ಮಂಗಳೂರಿನ ಕಟೀಲಿನಲ್ಲಿ ನೂತನವಾದ ಬಸ್ ತಂಗುದಾಣವೊಂದನ್ನು ಸ್ಥಳೀಯ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಉದ್ಘಾಟಿಸಿದ್ದರು. ಉದ್ಘಾಟನೆಯ ಬಳಿಕ ನಳಿನ್ ಕಟೀಲ್ ಸಹಿತ ಅತಿಥಿಗಳು, ಜನಪ್ರತಿನಿಧಿಗಳು ನೂತನ ಬಸ್ ತಂಗುದಾಣದಲ್ಲಿ ಮಾಸ್ಕ್ ದರಿಸದೆ, ಕೊರೊನಾ ನಿಯಮಾವಳಿಗಳನ್ನು ಪಾಲಿಸದೆ, ಒತ್ತೊತ್ತಾಗಿ ಕುಳಿತು ತೆಗೆದ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗತೊಡಗಿದೆ.
ಅಯ್ಯೋ ಅದರಲ್ಲೇನು ವಿಶೇಷ? ಇಂತಹ ತಪ್ಪುಗಳನ್ನು ರಾಜಕಾರಣಿಗಳು ಮಾಡಿದರೆ ಮಾತ್ರವೇ ಹೇಳುತ್ತೀರಿ? ಮದುವೆ ಸಮಾರಂಭಗಳಿಗೆ ಸಾವಿರಾರು ಜನರು ಸೇರುವುದಿಲ್ಲವೇ? ಸಂತೆ, ಜಾತ್ರೆ, ಸಿನೇಮಾ ಟಾಕೀಸಿನಲ್ಲಿ ಕೋವಿಡ್ ನಿಯಮಾವಳಿ ಪಾಲನೆ ಆಗುತ್ತದೆಯೇ? ಎಂದು ಸಹಜವಾಗಿಯೇ ಪ್ರತಿಕ್ರಿಯಿಸಬಹುದು ನೀವು.
ಆದರೆ ಇದು ನೀವಂದುಕೊಂಡಂತಹ ಸಾಮಾನ್ಯ ಘಟನೆಯಲ್ಲ. ಇದರಲ್ಲೊಂದು ವಿಶೇಷವಿದೆ. ಅದೇನೆಂದರೆ ಅವರು ಮೇಲೆ ವಿವರಿಸಿದಂತೆ ಒಬ್ಬಿಬ್ಬರನ್ನು ಹೊರತುಪಡಿಸಿ ಹೆಚ್ಚಿನವರು ಮುಖಕ್ಕೆ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಪಾಲನೆ ಮಾಡದೆ ಒತ್ತೊತ್ತಾಗಿ ಕುಳಿತಿರುವ ಜಾಗದಲ್ಲಿ ‘ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ನಿಮ್ಮನ್ನು ಮತ್ತು ಇತರರನ್ನೂ ರಕ್ಷಿಸಿ!’ ಎಂಬ ದೊಡ್ಡ ಬೋರ್ಡ್ ಅನ್ನು ಅಳವಡಿಸಲಾಗಿದೆ. ಈ ಅಂಶ ಕಟೀಲ್ ಸಹಿತ ಸಮಾರಂಭದಲ್ಲಿ ಭಾಗಿಯಾದ ಅಷ್ಟೂ ಅತಿಥಿಗಳು ನಗೆಪಾಟೀಲಿಗೀಡಾಗಲು ಕಾರಣವಾಗಿದೆ.
ಸ್ಥಳದಲ್ಲಿ ಅಳವಡಿಸಲಾದ ಆ ದೊಡ್ಡ ಬ್ಯಾನರ್‌ನ ಕೆಳಗೆ ಕುಳಿತ ನಳಿನ್ ಕಟೀಲ್ ಸಹಿತ ಗಣ್ಯರಿಂದ ಕೊವಿಡ್ 19 ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಯಾಗಿದೆ. ಬಹುಶಃ ಅದೇ ಪೋಟೋವನ್ನು ಬೇರೆ ಸ್ಥಳಗಳಲ್ಲಿ ಕ್ಲಿಕ್ಕಿಸಿದ್ದರೆ ಖಂಡಿತವಾಗಿಯೂ ಅದು ಇಷ್ಟೊಂದು ಟ್ರೋಲ್‌ಗೆ ಒಳಗಾಗುತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟ್ರೋಲ್‌ಗೊಳಗಾಗಿರುವ ಈ ಪೋಟೋದ ಕೆಳಗೆ 'ಕೊವಿಡ್ ನಿಯಮಾವಳಿ ಉಲ್ಲಂಘನೆ ಮಾಡಿರುವ ಸಂಸದರ ಸಹಿತ ಜನಪ್ರತಿನಿಧಿಗಳ ವಿರುದ್ಧ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. 'ಹೇಳೋದೊಂದು ಮಾಡೋದೊಂದು' ಎಂಬ ಮಾತಿಗೆ ಸ್ಪಷ್ಟ ಉದಾಹರಣೆಯಾಗಿ ಈ ಫೋಟೋವನ್ನು ಬಳಸಿ ಕೊಳ್ಳಬಹುದಾಗಿದೆ.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.