ಹೀಗೊಂದು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡುತ್ತಿದೆ. ಈ ಅಡ್ನಾಡಿಗಳಿಗೆ ಇನ್ನೇನು ಬಂದಿಲ್ಲವೆಂದರೂ, ದೇಶದಲ್ಲಿ ಲಕ್ಷಾಂತರ ಜನ ಸರ್ಕಾರದ ಅದಕ್ಷತೆ, ಅಸಾಮರ್ಥ್ಯ, ಅಸಡ್ಡೆ ಹಾಗೂ ಜಡತ್ವದಿಂದ ಸತ್ತರೂ, ಮೋದಿಪಾಪ್ ಚೀಪುವುದನ್ನೂ ಮಾತ್ರ ಬಿಡೋಲ್ಲ. ಈ ನರಭೋಜಿಗಳ ಬಗ್ಗೆ ಬರೆಯದಿರೋಣವೆಂದು ಅಂದುಕೊಂಡರೂ ಇಂಥ ಸುಳ್ಳು, ಸಮಾಜಘಾತುಕ, ಅಮಾನವೀಯ ಸುಳ್ಸುದ್ದಿಗಳು ಮಾಡಬಹುದಾದ ಪರಿಣಾಮಗಳ ಬಗ್ಗೆ ಅರಿವಿರೋದರಿಂದ ಇವುಗಳನ್ನು ಬರೀ ಕೌಂಟರ್ ಅಲ್ಲ ಎನ್‍ಕೌಂಟರ್ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಬರಹ: ಗ್ಲಾಡ್ಸನ್ ಅಲ್ಮೇಡಾ
ಇನ್ನು ಈ ಸುದ್ದಿಗೆ ಬರೋಣ... ನಾನು ಕೆಲದಿನಗಳ ಹಿಂದೆ ಈ 162 PSA ಆಕ್ಸಿಜನ್ ಘಟಕಗಳ ಬಗ್ಗೆ ಬರೆದಿದ್ದೆ. ಹೇಗೆ ಮೋದಿ ಸರಕಾರ ದೇಶದಲ್ಲಿ ಕೊರೋನಾ ಪರಿಸ್ಥಿತಿ ಹತೋಟಿ ತಪ್ಪಿದರೂ ಎಂಟು ತಿಂಗಳ ಕಾಲ ಏನನ್ನೂ ಮಾಡದೇ ಕೊನೆಗೆ ಈ PSA ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಕರೆದು, ಅದೇಗೋ ಟೆಂಡರ್ ಕೊಟ್ಟರೂ ಇದುವರೆಗೆ ಕೇವಲ 33 PSA ಆಕ್ಸಿಜನ್ ಘಟಕಗಳು ಮಾತ್ರ ಸ್ಥಾಪಿಸಲ್ಪಟ್ಟಿವೆ ಎಂದು ಬರೆದಿದ್ದೆ. ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಅಧಿಕೃತ ಮಾಹಿತಿಯನ್ನೂ ಲಗತ್ತಿಸಿದ್ದೆ. ನಿನ್ನೆ ಮತ್ತೊಮ್ಮೆ ನಮ್ಮ ರಾಜ್ಯದ ಸಂಸದರಾದ ಪ್ರತಾಪ್ ಸಿಂಹರವರು ಇನ್ನೊಂದು ಪೋಸ್ಟರ್ ಹಾಕಿ 551 ಹೊಸ PSA ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಕ್ರಮ ತೆಗೆದುಕೊಂಡಿಯೆಂದು ಹಂಚಿಕೊಂಡಾಗಲೂ ನಾನು ಅವರ ಪೇಜಿನಲ್ಲಿಯೂ, ನನ್ನ ವಾಲ್‍ನಲ್ಲಿಯೂ ಹಿಂದಿನ ಟೆಂಡರ್ ಅವ್ಯವಸ್ಥೆ ಬಗ್ಗೆ ಬರೆದಿದ್ದೆ.
ಸದ್ಯ ನರಭೋಜಿಗಳು ಹರಡುತ್ತಿರುವ ಸುದ್ದಿಯೇನೆಂದರೆ ಕೇಂದ್ರ ಸರಕಾರ PSA ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಹಣ ಬಿಡುಗಡೆ ಮಾಡಿತ್ತು ಆದರೆ ಮಹಾರಾಷ್ಟ್ರ, ದೆಹಲಿಯಂತಹ ರಾಜ್ಯಗಳು ಅದನ್ನು ಮಾಡಿಲ್ಲ ಎಂದು. ಕಂಗನಾ ರಣಾವತ್ ಎನ್ನುವ ಭಯಂಕರ ನಟಿಯೂ ಇದನ್ನೇ ಹಂಚಿಕೊಂಡಿದ್ದಾಳೆ. ಆಕೆಯ ಸೆನ್ಸ್, ಕಾಮನ್‍ಸೆನ್ಸ್ ಹಾಗೂ ನಾನ್‍ಸೆನ್ಸ್ ಬಗ್ಗೆ ನಾನು ಹೆಚ್ಚೇನು ಬರೆಯೋಲ್ಲ. ಆದರೆ ಅತ್ತಕಡೆ ಅಸ್ಸಾಂನ ಮುಖ್ಯಮಂತ್ರಿಯೂ ಇದೇ ಸುಳ್ಸುದ್ದಿಯನ್ನು ಹರಡುತ್ತಿದ್ದಾರೆ.
ಆದರೆ ಕೇಂದ್ರ ಸರಕಾರ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿತ್ತು ಎನ್ನುವುದೇ ಸುಳ್ಳು. ಈ 162 PSA ಆಕ್ಸಿಜನ್ ಘಟಕಗಳ ಉಸ್ತುವಾರಿಯನ್ನು ಕೇಂದ್ರ ಸರಕಾರ ವಹಿಸಿದ್ದು ತನ್ನದೇ ಆರೋಗ್ಯ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೆಂಟ್ರಲ್ ಮೆಡಿಕಲ್ ಸರ್ವಿಸಸ್ ಸೊಸಾಯ್ಟಿ ಎನ್ನುವ ಕೇಂದ್ರೀಯ ಸಂಸ್ಥೆಗೆ. ಈ ಸಂಸ್ಥೆ ದೇಶದಲ್ಲಿ ಕೋವಿಡ್ ಕರಾಳ ರೂಪ ಪಡೆದ ಎಂಟು ತಿಂಗಳ ಬಳಿಕ, ಅಂದರೆ, ಅಕ್ಟೋಬರ್ 21, 2020 ರಂದು ದೇಶದ ಹದಿನಾಲ್ಕು ರಾಜ್ಯಗಳಲ್ಲಿ PSA ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಟೆಂಡರ್ ಜಾರಿಗೊಳಿಸಿತು. ದೇಶದ ನೂರೈವತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ Pressure Swing Adsorption (PSA) ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರಕಾರದ ಅಧೀನದಲ್ಲಿರುವ Central Medical Services Society ಟೆಂಡರ್ ಕರೆಯಿತು. ಈ PSA ಟೆಕ್ನಾಲಜಿಯಲ್ಲಿ ವಾತಾವರಣದಲ್ಲಿರುವ ಅನಿಲವನ್ನು ಪ್ರತ್ಯೇಕಗೊಳಿಸಿ ಅಕ್ಸಿಜನನ್ನು ಉತ್ಪಾದಿಸುತ್ತದೆ. ಹೀಗೆ ಉತ್ಪಾದಿಸಿದ ಆಕ್ಸಿಜನನ್ನು ಪೈಪ್‍ಲೈನ್ ಮೂಲಕ್ ಆಸ್ಪತ್ರೆಯಲ್ಲಿರುವ ರೋಗಿಗಳ ಹಾಸಿಗೆಗೆ ನೇರವಾಗಿ ಪೂರೈಸಬಹುದು. ಹೀಗಾಗುವುದರಿಂದ ಆಸ್ಪತ್ರೆಗಳು ಹೊರಗಡೆಯಿಂದ ಆಕ್ಸಿಜನ್ ಸಿಲಿಂಡರನ್ನು ಖರೀದಿಸುವುದು ತಪ್ಪುತ್ತದೆ.
ಮೊದಲು ನೂರೈವತ್ತು ಘಟಕಕ್ಕೆ ಕರೆದ ಟೆಂಡರಿಗೆ ಮತ್ತೆ ಹನ್ನೆರಡನ್ನು ಸೇರಿಸಿ ಒಟ್ಟು 162 ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಪಿಎಮ್ ಕೇರ್ಸ್ ನಿಧಿಯಿಂದ Rs 201.58 ಕೋಟಿಯನ್ನು ನಿಗದಿಗೊಳಿಸಲಾಗಿತ್ತು. ಅಂದಹಾಗೆ ಒಂದು PSA ಘಟಕ ಸ್ಥಾಪಿಸಲು ಹೆಚ್ಚೆಂದರೆ 30-40 ಲಕ್ಷ ರುಪಾಯಿ ಖರ್ಚಿದೆ. ಅಂಥದ್ದರಲ್ಲಿ 162 ಘಟಕಗಳಿಗೆ Rs 200 ಕೋಟಿ ಹೇಗೆ ಖರ್ಚಾಯಿತೆಂದು ಒಮ್ಮೆ ಹೇಳುವಿರಾ ಎಂದರೆ ಇವರ ಬಾಯಿಗೆ ಗರ ಬಡಿದಿದೆ. ಕೊರೋನಾ ಆರಂಭವಾಗಿ ಎಂಟು ತಿಂಗಳ ತನಕ ಕೇಂದ್ರ ಸರಕಾರ ಆಕ್ಸಿಜನ್ ಉತ್ತಾದನೆಯನ್ನು ಹೆಚ್ಚಿಸುವ ಬಗ್ಗೆ ಏನೂ ಮಾಡದೇ ತೆಪ್ಪಗೆ ಕುಳಿತಿತ್ತು. ಅಕ್ಟೋಬರ್ ನಲ್ಲಿ ಟೆಂಡರ್ ಫ್ಲೋಟ್ ಮಾಡಿ ಆಸಕ್ತಿಯುಳ್ಳವರು ಟೆಂಡರ್ ಸಲ್ಲಿಸಲು ನವೆಂಬರ್ 10, 2020 ರ ತನಕ ಸಮಯವಾಕಾಶವಿತ್ತು. ಇದಾದ ನಂತರ ಟೆಂಡರ್ ಗಳನ್ನು ಪರಿಶೀಲಿಸಿ ಕೆಲ ಕಂಪನಿಗಳಿಗೆ ಡಿಸೆಂಬರ್ 2020 ರಲ್ಲಿ PSA ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಹಂಚಲಾಯಿತು, ಅಂದರೆ ದೇಶದಲ್ಲಿ ಕೊರೋನಾ ಉಗ್ರ ರೂಪ ತಾಳಿದ ಹತ್ತು ತಿಂಗಳ ಬಳಿಕ ಈ ಘಟಕಗಳ ಸ್ಥಾಪನೆಗೆ ಚಾಲನೆ ದೊರೆತದ್ದು. ಟೆಂಡರ್ ಡಾಕ್ಯುಮೆಂಟ್ ಪ್ರಕಾರ ಮುಂದಿನ 45 ದಿನಗಳಲ್ಲಿ ಟೆಂಡರ್ ಸಿಕ್ಕ ಕಂಪನಿಗಳು ಈ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬೇಕಿತ್ತು. ತಜ್ಞರ ಪ್ರಕಾರ ಒಂದು PSA ಆಕ್ಸಿಜನ್ ಘಟಕವನ್ನು ಸ್ಥಾಪಿಸಲು ನಾಲ್ಕರಿಂದ-ಆರು ವಾರಗಳು ಬೇಕಾಗುತ್ತವೆ. ಆದರೆ ಟೆಂಡರ್ ಹಂಚಿ ನಾಲ್ಕು ತಿಂಗಳ ಬಳಿಕವೂ 162 ರಲ್ಲಿ ಕೇವಲ 33 ಘಟಕಗಳು ಸ್ಥಾಪಿಸಲ್ಪಟ್ಟಿವೆ ( ಮಧ್ಯಪ್ರದೇಶದಲ್ಲಿ 5, ಹಿಮಾಚಲ ಪ್ರದೇಶದಲ್ಲಿ 4, ಚಂಡೀಗಡ, ಗುಜರಾತ್ ಹಾಗೂ ಉತ್ತರಾಖಂಡ್‍ನಲ್ಲಿ ತಲಾ 3, ಬಿಹಾರ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ತಲಾ 2 ಹಾಗೂ ಆಂಧ್ರಪ್ರದೇಶ, ಛತ್ತೀಸ್‍ಗಢ, ದೆಹಲಿ, ಹರ್ಯಾಣ, ಕೇರಳ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ತಲಾ ಒಂದು ಘಟಕ ಸ್ಥಾಪಿಸಲ್ಪಟ್ಟಿವೆ). ಹೀಗೆ ಸ್ಥಾಪಿಸಲ್ಪಟ್ಟ 33 ಘಟಕಗಳಲ್ಲಿ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿರುವ ಘಟಕಗಳು ಕೇವಲ 12-15.
ಇನ್ನು ಈ ಪೋಸ್ಟರ್ ಗಳಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿ ಬಗ್ಗೆ ಮಾತ್ರ ಇದೆಯಲ್ವಾ? ಆದರೆ ದೇಶದಲ್ಲಿ ಅತ್ಯಧಿಕ, ಅಂದರೆ, 14 PSA ಆಕ್ಸಿಜನ್ ಘಟಕಗಳು ಸಿಕ್ಕಿದ್ದು ಉತ್ತರ ಪ್ರದೇಶಕ್ಕೆ. ಆದರೆ ಅಲ್ಲಿ ಸ್ಥಾಪಿಸಲ್ಪಟ್ಟಿದ್ದು ಒಂದೇ ಒಂದು. ಅದೂ ಕಾರ್ಯನಿರ್ವಹಿಸುತ್ತಿಲ್ಲ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರವೇ ಇನ್ನೂ 59 ಘಟಕಗಳನ್ನು ಎಪ್ರಿಲ್ ಅಂತ್ಯದವರೆಗೂ, ಮಿಕ್ಕ 80 ನ್ನು ಮೇ ಅಂತ್ಯದವರೆ ಸ್ಥಾಪಿಸಲಾಗುವುದೆಂದು ಹೇಳಿದರೂ, ಆವರ ಟ್ವೀಟಿನ ಪ್ರಕಾರ ನನ್ನ ಅಂದಾಜಿನಲ್ಲಿ ಮೇ ಅಂತ್ಯದವರೆಗೆ ಒಟ್ಟು 80 ಘಟಕಗಳು ಸ್ಥಾಪಿಸಲಾಗುವುದು. ಇನ್ನು ಹೊಸ ನೂರು ಘಟಕಗಳಿಗೆ ಇನ್ನೂ ಟೆಂಡರ್ ಕರೆಯಬೇಕಾಗಿದೆ. ಸದ್ಯಕ್ಕೆ ಅವುಗಳ ಘೋಷಣೆ ಮಾತ್ರ ಆಗಿರೋದು. ಇನ್ನೂ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲವೆಂದು ಟ್ವೀಟಿನಿಂದಲೇ ತಿಳಿಯುತ್ತೆ. ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಮುಂತಾದವರು ಹಂಚಿಕೊಂಡಿರುವ 551 ಹೊಸ ಪಿಎಸ್‍ಎ ಆಕ್ಸಿಜನ್ ಘಟಕಗಳಿಗೂ ಇನ್ನೂ ಕೇಂದ್ರ ಆರೋಗ್ಯ ಇಲಾಖೆಯಿಂದ ಅನುಮೋದನೆ ದೊರೆತು, ಟೆಂಡರ್ ಕರೆದು, ಟೆಂಡರ್ ಹಂಚಿ ಅವುಗಳು ಸ್ಥಾಪನೆಯಾಗುವಾಗ ಕೊರೋನಾದ ಹತ್ತನೇ ಅಲೆ ಬಂದಿರುತ್ತೆ.
ಈ 162 PSA ಆಕ್ಸಿಜನ್ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಇವು ದಿನವೊಂದಕ್ಕೆ ಉತ್ಪಾದಿಸುವ ಆಕ್ಸಿಜನ್ ಕೇವಲ 154 ಮೆಟ್ರಿಕ್ ಟನ್. ಕೇಂದ್ರ ಸರಕಾರ ಮೊನ್ನೆ ದೆಹಲಿ ಹೈಕೋರ್ಟಿಗೆ ಕೊಟ್ಟ ಲಿಖಿತ ಮಾಹಿತಿಯ ಪ್ರಕಾರ ಸದ್ಯಕ್ಕೆ ನಮ್ಮ ದೇಶಕ್ಕೆ ದಿನವೊಂದಕ್ಕೆ 8000 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಇದರ ಬಗ್ಗೆಯೂ ನಾನು ಎರಡು ದಿನಗಳ ಬಗ್ಗೆ ವಿಸ್ತ್ರತ ವರದಿಯೊಂದನ್ನು ಹಾಕಿದ್ದೇನೆ. ಸೆಂಟ್ರಲ್ ಮೆಡಿಕಲ್ ಸರ್ವಿಸಸ್ ಸೊಸಾಯ್ಟಿ ಕಳೆದ ಅಕ್ಟೋಬರ್ ನಲ್ಲಿ ಕರೆದ ಟೆಂಡರ್ ಲಿಂಕನ್ನು ಕಾಮೆಂಟ್ ಬಾಕ್ಸಿನಲ್ಲಿ ಹಾಕಿದ್ದೇನೆ.
ಈ ಯೋಜನೆಗೆ ಹಣ ಮೀಸಲಿಟ್ಟಿದ್ದು ಪಿಎಮ್ ಕೇರ್ಸ್ ಫಂಡ್‍ನಿಂದ. ಆ ಫಂಡ್‍ಗೆ ಹೇಗೂ ಹೇಳೋರು, ಕೇಳೋರು ಯಾರೂ ಇಲ್ಲ. ಮಾಹಿತಿ ಹಕ್ಕಿನಡಿಯಲ್ಲೂ ಬರೋಲ್ಲ. ಯೋಜನೆ ಉಸ್ತುವಾರಿ ಕೊಟ್ಟಿದ್ದು ಕೇಂದ್ರೀಯ ಸಂಸ್ಥೆಗೆ. ಟೆಂಡರ್ ಜಾರಿಗೊಳಿಸಿ, ಹಂಚಿದ್ದೂ ಅವರೇ. ಇನ್ನು ಟೆಂಡರ್ ಪಡೆದ ಕೆಲ ಕಂಪನಿಗಳು ಯಾವುದೇ ಕೆಲಸ ಮಾಡದೇ ಕುಳಿತ್ತಿದ್ದರೆ, ಒಂದು ಕಂಪನಿಯನ್ನು ಈ ತಿಂಗಳ ಮಧ್ಯಭಾಗದಲ್ಲಿ ಕೇಂದ್ರ ಸರಕಾರವೇ ಬ್ಲ್ಯಾಕ್‍ಲಿಸ್ಟ್ ಮಾಡಿದೆ. ದೆಹಲಿಯಲ್ಲಿ ಟೆಂಡರ್ ಸಿಕ್ಕ ಕಂಪನಿ ಫೋನ್ ಕರೆಗೂ ಸಿಗುತ್ತಿಲ್ಲ, ಕೊಟ್ಟ ಅಡ್ರೆಸಲ್ಲೂ ಸಿಗುತ್ತಿಲ್ಲವಂತೆ. ಎಲ್ಲವೂ ಕೇಂದ್ರದ ಹಿಡಿತಲ್ಲಿದ್ದೂ, ಕೇಂದ್ರವೇ ಜಾರಿಗೊಳಿಸಿ, ಇದೀಗ ಕೆಲಸ ಪೂರ್ಣ ಆಗದಿರುವುದರಿಂದ ದೂರು ರಾಜ್ಯಗಳ ಮೇಲೆ. ಒಂದ್ವೇಳೆ ಇದು ಪೂರ್ಣಗೊಂಡಿದ್ದರೆ ಇದೇ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಗ, ತೇಜಸ್ವಿ ಸೂರ್ಯರು ಇದರ ಕ್ರೆಡಿಟ್ಟನ್ನು ಸಂಪೂರ್ಣವಾಗಿ ಮೋದಿಯವರಿಗೆ ಸಲ್ಲಿಸಿ ತಮ್ಮ ಗುರುದಕ್ಷಿಣೆಯನ್ನು ಸಲ್ಲಿಸಿರುತ್ತಿದ್ದರು.
ದೇಶ ಎಂದೂ ಕಂಡರಿಯದ ದುರಂತ ಕಾಲದಲ್ಲಿ ಹಾದುಹೋಗುತ್ತಿರುವಾಗ ಈ ನರಭೋಜಿಗಳಿಗೆ ನಮ್ಮ ನಾಯಕನ ಇಮೇಜನ್ನು ಕಾಪಾಡುವ ಚಿಂತೆ. ಸಾರಿ ಚಿಂತೆಯಲ್ಲ ಅನಿವಾರ್ಯತೆ. ಈ ಪೋಸ್ಟರ್ ಗಳನ್ನು ಹಂಚಿಕೊಂಡಿಲ್ಲ ಅಂದರೆ ಅವರ ಮನೆಯಲ್ಲಿ ಒಲೆ ಉರಿಯುವುದಿಲ್ಲ. ಕೇಂದ್ರ ಸರಕಾರ ತಾನು ಮಾಡಬೇಕಾದ ಕೆಲಸವನ್ನು ಮಾಡದೇ, ತನ್ನ ನರಭೋಜಿ ಏಜಂಟರನ್ನು ಛೂಬಿಟ್ಟು ತನ್ನ ಅದಕ್ಷತೆ, ಅಸಮರ್ಥ್ಯ, ಭಂಡತನವನ್ನು ರಾಜ್ಯ ಸರಕಾರಗಳ ತಲೆಗೆ ಕಟ್ಟಿ ತನ್ನ ಇಮೇಜನ್ನು ರಕ್ಷಿಸುವ ಮಟ್ಟಕ್ಕಿಳಿದಿದೆಯೆಂದರೆ ಇವರಿಗೆ ಜನರ ಬಗ್ಗೆ ಎಷ್ಟೊಂದು ಕಾಳಜಿಯಿದೆ ಎಂದು ತಿಳಿಯುತ್ತೆ.
ಮಾತಾಡಬೇಕಾದ ಮಾಧ್ಯಮಗಳು ಬಾಯಿಕಟ್ಟಿ ಕುಳಿತಿರುವಾಗ ನಮ್ಮಂಥವರೂ ಮೌನವಾಗಿದ್ದರೆ ನಾವು ಸಮಾಜಘಾತುಕರಾಗುತ್ತೇವೆ. ಅದಕ್ಕೆ ಮಾತಾನಾಡಲೇಬೇಕಾದ ಅನಿವಾರ್ಯತೆ. ಇನ್ನು ಇಂಥ ಅದಕ್ಷತೆಯನ್ನು ಅಂತರಾಷ್ಟ್ರೀಯ ಮಾಧ್ಯಮಗಳು ಕಳೆದ ಒಂದು ವಾರದಿಂದ ಸತತವಾಗಿ ವರದಿ ಮಾಡುತ್ತಿವೆ. ಆದರೆ ಈ ವ್ಯವಸ್ಥೆಗೆ ತನ್ನ ಸರ್ವಾಧಿಕಾರಿ, ಅದಕ್ಷ ನಾಯಕನ ಇಮೇಜನ್ನು ಕಾಪಾಡುವ ಎಷ್ಟು ಚಿಂತೆ ಎಂದರೆ ಮೊನ್ನೆ Death Rides a Pale Elephant ಹೆಡ್ಡಿಂಗ್‍ಯಡಿಯಲ್ಲಿ ಅವ್ಯವಸ್ಥೆಯ ಸುದ್ದಿ ಮಾಡಿದ್ದ ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ಆಸ್ಟ್ರೇಲಿಯಾದಲ್ಲಿರುವ ಭಾರತ ರಾಯಭಾರಿ ಕಛೇರಿ ನೋಟೀಸ್ ಕಳುಹಿಸಿದೆ. ಕಳೆದ ಐದಾರು ವರುಷಗಳಿಂದ ಮಾನ ಕಳೆದದ್ದು ಸಾಕಾಗಿಲ್ಲವೆಂದು ಇದೀಗ ಇಂಥ ಹುಂಬತನ.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.