Advertisement

'ಬೈಂದೂರು ಬಿಜೆಪಿ ಶಾಸಕರ ಮನೆಯ ಮುಂದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ' -ಕಣ್ಣೀರಿಟ್ಟ ಮಹಿಳೆ

Advertisement

ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರಿಗೆ ನಾನು ಯಾವುದೇ ವ್ಯವಹಾರದಲ್ಲಿ ಚೆಕ್ ನೀಡದಿದ್ದರೂ, ಬಡ್ಡಿ ವ್ಯವಹಾರಕ್ಕಾಗಿ ಕುಂದಾಪುರದ ವಕೀಲ ಸದಾನಂದ ಶೆಟ್ಟಿ ಎಂಬುವವರಿಗೆ ನೀಡಿರುವ ಚೆಕ್ ಅನ್ನು ಅವರಿಂದ ಪಡೆದುಕೊಂಡ ಶಾಸಕರು ನನ್ನ ವಿರುದ್ಧ ಐದು ಲಕ್ಷ ರೂ. ಚೆಕ್‌ ಅನ್ನು ಬ್ಯಾಂಕಿಗೆ ಹಾಕಿ, ಇದೀಗ ಕುಂದಾಪುರದ ಕೋರ್ಟಿನಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ಈ ರೀತಿಯಾಗಿ ಶಾಸಕ ಸುಕುಮಾರ್ ಶೆಟ್ಟರು ನನಗೆ ಹಾಗೂ ನನ್ನ ಕುಟುಂಬಕ್ಕೆ ವಿಪರೀತವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಅಧ್ಯಕ್ಷ, ಹಾಲಿ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸದಾನಂದ ಉಪ್ಪಿನಕುದ್ರುರವರು, 'ಒಂದು ವೇಳೆ ನಾನು ಸುಕುಮಾರ್ ಶೆಟ್ಟರಿಗೆ ಚೆಕ್ ನೀಡಿದ್ದೇ ಹೌದಾದರೆ ಅವರು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ' ಎಂದು ಸವಾಲು ಹಾಕಿದ್ದಾರೆ. ಆರೋಪ ಸುಳ್ಳು: ಸುಕುಮಾರ ಶೆಟ್ಟಿ 'ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿದ್ದ ಸದಾನಂದ ರವರು ನಮ್ಮಲ್ಲಿ ಹತ್ತು ಕೋಟಿ ರೂ. ಕಾಮಗಾರಿಗೆ ಬೇಡಿಕೆ ಇಟ್ಟಿದ್ದರು. ನಾವು ಅವರಿಗೆ ಮೂರೂವರೆ ಕೋಟಿ ರೂ.ಗಳ ಕಾಮಗಾರಿ ನೀಡಿದ್ದೇವು. ಆದರೂ ಅವರು ಹತ್ತು ಕೋಟಿ ಕಾಮಗಾರಿಗಾಗಿ ಪಟ್ಟು ಹಿಡಿದಿದ್ದರು. ಅವರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕಾಗಿ ಅವರಿಗೆ 2018ರಲ್ಲಿ ಸ್ವಲ್ಪ ನಗದು ಹಾಗೂ ಐದು ಲಕ್ಷ ರೂ. ಬ್ಯಾಂಕ್ ಮೂಲಕ ನೀಡಿದ್ದೆ. ಆದರೆ ಅವರು ವಾಪಾಸು ಕೊಡದ ಕಾರಣ ಕೋರ್ಟಿನಲ್ಲಿ ದಾವೆ ಹೂಡಿದ್ದೇನೆ. ನನ್ನಿಂದ ಹತ್ತು ಲಕ್ಷ ಪಡೆದಿಲ್ಲ ಎಂದು ಅವರು ಪ್ರಮಾಣ ಮಾಡಲು ಸಿದ್ದವೇ?' ಎಂದು ಮರು ಸವಾಲೆಸಿದ್ದಾರೆ ಶಾಸಕ ಸುಕುಮಾರ ಶೆಟ್ಟರು. ಪ್ರಕರಣದ ಸಮರ್ಥನೆಯ ಗಡಿಬಿಡಿಯಲ್ಲಿ ಬೈಂದೂರು ಕ್ಷೇತ್ರದಾದ್ಯಂತ ನಡೆದ ಕಾಮಗಾರಿಯಲ್ಲಿ ಅಕ್ರಮದ ಸುಳಿವು ನೀಡಿದರೇ ಶಾಸಕರು? ರೂ 20ಸಾವಿರಕ್ಕಿಂತಲೂ ಹೆಚ್ಚು ಮೊತ್ತವನ್ನು ನಗದಾಗಿ ಕೊಡುವುದು ಅಪರಾಧ. ಹಾಗಿದ್ದೂ ಐದು ಲಕ್ಷ ಗಳಷ್ಟು ಹಣವನ್ನು ನಗದಾಗಿ ಕೊಟ್ಟ ಕುರಿತು ಶಾಸಕರು ನೀಡಿರುವ ಹೇಳಿಕೆ ಆರ್ಥಿಕ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಅಲ್ಲದೇ ಯಾವುದೇ ಸರ್ಕಾರಿ ಕಾಮಗಾರಿ ಟೆಂಡರ್ ಮೂಲಕವೇ ನಡೆಯಬೇಕೆಂಬ ನಿಯಮವಿದ್ದರೂ ಶಾಸಕರು 3.5ಕೋಟಿ ರೂ.ಗಳ ಕಾಮಗಾರಿಯನ್ನು ಸದಾನಂದ ಉಪ್ಪಿನಕುದ್ರು ಗೆ ನೀಡಿರುವ ಕುರಿತು ನೀಡಿದ ಹೇಳಿಕೆ ಇದೀಗ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳಲ್ಲಿ ಬಾರೀ ಭ್ರಷ್ಟಾಚಾರ ನಡೆದಿರುವ ಕುರಿತು ಸುಳಿವು ಒದಗಿಸಿದೆ. ಶಾಸಕರು ತಮಗೆ ಬೇಕಾದವರಿಗೆ, ಬೇಕಾದಷ್ಟು ಗುತ್ತಿಗೆಗಳನ್ನು ನೀಡುವುದಾದರೆ ಟೆಂಡರ್ ನಿಯಮ ಇರುವುದಾದರೂ ಏಕೆ? ಇದಕ್ಕೆ ಅಧಿಕಾರಿಗಳು ಎನಂತಾರೆ? ಎಂಬೆಲ್ಲಾ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಸದಾನಂದ ಉಪ್ಪಿನಕುದ್ರು ರವರ ಪತ್ರಿಕಾ ಹೇಳಿಕೆಯ ಮುಂದುವರಿದ ಭಾಗ ಇಂತಿವೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸುಕುಮಾರ್ ಶೆಟ್ಟಿ ಗೆಲುವಿಗೆ ಬೈಂದೂರು ವಿಧಾನಸಭಾ ಕ್ಷೇತ್ರಾಧ್ಯಕ್ಷನಾಗಿ ಹಗಲಿರುಳು ದಣಿವರಿಯದೇ ಶ್ರಮಿಸಿದ್ದೇನೆ. ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಮಟ್ಕಾ, ಜುಗಾರಿ, ಇಸ್ಪೀಟ್, ಕಮಿಶನ್ ವ್ಯವಹಾರ ಮುಂತಾದ ಅಕ್ರಮ ದಂಧೆಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ್ದ ಸುಕುಮಾರ ಶೆಟ್ಟರು ಚುನಾವಣೆಯಲ್ಲಿ ಗೆದ್ದ ಬಳಿಕ ಆ ಆಶ್ವಾಸನೆಗಳ ವಿಚಾರದಲ್ಲಿ ಯಾವುದೇ ಚಕಾರ ಎತ್ತಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ನಾನು ಪ್ರಶ್ನಿಸಿದಕ್ಕೆ ಶಾಸಕರು ನನ್ನ ಮೇಲೆ ರೇಗಾಡಿ, 'ನಾನು ಚುನಾವಣೆಗೆ ಹತ್ತು ಕೋಟಿ ಖರ್ಚು ಮಾಡಿದ್ದೇನೆ. ಆ ಹಣವನ್ನು ನೀನು ಕೊಡುತ್ತೀಯಾ?' ಎಂದು ವಿಪರೀತವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದೇ ವಿಚಾರದಲ್ಲಿ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶಾಸಕ ಶೆಟ್ಟರು ನನ್ನ ವಿರುದ್ದ ಅಸಹನೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ ಎಂದು ಸದಾನಂದ ಉಪ್ಪಿನಕುದ್ರು ದೂರಿದ್ದರು. ನನ್ನ ವ್ಯವಹಾರಕ್ಕಾಗಿ ಹಣದ ಅಗತ್ಯತೆ ಬಿದ್ದಾಗ ಕುಂದಾಪುರದ ವಕೀಲ ಸದಾನಂದ ಶೆಟ್ಟಿಯಿಂದ 20 ಲಕ್ಷ ರೂ. ಬಡ್ಡಿಯ ಮೇಲೆ ಸಾಲ ಪಡೆದುಕೊಂಡಿದ್ದೆ. ಆ ಸಂದರ್ಭದಲ್ಲಿ ಅವರಿಗೆ ನಾನು ಐದು ಖಾಲಿ ಚೆಕ್‌ಗಳಿಗೆ ಸಹಿ ಮಾಡಿ ನೀಡಿದ್ದೇನೆ. ಹಾಗೆಯೇ ಆ ನಂತರ ಅಸಲು 20ಲಕ್ಷ ಮತ್ತು ಬಡ್ಡಿಯ ಬಾಬ್ತು 28ಲಕ್ಷ ಒಟ್ಟು 48 ಲಕ್ಷ ರೂ. ಬ್ಯಾಂಕ್ ಮೂಲಕವೇ ಮರು ಪಾವತಿಸಿ ಸಾಲ ತೀರಿಸಿದ್ದೇನೆ. ಆದರೆ ಆ ಬಳಿಕವೂ ವಕೀಲ ಸದಾನಂದ ಶೆಟ್ಟರು ನಾನು ಕೊಟ್ಟ ಖಾಲಿ ಚೆಕ್‌ಗಳನ್ನು ವಾಪಾಸು ನೀಡಿರಲಿಲ್ಲ. ಕೇಳಿದರೆ ಚೆಕ್ ಸಿಗುತ್ತಿಲ್ಲ ಎಂಬ ನೆವ ಹೇಳಿದ್ದರು. ಆ ನಂತರ ನನ್ನ ಈ ವ್ಯವಹಾರವನ್ನು ತಿಳಿದ ಶಾಸಕ ಶೆಟ್ಟರು ಕುಂದಾಪುರದ ಬೋರ್ಡ್ ಹೈಸ್ಕೂಲ್‌ನ ದೈಹಿಕ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ ಎಂಬುವರ ಜೊತೆ ಸೇರಿ ಸದಾನಂದ ಶೆಟ್ಟಿಯವರಿಂದ ಖಾಲಿ ಚೆಕ್ ಅನ್ನು ಪಡೆದು ನನ್ನ ವಿರುದ್ದ 5 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ಹಾಕಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಮತ್ತು ಶಾಸಕರ ಬೆಂಬಲದ ಮೂಲಕ ವಕೀಲ ಸದಾನಂದ ಶೆಟ್ಟಿ ಕೂಡ ನನ್ನ ವಿರುದ್ದ 25 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ ಎಂದು ಸದಾನಂದ ಉಪ್ಪಿನಕುದ್ರು ಆರೋಪಿಸಿದ್ದಾರೆ. ಶಾಸಕ ಸುಕುಮಾರ್ ಶೆಟ್ಟಿ ಗೆಲುವಿಗೆ ನಾನು ಬೈಂದೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷನಾಗಿ ಖರ್ಚು ಮಾಡಿರುವ 45 ಲಕ್ಷ ರೂ. ನಲ್ಲಿ ಅವರು 10 ಲಕ್ಷ ಮಾತ್ರವೇ ವಾಪಾಸ್ಸು ನೀಡಿದ್ದರು. ಉಳಿದ 35 ಲಕ್ಷ ಬಾಕಿ ಇಟ್ಟು, ಈ ತನಕವೂ ವಾಪಾಸು ನೀಡದೇ ಇದೀಗ ನನ್ನ ಮೇಲೆಯೇ ಉಲ್ಟಾ ಕೇಸನ್ನು ಹಾಕಿ ಮತ್ತು ಸದಾನಂದ ಶೆಟ್ಟರ ಮೂಲಕ ಹಾಕಿಸಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಮೇಲೆ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ಪಕ್ಷ ಹಾಗೂ ಸುಕುಮಾರ್ ಶೆಟ್ಟಿ ಗೆಲುವಿಗೆ ಶ್ರಮಿಸಿದ್ದ ಪರಿಣಾಮ ಆ ಸಮಯದಲ್ಲಿ ನಾನು ಉದ್ಯಮದತ್ತ ಗಮನ ಹರಿಸಲಾಗದ ಕಾರಣಕ್ಕಾಗಿ ನಾನು ನನ್ನ ವ್ಯವಹಾರದಲ್ಲಿ ಸಂಪೂರ್ಣವಾಗಿ ನಷ್ಟವಾಗಿ ಇದೀಗ ದಿವಾಳಿಯಾಗಿದ್ದೇನೆ ಮತ್ತು ಆರ್ಥಿಕ ಶಕ್ತಿ ಇಲ್ಲದ ನನಗೆ ಕಾನೂನು ಹೋರಾಟ ಕೂಡ ಕಷ್ಟವಾಗಿದೆ ಎಂದವರು ಕಣ್ಣೀರು ಹಾಕಿದ್ದರು. ಹಿಂದಿನ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಗೋಪಾಲ ಪೂಜಾರಿ ಯವರು ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆಗಿದ್ದ ವೇಳೆ ಸುಮಾರು ಎರಡು ಸಾವಿರ ಕೋಟಿ ಅನುಧಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಿದ್ದರಾದರೂ ಕಳೆದ ವಿಧಾನಸಭಾ ಚುನಾವಣೆ (2018)ರಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಎದುರು ಸುಕುಮಾರ ಶೆಟ್ಟರು 24393 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಮತ್ತು ಆ ಸೋಲಿಗೆ ಸುಕುಮಾರ ಶೆಟ್ಟರ ಕಡೆಯಿಂದ ವಿಪರೀತವಾಗಿ ಹಣ ಹಂಚಿರುವುದೇ ಕಾರಣ ಎಂದು ಹಲವರು ಆಡಿಕೊಂಡಿದ್ದರು. ಇದೀಗ ಅದಕ್ಕೆ ಪೂರಕ ಎಂಬಂತೆ ಸದಾನಂದ ಉಪ್ಪಿನ ಕುದ್ರು ತನ್ನ ಸ್ವಂತದ ಹಣದಿಂದ 45ಲಕ್ಷ ಹಣ ಖರ್ಚು ಮಾಡಿರುವ ಕುರಿತು ನೀಡಿರುವ ಹೇಳಿಕೆ ತನಿಖೆಗೆ ಅರ್ಹವಾದುದಾಗಿದೆ. ಶಾಸಕ ಸುಕುಮಾರ ಶೆಟ್ಟರು ಚುನಾವಣಾ ಆಯೋಗಕ್ಕೆ ನೀಡಿರುವ ಲೆಕ್ಕದಲ್ಲಿ ಈ ಹಣವೂ ಸೇರಿದೆಯೇ? ಅಥವಾ ಸೇರಿಲ್ಲವೇ? ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ದಾಖಲಿಸುವ ಕುರಿತು ಶಾಸಕರ ವಿರೋಧಿ ವಲಯದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಶಾಸಕರ ಮನೆ ಎದುರು ಸಾಮೂಹಿಕ ಆತ್ಮಹತ್ಯೆ: ರೇಷ್ಮಾ ಸದಾನಂದ ಉಪ್ಪಿನಕುದ್ರು ಶಾಸಕರ ಕಿರುಕುಳ ಇದೇ ರೀತಿ ಮುಂದುವರಿದರೆ ಅವರ ಮನೆ ಎದುರೇ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಸದಾನಂದ ಉಪ್ಪಿನಕುದ್ರು ಅವರ ಪತ್ನಿ ರೇಷ್ಮಾ ಮಾಧ್ಯಮದ ಮುಂದೆ ಕಣ್ಣಿರಿಟ್ಟು ಹೇಳಿದ್ದಾರೆ. ಸುಕುಮಾರ್ ಶೆಟ್ಟಿ ರಾಜಕೀಯವಾಗಿ ನನ್ನ ಪತಿಯನ್ನು ಹಗಲು ರಾತ್ರಿ ಬಳಸಿಕೊಂಡಿದ್ದಾರೆ. ರಾಜಕೀಯಕ್ಕೆ ಹೆಚ್ಚು ಸಮಯ ಕೊಟ್ಟ ಕಾರಣ ಅವರ ವ್ಯವಹಾರಕ್ಕೆ ಬಾರೀ ನಷ್ಟವಾಗಿದೆ. ವ್ಯವಹಾರದಲ್ಲಿ ಕನಿಷ್ಠ ಐದಾರು ಕೋಟಿ ಹಣ ಕಳೆದುಕೊಂಡಿದ್ದೇವೆ. ನನ್ನ ಪತಿ ಚೆಕ್ ಕೊಟ್ಟಿದ್ದಾರೆಂದು ಅವರು ಕೊಲ್ಲೂರಿಗೆ ಬಂದು ಪ್ರಮಾಣ ಮಾಡಲಿ. ಪ್ರಮಾಣ ಮಾಡಿದರೆ ಕಿಡ್ನಿಯಾದರೂ ಮಾರಿ ಅವರ ಹಣ ತೀರಿಸುವೆ ಎಂದವರು ಹೇಳಿದರು.ಈ ಸಂದರ್ಭದಲ್ಲಿ ಸದಾನಂದ ಅವರ ತಾಯಿ ಲೀಲಾವತಿ ಕೂಡ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಜೊತೆಯಲ್ಲಿ ಸದಾನಂದ ಅವರ ಮಕ್ಕಳಾದ ಸಾರಥ್ಯ, ಸಮರ್ಥ ಮತ್ತು ಶ್ರೀಲಕ್ಷ್ಮೀ ಉಪಸ್ಥಿತರಿದ್ದರು. __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement