Advertisement

ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?

Advertisement

ಮಹಾಭಾರತ ಯುದ್ಧ 18ದಿನಗಳಲ್ಲಿ ಗೆಲ್ಲಲಾಗಿದೆ. ಹಾಗೆಯೇ ಕೊರೊನಾ ವಿರುದ್ಧದ ಯುದ್ಧ ಕೇವಲ 21ದಿನಗಳಲ್ಲಿ ಗೆಲ್ಲುವೆವು ಎಂದಿದ್ದವರು ನಮ್ಮ ಪ್ರಧಾನಿ ಮೋದಿ... ಇದು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಘೋಷಿಸಿದ ಸಂಧರ್ಭದಲ್ಲಿ! ಆ ಸಂಧರ್ಭದಲ್ಲಿ ಈ ದೇಶದಲ್ಲಿದ್ದ ಕೊರೊನಾ ಪೀಡಿತರ ಸಂಖ್ಯೆ ಕೇವಲ 497ರ ಆಸುಪಾಸು ಆಗಿತ್ತು. ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸುವ ಮೂಲಕ ಅತೀ ಸರಳವಾಗಿ ತಡೆಯಬಹುದಾಗಿದ್ದ ಈ ಕೊರೊನಾ ಎಂಬ ವಿದೇಶಿ ಪಿಡುಗನ್ನು ಹಾಗೆ ಮಾಡಿ ತಡೆಯದೇ ಇಡೀ ದೇಶದ 137ಕೋಟಿ ಜನರನ್ನು ಲಾಕ್‌ಡೌನ್ ಮಾಡುವ ಮೂಲಕ 'ದೇಶದ ಆರ್ಥಿಕತೆಗೂ ಕೊರೊನಾ ಸೋಂಕು' ತಗಲಿಸಿದ್ದರು ನಮ್ಮ ಪ್ರಧಾನಿ ಮೋದಿಯವರು. ಲಾಕ್‌ಡೌನ್ ಅವಧಿಯಲ್ಲಿ ಆರೋಗ್ಯ ತಜ್ಞರ ಜೊತೆ, ಆರ್ಥಿಕ ತಜ್ಞರ ಜೊತೆ, ಶಿಕ್ಷಣ ತಜ್ಞರ ಜೊತೆ, ವಿಜ್ಞಾನಿಗಳ ಜೊತೆ ಚರ್ಚಿಸಿ ಜನಸಾಮಾನ್ಯರಿಗೆ ಯಾವುದೇ ತೆರನಾಗಿ ತೊಂದರೆಯಾಗದ ರೀತಿಯಲ್ಲಿ ನಿರ್ಣಯಗಳನ್ನು ಪ್ರಕಟಿಸಬೇಕಿದ್ದ ಪ್ರಜಾಪ್ರಭುತ್ವ ದೇಶದ ಸರ್ಕಾರವೊಂದರ ಚುಕ್ಕಾಣಿ ಹಿಡಿದಿದ್ದ ಮೋದಿಯವರು ಪದೇಪದೇ ರಾತ್ರಿ ಎಂಟು ಗಂಟೆಗೆ ಟಿವಿಯಲ್ಲಿ ಬಂದು 'ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ, ಕ್ಯಾಂಡಲ್ ಹಚ್ಚುವಂತೆ' ಮುಂತಾದ ಮೂರ್ಖತನದ ಪ್ಲಾನ್ ಗಳನ್ನೇ ಘೋಷಿಸುತ್ತಿದ್ದರು. ಸ್ವಾತಂತ್ರ್ಯಾ ನಂತರದ ಸರ್ಕಾರಗಳ ಕುರಿತು ಈ ಎಪ್ಪತ್ತು ವರ್ಷಗಳ ಅವಧಿಯಲ್ಲಿ 'ಸರ್ಕಾರ ಮಾಡುವುದೆಲ್ಲವೂ ನಮ್ಮ ಒಳ್ಳೆಯದಕ್ಕೆ' ಎಂಬ ಭಾವನೆಗಳನ್ನು ಹಾಗೂ ನಂಬಿಕೆಯನ್ನು ಬೆಳೆಸಿಕೊಂಡಿದ್ದ ದೇಶದ ಜನಸಾಮಾನ್ಯರು 'ಪ್ರಧಾನಿ ಹೇಳುವುದೆಲ್ಲವೂ ನಮ್ಮ ಒಳ್ಳೆಯದಕ್ಕೆ' ಎಂಬ ಕುರುಡು ನಂಬಿಕೆಯಿಂದ ಮೋದಿಯವರ ಮಾತುಗಳನ್ನು ಅಪಾರವಾದ ಗೌರವದಿಂದ ಪಾಲಿಸಿದ್ದವು. ಆದರೆ ಆ ನಂತರ ನಡೆದದ್ದೆಲ್ಲವೂ ಇತಿಹಾಸ... ಏಕೆಂದರೆ ಮೋದಿಯವರ ಬೆಂಬಲಿಗರು ಒಂದು ಹೆಜ್ಜೆ ಮುಂದೆ ಹೋಗಿ ಹಾಗೆಯೇ ಅಂಧ ಭಕ್ತರಂತೂ ಹತ್ತು ಹೆಜ್ಜೆ, ನೂರು ಹೆಜ್ಜೆ ಮುಂದೆ ಹೋಗಿ 'ದೇಶದಲ್ಲಿ ಲಾಕ್‌ಡೌನ್ ಇದೆ' ಎಂಬುವುದನ್ನು ಕೂಡ ಮರೆತು ಗುಂಪು ಗುಂಪಾಗಿ ಸೇರಿ ಮನೆಯಲ್ಲಿದ್ದ ಜಾಗಟೆ, ತಾಟು- ಬಟ್ಟಲುಗಳನ್ನೆಲ್ಲಾ ಬಡಿದು ಹುಡಿ ಮಾಡಿ ಬಿಸಾಡಿದ್ದರು. ಕ್ಯಾಂಡಲ್ ಹಚ್ಚುವ ಬದಲಿಗೆ ಮತ್ತೆ ಗುಂಪು ಗುಂಪಾಗಿ ಸೇರಿ ಸೂಡಿಗಳನ್ನು ಹಚ್ಚಿ ಊರಿಡಿ ಮೆರವಣಿಗೆ ಮಾಡಿ ಕೇಕೆ ಹಾಕಿ ಕುಣಿದಿದ್ದರು. ವರದಿಯೊಂದರ ಪ್ರಕಾರ 'ದೇಶದಲ್ಲಿ ಈ ಒಂದು ವರ್ಷದ ಅವಧಿಯಲ್ಲಿ ಕೊರೊನಾ ಕಾಯಿಲೆ ಬಂದು, ಚಿಕಿತ್ಸೆ ಯಶಸ್ವಿಯಾಗದೆ ಸತ್ತವರ ಸಂಖ್ಯೆಗಿಂತ ಬೇರೆಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಅಥವಾ ವಯಸ್ಸಾದವರು ಕೊರೊನಾ ಲಾಕ್‌ಡೌನ್ ಕಾರಣಕ್ಕಾಗಿ ಸೂಕ್ತವಾದ ಸೌಲಭ್ಯ, ಜೌಷದ ಅಥವಾ ಚಿಕಿತ್ಸೆ ಸಿಗದೆ ಸತ್ತವರ ಸಂಖ್ಯೆಯೇ ನೂರಾರು ಪಾಲು ಹೆಚ್ಚು.' ಆದರೆ ಈ ಕುರಿತು ಯಾವುದೇ ಪರಿಹಾರೋಪಾಯಗಳನ್ನು ಕೈಗೊಳ್ಳದ ಕೇಂದ್ರದ ಮೋದಿ ಸರ್ಕಾರ, ಸರ್ಕಾರದ ಲೆಕ್ಕಪತ್ರ ಇಲಾಖೆಯ ವ್ಯಾಪ್ತಿಗೆ ಬರುವ 'ಪ್ರಧಾನ ಮಂತ್ರಿ ಪರಿಹಾರ ನಿಧಿ' ಈ ಮೊದಲೇ ಇದ್ದರೂ 'ಪಿಎಂ ಕ್ಯಾರ‌್ಸ್ ಫಂಡ್' ಎಂಬ ಹೊಸತೊಂದು ನಿಧಿಯನ್ನು ಆರಂಬಿಸಿ ಕೊರೊನಾ ಹೆಸರಲ್ಲಿ ಸಾವಿರಾರು ಕೋಟಿ ಹಣವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿತ್ತು. ಆದರೆ ಈ ತನಕವೂ ಆ ನಿಧಿಗೆ ಬಂದ ಹಣ ಎಷ್ಟು, ಅದನ್ನು ಯಾವ ಕಾರಣಕ್ಕಾಗಿ ರಚಿಸಲಾಗಿದೆ ಮತ್ತು ಆ ಹಣವನ್ನು ಯಾವ್ಯಾವುದಕ್ಕೆ ವಿನಿಯೋಗಿಸಲಾಗಿದೆ ಎಂದು ಸಾರ್ವಜನಿಕ ರಿಗೆ ಬಹಿರಂಗಪಡಿಸಿಲ್ಲ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಈ ನಿಧಿ ಕೇಂದ್ರದ ಸಿಎಜಿ ವ್ಯಾಪ್ತಿಗೆ ಮತ್ತು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂಬ ಉತ್ತರ ನೀಡಿದೆ. ಹಾಗೆಯೇ ಲೂಟಿ ಹೊಡೆಯಲು ಇದೇ ಸುಸಂಧರ್ಭ ಎಂದು ನಿರ್ಣಯಿಸಿದ ಕರ್ನಾಟಕ ಮುಂತಾದ ಬಿಜೆಪಿ ಸರ್ಕಾರವಿರುವ ರಾಜ್ಯ ಸರ್ಕಾರಗಳು ಈ ಕೊರೊನಾ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಪಿಪಿಇ ಕಿಟ್, ವೆಂಟಿಲೇಟರ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಮುಂತಾದ ಅಗತ್ಯ ವಸ್ತುಗಳನ್ನು ಒಂದಕ್ಕೆ ಮೂರು ಪಟ್ಟು ದರದಲ್ಲಿ ಬಿಲ್ಲು ಮಾಡಿ ಖರೀದಿಸುವ ಮೂಲಕ ಅಕ್ರಮಗಳನ್ನು ನಡೆಸಿದ್ದು, ಆ ಕುರಿತು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು 'ಸಾವಿರಾರು ಕೋಟಿ ಲೂಟಿ ಆಗಿರುವ ಕುರಿತು' ಕೋಲಾಹಲ ಎಬ್ಬಿಸಿದ್ದು ಎಲ್ಲವೂ ಇತಿಹಾಸ. ಕೇಂದ್ರ ಸರ್ಕಾರವಿರಲಿ, ರಾಜ್ಯ ಸರ್ಕಾರವಿರಲಿ ಕೊರೊನಾ ನಿಗ್ರಹದ ಕುರಿತು ಯಾವುದೇ ಅಗತ್ಯ ಕ್ರಮ ಕೈಗೊಳ್ಳದೇ ಚಪ್ಪಾಳೆ, ಕಾಂಡಲ್ ನಂತಹ ಅವೈಜ್ಞಾನಿಕ ಕ್ರಮಗಳ ಮೂಲಕ ಹಾಗೂ ಕೊರೊನಾ ಹೆಸರಲ್ಲಿ ಲೂಟಿಗಿಳಿದ ಪರಿಣಾಮ ಇದೀಗ ಕೊರೊನಾ ಎರಡನೆಯ ಅಲೆ ದೇಶದಾದ್ಯಂತ ವ್ಯಾಪಿಸಿದೆ. ಆದರೆ ಆಳುವವರು ಮತ್ತೆ ಲಾಕ್‌ಡೌನ್ ಘೋಷಿಸುವ ಆ ಹೆಸರಲ್ಲಿ ಲೂಟಿಗಿಳಿವ ಲೆಕ್ಕಾಚಾರದಲ್ಲಿದ್ದಾರೆ. ಜನ ಕೊರೊನಾ ಎರಡನೆ ಅಲೆಗಿಂತಲೂ ಲಾಕ್‌ಡೌನ್ ಘೋಷಿಸಲ್ಪಟ್ಟರೆ ಎದುರಾಗುವ ಆರ್ಥಿಕ ಸಂಕಷ್ಟ (ಬ್ಯಾಂಕ್ ಸಾಲದ ಕಂತು, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನಿತರ) ಗಳ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ, ಭಯಭೀತರಾಗಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 'ಕೊರೊನಾ ಲಸಿಕೆ' ಪರಿಣಾಮಕಾರಿ ಎಂದು ದೇಶದ ವಿಜ್ಞಾನಿಗಳು ಪದೇಪದೇ ಹೇಳುತ್ತಿದ್ದರೂ ಜನ ಮೋದಿ ಸರ್ಕಾರದ 'ಲಸಿಕೆ ಅಭಿಯಾನ'ವನ್ನು ನಂಬುತ್ತಿಲ್ಲ ಅಂದರೆ ಸರ್ಕಾರದ ಬಗೆಗಿನ‌ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದೇ ಅರ್ಥೈಸಬೇಕಾಗಿದೆ! ಬದಲಿಗೆ 'ಕೊರೊನಾಗಿಂತಲೂ ಘೋರ ಮೋದಿ ಸರ್ಕಾರ' ಎಂಬ ಮಾತು ಬೀದಿ ಬದಿಯಲ್ಲಿ ಜನಸಾಮಾನ್ಯರ ಬಾಯಿಂದ ಬರುತ್ತಿರುವುದು ಭಾರತದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಕಳೆದ ವರ್ಷದ ಲಾಕ್‌ಡೌನ್ ಮತ್ತು ಕೊರೊನಾ ಎರಡನೆಯ ಅಲೆಯ ಈ ನಡುವೆ ಈ ದೇಶದ ಬೆರಳೆಣಿಕೆಯಷ್ಟು ಪರ್ಸಂಟೇಜ್ ಜನರಿಗೆ ಲಸಿಕೆ ನೀಡಿದ ಸರ್ಕಾರ, ಹತ್ತಕ್ಕೂ ಹೆಚ್ಚು ವಿದೇಶಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿರುವ ಕುರಿತು ಅದರಿಂದ ಭಾರತ ವಿಶ್ವಗುರು ಆಗುವುದಾಗಿ ಆಳುವ ಪಕ್ಷ ಬಿಜೆಪಿ ಹೇಳಿಕೊಂಡಿದೆ ಮತ್ತು ಇದೀಗ ಲಸಿಕೆ ಶಾರ್ಟೇಜ್ ನೆಪದಲ್ಲಿ ವಿದೇಶಿ ಲಸಿಕೆಯನ್ನು ಆಮದು ಮಾಡಿಕೊಳ್ಳುವ ಮಾತು ಕೂಡಾ ಕೇಳಿ ಬರುತ್ತಿದೆ. ನಾವು ವಿಶ್ವಗುರುವಾಗುವ ಭ್ರಮೆಯಿಂದ ವಿದೇಶಗಳಿಗೆ ಉಚಿತವಾಗಿ ಲಸಿಕೆ ನೀಡಿರಬಹುದಾದರೂ ಇದೀಗ ವಿದೇಶಿ ಲಸಿಕೆ ಉಚಿತವಾಗಿ ಬರಲಾರದು ಎಂಬುವುದು ಬೆರಳು ಚೀಪುವ ಮಕ್ಕಳಿಗೂ ತಿಳಿದಿದೆ ಮತ್ತು ಈ ಕುರಿತು ಜನಸಾಮಾನ್ಯರ ತಕ್ಷಣದ ಪ್ರತಿಕ್ರಿಯೆ ಏನೆಂದರೆ 'ವಿದೇಶಿ ಲಸಿಕೆ ಆಮದು ಮಾಡಿಕೊಳ್ಳುವ ಮೂಲಕ ಇನ್ನೆಷ್ಟು ಲೂಟಿ ಮಾಡುವರೋ?' ಎಂಬುವುದಾಗಿದೆ. ಚುನಾವಣಾ ರ‌್ಯಾಲಿ ಹಾಗೂ ಕುಂಭಮೇಳಕ್ಕೆ ಲಕ್ಷಾಂತರ ಜನ‌ ಸೇರಲು ಅನುಮತಿಸಿದ ಇವರುಗಳು ಕಾರಿನಲ್ಲಿ ಒಬ್ಬರೆ ಹೋಗುವಾಗ ಮಾಸ್ಕ್ ಕಡ್ಡಾಯ ಮಾಡಿರುವುದು, ವಿಪರೀತವಾಗಿ ದಂಡ ಹಾಕುವ ಮೂಲಕ ಜನರ ಲೂಟಿಗೆ ಆಳುವ ಸರ್ಕಾರವೇ ಇಳಿದಿರುವುದು ವಿಪರೀತವಾಗಿ ವಿರೋಧಕ್ಕೆ ಕಾರಣವಾಗಿದೆ. ಹೌದು... ಜನಸಾಮಾನ್ಯರು ಆಳುವ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದುವೇ ನವಭಾರತ ಅರ್ಥಾತ್ ಮೋದಿಯವರ New India. ಈ ಕುರಿತು ರಾಜ್ಯ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಲು ಅತ್ಯಂತ ಪರಿಣಾಮಕಾರಿಯಾದ ವಿಡಿಯೋ ಕೊಲಾಜ್ ಒಂದನ್ನು ಬಿಡುಗಡೆಗೊಳಿಸಿದ್ದು ಅದು ಅತಿಹೆಚ್ಚು ಸಂಖ್ಯೆಯಲ್ಲಿ ವೈರಲ್ ಆಗಿದೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement