Advertisement

ಕೊರೋನ: ಮಾಡಿದ್ದೇನು, ಆದದ್ದೇನು?.. ಲಾಕ್ ಡೌನ್ ಬೇಕಿತ್ತೇ?

Advertisement

ಬರಹ: ಡಾ| ಶ್ರೀನಿವಾಸ ಕಕ್ಕಿಲ್ಲಾಯ., ಮಂಗಳೂರು. ( ಲೇಖಕರು ಸಾಮಾಜಿಕ ಚಿಂತಕರು ಹಾಗೂ ಜನಪ್ರಿಯ ವೈದ್ಯರು ) ಹೊಸ ಕೊರೋನ ಸೋಂಕಿನ ನಿಯಂತ್ರಣಕ್ಕೆಂದು, 21 ದಿನಗಳಲ್ಲಿ ಕೊರೋನ ಕುರುಕ್ಷೇತ್ರವನ್ನು ಗೆಲ್ಲಬಹುದೆಂದು, ದೇಶವನ್ನಿಡೀ ಲಾಕ್ ಡೌನ್ ಮಾಡಿ ಒಂದು ವರ್ಷವಾಯಿತು. ಈ ಹೊಸ ಕೊರೋನ ಸೋಂಕು ಏನು, ಅದರ ನಿಯಂತ್ರಣಕ್ಕೆ ಮಾಡಬೇಕಾಗಿದ್ದುದೇನು ಎಂಬ ಬಗ್ಗೆ ಕಳೆದ ಮಾರ್ಚ್ 2020ರಲ್ಲೇ ನಮಗೆ ತಿಳಿದಿದ್ದುದೇನು, ಅದರ ಆಧಾರದಲ್ಲಿ ಭಾರತದ ಸ್ಥಿತಿಗತಿಗಳಿಗೆ ಸೂಕ್ತವಾಗಿ ನಾವು ಮಾಡಬೇಕಾಗಿದ್ದುದೇನು, ನಾವು ಮಾಡಿದ್ದೇನು, ಅದರಿಂದ ಆದದ್ದೇನು ಎನ್ನುವುದನ್ನು ಪರಾಮರ್ಶಿಸಲು ಇಂದು ಸಕಾಲವಾಗಿದೆ. ಚೀನಾದಲ್ಲಿ ನವೆಂಬರ್-ಡಿಸೆಂಬರ್ 2019ರಲ್ಲಿ ಆರಂಭಗೊಂಡ ಈ ಸೋಂಕಿಗೆ ಕಾರಣವಾದ ಹೊಸ ವೈರಸಿನ ಸ್ವರೂಪ, ಅದರ ಆರ್‌ಎನ್‌ಎ, ಪ್ರೋಟೀನುಗಳು, ಅವು ದೇಹದೊಳಗೆ ವರ್ತಿಸುವ ಬಗೆ ಎಲ್ಲವೂ ಡಿಸೆಂಬರ್ 2019ರ ಅಂತ್ಯಕ್ಕೆ ಸ್ಪಷ್ಟವಾಗಿದ್ದವು. ಎರಡು ತಿಂಗಳಲ್ಲಿ ಅಲ್ಲಿ ಗುರುತಿಸ್ಪಟ್ಟಿದ್ದ 70000ಕ್ಕೂ ಹೆಚ್ಚು ಸೋಂಕಿತರ ವಿವರಗಳ ಆಧಾರದಲ್ಲಿ ಈ ಸೋಂಕು ಹರಡುವ ಬಗೆ, ರೋಗದ ತೀವ್ರತೆ, ಯಾರಲ್ಲಿ ಏನುಂಟಾಗುತ್ತದೆ ಎಂಬ ವಿವರಗಳು ಫೆಬ್ರವರಿ 2020ರ ಕೊನೆಗೆ ಪ್ರಕಟವಾಗಿದ್ದವು. ಈ ಹೊಸ ವೈರಸನ್ನು ಪತ್ತೆ ಹಚ್ಚುವುದಕ್ಕೆ ಪಿಸಿಆರ್ ಪರೀಕ್ಷೆಯು ಭಾರತವೂ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಕೂಡಲೇ ಲಭ್ಯವಾಗಿತ್ತು. ಈ ಹೊಸ ವೈರಸ್‌ಗೆ ಎದುರಾಗಿ ಲಸಿಕೆಗಳ ತಯಾರಿಯೂ ಆರಂಭಗೊಂಡಿತ್ತು. ಈ ವಿವರಗಳೆಲ್ಲವೂ ಆಧುನಿಕ ಮಾಹಿತಿ ತಂತ್ರಜ್ಞಾನದ ಬಲದಿಂದ ವಿಶ್ವದ ಎಲ್ಲಾ ಮೂಲೆಗಳಲ್ಲಿ ಆಗಿಂದಾಗ್ಗೆ ಉಚಿತವಾಗಿ ಲಭ್ಯವಾಗಿತ್ತು. ಅಮೆರಿಕದ ಸ್ಟಾನ್‌ಫೋರ್ಡ್ ವಿವಿಯ ಡಾ. ಜಾನ್ ಇಯೋನಿಡಿಸ್, ಯೇಲ್ ವಿವಿಯ ಡಾ. ಡೇವಿಡ್ ಕಾಟ್ಜ್, ನಮ್ಮ ದೇಶದ ಅತಿ ಹಿರಿಯ ವೈರಾಣು ತಜ್ಞ ಡಾ. ಜೇಕಬ್ ಜಾನ್, ರೋಗ ಪ್ರಸರಣ ತಜ್ಞ ಡಾ. ಜಯಪ್ರಕಾಶ್ ಮುಳಿಯಿಲ್, ಐಸಿಎಂಆರ್ ತಜ್ಞರು ಮುಂತಾದ ಅನೇಕ ವೈದ್ಯ ವಿಜ್ಞಾನಿಗಳು ವ್ಯಕ್ತ ಪಡಿಸಿದ್ದ ಅಭಿಪ್ರಾಯಗಳೂ, ಸಲಹೆಗಳೂ ಆಗಲೇ ಲಭ್ಯವಾಗಿದ್ದವು. ಇವೆಲ್ಲವುಗಳ ಆಧಾರದಲ್ಲಿ ನಾವೇನು ಮಾಡಬಹುದಿತ್ತು, ಆದರೆ ಆದದ್ದೇನು ಎನ್ನುವುದನ್ನು ಅವಲೋಕಿಸೋಣ. ನಿಯಂತ್ರಣಕ್ಕೆ ಲಾಕ್ ಡೌನ್ ಬೇಕಿತ್ತೇ? ಮಾರ್ಚ್ 2020ರಲ್ಲಿ ಗೊತ್ತಿದ್ದದ್ದೇನು? ಹೊಸ ಕೊರೋನ ಸೋಂಕು ಒಬ್ಬರಿಂದೊಬ್ಬರಿಗೆ ಹತ್ತಿರದಲ್ಲಿದ್ದು ಮಾತಾಡಿದಾಗ, ಕೆಮ್ಮಿದಾಗ, ಸೀನಿದಾಗ ಹರಡುತ್ತದೆ; 30 ವರ್ಷಕ್ಕಿಂತ ಕಿರಿಯರಲ್ಲಿ ಮತ್ತು ಆರೋಗ್ಯವಂತರಲ್ಲಿ, ಒಟ್ಟಾರೆ 80-90% ಜನರಲ್ಲಿ ಯಾವುದೇ ಸಮಸ್ಯೆಗಳನ್ನುಂಟು ಮಾಡದೆ ತಾನಾಗಿ ವಾಸಿಯಾಗುತ್ತದೆ; ಹಿರಿವಯಸ್ಕರು ಮತ್ತು ಗಂಭೀರವಾದ ಕಾಯಿಲೆಗಳಿದ್ದವರಿಗೆ ಸೋಂಕು ತಗಲಿದರೆ ಅವರಲ್ಲಿ 20% ದಷ್ಟು ಸೋಂಕಿತರಿಗೆ ಸಮಸ್ಯೆಗಳಾಗಬಹುದು, ಹಾಗೆ ಸಮಸ್ಯೆಗಳಾದವರಲ್ಲಿ 30% ಮಂದಿಗೆ ತೀವ್ರ ನಿಗಾ ಬೇಕಾಗಬಹುದು; ಚೀನಾದಲ್ಲಿ ವುಹಾನ್ ನಗರದಲ್ಲಿ ಸೋಂಕನ್ನು ನಿಯಂತ್ರಿಸಲು ಪ್ರತೀ ಮನೆಗೂ ಎಲ್ಲಾ ಆಹಾರ-ಸೌಲಭ್ಯಗಳನ್ನು ಒದಗಿಸಿ ಲಾಕ್ ಡೌನ್ ಮಾಡಲಾಯಿತು; ಇಟೆಲಿ, ನ್ಯೂಯಾರ್ಕ್, ಇಂಗ್ಲೆಂಡ್‌ಗಳಲ್ಲೂ ಹಿರಿವಯಸ್ಕರೇ ಹೆಚ್ಚು ಸಮಸ್ಯೆಗೀಡಾದರು, ಅವರ ಸಂಖ್ಯೆಯು ಬಹಳಷ್ಟಿದ್ದುದರಿಂದ ಆಸ್ಪತ್ರೆಗಳಲ್ಲಿ ಸ್ಥಳವಿಲ್ಲದಾಯಿತು; ಡಾ. ಜಾನ್ ಅಯೋನಿಡಿಸ್ ಅವರಂಥ ತಜ್ಞರು ಒಟ್ಟು ಕೊರೊನ ಸೋಂಕಿತರಲ್ಲಿ ಸಾವಿನ ಪ್ರಮಾಣವು 0.05-0.5% ಇರಬಹುದು, ಆದ್ದರಿಂದ ಲಾಕ್ ಡೌನ್‌ನಂತಹ ಅತಿರೇಖಗಳ ಅಗತ್ಯವಿಲ್ಲ ಎಂದದ್ದು; ಭಾರತದಲ್ಲಿ ಹಿರಿಯರ ಸಂಖ್ಯೆ ಕಡಿಮೆಯಿರುವುದು, ಹೆಚ್ಚಿನ ಜನಸಾಂದ್ರತೆಯಿಂದ ಆಗಾಗ ಸೋಂಕುಗಳನ್ನೆದುರಿಸಿ ಭಾರತೀಯರ ರೋಗ ರಕ್ಷಣಾ ವ್ಯವಸ್ಥೆಯು ಚುರುಕಾಗಿರುವುದು ಮತ್ತು ಇತರ ಸಾಧಕ-ಬಾಧಕಗಳ ತುಲನೆಯಿಂದ ಭಾರತಕ್ಕೆ ಲಾಕ್ ಡೌನ್ ಸರಿಯಾಗದು ಎಂದು ಐಸಿಎಂಆರ್ ವಿಜ್ಞಾನಿಗಳು ಬರೆದಿದ್ದುದು. ನಾವೇನು ಮಾಡಬಹುದಿತ್ತು? ಹೊಸ ಕೊರೋನ ಸೋಂಕು ನಿಕಟ ಸಂಪರ್ಕದಿಂದ ಹರಡುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಹೇಳುವುದು, ಸೋಂಕಿನ ಲಕ್ಷಣಗಳಿದ್ದವರು ಎಲ್ಲೆಡೆ ತಿರುಗಿ ಸೋಂಕನ್ನು ಹರಡದೆ, ಮನೆಯೊಳಗೇ ಇದ್ದು, ಅಲ್ಲೂ ಮನೆಯವರಿಗೆ ಸೋಂಕು ಹರಡದಂತೆ ದೂರವಿದ್ದು ಎಚ್ಚರ ವಹಿಸುವಂತೆ ಹೇಳುವುದು, ಸಮಸ್ಯೆಗಳಾಗಬಲ್ಲವರು ಇನ್ನಷ್ಟು ಎಚ್ಚರಿಕೆಯಿಂದಿರುವಂತೆ, ಮತ್ತು ಸೋಂಕು ವ್ಯಾಪಕವಾಗತೊಡಗಿದಾಗ ಅಂಥವರನ್ನೆಲ್ಲ, ಅದರಲ್ಲೂ ವೃದ್ಧಾಲಯಗಳು ಮುಂತಾದೆಡೆಗಳಲ್ಲಿ, ಸುರಕ್ಷಿತವಾಗಿರಿಸುವಂತೆ ಹೇಳುವುದು, ಸೋಂಕಿತರು ತಮ್ಮ ದೇಹದ ಮೇಲೆ ನಿಗಾ ವಹಿಸಿ, ಸಮಸ್ಯೆಗಳಾಗುವ ಸೂಚನೆಗಳಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗುವಂತೆ ಹೇಳುವುದು, ಅಂಥವರನ್ನು ಗುರುತಿಸುವುದಕ್ಕೆ ಸಂಚಾರಿ ಘಟಕಗಳನ್ನು ರಚಿಸುವುದು, ಸಮಸ್ಯೆಯಾದವರ ಚಿಕಿತ್ಸೆಗಾಗಿ ಪ್ರತ್ಯೇಕವಾದ ಆಸ್ಪತ್ರೆ ಸೌಲಭ್ಯಗಳನ್ನು ಮಾಡುವುದು, ಇನ್ನುಳಿದಂತೆ ಜನಜೀವನವನ್ನು ತಡೆಯದಿರುವುದು. ಮಾಡಿದ್ದೇನು? ಇಡೀ ದೇಶದಲ್ಲಿ ಕೇವಲ 562 ಸೋಂಕಿತರು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲ್ಪಟ್ಟಿದ್ದಾಗ ಇಡೀ ದೇಶವನ್ನು ರಾತೋರಾತ್ರಿ, ಪೂರ್ವಸೂಚನೆಯಿಲ್ಲದೆ ಲಾಕ್ ಡೌನ್ ಮಾಡಿದ್ದು, ಎಲ್ಲಾ ಸಾರ್ವಜನಿಕ ಚಟುವಟಿಕೆಗಳನ್ನು, ರಸ್ತೆಗಳನ್ನು, ಸಂಚಾರವನ್ನು ನಿರ್ಬಂಧಿಸಿದ್ದು. ಆದದ್ದೇನು? ಒಟ್ಟು ಎರಡು ತಿಂಗಳು ಲಾಕ್ ಡೌನ್ ಆಗಿ, ವ್ಯಾಪಾರ-ವಹಿವಾಟುಗಳೆಲ್ಲ ಸ್ತಬ್ಧವಾಗಿ, ಆಸ್ಪತ್ರೆಗಳಿಗೂ ಹೋಗದಂತೆ ಸಂಚಾರವೆಲ್ಲ ನಿರ್ಬಂಧಿಸಲ್ಪಟ್ಟು, ಯಾವು ಯಾವುದೋ ಊರುಗಳಿಗೆ ಹೋಗಿದ್ದವರು ಅಲ್ಲಲ್ಲೇ ಉಳಿದು, ದುಡಿಯಲೆಂದು ಪರವೂರುಗಳಿಗೆ ತೆರಳಿದ್ದವರು ನಿರುದ್ಯೋಗಿಗಳಾಗಿ, ನಿರ್ವಸಿತರಾಗಿ, ಊಟವೂ ದೊರೆಯದಂತೆ ನಿರ್ಗತಿಕರಾಗುವಂತಾಯಿತು; ಜನರು ತಾವಾಗಿ ಸಾಧ್ಯವಾದಷ್ಟು ಅವರಿವರಿಗೆ ನೆರವಾದರು, ವಲಸೆ ಬಂದು ಕಷ್ಟಕ್ಕೀಡಾದವರಿಗೆ ನೆರವಾಗುವುದೇ ದೊಡ್ಡ ಕೆಲಸವಾಯಿತು; ಲಕ್ಷಗಟ್ಟಲೆ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮೂರುಗಳಿಗೆ ತೆರಳಿದರು. ಆರ್ಥಿಕತೆ 23% ಕುಸಿಯಿತು, 12 ಕೋಟಿ ಉದ್ಯೋಗ ನಷ್ಟವಾಯಿತು, 10 ಕೋಟಿ ಬಡತನದ ರೇಖೆಗಿಂತ ಕೆಳಗಿಳಿದರು, 3 ಕೋಟಿ ಮಧ್ಯಮ ವರ್ಗದವರು ತಮ್ಮ ಸ್ಥಾನವನ್ನು ಕಳೆದುಕೊಂಡರು. ಅತ್ತ ಮಾರ್ಚ್‌ನಲ್ಲಿ ಸೋಂಕಿತರಾಗಿದ್ದ ಕೆಲವರಲ್ಲೇ ಇದ್ದ ಕೊರೋನ ವೈರಸ್ ಅವರಿಂದ ಅವರ ಮನೆಯವರಿಗೆ, ನೆರೆಯವರಿಗೆ ಹರಡಿತು, ನಿಧಾನವಾಗಿ ತನ್ನ ಪಾಡಿಗೆ ಒಬ್ಬರಿಂದೊಬ್ಬರಿಗೆ ಹರಡಿ, ಲಾಕ್ ಡೌನ್ ಆಗಿ 2 ತಿಂಗಳಾಗುವಾಗ ದೇಶದಲ್ಲಿ ಕೊರೋನ ಪ್ರಕರಣಗಳು ಒಟ್ಟು 75000, ದಿನಕ್ಕೆ 4000ವಾದವು, 2500 ಮೃತರಾದರು. ಲಾಕ್ ಡೌನ್ ಅಸಹನೀಯವಾಗಿ, ಆರ್ಥಿಕತೆ ನೆಲ ಕಚ್ಚಿ ಲಾಕ್ ಡೌನ್ ಸಡಿಲಿಸಲೇ ಬೇಕಾದಾಗ ಕೊರೋನ ಏರುತ್ತಲೇ ಹೋಯಿತು. ಒಂದು ವರ್ಷದಲ್ಲಿ ಅಧಿಕೃತವಾಗಿ ಕೊರೋನ ಪ್ರಕರಣಗಳ ಸಂಖ್ಯೆ ಒಂದು ಕೋಟಿ ಹದಿನಾರು ಲಕ್ಷ, ಮೃತರ ಸಂಖ್ಯೆ 160000 ಆಯಿತು; ಆದರೆ, ಸೋಂಕಿತರ ಸಂಖ್ಯೆಯು 90 ಪಟ್ಟು, ಅಂದರೆ 100 ಕೋಟಿಗೂ ಹೆಚ್ಚು, ಮತ್ತು ಮೃತರ ಸಂಖ್ಯೆಯು ಕನಿಷ್ಠ 5 ಪಟ್ಟು ಹೆಚ್ಚು, ಅಂದರೆ ಸುಮಾರು 7 ಏಳು ಲಕ್ಷದಷ್ಟು, ಎಂದು ಸರಕಾರದ ಇಲಾಖೆಗಳೇ ಅಂದಾಜು ಮಾಡಿದವು. ಸೋಂಕಿತರಲ್ಲಿ 0.05-0.5ರಷ್ಟು ಮಂದಿ ಸಾವನ್ನಪ್ಪುವ ಸಾಧ್ಯತೆಗಳಿವೆ ಎಂದು ಹಿಂದೆಯೇ ಅಂದಾಜಿಸಿದ್ದಂತೆ ಮೃತರಾದವರ ಪ್ರಮಾಣವು 0.07% ಅಷ್ಟೇ ಇದೆ, ಮತ್ತು ಮೃತರಲ್ಲಿ ಹೆಚ್ಚಿನವರು ಮೊದಲೇ ಅತಿ ಗಂಭೀರವಾದ ಸಮಸ್ಯೆಗಳಿದ್ದವರಾಗಿದ್ದರು ಎನ್ನುವುದೂ ಕಂಡು ಬಂದಿದೆ. ಒಟ್ಟಿನಲ್ಲಿ, ಅತಿ ಕಠಿಣ ಲಾಕ್ ಡೌನ್ ನಿಂದ ಕೊರೋನ ಹರಡುವಿಕೆ ತಗ್ಗಲಿಲ್ಲ, ಸಾವಿನ ಪ್ರಮಾಣವೂ ಬದಲಾಗಲಿಲ್ಲ. ಶೇ.99ರಷ್ಟು ಸೋಂಕಿತರಲ್ಲಿ ಹೆಚ್ಚಿನ ರೋಗಲಕ್ಷಣಗಳೇ ಇಲ್ಲದೆ, ಯಾವ ಚಿಕಿತ್ಸೆಯೂ ಇಲ್ಲದೆ, ಕೊರೋನ ವಾಸಿಯಾಯಿತು; ಲಾಕ್ ಡೌನ್ ಬರ್ಬರತೆಗೆ ತತ್ತರಿಸಿದ್ದವರಿಗೆ ಕೊರೋನದ ಲಕ್ಷಣಗಳು ತೀರಾ ನಗಣ್ಯವೆನಿಸಿರಲೂಬಹುದು. ಶಾಲೆಗಳನ್ನು ಮುಚ್ಚಬೇಕಿತ್ತೇ? ಮಾರ್ಚ್-ಮೇ 2020ರಲ್ಲಿ ಗೊತ್ತಿದ್ದದ್ದೇನು? ಕೊರೋನ ಹರಡಲಾರಂಭಿಸಿದಾಗ ಕೆಲವು ದೇಶಗಳಲ್ಲಿ ಶಾಲೆ ಕಾಲೇಜುಗಳನ್ನು ಮುಚ್ಚಲಾಗಿತ್ತು. ಆಡರ್ರ್ ಸ್ವೀಡನ್, ತೈವಾನ್ ಅಂಥ ದೇಶಗಳಲ್ಲಿ ಮುಚ್ಚಲಾಗಿರಲಿಲ್ಲ. ಏಪ್ರಿಲ್ ವೇಳೆಗೆ ಸೋಂಕಿನ ಹರಡುವಿಕೆ, ಮಕ್ಕಳಿಗೆ ಅದರಿಂದ ಮತ್ತು ಮಕ್ಕಳಿಂದ ಇತರರಿಗೆ ಅಪಾಯಗಳ ಬಗ್ಗೆ ಸಾಕಷ್ಟು ಮಾಹಿತಿಯು ದೊರೆತು ಹಲವು ದೇಶಗಳಲ್ಲಿ ಶಾಲೆಗಳನ್ನು ಮುಚ್ಚುವುದು ಸರಿಯಲ್ಲವೆಂಬ ನಿರ್ಧಾರವಾಯಿತು. ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ ಮತ್ತು ಯೂರೋಪುಗಳ ಸಿ.ಡಿ.ಸಿ., ಯೂನಿಸೆಫ್ ಮುಂತಾದ ಉನ್ನತ ಸಂಸ್ಥೆಗಳು ಶಾಲೆಗಳನ್ನು, ಅದರಲ್ಲೂ ಪ್ರಾಥಮಿಕ ಶಾಲೆಗಳನ್ನು, ತೆರೆಯಬೇಕೆಂದೂ, ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳಿಗೆ ಅಪಾರ ಹಾನಿಯಾಗುತ್ತದೆಂದೂ ಹೇಳಿದವು. ಅಮೆರಿಕ ಮತ್ತು ಬ್ರಿಟನ್ ಗಳ ಅಗ್ರ ಜರ್ನಲ್ ಗಳಲ್ಲಿ ಶಾಲೆಗಳನ್ನು ಮುಚ್ಚುವುದು ಕ್ಷಮಾರ್ಹವಲ್ಲವೆಂದು ಲೇಖನಗಳೂ ಬಂದವು. ಮೇಜು, ಕುರ್ಚಿ, ತಟ್ಟೆ, ಲೋಟಗಳಿಂದ ಕೊರೋನ ಹರಡುವುದಿಲ್ಲವೆನ್ನುವುದು ಕೂಡ ಸುಸ್ಪಷ್ಟವಾಗಿತ್ತು. ಏನು ಮಾಡಬೇಕಾಗಿತ್ತು? ಜೂನ್ ತಿಂಗಳಲ್ಲಿ ಎಂದಿನಂತೆ ಶಾಲೆಗಳನ್ನು, ಕಾಲೇಜುಗಳನ್ನು ತೆರೆಯಬೇಕಿತ್ತು; ಆಸ್ಟ್ರೇಲಿಯದಂತಹ ದೇಶಗಳಲ್ಲಿ ಮಾಡಿದ್ದಂತೆ, 10ಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಸರಳವಾದ ನಿಯಂತ್ರಣೋಪಾಯಗಳನ್ನು ಪಾಲಿಸುವಂತೆ ಮಾಡಿ ಶಾಲೆಗಳು ಅಬಾಧಿತವಾಗಿ ನಡೆಯುವಂತೆ ಮಾಡಬೇಕಿತ್ತು. ಬಿಸಿಯೂಟವನ್ನು ಎಂದಿನಂತೆಯೇ ಕೊಡಬೇಕಾಗಿತ್ತು. ವೈದ್ಯಕೀಯ ಕಾಲೇಜುಗಳನ್ನಂತೂ ಮುಚ್ಚಲೇಬಾರದಿತ್ತು. ನಾವು ಮಾಡಿದ್ದೇನು? ಶಾಲೆಗಳನ್ನು ಒಂದು ವರ್ಷವಿಡೀ ಮುಚ್ಚಲಾಯಿತು, ಕರ್ನಾಟಕದಲ್ಲಿ ಶಿಕ್ಷಣಾಸಕ್ತರ ಒತ್ತಾಯಕ್ಕೆ ಮಣಿದು ಜನವರಿಯಿಂದ ನಿಧಾನವಾಗಿ ಮೇಲಿನ ತರಗತಿಗಳನ್ನು ತೆರೆಯಲಾಯಿತಾದರೂ, ಯಾವ ಸಮಸ್ಯೆಗಳೂ ಆಗದ 1-5ರ ತರಗತಿಯ ಮಕ್ಕಳಿಗೆ ಶಾಲೆಯೇ ಇಲ್ಲವಾಯಿತು. ಜೊತೆಗೆ ಅಂಗನವಾಡಿಯಿಂದ ತೊಡಗಿ ಯಾವ ಮಕ್ಕಳಿಗೂ ಬಿಸಿಯೂಟವೂ ಇಲ್ಲವಾಯಿತು. ವೈದ್ಯಕೀಯ ಕಾಲೇಜುಗಳು ಒಂದು ವರ್ಷ ಮುಚ್ಚಿಕೊಂಡು, ರೋಗಿಗಳನ್ನೇ ನೋಡದೆಯೂ ವೈದ್ಯರಾಗುವಂತಾಯಿತು! ಆದದ್ದೇನು? ಮಕ್ಕಳಲ್ಲಿ ಕೂಡ ಕೊರೋನ ಹರಡುವುದು ಹರಡಿತು, ಆದರೆ ಮಕ್ಕಳಿಗಾಗಲೀ, ಮಕ್ಕಳಿಂದ ಇತರರಿಗಾಗಲೀ ಸಮಸ್ಯೆಗಳೇನೂ ಆಗಲಿಲ್ಲ. ರಾಜ್ಯದಲ್ಲಿ 20ಕ್ಕಿಂತ ಮೇಲ್ಪಟ್ಟ 9 ಲಕ್ಷ ಜನರಿಗೆ ಕೊರೋನ ತಗಲಿದಾಗ 1-10ರ 27000, 10-19ರ 64000 ಮಕ್ಕಳಿಗಷ್ಟೇ ತಗಲಿತು; 20ಕ್ಕಿಂತ ಮೇಲ್ಪಟ್ಟ 12000 ಸೋಂಕಿತರು ಮೃತರಾದಾಗ 1-10ರ 28 ಮತ್ತು 10-19ರ 46 ಮಕ್ಕಳು ಮೃತರಾದರು, ಅವರೆಲ್ಲರೂ ಮೊದಲೇ ಅತಿ ಗಂಭೀರವಾದ ಸಮಸ್ಯೆಗಳಿದ್ದವರಾಗಿದ್ದರು. ಅಂದರೆ ಶಾಲೆಗಳನ್ನು ಮುಚ್ಚಿದ್ದರಿಂದ ಕೊರೋನದ ಯಾವ ಸಮಸ್ಯೆಗೂ ಪರಿಹಾರವಾಗಲಿಲ್ಲ. ಬದಲಿಗೆ ಶಾಲೆಯಿಲ್ಲದೆ, ಅಲ್ಲಿನ ಬಿಸಿಯೂಟವಿಲ್ಲದೆ, ಮಕ್ಕಳಿಗೆ ಶೈಕ್ಷಣಿಕ, ಮಾನಸಿಕ, ದೈಹಿಕ, ಪೌಷ್ಟಿಕ ಸಮಸ್ಯೆಗಳಾದವು. ಮಕ್ಕಳಲ್ಲಿ ಕುಪೋಷಣೆಯು 40% ಏರಿತು; 22 ರಾಜ್ಯಗಳಲ್ಲಿ 16 ರಲ್ಲಿ ಬಡವರ್ಗಗಳ ಮಕ್ಕಳ ಬೆಳವಣಿಗೆ ಕುಂಠಿತವಾದರೆ, 20 ರಾಜ್ಯಗಳಲ್ಲಿ ಸ್ಥಿತಿವಂತರ ಮಕ್ಕಳಲ್ಲಿ ಆಟೋಟಗಳೇನೂ ಇಲ್ಲದೆ ಬೊಜ್ಜು ಹೆಚ್ಚಾಯಿತು. ಒಂದು ವರ್ಷ ಮನೆಯಲ್ಲೇ ಉಳಿದು ಸಹಪಾಠಿಗಳಿಂದ, ಶಿಕ್ಷಕರಿಂದ ದೂರವಿದ್ದ ಮಕ್ಕಳಿಗೆ ಮಾತುಕತೆ, ಸಂವಹನ, ಕಲಿಕೆ, ಕೌಶಲಗಳು ಮರೆತೇ ಹೋಗಿವೆ. ಮಕ್ಕಳ ಮೇಲೆ ಬಗೆಬಗೆಯ ದೌರ್ಜನ್ಯಗಳು, ಬಾಲ್ಯ ವಿವಾಹ, ಬಾಲ್ಯದ ದುಡಿಮೆ ಎಲ್ಲವೂ ಹೆಚ್ಚಿವೆ, ಶಾಲೆಗಳಿಲ್ಲದೆ ದೇಶದಾದ್ಯಂತ 70 ಲಕ್ಷಕ್ಕೂ ಹೆಚ್ಚು, ನಮ್ಮ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಮಕ್ಕಳು ಶಾಶ್ವತವಾಗಿ ಶಾಲೆ ತೊರೆದಿದ್ದಾರೆ. ಲಾಕ್ ಡೌನ್ ಮತ್ತು ಕೊರೋನ ಭೀತಿಯಿಂದಾಗಿ ಆರೋಗ್ಯ ಸೇವೆಗಳು ಕೂಡ ಬಾಧಿತವಾದ ಕಾರಣಕ್ಕೆ 150000ಕ್ಕೂ ಹೆಚ್ಚು ಮಕ್ಕಳು ಅನ್ಯ ರೋಗಗಳಿಗೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರಬಹುದೆಂದೂ, 60000 ಶಿಶುಗಳು ಹುಟ್ಟುವಾಗಲೇ ಸಾವನ್ನಪ್ಪಿರಬಹುದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಕೊಟ್ಟ ಚಿಕಿತ್ಸೆ ಸಾಕ್ಷ್ಯಾಧಾರವಾಗಿತ್ತೇ? ಮಾರ್ಚ್-ಮೇ 2020ರಲ್ಲಿ ಗೊತ್ತಿದ್ದದ್ದೇನು? ಮಾರ್ಚ್-ಮೇ 2020ರ ವೇಳೆಗೆ ಚೀನಾ, ಇಟೆಲಿಗಳಿಂದ ಬಂದಿದ್ದ ಆರಂಭಿಕ ವರದಿಗಳಲ್ಲಿ ಕೊರೋನಾ ಚಿಕಿತ್ಸೆಯಲ್ಲಿ ಕೆಲವು ಹಳೆಯ ಔಷಧಗಳನ್ನು ಪ್ರಯತ್ನಿಸಿದ್ದ ಬಗ್ಗೆ ಹೇಳಲಾಗಿತ್ತು, ಆದರೆ ಅವಕ್ಕೆ ಯಾವುದೇ ಆಧಾರಗಳು ಇರಲಿಲ್ಲ. ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆಗಳಿಗಾಗಿ ಸಿದ್ಧಪಡಿಸಿದ್ದ ಕಾರ್ಯಸೂಚಿಯಲ್ಲಿ ಹೀಗೆ ಆಧಾರರಹಿತವಾದ ಯಾವುದೇ ಚಿಕಿತ್ಸೆಯನ್ನು ಸೂಚಿಸದೆ, ಸೋಂಕಿತರಿಗೆ ಅತ್ಯಗತ್ಯವಾದ ಮತ್ತು ಜೀವರಕ್ಷಕ ಚಿಕಿತ್ಸೆಯನ್ನು ಮಾತ್ರವೇ ನೀಡುವ ಬಗ್ಗೆ ಸವಿವರವಾಗಿ ಹೇಳಲಾಗಿತ್ತು. ನಾವೇನು ಮಾಡಬೇಕಿತ್ತು? ಬ್ರಿಟನ್‌ನ ಚಿಕಿತ್ಸಾ ವಿಧಾನವನ್ನೇ ಇಲ್ಲೂ ಅಳವಡಿಸಿಕೊಳ್ಳಬೇಕಿತ್ತು, ಎಲ್ಲಾ ರಾಜ್ಯಗಳಲ್ಲೂ ಏಕರೂಪದ ಚಿಕಿತ್ಸಾಕ್ರಮವನ್ನು ಸೂಚಿಸಬೇಕಿತ್ತು. ಬ್ರಿಟನ್‌ನಲ್ಲಿ ಮಾಡಿದ್ದಂತೆ ಸೋಂಕಿತರನ್ನು ಮನೆಯಲ್ಲೇ ಉಳಿಯಲು ಹೇಳಿ, ಸಮಸ್ಯೆಯಾಗಬಲ್ಲವರನ್ನು ಸಂಚಾರಿ ಘಟಕಗಳ ಮೂಲಕ ಗುರುತಿಸಿ, ಅಗತ್ಯವಿದ್ದವರನ್ನಷ್ಟೇ ಆಸ್ಪತ್ರೆಗಳಿಗೆ ದಾಖಲಿಸುವ ವ್ಯವಸ್ಥೆ ಮಾಡಬೇಕಿತ್ತು. ಮಾಡಿದ್ದೇನು? ಕರ್ನಾಟಕದಲ್ಲಿ ಮೇ 15ರಂದು ರಾಜ್ಯ ಸರಕಾರವೇ ಚಿಕಿತ್ಸಾ ಕಾರ್ಯಸೂಚಿಯನ್ನು ಪ್ರಕಟಿಸಿತು, ಅದರಲ್ಲಿ ಹಲತರದ ಪರೀಕ್ಷೆಗಳನ್ನು, ಹಲತರದ ಔಷಧಗಳನ್ನು ಸೂಚಿಸಲಾಗಿತು. ಸೋಂಕಿತರನ್ನು ಪರೀಕ್ಷೆಗಳಿಗೆ ಕರೆದು, ಸಮಸ್ಯೆಗಳಿಲ್ಲದಿದ್ದರೂ ಕೆಲವರನ್ನು ದಾಖಲಿಸಲೆಂದು ಸಭಾಂಗಣಗಳಲ್ಲಿ, ಕ್ರೀಡಾಂಗಣಗಳಲ್ಲಿ ಕೊರೋನಾ ಆರೈಕೆ ಕೇಂದ್ರಗಳನ್ನು ರಚಿಸಲಾಯಿತು. ವಿಶೇಷ ಆಸ್ಪತ್ರೆಗಳನ್ನು ಮಾಡುವ ಬದಲಿಗೆ ಎಲ್ಲಾ ಅಸ್ಪತ್ರೆಗಳಲ್ಲಿ 50% ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಕಾದಿರಿಸಬೇಕೆಂದು ಹೇಳಲಾಯಿತು. ಆದದ್ದೇನು? ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಮತ್ತು ಬ್ರಿಟನ್‌ನಲ್ಲಿ ನಡೆಸಲಾದ ಅಧ್ಯಯನಗಳಲ್ಲಿ ಕೊರೋನ ಸೋಂಕಿಗೆ ಯಾವ ಔಷಧಗಳಿಂದಲೂ ಯಾವುದೇ ಪ್ರಯೋಜನವಿಲ್ಲವೆಂದೂ, ಅವುಗಳನ್ನು ಬಳಸಿದರೆ ಹಾನಿಯೇ ಆಗಬಹುದೆಂದೂ ಅಕ್ಟೋಬರ್ ವೇಳೆಗೆ ಸ್ಪಷ್ಟವಾಗಿ ಹೇಳಲಾಯಿತು. ಆದರೆ ಸರಕಾರದ ಚಿಕಿತ್ಸಾ ಕಾರ್ಯಸೂಚಿ ಈಗಲೂ ಮುಂದುವರಿದಿದೆ, ಕೆಲದಿನಗಳ ಹಿಂದೆ ಬ್ರಿಟಿಷ್ ಮೆಡಿಕಲ್ ಜರ್ನಲ್‌ ಮತ್ತು ವಿಶ್ವ ಸಂಸ್ಥೆಗಳು ಈ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದೂ ಆಗಿದೆ. ಎಲ್ಲರಿಗೂ ಪರೀಕ್ಷೆಗಳನ್ನು ಮಾಡಹೊರಟು 60000 ಕೋಟಿ ರೂಪಾಯಿ ಈ ಪರೀಕ್ಷೆಗಳಿಗೆಂದೇ ವೆಚ್ಚವಾಗಿದೆ, ಆರೋಗ್ಯ ಸೇವೆಗಳ ಖರ್ಚು 15000 ಕೋಟಿ ಎನ್ನಲಾಗಿದೆ! ಮೊದಲ ತಿಂಗಳುಗಳಲ್ಲಿ ಪರೀಕ್ಷೆಯ ಸೌಲಭ್ಯಗಳಿಲ್ಲದೆ ಕಷ್ಟಗಳಾಗಿವೆ. ಅನಗತ್ಯ ಚಿಕಿತ್ಸೆಯಿಂದಲೂ ಕಷ್ಟನಷ್ಟಗಳಾಗಿವೆ, ಈಗಲೂ ಆಗುತ್ತಿವೆ. ದೊಡ್ಡ ಪ್ರಚಾರದೊಂದಿಗೆ ತೆರೆದಿದ್ದ ಕೊರೋನಾ ಆರೈಕೆ ಕೇಂದ್ರಗಳು ಒಂದೆರಡು ವಾರಗಳಲ್ಲೇ ಮುಚ್ಚಿಹೋಗಿವೆ. ಕೊರೋನ ಸೋಂಕಿಗಿಂತಲೂ ಅದರ ನಿಭಾವಣೆಯ ಕ್ರಮಗಳಿಂದಾದ ಕಷ್ಟಗಳು ಬಹಳಷ್ಟಾದವು, ಬರೆದಷ್ಟೂ ಮುಗಿಯವು. ಆರಂಭದಿಂದಲೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ, ನಮ್ಮ ಜನಜೀವನ ಹಾಗೂ ಆಹಾರ ಶೈಲಿ, ಅವುಗಳಿಂದಾಗಿ ನಮ್ಮವರ ರೋಗ ರಕ್ಷಣಾ ಶಕ್ತಿ, ನಮ್ಮ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ನಮ್ಮ ದೇಶದ ಶ್ರೇಷ್ಠ ತಜ್ಞರ ಸಲಹೆಗಳನ್ನು ಬಳಸಿ ಹೊಸ ಕೊರೋನಾ ಸೋಂಕನ್ನು ತಾಳ್ಮೆಯಿಂದ, ಜಾಣ್ಮೆಯಿಂದ ಸರಳ-ಸುಲಭವಾಗಿ ನಿಭಾಯಿಸುವ ಬದಲಿಗೆ, ಯಾವುದೋ ದೇಶದವರು ಏನೋ ಮಾಡಿದರೆಂದು, ಮಾಧ್ಯಮದವರು ಕಿರುಚಿದರೆಂದು, ಏನೋ ದೊಡ್ಡದನ್ನು ತೋರಿಸಬೇಕೆಂದು ನಿಯಂತ್ರಣೋಪಾಯಗಳನ್ನು ಮಾಡಿದ್ದರಿಂದ ವರ್ಷಾನಂತರ ಎರಡನೇ ಅಲೆ ಎಂದು ಮತ್ತೆ ಅವೇ ರೀತಿಯ ಕ್ರಮಗಳನ್ನು ಮಾಡಹೊರಡುತ್ತಿರುವಂತೆ ಕಾಣುತ್ತಿದೆ. ಕೃಪೆ: ವಾರ್ತಾಭಾರತಿ __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG-) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement