಭಾರತದ ಅಧಿಕಾರ ಸ್ಥಾನವನ್ನು ತಮ್ಮ ಕಪಿಮುಷ್ಟಿಯಲ್ಲಿ ಬಿಗಿದಿಟ್ಟುಕೊಂಡಿದ್ದಾರೆ. ಪುರೋಹಿತಶಾಹಿಗಳು ಮನುಸ್ಮೃತಿಯನ್ನು ಸಂವಿಧಾನವಾಗಿ ಮಾಡುವ ಮೂಲಕˌ ಚಾತುರ‌್ವರ್ಣ ವ್ಯವಸ್ಥೆ ಆಧಾರಿತ ಆಡಳಿತದ ಪುನಶ್ಚೇತನಕ್ಕೆ ಹವಣಿಸುತ್ತಿದ್ದಾರೆ. ಅವರಿಗೆ ಡಾ. ಬಾಬಾಸಾಹೇಬರ ಸರ್ವಜನ ಹಿತ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸರ್ವರಿಗೆ ಸಮ ಬಾಳ್ವೆ ಪ್ರತಿಪಾದಿಸುವ ಸಂವಿಧಾನದ ಬದಲಿಗೆ ಪುರೋಹಿತರ ಹಿತಾಸಕ್ತಿಗೆ ಮಾತ್ರ ಬದ್ದವಾದ ಮನುಸ್ಮೃತಿಯನ್ನು ಸಂವಿಧಾನ ಮಾಡುವುದು ಅವರ ತುಡಿತವಾಗಿದೆ. ಈಗಿರುವ ದೇಶದ ಸಂವಿಧಾನವನ್ನು ದುರ್ಬಲ ಮತ್ತು ಅರ್ಥಹೀನಗೊಳಿಸದ ಹೊರತು, ಪ್ರಾಚೀನ ಸನಾತನಿ ಆಡಳಿತದ ಮಾದರಿ ಪುನಃಸ್ಥಾಪಿಸುವುದು ಕಷ್ಟದ ಕೆಲಸವೆಂದು ಪುರೋಹಿತಶಾಹಿಗಳಿಗೆ ತಿಳಿದಿದೆ. ಆ ಕಾರಣದಿಂದಲೇ ಅವು ಈಗ ಸಂವಿಧಾನವನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಕೈಹಾಕಿವೆ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ತಮ್ಮ ಪಕ್ಷದ ಮುಖ್ಯಸ್ಥರು ಮತ್ತು ಆ ಪಕ್ಷವನ್ನು ನಿಯಂತ್ರಿಸುವ ಪಟ್ಟಭದ್ರರಿಗೆ ವಿಧೇಯರಾಗಿ ವರ್ತಿಸುತ್ತಾರೆ. ಈ ಜನಪ್ರತಿನಿಧಿಗಳು ಸಂವಿಧಾನಕ್ಕೆ ವಿಧೇಯರಾಗಿಲ್ಲ. ಪುರೋಹಿತಶಾಹಿಗಳು ಮಾಡುತ್ತಿರುವ ದಲಿತˌ ಶೂದ್ರ ವಿರೋಧಿ ಹುನ್ನಾರಗಳನ್ನು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಪಕ್ಷಾತೀತವಾಗಿ ವಿರೋಧಿಸುವ ಇಚ್ಛಾಶಕ್ತಿ ಹೊಂದಿಲ್ಲ.
ಏತನ್ಮಧ್ಯೆˌ ದಮನಿತರಿಗೆ ಭೂಮಿˌ ಸಾಮಾಜಿಕ ಗೌರವˌ ರಾಜಕೀಯ ಸ್ಥಾನಮಾನˌ ಚುನಾವಣಾ ಸುಧಾರಣಾ ಕ್ರಮಗಳನ್ನು ನಿರಾಕರಿಸುತ್ತಿರುವಾಗ ತೊಂಬತ್ತರ ದಶಕದಲ್ಲಿ ಭಾರತದ ಆರ್ಥಿಕತೆ ಕುಸಿಯತೊಡಗಿತ್ತು. ಆಗ ಜಾಗತೀಕರಣ ಆರ್ಥಿಕ ಉದಾರೀಕರಣ ಗಳು ಭಾರತದ ನೆರವಿಗೆ ಬಂದದ್ದೇನೊ ನಿಜ. ಆದರೆ ಅದು ಮುಂದೊಂದು ದಿನ ಮೀಸಲಾತಿಯನ್ನು ಹಂತಹಂತವಾಗಿ ನುಂಗಿ ಹಾಕುವ ಖಾಸಗೀಕರಣಕ್ಕೆ ಮುನ್ನುಡಿ ಬರೆದದ್ದು ಮಾತ್ರ ಸುಳ್ಳಲ್ಲ. ಇದು ಭಾರತದಲ್ಲಿ ವಸಹಾತುಶಾಹಿ ವ್ಯವಸ್ಥೆಯ ಪುನಸ್ಥಾಪನೆಗೆ ಹಾದಿ ಮಾಡಿಕೊಟ್ಟಿತು. ಭ್ರಷ್ಟಾಚಾರ ಪೂರಿತ ಆಡಳಿತ ವ್ಯವಸ್ಥೆಯ ಬೆಳವಣಿಗೆಯು ಭಾರತದಲ್ಲಿ ಆರ್ಥಿಕˌ ಸಾಮಾಜಿಕ ಮತ್ತು ರಾಜಕೀಯ ದ್ರಷ್ಟಿಯಿಂದ ಉಳ್ಳವರು ಮತ್ತು ಬಡವರ ಮಧ್ಯ ಬಹುದೊಡ್ಡ ಕಂದಕವೊಂದನ್ನು ನಿರ್ಮಿಸಿತು.
ಇಂದು ಈ ಉದಾರೀಕರಣ ಖಾಸಗೀಕರಣˌ ಮತ್ತು ಜಾಗತೀಕರಣಗಳ ದುಷ್ಪರಿಣಾಮವು ದಲಿತ ದಮನಿತರ ಉದ್ಯೋಗಗಳಲ್ಲಿನ ಮೀಸಲಾತಿಯನ್ನು ಸಂಪೂರ್ಣವಾಗಿ ನುಂಗಿ ಹಾಕುತ್ತಿದೆ. ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮ ವಲಯವನ್ನು ಸಂಪೂರ್ಣವಾಗಿ ನಿಸ್ತೇಜಗೊಳಿಸಲಾಗುತ್ತಿದೆ. ಮುಂದೊಂದು ದಿನ ಭಾರತದ ಬಹುಜನರ ಭವಿಷ್ಯಕ್ಕೆ ಮಾರಕವಾಗಬಲ್ಲ ಈ ಜಾಗತೀಕರಣˌ ಉದಾರೀಕರಣ ಮತ್ತು ಖಾಸಗೀಕರಣ ಪ್ರಕ್ರೀಯೆಗಳ ಬಗ್ಗೆ ಅಂದು ದಲಿತ ಸಂಘಟನೆಗಳುˌ ಮೀಸಲು ಕ್ಷೇತ್ರದ ಫಲಾನುಭವಿ ಸಂಸದ/ಶಾಸಕ/ಜನಪ್ರತಿನಿಧಿಗಳು ಮತ್ತು ಸಾಮಾಜಿಕ ಚಳುವಳಿಯ ನೇತಾರುಗಳು ಸರಿಯಾಗಿ ಗ್ರಹಿಸಲಿಲ್ಲವೊˌ ಆಳವಾದ ನಿದ್ರೆಯಲ್ಲಿದ್ದರೊ ಅಥವಾ ಆಗಿನ ಈ ಘಟನೆಗಳ ಬಗ್ಗೆ ಅಸಡ್ಡೆ ಹೊಂದಿದ್ದರೊ ಒಂದು ತಿಳಿಯದಾಗಿದೆ. ಏತನ್ಮಧ್ಯೆ, ಮೀಸಲಾತಿಯನ್ನು ಪ್ರಾಯೋಗಿಕವಾಗಿ ನಾಶಪಡಿಸುವ ಪುರೋಹಿತಶಾಹಿಗಳ ಪಿತೂರಿಯನ್ನು ಮರೆಮಾಚಲು ಸಾಮಾಜಿಕ ವರ್ಗೀಕರಣದ ಬೆಂಕಿಯನ್ನು ಸಮಾಜದಲ್ಲಿ ಜೀವಂತವಾಗಿ ಹುಟ್ಚುಹಾಕಲಾಯಿತು. ಒಂದು ಕಡೆ ಮೀಸಲಾತಿಯನ್ನು ರಹಸ್ಯವಾಗಿ ನಾಶಮಾಡಲು ಮತ್ತು ಮತ್ತೊಂದೆಡೆ ಅಸ್ಪೃಶ್ಯರಲ್ಲಿ ರಾಜಕೀಯ ಜಾಗೃತಿ ಮತ್ತು ಏಕತೆಯ ಕೊರತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ದಲಿತರೊಳಗಣ ಒಳ ವರ್ಗೀಕರಣದ ಪರಿಕಲ್ಪನೆಯನ್ನು ಹುಟ್ಟಿಸಿ ಒಳಮೀಸಲಾತಿಯ ಒಡಕನ್ನು ಬಿತ್ತಲಾಯಿತು.
ಈ ಎಲ್ಲ ಪ್ರಕ್ರೀಯೆಗಳು ರಾಜಕೀಯ ಪ್ರೇರಿತವಾಗಿದ್ದವು ಎಂದು ಬೇರೆ ಹೇಳುವ ಅಗತ್ಯವಿಲ್ಲ. ಯಾವ ಶಕ್ತಿಗಳು ಇಡೀ ಮೀಸಲಾತಿಯನ್ನೇ ಕಿತ್ತೊಗೆಯುವ ಮಾತನಾಡುತ್ತಿದ್ದಾವೊ ಅದೇ ಶಕ್ತಿಗಳಿಗೆ ಒಳ ಮೀಸಲಾತಿಯ ಆಮಿಷ ಕ್ಕೆ ಬಲಿಯಾಗಿ ಕೆಲವು ದಲಿತ ವರ್ಗಗಳು ಬೆಂಬಲಿಸುತ್ತಿರುವುದು ಇನ್ನೂ ದುರ್ದೈವದ ಸಂಗತಿಯಾಗಿದೆ. ಕಾಲಾನುಕ್ರಮದಲ್ಲಿ ಪ್ರಜಾಪ್ರಭುತ್ವ ವಿರೋಧಿˌ ಸಂವಿಧಾನ ವಿರೋಧಿ ಮತ್ತು ಜೀವ ವಿರೋಧಿಗಳನ್ನು ದಲಿತ ದಮನಿತರು ತಮ್ಮ ಹಿತಾಸಕ್ತಿಯ ರಕ್ಷಕರು ಎಂದು ನಂಬುವಂತೆ ಮಾಡಲಾಯಿತು. ಆ ಕಾರಣದಿಂದ ದಲಿತ ಚಳುವಳಿ ದುರ್ಬಲಗೊಂಡು ಅವಕಾಶವಾದಿಗಳು ಅಧಿಕಾರ ರಾಜಕಾರಣದ ಅಂಗಳದಲ್ಲಿ ಹಲ್ಲುಗಿಂಜುತ್ತ ನಿಲ್ಲುವ ಮೂಲಕ ಮೀಸಲಾತಿಯ ಫಲಾನುಭವಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಪುರೋಗಾಮಿ ರಾಜಕೀಯ ಶಕ್ತಿಗಳು ಸೊಕ್ಕಿ ನಿಲ್ಲಲು ಕಾರಣೀಭೂತವಾಯಿತು. ಒಂದು ಕಡೆ ದಲಿತ ಸಮುದಾಯಗಳು ಒಳ ಮೀಸಲಾತಿಯ ಕಾರಣದಿಂದˌ ಮತ್ತೊಂದು ಕಡೆ ಶೂದ್ರಾತಿಶೂದ್ರ ಸಮುದಾಯಗಳು ಬೇರೆ ಬೇರೆ ಕಾರಣಗಳಿಂದ ಜಾತ್ಯಾತೀತತೆˌ ಬಹುಸಂಸ್ಕ್ರತಿˌ ಸಂವಿಧಾನ ಮತ್ತು ಜನತಂತ್ರ ವಿರೋಧಿ ರಾಜಕೀಯ ಶಕ್ತಿಗಳೊಡನೆ ಕೈಜೋಡಿಸುವ ಮೂಲಕ ಭಾರತೀಯ ಜಾತ್ಯಾತೀತ ಶಕ್ತಿಯ ಧ್ವನಿಯನ್ನು ಕ್ಷೀಣಗೊಳಿಸಿವೆ.
ಇನ್ನು ಅಲ್ಪ ಸಂಖ್ಯಾತ ಸಮುದಾಯವೂ ಕೂಡ ಸನಾತನ ಮತಾಂಧರಿಂದ ಪರೋಕ್ಷ ಬೆಂಬಲ ಗಳಿಸಿರುವ ಮತಾಂಧ ಓವೈಸಿಯನ್ನು ಬೆಂಬಲಿಸುವ ಮೂಲಕ ಜಾತ್ಯಾತೀತ ಮತವಿಭನೆಗೆ ದಾರಿ ಮಾಡುವ ಮೂಲಕ ಫ್ಯಾಸಿಷ್ಟ ಶಕ್ತಿಗಳು ಸೊಕ್ಕುವಂತೆ ಮಾಡಿದೆ. ದಲಿತರ ಹೆಸರಿನಲ್ಲಿ ಹುಟ್ಟಿಕೊಂಡಿರುವ ರಾಜಕೀಯ ಪಕ್ಷಗಳಂತೂ ಒಂದಲ್ಲ ಒಂದು ಕಾರಣದಿಂದ ಫ್ಯಾಶಿಷ್ಟರೊಡನೆ ಕೈಜೋಡಿಸಿವೆ. ದೇಶದಲ್ಲಿ ವ್ಯವಸ್ಥಿತವಾದಿ ಜಾತ್ಯಾತೀತತೆˌ ಸೌಹಾರ್ದತೆˌ ಬಹು ಸಂಸ್ಕ್ರತಿˌ ಜನತಂತ್ರ ಮತ್ತು ಸಂವಿಧಾನ ನಾಶಗೊಳಿಸುವ ಪ್ರಕ್ರೀಯೆಗಳು ವೇಗ ಪಡೆಯುತ್ತಿದ್ದರೂ ಕೂಡ ಅದನ್ನು ಪ್ರಶ್ನಿಸುವˌ ಪ್ರತಿಭಟಿಸುವˌ ಚಳುವಳಿ ಹಮ್ಮಿಕೊಳ್ಳುವ ಸಾಹಸ ಮಾಡದೆ ಮೌನ ತಾಳಿರುವುದು ಫ್ಯಾಶಿಷ್ಟರ ಹುಮ್ಮಸ್ಸನ್ನು ನೂರ್ಮಡಿಗೊಳಿಸಿದೆ. ದಲಿತ ದಮನಿತರಲ್ಲಿ ಹೆಚ್ಚುತ್ತಿರುವ ಒಳನೋಟದ ಕೊರತೆಯೇ ಇಂದು ಸನಾತನಿ ಬ್ರಾಹ್ಮಣ್ಯ ವ್ಯವಸ್ಥೆ ಬಲಗೊಳ್ಳುವುದಕ್ಕೆ ಕಾರಣವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
"ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ" ಎಂಬ ಡಾ. ಬಾಬಾಸಾಹೇಬ್ ಅವರ ಎಚ್ಚರಿಕೆಯ ಮಾತು ಅಕ್ಷರಶಃ ಸತ್ಯವಾಗುವ ದುರಂತ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ.
(ಲೇಖಕರು ಸಮಾನತಾವಾದಿ ಹಾಗೂ ಪ್ರಗತಿಪರ ಚಿಂತಕರು )
_____________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com