Video: ಎಳೆ ಬಾಲಕನ, ಆಕಾಶದಲ್ಲಿ ಹಾರುವ ಕನಸನ್ನು ನೆರವೇರಿಸಿದ ರಾಹುಲ್ ಗಾಂಧಿ!
Video: ಎಳೆ ಬಾಲಕನ, ಆಕಾಶದಲ್ಲಿ ಹಾರುವ ಕನಸನ್ನು ನೆರವೇರಿಸಿದ ರಾಹುಲ್ ಗಾಂಧಿ!
Advertisement
ಬಾಲ್ಯ ಎಂದರೆ ಹಾಗೆಯೇ... ಎಳೆಯ ಪ್ರಾಯದಲ್ಲಿ ಸಹಜವಾಗಿಯೇ ಹಲವಾರು ಬಣ್ಣ ಬಣ್ಣದ ಕನಸುಗಳಿರುತ್ತವೆ. ಮುಂದೆ ನೀನು ಏನಾಗ ಬೇಕೆಂದುಕೊಂಡಿರುವೆ ಎಂದು ಪ್ರಶ್ನಿಸಿದರೆ ಮನಸ್ಸಿನೊಳಗಿನ ಉತ್ಕಟವಾದ ಆಸೆಯನ್ನು ಆ ಮಕ್ಕಳು ನಮ್ಮ ಮುಂದೆ ಬಿಚ್ಚಿಡುತ್ತವೆ. ಆದರೆ ಆ ಕ್ಷಣಕ್ಕೆ ಅದನ್ನು ನೆರವೇರಿಸುವ ಶಕ್ತಿ ನಮ್ಮಲ್ಲಿ ಇರದಾದಾಗ ನಾವು ಅವರಿಗೆ ಕೇವಲ ಬೆನ್ನು ತಟ್ಟುವ ಮಾತನ್ನಷ್ಟೇ ಆಡಿ ಹಿಂತಿರುಗುತ್ತೇವೆ. ಆದರೆ ಇಲ್ಲೋರ್ವ ಎಳೆ ಬಾಲಕನ ಆಸೆಯನ್ನು ಕೇವಲ 24 ಗಂಟೆಗಳಲ್ಲಿ ನೆರವೇರಿಸಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಇದೀಗ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಹುಲ್ ಗಾಂಧಿಯವರು ಕೇರಳದ ಕಣ್ಣೂರಿನಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಈ ಆಕಸ್ಮಿಕ ಘಟನೆ ನಡೆದಿದೆ.
ರಸ್ತೆ ಬದಿಯ ಸಣ್ಣ ಹಳೆಯ ಚಹಾ ಅಂಗಡಿಯೊಂದರಲ್ಲಿ ರಾಹುಲ್ ಮತ್ತವರ ತಂಡದ ಸದಸ್ಯರು ತಿಂಡಿ ತಿನ್ನುತಿದ್ದಾಗ ದೂರದಿಂದ 9 ವರ್ಷದ ಬಾಲಕನೋರ್ವ ಪದೇ ಪದೇ ಇಣುಕಿ ನೋಡುತ್ತಿದ್ದುದ್ದನ್ನು ರಾಹುಲ್ ಗಮನಿಸಿ ಆ ಹುಡುಗನನ್ನು ಹತ್ತಿರ ಕರೆಸಿ ಆತ್ಮೀಯವಾಗಿ ಮಾತನ್ನಾಡಿದ್ದಾರೆ.
ನಿನ್ನ ಹೆಸರೇನೆಂದು ಕೇಳಿದಾಗ ಆತ ತನ್ನ ಹೆಸರು ಅದ್ವೈತ್ ಸುಮೇಶ್ ಎಂದಿದ್ದಾನೆ. ನೀನು ದೊಡ್ಡವನಾದ ಮೇಲೆ ಏನಾಗ್ಬೇಕು ಎಂದುಕೊಂಡಿದ್ದಿ ಎಂದು ರಾಹುಲ್ ಪ್ರಶ್ನಿಸಿದಾಗ ಆ ಬಾಲಕ ಅದ್ವೈತ್ ʼನಾನು ಆಕಾಶದಲ್ಲಿ ಹಾರಲು ಬಯಸುತ್ತೇನೆ, ವಿಮಾನದ ಪೈಲೆಟ್ ಆಗುವುದು ನನ್ನ ಕನಸುʼ ಎಂದಿದ್ದಾನೆ. ಆ ಎಳೆ ಹುಡುಗನ ಆತ್ಮವಿಶ್ವಾಸ ಮತ್ತು ಗುರಿಯನ್ನು ಕಂಡು ರಾಹುಲ್ ಗಾಂಧಿ ಪುಳಕಿತರಾಗಿದ್ದಾರೆ ಮತ್ತು ಆ ಬಾಲಕನ ಕನಸಿಗೆ ಪುಷ್ಟಿ ಕೊಡಲು ನಿರ್ಧರಿಸಿದ್ದಾರೆ. ಬಳಿಕ ಬಾಲಕನ ಸಮೇತ ಆತನ ಪೋಷಕರನ್ನು ವಿಮಾನ ನಿಲ್ದಾಣಕ್ಕೆ ಕರೆಸಲು ವ್ಯವಸ್ಥೆ ಮಾಡಿದ್ದಾರೆ ಮತ್ತು ಸ್ವತಃ ರಾಹುಲ್ ಗಾಂಧಿ ಬಾಲಕನನ್ನು ವಿಮಾನದ ಒಳಗೆ ಕರೆದುಕೊಂಡು ಹೋಗಿದ್ದಾರೆ.
ವಿಮಾನದ ಗಾತ್ರ ಮತ್ತದರ ರಚನೆ ಕಂಡು ಅಚ್ಚರಿಗೊಂಡ ಬಾಲಕ ವಿಮಾನ ಆಕಾಶದಲ್ಲಿ ಹಾರಾಡುವುದು ಹೇಗೆ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಆ ಎಲ್ಲಾ ಪ್ರಶ್ನೆಗಳಿಗೆ ರಾಹುಲ್ ಅತ್ಯಂತ ಸಮಾಧಾನದಿಂದ ಸ್ಪಷ್ಟವಾಗಿ ಆ ಬಾಲಕನಿಗೆ ಉತ್ತರಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ʼಎಳೆ ಪ್ರಾಯದ ಯಾವುದೇ ಕನಸುಗಳು ದೊಡ್ಡದಲ್ಲ, ಆ ಬಾಲಕನ ಕನಸುಗಳನ್ನು ನನಸು ಮಾಡುವಲ್ಲಿನ ನಾವು ಮೊದಲ ಹೆಜ್ಜೆ ಇರಿಸಿದ್ದೇವೆ. ಈಗ ಆ ಹುಡುಗನ ಪೈಲೆಟ್ ಆಗುವ ಕನಸು ನನಸಾಗುವಂತಹ ಸಮಾಜವನ್ನು ಸೃಷ್ಟಿಸುವುದು ನಮ್ಮ ಕರ್ತವ್ಯವಾಗಿದೆ' ಎಂದು ಬರೆದಿದ್ದಾರೆ.
ರಾಹುಲ್ ಗಾಂಧಿಯವರ ಇನ್ಸ್ಟಾಗ್ರಾಮ್ ಖಾತೆಯ ಈ ವಿಡಿಯೋವನ್ನು ಸುಮಾರು 2.17 ಲಕ್ಷಕ್ಕೂ ಹೆಚ್ಚು ಜನ ಈ ತನಕ ವೀಕ್ಷಿಸಿದ್ದು ರಾಹುಲ್ ಗಾಂಧಿಯವರ ಸರಳತೆ, ಪ್ರಾಮಾಣಿಕತೆ ಮತ್ತು ಆ ಎಳೆ ಹುಡುಗನಿಗೆ ತೋರಿಸಿದ ಪ್ರೀತಿಯ ಪರಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ ಮತ್ತು ಪ್ರಶಂಸಿಸಿದ್ದಾರೆ.
__________________________________
►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com