ಕೃಷಿ ಸಂಬಂಧಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡದೇ, ರೈತರ ಹಿತಾಸಕ್ತಿ ಕಾಪಾಡಿದ್ದಕ್ಕೆ ಪದಚ್ಯುತಿ ಶಿಕ್ಷೆಯೆ?
ಕೃಷಿ ಸಂಬಂಧಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡದೇ, ರೈತರ ಹಿತಾಸಕ್ತಿ ಕಾಪಾಡಿದ್ದಕ್ಕೆ ಪದಚ್ಯುತಿ ಶಿಕ್ಷೆಯೆ?
Advertisement
ಬರಹ: ರಾಜಾರಾಂ ತಲ್ಲೂರು. (ಲೇಖಕರು ಹಿರಿಯ ಪತ್ರಕರ್ತರು ಹಾಗೂ ಜನಪರ ಚಿಂತಕರು)
ಕರ್ನಾಟಕ ವಿಧಾನಪರಿಷತ್ತಿನಲ್ಲಿ ಸಭಾಪತಿಗಳಾಗಿರುವ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸದ ನೋಟೀಸನ್ನು ನೀಡುವ ಮೂಲಕ ಕರ್ನಾಟಕದ ಆಡಳಿತ ಪಕ್ಷ ಕುತೂಹಲಕರ, ಆದರೆ ದೀರ್ಘಕಾಲಿಕ ನೆಲೆಯಲ್ಲಿ ಸಂಸದೀಯ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಲಿರುವ ನಿರ್ಧಾರ ಕೈಗೊಂಡಂತಿದೆ.
ಸ್ಪೀಕರ್- ಸಭಾಪತಿ ಹುದ್ದೆಗಳು ಸಾಂವಿಧಾನಿಕ ಮಹತ್ವದ ಹುದ್ದೆಗಳಾದರೂ ಅವನ್ನೀಗ ರಾಜಕೀಯ ಮೇಲಾಟಕ್ಕೆ ಬಳಸುವುದು ಹೊಸದೇನಲ್ಲ. ಈಗ ಈ ರಾಜಕೀಯ ಮೇಲಾಟ ಇನ್ನಷ್ಟು ರಾಡಿಯಾಗಲು ವೇದಿಕೆ ಸಜ್ಜಾಗಿದೆ.
ಮೇಲ್ಮನೆಯಲ್ಲಿ ಈಗ ಬಿಜೆಪಿ ಮೊನ್ನೆ ನಾಲ್ಕು ಸ್ಥಾನಗಳನ್ನು ಗೆದ್ದ ಬಳಿಕ ಸದನದ ಅತಿದೊಡ್ಡ ಸದಸ್ಯಬಲದ ಪಕ್ಷ. ಅದರ ಬಳಿ 31ಸ್ಥಾನಗಳಿವೆ. ಕಾಂಗ್ರೆಸ್ ಬಳಿ ಸಭಾಪತಿ ಮತ್ತೊಂದು ಪಕ್ಷೇತರ ಸೇರಿ 30ಸ್ಥಾನಗಳಿವೆ. ಜೆಡಿಎಸ್ ಬಳಿ 14.
ಅಂದರೆ ಈಗ ಜೆಡಿಎಸ್ ಪಕ್ಷವು ಬಿಜೆಪಿಯನ್ನು ಬೆಂಬಲಿಸಿದಲ್ಲಿ ಮಾತ್ರ ಸಭಾಪತಿ ಸ್ಥಾನದ ಬಲ ಅಲ್ಪಮತಕ್ಕಿಳಿಯಲಿದೆ. ಸದ್ಯ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು, ಜೆಡಿಎಸ್ ಉಪಸಭಾಪತಿ ಸ್ಥಾನ ಪಡೆದುಕೊಂಡಿದೆ.
ಹಾಗಾಗಿ ಜೆಡಿಎಸ್ ನಿಲುವಿನ ಮೇಲೆ ಸಭಾಪತಿಗಳ ಸ್ಥಾನ ಬದಲಾವಣೆ ನಿರ್ಧಾರ ಆಗಲಿದೆ. ಇದಕ್ಕೆ “ಆಪರೇಶನ್”ಗಳೇನಾದರೂ ನಡೆಯಲಿವೆಯೆ ಗೊತ್ತಿಲ್ಲ.
ಸದ್ಯಕ್ಕೆ ಚಾಲ್ತಿ ಇರುವ ಮಾತೆಂದರೆ, ಹಾಲೀ ಸಚಿವ ಮತ್ತು ಪರಿಷತ್ ಸಭಾನಾಯಕ ಶ್ರೀನಿವಾಸ ಪೂಜಾರಿ ಅವರನ್ನು ಸಭಾಪತಿ ಸ್ಥಾನಕ್ಕೆ ತಂದು ಆ ಸಚಿವ ಸ್ಥಾನವನ್ನು ಮತ್ತೊಬ್ಬರಿಗೆ ನೀಡುವ ಉದ್ದೇಶಕ್ಕಾಗಿ ಸಭಾಪತಿ ಬದಲಾವಣೆಯ ಚರ್ಚೆ ನಡೆದಿದೆ. ಆದರೆ, ಕರಾವಳಿಯಲ್ಲೇ ನಾಲ್ಕೈದು ಹೆಸರುಗಳು “ಸಚಿವ ಸ್ಥಾನ”ಕ್ಕೆ ಓವರ್ ಡ್ಯೂ ಆಗಿರುವುದರಿಂದ ಅದು ಮತ್ತಷ್ಟು ಮೇಲಾಟಗಳಿಗೆ ಹಾದಿ ಆಗಲಿದೆ.
ಅಷ್ಟಕ್ಕೂ ಈಗ ಸಭಾಪತಿಗಳ ಮೇಲೆ ಇರುವ ದೊಡ್ಡ ಆಪಾದನೆ, ಅವರು ಮೊನ್ನೆ ಏಳನೇ ಅಧಿವೇಶನದ ಕೊನೆಯ ದಿನ “ಕೃಷಿ ಸಂಬಂಧಿ ಮಸೂದೆ” ಅಂಗೀಕಾರಕ್ಕೆ ಅವಕಾಶ ನೀಡಲಿಲ್ಲ ಎಂಬುದು. ಆದರೆ, ಇದನ್ನು ಅಂಕಿಸಂಖ್ಯೆಗಳ ಆಧಾರದಲ್ಲಿ ಸಮರ್ಥಿಸಿಕೊಳ್ಳಲು ಕಷ್ಟ ಇದೆ. ಏಕೆಂದರೆ ಬರೇ ಆರು ದಿನಗಳ ಆ ಸೆಷನ್ ನಲ್ಲಿ 16 ವಿಧೇಯಕಗಳನ್ನು ಮಂಡಿಸಿ, ಅವುಗಳಲ್ಲಿ ಒಂದನ್ನುಳಿದು ಎಲ್ಲವನ್ನೂ ಅಂಗೀಕರಿಸಲಾಗಿದೆ. ಕೃಷಿ ಸಂಬಂಧಿ ವಿಧೇಯಕಕ್ಕೆ ಹೆಚ್ಚಿನ ಚರ್ಚೆ ಅಗತ್ಯ ಇರುವುದರಿಂದ ಅದನ್ನು “ರುಟೀನ್” ಆಗಿ ಹೆಚ್ಚಿನ ಚರ್ಚೆ ಇಲ್ಲದೆ ಅಂಗೀಕರಿಸುವುದು ನ್ಯಾಯಸಮ್ಮತ ಅಲ್ಲ. ಹಾಗಾಗಿ ಅದು ಅಂಗೀಕಾರ ಆಗದಿರುವುದು ಸಭಾಪತಿಗಳ ವಿವೇಚನೆಯ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಸ್ವತಃ ರೈತನಾಯಕರೂ, ರೈತರ ಸಮಸ್ಯೆಗಳನ್ನು ಅರಿತಿರುವವರೂ ಆಗಿರುವ ಕಾರಣ, ಇಂತಹ ಜನಪರವಾದ ನಿಲುವು ತಳೆದ ಸಭಾಪತಿಗಳಿಗೆ ಸರ್ಕಾರ ಅವಿಶ್ವಾಸದ ಶಿಕ್ಷೆ ವಿಧಿಸಲು ಹೊರಟಿರುವುದು ಹೌದಾದರೆ ಅದು ಅಕ್ಷಮ್ಯ.
ಈ ಕಿರು ಲೇಖನ ಬರೆಯಲು ಎರಡು ಕಾರಣಗಳಿವೆ. ಒಂದು, ಸಭಾಪತಿಗಳು ನಮ್ಮೂರು ಕುಂದಾಪುರದವರು ಮತ್ತು ಇನ್ನೊಂದು, 2018ನವೆಂಬರ್ ನಿಂದ ಇಲ್ಲಿಯ ತನಕ ಅವರು ವಿಧಾನಪರಿಷತ್ತಿನಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯಾಚರಿಸಿರುವುದು ಮತ್ತು ತನ್ನ ಸ್ಥಾನದ ಗೌರವಕ್ಕೆ ಕಿಂಚಿತ್ತೂ ಚ್ಯುತಿ ಬರದಂತೆ ನಡೆದುಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಪಕ್ಷಾತೀತ ಹುದ್ದೆಯೊಂದು ನಾಡಿನ ಜನರ ಹಿತವನ್ನು ಮುಂದಿಟ್ಟುಕೊಂಡು ತೆಗೆದುಕೊಂಡ ತೀರ್ಮಾನಕ್ಕೆ ಸ್ಥಾನಚ್ಯುತಿಯ ಶಿಕ್ಷೆ ವಿಧಿಸಲು ಹೊರಟಿರುವುದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಮಾನ ಎಂದೇ ದಾಖಲಾಗಲಿದೆ.
______________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com