Advertisement

ಮೋದಿ ಸರ್ಕಾರದ ಮೂರು ರೈತ ವಿರೋಧಿ- ಕಾರ್ಪೋರೆಟ್ ಪರವಾದ ಶಾಸನಗಳು ಮತ್ತವರ ಹತ್ತು ಸುಳ್ಳುಗಳು!

Advertisement

ಬರಹ: ಶಿವಸುಂದರ್ ( ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ದೆಹಲಿಯ ಕೊರೆಯುವ ಚಳಿಯಲ್ಲಿಯೂ ಈ ದೇಶದ ಅನ್ನದಾತರು ನಡೆಸುತ್ತಿರುವ ಚಾರಿತ್ರಿಕ ರೈತ- ಜನಾಂದೋಲನವು ಮೂರು ವಾರಗಳನ್ನು ಪೂರೈಸುತ್ತಿದೆ. ಆದರೂ, ನ್ಯಾಯ-ನೀತಿ, ಪ್ರಜಾತಾಂತ್ರಿಕ ರೀತಿ ರಿವಾಜುಗಳನ್ನೆಲ್ಲಾ ಕೈಬಿಟ್ಟಿರುವ ಸರ್ವಾಧಿಕಾರಿ ಬಿಜೆಪಿ ಸರ್ಕಾರ ತಾನು ಅಸಾಂವಿಧಾನಿಕವಾಗಿ ತಂದಿರುವ ರೈತ ವಿರೋಧಿ-ಕಾರ್ಪೊರೇಟ್ ಪರ ಕಾಯಿದೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ಘೋಷಿಸಿದೆ. ಹೀಗಾಗಿ ರೈತರು ದೆಹಲಿ ಮುತ್ತಿಗೆಯನ್ನು ತೀವ್ರಗೊಳಿಸಿದ್ದಾರೆ. ಸರ್ಕಾರ ಪ್ರಾರಂಭದಲ್ಲಿ ಮಾತುಕತೆಯ ನಾಟಕವಾಡಿದರೂ ಮತ್ತೊಂದು ಕಡೆಯಿಂದ ರೈತರನ್ನು ಖಲಿಸ್ತಾನಿ, ದೇಶದ್ರೋಹಿ ಎಂದು ಬದ್‌ನಾಮ್‌ಗೊಳಿಸುತ್ತಾ, ರೈತ ಸಂಘಟನೆಗಳಲ್ಲಿ ಒಡಕು ತರುವ ಕುತಂತ್ರಗಳಿಗೆ ಮುಂದಾಗಿದೆ. ಆದರೆ ಅದ್ಯಾವುದೂ ಸಫಲವಾಗದೆ ರೈತ ಹೋರಾಟ ಒಗ್ಗಟ್ಟಿನಿಂದ ದಿನೇದಿನೇ ಅಚಲ ಹಾಗೂ ಅಬೇಧ್ಯವಾಗುತ್ತಿದೆ. ಅದೇ ಸಮಯದಲ್ಲಿ ಈ ದೇಶದ ವಿದ್ಯಾರ್ಥಿಗಳು ನಿವೃತ್ತ ಹಿರಿಯ ಅಧಿಕಾರಿಗಳು, ಪದ್ಮ ಪ್ರಶಸ್ತಿ ವಿಜೇತ ಹಿರಿಯ ಗಣ್ಯರು, ಆಟಗಾರು, ದೇಶ ವಿದೇಶಗಳ ವಿದ್ವಾಂಸರು ರೈತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ರೈತ ಹೋರಾಟವನ್ನು ಭೌತಿಕವಾಗಿ ಬಗ್ಗುಬಡೆಯಲು ಅರೆಸೇನಾ ಪಡೆಗಳನ್ನು ಬಳಸಲು ಹಾಗೂ ರಾಜಕೀಯವಾಗಿ ಅಮಾನ್ಯಗೊಳಿಸಲು ವ್ಯವಸ್ಥಿತವಾಗಿ ಸುಳ್ಳು ಪ್ರಚಾರಗಳನ್ನು ನಡೆಸಲು ಮುಂದಾಗಿದೆ. ರೈತ ಹೋರಾಟವನ್ನು ಅಮಾನ್ಯಗೊಳಿಸುವ ಸಲುವಾಗಿ ಬಿಜೆಪಿ ಪಕ್ಷವು ರೈತ ಹೋರಾಟದ ಬಗ್ಗೆ ಮತ್ತು ಅವರ ಆಗ್ರಹಗಳ ಬಗ್ಗೆ ಅಪಪ್ರಚಾರ ಮಾಡಲು ದೇಶಾದ್ಯಂತ 700 ಸಭೆಗಳನ್ನು ಹಾಗೂ ನೂರಾರು ಪತ್ರಿಕಾ ಗೋಷ್ಠಿಗಳನ್ನೂ ನಡೆಸಲು ಮುಂದಾಗಿದೆ. ಈ ಕುಟಿಲ ಪ್ರಚಾರ ಯುದ್ಧದ ಭಾಗವಾಗಿ ಬಿಜೆಪಿ ಸರ್ಕಾರ ತಾನು ತಂದಿರುವ ರೈತ ವಿರೋಧಿ-ಕಾರ್ಪೊರೇಟ್ ಪರ ನೀತಿಗಳನ್ನು ಸಮರ್ಥಿಸಿಕೊಳ್ಳಲು 10 ಪ್ರಮುಖ ಸುಳ್ಳುಗಳನ್ನು ಹೇಳುತ್ತಿದೆ. ಈಗಾಗಲೇ, ಪ್ರತಿ ರಾಜ್ಯ, ಜಿಲ್ಲೆ, ಹಾಗೂ ಗ್ರಾಮಗಳಲ್ಲಿ ಈ ಸುಳ್ಳುಗಳನ್ನು ಬಿತ್ತಲು ಅವರ ಮತಿಭ್ರಾಂತ ಕೂಲಿಪಡೆ ಸಜ್ಜಾಗಿದೆ. ಆ ಸುಳ್ಳುಗಳನ್ನು ಬಯಲುಮಾಡದೆ ರೈತ ಸತ್ಯಗಳು ಸಾಬೀತಾಗುವುದಿಲ್ಲ. ಆದ್ದರಿಂದ ಬಿಜೆಪಿಯ ಆ ಹತ್ತು ಪ್ರಚಾರಗಳು ಹೇಗೆ ಹಸಿ ಸುಳ್ಳುಗಳೆಂಬುದನ್ನು ಕೆಳಗೆ ವಿವರಿಸಲಾಗಿದೆ. ಸುಳ್ಳು-1. ಈ ಮೂರೂ ಶಾಸನಗಳು ರೈತರ ಹಿತದ ಬಗ್ಗೆ ಸರ್ಕಾರಕ್ಕಿರುವ ನೀತಿ ಮತ್ತು ನಿಯತ್ತನ್ನು ಸೂಚಿಸುತ್ತದೆ. ಈ ಶಾಸನಗಳು ಸಂಪೂರ್ಣವಾಗಿ ರೈತಪರವಾಗಿದ್ದಲ್ಲಿ ರೈತರೇಕೆ ಇಷ್ಟು ತೀವ್ರ ವಾಗಿ ವಿರೋಧಿಸುತ್ತಿದ್ದಾರೆ? ಅವರೆಲ್ಲರನ್ನೂ ದಾರಿ ತಪ್ಪಿಸಲಾಗಿದೆ ಎನ್ನುವ ಮೂಲಕ ಬಿಜೆಪಿ ಸರ್ಕಾರ ರೈತರನ್ನು ಅವಮಾನ ಮಾಡುತ್ತಿಲ್ಲವೇ? ಇದು ರೈತರ ಬಗ್ಗೆ ಬಿಜೆಪಿಯ ಬೇನಿಯತ್ತಲ್ಲವೇ? ಹಾಗಿದ್ದಲ್ಲಿ ಮಾತುಕತೆಯ ಮೊದಲ ಹಂತದಲ್ಲೇ ಆ ಶಾಸನಗಳಲ್ಲಿ ಹಲವಾರು ಲೋಪದೋಷಗಳಿದೆಯೆಂದು ಒಪ್ಪಿಕೊಂಡಿದ್ದು ನಾಟಕವೇ? ಸರ್ಕಾರಕ್ಕೆ ರೈತರ ಬಗ್ಗೆ ನಿಯತ್ತಿದ್ದರೆ ಒಂದು ಕಡೆ ಮಾತುಕತೆಗೆ ಸಿದ್ದ ಎನ್ನುತ್ತಲೇ ಮತ್ತೊಂದು ಕಡೆ ತಾವು ತಂದಿರುವ ನೀತಿಗಳೆಲ್ಲಾ ಅಪ್ಪಟ ಅಪರಂಜಿ ಎನ್ನುವ ಪ್ರಚಾರ ಸಮರಕ್ಕೇ ಏಕೆ ಮುಂದಾಗಿದೆ? ರೈತರನ್ನು ಬದ್ನಾಮ್ ಮಾಡುವ ದೇಶದ್ರೋಹಿ ಎಂದೆಲ್ಲಾ ಕರೆಯುವ ಸರ್ಕಾರಿ ಪೋಷಿತ ಪ್ರಚಾರಕ್ಕೆ ಏಕೆ ಮುಂದಾಗಿದೆ? ಸುಳ್ಳುಗಳ ಪ್ರಚಾರಕ್ಕೆ ಮುಂದಾಗಿರುವುದೇ ಸರ್ಕಾರ ರೈತರ ಬಗ್ಗೆ ಯಾವುದೇ ನೀತಿ ಅಥವಾ ನಿಯತ್ತನ್ನು ಇಟ್ಟುಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸುಳ್ಳು-2. ಈ ಶಾಸನಗಳನ್ನು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. -ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರ ಇರುವ ಮತ್ತು ಕೇಂದ್ರ ಹಾಗೂ ರಾಜ್ಯ ಎರಡೂ ಕೂಡಾ ಕಾನೂನು ಮಾಡಬಹುದಾದ ಬಾಬತ್ತುಗಳ ಪಟ್ಟಿಯನ್ನು ನೀಡಲಾಗಿದೆ. ಮೊದಲನೆಯದಾಗಿ ಕೃಷಿಗೆ ಸಂಬಂಧಪಟ್ಟ ಯಾವೊಂದು ವಿಷಯವೂ ಕೇಂದ್ರದ ಪಟ್ಟಿಯಲ್ಲಿಲ್ಲ. ರಾಜ್ಯಗಳ ಪಟ್ಟಿಯಲ್ಲಿ 14, 18 ಹಾಗೂ 27 ನೇ ಎಂಟ್ರಿಗಳಲ್ಲಿ ಕೃಷಿ ಹಾಗೂ ಭೂಮಿ ಹಿಡುವಳಿ, ಒಡೆತನ, ಗೇಣಿ, ಕೃಷಿ ಮಾರುಕಟ್ಟೆ, ಸಂತೆ ಇತ್ಯಾದಿಗಳೆಲ್ಲವನ್ನೂ ಸಂಪೂರ್ಣವಾಗಿ ರಾಜ್ಯದ ಪರಮಾಧಿಕಾರವಿರುವ ವಿಷಯವೆಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಕೃಷಿಯ ಬಗ್ಗೆ ಕಾನೂನು ಮಾಡುವ ಪರಮಾಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂಬುದು ಹಸಿಸುಳ್ಳು.. ಆದರೆ, ಸಮವರ್ತಿ ಪಟ್ಟಿಯ 33 ನೇ ಎಂಟ್ರಿಯಲ್ಲಿ ಸೀಮಿತ ಅರ್ಥದಲ್ಲಿ ಆಹಾರ ಸರಕುಗಳ ವಾಣಿಜ್ಯ ವ್ಯವಹಾರದ ವಿಷಯವನ್ನು ಸೇರಿಸಲಾಗಿದೆ. ಬಿಜೆಪಿ ಸರ್ಕಾರ ಇದನ್ನು ಉಲ್ಲೇಖಿಸುತ್ತಾ ತಾನು ತಂದಿರುವ ಶಾಸನಗಳನ್ನು ಸಮರ್ಥಿಕೊಳ್ಳುತ್ತಿದೆ. ಆದರೆ ಇದು ಅಂತರ ರಾಜ್ಯ ಹಾಗೂ ಅಂತರ ರಾಷ್ಟ್ರೀಯ ವಾಣಿಜ್ಯದ ಬಗ್ಗೆಯೇ ಹೊರತು ರಾಜ್ಯದೊಳಗಿನ ಕೃಷಿ ಮಾರುಕಟ್ಟೆಗೆ ಸಂಬಂಧ ಪಟ್ಟಂತೆಅಲ್ಲ. ಅಷ್ಟು ಮಾತ್ರವಲ್ಲ. ಸಂವಿಧಾನದ ಮೂರನೇ ತಿದ್ದುಪಡಿಯ ಮೂಲಕ ಇದನ್ನು ಸೇರಿಸಿದಾಗ ಕೆಲವು ರಾಜ್ಯಗಳಲ್ಲಿ ಆಹಾರ ಆಭಾವದ ಪರಿಸ್ಥಿತಿ ಇತ್ತು. ಹೀಗಾಗಿ ಹೆಚ್ಚುವರಿ ಆಹಾರ ಇರುವ ರಾಜ್ಯಗಳಿಂದ ಅಭಾವ ರಾಜ್ಯಗಳಿಗೆ ಆಹಾರ ಸಾಗಾಟ ಮಾಡಲು ಅನುವು ಮಾಡಿಕೊಡುವ ತಾತ್ಕಾಲಿಕ ವ್ಯವಸ್ಥೆ ಭಾಗವಾಗಿ ಎಂಟ್ರಿ 33 ಅನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ಅದು ಕೇಂದ್ರ ಸರ್ಕಾರಕ್ಕೆ ಇಂಥಾ ಮರಣ ಶಾಸನಗಳನ್ನು ಮಾಡುವ ಅಧಿಕಾರ ಕೊಡುವುದಿಲ್ಲ. ಅಷ್ಟು ಮಾತ್ರವಲ್ಲ. ಇತ್ತೀಚೆಗೆ, ರೈತ ನಾಯಕರೊಂದಿಗೆ ಮಾತುಕತೆಯ ನಂತರ ಸರ್ಕಾರ ಕಳಿಸಿದ ಅಧಿಕೃತ ಪ್ರಸ್ತಾಪಗಳಲ್ಲಿ ಖಾಸಗಿ ಮಂಡಿಗಳ ರಿಜಿಸ್ಟ್ರೇಷನ್, ವ್ಯಾಜ್ಯಗಳನ್ನು ಸಿವಿಲ್ ನ್ಯಾಯಲಯಗಳ ಪರಿಧಿಗೆ ತರುವ ಸಲಹೆಗಳನ್ನು ರಾಜ್ಯ ಸರ್ಕಾರಗಳಿಗೆ ಸೂಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತಲ್ಲವೇ? ಅದರ ಅರ್ಥವೇನು? ಆ ಪರಿಧಿಯಲ್ಲಿ ಕೇಂದ್ರಕ್ಕೆ ಶಾಸನ ಮಾಡುವ ಅಧಿಕಾರ ಇಲ್ಲ ಅಂತಾ ತಾನೇ? ಮೋದಿ ಸರ್ಕಾರ ಸುಳ್ಳು ಹೇಳಿ ಸಿಕ್ಕಿಬಿದ್ದಿದೆ. ಸುಳ್ಳು-3. ಈ ಶಾಸನಗಳನ್ನು ಮಾಡುವ ಮುನ್ನ ವಿಸ್ತೃತವಾಗಿ ಚರ್ಚಿಸಲಾಗಿದೆ - ಈ ಶಾಸನಗಳನ್ನು ಜಾರಿ ಮಾಡುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಹಾಗೂ ವಿದ್ವಾಂಸರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂಬ ಮತ್ತೊಂದು ಹಸಿಸುಳ್ಳನ್ನು ಎಗ್ಗುಸಿಗ್ಗಿಲ್ಲದೆ ಬಿಜೆಪಿ ಸರ್ಕಾರ ಪ್ರಚಾರ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ 2002 ರಿಂದ 2014ರವರೆಗೆ, ಪ್ರಧಾನವಾಗಿ APMC ಸುಧಾರಣೆ ಕಾಯಿದೆಯ ಬಗ್ಗೆ ನಡೆದ ಚರ್ಚೆಗಳನ್ನು ಮಾತ್ರ ನಮೂದಿಸಲಾಗಿದೆ. ವಿಚಿತ್ರವೆಂದರೆ ಅದರಲ್ಲಿ ಯುಪಿಎ ಸರ್ಕಾರ ನಡೆಸಿದ ಸಮಲೊಚನೆಗಳನ್ನೂ ತಾನು ಮಾಡಿದ ಸಮಾಲೊಚನೆಗಳ ಲೆಕ್ಕಕ್ಕೆ ಸೇರಿಸಿಕೊಂಡುಬಿಟ್ಟಿದೆ! ಆದರೆ ಬಿಜೆಪಿ ಸರ್ಕಾರ ಹೇಳುತ್ತಿರುವ ಈ ಎಲ್ಲಾ ಸಮಾಲೊಚನೆಗಳು ಈಗ ಬಿಜೆಪಿ ಸರ್ಕಾರವು ತಂದಿರುವ ಕಾಯಿದೆಗಳ ಬಗ್ಗೆ ನಡೆದದ್ದಲ್ಲ. ಈಗ ಬಿಜೆಪಿ ಸರ್ಕಾರ ಜಾರಿ ಮಾಡಿರುವ ಕಾಯಿದೆಗಳೂ ಮತ್ತು ಈ ಹಿಂದೆ ಸಮಾಲೋಚನೆ ಮಾಡಿದ ಕಾಯಿದೆಗಳ ಸ್ವರೂಪವೇ ಮೂಲಭೂತವಾಗಿ ಭಿನ್ನವಾಗಿವೆ. ಹೀಗಾಗಿ ಹಳೆಯ ಚರ್ಚೆಗಳನ್ನು ಉಲ್ಲೇಖಿಸುತ್ತಿರುವ ಬಿಜೆಪಿ ದೇಶಕ್ಕೆ ಮೋಸ ಮಾಡುತ್ತಿದೆ. ಬಿಜೆಪಿ ಸರ್ಕಾರವು 2020ರ ಜೂನ್‌ನಲ್ಲಿ ಸುಗ್ರೀವಾಜ್ಞೆಯ ರೂಪದಲ್ಲಿ ಮೊದಲು ಜಾರಿ ಮಾಡಿದ ಮೂರೂ ಹೊಸ ಕಾಯಿದೆಗಳ ಕರಡಿನ ಬಗ್ಗೆ ಕೇಂದ್ರವು ಯಾವುದೇ ರಾಜ್ಯ ಸರ್ಕಾರಗಳ ಜೊತೆಗಾಗಲೀ ಅಥವಾ ರೈತ ಸಂಘಟನೆಗಳ ಜೊತೆಗಾಗಲೀ ಯಾವುದೇ ಸಮಾಲೋಚನೆಗಳನ್ನು ಮಾಡಿರಲಿಲ್ಲ. ಅದರಲ್ಲೂ ಕಾಂಟ್ರಾಕ್ಟ್ ಫಾರ್ಮಿಂಗ್ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯಿದೆಯ ಬಗ್ಗೆಯಂತೂ ಪ್ರಸ್ತಾಪ ಕೂಡಾ ಇರಲಿಲ್ಲ. ಆದ್ದರಿಂದ ಸಮಾಲೋಚನೆ ಮಾಡಲಾಗಿತ್ತು ಎನ್ನುವುದು ಬಿಜೆಪಿ ಕುತಂತ್ರವೇ ಹೊರತು ಸತ್ಯವಲ್ಲ. ಸುಳ್ಳು 4. ಕನಿಷ್ಟ ಬೆಂಬಲ ಬೆಲೆ ರದ್ದಾಗುವುದಿಲ್ಲ MSP (ಕನಿಷ್ಟ ಬೆಂಬಲ ಬೆಲೆಯನ್ನು) ರದ್ದು ಮಾಡುವುದಿಲ್ಲ, ಬೇಕಾದರೆ ಸರ್ಕಾರ ಅದರ ಬಗ್ಗೆ ಲಿಖಿತವಾದ ಆಶ್ವಾಸನೆ ಕೊಡಲು ಸಿದ್ಧ ಎನ್ನುವ ಸರ್ಕಾರ ರೈತರ ಬೆಳಗಳಿಗೆ ಕನಿಷ್ಟ ಬೆಂಬಲ ಬೆಲೆ ಕೊಡದೆ ಖರೀದಿ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಮಾಡುವ ಶಾಸನ ಮಾಡಲು ಮಾತ್ರ ತಯಾರಿಲ್ಲ. ಹೀಗಾಗಿ MSP ರದ್ದಾಗುವುದಿಲ್ಲ ಎಂಬ ಮೋದಿ ಸರ್ಕಾರದ ಆಶ್ವಾಸನೆಗೂ ಯಾವುದೇ ಆರ್ಥವಿಲ್ಲ. MSP ಯ ಬಗ್ಗೆ ಮೋದಿ ಸರ್ಕಾರ ನೀತಿ ಮತ್ತು ನಿಯತ್ತು ಎರಡೂ ರೈತರ ಪರವಾಗಿರಲಿಲ್ಲ. ಹೇಗೆಂದು ನೋಡೋಣ: ಪ್ರತಿವರ್ಷ ಕೇಂದ್ರ ಸರ್ಕಾರ ರೈತರು ಬೆಳೆಯುವ 23 ಬೆಳಗಳಿಗೆ ಕೇಂದ್ರ ಸರ್ಕಾರದಡಿಯಲ್ಲಿರುವ Commission on Agricultural Costs & Prices (CACP) -ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡುತ್ತದೆ. ಆದರೆ ವಾಸ್ತವದಲ್ಲಿ ಆ ಬೆಲೆಯಲ್ಲಿ ಖರೀದಿ ಮಾಡುವುದು ಸರ್ಕಾರವೇ ವಿನಾ ಖಾಸಗಿ ವ್ಯಾಪಾರಿಗಳು ಖರೀದಿ ಮಾಡಿದ ಉದಾಹರಣೆ ಬಹಳ ಕಡಿಮೆ. ಈವರೆಗೆ ಸರ್ಕಾರವು ವಿಶೆಷವಾಗಿ APMC ಗಳ ಮೂಲಕ ತಾನೇ ಘೋಷಿಸಿದ MSP ಬೆಲೆಗೆ ಮುಖ್ಯವಾಗಿ ಭತ್ತ ಹಾಗೂ ಗೋಧಿಯನ್ನು ಖರೀದಿಸಿ ಭಾರತೀಯ ಅಹಾರ ನಿಗಮದ - FCI- ಗೋಡೋನುಗಳಲ್ಲಿ ಸಂಗ್ರಹಿಸುತ್ತದೆ. ಆ ನಂತರ ರೇಷನ್ ಅಂಗಡಿಗಳ ಮೂಲಕ ಈ ದೇಶದ ನಗರದ ಹಾಗೂ ಗ್ರಾಮೀಣಬಡವರಿಗೆ ಅಗ್ಗದ ದರದಲ್ಲಿ ಸರಬರಾಜು ಮಾಡುತ್ತಾ ಈ ದೇಶದ ಹಾಗೂ ಜನರ ಆಹಾರ ಭದ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿತ್ತು. ಹೀಗಾಗಿ APMC-MSP-FCI ಇವುಗಳು ಒಂದನ್ನೊಂದು ಅವಲಂಬಿಸಿರುವ ಅವಿನಾಭಾವಿ ವ್ಯವಸ್ಥೆಯಾಗಿದೆ. APMC ಮತ್ತು FCIಗಳಿಲ್ಲದೇ MSP ಯು ರೈತರಿಗೆ ಸಿಗುವುದಿಲ್ಲ. ಏಕೆಂದರೆ ಈಗಿರುವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಬಿಟ್ಟರೆ ಯಾವುದೇ ಖಾಸಗಿ ಮಂಡಿಗಳು ರೈತರಿಗೆ MSP ಕೊಡುತ್ತಿಲ್ಲ. ಇತ್ತಿಚಿನ ಅಧ್ಯಯನದ ಪ್ರಕಾರವೇ ಕಳೆದ ಎರಡು ತಿಂಗಳಲ್ಲೇ ದೇಶದ 20,000 ನೊಂದಾಯಿತ ಕೃಷಿ ಮಾರುಕಟ್ತೆಗಳ ಶೇ. 90 ರಷ್ಟು ಖಾಸಗಿ ಖರೀದಿಗಳಲ್ಲಿ ಸರ್ಕಾರ ಸೂಚಿಸಿರುವ ಬೆಂಬಲ ಬೆಲೆ ನೀಡಲಾಗಿಲ್ಲ. ಇದರಿಂದಾಗಿ ಕಳೆದೆರಡು ತಿಂಗಳ ಖರೀದಿಯಲ್ಲೇ ಈ ದೇಶದ ರೈತಾಪಿಗೆ 2000 ಕೋಟಿ. ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಅದರಲ್ಲಿ ಕರ್ನಾಟಕದ ಮೆಕ್ಕೆ ಜೋಳದ ಬೆಳೆಗಾರರಿಗೆ ಅಂದಾಜು 330 ಕೋಟಿ ನಷ್ಟ ಸಂಭವಿಸಿದೆ. ಸಾರಾಂಶ ಸ್ಪಷ್ಟ. ಸರ್ಕಾರ ಖರೀದಿ ಮಾಡದಿದ್ದರೆ ಅಥವಾ ಖಾಸಗಿ ವ್ಯಾಪಾರಿಗಳು ಕಡ್ಡಾಯವಾಗಿ MSP ಪಾವತಿಸಬೇಕೆಂಬ ಶಾಸನವನ್ನು ಮಾಡದೇ ರೈತರಿಗೆ MSP ದಕ್ಕುವುದಿಲ್ಲ. ಆದರೆ ಸರ್ಕಾರ ಅಂತಹ ಶಾಸನ ಮಾಡಲು ಸಿದ್ಧವಿಲ್ಲ. ಬದಲಿಗೆ ಸರ್ಕಾರದ ಖರೀದಿಯನ್ನೇ ಕ್ರಮೇಣವಾಗಿ ಕಡಿಮೆ ಮಾಡಲು ಹಾಗೂ ಖಾಸಗೀಕರಿಸಲು ಮುಂದಾಗಿದೆ. ಉದಾಹರಣೆಗೆ ಮೋದಿ ಸರ್ಕಾರವು 2016 ರಲ್ಲಿ ಆಹಾರ ನಿಗಮದ ಪುನರ್ರಚನೆ ಹಾಗೂ, ಸಾರ್ವಜನಿಕ ಆಹಾರ ಖರೀದಿ ವ್ಯವಸ್ಥೆಯ ಖಾಸಗೀಕರಣದ ಬಗ್ಗೆ ಶಿಫಾರಸ್ಸು ನೀಡಿದ್ದ ಶಾಂತಕುಮಾರ್ ವರದಿಯನ್ನು ಕೇಂದ್ರ ಸರ್ಕಾರ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಈ ಶಿಫಾರಸ್ಸುಗಳ ಅನ್ವಯ ಈಗಾಗಲೇ ಅಹಾರ ನಿಗಮದ ಗೋಡೌನುಗಳನ್ನು ಆದಾನಿ ಲಾಜಿಸ್ಟಿಕ್ಸ್ ಗೆ ವಹಿಸಲಾಗಿದೆ. ಅಂಥ ಒಂದು ಆದಾನಿ ಗೋಡೋನು ಕರ್ನಾಟಕದ ಮಾಲೂರಿನ ಬಳಿಯೂ ಎದ್ದು ನಿಂತಿದೆ. -ಅಷ್ಟು ಮಾತ್ರವಲ್ಲ. Strategy For New India@ 75 ಎಂಬ ನೀತಿ ಅಯೋಗದ ನೀಲನಕ್ಷ ಯೋಜನೆಯಲ್ಲಿ MSP ಲೆಕ್ಕಾಚಾರ ಹಾಕುತ್ತಿದ್ದ CACP ಆಯೋಗವನ್ನೇ ರದ್ದುಮಾಡಿ ಅದರ ಬದಲಿಗೆ ಕೃಷಿ ಮಂಡಳಿ ಸ್ಥಾಪಿಸಬೇಕು ಎಂದು ಸಲಹೆ ಮಾಡಲಾಗಿದೆ ..! ಹಾಗೆಯೇ ಕನಿಷ್ಠ ಬೆಂಬಲ ಬೆಲೆ (MSP)ವ್ಯವಸ್ಥೆಯನ್ನು ರದ್ದು ಮಾಡಿ ಮಂಡಿಗಳಲ್ಲಿ ಹರಾಜಿನ ಪ್ರಾರಂಭದ ಬೆಲೆಯಾಗಿ ಕನಿಷ್ಠ ಮೀಸಲು ಬೆಲೆ (MRP) ನಿಗದಿ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.. ಇದು MSP ವ್ಯವಸ್ಥೆಯ ಬಗ್ಗೆ ಮೋದಿ ಸರ್ಕಾರದ ನೀತಿ ಮತ್ತು ನಿಯತ್ತು! ಸುಳ್ಳು 5. APMC ರದ್ದಾಗುವುದಿಲ್ಲ "APMC ಗಳ ಕಾಲ ಮುಗಿಯಿತು. ಈಗ ಅವುಗಳ ಅಗತ್ಯವಿಲ್ಲ. ಬರಲಿರುವ ದಿನಗಳಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು APMC ಗಳನ್ನು ವಿಸರ್ಜಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಉತ್ತೇಜಿಸುತ್ತದೆ " - ನಿರ್ಮಲಾ ಸೀತಾರಾಮನ್ , ನವಂಬರ್ 12, 2019 ಇದು APMC ಗಳ ಬಗ್ಗೆ ಮೋದಿ ಸರ್ಕಾರದ ಅಸಲಿ ನೀತಿ ಮತ್ತು ನಿಯತ್ತು.. APMC ಗಳನ್ನು ರದ್ದುಮಾಡಲಾಗುವುದು ಎಂದು ಕಾಯಿದೆಯಲ್ಲಿಲ್ಲ. ಆದರೆ ಅದನ್ನು ನಿಧಾನವಾಗಿ ಮೂಲೆಗುಂಪು ಮಾಡಿ ಅಥವಾ ನಿಧಾನವಾಗಿ ಸಾಯುವಂತೆ ಮಾಡಿ ಖಾಸಗಿ ಮಂಡಿಗಳಿಗೆ ಸಂಪೂರ್ಣ ಅವಕಾಶ ಕಲ್ಪಿಸುವಂಥ ನೀತಿಯನ್ನು ಮೋದಿ ಸರ್ಕಾರ ಜಾರಿಗೆ ತಂದಿರುವ Farmaers Trade And Commerce (Facilitation and Promotion ) Act-2020 ಯಲ್ಲಿ ಸ್ಪಷ್ಟವಾಗಿ ಘೋಶಿಸಲಾಗಿದೆ. ಉದಾಹರಣೆಗೆ ಈಗಿರುವ APMC ಗಳಲ್ಲಿ ವ್ಯಾಪಾರಿ ಹಾಗೂ ರೈತರಿಬ್ಬರೂ ತಾವು ಮಾಡುವ ವ್ಯವಹಾರಗಳಿಗೆ ಶುಲ್ಕವನ್ನು ನೀಡಬೇಕು. ಆದರೆ ಹೊಸ ಕಾಯಿದೆಯ ಸೆಕ್ಷನ್ 6 ರ ಪ್ರಕಾರ ಖಾಸಗಿ ಮಂಡಿಗಳಲ್ಲಿ ಶುಲ್ಕರಹಿತ ವ್ಯಾಪಾರಕ್ಕೆ ವಕಾಶ ನೀಡಲಾಗಿದೆ. ಇದರಿಂದಲೂ ಸಹಜವಾಗಿ ಹೊಸ ಖಾಸಗಿ ಮಂಡಿಗಳೇ ಆಕರ್ಷಕವಾಗಿ ಕಂಡು ಹಳೇ ಮಂಡಿಗಳು ನಾಶವಾಗುತ್ತವೆ. ಇದನ್ನು ಮಾತುಕತೆಯ ಸಂದರ್ಭದಲ್ಲಿ ಸರ್ಕಾರವು ಕೂಡಾ ಒಪ್ಪಿಕೊಂಡಿತ್ತು!! ಸುಳ್ಳು- 6- ರೈತರು ಎಲ್ಲಿ ಉತ್ತಮ ಬೆಲೆ ಸಿಗುತ್ತದೋ ಅಲ್ಲಿ ಮಾರಾಟ ಮಾಡಬಹುದು -ಈ ಹೊಸ ಕಾಯಿದೆ ಬರುವ ಮುಂಚೆಯೂ ದೇಶದಲ್ಲಿ ಎಲ್ಲಿ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೋ ಅಲ್ಲಿ ತಮ್ಮ ಸರಕನ್ನು ಮಾರಲು ಅನುವು ಮಾಡಿಕೊಡುವಂಥ e-NAM (electronic- National Agricultural Market) ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು,. ಆದರೆ ಈ ಸೌಲಭ್ಯವು ರೈತರಿಗೆ ದಕ್ಕಬೇಕಿದ್ದಲ್ಲಿ ದೇಶಾದ್ಯಂತ ಇರುವ ಎಲ್ಲಾ ಕೃಷಿ ಮಾರುಕಟ್ಟೆಗಳಿಗೆ ಮೂಲಭೂತ ಹಾಗೂ ಡಿಜಿಟಲ್ ಸೌಕರ್ಯಗಳನ್ನು ಹೆಚ್ಚಿಸಬೇಕಿತ್ತು. ಆಗಲೂ ಅದರ ಸೌಲಭ್ಯವನ್ನು ಪಡೆದುಕೊಳ್ಳುವ ಸಾಮರ್ಥ್ಯ ದೊಡ್ಡ ರೈತರಿಗೆ ಹಾಗೂ ಕೃಷಿ ವ್ಯಾಪಾರಿಗಳಿಗೆ ಮಾತ್ರ ಸಿಗುತ್ತಿತ್ತು. ಹೀಗಾಗಿಯೇ ಈ ದೇಶದಲ್ಲಿ 14 ಕೋಟಿ ರೈತ ಕುಟುಂಬಗಳಿದ್ದರೆ, 2019ರ ವೇಳೆಗೆ e-NAM ನಲ್ಲಿ ಒಂದು ಕೋಟಿ ರೈತರೂ ನೊಂದಾಯಿಸಿಕೊಳ್ಳಲಿಲ್ಲ. ನೊಂದಾಯಿಸಿಕೊಂಡವರಲ್ಲಿಯೂ ಶೇ. 90 ರಷ್ಟು ಕೃಷಿ ವ್ಯಾಪಾರಿಗಳೇ ವಿನಾ ರೈತರಲ್ಲ. ಸಣ್ಣಪುಟ್ಟ ರೈತರಿಗೆ ತಾವು ಬೆಳೆಯುವ ಕಡೆ ಖಾತರಿ ಮತ್ತು ಲಾಭದಾಯಕ ಬೆಲೆಯನ್ನು ಕೊಟ್ಟರೆ ಲಾಭವಾಗುವುದೇ ವಿನಾ ದೂರದ ದೆಹಲಿಯಲ್ಲಿ ಉತ್ತಮ ಬೆಲೆ ಸಿಗುತ್ತಿದ್ದರೂ ಅಲ್ಲಿಯತನಕ ತನ್ನ ಸರಕುಗಳನ್ನು ಸಾಗಿಸಿ, ಮಾರುವ ಚೈತನ್ಯ ರೈತನಿಗಿರುವುದಿಲ್ಲ. ಕಾಯಿದೆಯ ಲಾಭವನ್ನು ವ್ಯಾಪಾರಿಗಳು ಪಡೆದುಕೊಳ್ಳುತ್ತಾರೆ. ಅಷ್ಟೆ. ಈ ಹೊಸ ಕಾಯಿದೆಯ ಸೆಕ್ಷನ್ 4 (i) ಸಹ ಕೃಷಿ ವ್ಯಾಪಾರಿಗಳು ರಾಜ್ಯದೊಳಗೆ ಮತ್ತು ಅಂತರರಾಜ್ಯ ಮಟ್ಟದಲ್ಲಿ ರೈತನಿಂದ ಕೃಷಿ ಸರಕಿನ ವ್ಯವಹಾರ ಮಾಡಬಹುದು ಎಂದು ಸ್ಪಷ್ಟಪಡಿಸುತ್ತದೆ. ಹೀಗೆ ಇದು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ದೊಡ್ಡ ಕಾರ್ಪೊರೇಟ್ ಕೃಷಿ ವ್ಯಾಪಾರಿಯನ್ನು ಸಬಲೀಕರಿಸುವ ಕಾಯಿದೆಯೇ ವಿನಾ ರೈತನಿಗೆ ಎಲ್ಲಿ ಉತ್ತಮ ಬೆಲೆ ಸಿಗುತ್ತದೋ ಅಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುವ ಕಾಯಿದೆಯಲ್ಲ. ಸುಳ್ಳು- 7- ಖಾಸಗಿ ಮಂಡಿಗಳಲ್ಲಿ ರೈತರು ಬೆಲೆ ಚೌಕಾಸಿ ಮಾಡಬಹುದು ಹಾಗೆ ನೋಡಿದರೆ, ರೈತರು ಹಾಲಿ ಇರುವ APMC ವ್ಯವಸ್ಥೆಯಲ್ಲೂ ಹೆಚ್ಚು ಬೆಲೆ ಕೇಳಬಹುದು. ಆದರೆ ಯಾರೂ ಕೊಡುವುದಿಲ್ಲ ಅಷ್ಟೆ. . ಏಕೆಂದರೆ ಅದನ್ನು ಹರಾಜಿನಲ್ಲಿ ಕೊಳ್ಳುವ ವ್ಯಾಪಾರಿಗಳು ತಮ್ಮ ನಡುವೆ ಒಪ್ಪಂದ ಮಾಡಿಕೊಂಡು ರೈತನಿಗೆ ಬೆಲೆ ವಂಚನೆ ಮಾಡುತ್ತಾರೆ. ವಾಸ್ತವದಲ್ಲಿ ಇದೇ ಖಾಸಗಿ ಮಂಡಿಯನ್ನು ಸ್ಥಾಪಿಸಲು ಸರ್ಕಾರ ಕೊಡುತ್ತಿರುವ ಕಾರಣವೂ ಆಗಿದೆ. ಆದರೆ APMC ರೀತಿಯಲ್ಲಿಯೇ, ಈ ಹೊಸ ಕಾಯಿದೆಯಡಿ ಸ್ಥಾಪಿತವಾಗುವ ಖಾಸಗಿ ಮಂಡಿಯಲ್ಲಿ ವ್ಯಾಪಾರಿಗಳು ಅಥವಾ ಮಂಡಿಗಳು ತಮ್ಮ ನಡುವೆ ಹೀಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ರೈತನನ್ನು APMC ರೀತಿಯಲ್ಲಿಯೇ ಶೋಷಿಸಿದರೇ? ಅದನ್ನು ತಡೆಯುವ ಯಾವುದೇ ಕಾನೂನು ರಕ್ಷಣೆ ಈ ಕಾಯಿದೆಯಲ್ಲಿಲ್ಲ. ಈ ಖಾಸಗಿ ಮಂಡಿಗಳಲ್ಲಿ MSP ಯೂ ಕಡ್ಡಾಯವಿಲ್ಲ. ಈ Farmaers Trade And Commerce (Facilitation and Promotion ) Act-2020 ನ ಪ್ರಕಾರ ವ್ಯಾಪಾರಕ್ಕೆ ಮುಂಚೆ ರೈತರು-ಮಂಡಿಯ ವ್ಯಾಪಾರಿಗಳ ಜೊತೆ ಬೆಲೆ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು. ಆದರೆ ಖಾಸಗಿ ಮಂಡಿಯಲ್ಲಿನ ವ್ಯಾಪಾರಿಗಳು ಅಥವಾ ಖಾಸಗಿಮಂಡಿಗಳು ತಮ್ಮ ನಡುವೆ ಕಾರ್ಟೆಲ್ ಮಾಡಿಕೊಂಡು ರೈತರನ್ನು ವಂಚಿಸದಂತೆ ತಡೆಯುವ ಯಾವುದೇ ರಕ್ಷಣೆ ಈ ಕಾಯಿದೆಯಲ್ಲಿಲ್ಲ. ಒಪ್ಪಂದ ಮಾಡಿಕೊಂಡ ದರವನ್ನೂ ಕೊಡದೇ ಉಲ್ಲಂಘನೆಯಾದರೆ ಮಾತ್ರ ಈ ಹೊಸ ಕಾಯಿದೆಯ ಸೆಕ್ಷನ್ 8 ರ ಪ್ರಕಾರ ದೂರನ್ನು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಬಳಿ ಕೊಂಡೊಯ್ಯಬಹುದು. ಅಷ್ಟೆ. ಸೆಕ್ಷನ್ 15 ರ ಪ್ರಕಾರ ನ್ಯಾಯಾಲಯಕ್ಕೆ ದೂರನ್ನು ಒಯ್ಯುವ ಹಕ್ಕನ್ನೂ ರೈತರಿಂದ ಕಸಿದುಕೊಳ್ಳಲಾಗಿದೆ. ಹೀಗಾಗಿ ಈ ಕಾಯಿದೆಯು ಬೆಲೆ ಚೌಕಾಸಿ ಮಾಡುವ ಯಾವ ಹೊಸ ತಾಕತ್ತನ್ನೂ ರೈತರಿಗೆ ಕೊಡುವುದಿಲ್ಲ. ಅಥವಾ ದುರ್ಬಲ ರೈತನಿಗೆ ಕನಿಷ್ಟ ಬೆಲೆಯನ್ನೂ ಖಾತರಿ ಮಾಡುವ ಅಂಶವೂ ಈ ಕಾಯಿದೆಯಲ್ಲಿಲ್ಲ. ಬದಲಿಗೆ ವ್ಯಾಪಾರಿಗಳ ಅಧಿಕಾರವನ್ನು ಹಾಗೂ ವಂಚನೆಯನ್ನು ಶಾಸನಬದ್ಧಗೊಳಿಸಲಾಗಿದೆ. ಅಷ್ಟೆ. ಸುಳ್ಳು-8- ಕಾಂಟ್ಯಾಕ್ಟ್ ಫಾರ್ಮಿಂಗ್ ನಿಂದಾಗಿ ಸಣ್ಣ ರೈತರೂ ಬೆಲೆ ಏರಿಳಿತಗಳಿಂದ ಬಚಾವಾಗುತ್ತಾರೆ ಈ ದೇಶದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ವ್ಯವಸ್ಥೆಯಲ್ಲಿ ಸಣ್ಣ ರೈತರು ಎದುರಿಸಿರುವ ಆಘಾತಕಾರಿ ಪರಿಣಾಮಗಳನ್ನು ಅಧ್ಯಯನ ಮಾಡಿರುವ ವಿದ್ವಾಂಸರ ವರದಿಯ ಪ್ರಕಾರ ಮೊದಲನೆ ಬಾರಿ ಕಾಂಟ್ರಾಕ್ಟ್ ಫಾರ್ಮಿಂಗ್ ಗೆ ಭೂಮಿ ಕೊಟ್ಟಿರುವರಲ್ಲಿ ಶೇ. 95ರಷ್ಟು ಭಾಗ ಎರಡನೇ ಬಾರಿ ಕಾಂಟ್ರಾಕ್ಟ್ ಗೆ ಒಪ್ಪಿಕೊಂಡಿಲ್ಲ. ಅದಕ್ಕೆ ಮೂರು ಕಾರಣಗಳನ್ನು ಆ ವರದಿ ಪಟ್ಟಿ ಮಾಡುತ್ತದೆ. ಮೊದಲನೆಯದು ಒಪ್ಪಂದದಂತೆ ಹಣವನ್ನು ಸಮಯಕ್ಕೆ ಸರಿಯಾಗಿ ಸಂದಾಯ ಮಾಡದಿರುವುದು. ಎರಡನೆಯದಾಗಿ ಕಂಪೆನಿಯ ಪರವಾಗಿರುವ ಏಕಪಕ್ಷೀಯ ಒಪಂದಗಳು ಮತ್ತು ಅತಿ ಮುಖ್ಯವಾಗಿ ಗುಣಮಟ್ಟದ ನೆಪದಲ್ಲಿ ಬೆಳೆದ ಬೆಳೆಯನ್ನು ಕೊಯಿಲಿನ ನಂತರ ಸಾರಾ ಸಗಟು ನಿರಾಕರಿಸುತ್ತಿರುವುದು ಅಂದರೆ ಬೆಲೆಗಳಲ್ಲಿ ಏರಿಳಿತವಿರಲಿ, ಬೆಲೆಯನ್ನೇ ಕೊಡದಿರುವಂಥಾ ಮೋಸ.. ಆದರೆ, ರೈತರ ಈ ದುರಂತ ಅನುಭವಗಳಿಂದ ಯಾವ ಪಾಠವನ್ನು ಕಲಿಯದೆ ಮೋದಿ ಸರ್ಕಾರ ಸಂಪೂರ್ಣವಾಗಿ ಕಾರ್ಪೊರೇಟ್ ಪರವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಕಾಯಿದೆಯನ್ನು ಜಾರಿ ಮಾಡಿದೆ. ಉದಾಹರಣೆಗೆ ಮೋದಿ ಸರ್ಕಾರದ ಈ Farmers (Protection and Empowerment) Agreement on Farm Service and Price Assurance Act-2020 ನ ೪ ನೇ ಸೆಕ್ಷನ್ನಿನ ೨ನೇ ಸಬ್ ಕ್ಲಾಸಿನ ಪ್ರಕಾರ : ರೈತಾಪಿ ಹಾಗು ಪ್ರಾಯೋಜಕರು ಬೆಳೆಯ ಗುಣಮಟ್ಟದ ಬಗ್ಗೆ ಮಾಡಿಕೊಳ್ಳುವ ಒಪ್ಪಂದವು ಸರ್ಕಾರ ಅಥವಾ ಸರ್ಕಾರದಿಂದ ಗುರುತಿಸಲ್ಪಟ್ಟ "ಸ್ವತಂತ್ರ" ಏಜೆನ್ಸಿಯು ನಿಗದಿ ಮಾಡುವ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಬದ್ಧವಾಗಿರಬೇಕು .. ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2 ರ ಪ್ರಕಾರ “ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು..” ತಾತ್ಪರ್ಯವೇನು ? ಒಂದು ವೇಳೆ ಸರಕು ಸ್ವೀಕರಿಸುವ ಮುನ್ನ ಗುಣಮಟ್ಟ ಪರಿಶೀಲಿಸಿದಾಗ ಒಪ್ಪಂದದ ಗುಣಮಟ್ಟಕ್ಕೆ ತಕ್ಕ ಹಾಗೆ ಸರಕಿಲ್ಲ ಎಂದರೆ ಡೆಲಿವರಿಯನ್ನು ತಿರಸ್ಕರಿಸಬಹುದು... ಹೀಗಾಗಿ ಬೆಲೆಯ ಏರಿಳಿತಗಳಿಂದ ಬಚಾವಾಗುವುದಿರಲಿ ಮೋದಿಯವರ ಕಾಯಿದೆಯಿಂದ ಸಣ್ಣ ರೈತರು ಸಂಪೂರ್ಣವಾಗಿ ಬರ್ಬಾದಾಗಲಿದ್ದಾರೆ. ಸುಳ್ಳು-9. ಯಾವಾಗ ಬೇಕಾದರೂ ರೈತರು ಈ ಒಪ್ಪಂದದಿಂದ ಹೊರಬರಬಹುದು -ರೈತರು ಕಾಂಟ್ರಾಕ್ಟ್ ಒಪ್ಪಂದ ಮಾಡಿಕೊಂಡ ನಂತರ ತಮಗೆ ಬೇಡವೆನಿಸಿದಾಗ ಈ ಒಪ್ಪಂದದಿಂದ ಹೊರಬರಬಹುದು ಎಂಬ ಮತ್ತೊಂದು ಹಸಿಸುಳ್ಳನ್ನು ಮೋದಿ ಸರ್ಕಾರ ಬಿತ್ತರಿಸುತ್ತಿದೆ. ಸದರಿ ಕಾಯಿದೆಯ ಸೆಕ್ಷನ್ 11 ಹೀಗೆ ಹೇಳುತ್ತದೆ: 11. At any time after entering into a farming agreement, the parties to such agreement may, with mutual consent, alter or terminate such agreement for any reasonable cause. ಅಂದರೆ ರೈತರಾಗಲೀ, ಕಂಪನಿಯಾಗಲಿ ಒಪ್ಪಂದದಿಂದ ಹೊರ ಹೋಗಬೇಕೆಂದರೆ ಮತ್ತೊಬ್ಬರು ಒಪ್ಪಿಗೆ ಕೊಡಬೇಕು ಮತ್ತು ಸೂಕ್ತ ಕಾರಣವಿರಬೇಕು. ಅಂದರೆ ಕಂಪನಿಯ ಒಪ್ಪಿಗೆ ಇಲ್ಲದೆ ರೈತರು ತಮಗೆ ಬೇಕೆನಿಸಿದಾಗ ಒಪ್ಪಂದದಿಂದ ಹೊರಹೋಗದಂತೆ ಕಾಯಿದೆಯ ಜಾಲವನ್ನು ಹೆಣೆಯಲಾಗಿದೆ. ಈ ವಿಷಯದ ಬಗ್ಗೆಯೂ ಮೋದಿ ಸರ್ಕಾರ ಹಸಿ ಸುಳ್ಳನ್ನು ಪ್ರಚಾರ ಮಾಡುತ್ತಿದೆ. ಸುಳ್ಳು-10. ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ ಬಗ್ಗೆ ಮೌನ...??? -ಇದಲ್ಲದೆ ಮೋದಿ ಸರ್ಕಾರ ಜಾರಿಗೆ ತಂದಿರುವ ಈ ಸರಣಿಯ ಮೂರನೇ ಕಾಯಿದೆಯಾದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯಿದೆಯು ಕಾರ್ಪೊರೇಟ್ ಕೃಷಿ ವ್ಯವಹಾರದ ಕಂಪನಿಗಳಿಗೆ ಈ ದೇಶದಲ್ಲಿ ರೈತರು ಬೆಳೆಯುವ ಬೆಳೆಗಳನ್ನು ಬೇಕಾದ ಬೆಲೆಗೆ ಕೊಳ್ಳುವ, ಸಂಗ್ರಹಿಸುವ , ದಾಸ್ತಾನು ಮಾಡುವ, ಸಾಗಾಟ ಮಾಡುವ ಹಾಗೂ ರಫ್ತು ಮಾಡುವ, ಕಾಳಸಂತೆ ಮಾಡುವ ಅವಕಾಶವನ್ನು ಒದಗಿಸುತ್ತದೆಂದು ದೇಶದ ಬಗೆಗಿನ ನೈಜ ಕಾಳಜಿಯಿಂದ ರೈತರು ವಿರೋಧಿಸುತ್ತಿದ್ದರು. ಅದರ ಬಗ್ಗೆ ಮೋದಿ ಸರ್ಕಾರ ಪ್ರಚಾರದಲ್ಲಿ ಮೌನವಾಗಿದ್ದುಕೊಂಡು ಮೋಸ ಮಾಡುತ್ತಿದೆ. ಇದು ರೈತರ ಹಿತಾಸಕ್ತಿಯ ಬಗ್ಗೆ ಮೋದಿ ಸರ್ಕಾರದ ನೀತಿ ಮತ್ತು ನಿಯತ್ತು! __________________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement