Advertisement

ಯಡಿಯೂರಪ್ಪ ಸರ್ಕಾರ 35 ಪರ್ಸೆಂಟ್ ಕಮಿಷನ್ ನ ಸರ್ಕಾರ- ಬಹಿರಂಗ ಚರ್ಚೆಗೆ ಸಿದ್ದ: ಸಿದ್ದರಾಮಯ್ಯ ಸವಾಲು

Advertisement

ಮುಖ್ಯಮಂತ್ರಿ ಯಡಿಯೂರಪ್ಪ ರವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಕಮಿಷನ್ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರೊಂದಿಗೆ ಜಗಳವಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಈಶ್ವರಪ್ಪ ಅವರ ಗಮನಕ್ಕೆ ತಾರದೆ ಅವರ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಮಿಷನ್ ಹೊಡೆಯುವ ವಿಷಯದಲ್ಲಿ ವಿಜಯೇಂದ್ರ ಮತ್ತು ಈಶ್ವರಪ್ಪ ನಡುವೆ ಜಗಳವಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತದಲ್ಲಿ ಕಮಿಷನ್ ದಂಧೆ 30-35 ಪರ್ಸೆಂಟ್ ಗಡಿ ದಾಟಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ ಕರ್ನಾಟಕದ ಬಿಜೆಪಿ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳಿಗೆ ಈ ವರೆಗೆ ನಯಾಪೈಸೆ ಖರ್ಚು ಮಾಡಿಲ್ಲ.‌ ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ನವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಣ ಖರ್ಚು ಮಾಡಿದ್ದರೆ ಲೆಕ್ಕ ಹೇಳಲಿ. ಯಡಿಯೂರಪ್ಪ ಅವರನ್ನು ಟೀಕಿಸಿದ್ದಕ್ಕಾಗಿ ಕೆಲ ಸಚಿವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರು ದಿನಬೆಳಗಾದರೆ ಯಡಿಯೂರಪ್ಪ ನವರ ವಿರುದ್ಧ ಟೀಕೆ ಮಾಡುತ್ತಾರೆ. ರಾಜ್ಯ ಸರ್ಕಾರದ ಸಚಿವರಿಗೆ ಧೈರ್ಯವಿದ್ದರೆ ಮೊದಲು ಯತ್ನಾಳ್ ಅವರ ಬಾಯಿ ಮುಚ್ಚಿಸಲಿ ಎಂದು ಅವರು ಸವಾಲೆಸೆದರು. ಕೊರೊನಾ ರೋಗದಿಂದ ತತ್ತರಿಸಿಹೋಗಿರುವ ರಾಜ್ಯದ ಜನತೆ ಕೆಎಸ್‌ಆರ್‌ಟಿಸಿ‌ ನೌಕರರ ಮುಷ್ಕರದಿಂದಾಗಿ ದುಪ್ಪಟ್ಟು ಕಷ್ಟ -ನಷ್ಟಕ್ಕೀಡಾಗುತ್ತಿರುವುದಕ್ಕೆ ರಾಜ್ಯದ ಅಸಮರ್ಥ- ಭ್ರಷ್ಟ ಯಡಿಯೂರಪ್ಪ ಸರ್ಕಾರವೇ ಹೊಣೆಯಾಗಿದೆ. ಕಳೆದ ಬಾರಿ ಕೆಎಸ್‌ಆರ್‌ಟಿಸಿ‌ ನೌಕರರ‌ ಮುಷ್ಕರದ ಸಂದರ್ಭದಲ್ಲಿ ಅವರ ಬೇಡಿಕೆಗಳ ಬಗ್ಗೆ ಸಮ್ಮತಿಸಿದಾಗಲೇ ಅದರ ಪರಿಣಾಮವನ್ನು ರಾಜ್ಯದ ಬಿಜೆಪಿ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಆ‌ ಕ್ಷಣದಲ್ಲಿ ಸುಳ್ಳು ಆಶ್ವಾಸನೆ ನೀಡಿ ನಂತರ ಮಾತು ತಪ್ಪಿರುವುದೇ ಈಗಿನ ಸಂಘರ್ಷಕ್ಕೆ ಕಾರಣ. ಕಾರ್ಮಿಕ‌ ಸಂಘದ ನಾಯಕರ ಜೊತೆ ಕೂತು ಅವರ ಮ‌ನವೊಲಿಸಿ ಸಮಸ್ಯೆಯನ್ನು ಬಗೆಹರಿಸಬೇಕಾದ ರಾಜ್ಯ ಸರ್ಕಾರ ಖಾಸಗಿ ಬಸ್ ಓಡಿಸುವ, ಎಸ್ಮಾ ಜಾರಿಗೊಳಿಸುವ ಬೆದರಿಕೆಯೊಡ್ಡಿ‌‌ ಸಂಘರ್ಷಕ್ಕೆ ದಾರಿಮಾಡಿಕೊಡುತ್ತಿರುವುದು ದುರದೃಷ್ಟಕರ. ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲಾಗದಿರುವುದಕ್ಕೆ ರಾಜ್ಯದ ಬಿಜೆಪಿ ಸರ್ಕಾರ ನೀಡುತ್ತಿರುವ ಆರ್ಥಿಕ ಸಂಕಷ್ಟ ಸ್ವಯಂಕೃತ ಅಪರಾಧ. ತನ್ನ ದುರಾಡಳಿತ ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ತಕ್ಷಣ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿ, ಸಾರಿಗೆ ವ್ಯವಸ್ಥೆಯಿಲ್ಲದೆ ಕಷ್ಟನಷ್ಟಕ್ಕಿಡಾಗಿರುವ ಜನತೆಯನ್ನು ರಕ್ಷಿಸಬೇಕು. ಆಂತರಿಕ ತಿಕ್ಕಾಟ,‌ ಅಸಾಮರ್ಥ್ಯ ಮತ್ತು ಭ್ರಷ್ಟಾಚಾರಗಳಿಂದಾಗಿ ಹಾದಿತಪ್ಪಿರುವ ರಾಜ್ಯ ಸರ್ಕಾರದ ಪಾಪದ ಫಲವನ್ನು ಜನತೆ ಅನುಭವಿಸಿದಂತಾಗಿದೆ. ಇದರ ವಿರುದ್ಧ ಸ್ಪಷ್ಟ ಸಂದೇಶವನ್ನು ಉಪಚುನಾವಣೆಯಲ್ಲಿ‌ ಮತದಾರರು ನೀಡಲಿದ್ದಾರೆ ಎಂದವರು ಹೇಳಿದರು. __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement