ʻಹಿಗ್ಗು- ಅರಿವಿನ ಮಾಲೆʼ ದತ್ತಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರ 'ಕುಂದಾಪ್ರ ಕನ್ನಡ ನಿಘಂಟು' ಆಯ್ಕೆ
ʻಹಿಗ್ಗು- ಅರಿವಿನ ಮಾಲೆʼ ದತ್ತಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರ 'ಕುಂದಾಪ್ರ ಕನ್ನಡ ನಿಘಂಟು' ಆಯ್ಕೆ
Advertisement
ಉಡುಪಿ ಜಿಲ್ಲೆ ಕುಂದಾಪುರ ಸಮೀಪದ 'ತಲ್ಲೂರು ಫ್ಯಾಮಿಲಿ ಟ್ರಸ್ಟ್' ನೀಡುವ ʻಹಿಗ್ಗು- ಅರಿವಿನ ಮಾಲೆʼ ಪುಸ್ತಕ ದತ್ತಿಗೆ ದೇಶದ ಪ್ರಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರ ʻಕುಂದಾಪ್ರ ಕನ್ನಡ ನಿಘಂಟುʼ ಆಯ್ಕೆಯಾಗಿದೆ ಎಂದು ಸುರೇಶ್ ತಲ್ಲೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯ ನೆಲ, ಜಲ, ಪರಿಸರ ಮತ್ತು ಬದುಕನ್ನು ಆರೋಗ್ಯಪೂರ್ಣವಾದ ಮನಸ್ಸುಗಳೊಂದಿಗೆ ಕಟ್ಟುವ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪುಟ್ಟ ಪುಟ್ಟ ಪ್ರಯತ್ನಗಳ ಸರಣಿಯೇ ʻಕರಾವಳಿ ಕಟ್ಟುʼ. ಈ ಚಳುವಳಿಯ ಭಾಗವಾಗಿ ʻತಲ್ಲೂರು ನುಡಿಮಾಲೆʼ ದತ್ತಿನಿಧಿ ಉಪನ್ಯಾಸಗಳು ನಡೆದಿವೆ. ಮುಂದುವರಿದು ʻಹಿಗ್ಗು- ಅರಿವಿನ ಮಾಲೆʼ ಯೋಜನೆಯನ್ನು ರೂಪಿಸಲಾಗಿದೆ. ೨ ಲಕ್ಷ ರೂ.ಗಳ ಈ ಪುಸ್ತಕ ಪ್ರಕಟಣೆ ದತ್ತಿಯನ್ನು ಕರಾವಳಿಯ ಅನನ್ಯ ಅಪರೂಪದ ಮತ್ತು ಮೌಲಿಕವಾದ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಿರಿಸಲಾಗಿದೆ ಎಂದರು. ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರು ಎರಡು ದಶಕಗಳಿಂದ ಶ್ರಮಿಸಿ, ಸಂಗ್ರಹಿಸಿ, ಸಂಪಾದಿಸಿರುವ ʻಕುಂದಾಪ್ರ ಕನ್ನಡ ನಿಘಂಟುʼ ಸುಮಾರು 10,000 ಮಿಕ್ಕಿ ಕುಂದಾಪ್ರ ಕನ್ನಡ ಪದಗಳ ಮತ್ತು 1700ರಷ್ಟು ಕುಂದಾಪ್ರ ಕನ್ನಡದ ನುಡಿಗಟ್ಟುಗಳ ಅರ್ಥ ವಿವರಣೆ ನೀಡುತ್ತದೆ. ಕುಂದಾಪ್ರ ಕನ್ನಡದ ರೀತಿ, ರಿವಾಜು, ಕಟ್ಟುಪಾಡು, ಆಚಾರ ವಿಚಾರಗಳನ್ನು ಒಳಗೊಂಡಿರುದೆ. ಒಂದು ವಿವಿ ಮಾಡಬೇಕಾದ ಮಹತ್ವದ ಕೆಲಸವನ್ನು ಪಂಜು ಗಂಗೊಳ್ಳಿ ಮಾಡಿದ್ದಾರೆ. ಇವರ ನಿಘಂಟು ಮುಂದಿನ ವರ್ಷದ ಆದಿಯಲ್ಲಿ ಪ್ರಕಟಗೊಂಡು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
'ಹಿಗ್ಗು ಅರಿವಿನ ಮಾಲೆ' – ಮೊದಲ ಗೌರವ ಪಂಜು ಗಂಗೊಳ್ಳಿ ಅವರಿಗೆ: ರಾಜಾರಾಂ ತಲ್ಲೂರು
'ಇದೊಂದು ವಿಚಿತ್ರ ಸಂತಸದ ಸುದ್ದಿ.
ಯಾಕೆಂದರೆ, ನಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಗೆ ಇಂತಹದೊಂದು ಅವಕಾಶ ದೊರಕಿದೆ. ಅದೇ ವೇಳೆಗೆ, ಯಾವುದೋ ಯೂನಿವರ್ಸಿಟಿ ಕೈಚಾಚಿ ಪಡೆದು ಮುದ್ರಿಸಿ ಸಾರ್ವಜನಿಕರಿಗೆ ಒದಗಿಸಬೇಕಾಗಿದ್ದ ಮಹತ್ವದ ಕೆಲಸ ಇದು. ಅವರು ಮಾಡಿಲ್ಲ ಎಂಬ ಕಾರಣಕ್ಕಾಗಿ ಈ ಗೌರವ ನಮಗೆ ದೊರೆತಿದೆ' ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮುಖ್ಯಸ್ಥರಲ್ಲಿ ಒಬ್ಬರಾದ ರಾಜಾರಾಂ ತಲ್ಲೂರು ಹೇಳಿದ್ದಾರೆ .
'ಅಸಲಿಗೆ ವಿಷಯ ಏನೆಂದರೆ, ಗೆಳೆಯ ಪಂಜು ಗಂಗೊಳ್ಳಿ ( Panju Ganguli) ಅವರು ಕಳೆದ ಇಪ್ಪತ್ತು ವರ್ಷಗಳಿಂದ ತಮ್ಮ ಕಾರ್ಟೂನಿಸ್ಟ್ ವೃತ್ತಿಯ ಜೊತೆಗೇ ತಪಸ್ಸಿನೋಪಾದಿಯಲ್ಲಿ ಕೆಲಸ ಮಾಡಿ ಸಂಗ್ರಹಿಸಿದ 10,000ಕ್ಕೂ ಮಿಕ್ಕಿ ಕುಂದಗನ್ನಡ ಶಬ್ದಗಳ ಅರ್ಥ ವಿವರಣೆಗಳು ಮತ್ತು 1700ರಷ್ಟು ನುಡಿಗಟ್ಟುಗಳ ಸಂಗ್ರಹವನ್ನು ಕಳೆದ ಏಳೆಂಟು ವರ್ಷಗಳಿಂದ ಪ್ರಕಟಿಸಲು ಶ್ರಮಪಡುತ್ತಿದ್ದರು. ಇದನ್ನು ನಾವೇ ಏಕೆ ಪ್ರಕಟಿಸಬಾರದು ಎಂಬ ಯೋಚನೆ ನಮ್ಮ ಟ್ರಸ್ಟಿಗೆ ಬಂದಾಕ್ಷಣ ಅದನ್ನು ಪಂಜು ಅವರ ಗಮನಕ್ಕೆ ತಂದಾಗ, ಅವರು ಬಹಳ ಸಂತೋಷದಿಂದ ಇದಕ್ಕೆ ಒಪ್ಪಿದ್ದಾರೆ ಮತ್ತು ಈ ನೆಪದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ “ಹಿಗ್ಗು-ಅರಿವಿನ ಮಾಲೆ” ಪುಸ್ತಕ ಪ್ರಕಟಣಾ ದತ್ತಿ ಸ್ಥಾಪನೆಗೂ ಪ್ರೇರಣೆ ಆಗಿದ್ದಾರೆ. ಈ ದತ್ತಿಯ 2,00,000 ರೂಗಳನ್ನು ಟ್ರಸ್ಟ್ ಬಹಳ ಹೆಮ್ಮೆಯಿಂದ “ಕುಂದಾಪ್ರ ಕನ್ನಡ ನಿಘಂಟು” ಪ್ರಕಟಣೆಗೆ ಬಳಸಲಿದೆ. ಟ್ರಸ್ಟಿನ "ಕರಾವಳಿ ಕಟ್ಟು" ಚಟುವಟಿಕೆಗಳ ಭಾಗವಾಗಿ ಈ ಪುಸ್ತಕ ಪ್ರಕಟಗೊಳ್ಳಲಿದೆ' ಎಂದವರು ಹೇಳಿದ್ದಾರೆ.
'ಸುಮಾರು 700-800 ಪುಟಗಳ ಈ ನಿಘಂಟು ಜನವರಿ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ. ನಮ್ಮದೇ ಪ್ರೊಡಿಜಿ ಪ್ರಕಾಶನ ಪುಸ್ತಕವನ್ನು ಪ್ರಕಟಿಸಲಿದ್ದು, ಮುದ್ರಣ ಪೂರ್ವ ಖರೀದಿಗೂ ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯವಾಗಲಿದೆ. ವಿವರಗಳನ್ನು ಶೀಘ್ರವೇ ಹಂಚಿಕೊಳ್ಳುತ್ತೇನೆ. ಕುಂದಗನ್ನಡಕ್ಕೆ ಸಂಬಂಧಿಸಿ ಇದೊಂದು ಮಹತ್ವದ ಪ್ರಕಟಣೆ ಆಗಲಿದೆ, ಅದರ ಪ್ರಕಾಶನದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಪಾತ್ರ ಇರುತ್ತದೆ ಎಂಬುದು ಮತ್ತು ಅದು ಗೆಳೆಯ ಪಂಜು ಅವರ 20ವರ್ಷಗಳ ತಪಸ್ಸಿನ ಫಲ ಎಂಬುದು ಈ ಸಂತಸಕ್ಕೆ ಮತ್ತಷ್ಟು ಮೆರುಗು ಕೊಡಲಿದೆ' ಎಂದವರು ತಿಳಿಸಿದ್ದಾರೆ.
ಈ ಹುಚ್ಚಿನಲ್ಲಿ 20 ವರ್ಷ ಹೋದದ್ದೇ ಗೊತ್ತಾಗಲಿಲ್ಲ: ಪಂಜು ಗಂಗೊಳ್ಳಿ
ಈ ಹುಚ್ಚಿನಲ್ಲಿ 20 ವರ್ಷ ಹೋದದ್ದೇ ಗೊತ್ತಾಗಲಿಲ್ಲ. ಎಲ್ಲಾ ಹುಚ್ಚಿನಂತೆ ಇದು ಕೂಡಾ ಚಿಕ್ಕದಾಗಿ ಶುರುವಾಗಿತ್ತು. ಸಿ ಏ ಪೂಜಾರಿ ಮತ್ತು ರಾಮಚಂದ್ರ ಉಪ್ಪುಂದ ಇಬ್ಬರು ಸ್ನೇಹಿತರು ಸಾಥ್ ನೀಡಿದ ಕಾರಣ ದೊಡ್ಡದಾಗಿ ಬೆಳೆಯಿತು. 2001 ರಿಂದ 2015 ರ ತನಕ ನಡೆಸಿದ ಸಂಗ್ರಹ ಕಾರ್ಯದಲ್ಲಿ 10000 ಕ್ಕೂ ಹೆಚ್ಚು ಶಬ್ದಗಳು, 1700 ನುಡಿಗಟ್ಟುಗಳು, ನೂರಾರು ಒಗಟುಗಳು ಮತ್ತು 1000 ಕ್ಕೂ ಮಿಕ್ಕಿ ಹಾಡುಗಳನ್ನು ಕಲೆ ಹಾಕುವುದರಲ್ಲಿ ಸಫಲರಾದೆವು. ನಂತರದ ಕೆಲವು ವರ್ಷಗಳು ಇವುಗಳನ್ನು ಪರಿಷ್ಕರಿಸುವುದರಲ್ಲಿ ಮತ್ತು ಪ್ರಕಾಶಕರ ಹುಡುಕಾಟದಲ್ಲಿ ಹೋದವು' ಎಂದು ಪಂಜು ಗಂಗೊಳ್ಳಿ ಹೇಳಿದ್ದಾರೆ.
'ಈಗ ಸ್ನೇಹಿತರಾದ ರಾಜಾರಾಮ್ ತಲ್ಲೂರರು ಇದನ್ನು ತಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ 'ಕರಾವಳಿ ಕಟ್ಟು' ಅಭಿಯಾನದ 'ಹಿಗ್ಗು-ಅರಿವಿನ ಮಾಲೆ' ಪುಸ್ತಕ ದತ್ತಿಗೆ ಆಯ್ಕೆ ಮಾಡುವ ಮೂಲಕ ಈ ಹುಚ್ಚಿಗೊಂದು ಮುಂಡಾಸು ಕಟ್ಟಿದ್ದಾರೆ. ಮತ್ತು, ಹೊಸ ವರ್ಷದ ಪ್ರಾರಂಭದಲ್ಲಿ ಇದನ್ನು ಪ್ರಕಟಿಸುವ ಮೂಲಕ ಈ ಹುಚ್ಚಿನಿಂದ ಬಿಡುಗಡೆಯನ್ನೂ ಕೊಡಿಸುತ್ತಿದ್ದಾರೆ. ಇದೊಂದು ಬಹುದೊಡ್ಡ ಗೌರವ ಮಾತ್ರವಲ್ಲ, ಬಹುದೊಡ್ಡ ಸಮಾಧಾನವೂ ಹೌದು. ಏಕೆಂದರೆ, ಅವರ ಮೂಲಕ ಈ ನಿಘಂಟು ಯಾರ ಕೈಯಲ್ಲಿರಬೇಕೋ ಅವರ ಕೈ ತಲುಪಲು ಸಾಧ್ಯವಾಗಲಿದೆ' ಎಂದವರು ಹೇಳಿದರು.
'700 ಕ್ಕೂ ಮಿಕ್ಕಿ ಪುಟಗಳ 'ಕುಂದಾಪ್ರ ಕನ್ನಡ ನಿಘಂಟು' ಕೇವಲ ಶಬ್ದ ಮತ್ತು ನುಡಿಗಟ್ಟುಗಳ ಸಂಗ್ರಹವಲ್ಲ. ಇದು ಕುಂದಾಪ್ರಕನ್ನಡ ಜನಜೀವನದ ಆಗಿನ ಮತ್ತು ಈಗಿನ ರೀತಿ ರಿವಾಜು, ಕಟ್ಟುಪಾಡು, ಆಚಾರವಿಚಾರ, ನಂಬಿಕೆ, ಸಂಪ್ರದಾಯ ಮೊದಲಾದವುಗಳನ್ನೊಳಗೊಂಡ ಒಂದು ಸಾಂಸ್ಕೃತಿಕ ನಿಘಂಟು. ಇದರ ಮುಂದಿನ ಭಾಗವಾಗಿ 'ಕುಂದಾಪ್ರ ಕನ್ನಡ ಹಾಡು ಗಳು' ತಯಾರಿ ಹಂತದಲ್ಲಿದೆ' ಎಂದು ಪಂಜು ಗಂಗೊಳ್ಳಿಯವರು ವಿವರಿಸಿದರು.
___________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com