Advertisement

ಬಿಜೆಪಿಯ ಪಂಚಪ್ರಶ್ನೆಗಳಿಗೆ ದಶಪ್ರಶ್ನೆಗಳ ಮೂಲಕ ಉತ್ತರಿಸಿದ ಸಿದ್ದರಾಮಯ್ಯ... ಪೆಚ್ಚಾದ ಬಿಜೆಪಿ!

Advertisement

ಕೊರೊನಾ ಎರಡನೆಯ ಅಲೆಯ ಪ್ರಯುಕ್ತ ಎಪ್ರಿಲ್ 20 ರ (ಮಂಗಳವಾರ) ರಾತ್ರಿ ಪ್ರದಾನಿ ಮೋದಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಬಳಿಕ ಕೊರೊನಾ ನಿಗ್ರಹದ ಕುರಿತಾದ ಸರ್ಕಾರದ ಹಾಗೂ ಪ್ರಧಾನಿ ಮೋದಿಯವರ ನಡೆಯನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. "ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ,‌ ರೆಮಿಡಿಸಿವೆರ್‌ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ನರೇಂದ್ರ ಮೋದಿ ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ, ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ. ಕೊರೊನಾ ಉಲ್ಭಣವಾದ ಕಾರಣದಿಂದಾಗಿ ಲಾಕ್‌ಡೌನ್ ಅನಿವಾರ್ಯ ಎಂಬಂತೆ ರಾಜ್ಯ ಕರ್ನಾಟಕದ ಬಿಜೆಪಿ ಸರ್ಕಾರ ಮಾತನಾಡುತ್ತಿದೆ. ಲಾಕ್ ಡೌನ್ ಹೇರಿದರೆ ಕಷ್ಟನಷ್ಟಕ್ಕೀಡಾಗುವ ಜನತೆಗೆ ಕೇಂದ್ರದ ಬಿಜೆಪಿ ಸರ್ಕಾರ ನೀಡುವ ನೆರವಿನ ಘೋಷಣೆಯನ್ನು ಜನ ನಿರೀಕ್ಷಿಸಿದ್ದರು. ಮೋದಿ ಭಾಷಣ 'ನಿಮ್ಮ ತಲೆ ಮೇಲೆ ನಿಮ್ಮ‌ ಕೈ' ಎಂಬ ಸಂದೇಶ ನೀಡಿದೆ. ಕೊರೊನಾ ಪರಿಣಾಮವನ್ನು ಸಮರ್ಥವಾಗಿ ನಿರ್ವಹಿಸಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರದ ಬಿಜೆಪಿ ಸರ್ಕಾರವೂ ಕಾರಣ. ಪ್ರಧಾನಿಯವರೇ, ನೀವು ವಿಶೇಷ ಆರ್ಥಿಕ ನೆರವು ಕೊಡುವುದು ಬೇಡ , ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ'' -ಇದು ಟ್ವೀಟ್ ನ ಸಾರಾಂಶ. ಸಿದ್ದರಾಮಯ್ಯನವರ ಮೇಲಿನ ಟ್ವೀಟ್ ಅನ್ನು ಬುಧವಾರ ರಾಜ್ಯ ಬಿಜೆಪಿ ಮರುಟ್ವೀಟ್ ಮಾಡಿ ಅದಕ್ಕೆ ಉತ್ತರ ಎಂಬಂತೆ "ನಮ್ಮ ಪಂಚ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರುವಿರಾ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿತ್ತು. ಬಿಜೆಪಿ ಪ್ರಶ್ನೆಗಳು ಇಂತಿವೆ: 1. ಕಡಿಮೆ ದರದಲ್ಲಿ ಲಸಿಕೆ ಪೂರೈಕೆ ನೆರವಿನ ಹಸ್ತವಲ್ಲವೇ? 2. ದೇಶಾದ್ಯಂತ ಕೋವಿಡ್ ಲ್ಯಾಬ್ ವ್ಯವಸ್ಥೆ ಮಾಡುತ್ತಿರುವುದು ನೆರವಿನ ಹಸ್ತವಲ್ಲವೇ? 3. ಕೋವಿಡ್ ಸಂದರ್ಭದಲ್ಲೂ ಆರ್ಥಿಕ ಸ್ಥಿತಿ ಪಾತಾಳ ಸೇರದಂತೆ ನೋಡಿದ್ದು ನೆರವಿನ ಹಸ್ತವಲ್ಲವೇ? 4. ದೇಶಾದ್ಯಂತ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಧಾರಣೆ ಆರಂಭಿಸಿದ್ದು ನೆರವಿನ ಹಸ್ತವಲ್ಲವೇ? 5. ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ನೆರವಿನ ಹಸ್ತವಲ್ಲವೇ? ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದೇ ಕಾಂಗ್ರೆಸ್‌ ನೀಡಿದ ನೆರವಿನ ಹಸ್ತ, ಜನರನ್ನು ತಪ್ಪುದಾರಿಗೆಳೆದದ್ದೇ ಕಾಂಗ್ರೆಸ್ ಸಾಧನೆ!!! ಆ ಕುರಿತು ಸಿದ್ದರಾಮಯ್ಯನವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಕೇಳಿರುವ 5 ಪ್ರಶ್ನೆಗಳಿಗೆ ಪ್ರತ್ಯುತ್ತರವಾಗಿ 10 ಪ್ರಶ್ನೆಗಳನ್ನು 12 ಟ್ವೀಟ್ ಗಳ ಮೂಲಕ ಕೇಳಿದ್ದಾರೆ. ಟ್ವೀಟ್ 1) ಆಡಳಿತ ನಡೆಸುವವರ ಕೆಲಸ ಪ್ರಶ್ನೆ ಕೇಳುವುದಲ್ಲ, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು. ತಮ್ಮದು ವಿರೋಧ ಪಕ್ಷ ಅಲ್ಲ, ಆಡಳಿತಾರೂಢ ಪಕ್ಷ ಎನ್ನುವುದನ್ನು ರಾಜ್ಯದ ಬಿಜೆಪಿ ಸರ್ಕಾರ ಏನಾದರೂ ಮರೆತುಬಿಟ್ಟಿದೆಯಾ ಹೇಗೆ? ಟ್ವೀಟ್ 2) ಪ್ರಶ್ನೆ ಕೇಳುವ ಅಷ್ಟೊಂದು ಹುಚ್ಚಿದ್ದರೆ‌ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ವಿರೋಧ ಪಕ್ಷದಲ್ಲಿ ಕೂತುಕೊಂಡು ಪ್ರಶ್ನೆ ಕೇಳಿ, ನಾವು ಉತ್ತರಿಸುತ್ತೇವೆ. ಟ್ವೀಟ್ 3) ರಾಜ್ಯ ಬಿಜೆಪಿ ನಾಯಕರು ಬೆಳಿಗ್ಗೆ ಎದ್ದು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಅವರಿಗೂ ಹಿತ, ರಾಜ್ಯಕ್ಕೂ ಹಿತ. ಕೊರೊನಾ ಎರಡನೆ ಅಲೆಯಿಂದ ತತ್ತರಿಸಿಹೋಗಿರುವ ಜನತೆ ಪ್ರಶ್ನಿಸುತ್ತಿರುವುದು ಆಡಳಿತಪಕ್ಷವನ್ನು, ವಿರೋಧಪಕ್ಷವನ್ನು ಅಲ್ಲ ಎನ್ನುವುದು ನೆನಪಿರಲಿ. ಟ್ವೀಟ್ 4) ಸೌಜನ್ಯಪೂರ್ವಕವಾಗಿ ನೆರವು ನೀಡಿ ಎಂದು ಪ್ರಧಾನಿಯವರನ್ನು ಕೋರಿದ್ದೆ. ಅಂತಹ ಸೌಜನ್ಯಪೂರಿತ ನಡವಳಿಕೆಗೆ ನೀವು ಯೋಗ್ಯರಲ್ಲ. ನೆರವು ನೀಡಲು ನೀವು ದಾನಿಗಳಲ್ಲ, ಪಡೆಯಲು ನಾವು ನಿಮ್ಮ ಮನೆಮುಂದೆ ನಿಂತ ಭಿಕ್ಷುಕರೂ ಅಲ್ಲ. ಆರುವರೆ ಕೋಟಿ ಜನ ಬೆವರಗಳಿಕೆಯಲ್ಲಿ ಪಾವತಿಸಿರುವ ತೆರಿಗೆಹಣದಲ್ಲಿ ಕರ್ನಾಟಕದ ಪಾಲು ಕೇಳುತ್ತಿದ್ದೇವೆ. ಟ್ವೀಟ್ 5) ನಿಮ್ಮ ಪಂಚ ಪ್ರಶ್ನೆಗೆ ನನ್ನ ಮೊದಲ ಕಂತಿನ ದಶ ಪ್ರಶ್ನೆಗಳೇ ಉತ್ತರ. 1. ಕರ್ನಾಟಕದಿಂದ PM cares ನಿಧಿಗೆ ಸಂಗ್ರಹವಾಗಿರುವ ಹಣ ಎಷ್ಟು? 2. PM cares ನಿಧಿಯಿಂದ ಇಲ್ಲಿಯ ವರೆಗೆ ಕರ್ನಾಟಕಕ್ಕೆ ಕೊರೊನಾ ನಿರ್ವಹಣೆಗಾಗಿ ನೀಡಿರುವ ದುಡ್ಡು ಎಷ್ಟು? ಟ್ವೀಟ್ 6) 3. 50,000 ವೆಂಟಿಲೇಟರ್ ತಯಾರಿಕೆಗೆ PM cares ನಿಧಿಯಿಂದ ರೂ.2000 ಕೋಟಿ ನೀಡಲಾಗಿದೆ. ಅದರಲ್ಲಿ ಕರ್ನಾಟಕಕ್ಕೆ ನೀಡಿದ್ದು ಕೇವಲ 90 ವೆಂಟಿಲೇಟರ್ ಮಾತ್ರ ಎಂದು PIB ಪ್ರಕಟಣೆ ತಿಳಿಸಿದೆ. ನಮ್ಮ ರಾಜ್ಯಕ್ಕೆ‌ ಮಾತ್ರ ಈ ಅನ್ಯಾಯ ಏಕೆ? ಟ್ವೀಟ್ 7) 4. ಕೊರೊನಾ ಸೋಂಕಿನ‌ ಪರಿಣಾಮವಾಗಿ ಲಾಕ್ ಡೌನ್ ಹೇರಿದ ನಂತರ ಬೀದಿಗೆ ಬಿದ್ದ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ PM cares ನಿಧಿಯಿಂದ ಬಿಡುಗಡೆಯಾಗಿದ್ದೇ ರೂ.1000 ಕೋಟಿ. ಅದರಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ ರೂ.30 ಕೋಟಿ ಮಾತ್ರ. ಈ ಅನ್ಯಾಯಕ್ಕೆ ಯಾರು ಹೊಣೆ? ಟ್ವೀಟ್ 8) 5. ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರು ಸಾಯುತ್ತಿರುವುದು ನಿಜವಲ್ಲವೇ ಬಿಜೆಪಿಯ ನಾಯಕರೇ? ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೇಡಿಕೆ ಎಷ್ಟು? ಪೂರೈಕೆಯಾಗುತ್ತಿರುವುದು ಎಷ್ಟು? ಕೇಂದ್ರ ಸರ್ಕಾರ ನೀಡಿರುವುದು ಎಷ್ಟು? ಟ್ವೀಟ್ 9) 6. ಪ್ರಪಂಚದಲ್ಲಿ ಅತಿಹೆಚ್ಚು ಆಕ್ಸಿಜನ್ ಉತ್ಪಾದಿಸುವ ದೇಶ ಭಾರತವಾಗಿದ್ದರೂ, ದೇಶದಲ್ಲಿ ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದು ಯಾಕೆ? 7. ಭಾರತದಲ್ಲಿ 2019-20ಕ್ಕೆ ಹೋಲಿಸಿದರೆ 2020-21ರಲ್ಲಿ ಆಕ್ಸಿಜನ್ ಉತ್ಪಾದನೆ ದುಪ್ಪಟ್ಟಾಗಿದ್ದರೂ ಈಗಿನ‌ ಆಕ್ಸಿಜನ್ ಕೊರತೆಗೆ ಕಾರಣ ಏನು? ಹೊಣೆ ಯಾರು? ಟ್ವೀಟ್ 10) 8. ಒಂದು ವರ್ಷದ ಹಿಂದೆಯೇ ಕೊರೊನಾ ಕಾಣಿಸಿಕೊಂಡಾಗಲೇ ಆಕ್ಸಿಜನ್ ಅವಶ್ಯಕತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಹಿಂದಿನ ವರ್ಷಕ್ಕಿಂತ ಆಕ್ಸಿಜನ್ ರಫ್ತಿನ ಪ್ರಮಾಣ ದುಪ್ಪಟ್ಟುಗೊಳಿಸಿದ್ದು ಯಾಕೆ? ಟ್ವೀಟ್ 11) 9. ನಮ್ಮ ದೇಶದ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಈ ವರೆಗೆ ಕಡಿಮೆ ಪ್ರಮಾಣದಲ್ಲಿ‌‌ ಕೊರೊನಾ ಲಸಿಕೆ ನೀಡಿರುವುದು ಭಾರತದಲ್ಲಿ (10% ಗಿಂತ ಕಡಿಮೆ). ಈ ಹಿಂದುಳಿಯುವಿಕೆಗೆ ಯಾರು ಕಾರಣ? ಟ್ವೀಟ್ 12) 10. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಸುಧಾರಣೆಯಾಗಿದ್ದರೆ ಕೊರೊನಾ ರೋಗಿಗಳು ಚಿಕಿತ್ಸೆ ಇಲ್ಲದೆ ಸಾಯುತ್ತಿರುವುದು ಯಾಕೆ? ಖಾಸಗಿ ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿರುವುದು ಯಾಕೆ? (ಪ್ರಶ್ನೆಗಳು ಮುಂದುವರಿಯುವುದು) ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈ ವರದಿ ಪ್ರಕಟವಾಗುವ ತನಕವೂ ಬಿಜೆಪಿ ಈ ಪ್ರಶ್ನೆಗಳಿಗೆ ಉತ್ತರಿಸುವ ದೈರ್ಯ ತೋರಿಲ್ಲ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement