Advertisement

ಅವಿಭಜಿತ ದ.ಕ ಜಿಲ್ಲೆಯ ಸೌಹಾರ್ಧತೆ ನಾಶವಾಗಿದ್ದರೆ ಅದಕ್ಕೆ ಆರ್.ಎಸ್.ಎಸ್- ಬಿಜೆಪಿಯೇ ಕಾರಣ: ಸಿದ್ದರಾಮಯ್ಯ

Advertisement

ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿರುವಂತಹುದು. ಧರ್ಮದ ಹೆಸರಿನಲ್ಲಿ ಸಮಾಜ ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದ ವಿರುದ್ಧ ಉಡುಪಿ ಜಿಲ್ಲೆಯ ಕಾಪುವಿನ ಹೆಜಮಾಡಿಯಿಂದ ಬೈಂದೂರು ತನಕದ 108ಕಿ.ಮೀ ಪಾದಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದರು. ಈ ಪಾದಯಾತ್ರೆಯು 27ತಾರೀಕಿನಂದು ಬೈಂದೂರಿನಲ್ಲಿ ಸಮಾರೋಪಗೊಳ್ಳಲಿದೆ. ಒಂದು ಕಾಲದಲ್ಲಿ ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ ನಾಯಕರು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನ ಜನ ಪರಸ್ಪರ ಅಪನಂಬಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಆರ್.ಎಸ್.ಎಸ್ ಮತ್ತು ಬಿಜೆಪಿಯೇ ಕಾರಣ. ದೇಶಪ್ರೇಮದ ಪಾಠ ಮಾಡುವ ಕರ್ನಾಟಕದ ಬಿಜೆಪಿ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರ್.ಎಸ್‌.ಎಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ. ಹೆಡ್ಗೇವಾರ್, ಗೊಲ್ವಾಲ್ಕರ್ ಇವರೆಲ್ಲ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದದ್ದು ಯಾಕೆ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರು ಇವತ್ತು ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು 3 ಕೆ.ಜಿ ಗೆ ಇಳಿಸಿ ಬಡಜನರ ಊಟ ಕಸಿದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ನನಗಿದೆ. ಆಗ ಪ್ರತೀ ವ್ಯಕ್ತಿಗೆ ಉಚಿತವಾಗಿ ತಲಾ 10 ಕೆ.ಜಿ ಅಕ್ಕಿ ನೀಡುತ್ತೇವೆ. ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ. ಮಹಾತ್ಮ ಗಾಂಧಿಯವರಂತೆ ನಾನು ರಾಮಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧಿಯವರ ಆದರ್ಶ ಪುರುಷ ರಾಮ. ಗಾಂಧಿಯವರನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವೇ? ರಾಮಭಕ್ತರೆಂದರೆ ಕಾಯುವವರೋ? ಕೊಲ್ಲುವವರೋ? ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಇಂದು ದೇಶದ ಉತ್ಪಾದನಾ ವಲಯ ನಿಷ್ಕ್ರಿಯಗೊಂಡಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಬೀಡಿ ಉದ್ಯಮವನ್ನು ನಂಬಿಕೊಂಡಿದ್ದ 50,000 ಜನರ ಬದುಕು ಬೀದಿಪಾಲಾಗಿದೆ. ಇದರ ಪುನಶ್ಚೇತನಕ್ಕಾಗಿ ಯಡಿಯೂರಪ್ಪ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಸಚಿವರುಗಳಾದ ರಮಾನಾಥ್ ರೈ, ಅಭಯಚಂದ್ರ ಜೈನ್, ಯು.ಟಿ ಖಾದರ್, ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಮೊಹಿದಿನ್ ಬಾವಾ, ಜಿ.ಎ ಬಾವಾ,ಮಿಥುನ್ ರೈ, ರಾಜ್ಯ ಸಭಾ ಸದಸ್ಯ ನಸೀರ್ ಹುಸೇನ್, ಮಲ್ಯಾಡಿ ಶಿವರಾಮ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement