ದೇವೇಗೌಡರ ಕುಟುಂಬಕ್ಕೆ ರಾಜಕಾರಣವು ಒಂದು ಧಂದೆ: ರಾಜಕೀಯವನ್ನು 'ರಾಜಕೀಯೋಧ್ಯಮ' ಮಾಡಿಕೊಂಡವರ ಕಥೆ.
ದೇವೇಗೌಡರ ಕುಟುಂಬಕ್ಕೆ ರಾಜಕಾರಣವು ಒಂದು ಧಂದೆ: ರಾಜಕೀಯವನ್ನು 'ರಾಜಕೀಯೋಧ್ಯಮ' ಮಾಡಿಕೊಂಡವರ ಕಥೆ.
Advertisement
ಬರಹ: ಡಾ. ಜೆ.ಎಸ್ ಪಾಟೀಲ. (ಲೇಖಕರು ಜನಪರ ಚಿಂತಕರು)
ದೇವೇಗೌಡರು ರಾಜಕೀಯಕ್ಕೆ ಬಂದ ಹೊಸದರಲ್ಲಿ ಅವರ ಸಮಕಾಲಿನರಲ್ಲಿ ಬಹುತೇಕ ರಾಜಕಾರಣಿಗಳಿಗೆ ರಾಜಕಾರಣ ಒಂದು ಸೇವೆ ಅಥವಾ ಹವ್ಯಾಸವಾಗಿದ್ದರೆ ದೇವೇಗೌಡರಿಗೆ ಅದು ಆರಂಭದಿಂದಲೂ ಒಂದು ವ್ಯವಸಾಯವೇ ಆಗಿತ್ತು. ಈಗ ಬಿಡಿ ಅವರ ಪಾಲಿಗೆ ರಾಜಕಾರಣವೆಂದರೆ ಸಂಪೂರ್ಣವಾಗಿ ಒಂದು ಧಂದೆಯಾಗಿ ಮಾರ್ಪಟ್ಟಿದ್ದೆ. ದೇವೇಗೌಡರದ್ದು ರಾಜಕೀಯ ಮತ್ತು ಶ್ರೀಮಂತಿಕೆಯ ಹಿನ್ನೆಲೆ ಇರದ ಸಾಮಾನ್ಯ ಕುಟುಂಬ. ಇವತ್ತು ಅವರು ತಲುಪಿರುವ ಸ್ಥಿತಿಗತಿಗೆ ರಾಜಕೀಯ ಹೊರತು ಪಡಿಸಿ ಬೇರಾವ ಮೂಲವೂ ಇಲ್ಲ. ದೇವೇಗೌಡರ ಕುಮಾರ ಕಂಠೀರವ 'ತಮ್ಮ ಕುಟುಂಬವು ವ್ಯವಹಾರˌ ಉದ್ಯಮಗಳು ಮಾಡಿ ಸಂಪತ್ತು ಗಳಿಸಿದೆ' ಎಂದು ಅನೇಕ ವೇಳೆ ಸಮರ್ಥಿಸಿಕೊಂಡಿದ್ದಿದೆ. ಆದರೆ ಆ ವ್ಯವಹಾರಗಳು ಸ್ಥಾಪಿಸಲುˌ ಧಂದೆ ಕುದುರಲುˌ ವ್ಯವಹಾರ ಬೆಳೆಯಲು ಕಾರಣವಾಗಿದ್ದು ರಾಜಕಾರಣದ ಸಂಪನ್ಮೂಲ ಎನ್ನುವ ಸಂಗತಿ ಮರೆಮಾಚುವಂತಿಲ್ಲ.
ಆರಂಭದಿಂದಲೂ ದೇವೇಗೌಡರು ತಮ್ಮ ಸಂಗಡಿಗರುˌ ಬೆಂಬಲಿಗರುˌ ನಾಯಕರನ್ನು ವಂಚಿಸುತ್ತಲೆ ಮೇಲೇರಿದವರು. ಎಲ್ಲಕ್ಕಿಂತ ಮಿಗಿಲಾಗಿ ಅವರು ತಮ್ಮ ಸಮುದಾಯದ ಮುಗ್ಧ ಜನರನ್ನು ವಂಚಿಸಿದ್ದು ಯಾರೂ ಮರೆಯುವಂತಿಲ್ಲ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಬಲಿಯಾದ ಸುಸಂಸ್ಕ್ರತ ಒಕ್ಕಲಿಗ ನಾಯಕರೆಂದರೆ ವೈ ಕೆ ರಾಮಯ್ಯ ˌ ಬಿ ಎಲ್ ಶಂಕರ್ˌ ಭೈರೇಗೌಡˌ ನಾಗೇಗೌಡˌ ಬಚ್ಚೆಗೌಡˌ ವೆಂಕಟಗಿರಿಗೌಡˌ ಶ್ರೀಕಂಠಯ್ಯˌ ಪುಟ್ಟಸ್ವಾಮಿಗೌಡ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಮ್ಮ ಸಮುದಾಯದಲ್ಲಿ ಬೇರೆ ಯಾವ ನಾಯಕರೂ ಬೆಳೆಯಂತೆ ದೇವೇಗೌಡರು ಸದಾ ಜಾಗೃತರಾಗಿ ಕಣ್ಣಲ್ಲಿ ಕಣ್ಣಿಟ್ಟು ದುಡಿದವರು. ಒಂದು ಹಂತದಲ್ಲಿ ತಮ್ಮ ಸಮುದಾಯದ ಅತ್ಯುಚ್ಚ ಮಠಾಧೀಶರಾಗಿದ್ದ ಆದಿ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಗಳನ್ನೂ ತುಳಿಯಲು ಪ್ರಯತ್ನಿಸಿ ವಿಫಲರಾದವರು. ಒಕ್ಕಲಿಗರ ಸಂಘವನ್ನು ಅನೇಕ ವೇಳೆ ದುರುಪಯೋಗ ಪಡಿಸಿಕೊಂಡವರು.
ಹೀಗೆ ಸದಾ ಸ್ವಾರ್ಥ ಚಿಂತನೆಯ ಮೂಲಕವೇ ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ರಾಜಕೀಯ ಅಧಿಕಾರದ ಪಡಸಾಲೆಗೆ ತಂದವರು ಅವರು. ಬಹುಶಃ ಭಾರತದ ಯಾವ ರಾಜಕಾರಣಿಯ ಕುಟುಂಬವು ಈ ಪ್ರಮಾಣದಲ್ಲಿ ರಾಜಕೀಯ ಅಧಿಕಾರ ಪಡೆದ ಉದಾಹರಣೆ ಇರಲಿಕ್ಕಿಲ್ಲ. ಹಿಂದೊಮ್ಮೆ ಇವರ ಅವಗುಣಗಳುˌ ಹುನ್ನಾರಗಳು ಮತ್ತು ಹಗರಣಗಳ ಕುರಿತು ಅವರದೇ ಸಮುದಾಯದ ಪ್ರೊ. ವೆಂಕಟಗಿರಿಗೌಡರು ಒಂದು ಗ್ರಂಥವನ್ನು ಬರೆದಿದ್ದರು. ಪ್ರೊ. ವೆಂಕಟಗಿರಿಗೌಡರು ಬಿಜೆಪಿಯಿಂದ ಒಂದು ಅವಧಿಗೆ ಬೆಂಗಳೂರಿನ ಸಂಸದರಾಗಿದ್ದವರು. ವೃತ್ತಿ ಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು. ಎಂದೂ ಜಾತಿವಾದದ ಸೋಂಕಿನಲ್ಲಿರದ ವೆಂಕಟಗಿರಿಗೌಡರು ದೇವೇಗೌಡರ ಜನ್ಮ ಜಾಲಾಡಿದವರಲ್ಲಿ ಅಗ್ರಗಣ್ಯರು. ದೇವೇಗೌಡರ ಹಗರಣಗಳ ಬಗ್ಗೆ ವೆಂಕಟಗಿರಿಗೌಡರು ಬರೆದ ಆ ಪುಸ್ತಕ ಯಾರ ಕೈಗೂ ಸಿಗದಂತೆ ಮಾಡಿದ ಕುಖ್ಯಾತಿ ಇಂದಿಗೂ ದೇವೇಗೌಡರ ಬಳಿಯೇ ಇದೆ.
ತಮ್ಮ ಸ್ವಾರ್ಥಕ್ಕಾಗಿ ಜನತಾಪಕ್ಷ,ˌ ನಂತರ ಜನತಾದಳವನ್ನು ಒಡೆದ ದೇವೇಗೌಡರು ಕೊನೆಗೆ ಜನತಾದಳ ಜಾತ್ಯಾತೀತ ಎನ್ನುವ ಕೌಟುಂಬಿಕ ಪಕ್ಷ ಸ್ಥಾಪಿಸಿಕೊಂಡು ಕೊನೆಯಲ್ಲಿ ಸಿದ್ಧರಾಮಯ್ಯನವರನ್ನೂ ವಂಚಿಸಿದರು. ಇನ್ನೂ ಸರಿಯಾಗಿ ವಿಧಾನಸೌಧವನ್ನು ನೋಡಿರದ ತಮ್ಮ ಮಗನನ್ನು ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿ ಮಾಡುವಲ್ಲಿ ಸಫಲರಾದರು. 2018ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಪಕ್ಷ ಅವರ ಮಗನನ್ನು ಮುಖ್ಯಮಂತ್ರಿ ಮಾಡಿದಾಗ ಜಾತ್ಯಾತೀತ ಶಕ್ತಿಗಳ ಬಲಪಡಿಸುವಿಕೆಯಲ್ಲಿ ತೊಡಗುವುದು ಬಿಟ್ಚು ದೇವೇಗೌಡರು ದೊಡ್ಡ ಮಗನಿಗೆ ಅಗಾಧ ಸಂಪನ್ಮೂಲಗಳ ಖಾತೆˌ ಬೀಗರಿಗೆ ಮಂತ್ರಿಗಿರಿˌ ಇಬ್ಬರು ಮೊಮ್ಮಕ್ಕಳಿಗೆ ಸಂಸದರುˌ ಸೊಸೆಯಂದಿರನ್ನು ಶಾಸಕಿಯರನ್ನಾಗಿಸುವ ಕುಟುಂಬ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈಗ ಅವರ ಕುಮಾರ ಕಂಠೀರವ ಅಧಿಕಾರ ಹೋದ ಮೇಲೆ ಬಿಜೆಪಿ ಬಾಗಿಲ ಬಳಿ ನಿಂತು ಕಾಂಗ್ರೆಸ್ ಪಕ್ಷವನ್ನು ಮತ್ತು ಸಿದ್ಧಾರಾಮಯ್ಯನವರನ್ನು ತೆಗಳುವುದೇ ರಾಜಕೀಯವೆಂದುಕೊಂಡಿದ್ದಾನೆ. ಇಂಥ ಸಂದರ್ಭ ಬಂದಾಗೆಲ್ಲ ಗೌಡರದ್ದು ದಿವ್ಯ ಮೌನ. ಚುನಾವಣೆಗಳು ಬಂದವೆಂದರೆ ಸಾಕು ಗೌಡರು ತೊಂಬತ್ತರ ತಾರುಣ್ಯದಲ್ಲೂ ಅತ್ಯಂತ ಕ್ರೀಯಾಶೀಲರಾಗುತ್ತಾರೆ. ಉಳಿದಂತೆ ಮತ್ತದೇ ಜಾಣ ಮೌನ.
ರಾಜಕೀಯ ಜೀವನದುದ್ದಕ್ಕೂ ತಮ್ಮ ಸಮುದಾಯದ ಹಾಗು ರೈತರ ಹೆಸರು ಹೇಳಿಕೊಂಡು ರಾಜಕೀಯ ಮತ್ತು ಆರ್ಥಿಕವಾಗಿ ಇಷ್ಟೊಂದು ಆಗಾಧವಾಗಿ ಬೆಳೆದಿರುವ ದೇವೇಗೌಡರ ಕುಟುಂಬ ರೈತರು ಸಂಕಷ್ಟಕ್ಕೀಡಾದಾಗ ಕಾಟಾಚಾರದ ಮಾತನಾಡಿ ಸುಮ್ಮನಾಗುತ್ತದೆ. ದೇವೇಗೌಡರ ಕುಟುಂಬ ಅಗ್ರೆಸ್ಸಿವ್ ಆಗುವುದು ಸ್ವಹಿತಾಸಕ್ತಿಗೆ ಧಕ್ಕೆ ಬಂದಾಗ ಮಾತ್ರ ಎನ್ನುವ ಮಾತು ಜನಜನಿತ. ಈಗ ಇಡೀ ಭಾರತದ ರೈತರು ಕಾರ್ಪೋರೆಟ್ ಕಳ್ಳರ ಏಜೆಂಟನಂತೆ ಆಡಳಿತ ಮಾಡುತ್ತಿರುವ ಮೋದಿಯ ಕೃಷಿ ಮಸೂದೆಯ ವಿರುದ್ಧ ಬೀದಿಗಿಳಿದ್ದಾರೆ.
ಮಣ್ಣಿನ ಮಕ್ಕಳೆಂದು ಹೇಳಿಸಿಕೊಂಡು ಕರೆಸಿಕೊಳ್ಳುವ ದೇವೇಗೌಡರ ಕುಟುಂಬ ಈ ವಿಷಯದಲ್ಲಿ ದಿವ್ಯ ಮೌನ ತಾಳಿದೆ. ನಾಡು ನುಡಿಯ ವಿಷಯದಲ್ಲಿ ˌ ಒಕ್ಕೂಟ ವ್ಯವಸ್ಥೆಗೆ ದಕ್ಕೆ ಬರುವಂತೆ ವರ್ತಿಸುವˌ ಹಿಂದಿ ಹೇರಿಕೆ ಮಾಡುವ ಮತ್ತು ಇನ್ನಿತರ ಜೀವವಿರೋಧಿ ಕಾರ್ಯ ಮಾಡುವ ಕೇಂದ್ರದಲ್ಲಿರುವ ಫ್ಯಾಸಿಸ್ಟ್ ಸರಕಾರದ ವಿರುದ್ಧ ದೇವೇಗೌಡರ ಪ್ರಾದೇಶಿಕ ಪಕ್ಷ ಒಮ್ಮೆಯೂ ಗಟ್ಟಿ ಧ್ವನಿ ಎತ್ತಲಿಲ್ಲ. ದೇವೇಗೌಡರ ಪಕ್ಷ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ತನಕ ಪರ್ಯಾಯ ಒಕ್ಕಲಿಗ ನಾಯಕತ್ವ ಬೆಳೆಯುವುದಾಗಲಿˌ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟುವುದಾಗಲಿ ಕಷ್ಟ ಎನ್ನುವ ವಾತಾವರಣ ಇವರ ಕುಟುಂಬ ಸೃಷ್ಟಿ ಮಾಡಿತ್ತು.
ಒಂದು ಸಲ ಬಿಜೆಪಿˌ ಇನ್ನೊಂದು ಸಲ ಕಾಂಗ್ರೆಸ್ ಪಕ್ಷಗೊಂದಿಗೆ ಒಡನಾಟ ಆಡುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದೇವೇಗೌಡರ ಕುಟುಂಬ ರಾಜಕೀಯವಾಗಿ ಅಳಿವಿನಂಚಿಗೆ ಬಂದು ನಿಂತಿದೆ. ಇಂದು ಅವರ ಅತಿರೇಕದ ನಡುವಳಿಕೆˌ ಸ್ವಾರ್ಥತನ ಕರ್ನಾಟಕದ ಜನರಲ್ಲಷ್ಟೇ ಅಲ್ಲದೆ ದೇವೇಗೌಡರ ಸಮುದಾಯದವರಲ್ಲೇ ಅತೃಪ್ತಿ ಯನ್ನು ಹುಟ್ಟು ಹಾಕಿದೆ. ಕಳೆದ ಸಂಸತ್ ಚುನಾವಣೆಯಲ್ಲಿ ಸ್ವತಃ ದೇವೇಗೌಡ ಮತ್ತು ಅವರ ಒಬ್ಬ ಮೊಮ್ಮಗನನ್ನು ಅವರ ಸಮುದಾಯವೇ ಸಾಂದ್ರತೆ ಹೊಂದಿರುವ ಮಂಡ್ಯ ಮತ್ತು ತುಮಕೂರಿನಲ್ಲಿ ಅವರದೇ ಸಮುದಾಯದ ಜನ ಮಣ್ಣು ಮುಕ್ಕಿಸಿದ್ದರು. ಮುಂದಿನ ದಿನಗಳಲ್ಲಿ ದೇವೇಗೌಡ ಮತ್ತವರ ಕುಟುಂಬ ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಅನುಮಾನದ ಸಂಗತಿಯಾಗಿದೆ.
ದೇವೇಗೌಡರು ತುಳಿದ ಹಾದಿಯನ್ನೇ ಇಂದು ಯಡಿಯೂರಪ್ಪ ತುಳಿಯುತ್ತಿದ್ದಾರೆ. ಆದರೆ ಲಿಂಗಾಯತ ಸಮುದಾಯ ದೇವೇಗೌಡರ ಮೊಸಳೆ ಕಣ್ಣೀರಿಗೆ ಕರಗುವ ಒಕ್ಕಲಿಗ ಸಮುದಾಯದಷ್ಟು ಮುಗ್ಧರಲ್ಲ ಎನ್ನುವುದು ಯಡಿಯೂರಪ್ಪನಿಗೆ ಗೊತ್ತಿರುವುದರಿಂದಲೇ ಆತ ಬೇರೆಲ್ಲ ಸಮುದಾಯಗಳ ಬೆಂಬಲಿಗರ ಪಡೆ ಕಟ್ಟಿಕೊಂಡಿರುವುದು. ದೇವೇಗೌಡರಿಗೆ ಒಕ್ಕಲಿಗ ಸಮುದಾಯ ಬೆಂಬಲಿಸಿದಂತೆ ಯಡಿಯೂರಪ್ಪನನ್ನು ಪ್ರಜ್ಞಾವಂತ ಲಿಂಗಾಯತ ಸಮುದಾಯ ಅಖಂಡ ವಾಗಿ ಬೆಂಬಲಿಸಿಲ್ಲ. ಹಾಗಾಗಿಯೇ ಯಡಿಯೂರಪ್ಪ ಇಲ್ಲಿಯವರೆಗೆ ಕನಿಷ್ಠ ಸರಳ ಬಹುಮತದಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ.
ಇಂದು ವಕ್ಕಲಿಗ ಸಮುದಾಯ ಜಾಗ್ರತೆಗೊಂಡು ದೇವೇಗೌಡ ಕುಟುಂಬವನ್ನು ರಾಜಕೀಯದಿಂದ ಮುಗಿಸಲು ಯೋಚಿಸಿದಂತೆ ಲಿಂಗಾಯತ ಸಮುದಾಯದ ಯಡಿಯೂರಪ್ಪ ಬೆಂಬಲಿಗರೂ ಕೂಡ ಯಡಿಯೂರಪ್ಪನ ಕುಟುಂಬ ರಾಜಕೀಯದಿಂದ ಬೇಸತ್ತು ದೂರ ಸರಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಒಟ್ಟಾರೆಯಾಗಿ ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಮುಂದಿನ ದಿನಗಳಲ್ಲಿ ಜಾತ್ಯಾತೀತ ಮನೋಭಾವ ಬೆಳೆಸಿಕೊಂಡು ತಮ್ಮ ಸಮುದಾಯವನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯವಾಗಿ ಸೊಕ್ಕುತ್ತಿರುವ ಕುಟುಂಬಗಳನ್ನು ದೂರವಿಡುವ ಕೆಲಸ ತುರ್ತಾಗಿ ಮಾಡಬೇಕಿದೆ.
_____________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com