ಪಕ್ಷದ ತತ್ವ- ಸಿದ್ದಾಂತಗಳ ಕುರಿತು, ಬಿಜೆಪಿಯ ಜನವಿರೋಧಿ ನೀತಿಗಳ ಕುರಿತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಅರಿವು ಮೂಡಿಸುವ ಹಾಗೂ ಅವರುಗಳಲ್ಲಿ ಕಾಂಗ್ರೆಸ್ ಪಕ್ಷದ ಕುರಿತು ಸೈದ್ಧಾಂತಿಕ ಸ್ಪಷ್ಟತೆ ಹಾಗೂ ಬದ್ಧತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಜನಪರ ಸಿದ್ದಾಂತ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾಲಕ್ಕೂ ಅಳಿವು ಎಂಬುವುದೇ ಇಲ್ಲ. ಆ ನಿಟ್ಟಿನಲ್ಲಿ ತರಬೇತಿ ನೀಡಿ ಪಕ್ಷ ಕಟ್ಟಿದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಪಕ್ಷವನ್ನು ಬೂತ್ ಮಟ್ಟದಿಂದ ಸದೃಢಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ಅವರು ಶನಿವಾರ ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಹಾಗೂ ನೆಹರೂ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಚಳವಳಿಗಾಗಿ ಹುಟ್ಟಿಕೊಂಡ ಕಾಂಗ್ರೆಸ್ ಸ್ವಾತಂತ್ರ್ಯಾ ನಂತರ ಕಾಶ್ಮೀರ ದಿಂದ ಕನ್ಯಾಕುಮಾರಿಯ ತನಕದ ಈಗಿನ ಭಾರತವನ್ನು ಕಟ್ಟಿದ ಪಕ್ಷವಾಗಿದೆ. ಸ್ವಾತಂತ್ರ್ಯ ಸಿಗುವ ವೇಳೆಗೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದ ದೇಶದ ಆರ್ಥಿಕತೆಯನ್ನು ದೇಶದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ ತೆರೆಯುವ ಮೂಲಕ, ಸರ್ಕಾರಿ ಕಾರ್ಖಾನೆಗಳನ್ನು ಆರಂಬಿಸಿ ಉದ್ಯೋಗ ನೀಡುವ ಮೂಲಕ ಕೇವಲ ಅರವತ್ತು ವರ್ಷಗಳಲ್ಲಿ ವಿಶ್ವದ ಮೂರನೆಯ ಅತಿದೊಡ್ಡ ಆರ್ಥಿಕತೆಯಾಗಿ ರೂಪಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ದೇಶದ ಅತ್ಯಂತ ಹಿರಿಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಮುಂದೆ ಸಹಜವಾಗಿಯೇ ಹಲವಾರು ಸವಾಲುಗಳಿವೆ ಮತ್ತು ಅಂತಹ ಸವಾಲುಗಳನ್ನು ಎದುರಿಸುವ ಶಕ್ತಿ ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಇದ್ದೇ ಇದೆ. ಅದರ ಮುಂದುವರಿದ ಭಾಗವಾಗಿ ಇದೀಗ ನಾವು ಪಕ್ಷವನ್ನು ಕೇಡರ್ ಆದರಿತ ಪಕ್ಷವಾಗಿ ಕಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅಭಿಯಾನ ಕೈಗೊಂಡಿದ್ದೇವೆ. ಕಾಂಗ್ರೆಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಂಡಲ್ಲಿ ಪಕ್ಷ ಮತ್ತೆ ಮೊದಲಿನ ವೈಭವ ಪಡೆಯುವುದು ಶತಸಿದ್ದ ಎಂದವರು ಹೇಳಿದರು.
ಗುಜರಾತ್ ಮಾದರಿ ಆಡಳಿತ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ಕಾಂಗ್ರೆಸ್ ಕಳೆದ ಅರವತ್ತು ವರ್ಷಗಳಲ್ಲಿ ತನ್ನ ದೂರಾಲೋಚನೆಯ ಚಿಂತನೆಗಳಿಂದ ನಿರ್ಮಿಸಿದ ದೇಶದ ಸರ್ಕಾರಿ ಸಂಸ್ಥೆಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದೆ. ಸ್ವಾಸ್ಥ್ಯವನ್ನು ಇನ್ನಿಲ್ಲದಂತೆ ಕೆಡಿಸುತ್ತಿದೆ. ಅಂದಿನ ಕಾಂಗ್ರೆಸ್ ಸಂಸದರ ಅವಿರತ ಶ್ರಮದಿಂದ 1954ರಲ್ಲಿ ದೇಶದ ಪ್ರಥಮ ಪ್ರಧಾನಿ ನೆಹರೂ ರವರು ಚಾಲನೆ ನೀಡಿದ್ದ ಮಂಗಳೂರು ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿಯವರು ತನ್ನ ಉದ್ಯಮಿ ಮಿತ್ರರಾದ ಅದಾನಿಯವರಿಗೆ ಮಾರಾಟ ಮಾಡಿದ್ದಾರೆ. ಆ ವಿಮಾನ ನಿಲ್ದಾಣವನ್ನು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಲು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಆಸ್ಕರ್ ಫರ್ನಾಂಡೀಸ್ ಮತ್ತು ಜನಾರ್ದನ ಪೂಜಾರಿಯವರು ಅವಿರತ ಶ್ರಮ ವಹಿಸಿದ್ದರು. ಅವಿಭಜಿತ ದ.ಕ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದೆ. ಅಂತಹ ಸಾಧನೆಗೆ ಹಿಂದೆ ಈ ದೇಶ ಆಳಿದ ಕಾಂಗ್ರೆಸ್ ಪಕ್ಷ ಸಂಪೂರ್ಣವಾದ ಸಹಕಾರ ನೀಡಿತ್ತು. ಆದರಿಂದು ಪ್ರಧಾನಿ ಮೋದಿಯವರು ನಷ್ಟದಲ್ಲಿರುವ ತನ್ನ ತವರು ರಾಜ್ಯದ ಗುಜರಾತಿ ಬ್ಯಾಂಕ್ ಗಳನ್ನು ಉಳಿಸಲು ನಮ್ಮ ಜಿಲ್ಲೆಯ ಬ್ಯಾಂಕುಗಳನ್ನು ಬಲಿ ಕೊಡುತ್ತಿದ್ದಾರೆ. ಆದರಿಂದು ಇಂದಿನ ಸಂಸದರಾದ ನಳಿನ್ ಕಟೀಲ್ ಅಥವಾ ಶೋಭಾ ಕರೆಂದ್ಲಾಜೆಯವರು ಈ ಕುರಿತು ಒಂದೇ ಒಂದು ವಿರೋಧದ ಮಾತನ್ನು ಆಡುತ್ತಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ದಿನಕರ ಹೇರೂರು ಅವರನ್ನು ಗೌರವಿಸಲಾಯಿತು.
ಕಾರ್ಯಕರ್ತರ ಚುನಾವಣೆಯಾಗಿರುವ ಗ್ರಾಮ ಪಂಚಾಯತ್ ಚುನಾವಣೆ ಬಹು ಮಹತ್ತರವಾದುದಾಗಿದೆ. ಇದರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷ ಸಂಘಟಿತ ಹೋರಾಟ ನೀಡಲಿದೆ. ಕಾಂಗ್ರೆಸ್ ಪಕ್ಷ ಈ ದೇಶ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಬಿಜೆಪಿ ಪಕ್ಷ ದೇಶದ ಜನರ ನಡುವಿನ ಸೌಹಾರ್ಧತೆ ಕೆಡಿಸುವ ಮೂಲಕ ಬೆಳೆದ ಪಕ್ಷವಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಇಂದಿನ ವರೆಗೂ ದೇಶಕ್ಕೆ ಬಿಜೆಪಿಯ ಕೊಡುಗೆ ಶೂನ್ಯ. ಕಾಂಗ್ರೆಸ್ ಪಕ್ಷದ ಸಾಧನೆಗಳ ಕುರಿತು ಮತ್ತು ಬಿಜೆಪಿಯ ಗುಪ್ತ ಕಾರ್ಯಸೂಚಿಯ ಕುರಿತು ಗ್ರಾಮ ಮಟ್ಟದಲ್ಲಿ ಅಭಿಯಾನ ನಡೆಸುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲರೂ ಕಟಿಬದ್ದರಾಗೋಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಮೆಹರೂಝ್ ಖಾನ್, ಕಾರ್ಯದರ್ಶಿ ಸುನಿಲ್, ಮುಖಂಡರುಗಳಾದ ಗೋಪಾಲ ಪೂಜಾರಿ, ಪಿ.ವಿ ಮೋಹನ್, ಕೆಪಿಸಿಸಿ ಸಾಮಾಜಿಕ ಜಾಲತಾಣ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ರೋಷನಿ ಒಲಿವೆರ, ವಿಜಯ್ ಹೆಗ್ಡೆ, ಸೌರಭ್ ಬಲ್ಲಾಳ್, ನೀರೆ ಕೃಷ್ಣ ಶೆಟ್ಟಿ, ದಿನೇಶ್ ಪುತ್ರನ್, ಸುಧಾಕರ್ ಕೋಟ್ಯಾನ್, ರಮೇಶ್ ಶೆಟ್ಟಿ ಹಾವಂಜೆ, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಸುಧಾಕರ ಶೆಟ್ಟಿ ಮೈರ್ಮಾಡಿ, ನವೀನ್ ಚಂದ್ರ ಶೆಟ್ಟಿ, ಕುಶಾಲ್ ಶೆಟ್ಟಿ, ಹರೀಶ್ ಕಿಣಿ, ನಿತ್ಯಾನಂದ ಶೆಟ್ಟಿ, ಕೀರ್ತಿ ಶೆಟ್ಟಿ, ಹಬೀಬ್ ಆಲಿ, ಪ್ರಶಾಂತ್ ಜತ್ತನ್ನ, ಬಾಲಕೃಷ್ಣ ಪೂಜಾರಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಶಂಕರ್ ಕುಂದರ್, ನವೀನ್ ಚಂದ್ರ ಸುವರ್ಣ, ಸತೀಶ್ ಅಮೀನ್ ಪಡುಕೆರೆ, ದಿನಕರ್ ಹೇರೂರು, ಅಬ್ದುಲ್ ಅಝೀಝ್, ಗೀತಾ ವಾಗ್ಲೆ, ಡಾ. ಸುನಿತಾ ಶೆಟ್ಟಿ, ಯತೀಶ್ ಕರ್ಕೆರಾ, ವಿಜಯ ಪೂಜಾರಿ, ಶಶಿಧರ್ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ಹರಿಶ್ಚಂದ್ರ ಕೊಡವೂರು, ವೈ. ಗಂಗಾಧರ ಸುವರ್ಣ, ವಿಜಯ, ಉಪೇಂದ್ರ ಮೆಂಡನ್, ಉಪೇಂದ್ರ ಗಾಣಿಗ, ಲೂಯಿಸ್ ಲೋಭೋ, ಜಯ ಶೆಟ್ಟಿ, ಪ್ರಭಾಕರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ ಯವರು ಸ್ವಾಗತಿಸಿದರು. ಕೆ. ಅಣ್ಣಯ್ಯ ಶೇರಿಗಾರ್ ರವರು ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಹೆಬ್ಬಾರ್ ವಂದಿಸಿದರು.
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com