ರೈತಪರ ಪತ್ರಕರ್ತರ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರವೀಶ್‌ಕುಮಾರ್ ಬರೆದಿರುವ ಪತ್ರ
ರೈತಪರ ಪತ್ರಕರ್ತರ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರವೀಶ್‌ಕುಮಾರ್ ಬರೆದಿರುವ ಪತ್ರ
Advertisement
ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟ ಇದೀಗ 68ದಿನಗಳನ್ನು ಮುಗಿಸಿದೆ. ಈ ಹೋರಾಟ ದಿನದಿಂದ ದಿನಕ್ಕೆ ದೇಶದಾದ್ಯಂತ ಜನಸಾಮಾನ್ಯರಲ್ಲಿ ಆಕ್ರೋಶ ಹೆಚ್ಚಿಸುತ್ತಿರುವಂತೆಯೇ ಇದೀಗ ದೇಶದಲ್ಲಿ ರೈತಪರ ವರದಿ ಮಾಡುತ್ತಿರುವ ಪತ್ರಕರ್ತರ ವಿರುದ್ಧ ಎಫ್ಐಆರ್, ಬಂಧನ ಹೆಚ್ಚುತ್ತಿರುವ ಕುರಿತು ವ್ಯಾಪಕ ಕಳವಳ ಹಾಗೂ ಪ್ರತಿಭಟನೆ ವ್ಯಕ್ತವಾಗುತ್ತಿದೆ. 'ನಕಲಿ ರೈತ ಹೋರಾಟಗಾರರ ಮೇಲೆ ಸ್ಥಳೀಯರ ದಾಳಿ' ಎಂದು ಎಂಜಲು ಕಾಸಿ ಮೋಧ್ಯಮಗಳು ಪ್ರತಿಪಾದಿಸಿ ವರದಿ ಮಾಡಿದ್ದ ರೈತರ ಪ್ರತಿಭಟನೆಯ ಮೇಲಿನ ಕಲ್ಲೆಸೆತ ಪ್ರಕರಣವನ್ನು 'ರೈತ ಆಂದೋಲನದ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಬಿಜೆಪಿಯವರಿದ್ದರು ಹಾಗು ಅವರಿಗೆ ಪೊಲೀಸರು ಕೈಕಟ್ಟಿ ನೋಡುತ್ತಾ ನಿಲ್ಲುವ ಮೂಲಕ ಬೆಂಬಲಿಸಿದ್ದರು' ಎಂದು ಫೇಸ್ ಬುಕ್ ಲೈವ್ ಮಾಡಿದ್ದ ಪತ್ರಕರ್ತ ಮನದೀಪ್ ಪೂನಿಯಾ ಅವರನ್ನು ಬಂಧಿಸಿದ ಹಾಗು ರಾಜದೀಪ್ ಸರ್ದೇಸಾಯಿ, ಸಿದ್ಧಾರ್ಥ್ ವರದರಾಜನ್ ಸಹಿತ ಹಿರಿಯ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಿಗೆ ರಾಜಧಾನಿ ದಿಲ್ಲಿಯಲ್ಲಿ ಪತ್ರಕರ್ತರು ಬೀದಿಗಿಳಿದಿದ್ದಾರೆ. ಈ ಬಗ್ಗೆ ಈಗ ಟ್ವೀಟ್ ಹಾಗು ಫೇಸ್ ಬುಕ್ ಪೋಸ್ಟ್ ಹಾಕಿರುವ ರವೀಶ್ ಕುಮಾರ್ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಹೀಗೇಯೇ ಮುಂದುವರಿದರೆ ಇನ್ನು ಮುಂದೆ ಜೈಲುಗಳಿಂದಲೇ ಪತ್ರಿಕೆ ಪ್ರಕಟಿಸಬೇಕಾಗಬಹುದು ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಮೋದಿ ವಿರುದ್ಧವೇ ರವೀಶ್ ಕುಮಾರ್ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಮನದೀಪ್ ಅವರನ್ನು ಬಂಧಿಸಿಡಲಾದ ಜೈಲಿನ ಜೈಲರ್ ಗೆ ಬರೆದ ಪತ್ರದ ರೂಪದಲ್ಲಿರುವ ರವೀಶ್ ಕುಮಾರ್ ಅವರ ಫೇಸ್ ಬುಕ್ ಪೋಸ್ಟ್ ನ ಅನುವಾದ ಹಾಗೂ ಲಿಂಕ್ ಇಲ್ಲಿದೆ:
ಮನದೀಪ್ ಪೂನಿಯಾ ಅವರ ಬಂಧನದಿಂದ ನನಗೆ ಆಘಾತವಾಗಿದೆ. ಹತ್ರಸ್ ಪ್ರಕರಣದ ಬಳಿಕ ಬಂಧಿತ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಯಾವುದೇ ಸುದ್ದಿ ಇಲ್ಲ. ಕಾನ್ಪುರದಲ್ಲಿ ಅಮಿತ್ ಸಿಂಗ್ ಅವರ ಮೇಲೆ ಪ್ರಕರಣ ದಾಖಲಾಗಿದೆ. ರಾಜದೀಪ್ ಸರ್ದೇಸಾಯಿ ಮತ್ತು ಸಿದ್ಧಾರ್ಥ್ ವರದರಾಜನ್ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣ ಇಲ್ಲವಾಗುತ್ತದೆಯೇ ? ಇವತ್ತು ನಾನು ಟ್ವೀಟ್ ಮಾಡಿದ್ದೇನೆ. ಆಗಸ್ಟ್ 2015 ರ ಬಳಿಕ ಇದು ನನ್ನ ಮೊದಲ ಟ್ವೀಟ್. ಅದೇ ಟ್ವೀಟ್ ಜೊತೆಗಿನ ಪತ್ರವನ್ನು ಇಲ್ಲಿ ಕೊಟ್ಟಿದ್ದೇನೆ.
ಜೈಲಿನ ಗೋಡೆಗಳು ಸ್ವತಂತ್ರ ಧ್ವನಿಗಳಿಗಿಂತ ಎತ್ತರವಾಗಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಿ ಅದಕ್ಕೆ ತಡೆಗೋಡೆ ಕಟ್ಟಲು ಹೊರಡುವವರು ನಿಜವಾಗಿ ದೇಶವನ್ನೇ ಜೈಲಾಗಿ ಪರಿವರ್ತಿಸ ಬಯಸಿದ್ದಾರೆ.
ಜೈಲರ್ ಸಾಹೇಬರೇ,
ಭಾರತದ ಇತಿಹಾಸ ಈ ಕರಾಳ ದಿನಗಳ ದಾಖಲೆಯನ್ನು ನಿಮ್ಮಲ್ಲಿ ಇಡುತ್ತಿದೆ. ಸ್ವತಂತ್ರ ಧ್ವನಿಗಳನ್ನು ಮತ್ತು ಪ್ರಶ್ನೆ ಕೇಳುವ ಪತ್ರಕರ್ತರನ್ನು 'ಅವರ' ಪೊಲೀಸರು ರಾತ್ರೋರಾತ್ರಿ ಬಂದು ಕರೆದುಕೊಂಡು ಹೋಗುತ್ತಿದ್ದಾರೆ. ಯಾವುದೋ ದೂರದೂರದ ಊರುಗಳಲ್ಲಿ FIR ದಾಖಲಿಸಲಾಗುತ್ತದೆ. ನಿಮ್ಮಲ್ಲಿ ಬರುತ್ತಿರುವ ಈ ಧ್ವನಿಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಪ್ರಶ್ನೆ ಕೇಳುವವನನ್ನು ಅವರ ಜೈಲುಗಳಲ್ಲಿ ಹಾಕಲಾಗಿದೆ ಎಂದು ನಿಮ್ಮ ಮಕ್ಕಳಿಗೆ ವಾಟ್ಸ್ ಆಪ್ ಚಾಟ್ ನಲ್ಲಿ ತಿಳಿಸಿ. ನನಗೆ ಇದನ್ನು ಹೇಳುವಾಗ ಬೇಸರವಾಗುತ್ತಿದೆ. ಆದರೆ ಇದೇ ನನ್ನ ಉದ್ಯೋಗ. ಜೈಲಿಗೆ ಕಳಿಸಿದವನು ಯಾರು, ಆತನ ಹೆಸರೇನು ಎಂದು ನಿಮ್ಮ ಮಕ್ಕಳೇ ಗೂಗಲ್ ಸರ್ಚ್ ಮಾಡಿಕೊಂಡು ತಿಳಿದುಕೊಳ್ಳುತ್ತಾರೆ. ನಿಮ್ಮ ದೊಡ್ಡ ದೊಡ್ಡ IAS, IPS ಅಧಿಕಾರಿಗಳು ತಮ್ಮ ಮಕ್ಕಳ ಕಣ್ಣಿಗೆ ಕಣ್ಣಿಟ್ಟು ಮಾತಾಡದೆ ನೀವು ಪತ್ರಕರ್ತರಾಗಬೇಡಿ ಎಂದು ಹೇಳುತ್ತಾರೆ. ನಾನಲ್ಲದಿದ್ದರೆ ಇಂತಿಂತಹ ಅಂಕಲ್ ನಿನ್ನನ್ನು ಜೈಲಿಗಟ್ಟುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳುತ್ತಾರೆ. ನೀನು ಗುಲಾಮನಾಗಿ ಜೈಲಿನ ಹೊರಗಿರು ಎಂದು ಮಕ್ಕಳಿಗೆ ಹೇಳುತ್ತಾರೆ ಅವರು.
ಗೋದಿ ಮೀಡಿಯಾದ ತಲೆಗೆ ಕಿರೀಟ ತೊಡಿಸುವುದನ್ನು ಮತ್ತು ಸ್ವತಂತ್ರ ಧ್ವನಿಗಳನ್ನು ಜೈಲಿಗೆ ಹಾಕುತ್ತಿರುವುದನ್ನು ಭಾರತ ಮಾತೆ ನೋಡುತ್ತಿದ್ದಾಳೆ. ಡಿಜಿಟಲ್ ಮೀಡಿಯಾದಲ್ಲಿ ಈ ಸ್ವತಂತ್ರ ಪತ್ರಕರ್ತರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ರೈತರ ಆಂದೋಲನದ ಸುದ್ದಿಗಳು ಯೂಟ್ಯೂಬ್ ಚಾನಲ್ ಹಾಗು ಫೇಸ್ ಬುಕ್ ಲೈವ್ ಗಳ ಮೂಲಕ ಗ್ರಾಮಗ್ರಾಮಗಳಿಗೆ ತಲುಪಿವೆ. ಇವುಗಳನ್ನು ದಮನಿಸಲು ಸಣ್ಣ ಪುಟ್ಟ ತಪ್ಪುಗಳಿಗೆ ಮತ್ತು ಭಿನ್ನ ಸುದ್ದಿಗಳಿಗೆ FIR ಹಾಕಲಾಗುತ್ತಿದೆ. ಸ್ವತಂತ್ರ ಧ್ವನಿ ಇರುವ ಈ ಡಿಜಿಟಲ್ ಮೀಡಿಯಾದ ಮೇಲೆ ಈಗ 'ಅತಿ ದೊಡ್ಡ ಜೈಲರ್' ನ ಕಣ್ಣಿದೆ. ಜೈಲರ್ ಸಾಹೇಬರೇ, ನಿಜವಾಗಿ ನೀವು ಅಸಲಿ ಜೈಲರ್ ಅಲ್ಲ. ಜೈಲರ್ ಬೇರೆ ಯಾರೋ ಒಬ್ಬರಿದ್ದಾರೆ. ಇದೇ ಉತ್ತಮ ಎಂದಾದರೆ ಈ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಜೈಲ್ ಬಂಧಿ ಯೋಜನೆಯನ್ನು ಘೋಷಿಸಲಿ. ಮನರೇಗಾ ಯೋಜನೆಯಡಿಯಲ್ಲಿ ಗ್ರಾಮಗ್ರಾಮಗಳಲ್ಲಿ ಜೈಲು ನಿರ್ಮಾಣವಾಗಲಿ, ಮಾತಾಡುವವರನ್ನು ಆ ಜೈಲುಗಳಿಗೆ ಹಾಕಿ ಬಿಡಲಿ. ಜೈಲು ನಿರ್ಮಾಣ ಮಾಡುವವನನ್ನೂ ಅದೇ ಜೈಲಿಗೆ ಹಾಕಲಿ. ಆ ಜೈಲುಗಳತ್ತ ಕಣ್ಣು ಹಾಯಿಸುವವರನ್ನೂ ಜೈಲಿಗೆ ಹಾಕಲಿ. ಪ್ರಧಾನ ಮಂತ್ರಿ ಜೈಲು ಬಂಧಿ ಯೋಜನೆ ಪ್ರಾರಂಭವಾಗಿದೆ, ಹಾಗಾಗಿ ಬಾಯಿ ಮುಚ್ಚಿಕೊಂಡಿರಿ ಎಂದು ಘೋಷಿಸಿ ಬಿಡಲಿ.
ಪ್ರಶ್ನೆ ಕೇಳುವ ಪತ್ರಕರ್ತರನ್ನೆಲ್ಲ ಜೈಲಿಗೆ ಹಾಕಿದರೆ ಎರಡು ವಿಷಯಗಳಿವೆ. ಇನ್ನು ಜೈಲುಗಳಿಂದಲೇ ಪತ್ರಿಕೆ ಬರಲಿವೆ ಮತ್ತು ಹೊರಗಿರುವ ಪತ್ರಿಕೆಗಳಲ್ಲಿ ಹೊಗಳು ಭಟ ಗುಲಾಮರುಗಳು ಬರೆಯುತ್ತಾರೆ. ಆದರೆ ವಿಶ್ವಗುರು ಭಾರತಕ್ಕೆ ಇದು ಒಳ್ಳೆಯ ಬೆಳವಣಿಗೆಯಲ್ಲ.
ಸಿದ್ಧಾರ್ಥ ವರದರಾಜನ್, ರಾಜದೀಪ್ ಸರ್ದೇಸಾಯಿ, ಅಮಿತ್ ಸಿಂಗ್ ಸಹಿತ ಎಲ್ಲ ಪತ್ರಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು ಎಂದು ನಾನು ವಿನಂತಿಸುತ್ತೇನೆ. ಮನದೀಪ್ ಪೂನಿಯಾರನ್ನು ಬಿಡುಗಡೆ ಮಾಡಿ. ಈ FIR ಆಟ ಬಂದಾಗಲಿ.
ನನ್ನ ಒಂದು ಮಾತನ್ನು ನೋಟ್ ಮಾಡಿಕೊಂಡು ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಈ ದೇಶದ ಜನರಿಗೆ ಈಗ ನಡೆಯುತ್ತಿರುವ ಆಟದ ಅರಿವಾದ ದಿನ ದೇಶದ ಪ್ರತಿ ಗ್ರಾಮದ ಎಲ್ಲ ಟ್ರಾಕ್ಟರು ಗಳು, ಬಸ್ಸುಗಳು, ಟ್ರಕ್ಕುಗಳು, ವಿಮಾನಗಳು, ಬುಲೆಟ್ ಟ್ರೇನ್ ಗಳು, ಮಂಡಿಗಳು, ಮಾಲ್ ಗಳು, ಪೇಟೆಗಳು ಕೊನೆಗೆ ಶೌಚಾಲಯಗಳಲ್ಲೂ ಒಂದು ಮಾತು ಜನರು ಬರೆದಿಡುತ್ತಾರೆ. " ಗುಲಾಮ ಮಾಧ್ಯಮಗಳು ಇರುವವರೆಗೆ ಯಾವುದೇ ದೇಶ ಸ್ವತಂತ್ರವಲ್ಲ. ಈ ಗೋದಿ ಮೀಡಿಯಾಗಳಿಂದ ಮುಕ್ತಿ ಸಿಕ್ಕಿದ ದಿನವೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ " ಎಂಬುದೇ ಆ ಮಾತು.
-ರವೀಶ್ ಕುಮಾರ್
ಅವರ ಫೇಸ್‌ಬುಕ್ ಪೊಸ್ಟ್ ನ ಲಿಂಕ್ ಇಲ್ಲಿದೆ: https://m.facebook.com/RavishKaPage/
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com