ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ?
ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ?
Advertisement
-ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
ಮೀಸಲಾತಿಗಾಗಿ ಮೇಲ್ಜಾತಿಗಳು ಮತ್ತು ಯಜಮಾನ ಜಾತಿಗಳು ಪೈಪೋಟಿ ನಡೆಸುತ್ತಾ ಮೀಸಲಾತಿಗಿರುವ ಸಾಮಾಜಿಕ ನ್ಯಾಯದ ಆಯಾಮವನ್ನೇ ಮರೆಮಾಚುತ್ತಿರುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟೂ ಸಹ ಶೇ. ೫೦ರ ಮೀಸಲಾತಿ ಮೇಲ್ಮಿತಿಯ ಔಚಿತ್ಯವನ್ನು ಮರುಪರಿಶೀಲಿಸುವ ವಿಚಾರಣೆಯನ್ನು ಪ್ರಾರಂಭಿಸಿದೆ. ಸುಪ್ರೀಂ ಕೋರ್ಟಿನ ಈ ಕಾಳಜಿಯು ಮೀಸಲಾತಿಗಿದ್ದ ಸಾಮಾಜಿಕ ಹಿಂದುಳಿದಿರುವಿಕೆಯ ಸಾಂವಿಧಾನಿಕ ಮಾನದಂಡ ಹಾಗೂ ಸುಪ್ರೀಂ ಕೋರ್ಟೇ ವಿಧಿಸಿದ ಶೇ. ೫೦ರ ಮೇಲ್ಮಿತಿಯನ್ನು ಉಲ್ಲಂಘಿಸಿ ಮೋದಿ ಸರ್ಕಾರ ಮೇಲ್ಜಾತಿ ಬಡವರಿಗೆ ಕಲ್ಪಿಸಿರುವ ಶೇ.೧೦ ಮೀಸಲಾತಿಯ ಸಾಂವಿಧಾನಿಕತೆಯ ವಿಚಾರಣೆಗೆ ಮುನ್ನ ನಡೆಯುತ್ತಿರುವುದು ಸುಪ್ರೀಂ ಕೋರ್ಟಿನ ಕಾಳಜಿಯ ಅಸಲಿ ಬಣ್ಣವನ್ನಷ್ಟೇ ಹೊರಹಾಕುತ್ತಿದೆ. ಇದರ ಜೊತೆಗೆ ದೇಶಾದ್ಯಂತ ಯಜಮಾನ ಜಾತಿಗಳು (ಕರ್ನಾಟಕದ ಲಿಂಗಾಯತರು, ಒಕ್ಕಲಿಗರು ಮಹಾರಾಶ್ಟ್ರದ ಮರಾಠರು, ಗುಜರಾತಿನ ಪಟೇಲರು, ಉತ್ತರ ಭಾರತದ ಜಾಟರು..) ಕೂಡಾ ಮೀಸಲಾತಿ ಕೇಳುತ್ತಿರುವ ಸಂದರ್ಭವೂ ಸುಪ್ರೀಂ ಕೋರ್ಟಿನ ಮನಕರಗಿಸಿದೆಯೇ ವಿನಾ ಈವರೆಗೆ ಶೇ.೫೨ರಷ್ಟು ಅತಿ ಹಿಂದುಳಿದ ಜಾತಿಗಳಿಗೆ ಈ ಮೇಲ್ಮಿತಿಯ ಕಾರಣಕ್ಕಾಗಿ ಕೇವಲ ಶೇ. ೨೭ ರಷ್ಟು ಮೀಸಲಾತಿಯನ್ನು ಮಾತ್ರ ಕಲ್ಪಿಸಿ ಮಾಡಿದ ಅನ್ಯಾಯವಲ್ಲ.
ಇರಲಿ, ಮೋದಿತ್ವದ ಅವಧಿಯಲ್ಲಿ ಸುಪ್ರೀಂ ಕೋರ್ಟು ಏಕಕಾಲದಲ್ಲಿ ಕಾರ್ಪೊರೇಟ್ ಮತ್ತು ಹಿಂದೂತ್ವದ ಕರಸೇವೆಗೆ ಬಲಿಯಾಗಿರುವುದು ಅದರ ಅನುದಿನ ನಡೆ, ನಿಲುವು ಮತ್ತು ಆದೇಶಗಳಲ್ಲಿ ವ್ಯಕ್ತವಾಗುತ್ತಲೇ ಇರುವುದರಿಂದ ಇದು ನಿರೀಕ್ಷಿತವೇ.
ಯಾವುದೇ ಕಾರಣವಿರಲಿ. ಈ ಅಸಂಬದ್ಧ, ಅತಾರ್ಕಿಕ, ಹಾಗೂ ಜಾತಿಪೂರ್ವಗ್ರಹದ ಪ್ರತೀಕವಾಗಿರುವ ಶೇ. ೫೦ರ ಮೀಸಲಾತಿ ಮೇಲ್ಮಿತಿ ತೊಲಗಲೇ ಬೇಕು.
ಆದರೆ ಅದರಾಚೆಗೂ ಅಸಲೀ ಪ್ರಶ್ನೆಯೊಂದು ಹಾಗೆ ಉಳಿಯುತ್ತದೆ. ಮೀಸಲಾತಿ ಹೆಚ್ಚಿಸಿದ ಮಾತ್ರಕ್ಕೆ ಇಂದಿನ ಕಾರ್ಪೊರೇಟ್ ಬಂಡವಾಳಶಾಹೀ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಉದ್ಯೋಗಗಳು ಹೆಚ್ಚಿನ ಮಟ್ಟದಲ್ಲಿ ಈ ದೇಶದ ಹಿಂದುಳಿದ ಸಮುದಾಯಕ್ಕೆ ಸಿಗುತ್ತದೆಯೇ?
ಮೀಸಲಾತಿ- ಇತಿ ಮತ್ತು ಮಿತಿ
ಮೊನ್ನೆ ಸರ್ಕಾರದಲ್ಲಿನ ೩೦೦೦ ಜವಾನ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿತ್ತು. ಅದಕ್ಕೆ ೩೦ ಲಕ್ಷ ಅರ್ಜಿಗಳು ಬಂದಿದ್ದವಂತೆ. ಅದರಲ್ಲಿ ೨.೫ ಲಕ್ಷ ಡಾಕ್ಟೊರೇಟ್ ಪದವೀಧರರು ಇದ್ದರಂತೆ. ಈಗ ಮೂರು ಸಾವಿರ ಹುದ್ದೆಗಳಲ್ಲಿ ೧೫೦೦ ಹುದ್ದೆಗಳು ಮೀಸಲಾತಿಯಲ್ಲಿ ಲಭ್ಯ. ಶೇ. ೧೦೦ ರಷ್ಟು ಮೀಸಲಾತಿ ಮಾಡಿದರೂ ಉದ್ಯೋಗ ಸಿಗುವುದು ೩೦೦೦ ಅಭ್ಯರ್ಥಿಗಳಿಗೆ. ಇನ್ನುಳಿದ ೨೯.೯೭ ಲಕ್ಷ ಅಭ್ಯರ್ಥಿಗಳು ನಿರುದ್ಯೋಗಿಗಳೇ ಆಗುತ್ತಾರೆ. ಅಥವಾ ಸಂಪೂರ್ಣ ಮೀಸಲಾತಿಗೆ ತೆಗೆದುಹಾಕಿಬಿಟ್ಟರೂ ಸಿಗುವುದು ೩೦೦೦ ಉದ್ಯೋಗಗಳೇ. ಆಗಲೂ ೨೯.೯೭ ಲಕ್ಷ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವುದಿಲ್ಲ. ಆದರೆ ಆ ೨೯.೯೭ ಲಕ್ಷ ಅಭ್ಯರ್ಥಿಗಳಲ್ಲಿ ೧೫೦೦ ದಲಿತ ಹಾಗೂ ಹಿಂದುಳಿದ ಸಮುದಾಯದ ಅಭ್ಯರ್ಥಿಗಳು ಹೆಚ್ಚಿಗೆ ಇರುವ ಸಾಧ್ಯತೆ ಜಾಸ್ತಿ. ಹೀಗಾಗಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದರೆ ಇವೆರೆಡು ಸಂದರ್ಭಗಳ ನಡುವೆ ಆಯ್ಕೆ ಮಾಡಿಕೊಳ್ಳುವ ತುರ್ತು ಬಂದಲ್ಲಿ, ೧೫೦೦ ಹಿಂದುಳಿದವರಿಗಾದರೂ ಉದ್ಯೋಗ ಸಿಗುವ ಆಯ್ಕೆ ಮಾಡಿಕೊಳ್ಳುವುದು ಸಹಜ.
ಆದರೆ ಈ ಆಯ್ಕೆಯ ಫಲಾನುಭವವು ಉಳಿದ ೨೯.೯೭ ಲಕ್ಷ ದಲಿತ-ಹಿಂದುಳಿದ ಸಹೋದರ-ಸಹೋದರಿಯರ ಉದ್ಯೋಗದ ಪ್ರಶ್ನೆಯನ್ನು ಮರೆಸಬಾರದಲ್ಲವೇ? ವಾಸ್ತವವದಲ್ಲಿ ಇದೇ ಮೀಸಲಾತಿಯ ಶಕ್ತಿ ಮತ್ತು ಮಿತಿ ಕೂಡಾ ಆಗಿದೆ.
ಹೀಗಾಗಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳು ಹೆಚ್ಚಾಗದೆ ಮೀಸಲಾತಿಯ ಪ್ರಮಾಣ ಮಾತ್ರ ಹೆಚ್ಚಿಸಿದರೆ ಬಹುಜನರಿಗೆ ಯಾವ ಪ್ರಯೋಜನವೂ ಇಲ್ಲ.
ಖಾಸಗಿಕಾರಣ- ಕಾರ್ಪೊರೇಟ್ ಬ್ರಾಹ್ಮಣ್ಯ
ಆದರೆ ೧೯೯೧ರ ನಂತರದಲ್ಲಿ ಖಾಸಗೀಕರಣ, ಜಾಗತೀಕರಣ ನೀತಿಗಳು ಸಾಂವಿಧಾನಿಕ ಪ್ರತಿಕ್ರಾಂತಿಯನ್ನೇ ಮಾಡಿಬಿಟ್ಟವು. ಕಲ್ಯಾಣ ರಾಜ್ಯದ ಬದಲಿಗೆ ಕಾರ್ಪೊರೇಟ್ ರಾಜ್ಯ, ಸಾಮಾಜಿಕ ನ್ಯಾಯದ ಬದಲಿಗೆ ಸಮರ್ಥ ಆಡಳಿತ, ಉತ್ತರದಾಯಿತ್ವದ ಬದಲಿಗೆ ಖಾಸಗಿ ಸ್ವಾಯತ್ತತೆಗಳು ಮೌಲ್ಯಗಳಾದವು. ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತ ಇವೆಲ್ಲಾ ಆಡಳಿತದ ಪ್ರಾತಿನಿಧ್ಯದಲ್ಲಿ ಸಾಮಾಜಿಕ ನ್ಯಾಯವನ್ನು ನಿರಾಕರಿಸುವ ಸಾಧನಾವದರೆ, ಶಿಕ್ಷಣ ಮತ್ತು ಉದ್ಯಮಗಳಲ್ಲಿ ಖಾಸಗೀಕರಣ ನೀತಿಗಳು ಸಾಂವಿಧಾನಾತ್ಮಕವಾಗಿ ದಲಿತ ಹಿಂದುಳಿದ ಸಮುದಾಯಗಳಿಗೆ ಅವಕಾಶಗಳಾಣ್ಣೂ ಮತ್ತು ಪ್ರಾತಿನಿಧ್ಯವನ್ನು ನಿರಾಕರಿಸಿ ಮರು ಬ್ರಾಹ್ಮಣಶಾಹೀಕರಿಸುವ ಸಾಧನವಾಗಿ ಜಾರಿ ಯಾಗಿವೆ.
ಇಂದು ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಆಡಳಿತ ಮತ್ತು ಆರ್ಥಿಕತೆಯ ಕಾರ್ಪೊರೇಟೀಕರಣ ಮತ್ತು ಬ್ರಾಹ್ಮಣೀಕರಣಗಳು ಉತ್ತುಂಗವನ್ನು ಮುಟ್ಟಿರುವ ಹೊತ್ತಿನಲ್ಲಿ ಮೀಸಲಾತಿಯ ಮೇಲೆ ಖಾಸಗೀಕರಣದ ಪರಿಣಾಮವನ್ನೂ ಅರ್ಥಮಾಡಿಕೊಳ್ಳದ ಸಾಮಾಜಿಕ ನ್ಯಾಯದ ಹೋರಾಟ ಆಳುವವರ ವಿಧಿಸಿರುವ ಚೌಕಟ್ಟಿನಲ್ಲೇ ಅಳುತ್ತಾ ಕೂರಬೇಕಾದ ಅಪಾಯವನ್ನು ಒಡ್ಡಿದೆ.
ಖಾಸಗಿಯಲ್ಲಿ ಮೀಸಲಾತಿ: ಹಾವಿನ ಹಂಗು, ಬಾಲದ ಜೊತೆ ಚೌಕಾಸಿ?
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗುವುದು ಸರ್ಕಾರಿ ವಲಯದಲ್ಲೇ ವಿನಾ ಖಾಸಗಿ ವಲಯದಲ್ಲಲ್ಲ. ಖಾಸಗಿ ವಲಯಕ್ಕೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರೆ ಸರ್ಕಾರ ಕೆಲವು ಉತ್ತೇಜನಗಳನ್ನು ಘೋಷಿಸಬಹುದೇ ವಿನಾ ಮೀಸಲಾತಿ ಕೊಡದಿದ್ದರೆ ಶಿಕ್ಷಿಸುವ ಅವಕಾಶ ನಮ್ಮ ಸಂವಿಧಾನದಲ್ಲಿಲ್ಲ. ಅಷ್ಟು ಮಾತ್ರವಲ್ಲ. ದೇಶದ ಉದ್ಧಾರವಾಗಾಗುವುದೇ ಖಾಸಗಿ ದೇಶೀ ಮತ್ತು ವಿದೇಶೀ ಬಂಡವಾಳಗಳ ಹೂಡಿಕೆಯಿಂದ ಮಾತ್ರ ಎಂಬ ಸಂವಿಧಾನ ವಿರೋಧಿ ತತ್ವವು ಎಡದಿಂದ-ಬಲದವರೆಗಿನ ಎಲ್ಲಾ ರಾಜಕೀಯ ಪಕ್ಷಗಳ ಒಪ್ಪಿಗೆ ಪಡೆದಿರುವುದರಿಂದ ಖಾಸಗಿಯನ್ನು ಸಾಮಾಜಿಕ ನ್ಯಾಯಕ್ಕೆ ಬಗ್ಗಿಸುವ ರಾಜಕೀಯ ಇಚ್ಚಾಶಕ್ತಿ ಯಾವ ಚುನಾವಣಾ ರಾಜಕೀಯ ಪಕ್ಷಗಳಿಗೂ ಇಲ್ಲ. ಹೀಗಾಗಿ ೧೯೯೧ರಿಂದ ಸರ್ವ ಸಮ್ಮತವಾಗಿ ಈ ದೇಶದ ಮೀಸಲಾತಿಯ ಮೇಲೆ ಮತ್ತು ಸಾಮಾಜಿಇಕ ನ್ಯಾಯದ ಮೇಲೆ ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ದಾಳಿ ನಡೆಯುತ್ತಾ ಬಂದಿದೆ.
ಜೊತೆಗೆ ಈ ದೇಶದ ಒಟ್ಟಾರೆ ಉದ್ಯೋಗ ಸೃಷ್ಟಿಯಲ್ಲಿ ಶೇ. ೯೨ ಭಾಗ ಸೃಷ್ಟಿಯಾಗುವುದು ಅಸಂಘಟಿತ ವಲಯದಲ್ಲಿ. ಕೃಷಿ, ಬೀದಿ ವ್ಯಾಪಾರ, ಸಣ್ಣ, ಅತಿಸಣ್ಣ ಉದ್ದಿಮೆ..ಇತ್ಯಾದಿಗಳಲ್ಲಿ. ಇನ್ನು ಶೇ. ೮ ಭಾಗ ಮಾತ್ರ ಸಂಘಟಿತ ಎಂದರೆ ನಿಗದಿತ ಸಂಬಳ, ಸೌಲಭ್ಯ, ಪೆನ್ಷನ್, ಕಾರ್ಮಿಕ ಹಕ್ಕುಗಳು ಇರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.
ಹೆಚ್ಚು ಉದ್ಯೋಗ-ಮೀಸಲಾತಿ ಕೊಡುತ್ತಿರುವುದು ಸರ್ಕಾರಿ ವಲಯವೇ
ನವದೆಹಲಿಯ ಇನ್ಸ್ಟಿಟ್ಯೂಟ್ ಫಾರ್ ಸ್ಟಡೀಸ್ ಆಫ್ ಇಂಡಸ್ಟಿಯಲ್ ಡೆವಲಪ್ಮೆಂಟ್ (ಐಎಸ್‌ಐಡಿ) ಸಂಸ್ಥೆಯು ಮಾಡಿರುವ ಅಧ್ಯಾಯನದ ಪ್ರಕಾರ ಈ ಸಂಘಟಿತ ವಲಯದೊಳಗೆ ೧೯೮೧ರಲ್ಲಿ ೧.೬೫ ಕೋಟಿ ಜನರು ಸಾರ್ವಜನಿಕ ವಲಯದಲ್ಲಿ ಕೆಲಸಮಾಡುತ್ತಿದ್ದರು..
ಅದರ ಅರ್ಥ ೧.೬೫ ಕೋಟಿ ಉದ್ಯೋಗಗಳಲ್ಲಿ ಶೇ. ೨೨.೩ ರಷ್ಟು ಉದ್ಯೋಗಗಳು ಅಂದರೆ ೩೬ ಲಕ್ಷದಷ್ಟು ಉದ್ಯೋಗಾವಕಾಶಗಳು ಮೀಸಲಾಗಿರುತ್ತಿತ್ತು. ಆದರೆ ಅಷ್ಟೂ ಭರ್ತಿಯಾಗುತ್ತಿರಲಿಲ್ಲ ಎನ್ನುವುದು ಬೇರೆ ಮಾತು.
ಇದು ೧೯೯೭ರಲ್ಲಿ ೧.೯೫ ಕೋಟಿಗೆ ತಲುಪಿತು. ೧೯೮೯ರಲ್ಲಿ ಮಂಡಲ್ ವರದಿ ಜಾರಿಯಾಗಿದ್ದರಿಂದ ಇದರಲ್ಲಿ ಅಂದಾಜು ೧ ಕೋಟಿ ಉದ್ಯೋಗಗಳು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ದಕ್ಕಿತು. ಆಗಲೂ ಅದರ ಪೂರ್ತಿ ಲಾಭವನ್ನು ಪಡೆದುಕೊಳ್ಳುವಷ್ಟು ಸಾಧ್ಯತೆಗಳು ಈ ಸಮುದಾಯಗಳಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಯಿತು ಎಂಬುದು ಮತ್ತೊಂದು ವಿಷಯ. ಆದರೆ ಸಾರ್ವಜನಿಕ ಕ್ಷೇತ್ರವು ಹೆಚಾಗುತ್ತಿದ್ದರಿಂದ ಅಷ್ಟು ಅವಕಾಶವಂತೂ ದಲಿತ-ಹೊಂದುಳಿದ ಸಮುದಾಯಕ್ಕೆ ದಕ್ಕುತ್ತಿತ್ತು.
ಆದರೆ, ಅಲ್ಲಿಂದಾಚೆಗೆ ೧೯೯೭- ೨೦೧೨ರ ಅವಧಿಯಲ್ಲಿ ಖಾಸಗೀಕರಣ, ಉದಾರೀಕರಣ ನೀತಿಗಳು ವೇಗವಾಗಿ ಜಾರಿಯಗತೊಡಗುತ್ತಾ ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ೧.೭೫ ಕೋಟಿಗೆ ಕುಸಿದಿತ್ತು.
ಅಂದರೆ ಈ ಅವಧಿಯಲ್ಲಿ ಈ ಅವಧಿಯಲ್ಲಿ ಖಾಸಗೀಕರಣದ ಜಾರಿಯಿಂದಾಗಿ ದಲಿತ -ಹಿಂದುಳಿದ ಸಮುದಾಯಗಳಿಗೆ ಕೇವಲ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ದಿಮೆಗಳಲ್ಲಿ ದೊರೆಯಬೇಕಾಗಿದ್ದ ೧೦ ಲಕ್ಷ ಉದ್ಯೋಗಾವಕಾಶಗಳು ಕಣ್ಮರೆಯಾದವು.
ಇದು ೨೦೧೪-೨೦೨೦ರ ಮೋದಿ ಅವಧಿಯಲ್ಲಿ ಇನ್ನೂ ಶೀಘ್ರಗತಿಯಲ್ಲಿ ಕುಸಿದಿದೆ.
ಆದರೆ, ೧೯೮೧ರಲ್ಲಿ ೬೫ ಲಕ್ಷ ಜನರಿಗೆ ಉದ್ಯೋಗ ಕೊಡುತ್ತಿದ್ದ ಖಾಸಗಿ ಸಂಘಟಿತ ಕ್ಷೇತ್ರ ೪೦ ವರ್ಷಗಳ ನಂತರ ೨೦೧೯ ರ ವೇಳೆಗೆ ಸರ್ಕಾರಗಳಿಂದ ಸಕಲ ಸೌಲಭ್ಯಗಳನ್ನು ಪಡೆದುಕೊಂಡೂ ಸಹ ಉದ್ಯೋಗ ಸೃಷ್ಟಿಸಿದ್ದು ಕೇವಲ ೯೮ ಲಕ್ಷಗಳನ್ನು ಮಾತ್ರ. ಅಂದರೆ ಕೇವಲ ೩೦ ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಮಾತ್ರ.
ಆದರೆ ಅವ್ಯಾವುವೂ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ನಿಯಮಬದ್ಧವಾಗಿ ಕಲ್ಪಿಸಲಿಲ್ಲ.
(http://111.93.232.162/pdf/ICSSR_TSP_PPS.pdf)
ಮತ್ತೊಂದು ಅಧ್ಯಯನದ ಪ್ರಕಾರ ಖಾಸಗೀಕರಣದ ನಂತರದ ೨೫ ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸೃಷ್ಟಿಯಾದ ಹೊಸ ೬.೧ ಕೋಟಿ ಉದ್ಯೋಗಗಳಲ್ಲಿ. ಶೇ. ೯೨ ರಷ್ಟು ಉದ್ಯೋಗಗಳು ಅನೌಪಚಾರಿಕ ಅಂದರೆ ಯಾವುದೇ ಸಾಮಾಜಿಕ ನ್ಯಾಯ ಮಾತ್ರವಲ ಕಾರ್ಮಿಕ ಹಕ್ಕು ಹಾಗೂ ಸೌಲಭ್ಯಗಳನೂ ಇಲ್ಲದ ವಲಯದಲ್ಲಿ ಸೃಷ್ಟಿಯಾಗಿದ್ದವು.
(https://scroll.in/article/922863/data-check-90-of-jobs-created-in-india-after-liberalisation-were-in-the-informal-sector)
ಸಾರ್ವಜನಿಕ ವಲಯದ ಖಾಸಗೀಕರಣ ಈ ಮಹಾ ವಂಚನೆಯನ್ನು ಜನರೆದುರು ಮಹಾ ಸಾಧನೆಯೆಂಬಂತೆ ಮೋದಿ ಸರ್ಕಾರ ಮುಂದಿಡುತ್ತಿದೆ. ಅದಕ್ಕೆ ಅವರ ಆಸ್ಥಾನ ಪಂಡಿತರು ಕೊಡುವ ಕಾರಣ ಸಾರ್ವಜನಿಕ ಉದ್ಯಮಗಳು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿವೆ ಎಮ್ಬುದೇ ಆಗಿದೆ. ಆದರೆ ಇದು ನಿಜವೇ? ನೋಡೋಣ:
ಲಾಭ ಗಳಿಸಿದರೂ ನಷ್ಟವೆನ್ನುವ ವಂಚಕ ಮೋದಿ ಸರ್ಕಾರ:
ಮೋದಿ ಸರ್ಕಾರವು ಕೇಂದ್ರ ಸರ್ಕಾರದ ಸುಫರ್ದಿನಲ್ಲಿರುವ ಸಾರ್ವಜನಿಕ ಕಂಪನಿಗಳ ಕಾಲಾವಧಿ ಸರ್ವೆಯನ್ನು ೨೦೧೯ರಲ್ಲಿ ಬಿಡುಗಡೆ ಮಾಡಿದೆ. ಅದರ ಪೂರ್ಣ ಪಾಠ ಈ ಕೆಳಗಿನ ವೆಬ್ ವಿಳಾಸದಲ್ಲಿ ದೊರೆಯುತ್ತದೆ. :
https://dpe.gov.in/sites/default/files/PE_seurvey_ENG_VOL_1.pdf
ಮೇಲಿನ ವರದಿಯ ಪ್ರಕಾರ ೨೦೧೯ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ೩೩೦ ಸಾರ್ವಜನಿಕ ಸಂಸ್ಥೆಗಳಿದ್ದವು. ಅವುಗಳಲ್ಲಿ ಒಟ್ಟಾರೆಯಾಗಿ ಈವರೆಗೆ ೨೬ ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ತೊಡಗಿಸಲಾಗಿದೆ.
೨೦೧೮-೧೯ರ ಸಾಲಿನಲ್ಲಿ ಆ ೩೩೦ ಕಂಪನಿಗಳಲ್ಲಿ ೧೭೮ ಕಂಪನಿಗಳು ಲಾಭ ಮಾಡುತ್ತಿದ್ದರೆ, ೭೦ ಕಂಪನಿಗಳು ಮಾತ್ರ ನಷ್ಟಕ್ಕೆ ಗುರಿಯಾಗಿದ್ದವು. ಆದರೂ ಅದೇ ಸಾಲಿನಲ್ಲಿ ಲಾಭ ಮಾಡುತ್ತಿದ್ದ ಕಂಪನಿಗಳು ೧,೭೪,೫೮೭ ಕೋಟಿ ರೂ.ಗಳಷ್ಟು ಲಾಭ ಮಾಡಿದ್ದರೆ, ನಷ್ಟ ಮಾಡುತ್ತಿದ್ದ ಕಂಪನಿಗಳು ಕೇವಲ ೩೦,೦೦೦ ಕೋಟಿ ಮಾತ್ರ ನಷ್ಟ ಮಾಡಿದ್ದವು. ಅಂದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ಸಾರ್ವಜನಿಕ ಉದ್ಯಮಗಳಿಂದ ೧.೫ ಲಕ್ಷ ಕೋಟಿ ಯಷ್ಟು ಲಾಭವೇ ಆಗಿತ್ತು.
ಅಷ್ಟು ಮಾತ್ರವಲ್ಲ. ಈ ಎಲ್ಲಾ ಕಂಪನಿಗಳು ೨೦೧೯ರ ಸಾಲಿನಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್ ಗಳ ರೂಪದಲ್ಲಿ ಸರ್ಕಾರಕ್ಕೆ ೩,೬೮,೮೦೩ ಕೋಟಿ ರೂಗಳನ್ನು ಪಾವತಿ ಮಾಡಿದ್ದವು.
ಎಲ್ಲಕ್ಕಿಂತ ಹೆಚ್ಚಾಗಿ ಇವು ೧೧ ಲಕ್ಷದಷ್ಟು ಉದ್ಯೋಗಗಳನ್ನು ನೀಡಿದ್ದವು. ಅದರಲ್ಲಿ ೫ ಲಕ್ಷದಷ್ಟು ಉದ್ಯೋಗಗಳಾದರೂ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ದಕ್ಕಿತ್ತು. ಈ ಕಾರ್ಮಿಕರಿಗೆ ಅವರಿಗೆ ೨೦೧೯ರ ಸಾಲಿನಲ್ಲಿ ೧,೫೨,೬೮೪ ಕೋಟಿ ರೂಪಾಯಿಗಳನ್ನು ಸಂಬಳ ಸಾರಿಗೆಯ ರೂಪದಲ್ಲಿ ನೀಡಲಾಗಿತ್ತು. ಸಹಜವಾಗಿಯೇ ಆ ಮೊತ್ತವು ಆರ್ಥಿಕತೆಯಲ್ಲಿ ಅಷ್ಟರ ಮಟ್ಟಿಗಿನ ಬೇಡಿಕಯನ್ನು ಸೃಷ್ಟಿಸುತ್ತಷ್ಟೆ. ಇವತ್ತು ಈ ದೇಶದ ಆರ್ಥಿಕತೆ ಕಂಗೆಟ್ಟಿರುವುದೇ ಜನರ ಕೊಳ್ಳುವ ಶಕ್ತಿಯ ಕುಸಿತದಿಂದ, ಅದಕ್ಕೆ ಕಾರಣವಾಗಿರುವ ನಿರುದ್ಯೋಗದಿಂದ ಎನ್ನುವುದರ ಹಿನ್ನೆಲೆಯಲ್ಲಿ ಈ ಉದ್ಯೋಗಗಳ ಮಹತ್ವ ಅರ್ಥವಾಗುತ್ತದೆ. ಮತ್ತು ಸರ್ಕಾರಿ ಕಂಪನಿಗಳನ್ನು ನಷ್ಟದಾಯಕ ಎಂದು ವರ್ಗೀಕರಿಸುವುದರ ಅಸಂಬದ್ಧತೆಯನ್ನು ತೋರಿಸುತ್ತದೆ.
ಇಷ್ಟಾದರೂ ಮೋದಿ ಸರ್ಕಾರವು ೨೦೨೧-೨೨ ರ ಬಜ್ಕೆಟ್ಟಿನಲ್ಲಿ ಎಲ್ಲಾ ಲಾಭದಾಯಕ ಕಂಪನಿಗಳನ್ನೂ ಖಾಸಗೀಕರಿಸುವುದಾಗಿ ಘೋಷಿಸಿದೆ. ಮತ್ತು ಈ ಮಾಹಾ ವಂಚನೆಯನ್ನು ಮಾಡಲು ದಿನಕ್ಕೆ ಹದಿನೆಂಟು ಗಂತೇ ಕೆಲಸ ಮಾಡುತ್ತಿದೆ.
ಇದಲ್ಲದೆ, ಉದ್ಯೋಗಾವಕಾಶಾಗಳು ಒದಗಿಸುವ ಮತ್ತೊಂದು ಅತಿದೊಡ್ಡ ಕ್ಷೇತ್ರ ಸರ್ಕಾರದ ಆಡಳಿತ ಯಂತ್ರಾಂಗ. ಇದರಲ್ಲಿ ಅಂದಾಜು ೪೧ ಲಕ್ಷ ಉದ್ಯೋಗಾವಕಾಶಗಳು ಲಭ್ಯವಾಗುತ್ತಿತ್ತು. ಆದರೆ ಇದರಲ್ಲಿ ಈವರೆಗೆ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ಮೀಸಲಾತಿಯನ್ನು ಜಾತಿ ಪೂರ್ವಗ್ರಹಳಿಂದ ಒದಗಿಸುತ್ತಿಲ್ಲ. ಉಳಿದಂತೆ ೧೯೮೯ರಿಂದ ಇದರಲ್ಲಿನ ಕನಿಷ್ಟ ೨೦ ಲಕ್ಷ ಉದ್ಯೋಗಾವಕಾಶಗಳಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಅವಕಾಶಗಳು ಸಿಗಬೇಕಿತ್ತು. ಆದರೆ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ವಿಶ್ವಬ್ಯಾಂಕಿನ ನಿಬಂಧನೆಗೆ ಒಳಪಟ್ಟು ೨೦೧೩ ರಿಂದ ಆಡಳಿತ ಯಂತ್ರದ ಗಾತ್ರವನ್ನು ಕಡಿಮೆ ಮಾಡಲಾಗುತ್ತಿದೆ. ಅಂದರೆ ಅಷ್ಟು ಮಟ್ಟಿಗೆ ಮೀಸಲಾತಿಯನ್ನು ನಿರಾಕರಿಸಲಾಗುತ್ತಿದೆ.
ಇದನ್ನೇ "ಕನಿಷ್ಟ ಸರ್ಕಾರ- ಗರಿಷ್ಟ ಆಡಳಿತ" ಎಂದೂ, "ಆಡಳಿತ ಸುಧಾರಣೆ" ಯೆಂದೂ ಹೇಳಲಾಗುತ್ತದೆ.
ಸರ್ಕಾರವು ತನ್ನ ನೀತಿಯಲ್ಲಿ ಘೋಷಿಸಿಕೊಂಡಿರುವಂತೆ ನಿವೃತ್ತಿ ಇಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಖಾಲಿಯಾಗಿಯೇ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಕೆಳಹಂತದ ಸೇವೆಗಳನ್ನು ದಿನಗೂಲಿ-ಗುತ್ತಿಗೆಯ ಮೂಲಕ ಪೂರೈಸಿಕೊಳ್ಳುವ ಮೂಲಕ ಆಡಳಿತ ಯಂತ್ರಾಂಗದ ಗಾತ್ರ ಮತ್ತು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದಿದೆ. ಮೋದಿ ಸರ್ಕಾರ ಬರಲಿರುವ ವರ್ಷಗಳಲ್ಲಿ ಶೇ. ೪೦ ರಷ್ಟು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಾಗಿ ವಿಶ್ವ ಬ್ಯಾಂಕಿಗೆ ಭರವಸೆ ನೀಡಿದೆ. ಹೀಗೆ ಆಡಳಿತ ಯಂತ್ರಾಂಗದ ಅನೌಪಚಾರೀಕರಣ ಮತ್ತು ಖಾಸಗೀಕರಣದ ಮೂಲಕ ಕೇವಲ ಕೇಂದ್ರ ಆಡಳಿತ ಯತ್ರಾಂಗವೊಂದರಲ್ಲೇ ೧೦ ಲಕ್ಷಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ಸಮುದಾಯಗಳು ಉದ್ಯೋಗಾವಕಾಶಗಳಿಂದ ವಂಚಿತವಾಗಲಿವೆ.
ಆದರೆ ಅದೇ ಸಮಯದಲ್ಲಿ ಜಾಯಿಂಟ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ನೇರವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಇದರಿಂದ ಬಡ್ತಿಯ ಮೂಲಕ ಆ ಹುದೆಗಳನ್ನು ಪಡೆದುಕೊಳ್ಳಬೇಕಿದ್ದ ದಲಿತ-ಹಿಂದುಳಿದ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯವನ್ನೂ ಮತ್ತು ಅವಕಾಶವನ್ನೂ ನಿರಾಕರಿಸಿದೆ.
ಖಾಸಗೀಕರಣ ನಿಲ್ಲಲಿ- ಮೀಸಲಾತಿ ಉಳಿಯಲಿ
ಹೀಗೆ ಮೇಲಿನ ಅಂಕಿಅಂಶಗಳು ಹಾಗೂ ಸರ್ಕಾರಿ ನೀತಿಗಳು ಕೆಲವು ವಿಷಯಗಳನ್ನೂ ಸಾಬೀತು ಮಾಡುತ್ತವೆ:
ಮೊದಲನೆಯದು ಖಾಸಗೀಕರಣವು ದಲಿತ ಮತ್ತು ಹಿಂದುಳಿದ ಸಮುದಾಯಗಳ ಉದ್ಯೋಗದ ಹಕ್ಕನ್ನು ಕಸಿಯುತ್ತವೆ.
ಎರಡನೆಯದಾಗಿ ಸರ್ಕಾರಿ ವಲಯದ ಖಾಸಗೀಕರಣ ತೀವ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲೂ ಸರ್ಕಾರಿ ವಲಯದಲ್ಲೇ ಖಾಸಗೀ ವಲಯಕ್ಕಿಂತ ಹೆಚ್ಚಿನ ಔಪಚಾರಿಕ ಉದ್ಯೋಗಗಳು ಲಭ್ಯವಿವೆ.
ಮೂರನೆಯದಾಗಿ ಸರ್ಕಾರೀವಲಯದ ಶಾಶ್ವತ ಉದ್ಯೋಗಗಳೂ ದಿನಗೂಲಿ, ಗುತ್ತಿಗೆ ಪದ್ಧತಿಯಿಂದ ನಾಶವಾಗುತ್ತಿವೆ.
ಸಾರ್ವಜನಿಕ ಉದ್ದಿಮೆಗಳು ನಷ್ಟ ಮಾಡುತ್ತಿಲ್ಲ.
ಸರ್ಕಾರ ಖಾಸಗೀಕರಿಸುತ್ತಿರುವುದು ಉದ್ಯೋಗ ಸೃಷ್ಟಿಸಿರುವ ಲಾಭ ಮಾಡುತ್ತಿರುವ ಸರ್ಕಾರಿ ಕಂಪನಿಗಳನ್ನೇ ಹೊರತು ನಷ್ಟದಲ್ಲಿರುವ ಉದ್ಯಮಗಳನ್ನಲ್ಲ.
ಮೋದಿ ಸರ್ಕಾರದ ಕನಿಷ್ಟ ಸರ್ಕಾರ - ಗರಿಷ್ಟ ಆಡಳಿತವೆಂಬ ನೀತಿ ಹಾಗೂ ನೇರ ಭರ್ತಿ ನೀತಿಗಳು ಕಾರ್ಪೊರೇಟ್-ಬ್ರಾಹ್ಮಣಶಾಹಿ ನೀತಿಗಳಾಗಿವೆ.
ಹೀಗಾಗಿ ಸಾಮಾಜಿಕ ನ್ಯಾಯದ ಹೋರಾಟವು ಖಾಸಗೀಕರಣವನ್ನು ತಡೆಗಟ್ಟುವ ಹೋರಾಟವೂ ಆಗಬೇಕಾದ ತುರ್ತು ಅನಿವಾರ್ಯತೆಯಿದೆ.
-ಶಿವಸುಂದರ್
__________________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com