ಮೋದಿ ಸರ್ಕಾರದ ಜನ ವಿರೋಧಿ ಕರಾಳ ಕಾನೂನುಗಳು! 'ದ್ವಿತೀಯ ಸ್ವಾತಂತ್ರ್ಯ ಸಮರ'ದ ಹೊಸ್ತಿಲಲ್ಲಿ ಭಾರತ?
ಮೋದಿ ಸರ್ಕಾರದ ಜನ ವಿರೋಧಿ ಕರಾಳ ಕಾನೂನುಗಳು! 'ದ್ವಿತೀಯ ಸ್ವಾತಂತ್ರ್ಯ ಸಮರ'ದ ಹೊಸ್ತಿಲಲ್ಲಿ ಭಾರತ?
Advertisement
ಸಂಪಾದಕೀಯ
ಯಾವುದೇ ರೀತಿಯ ಚರ್ಚೆಗೆ ಅವಕಾಶ ನೀಡದೆ ಮೋದಿ ಸರ್ಕಾರ ಸಂಸತ್ತಿನಲ್ಲಿ ಏಕಪಕ್ಷೀಯವಾಗಿ ಅನುಮೋದನೆ ನೀಡಿದ ರೈತವಿರೋಧಿ ತಿದ್ದುಪಡಿ ಕಾಯ್ದೆಗಳ ವಿರುದ್ಧ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರುದ್ಧ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರುದ್ಧ ಕಳೆದ 32 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.
ವರ್ಷ ಪೂರ್ತಿ ಶ್ರಮ ವಹಿಸಿ, ಸಾಲ ಸೂಲ ಮಾಡಿ ಬೆಳೆದ ಬೆಳೆಗಳಿಗೆ ಬೇಡಿಕೆ ಕುಸಿದಾಗ ರೈತರು ಅಧೀರರಾಗಬಾರದು, ನಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ರೈತ ಕೃಷಿಯನ್ನು ತೊರೆದು ಬೇರೆ ಉದ್ಯೋಗದತ್ತ ಹೊರಳಬಾರದು. ಹಾಗಾದಾಗ ಆಹಾರದ ಕೊರತೆಯುಂಟಾಗಿ ಆಹಾರಕ್ಕಾಗಿ ಬೇರೆ ದೇಶಗಳನ್ನು ಆಶ್ರಯಿಸಬೇಕಾಗಿ ಬರುತ್ತದೆ. ಅದು ದೇಶದ ಭವಿಷ್ಯವನ್ನು ಕಂದಕಕ್ಕೆ ತಳ್ಳುತ್ತದೆ ಎಂಬ ಮತ್ತು ದೇಶದ ಭದ್ರತಾ ಮತ್ತಿತರ ಕಾರಣಗಳಿಂದ ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಆಡಳಿತಾವಧಿಯಲ್ಲಿ ಎಪಿಎಂಸಿಗಳನ್ನು ಆರಂಭಿಸಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಅನ್ನದಾತರನ್ನು ರಕ್ಷಿಸಲು ರೈತಪರವಾದ ಎಪಿಎಂಸಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆ ಪ್ರಕಾರವಾಗಿ ಬೆಂಬಲ ಬೆಲೆಯನ್ನು ನೀಡಿ ಬೆಳೆಗಳನ್ನು ಎಪಿಎಂಸಿಗಳಲ್ಲಿ ಖರೀದಿಸಲಾಗುತಿತ್ತು. ಎಪಿಎಂಸಿ ಮೇಲಿನ ಆ ದೈರ್ಯದಿಂದ ದಶಕಗಳ ಕಾಲದಿಂದಲೂ ರೈತರು ನೆಮ್ಮದಿಯಿಂದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹಾಗೆಯೇ ಕೃಷಿ ಪ್ರಧಾನ ದೇಶವಾದ ಭಾರತದ ಕೃಷಿ ಉತ್ಪನ್ನಗಳು ದೇಶದ ಆರ್ಥಿಕತೆ ಹೆಚ್ಚಿಸುವಲ್ಲಿ, ಜಿಡಿಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತದೆ ಹೆಚ್ಚಿನ ಸಮೀಕ್ಷೆಗಳು.
ಆದರೆ ಮೋದಿ ಸರ್ಕಾರದ ಹೊಸ ಎಪಿಎಂಸಿ ಕಾಯ್ದೆ (ತಿದ್ದುಪಡಿ) ಯಲ್ಲಿ ಕನಿಷ್ಠ ಬೆಂಬಲ ಬೆಲೆಯ ಕುರಿತು ಉಲ್ಲೇಖವೇ ಇಲ್ಲ. ಬೇಡಿಕೆ ಕುಸಿದಾಗ ಆ ಬೆಳೆಯನ್ನು ಏನು ಮಾಡಬೇಕು ಎಂಬ ಕುರಿತು ಕೂಡಾ ವಿವರಿಸಲಾಗಿಲ್ಲ. ಬದಲಿಗೆ ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಮಹಾನ್ ಉದಾರವಾದಿಗಳಂತೆ ಮಾತನಾಡುತ್ತಿದ್ದಾರೆ ಪ್ರಧಾನಿ ಮೋದಿ ಸಹಿತ ಬಿಜೆಪಿ ನಾಯಕರುಗಳು. ಎಲ್ಲಿ ಬೇಕಾದರೂ ಮಾರುವ ಹಕ್ಕು ಮೊದಲೂ ಇತ್ತು, ಮುಂದೆಯೂ ಇರುತ್ತದೆ ಅದು ರೈತನ ಜನ್ಮಸಿದ್ಧ ಹಕ್ಕು ಅದಕ್ಕೂ ಕಾಯ್ದೆ ತಿದ್ದುಪಡಿಗೂ ಏನು ಸಂಬಂದ ಎಂದು ಪ್ರಶ್ನಿಸಿದರೆ ಎಪಿಎಂಸಿಗಳಲ್ಲಿ ದಲ್ಲಾಳಿಗಳು ರೈತರಿಗೆ ಸಾಲ ಕೊಟ್ಟು ಶೋಷಿಸುತ್ತಿದ್ದರು, ಸಾಲ ಪಡೆದ ರೈತರು ತಮ್ಮ ಬೆಳೆಯನ್ನು ಅವರಿಗೇ ಮಾರಬೇಕಾಗಿತ್ತು ಎಂಬ ತರ್ಕರಹಿತ ಕಥೆ ಹಣೆಯುತ್ತಾರೆ. ಅಲ್ಲಿ ರೈತರು ಶೋಷಣೆಗೊಳಗಾಗುವುದೇ ಹೌದಾದರೆ ಅವರೇಕೆ ಸೊಸೈಟಿ, ಬ್ಯಾಂಕ್ ಇನ್ನಿತರ ಸಂಸ್ಥೆಗಳಲ್ಲಿ ಸಾಲ ಪಡೆಯುವುದನ್ನು ಬಿಟ್ಟು ದಲ್ಲಾಳಿಗಳಲ್ಲಿ ಸಾಲ ಮಾಡುತ್ತಿದ್ದರು ಎಂದು ಪ್ರಶ್ನಿಸಿದರೆ ಮತ್ತೆ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಇಂತಹ ತರ್ಕ ಬದ್ದ ಪ್ರಶ್ನೆ ಕೇಳುವುದೇ ದೇಶದ್ರೋಹ ಎಂಬ ರೀತಿಯಲ್ಲಿ ಉಡಾಪೆ ತೋರಿಸುತ್ತಿದ್ದಾರೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಭೂಸ್ವಾದೀನ ಕಾಯ್ದೆಗಳು ರೈತಪರವಾಗಿದ್ದವು. ಸರ್ಕಾರವು ತನ್ನ ಯಾವುದೇ ಯೋಜನೆ ಜಾರಿಗೊಳಿಸುವ ಸಂಧರ್ಭದಲ್ಲಿ ಭೂಸ್ವಾದೀನ ಮಾಡಿಕೊಳ್ಳುವ ವೇಳೆ ಆ ಭಾಗದ ಕನಿಷ್ಠ 80 ಶೇಖಡಾ ರೈತರು ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಒಪ್ಪಿಗೆ ನೀಡಿದರೆ ಮಾತ್ರವೇ ಸರ್ಕಾರ ಭೂಸ್ವಾದೀನ ಮಾಡಿಕೊಳ್ಳಲು ಅವಕಾಶವಿತ್ತು ಮತ್ತು ಆ ಭಾಗದ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಹಣವನ್ನು ಸರ್ಕಾರ ರೈತರಿಗೆ ಪಾವತಿಸಿದ ನಂತರವಷ್ಟೆ ಭೂಸ್ವಾದೀನ ಪ್ರಕ್ರಿಯೆ ಆರಂಭಗೊಳ್ಳುತ್ತಿತ್ತು. ಈ ಕಾಯ್ದೆಯನ್ನು ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿತ್ತು.
ಇದೀಗ ಮೋದಿ ಸರ್ಕಾರ ಜಾರಿಗೊಳಿಸಿರುವ ಭೂಸ್ವಾದೀನ ಕಾಯ್ದೆ(ತಿದ್ದುಪಡಿ) ಯ ಪ್ರಕಾರ ಭೂಸ್ವಾದೀನಕ್ಕೆ ಯಾವುದೇ ರೈತರ ಅನುಮತಿಯ ಅಗತ್ಯ ಇರುವುದಿಲ್ಲ, ಅಂದರೆ ಭೂಸ್ವಾದೀನಕ್ಕೆ ರೈತರು ಯಾವುದೇ ಕಾರಣಕ್ಕೂ ವಿರೋಧ ಮಾಡುವಂತಿಲ್ಲ ಮತ್ತು ತಮ್ಮ ಹಕ್ಕಗಳನ್ನು ಪ್ರತಿಪಾದಿಸುವಂತಿಲ್ಲ. ಈ ತಿದ್ದುಪಡಿಗೆ ಮೋದಿ ಸರ್ಕಾರ ನೀಡುವ ಕಾರಣ ಏನೆಂದರೆ ಯಾವುದೇ ಉಧ್ಯಮಗಳಿಗೆ ಭೂಸ್ವಾದೀನ ವಿಳಂಬದ ಕಾರಣಕ್ಕಾಗಿ ಭೂಮಂಜೂರಾತಿ ಪ್ರಕ್ರಿಯೆ ನಿಧಾನವಾಗಬಾರದು ಎಂಬುವುದಾಗಿದೆ. ಇದು ಸಂಪೂರ್ಣವಾಗಿ ಉಧ್ಯಮಿಗಳ ಪರವಾದ ಕಾಯ್ದೆಗಳು ಹಾಗೂ ರೈತವಿರೋಧಿ ಕಾಯ್ದೆಗಳಾಗಿವೆ.
ಈ ಹಿಂದೆ ಆಳ್ವಿಕೆ ಮಾಡಿದ ಕಾಂಗ್ರೆಸ್ ಸರ್ಕಾರಗಳು ಕೂಡಾ ಉಧ್ಯಮಿಗಳ ಪರ ನಿಲುವು ಹೊಂದಿದ್ದರೆ ಈ ದೇಶದ ಕೃಷಿ ಕ್ಷೇತ್ರ ಈ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಉಧ್ಯಮಿಗಳ ಪರವಾದ ಕಾಯ್ದೆಗಳನ್ನು ಜಾರಿಗೊಳಿಸಿರಲಿಲ್ಲ ಮತ್ತು ಕೃಷಿಯ ಪರವಾಗಿಯೇ ಇತ್ತು. ಕೃಷಿಯ ಮಹತ್ವ ಅರಿತಿತ್ತು. ಉಧ್ಯಮಿಗಳಿಂದ ಹಣ ಪಡೆದು ಕೃಷಿ ಭೂಮಿಯನ್ನು ಅವರ ಪಾದಕ್ಕೆ ಒಪ್ಪಿಸುವುದು ದೇಶೋದ್ದಾರ ಎನ್ನಲಾದೀತೆ? ಆದರೆ ಇದೀಗ ಬಿಜೆಪಿ ಸರ್ಕಾರ ಉಧ್ಯಮಗಳಿಗೆ ಬೆಂಬಲ ನೀಡುವ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಈ ಕಾಯ್ದೆಗೆ ತಿದ್ದುಪಡಿ ತಂದಿರುವುದಾಗಿ ಹೇಳಿಕೊಂಡಿದೆ. ಅದರಿಂದ ಉದ್ಯೋಗ ಸೃಷ್ಟಿಯ ಕಥೆ ಹಣೆಯುತ್ತಿದೆ. ಆದರೆ ರೈತರ ಮಕ್ಕಳು, ಮೊಮ್ಮಕ್ಕಳು ತಮ್ಮದೇ ಪಿತ್ರಾರ್ಜಿತ ಭೂಮಿಯನ್ನು ಕಳೆದುಕೊಂಡು ಅದೇ ಭೂಮಿಯಲ್ಲಿ ಎದ್ದು ನಿಲ್ಲುವ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯುವುದರಲ್ಲಿ, ಆ ಕಾರ್ಖಾನೆಯ ಮಾಲಿಕರ ಗುಲಾಮರಾಗಿ ಕೆಲಸ ಮಾಡುವಲ್ಲಿನ ಉದ್ಯೋಗ ಸೃಷ್ಟಿಯಿಂದ ಅದ್ಯಾವ ಏಳಿಗೆ ಸಾಧ್ಯ ಎಂಬ ಮಾತಿಗೆ ಈ ತನಕವೂ ಯಾವುದೇ ಬಿಜೆಪಿಗರು ಸಮರ್ಪಕವಾದ ಉತ್ತರ ನೀಡಿಲ್ಲ.
ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಕಾಯ್ದೆಯಲ್ಲಿ ದಿನದಲ್ಲಿ 8ಗಂಟೆಗಿಂತ ಹೆಚ್ಚು ಕೆಲಸವನ್ನು ಕಾರ್ಮಿಕರಲ್ಲಿ ಮಾಡಿಸುವಂತಿಲ್ಲ ಎಂಬ ಅಂಶ ಇದ್ದರೆ ಇದೀಗ ಮೋದಿ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಕಾಯ್ದೆ(ತಿದ್ದುಪಡಿ) ಯಲ್ಲಿ ಆ ಅವಧಿಯನ್ನು 12ಗಂಟೆಗೆ ಏರಿಸಲಾಗಿದೆ. ಬಹುಶಃ ಮನುಷ್ಯನಾದವನಿಗೆ ಖಂಡೀತವಾಗಿಯೂ 12ಗಂಟೆಗಳಷ್ಟು ದೀರ್ಘಾವಧಿ ಕೆಲಸ ಮಾಡಲು ಸಾಧ್ಯವೂ ಇಲ್ಲ. ಇಂತಹ ಕಾನೂನುಗಳು ನಿಸ್ಸಂದೇಹವಾಗಿ ಕರಾಳ ಕಾನೂನುಗಳಾಗಿವೆ. ಇವು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಆದರೆ ಯೋಚಿಸುವ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಈ ದೇಶದ ಬಿಜೆಪಿ ಬೆಂಬಲಿಗರ ಇಂದಿನ ಮನಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ ಇಂತಹ ರೈತರ,ಕಾರ್ಮಿಕರ ಪರ ವಾದವೂ ಕೂಡ ವೈರಿರಾಷ್ಟ್ರಗಳ ಪರ ವಾದವಾಗುತ್ತದೆ, ದೇಶದ್ರೋಹ ಎನ್ನಿಸುತ್ತದೆ.
ಹೌದು, ದ್ವೀತಿಯ ಸ್ವಾತಂತ್ರ್ಯ ಸಮರದ ಅಗತ್ಯ ಎಂದಿಗಿಂತ ಇಂದು ಹೆಚ್ಚಿದೆ ಎಂದರೆ ತಪ್ಪಾಗಲಾರದು.
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com