ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ, ನಾವೆಲ್ಲರೂ ಹಿಂದೂಗಳೇ! ಕಾಂಗ್ರೆಸ್ ಈ ದೇಶವನ್ನು ಕಟ್ಟಿದ ಪಕ್ಷ : ಉಡುಪಿಯಲ್ಲಿ ಡಿ.ಕೆ ಶಿವಕುಮಾರ್
ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ, ನಾವೆಲ್ಲರೂ ಹಿಂದೂಗಳೇ! ಕಾಂಗ್ರೆಸ್ ಈ ದೇಶವನ್ನು ಕಟ್ಟಿದ ಪಕ್ಷ : ಉಡುಪಿಯಲ್ಲಿ ಡಿ.ಕೆ ಶಿವಕುಮಾರ್
Advertisement
ಕಾಂಗ್ರೆಸ್ ಪಕ್ಷಕ್ಕೆ 135ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಹುಟ್ಟಿಕೊಂಡದ್ದೆ ಸ್ವಾತಂತ್ರ್ಯ ಚಳವಳಿಗಾಗಿ. 300ವರ್ಷಗಳ ಕಾಲ ಈ ದೇಶವನ್ನು ಸರ್ವಾಧಿಕಾರಿಗಳಂತೆ ಆಳಿದ ಬ್ರಿಟೀಷರನ್ನು ರಾತ್ರೋರಾತ್ರಿ ಓಡಿಸಿದ ಪಕ್ಷ ಕಾಂಗ್ರೆಸ್ ಆಗಿದೆ. ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ. ನಾವು ಕೂಡಾ ಹಿಂದೂಗಳೇ. ನಾನು ನಿನ್ನೆ ಕುಂದಾಪುರ ತಾಲೂಕಿನ ಕಮಲಶಿಲೆಗೆ ತೆರಳಿ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದು ಬಂದೆ. ಇಂದು ಬೆಳಿಗ್ಗೆ ಕೊಲ್ಲೂರು ಮುಕಾಂಬಿಕೆಯ ದರ್ಶನ ಮಾಡಿ ಆ ನಂತರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ದರ್ಶನ ಮಾಡಿ ಪ್ರಸಾದ ಪಡೆದು ನೇರವಾಗಿ ಉಡುಪಿಗೆ ಬಂದಿದ್ದೇನೆ. ಕಾಂಗ್ರೆಸ್ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟವರು. ಕಾಂಗ್ರೆಸ್ ಈ ದೇಶದ ಅಭಿವೃದ್ಧಿ ಮಾಡಿದೆ. ಬಿಜೆಪಿ ಎಮೋಷನಲ್ ರಾಜಕಾರಣ ಮಾಡುತ್ತಿದೆ. ಅವರು ಕೇವಲ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈ ರಾಜಕಾರಣ ಧೀರ್ಘವಾಗಿ ನಡೆಯಲಾರದು. ನಾವು ಕಾಂಗ್ರೆಸಿಗರು ದರಿಸುವ ಶಾಲು ರಾಷ್ಟ್ರಧ್ವಜದ ಬಣ್ಣವಾದ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನೊಳಗೊಂಡ ಶಾಲು. ಈ ಬಣ್ಣಗಳು ತ್ಯಾಗ, ಬಲಿದಾನ, ಐಕ್ಯತೆಯ ಪ್ರತೀಕ. ಇವುಗಳು ಶಾಂತಿ, ಸೌಹಾರ್ಧತೆಯ ದ್ಯೋತಕ. ಈ ಶಾಲು ಧರಿಸಲು ನಮಗೆ ಹೆಮ್ಮೆ ಎನ್ನಿಸುತ್ತದೆ. ಇಂತಹ ಶಾಲನ್ನು ಕಾಂಗ್ರೆಸಿಗರಲ್ಲದವರಿಗೆ ಧರಿಸುವ ಭಾಗ್ಯ ಇರಲಾರದು. ಕೇಂದ್ರದ ಬಿಜೆಪಿ ಸರ್ಕಾರ ರಾತ್ರೋರಾತ್ರಿ ಮಾಡಿದ ಲಾಕ್‌ಡೌನ್ ಘೋಷಣೆಯ ಫಲವಾಗಿ ದೇಶಾದ್ಯಂತ ಲಕ್ಷಾಂತರ ಜನ ವಲಸೆ ಕಾರ್ಮಿಕರು ಅತಂತ್ರರಾದರು. ಅದರಲ್ಲಿ ಎಳೆ ಮಕ್ಕಳು, ಗರ್ಬಿಣಿಯರು, ವೃದ್ಧರು, ಕಾಯಿಲೆಪೀಡಿತರು ಕೂಡಾ ಇದ್ದರು. ಅಂತಹ ಅಸಹಾಯಕರ ಅನ್ನ, ನೀರನ್ನು ಕಸಿದುಕೊಂಡ ಶಾಪ ಬಿಜೆಪಿಗೆ ತಟ್ಟದೆ ಇರಲಾರದು. ಅಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಆ ವಲಸಿಗರಿಗೆ ಶಕ್ತಿಮೀರಿ ಸಹಾಯ ಮಾಡಿದೆ. ಆಹಾರದ ಕಿಟ್‌ಗಳನ್ನು ಪೂರೈಸಿದೆ. ಊರಿಗೆ ತೆರಳಲು ವಾಹನಗಳ ವ್ಯವಸ್ಥೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಇಂದು ಉಡುಪಿಯ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
'ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಿಜೆಪಿ ಸರ್ಕಾರವು ಕ್ಷೌರಿಕರಿಗೆ, ರಿಕ್ಷಾ ಚಾಲಕರಿಗೆ, ಕಮ್ಮಾರರಿಗೆ, ಚಮ್ಮಾರರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಮತ್ತಿತರರಿಗೆ ಮೊದಲಿಗೆ ತಲಾ ಹತ್ತು ಸಾವಿರ ರೂ. ಸಹಾಯಧನ ಘೋಷಿಸಿತು. ಆ ನಂತರ ಅದನ್ನು ಐದು ಸಾವಿರಕ್ಕೆ ಇಳಿಸಿತು. ಆದರೆ ಈ ತನಕವೂ ಯಾರಿಗೂ ಅದು ತಲುಪಿಲ್ಲ. ಅದು ಕೇವಲ ಘೋಷಣೆಯಾಗಿಯೇ ಉಳಿಯಿತು. ಆ ನಂತರ ಕೇಂದ್ರ ಸರ್ಕಾರ 20ಸಾವಿರ ಕೋಟಿ ಕೊರೊನಾ ಫಂಡ್ ಘೋಷಣೆ ಮಾಡಿತು. ಅದರಲ್ಲಿಯೂ ಈ ತನಕ ಧೀನ ದಲಿತರಿಗೆ ಯಾವುದೇ ಸಹಾಯ ಆಗಿಲ್ಲ. ಅದಕ್ಕೆ ಬದಲಾಗಿ ದೊಡ್ಡದೊಡ್ಡ ಉಧ್ಯಮಿಗಳಿಗೆ ಮತ್ತಷ್ಟು ಸಾಲ ನೀಡಲಾಗುತ್ತಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸಗಳಾಗಿವೆ ಎಂದವರು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟುವ ನಿಟ್ಟಿನಲ್ಲಿ ನಾನು ರಾಜ್ಯಾದ್ಯಂತ ಇದೀಗ ಪ್ರವಾಸ ಮಾಡುತ್ತಿದ್ದೇನೆ. ಬೂತ್ ಮಟ್ಟದಲ್ಲಿ ಅಷ್ಟೂ ಘಟಕಗಳನ್ನು ಪುನರ್ರಚಿಸಲು ಕೆಪಿಸಿಸಿ ವತಿಯಿಂದ ಜಿಲ್ಲಾ ಹಾಗೂ ಬ್ಲಾಕ್ ಮಟ್ಟಕ್ಕೆ ಆದೇಶ ನೀಡಲಾಗಿದೆ. ಕಾಂಗ್ರೆಸ್ ಉಳಿದರೆ ಈ ದೇಶದ ಸೌಹಾರ್ಧತೆ ಉಳಿಯುತ್ತದೆ. ಸಾಮಾಜಿಕ ನ್ಯಾಯ ಉಳಿಯುತ್ತದೆ. ಸ್ವಾತಂತ್ರ್ಯ ಉಳಿಯುತ್ತದೆ. ಆ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು ತಮ್ಮೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಮರೆತು ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಲು ಸಿದ್ದರಾಗಬೇಕು. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾವುದೇ ಬಣರಾಜಕಾರಣಕ್ಕೆ ಬೆಂಬಲ ನೀಡಲಾರೆ. ಚಾಡಿ ಮಾತುಗಳನ್ನು ನನ್ನ ವರೆಗೆ ಯಾರೂ ತರಬೇಡಿ. ನಿಮ್ಮ ವ್ಯಾಪ್ತಿಯಲ್ಲಿ ನೀವು ಪಕ್ಷ ಸಂಘಟನೆಯ ಕುರಿತು ಮಾಡಿರುವ ಕೆಲಸದ ವಿವರಗಳನ್ನು ಮಾತ್ರವೇ ನನಗೆ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ. ಕಾಂಗ್ರೆಸ್ ನಲ್ಲಿ ನಾಳೆ ಯಾರೇ ಇಲ್ಲದಿದ್ದರೂ ಕಾಂಗ್ರೆಸ್ ಅದೇ ರೀತಿಯಾಗಿ ಇರುತ್ತದೆ. ನಮ್ಮ ಸ್ಥಾನದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತರು ಇರುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಕೂಡಾ ನಾಯಕನಾಗುವ ಅರ್ಹತೆ ಇದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಕಾಂಗ್ರೆಸ್ ನಾಯಕರಾದ ತರುಣ್ ಗೊಗೊಯಿ, ಅಹಮದ್ ಪಟೇಲ್ ರವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆ ನಂತರ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಯುವಕರ ಸೇರ್ಪಡೆ ಕಾರ್ಯಕ್ರಮ ನಡೆಯಿತು ಹಾಗೂ ದಿವಂಗತ ಪ್ರಧಾನಿ ಇಂದಿರಾ ಗಾಂದಿಯವರ 103ನೆ ಜನ್ಮ ದಿನಾಚರಣೆಯ ಅಂಗವಾಗಿ ಬಡ ವಿಧ್ಯಾರ್ಥಿಗಳಿಗೆ ಸೋಲಾರ್ ದೀಪ ವಿತರಣೆ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಗೋಪಾಲ ಪೂಜಾರಿ, ಸಭಾಪತಿ, ಐವನ್ ಡಿ'ಸೋಜ,ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎಂ.ಎ ಗಫೂರ್,ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಮಿಥುನ್ ರೈ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ರಾಜ್ ಶೇಖರ್ ಕೋಟ್ಯಾನ್, ಗೀತಾ ವಾಗ್ಲೆ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಅಣ್ಣಯ್ಯ ಶೇರೆಗಾರ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಎಂ.ಎ ಗಫೂರ್, ಪಿ.ವಿ ಮೋಹನ್, ಮಂಜುನಾಥ ಗೌಡ, ಸರಳಾ ಕಾಂಚನ್, ರಾಜು ಪೂಜಾರಿ, ಬಾಲಕೃಷ್ಣ ಪೂಜಾರಿ, ಎನ್‌ಎಸ್ ಯುಐ ಸೌರಭ್ ಬಲ್ಲಾಳ್, ನವೀನ್ ಚಂದ್ರ ಶೆಟ್ಟಿ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್, ದಿನೇಶ್ ಪುತ್ರನ್, ಪ್ರಕಾಶ್ ಚಂದ್ರ ಶೆಟ್ಟಿ, ವರೋನಿಕಾ ಕರ್ನಾಲಿಯೋ, ನಳಿನಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಣ್ಣಯ್ಯ ಶೇರೆಗಾರ್ ವಂದಿಸಿದರು.
_________________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com